Thursday, 24th October 2024

Vishwavani Editorial: ಬಿಜೆಪಿ ಪಾಲಿಗಿದು ಬೇವು-ಬೆಲ್ಲ


ಒಂದಿಡೀ ದೇಶವು ಕಾತರಿಸಿ ಕಾಯುತ್ತಿದ್ದ ಜಮ್ಮು-ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ.

ಬಿಜೆಪಿಯ ಪಾಲಿಗೆ ಜಮ್ಮು-ಕಾಶ್ಮೀರದ ಫಲಿತಾಂಶವು ‘ಬೇವು’ ಆಗಿಯೂ, ಹರಿಯಾಣದ ಫಲಿತಾಂಶವು ‘ಬೆಲ್ಲ’ ವಾಗಿಯೂ ಒದಗಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಈ ಮಿಶ್ರಫಲವು ಬಿಜೆಪಿಗೆ ಪುಟ್ಟದೊಂದು
ಪಾಠ ವನ್ನೂ ಕಲಿಸಿದೆ. ಏಕೆಂದರೆ, ಜಮ್ಮು-ಕಾಶ್ಮೀರದಲ್ಲಿ ಶತಾಯಗತಾಯ ತನ್ನ ಹೆಜ್ಜೆಗುರುತು ಮೂಡಿಸುವುದು ಕೇಸರಿಪಕ್ಷದ ಮಹತ್ವಾಕಾಂಕ್ಷೆಯಾಗಿತ್ತು. ಆದರೆ, ‘ಇಂಡಿಯ’ ಮೈತ್ರಿಕೂಟದ ಸಹಭಾಗಿಗಳಾದ ನ್ಯಾಷನಲ್ ಕಾನರೆನ್ಸ್ ಹಾಗೂ ಕಾಂಗ್ರೆಸ್ ಎಂಬ ಜೋಡೆತ್ತುಗಳ ಎದುರು ಕೇಸರಿ ಪಾಳಯ ಮಣಿಯಬೇಕಾಗಿ ಬಂತು. ಈ ರಾಜ್ಯದಲ್ಲಿ ಬಿಜೆಪಿಗೆ ಗೆಲುವು ದಕ್ಕಿದ್ದಿದ್ದರೆ ಅದು ನಿಜಕ್ಕೂ ಸಾಧನೆಯೇ ಆಗಿರುತ್ತಿತ್ತು.

ಆದರೆ, ಅದಕ್ಕಾಗಿ ಕ್ರಮಿಸಬೇಕಾದ ಹಾದಿಯಿನ್ನೂ ಸಾಕಷ್ಟಿದೆ, ಜತೆಗೆ ಅದು ದುರ್ಗಮವಾಗಿದೆ ಎಂಬುದನ್ನು ಅಲ್ಲಿ ಹೊಮ್ಮಿರುವ ಫಲಿತಾಂಶ ಸಾಬೀತುಮಾಡಿದೆ. ಇನ್ನು ಹರಿಯಾಣದ ಕಡೆಗೆ ಹೊರಳುವುದಾದರೆ, ಇಲ್ಲಿ ಬಿಜೆಪಿಗೆ ಯಶಸ್ಸು ದಕ್ಕುವುದು ಕಷ್ಟ ಎಂದೇ ಕೆಲ ಸಮೀಕ್ಷೆಗಳು ಮುನ್ನುಡಿದಿದ್ದವು. ಕೆಲ ತಿಂಗಳ ಹಿಂದೆ ಇಲ್ಲಿನ ಮುಖ್ಯ ಮಂತ್ರಿಯನ್ನು ಬಿಜೆಪಿ ಹೈಕಮಾಂಡ್ ಬದಲಿಸಿದ್ದು, ಕೇಂದ್ರ ಸರಕಾರದ ವಿರುದ್ಧ ಇಲ್ಲಿನ ಕೃಷಿಕರಲ್ಲಿ ಮನೆ ಮಾಡಿದ್ದ ಅಸಮಾಧಾನ ಇವೇ ಮೊದಲಾದ ಅಂಶಗಳು ಬಿಜೆಪಿಗೆ ತಿರುಗುಬಾಣವಾಗಲಿವೆ ಎಂಬ ಗ್ರಹಿಕೆಯೇ ಬಹುತೇಕರಲ್ಲಿ ದಟ್ಟವಾಗಿತ್ತು.

ಆದರೆ ಈ ಎಲ್ಲ ಸವಾಲುಗಳನ್ನೂ ಮೆಟ್ಟಿ ಬಿಜೆಪಿ ಸತತ ಮೂರನೆಯ ಬಾರಿಗೆ ಗದ್ದುಗೆಯನ್ನು ಅಪ್ಪಿದೆ. ವಿವಿಧ ಕಾರಣಗಳಿಗಾಗಿ ಕೇಂದ್ರದ ಮೋದಿ ಸರಕಾರದ ವಿರುದ್ಧ ಅತೃಪ್ತಿ- ಅಸಮಾಧಾನ- ಆರೋಪಗಳನ್ನು ಕಾರಿ ಕೊಳ್ಳುತ್ತಿದ್ದ ಒಲಿಂಪಿಯನ್ ಕುಸ್ತಿಪಟು ವಿನೇಶ್ ಪೋಗಟ್ ಅವರು ಹರಿಯಾಣದ ಜುಲಾನ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವುದು ಕೂಡ ಮತ್ತೊಂದು ಗಮನಾರ್ಹ ಅಂಶವೆನ್ನಬೇಕು. ಒಂದು ಕಾಲಕ್ಕೆ ‘ಕಾಂಗ್ರೆಸ್-ಮುಕ್ತ ಭಾರತ’ದ ಮಂತ್ರ ಜಪಿಸುತ್ತಿದ್ದ ಬಿಜೆಪಿಗೆ, ಕರ್ನಾಟಕ ಮತ್ತು ತೆಲಂಗಾಣ ವಿಧಾನಸಭಾ
ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ದಕ್ಕಿದ ಗೆಲುವು ತಕ್ಕ ಉತ್ತರವನ್ನೇ ನೀಡಿತ್ತು. ಜಮ್ಮು-ಕಾಶ್ಮೀರದ ಫಲಿತಾಂಶ ಈ ಯಾದಿಗೆ ಮತ್ತೊಂದು ಸೇರ್ಪಡೆ ಎನ್ನಲಡ್ಡಿಯಿಲ್ಲ.

ಇದನ್ನೂ ಓದಿ: Jammu&Kashmir : ಸೇನಾ ವಾಹನ ಕಮರಿಗೆ ಉರುಳಿ, ಜವಾನ ಸಾವು, 6 ಮಂದಿಗೆ ಗಾಯ