ಯರ್ಲುಂಗ್ ಜಂಗ್ಬೊ ಎಂಬ ಹೆಸರಿನಿಂದ ಕರೆಸಿಕೊಳ್ಳುವ ನಮ್ಮ ಬ್ರಹ್ಮಪುತ್ರ ನದಿಗೆ ಭಾರತದ ಗಡಿ ಸಮೀಪದಲ್ಲಿ ಬೃಹತ್ ಅಣೆಕಟ್ಟೆ ನಿರ್ಮಿಸಲು ಮತ್ತು ಜಲವಿದ್ಯುತ್ ಯೋಜನೆ ರೂಪಿಸಲು ಚೀನಾ ಮುಂದಾಗಿದೆ.
ವಿಶ್ವದ ಅತಿ ದೊಡ್ಡದಾದ ಅಣೆಕಟ್ಟು ಇದಾಗಲಿದ್ದು, ಆ ಮೂಲಕ ನದಿಯಲ್ಲಿ ಹರಿಯುವ ನೀರಿನ ಮೇಲೆ ಚೀನಾ ತನ್ನ ಹಿಡಿತ ಸಾಧಿಸಲು ಯತ್ನಿಸುತ್ತಿದೆ. ಅಣೆಕಟ್ಟಿನ ಗಾತ್ರದ ಲೆಕ್ಕಾಚಾರದಂತೆ ನದಿಯಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿಸಿದರೆ, ಕೆಳಭಾಗದಲ್ಲಿ ಪ್ರವಾಹ ಸ್ಥಿತಿ ತಲೆದೋರುವ ಸಾಧ್ಯತೆಯಿದೆ.
ಈ ನದಿ ಪಾತ್ರದ ಕೆಳಭಾಗದಲ್ಲಿರುವ ಮತ್ತು ಈ ನದಿ ನೀರಿನಲ್ಲಿ ಪಾಲು ಹೊಂದಿರುವ ಭಾರತ ಹಾಗೂ ಬಾಂಗ್ಲಾ ದೇಶಕ್ಕೆ ನಿಜಕ್ಕೂ ಇದು ಕಳವಳಕಾರಿ ವಿಚಾರ. ‘ಈ ಅಣೆಕಟ್ಟೆಯಲ್ಲಿ ನೀರು ಸಂಗ್ರಹಿಸುವ ಉದ್ದೇಶ ಇಲ್ಲ, ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡ ಬಳಿಕ ನೀರನ್ನು ನದಿಗೆ ಹರಿಸಲಾಗುವುದು. ಹಾಗಾಗಿ, ಈ ಯೋಜನೆಯಿಂದ ಬೇರೆ ದೇಶಗಳಿಗೆ ತೊಂದರೆ ಆಗದು’ ಎಂದು ಚೀನಾ ಹೇಳುತ್ತಿದೆ. ಆದರೆ, ವಾಸ್ತವ ಹಾಗೆ ಇಲ್ಲ.
ಅಣೆಕಟ್ಟೆ ನಿರ್ಮಾಣದ ವಿಚಾರದಲ್ಲಿ ಚೀನಾ ಪಾರದರ್ಶಕವಾಗಿ ವರ್ತಿಸುತ್ತಿಲ್ಲ ಎಂಬ ಅನುಮಾನ ಇದೆ. ಭಾರತ-ಚೀನಾ ನಡುವೆ ನೀರಿನ ವಿಚಾರದಲ್ಲಿ ಸಹಕಾರ ಅಥವಾ ಹಂಚಿಕೆಯ ಒಪ್ಪಂದ ಇಲ್ಲ. ಆದರೆ, ನೀರು ಹರಿಸುವಿಕೆಯ ಮಾಹಿತಿ ಹಂಚಿಕೆ ಒಪ್ಪಂದ ಇದೆ. ಅಂದರೆ, ಎಷ್ಟು ನೀರು, ಯಾವಾಗ ಹರಿಸಲಾಗುತ್ತಿದೆ ಎಂಬುದನ್ನು ಚೀನಾವು ಭಾರತಕ್ಕೆ ತಿಳಿಸಬೇಕು.
ಆದರೆ, ೨೦೧೭ ದೋಕಲಾ ಮುಖಾಮುಖಿಯ ಸಂದರ್ಭದಲ್ಲಿ ಈ ಮಾಹಿತಿ ನೀಡಲು ಚೀನಾ ನಿರಾಕರಿಸಿತ್ತು. ಚೀನಾದ ಇಂತಹ ವರ್ತನೆಯಿಂದಾಗಿಯೇ ಗಡಿಯಲ್ಲಿ ಆ ದೇಶವು ಕೈಗೆತ್ತಿಕೊಳ್ಳುವ ಯಾವುದೇ ಯೋಜನೆ ಅಪಾಯಕಾರಿಯೇ. ತನ್ನ ನೆಲದಲ್ಲಿ ಹುಟ್ಟಿ, ಬೇರೆ ದೇಶಗಳಿಗೆ ಹರಿಯುವ ನದಿಗಳ ನೀರನ್ನು ಕೂಡ ಆಯುಧವನ್ನಾಗಿ ಚೀನಾ ಬಳಸಿ ಕೊಂಡ ಉದಾಹರಣೆ ಇದೆ. ಚೀನಾದ ಈ ಜಲ ರಾಜಕಾರಣಕ್ಕೆ ಈವರೆಗೆ ಮ್ಯಾನ್ಮಾರ್ ಮಾತ್ರ ಸಂತ್ರಸ್ತ ದೇಶವಾಗಿತ್ತು. ಆದರೆ ಈಗ ಭಾರತ ಮತ್ತು ಬಾಂಗ್ಲಾದೇಶವೂ ಸಂತ್ರಸ್ತವಾಗುವ ಅಪಾಯವಿದೆ.
ಅದೆಲ್ಲಕ್ಕಿಂತ ಭಾರತ- ಚೀನಾ ನಡುವಿನ ಈ ಸ್ಪರ್ಧೆಯು ಆ ಭಾಗದ ಪರಿಸರಕ್ಕೆ ಬಹುದೊಡ್ಡ ಅಪಾಯ ತಂದೊ ಡ್ಡುವುದಲ್ಲಿ ಯಾವುದೇ ಅನುಮಾನ ಇಲ್ಲ.
ಇದನ್ನೂ ಓದಿ: Vishwavani Editorial: ಚದುರಂಗ ಬಲದ ಚತುರ