ಮತ್ತೊಬ್ಬ ವಂಚಕ ಆಸಾಮಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ಬೆಂಗಳೂರಿನ ನೈಋತ್ಯ ರೈಲ್ವೆ ಕಚೇರಿಯಲ್ಲಿ ಚೀಫ್ ಟಿಕೆಟ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದವ. ಸರಕಾರಿ ಇಲಾಖೆಗಳಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿಗಳಿಗೆ ಬಲೆಬೀಸಿ, ತೇರ್ಗಡೆ ಮಾಡಿಸುವುದಾಗಿ ಅವರನ್ನು ನಂಬಿಸಿ, ಲಕ್ಷಾಂತರ ರುಪಾಯಿಗಳನ್ನು ಪಡೆದು ನಾಮ ಹಾಕುತ್ತಿದ್ದುದು
ಈತನ ಚಾಳಿಯಾಗಿತ್ತಂತೆ.
ಇಂಥ 46 ಮಂದಿ ಅಭ್ಯರ್ಥಿಗಳ ಹೆಸರನ್ನು ಈತ ತನ್ನ ಮೊಬೈಲ್‌ನಲ್ಲಿ ಉಳಿಸಿಟ್ಟುಕೊಂಡಿದ್ದನಂತೆ. ಪರೀಕ್ಷೆ ನಡೆಯುವುದಕ್ಕೆ ಮೊದಲು ಪ್ರಶ್ನೆಪತ್ರಿಕೆಗಳ ಸೋರಿಕೆಯಾಗುವುದು ಅಥವಾ ಅದರಲ್ಲಿನ ಪ್ರಶ್ನೆಗಳಲ್ಲಿ ಎಡವಟ್ಟು ಗಳಾಗಿರುವುದು, ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲು ನಡೆಯುವುದು ಅಥವಾ ಕೆಲವರು ಲಕ್ಷಗಟ್ಟಲೆ ದುಡ್ಡನ್ನು ಮಧ್ಯವರ್ತಿಗಳಿಗೆ ನೀಡಿ ಸರಕಾರಿ ಉದ್ಯೋಗದ ಕನಸು ಕಾಣುವುದು ಇವು ನಮ್ಮಲ್ಲಿ ಕಾಲಾನುಕಾಲಕ್ಕೆ ವರದಿಯಾಗುವಂಥ ಅಪಸವ್ಯಗಳೇ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ದಶಕಗಳಿಂದ ಇಂಥ ನ್ಯೂನತೆಗಳು ನಮ್ಮ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿದ್ದರೂ ಅವಕ್ಕೆ ಪರಿಣಾಮಕಾರಿಯಾಗಿ ಮದ್ದು ಅರೆಯಲು ಇನ್ನೂ ಸಾಧ್ಯವಾಗದಿರುವುದು ವಿಪರ್ಯಾಸವೇ. ಇನ್ನು, ಯಾರದ್ದೋ ಆಮಿಷಕ್ಕೆ ಬಲಿಯಾಗಿ, ವಾಮಮಾರ್ಗದಲ್ಲಿ ನೌಕರಿ ಗಿಟ್ಟಿಸಿಕೊಳ್ಳಲು ಹೋಗಿ, ಹೀಗೆ ಹಣವನ್ನೂ ಮರ್ಯಾದೆಯನ್ನೂ ಕಳೆದುಕೊಳ್ಳು ವವರಿಗೆ ಏನನ್ನುವುದು? ಒಂದೊಮ್ಮೆ ಇಂಥವರಿಗೆ ಹಾಗೆ ಉದ್ಯೋಗ ದಕ್ಕಿದರೂ, ನಿಯೋಜಿತ ಕಾರ್ಯದಲ್ಲಿ ‘ಶುದ್ಧಹಸ್ತ’ರಾಗಿ ಇವರೆಲ್ಲ ಕೆಲಸ ಮಾಡುತ್ತಾರೆ ಎಂದು ಸಾರ್ವಜನಿಕರು ನಿರೀಕ್ಷಿಸಲಾದೀತೇ? ‘ಭ್ರಷ್ಟಾಚಾರ ಮತ್ತು ಲಂಚ ಗುಳಿತನವನ್ನು ನಮ್ಮ ವ್ಯವಸ್ಥೆಯಿಂದ ಮೂಲೋತ್ಪಾಟನೆ ಮಾಡಬೇಕು’ ಎಂದು ವೇದಿಕೆಗಳಲ್ಲಿ ತೌಡು ಕುಟ್ಟುವವರು,
ಇಂಥ ವಾಮಮಾರ್ಗಗಳನ್ನು ಮುಚ್ಚುವಂಥ ಇಚ್ಛಾಶಕ್ತಿಯನ್ನೇಕೆ ತೋರುವುದಿಲ್ಲ? ಎಂಬುದು ಯಕ್ಷಪ್ರಶ್ನೆ.
ಇದನ್ನೂ ಓದಿ: Vishwavani Editorial: ಬಣ ಬಡಿದಾಟವೋ, ಮಕ್ಕಳಾಟವೋ?