Thursday, 26th December 2024

Vishwavani Editorial: ಅಡಕೆ ಮೇಲಿನ ಕಳಂಕ ದೂರವಾಗಲಿ

ಅಡಕೆ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ದೇಶದೊಳಗಿನ ಸಂಶೋಧನಾ ಸಂಸ್ಥೆಗಳ ಮೂಲಕವೇ ಅಧ್ಯಯನ ನಡೆಸುವ ಕೇಂದ್ರ ಸರಕಾರದ ನಿರ್ಧಾರ ಸ್ವಾಗತಾರ್ಹ.

ಇದುವರೆಗೂ ನಡೆದ ಹಲವು ಅಧ್ಯಯನಗಳು ಪಾನ್ ಮಸಾಲಾ, ಗುಟ್ಕಾದಂತಹ ಮಿಶ್ರಣಗಳಿಂದ ಮಾನವನ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳನ್ನು ಚರ್ಚಿಸಿವೆ. ಅಡಕೆಯೊಂದನ್ನೇ ಕೇಂದ್ರವಾಗಿರಿಸಿ ಆರೋಗ್ಯದ ಮೇಲೆ ಬೀರುವ ಪರಿಣಾಮದ ಕುರಿತು ಸಮಗ್ರ ಅಧ್ಯಯನ ನಡೆದಿಲ್ಲ.

ಆದರೆ ಕ್ಯಾನ್ಸರ್‌ಕಾರಕ ಎಂದು ಹೇಳಲಾದ ಗುಟ್ಕಾ ಮತ್ತು ಪಾನ್ ಮಸಾಲಾದ ಮೇಲಿನ ನಿರ್ಬಂಧದ ವೇಳೆ ಅಡಕೆಯ ಹೆಸರನ್ನೂ ಉಲ್ಲೇಖಿಸಲಾಗಿದೆ. ಅಡಕೆಯ ಧಾರಣೆ ಮೇಲೆ ಇದು ಹೆಚ್ಚಿನ ಪರಿಣಾಮ ಬೀರಿಲ್ಲವಾದರೂ ಆಗಾಗ ಪಾನ್, ಗುಟ್ಕಾ ನಿಷೇಧದ ಹೆಸರಿನಲ್ಲಿ ಅಡಕೆ ದರ ಇಳಿಕೆ ಯತ್ನ ಗಳು ನಡೆಯುತ್ತಲೇ ಇವೆ. ಅಡಕೆಯ ಬಗ್ಗೆ ಸ್ಥಳೀಯ ತಜ್ಞರು, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನಡೆಸಿದ ಸಂಶೋಧನೆಯ ವೇಳೆ ಈ ತನಕ ಯಾವುದೇ ಋಣಾತ್ಮಕ ವರದಿಗಳು ಬಂದಿಲ್ಲ.

ಆಯುರ್ವೇದದ ಪ್ರಕಾರವೂ ಅಡಕೆ ಸೇವನೆ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಮಾಡುತ್ತದೆ. ಅಡಕೆಯಲ್ಲಿ ಹಲವಾರು ಆಲ್ಕಲಾಯ್ಡ್‌ಗಳಿರುವುದರಿಂದ ಮನುಷ್ಯರು ಮತ್ತು ಸಾಕುಪ್ರಾಣಿಗಳ ಔಷಧಿಗಳಲ್ಲೂ ಇದರ ಬಳಕೆ ಇದೆ. ಇದೇ ಅಭಿಪ್ರಾಯದಲ್ಲಿ ಮಾರುಕಟ್ಟೆಯಲ್ಲಿ ಅಡಕೆಯನ್ನು ಆಧರಿಸಿದ ಹಲವು ಉತ್ಪನ್ನ ಗಳು ಬಂದಿವೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬರುವ ಸಂಶೋಧನಾ ವರದಿಗಳಲ್ಲಿ ಆಗಾಗ ಅಡಕೆಯ ಬಗ್ಗೆ ಕೆಂಗಣ್ಣು ಬೀರಲಾಗುತ್ತಿದೆ.

ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿ ಅಡಕೆ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ವನ್ನುಂಟು ಮಾಡುತ್ತದೆ ಎಂದಿರುವುದು ಅಡಕೆ ಬೆಳೆ ಗಾರರ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು. ಇದೀಗ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸೇರಿದಂತೆ ಒಟ್ಟು 16 ಸಂಶೋಧನಾ ಸಂಸ್ಥೆಗಳ ಮೂಲಕ ಅಡಕೆಯ‌ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ಪಡೆಯಲಾಗುವುದೆಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಲೋಕಸಭೆಗೆ ತಿಳಿಸಿದ್ದಾರೆ. ಈ ವರದಿಯಿಂದಲಾದರೂ ಅಡಕೆಗೆ ಅಂಟಿರುವ ಕಳಂಕ ದೂರ ವಾಗಲಿ ಎನ್ನವುದು ಬೆಳೆಗಾರರ ಆಶಯ.

ಇದನ್ನೂ ಓದಿ: Vishwavani Editorial: ಗತವೈಭವಕ್ಕೆ ಮರಳಲಿ ಚಂದನವನ