ಲೋಕಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರು ಕೋಲಾಹಲವೆಬ್ಬಿಸಿ ಹಿನ್ನೆಲೆಯಲ್ಲಿ, ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರವು ನಿಜಾರ್ಥದಲ್ಲಿ ‘ಶೂನ್ಯ ಸಂಪಾದನೆ’ ಹಣೆಪಟ್ಟಿಯನ್ನು ಲಗತ್ತಿಸಿಕೊಳ್ಳು ವಂತಾಯಿತು. ಉತ್ತರ ಪ್ರದೇಶದ ಸಂಭಲ್‌ನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ವಿಪಕ್ಷ ಸದಸ್ಯರು ಘೋಷಣೆ ಕೂಗಿದ್ದು ಸಾಲದೆಂಬಂತೆ, ಉದ್ಯಮಿ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವುದರ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಹುಯಿಲೆಬ್ಬಿಸಿದ್ದಕ್ಕೆ ಅಧಿವೇಶನವು ಬುಧವಾರಕ್ಕೆ ಮುಂದೂಡಲ್ಪಟ್ಟಿದ್ದು ಇದಕ್ಕೆ ಕಾರಣ.
ಸರಕಾರಕ್ಕೆ ಎದುರಾಗಿ ಸಮರ್ಥ ವಿಪಕ್ಷ ಇರಬೇಕಾದ್ದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಅಗತ್ಯಗಳಲ್ಲೊಂದು. ಆದರೆ, ಇಂಥ ಸಜ್ಜಿಕೆಯೇ ಮಗ್ಗುಲು ಮುಳ್ಳಿನಂತೆ ಚುಚ್ಚಿದರೆ ಯಾರನ್ನು ದೂರುವುದು? ಚಳಿಗಾಲದ ಅಧಿವೇಶನವು ಸಾಕಷ್ಟು ದಿನಗಳವರೆಗೆ ನಡೆಯುವಂಥದ್ದಾಗಿ ರುವುದರಿಂದ, ತರುವಾಯದ ಯಾವುದಾದರೊಂದು ದಿನದಲ್ಲಿ ಪ್ರಸ್ತಾವಿತ ವಿಷಯದ ಚರ್ಚೆಗೆ ವಿಪಕ್ಷಗಳು ಆಗ್ರಹಿಸಬಹುದಾಗಿತ್ತು; ಆದರೆ ‘ಒತ್ತಡಹೇರುವ ತಂತ್ರ’ವೇ ಪ್ರಧಾನವಾದಾಗ ಇಂಥ ಎಲ್ಲ ಆಶಯಗಳೂ ಮೂಲೆಗುಂಪಾಗಿ ಬಿಡುವುದು ವಿಷಾದನೀಯ.
ಶಾಸನಸಭೆಗಳ ಒಂದೊಂದು ದಿನದ ಕಲಾಪಕ್ಕೂ ವೆಚ್ಚವಾಗುವ ಮೊತ್ತ ಗಣನೀಯ ಪ್ರಮಾಣದಲ್ಲಿರುತ್ತದೆ. ಅದು ಪ್ರಜೆಗಳು ಭರಿಸಿದ ತೆರಿಗೆ ದುಡ್ಡಿನಿಂದ ವಿನಿ ಯೋಗವಾಗುವಂಥದ್ದು. ಅನಪೇಕ್ಷಿತ ಕಾರಣಗಾಗಿ ಒಂದು ದಿನದ ಕಲಾಪ ಹಾಳಾದರೆ ಅಥವಾ ಮುಂದೂಡಲ್ಪಟ್ಟರೆ, ಅದು ಹಣ, ಶ್ರಮ ಮತ್ತು ಸಮಯ ವ್ಯರ್ಥವಾಗುವುದಕ್ಕೆ ಹೇತು ವಾಗುತ್ತದೆ. ಜನಪ್ರತಿನಿಧಿಗಳು ಎನಿಸಿಕೊಂಡವರಿಗೆ ಇದನ್ನು ಹೊಸದಾಗಿ ಮನವರಿಕೆ ಮಾಡಿಕೊಡಬೇಕಾದ ಅಗತ್ಯವಿಲ್ಲ; ಇಷ್ಟಾಗಿಯೂ ಅನಗತ್ಯವಾಗಿ ಹುಯಿಲೆಬ್ಬಿಸುವ ಹೆಜ್ಜೆಯನ್ನು ಇಟ್ಟಿದ್ದೇಕೆ ಎಂಬುದನ್ನು ಅವರೇ ಸ್ಪಷ್ಟೀಕರಿಸ ಬೇಕು. ವಿಪಕ್ಷಗಳ ಸದಸ್ಯರ ಈ ವರ್ತನೆಯನ್ನು ಕಂಡ ಪ್ರಧಾನಿ ಮೋದಿಯವರು, ‘ಪ್ರಜಾಪ್ರಭುತ್ವವನ್ನು ಗೌರವಿಸದ, ಜನರ ಆಶೋತ್ತರಗಳ ಮಹತ್ವವನ್ನು ಅರಿತಿಲ್ಲದ ಇವರಿಗೆ ಜನಸೇವೆಯ ವಿಷಯದಲ್ಲಿ ಯಾವುದೇ ಜವಾಬ್ದಾರಿಯಿಲ್ಲ’ ಎಂದಿರುವುದು ಸರಿಯಾಗೇ ಇದೆ!
ಇದನ್ನೂ ಓದಿ: Vishwavani Editorial: ತಮಸೋಮಾ ಜ್ಯೋತಿರ್ಗಮಯ