Thursday, 26th December 2024

Vishwavani Editorial: ಕೆಇಎ ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳಲಿ

ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕ ಪ್ರತಿಷ್ಠಿತ ಕಾಲೇಜುಗಳಲ್ಲಿ ಬಹು ಬೇಡಿಕೆ ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಹಗರ
ಣಕ್ಕೆ ಸಂಬಂಧಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ 8 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ವರದಿಯಾಗಿದೆ.

ಈ ಬಂಧಿತರ ಪೈಕಿ ಹಲವರು ಅನೇಕ ವರ್ಷಗಳಿಂದ ಕೆಇಎನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದು ಕೆಇಎ ವೈಫಲ್ಯಕ್ಕೆ ಹಿಡಿದ ಮತ್ತೊಂದು ಕೈಗನ್ನಡಿ. ಈ ಹಿಂದೆಯೂ ಅನೇಕ ನೇಮಕಾತಿ ಪರೀಕ್ಷೆಗಳಲ್ಲಿ ಕೆಇಎ ಯಡವಟ್ಟು ಮಾಡಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡಲು ಅವಕಾಶ ನೀಡುವುದು ಸೇರಿದಂತೆ ನೇಮಕಾತಿ ಪ್ರಕ್ರಿಯೆಯಲ್ಲಿ ತಹರೇವಾರಿ ಅಕ್ರಮಗಳನ್ನು ಮಾಡಿದೆ. ಈ ಅಕ್ರಮಗಳಿಗೆ ಮೂಲ ಕಾರಣ ಆಯಾ ಪರೀಕ್ಷೆಗಳನ್ನು ನಡೆಸುವ ಪ್ರಕ್ರಿಯೆಯಲ್ಲಿ ಭಾಗಿಯಾಗುವ ವ್ಯಕ್ತಿಗಳೇ ವಿನಾ ಅಭ್ಯರ್ಥಿಗಳಲ್ಲ ಎಂಬುದೂ ಪೊಲೀಸ್ ತನಿಖೆಯಲ್ಲಿ ಸಾಬೀತಾಗಿದೆ.

ಲಿಖಿತ ಪರೀಕ್ಷೆಯ ಉತ್ತರ ಪತ್ರಿಕೆ (ಓಎಂಆರ್) ತಿದ್ದುವುದು ಸದ್ಯ ಚಾಲ್ತಿಯಲ್ಲಿರುವ ಅಡ್ಡದಾರಿಗಳ ಪೈಕಿ ಬಹುಮುಖ್ಯವಾದುದು. ಇದನ್ನು ಮಾಡಲು ಒಂದು ವ್ಯವಸ್ಥಿತ ಜಾಲವೇ ಇರಬೇಕಲ್ಲವೇ? ಅಕ್ರಮಗಳಿಗೆ ಕಡಿವಾಣ ಹಾಕುವ ಇಚ್ಛಾಶಕ್ತಿ ಅಸಲಿಗೂ ಇದ್ದರೆ ಹೊಸ ನಿಯಮಾವಳಿ ಗಳನ್ನು ರೂಪಿಸಿ, ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಸಾಧ್ಯವಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅಕ್ರಮಗಳ ಬೇರಿಗೆ ಕೈ ಹಾಕಲು ನೇಮಕಾತಿ ಪ್ರಕ್ರಿಯೆ ನಡೆಸುವವರಿಗೇ ಮನಸ್ಸಿರುವುದಿಲ್ಲ. ಅಷ್ಟಕ್ಕೂ ಅಕ್ರಮಗಳಲ್ಲಿ ಭಾಗಿಯಾಗುವ ಕೈಗಳು ಅವರವೇ ಅಲ್ಲವೇ? ಅಕ್ರಮಗಳಿಗೆ ಕಡಿವಾಣ ಹಾಕುವುದಕ್ಕಿಂತ ಅಕ್ರಮಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದು ಬಿಂಬಿಸುವುದರ ಪಟ್ಟಭದ್ರರಿಗೆ ಹೆಚ್ಚು ಲಾಭ.

ನೇಮಕಾತಿಯಲ್ಲಿನ ಭ್ರಷ್ಟಾಚಾರವಲ್ಲದೆ ಅದನ್ನು ತಡೆಯುವುದಕ್ಕಾಗಿ ಅನುಸರಿಸುವ ಕ್ರಮಗಳಿಂದಲೂ ಬಲಿಪಶುಗಳಾಗುವವರು ಅಭ್ಯರ್ಥಿಗಳೇ
ಎಂಬುದು ವಿಪರ್ಯಾಸವಾದರೂ ವಾಸ್ತವ. ಆಮೆಗತಿಯಲ್ಲಿ ಸಾಗುವ ನೇಮಕಾತಿ ಪ್ರಕ್ರಿಯೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನಡೆಯುವ ಮರುಪರೀಕ್ಷೆ ಇವೆಲ್ಲವೂ ಅಭ್ಯರ್ಥಿಗಳನ್ನು ಮತ್ತಷ್ಟು ಹತಾಶೆಗೆ ದೂಡುತ್ತವೆ. ಅದುಬಿಟ್ಟರೆ, ಸರಕಾರಿ ನೇಮಕಾತಿ ವ್ಯವಸ್ಥೆ ಮೇಲಿನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಾರವು. ಸರಕಾರಿ ಹುದ್ದೆಗಳ ಭರ್ತಿಗಾಗಿ ನಡೆಯುವ ನೇಮಕಾತಿ ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರ ಮತ್ತು ಅಕ್ರಮಗಳಿಗೆ ಕಡಿವಾಣ ಹಾಕಲು ಸಂಬಂಧಪಟ್ಟ ಪರೀಕ್ಷಾ ಪ್ರಾಽಕಾರ, ನೇಮಕಾತಿ ಆಯೋಗ ಹಾಗೂ ಇಲಾಖೆಗಳು ಮುತುವರ್ಜಿ ತೋರಬೇಕು.

ಇದನ್ನೂ ಓದಿ: Vishwavani Editorial: ಗತವೈಭವಕ್ಕೆ ಮರಳಲಿ ಚಂದನವನ