Thursday, 26th December 2024

Vishwavani Editorial: ‘ಹೋದ ಪುಟ್ಟ, ಬಂದ ಪುಟ್ಟ’ ಆಗದಿರಲಿ

ಬೆಳಗಾವಿಯಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನ ಶುರುವಾಗಿದೆ. 15 ದಿನಾವಧಿಯ ಈ ಅಧಿವೇಶನದಲ್ಲಿ 15ಕ್ಕೂ ಹೆಚ್ಚು ವಿಧೇಯಕಗಳ ಮಂಡನೆಗೆ ಸರಕಾರ ಸಜ್ಜಾಗಿದ್ದರೆ, ವಿವಿಧ ವಿಚಾರ- ವಿವಾದ-ಹಗರಣಗಳನ್ನು ಮುಂದಿಟ್ಟುಕೊಂಡು ಸರಕಾರದೊಂದಿಗೆ ‘ಕಬಡ್ಡಿ’ಗೆ ಇಳಿಯಲು ವಿಪಕ್ಷಗಳು ತವಕಿಸುತ್ತಿವೆ.

ಬೆಳಗಾವಿಯನ್ನೊಳ ಗೊಂಡಂತೆ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ತಾಂಡವವಾಡು ತ್ತಿರುವ ವಿಭಿನ್ನ ಸಮಸ್ಯೆಗಳನ್ನು ಚರ್ಚಿಸಿ, ಅವಕ್ಕೆ ಯಥೋಚಿತವಾಗಿ ಪರಿಹಾರದ ಮದ್ದು ಅರೆಯುವ ನಿರ್ಣಯ
ತಳೆಯುವುದು ಈ ಅಧಿವೇಶನದ ಕಾರ್ಯಸೂಚಿ. ಆದರೆ, ಇದುವರೆಗಿನ ಇಂಥ ಕಸರತ್ತುಗಳು ಎಷ್ಟರ ಮಟ್ಟಿಗೆ ಫಲ ನೀಡಿವೆ ಎಂಬುದು ಯಕ್ಷಪ್ರಶ್ನೆ.

ಕಾರಣ, ಇದುವರೆಗಿನ ಇಂಥ ಚಳಿಗಾಲದ ಅಽವೇಶನಗಳಲ್ಲಿ ಕರ್ನಾಟಕದ ಆ ಭಾಗಗಳ ಶಾಸಕರಿಂದ ಮಂಡನೆ ಯಾಗಿರುವುದು ಮತ್ತದೇ ‘ಚರ್ವಿತ- ಚರ್ವಣ’ ಚರ್ಚಾವಿಷಯಗಳು ಮತ್ತು ಅವು ಪ್ರತಿ ಬಾರಿಯೂ ಪುನರಾವರ್ತನೆ ಗೊಳ್ಳುತ್ತವೆ ಎಂಬ ಮಾತುಗಳು ರಾಜಕೀಯ ಪಡಸಾಲೆಗಳಲ್ಲಿ ಕೇಳಿಬರುವುದುಂಟು. ಇದರರ್ಥ, ಹಿಂದಿನ ಅಧಿವೇಶನಗಳಲ್ಲಿ ಮಂಡನೆಯಾದ ಚರ್ಚಾವಿಷಯಗಳ ಕಡೆಗೆ ಅಥವಾ ಸಮಸ್ಯೆಯ ಪರಿಹಾರದೆಡೆಗೆ ನಿರ್ಣಾಯಕ ಕ್ರಮ ಜರುಗಿಲ್ಲ ಎಂದಾಯಿತಲ್ಲವೇ? ಹಾಗಿದ್ದರೆ, ಬೆಳಗಾವಿಯಲ್ಲಿ ಇಂಥದೊಂದು ಅಧಿವೇಶನ ನಡೆಸುವುದರ
ಔಚಿತ್ಯವೇನು? ಎಂಬುದು ಪ್ರಶ್ನೆ.

ಏಕೆಂದರೆ, ಒಂದಿಡೀ ಸರಕಾರಿ ಸಜ್ಜಿಕೆಯನ್ನು ಬೆಳಗಾವಿಯ ಸುವರ್ಣಸೌಧಕ್ಕೆ ಒಯ್ದು ಸದನದ ಚಟುವಟಿಕೆಗಳಿಗೆ
ಅನುವು ಮಾಡಿಕೊಡುವುದು ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕೆ ಸಾಕಷ್ಟು ಅಧಿಕಾರಿಗಳ ಶ್ರಮ ಅಗತ್ಯ ವಾಗುತ್ತದೆ, ಸರಕಾರಿ ಬೊಕ್ಕಸಕ್ಕೆ ಗಣನೀಯ ವೆಚ್ಚವಾಗುತ್ತದೆ. ಇಷ್ಟಾಗಿಯೂ, ‘ಬಟ್ಟೆಯನ್ನು ಎಲ್ಲಿ ಹಾಕಲಾಗಿತ್ತೋ ಅಲ್ಲಿಯೇ ಬಿದ್ದಿದೆ’ ಎಂಬಂತೆ, ಪರಿಸ್ಥಿತಿಯಲ್ಲಿ ಹೇಳಿಕೊಳ್ಳುವಂಥ ಸುಧಾರಣೆಯಾಗದಿದ್ದರೆ, ಬೆಂಗಳೂರಿನಿಂದ ಬೆಳಗಾವಿಯವರೆಗೆ ತೆರಳಿ ಅಧಿವೇಶನ ನಡೆಸುವುದು ಅಕ್ಷರಶಃ ‘ಹೋದ ಪುಟ್ಟ, ಬಂದ ಪುಟ್ಟ’ ಎಂಬಂತಾಗುತ್ತದೆ.

ಈ ಪರಿಪಾಠಕ್ಕೆ ಇನ್ನಾದರೂ ತೆರೆಬೀಳಲಿ. ಸದನದಲ್ಲಿ ರಚನಾತ್ಮಕ ಚರ್ಚೆಗಳಾಗಿ, ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಕಟಿಬದ್ಧವಾಗಲಿ ಎಂಬುದು ಸಹೃದಯಿಗಳ ಆಶಯ ಮತ್ತು ನಿರೀಕ್ಷೆ. ಆಡಳಿತ ಪಕ್ಷ ಮತ್ತು ವಿಪಕ್ಷಗಳ ಎಲ್ಲ ಸದಸ್ಯರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿ.

ಇದನ್ನೂ ಓದಿ: Editorial _ Mens Hockey-j