Friday, 10th January 2025

Vishwavani Editorial: ಟೀಕೆ-ಟಿಪ್ಪಣಿ ಆರೋಗ್ಯಕರ ವಾಗಿರಲಿ

ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ನೀರಸ ಪ್ರದರ್ಶನ ನೀಡಿದ್ದಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಕೆಂಡವಾಗಿದ್ದಾರೆ.

‘ಬಿಡುವಾದಾಗ ಈ ಇಬ್ಬರೂ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಆಡಬೇಕು, ಇದರಿಂದಾಗಿ ಯುವ ಪೀಳಿಗೆಯವ ರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವುದಕ್ಕೂ ಅವರಿಗೆ ಸಾಧ್ಯವಾಗುತ್ತದೆ’ ಎಂದು ಟೀಕಿಸಿದ್ದಾರೆ ರವಿಶಾಸ್ತ್ರಿ. ರನ್ನುಗಳ ಮೇಲೆ ರನ್ನುಗಳನ್ನು ಪೇರಿಸಿದಾಗ ಹಾಡಿ-ಹೊಗಳುವುದು, ಒಂದೊಮ್ಮೆ ಸರಣಿ ವೈಫಲ್ಯ ಎದುರಾದರೆ ಟೀಕಿಸುವುದು ಎರಡೂ ತರವಲ್ಲ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇಬ್ಬರೂ ದೈತ್ಯಪ್ರತಿಭೆಗಳೇ; ಹಾಗೆಂದ ಮಾತ್ರಕ್ಕೆ ಅವರ ಆಟದಲ್ಲಿ ಕುಸಿತ ಕಾಣಲೇಬಾರದು ಎಂದು ನಿರೀಕ್ಷಿಸಲಾದೀತೇ? ರುಚಿಕಟ್ಟಾದ ಬರಹಗಳನ್ನು ಕಟ್ಟಿಕೊಟ್ಟು ಓದುಗರನ್ನು ರಂಜಿಸುವ ಲೇಖಕ/ ಸಾಹಿತಿಯೂ ಒಮ್ಮೊಮ್ಮೆ ಕಾರಣಾಂತರಗಳಿಂದ ಹಿನ್ನಡೆ ಅನುಭವಿಸುವುದಿದೆ. ಸರಾಗವಾಗಿ ಹರಿದಾಡು ತ್ತಿದ್ದ ಲೇಖನಿ, ಒಂದಕ್ಷ ರವನ್ನೂ ಹುಟ್ಟಿಸಲಾಗದಷ್ಟರ ಮಟ್ಟಿಗೆ ಹರತಾಳ ಮಾಡುವ ಮತ್ತು ಅದರಿಂದಾಗಿ ಲೇಖಕರು ಹತಾಶೆಗೂ ಒಳಗಾಗುವ ಸಂದರ್ಭಗಳಿವೆ. ಇದು ‘ತಾತ್ಪೂರ್ತಿಕ ಹಿನ್ನಡೆ’ಯಷ್ಟೇ. ಅದಕ್ಕಾಗಿ ಬರಹಗಾರನ ತಾಕತ್ತನ್ನು ಸಂದೇಹಿಸಲಾಗದು, ಗೇಲಿಮಾಡಲಾಗದು.

ಇದು ಆಟಕ್ಕೂ ಅನ್ವಯವಾಗುವಂಥದ್ದು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಯಾರಿಂದಲೋ ಹೇಳಿಸಿ ಪ್ರಭಾವ ಬೀರಿ ಕ್ರಿಕೆಟ್ ತಂಡಕ್ಕೆ ಸೇರಿಕೊಂಡವರಾಗಿದ್ದರೆ ಅಥವಾ ಬ್ಯಾಟು ಬೀಸುವುದಕ್ಕೂ ಬರದ ಸಾಧಾ ರಣ ಆಟಗಾರರಾಗಿದ್ದರೆ ಆ ಮಾತು ಬೇರೆ; ಆದರೆ ಇಬ್ಬರೂ ಕ್ರೀಡಾಭಿಮಾನಿಗಳನ್ನು ರಂಜಿಸಿದವರೇ, ದಾಖಲೆಗಳನ್ನು ಪೇರಿಸಿದವರೇ. ನಮ್ಮ ಆಟಗಾರರು ಎದುರಾಳಿಗಳಿಂದ ಹೀನಾಯವಾಗಿ ಸೋತಾಗ, ಕೊಂಚ ಬೇಸರವಾಗುವುದು ಮತ್ತು ಅವರ ಕುರಿತಾಗಿ ಟೀಕೆ ಹೊಮ್ಮುವುದು ಸಹಜ. ಆದರೆ ಅದು ಆರೋಗ್ಯಕರವಾಗಿರಬೇಕು ಮತ್ತು ರಚನಾತ್ಮಕ ವಾಗಿರಬೇಕು, ಅಲ್ಲವೇ? ಸಂಬಂಧಪಟ್ಟವರು ಇದನ್ನು ಅರ್ಥಮಾಡಿಕೊಂಡರೆ ಒಳಿತು.

ಇದನ್ನೂ ಓದಿ: Vishwavani Editorial: ಏಕಿಂಥ ಮಲತಾಯಿ ಧೋರಣೆ !

Leave a Reply

Your email address will not be published. Required fields are marked *