Wednesday, 25th December 2024

Vishwavani Editorial: ಪರಿಷತ್ ಗಲಾಟೆ: ಮಾನ ಹರಾಜು

ಕಳೆದ ವಾರ ಬೆಳಗಾವಿಯಲ್ಲಿ ನಡೆದ ಅಧಿವೇಶನ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಡುವೆ ನಡೆದ ಜಗಳದ ಪ್ರಕರಣ ಭಾರೀ
ಸದ್ದು ಮಾಡಿದೆ. ಇವರಿಬ್ಬರ ನಡುವಿನ ಕಿಚ್ಚು ಇನ್ನೂ ಆರಿಲ್ಲ.

ಇಬ್ಬರೂ ಇದೀಗ ಆಣೆ, ಪ್ರಮಾಣದ ಹಂತಕ್ಕೆ ಬಂದು ನಿಂತಿದ್ದಾರೆ. ನನ್ನ ಮಾನ ಹೋಗಿದೆ. ನನ್ನ ಮರ್ಯಾದೆ ಹೋಗಿದೆ ಎಂದು ಇಬ್ಬರೂ ಸರಣಿ ಸುದ್ದಿಗೋಷ್ಠಿಗಳ ಮೂಲಕ ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಇಲ್ಲಿ
ಮಾನ, ಮರ್ಯಾದೆ ಹೋಗಿದ್ದು ರಾಜ್ಯದ್ದು, ಹಿರಿಯರ ಸದನ ಎಂದು ಕರೆಯುವ ವಿಧಾನ ಪರಿಷತ್‌ನದ್ದು. ವಿಧಾನ ಪರಿಷತ್ತಿನ ಒಳಗೆ ಇಂಥದ್ದೊಂದು ವಿವಾದ ಸೃಷ್ಟಿಯಾಗಿದ್ದು ಬಹಳ ವಿಷಾದಕರ. ವಿಧಾನ ಪರಿಷತ್ತು ಹಿರಿಯರ ಮನೆ. ಅದು ಅನುಭವ, ವಿವೇಕ ಮತ್ತು ಪ್ರಬುದ್ಧ ವ್ಯಕ್ತಿತ್ವದವರ ಮನೆಯಾಗಿರಬೇಕು. ವಿಧಾನ ಪರಿಷತ್ತು ವಿಧಾನ ಸಭೆಗೆ ಮಾದರಿಯಾಗಿ ನಿಲ್ಲಬೇಕು.

ಆದರೆ, ಈಗ ನಡೆದಿರುವ ವಿದ್ಯಮಾನವು ಶಾಸನಸಭೆಗಳ ಸದಸ್ಯರಲ್ಲಿ ಕೆಲವರು ಸಭ್ಯತೆಯ ಶಿಷ್ಟಾಚಾರವನ್ನು ಪಾಲಿಸುತ್ತಿಲ್ಲ ಎಂಬುದನ್ನು ತೋರಿಸುತ್ತಿದೆ. ಇದು ಬಹಳ ಕಳವಳಕಾರಿ. ರಾಜ್ಯ ಸರಕಾರವು ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ. ಪಾರದರ್ಶಕವಾಗಿ ತನಿಖೆಯಾಗಿ, ತ್ವರಿತವಾಗಿ ಪೂರ್ಣಗೊಂಡು ಜನರಿಗೆ ಸತ್ಯಾಂಶ ಗೊತ್ತಾಗಬೇಕು. ಇಲ್ಲಿ ಇರುವುದು ಪಕ್ಷ ರಾಜಕೀಯಕ್ಕೆ ಸಂಬಂಧಿಸಿದ ಪ್ರಶ್ನೆ ಅಲ್ಲ.

ಇದು ರಾಜ್ಯ ಸರಕಾರದ ಘನತೆ ಮತ್ತು ಸದನದ ಪಾವಿತ್ರ್ಯಕ್ಕೆ ಸಂಬಂಧಿಸಿದ ಪ್ರಶ್ನೆ. ತಾವು ಬಳಸುವ ಪದಗಳು, ತಮ್ಮ ನಡೆಗಳ ಪರಿಣಾಮವು ಏನಿರುತ್ತದೆ ಎಂಬುದನ್ನು ಮುಂದಿನ ಪೀಳಿಗೆಯ ರಾಜಕಾರಣಿಗಳಿಗೆ ಗೊತ್ತಾಗಬೇಕು. ಇಂತಹ ಘಟನೆ ಮುಂದೆ ಯಾವತ್ತೂ ಮರುಕಳಿಸದಿರಲಿ, ರಾಜಕಾರಣಿಗಳು ಕ್ಷುಲ್ಲಕ ರಾಜಕೀಯವನ್ನು ಮೀರಿ ನಿಲ್ಲಬೇಕು. ರಾಜ್ಯದ ಜನ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವುದೇ ನಮ್ಮ ಮೊದಲ ಆದ್ಯತೆ ಎಂದು ಭಾವಿಸಬೇಕು. ಆ ಮೂಲಕ ಅವರನ್ನು ಚುನಾಯಿಸಿ ಕಳುಹಿಸಿದ ಜನರ ಋಣ ತೀರಿಸುವ ಕೆಲಸ ಮಾಡಬೇಕು.

ಇದನ್ನೂ ಓದಿ: Vishwavani Editorial: ಚದುರಂಗ ಬಲದ ಚತುರ