ಗಡಿ ಜಿಲ್ಲೆ ಬೆಳಗಾವಿ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದಲ್ಲಿ ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿ ಯಾದ ಜಿಲ್ಲೆ. ಈ ಪೈಕಿ 1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಕಾಂಗ್ರೆಸ್ ಅಧಿವೇಶನವೂ ಒಂದು. ಈ ಅಽವೇಶನಕ್ಕೀಗ ಶತಮಾನೋತ್ಸವದ ಸಂಭ್ರಮ.
ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಅಧಿವೇಶನ ಇದಾಗಿದ್ದರಿಂದ ರಾಜ್ಯದ ಪಾಲಿಗೂ ಇದು ಚಾರಿತ್ರಿಕ ಸಂದರ್ಭ. ಬೆಳಗಾವಿ ನಗರದ ಟಿಳಕವಾಡಿಯಲ್ಲಿ 1924ರ ಡಿಸೆಂಬರ್ 26 ಮತ್ತು 27 ರಂದು ನಡೆದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ 39ನೇ ಮಹಾ ಅಧಿವೇಶನದಲ್ಲಿ ದೇಶಕ್ಕೆ ಸ್ವಾತಂತ್ಯ ಸಿಗುವವರೆಗೂ ಯಾವುದೇ ಕಾರಣಕ್ಕೂ
ಹೋರಾಟದಿಂದ ಹಿಂದೆ ಸರಿಯಬಾರದು ಎನ್ನುವ ನಿರ್ಣಯ ಅಂಗೀಕರಿಸಲಾಗಿತ್ತು.
ವಿಶೇಷ ಎಂದರೆ ಖಾದೀ ಭಗೀರಥ ಎಂದೇ ಹೆಸರಾದ ಗಂಗಾಧರರಾವ್ ದೇಶಪಾಂಡೆ ಮುಂದಾಳತ್ವದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ನಡೆದ ಈ ಅಧಿವೇಶನದಲ್ಲಿ ಅಂದು 30 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಸಮ್ಮೇಳನದ ಉದ್ದೇಶಕ್ಕಾಗಿಯೇ ಅಂದು ಬೃಹತ್ ಬಾವಿ ತೋಡಲಾಗಿತ್ತು. ಪಂಪಾ ಸಾಗರ ಹೆಸರಿನ ಈ ಬಾವಿ ಇಂದಿಗೂ ಕಾಂಗ್ರೆಸ್ ಬಾವಿ ಎಂದು ಹೆಸರಾಗಿದೆ. ಅಧಿವೇಶನಕ್ಕೆ ಸಾಕ್ಷಿಯಾದ ನೆಲದಲ್ಲಿ ವೀರಸೌಧ ನಿರ್ಮಿಸಲಾಗಿದೆ.
ಸಮ್ಮೇಳನಕ್ಕಾಗಿ ಒಂದು ವಾರ ಮುನ್ನವೇ ಆಗಮಿಸಿದ್ದ ಗಾಂಧೀಜಿ ಅಧಿವೇಶನ ನಡೆಯುತ್ತಿದ್ದ ಸ್ಥಳದ ಒಂದು ಟೆಂಟ್ ಹಾಕಿಕೊಂಡು ವಾಸ್ತವ್ಯ ಹೂಡಿದ್ದರು. ಪಕ್ಕದ ಗ್ರಾಮಗಳಿಗೆ ಭೇಟಿ ನೀಡಿ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದರು. ಹುಯಿಲಗೋಳ ನಾರಾಯಣರಾಯರು ರಚಿಸಿದ್ದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ
ನಾಡು’ ಹಾಡನ್ನು ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಅವರು ಅಧಿವೇಶನದಲ್ಲಿ ಹಾಡಿ ಎಲ್ಲರ ಪ್ರಶಂಸೆ ಗಳಿಸಿದ್ದು ಕೂಡ ಸ್ಮರಣೀಯ ಘಟನೆ.
ಇದೆಲ್ಲವೂ ಬೆಳಗಾವಿ ಮಾತ್ರವಲ್ಲ, ಇಡೀ ಸಮಸ್ತ ಕನ್ನಡಿಗರಿಗೆ ಮೆಲುಕು ಹಾಕುವ ಸಂದರ್ಭ. ರಾಜ್ಯದ ಆಡಳಿತಾ ರೂಢ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಅಧಿವೇಶನದ ನೆನಪಿನಲ್ಲಿ ಶತಮಾನೋತ್ಸವ ಕಾರ‍್ಯಕ್ರಮ ನಡೆದಿದೆ. ಗಾಂಧೀಜಿ ಅಧಿವೇಶನದ ನೆನಪಿಗಾಗಿ ಬೆಳಗಾವಿ ನಗರ ರಾಮತೀರ್ಥ ನಗರದಲ್ಲಿ ಗಂಗಾಧರರಾವ್ ದೇಶಪಾಂಡೆ ಸ್ಮಾರಕ ಭವನ ಮತ್ತು ಫೋಟೋ ಗ್ಯಾಲರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕರು ಇಲ್ಲಿ ಸಭೆ ಸೇರಿ ಪಕ್ಷದ ಸಂಘಟನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಗಾಂಧೀಜಿ ನೆನಪಿನಲ್ಲಿ ನಡೆಯುತ್ತಿರುವ ಈ ಕಾರ‍್ಯಕ್ರಮ ಪಕ್ಷಾತೀತವಾಗಿ ನಡೆದಿದ್ದರೆ ಸಮಾರಂಭದ ಗೌರವ ಇನ್ನೂ ಹೆಚ್ಚುತ್ತಿತ್ತು.
ಇದನ್ನೂ ಓದಿ: Vishwavani Editorial: ಚದುರಂಗ ಬಲದ ಚತುರ