ಇದು ನಿಜಕ್ಕೂ ಹೆಮ್ಮೆಯ ಸಂಗತಿ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್‌ಎ) ‘ಪ್ರೋಬಾ-3’ ಯೋಜನೆಯ ಎರಡು ಬಾಹ್ಯಾಕಾಶ ನೌಕೆಗಳನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದಕ್ಕೆ ಬಳಕೆಯಾಗಿದ್ದು ‘ಪಿಎಸ್ ಎಲ್‌ವಿ-ಸಿ 59′ ಎಂದೇ ತಾಂತ್ರಿಕವಾಗಿ ಗುರುತಿಸಲ್ಪಡುವ ಇಸ್ರೋದ ಅತ್ಯಂತ ವಿಶ್ವಾಸಾರ್ಹ ವಾಹಕ ಎಂಬುದು ಗಮನಾರ್ಹ ಸಂಗತಿ.
ಕ್ರಮವಾಗಿ 310 ಕೆ.ಜಿ. ಮತ್ತು 240 ಕೆ.ಜಿ. ತೂಕವಿದ್ದ ‘ಕರೋನಾಗ್ರಾಫ್’ ಮತ್ತು ‘ಅಕಲ್ಟರ್’ ಎಂಬ ಎರಡು ನೌಕೆಗಳನ್ನು ಒಟ್ಟಿಗೆ ಉಡಾಯಿಸಲಾಯಿತು. ಇವುಗಳ ನೆರವಿನಿಂದ ಕೃತಕ ಸೂರ್ಯಗ್ರಹಣವನ್ನು ಸೃಷ್ಟಿಸಿ ಸೂರ್ಯನ ‘ಕರೋನಾ’ ಪ್ರಭಾವಲಯವನ್ನು ಅಧ್ಯಯನ ಮಾಡಲಾಗುತ್ತದೆ ಎಂಬುದು ಲಭ್ಯ ಮಾಹಿತಿ. ‘ಮಂಗಳ ಕಕ್ಷಾಯಾನ’, ‘ಚಂದ್ರಯಾನ-3’ ಹೀಗೆ ವಿಕ್ರಮಗಳನ್ನು ಸಾಧಿಸುತ್ತಲೇ ಬಂದಿರುವ ಇಸ್ರೋದ ಸಾಧನಾ ಕಿರೀಟಕ್ಕೆ ಸೇರಿದ ಮತ್ತೊಂದು ಗರಿಯಿದು ಎನ್ನಲಡ್ಡಿಯಿಲ್ಲ.
ಜತೆಗೆ, ‘ಆತ್ಮನಿರ್ಭರ ಭಾರತ’, ‘ಮೇಕ್ ಇನ್ ಇಂಡಿಯಾ’ ಮಂತ್ರಗಳನ್ನು ಜಪಿಸುತ್ತಲೇ ಬಂದಿರುವ ನಮ್ಮ
ಕೇಂದ್ರ ಸರಕಾರದ ಆಶಯಕ್ಕೆ ಮತ್ತಷ್ಟು ಬಲ ತುಂಬಿರುವ ಉಪಕ್ರಮವೂ ಇದಾಗಿದೆ. ಇದನ್ನು ಹೀಗೆ ಒತ್ತಿಹೇಳಲು ಇನ್ನೊಂದು ಕಾರಣವಿದೆ. ಒಂದು ಕಾಲಕ್ಕೆ ‘ಭಾರತ’ ಎಂದಾಕ್ಷಣ ವೈಶ್ವಿಕ ಸಮುದಾಯವು ನಮ್ಮ ದೇಶವನ್ನು ಮತ್ತು ದೇಶವಾಸಿಗಳನ್ನು ಕಲ್ಪಿಸಿಕೊಳ್ಳುತ್ತಿದ್ದ ಹಾಗೂ ನಡೆಸಿಕೊಳ್ಳುತ್ತಿದ್ದ ರೀತಿಯೇ ಬೇರೆ ತೆರನಾಗಿತ್ತು. ‘ಭಾರತವೆಂದರೆ ಹಾವಾಡಿಗರ ದೇಶ’ ಎಂಬ ಕೂರಂಬಿನ ಹಣೆಪಟ್ಟಿಯೂ ಸಾಕಷ್ಟು ದಶಕಗಳವರೆಗೆ ಭಾರತಕ್ಕೆ ತಗುಲಿಕೊಂಡಿತ್ತು. ಆದರೆ ಇಂಥ ಹಲವು ಅಪಸವ್ಯಗಳನ್ನು ಕಿತ್ತೊಗೆದು ಹೆಮ್ಮೆಯಿಂದ ತಲೆಯೆತ್ತಿ ನಿಂತು, ವಿಶ್ವಭೂಪಟದಲ್ಲಿ ತನ್ನನ್ನು ಢಾಳಾಗಿ ಗುರುತಿಸಿಕೊಂಡಿದೆ ಭಾರತ. ಇಂಥ ಸಾಧನೆ ಕೈಗೂಡಲು ನೆರವಾಗಿರುವ ಹತ್ತು ಹಲವು ಅಂಶಗಳಲ್ಲಿ ಇಸ್ರೋ ಕಾಲಾನುಕಾಲಕ್ಕೆ ದಾಖಲಿಸುತ್ತದಿರುವ ಇಂಥ ವಿಕ್ರಮಗಳೂ ಸೇರಿವೆ ಎನ್ನಲಡ್ಡಿಯಿಲ್ಲ. ಈ ಯಶೋಗಾಥೆ ಮುಂದುವರಿಯಲಿ.
ಇದನ್ನೂ ಓದಿ: editorial