Thursday, 24th October 2024

Vishwavani Editorial: ‘ಉಡ್ತಾ ಪಂಜಾಬ್’ ಸ್ಥಿತಿ ಅಬಾಧಿತ

ಪಂಜಾಬ್ ರಾಜ್ಯದ ಯುವಜನರಲ್ಲಿ ಕಾಣಬರುತ್ತಿರುವ ಮಾದಕ ವಸ್ತು ವ್ಯಸನವನ್ನು ಹಾಗೂ ಅದರ ಸುತ್ತ ಮುತ್ತಲಿನ ಪಿತೂರಿಗಳನ್ನು ಆಧರಿಸಿ 2016ರಲ್ಲಿ ‘ಉಡ್ತಾ ಪಂಜಾಬ್’ ಎಂಬ ಹಿಂದಿ ಚಲನಚಿತ್ರ ಬಿಡುಗಡೆ ಯಾಗಿತ್ತು. ಇದನ್ನು ನಮ್ಮ ಚಿತ್ರರಸಿಕರು ಮತ್ತು ವಿಮರ್ಶಕರು ಪ್ರಶಂಸಿಸಿದ್ದು ಹೌದಾದರೂ, ‘ನಿಂದನೀಯ ಭಾಷೆಯನ್ನು ಒಳಗೊಂಡಿದೆ’ ಎಂಬ ನೆಪವೊಡ್ಡಿ ಪಾಕಿಸ್ತಾನದ ಚಲನಚಿತ್ರ ಸೆನ್ಸಾರ್ ಮಂಡಳಿ ತನ್ನ ನೆಲದಲ್ಲಿ ಈ ಚಿತ್ರವನ್ನು ನಿಷೇಧಿಸಿತು.

ಇದರ ಹಿಂದಿರುವ ಕಾರಣವನ್ನು ಬಿಡಿಸಿ ಹೇಳಬೇಕಿಲ್ಲ ಬಿಡಿ. ‘ಉಡ್ತಾ ಪಂಜಾಬ್’ ಎಂಬ ಕಹಿವಾಸ್ತವ ಮತ್ತೊಮ್ಮೆ
ನೆನಪಾಗಲಿಕ್ಕೆ ಕಾರಣ, 2024ರ ಈ ಹೊತ್ತಿನಲ್ಲೂ ಪಂಜಾಬ್‌ನಲ್ಲಿ ಡ್ರಗ್ಸ್ ಪಿಡುಗು ಅಬಾಧಿತವಾಗಿದೆ ಎಂಬುದೇ ಆಗಿದೆ. ಪಂಜಾಬ್ ಪೊಲೀಸರು ಗಡಿಯಾಚೆ ನಡೆಯುತ್ತಿರುವ ಮಾದಕ ವಸ್ತುಗಳ ಅಕ್ರಮ ಸಾಗಣೆ ಜಾಲವನ್ನು ಭಾನುವಾರ (ಸೆ.29) ಭೇದಿಸಿ, 6ಕೆ.ಜಿ.ಯಷ್ಟು ಹೆರಾಯಿನ್ ದ್ರವ್ಯವನ್ನು ವಶಕ್ಕೆ ಪಡೆದು, ‘ನಾರ್ಕೊಟಿಕ್ ಡ್ರಗ್ಸ್ ಆಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್’ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವುದು ಇದಕ್ಕೆ ಸಾಕ್ಷಿ.

ಇದು ಪಂಜಾಬ್‌ನಲ್ಲಿ ವ್ಯಾಪಿಸಿರುವ ಕರಾಳ ಡ್ರಗ್ಸ್ ದಂಧೆಯ ಒಂದು ಆಘಾತಕಾರಿ ಮಗ್ಗುಲಾಗಿದ್ದರೆ, ಮಾದಕ ವಸ್ತುಗಳ ಜತೆಜತೆಯಲ್ಲಿ ಬಂದೂಕಿನ 2 ಮ್ಯಾಗಜಿನ್‌ಗಳು ಹಾಗೂ 6 ಮೊಬೈಲ್ ಫೋನುಗಳೂ ಸಿಕ್ಕಿರುವುದು ಈ ಜಾಲದ ಹಿಂದಿರಬಹುದಾದ ಇನ್ನಿತರ ಕುತ್ಸಿತ ಹಿತಾಸಕ್ತಿಗಳ ದ್ಯೋತಕವಾಗಿದೆ. ಮಗ್ಗುಲುಮುಳ್ಳು ಎನಿಸಿ ಕೊಂಡಿ ರುವ ಪಾಕಿಸ್ತಾನವು ನಮ್ಮ ದೇಶದ ಸಾಮಾಜಿಕ, ಧಾರ್ಮಿಕ ಪರಿಸ್ಥಿತಿಗಳಿಗೆ ಮತ್ತು ಸಹಜಸ್ಥಿತ ಸೌಹಾರ್ಧತೆಗೆ ಪೆಟ್ಟುಕೊಡಲು ಏನಾದರೊಂದು ಕಿತಾಪತಿ ಮಾಡಿಕೊಂಡೇ ಬರುತ್ತಿರುವುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಇದಕ್ಕೆ ಭಾರತವು ಕಾಲಾ ನುಕಾಲಕ್ಕೆ ತಿರುಗೇಟು ನೀಡಿದ್ದರೂ ಪಾಕಿಸ್ತಾನಕ್ಕೆ ಬುದ್ಧಿ ಬಂದಿಲ್ಲ ಎಂಬುದಕ್ಕೆ ಇಂಥ ಪ್ರಕರಣಗಳೇ ಸಾಕ್ಷಿಯಾಗುತ್ತವೆ.

ಯುವಜನರೇ ದೇಶವೊಂದರ ಆಸ್ತಿ; ಅವರ ಸ್ವಾಸ್ಥ್ಯವನ್ನೇ ಹದಗೆಡಿಸಿಬಿಟ್ಟರೆ ತನ್ನ ಪಿತೂರಿ ಅರ್ಧ ಯಶಸ್ವಿ ಯಾದಂತೆ ಎಂಬುದು ಪಾಕಿಸ್ತಾನದ ದುರುಳ ಚಿಂತನೆ. ಇದಕ್ಕೆ ಭಾರತ ಮದ್ದನ್ನು ಅರೆಯಬೇಕಿದೆ.

ಇದನ್ನೂ ಓದಿ: IPL 2025 : ಹರಾಜಿನಲ್ಲಿ ಪಾಲ್ಗೊಂಡು ಆಟಕ್ಕೆ ಬರದಿದ್ದರೆ ಬ್ಯಾನ್‌; ಐಪಿಎಲ್‌ನಲ್ಲಿ ಹೊಸ ರೂಲ್ಸ್‌