Wednesday, 4th December 2024

Vishwavani Editorial: ಬಹುದಿನಗಳ ಕನಸು ಸಾಕಾರ

ಬೆಂಗಳೂರಿನ 10 ಲಕ್ಷಕ್ಕೂ ಹೆಚ್ಚು ನಿವಾಸಿಗಳ ದಶಕಗಳ ಕನಸು ನನಸಾಗಿದೆ. ಜನರಿಗೆ ಅನುಕೂಲವಾಗಲಿರುವ 5 ನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ. ಈ ಮಹತ್ವಾಕಾಂಕ್ಷಿ ಯೋಜನೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹೊರ ವಲಯದ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಗುರಿ ಹೊಂದಿದೆ.

೨೦೧೪ರಲ್ಲಿ ಸಿದ್ದರಾಮಯ್ಯ ಅವರೇ ಶಂಕುಸ್ಥಾಪನೆ ನೆರವೇರಿಸಿದ ಯೋಜನೆ ಇದೀಗ ಅವರ ಕೈಯಿಂದಲೇ ಉದ್ಘಾಟನೆ ಕಾಣುತ್ತಿರುವುದು ವಿಶೇಷ. ನೀರು ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ಆದರೆ ದುರದೃಷ್ಟವಶಾತ್ ದೇಶದ ಕೋಟ್ಯಂತರ ಜನರಿಗೆ ಶುದ್ಧ ಕುಡಿಯುವ ನೀರು ಇಂದಿಗೂ ಮರೀಚಿಕೆಯಾಗಿದೆ. ಪ್ರಧಾನಮಂತ್ರಿ ಜಲಜೀವನ್ ಮಿಷನ್ ಅಡಿ ದೇಶದ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸ ಲಾಗುತ್ತಿದೆ. ಆದರೆ ನಗರಗಳ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ.

ಇಂದಿಗೂ ನಗರಗಳ ಹೊರವಲಯಗಳ ಬಡಾವಣೆಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರು ಬೋರ್‌ವೆಲ್ ನೀರು ಇಲ್ಲವೇ ಟ್ಯಾಂಕರ್ ನೀರನ್ನು ಆಶ್ರಯಿಸಿದ್ದಾರೆ. ಬಹುತೇಕ ಕಡೆ ಬೋರ್‌ವೆಲ್ ನೀರಲ್ಲಿ ಲವಣಾಂಶಗಳ ಸಾಂದ್ರತೆ ಹೆಚ್ಚಿರುವುದರಿಂದ ನೀರು ಗಡುಸಾಗಿರುವುದು ಮಾತ್ರವಲ್ಲ ಕುಡಿಯುವುದು ಯೋಗ್ಯವಾಗಿರುವುದಿಲ್ಲ. ಇನ್ನು ಬೆಂಗಳೂರಿನ ಬಹುತೇಕ ಕಡೆ ಬೋರ್‌ವೆಲ್ ನೀರಲ್ಲಿ ಪ್ಲೋರೈಡ್ ಅಂಶ ಇರುವುದು ಸಾಮಾನ್ಯ. ಇದರಿಂದ
ಮೂಳೆ ಸವೆತ ಸಮಸ್ಯೆ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳು ಬರುತ್ತವೆ. ಆದರೆ ಬೆಂಗಳೂರು ದಕ್ಷಿಣ ಮತ್ತು ಪಶ್ಚಿಮ ಭಾಗದ ಬಡಾವಣೆಗಳ ನಿವಾಸಿಗಳು ಅನಿವಾರ‍್ಯವಾಗಿ ಈ ನೀರನ್ನೇ ಬಳಸುತ್ತಿದ್ದರು.

ಸದ್ಯವೇ ಇವರಿಗೆ ಕಾವೇರಿನ ನೀರಿನ ಭಾಗ್ಯ ದೊರೆಯಲಿದೆ. ಈ ಯೋಜನೆಯಿಂದ ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಟಿ. ದಾಸರಹಳ್ಳಿ, ಮಹದೇವಪುರ, ಯಲಹಂಕ, ರಾಜರಾಜೇಶ್ವರಿನಗರ, ಬೊಮ್ಮನಹಳ್ಳಿ ವಲಯದ ವಿವಿಧ ಹಳ್ಳಿಗಳ ಮನೆಗೆ ನೀರು ಸರಬರಾಜು ಆಗಲಿದೆ. ಈ ಯೋಜನೆ ಜಾರಿ ಬಳಿಕ 4 ಲಕ್ಷ ಹೊಸ ಸಂಪರ್ಕ ನೀಡಲು ಅವಕಾಶವಿದ್ದು, ಬೆಂಗಳೂರಿಗೆ ಪ್ರತಿ ತಿಂಗಳು 2.4 ಟಿಎಂಸಿ ನೀರು ಸರಬರಾಜು ಆಗಲಿದೆ. ಇದೀಗ ಎಲ್ಲ ಮನೆಗಳಿಗೂ ನಲ್ಲಿ ನೀರಿನ ಸಂಪರ್ಕ ಒದಗಿಸುವ ಜವಾಬ್ದಾರಿಯನ್ನು ಸಮರೋಪಾದಿಯಲ್ಲಿ ನಿರ್ವಹಿಸ ಬೇಕಾಗಿದೆ.

ಇದನ್ನೂ ಓದಿ: Vishwavani Editorial: ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣವೇ?