ಪ್ರೀತಿಯ ಮಹಾತ್ಮ ಗಾಂಧಿ ತಾತ, ಇಂದು ನಿನ್ನ ಜನ್ಮದಿನ. ಈ ಸಂದರ್ಭದಲ್ಲಿ ನಿನ್ನ ಸನ್ನಿಧಿಗೆ ಇದೊಂದು ಪುಟ್ಟ ಪತ್ರ. ಸರಳತೆಯೇ ಮೈವೆತ್ತಂತಿದ್ದ, ಅಹಿಂಸೆಯೇ ಉಸಿರಾಗಿದ್ದ ಅನುಪಮ ಚೇತನ ನೀನಾಗಿದ್ದೆ. ಬಾಲ್ಯದಲ್ಲಿ ಅದ್ಯಾ ವುದೋ ಕುಪ್ರೇರಣೆಗೆ ಒಳಗಾಗಿ ಮನೆಯಲ್ಲಿ ದುಡ್ಡನ್ನು ಕಳವು ಮಾಡಿದರೂ, ಕೆಲ ಕ್ಷಣದಲ್ಲೇ ಅಪರಾಧಿ ಪ್ರಜ್ಞೆ ಕಾಡತೊಡಗಿದಾಗ, ಅಪ್ಪನೆದುರು ನೇರವಾಗಿ ಹೇಳಿಕೊಳ್ಳಲಾಗದೆ ಪತ್ರಮುಖೇನ ಅದನ್ನೆಲ್ಲಾ ಬರೆದು ಕೊಂಡು ತಪ್ಪೊಪ್ಪಿಕೊಂಡ ಧೀಮಂತ ನೀನು.
ಅಲ್ಲಿಂದ ಶುರುವಾಯ್ತು ನಿನ್ನ ಆತ್ಮಾವಲೋಕನದ ಪಯಣ. ಮನುಷ್ಯನಲ್ಲಿ ಸಹಜವಾಗಿ ಇರಬಹುದಾದ ಅವಗುಣ ಗಳನ್ನೆಲ್ಲಾ ಒಂದೊಂದಾಗಿ ಕಳೆದುಕೊಳ್ಳುತ್ತಾ, ವ್ಯಕ್ತಿತ್ವವನ್ನು ಗಟ್ಟಿಮಾಡಿಕೊಳ್ಳುತ್ತಾ ದಿನಗಳೆದಂತೆ ಪುಟಕ್ಕಿಟ್ಟ ಚಿನ್ನವೇ ಆಗಿಬಿಟ್ಟೆ. ‘ಪುಕ್ಕಲುತನ’ ಎಂದೇ ಅಪವ್ಯಾಖ್ಯಾನಕ್ಕೆ ಒಳಗಾಗಿದ್ದ ‘ಅಹಿಂಸೆ’ಗೆ ಇದ್ದ ಬಲವನ್ನು ಮನದಟ್ಟು ಮಾಡಿಕೊಟ್ಟು, ಆ ಪರಿಕಲ್ಪನೆಯನ್ನೇ ಅಸ್ತ್ರವಾಗಿಸಿಕೊಂಡು, ಅದರ ಜತೆಗೆ ಸತ್ಯಾಗ್ರಹದ ಬಲವನ್ನೂ ಸೇರಿಸಿ ಕೊಂಡು, ಬ್ರಿಟಿಷರ ಜಂಘಾಬಲವನ್ನೇ ಉಡುಗಿಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸಾಧಕ ನೀನು.
ಅಧಿಕಾರದ ಗದ್ದುಗೆ ಏರುವ ಎಲ್ಲ ಅರ್ಹತೆಗಳಿದ್ದರೂ ಅದಕ್ಕೆ ಮನಸೋಲದೆ, ದೇಶವನ್ನು ಮತ್ತು ದೇಶಸ್ಥರ ವ್ಯಕ್ತಿತ್ವ ವನ್ನು ಕಟ್ಟುವ ಮಹತ್ವದ ಕಾರ್ಯದಲ್ಲಷ್ಟೇ ವ್ಯಸ್ತನಾದ ನಿಜಾರ್ಥದ ಮುತ್ಸದ್ದಿ ನೀನು. ಆದರೆ, ನೀನು ಹಾಕಿಕೊಟ್ಟ ಮೇಲ್ಪಂಕ್ತಿಯ ಮಾರ್ಗದಲ್ಲಿ ನಮಗಿನ್ನೂ ಸರಿಯಾಗಿ ನಡೆಯಲು ಆಗುತ್ತಿಲ್ಲ. ಉದಾಹರಣೆಗೆ, ‘ನಡುರಾತ್ರಿಯಲ್ಲಿ ಹೆಣ್ಣೊಬ್ಬಳು ನಿರ್ಭಯವಾಗಿ, ಸುರಕ್ಷಿತವಾಗಿ ಓಡಾಡುವಂತಾದಾಗ ಮಾತ್ರವೇ ಭಾರತ ಸ್ವತಂತ್ರವಾದಂತೆ’ ಎಂಬರ್ಥದ ಮಾತನ್ನು ಅಂದು ನೀನು ಆಡಿದ್ದೆ.
ದುರದೃಷ್ಟವಶಾತ್ ಅಂಥ ವಾತಾವರಣವಿನ್ನೂ ಭಾರತದಲ್ಲಿ ಪರಿಪೂರ್ಣವಾಗಿ ಸೃಷ್ಟಿಯಾಗಿಲ್ಲ. ಬ್ರಿಟಿಷರಿಂದ ಸಿಕ್ಕ ಸ್ವಾತಂತ್ರ್ಯವನ್ನು ಕೆಲವಷ್ಟು ಮಂದಿ ಸ್ವೇಚ್ಛೆ ಎಂದು ಪರಿಭಾವಿಸಿರುವುದೇ ಇದಕ್ಕೆ ಕಾರಣ. ಇನ್ನು, ಭಾಷೆ, ಬಣ್ಣ,
ಜಾತಿ, ಮತ, ಪಂಥ ಎಂಬ ಗೋಜಲುಗಳಲ್ಲಿ ಸಿಕ್ಕಿ ಒದ್ದಾಡುವುದು ಭಾರತದಲ್ಲಿ ಮುಂದುವರಿದೇ ಇದೆ. ಈ ಗೋಜಲು ಗಳು ನಮ್ಮ ಆಳುಗರಿಗೆ ತಮ್ಮ ಹಿತಾಸಕ್ತಿಯ ನೆರವೇರಿಕೆಯ ಅಸ್ತ್ರಗಳೇ ಆಗಿಬಿಟ್ಟಿದೆ. ಹೀಗಾಗಿ ನಿನ್ನ ಕನಸಿನ ಭಾರತವಿನ್ನೂ ರೂಪುಗೊಂಡಿಲ್ಲ. ನಮ್ಮನ್ನೆಲ್ಲಾ ಕ್ಷಮಿಸಿಬಿಡು ತಾತ..
ಇದನ್ನೂ ಓದಿ: Mahatma Gandhi: ಮಹಾತ್ಮಾ ಗಾಂಧಿ ಕುರಿತ 20 ಕುತೂಹಲಕಾರಿ ಸಂಗತಿಗಳಿವು