ಕಳೆದ ಕೆಲ ತಿಂಗಳಿಂದ ವಿವಿಧ ಕಾರಣಗಳಿಗೆ ಸುದ್ದಿಯಾಗಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂತೂ ಇಂತೂ ಸಂಪನ್ನಗೊಂಡಿದೆ. ‘ಮಾತು-ಮಂಥನ’ ಸಂವಾದದಲ್ಲಿ ಸಮ್ಮೇಳನಾಧ್ಯಕ್ಷರು ‘ತ್ರಿಭಾಷಾ ಸೂತ್ರದ ಹೇರಿಕೆ ಸಲ್ಲ, ಕನ್ನಡವು ಉಳಿಯಬೇಕಾದರೆ ಮಾತೃಭಾಷೆ ಪ್ರಜ್ಞೆ ಮುಖ್ಯ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ ಸೇರಿದಂತೆ, ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಒಂದಷ್ಟು ಮಹತ್ವದ ಆಗ್ರಹಗಳೂ ಹೊರಹೊಮ್ಮಿವೆ.
ಕನ್ನಡಕ್ಕೆ ಡಿಜಿಟಲ್ ಪ್ರಾಧಿಕಾರದ ಅಗತ್ಯವಿದೆ ಎಂಬ ಹಕ್ಕೊತ್ತಾಯವೂ ಕೇಳಿಬಂದಿದೆ. ಈ ಯಾವುದನ್ನೂ ಸಿನಿಕ ದೃಷ್ಟಿಯಿಂದ ನೋಡದೆ, ‘ಕನ್ನಡದ, ಕನ್ನಡಿಗರ ಮತ್ತು ಕರ್ನಾಟಕ ರಾಜ್ಯದ ಹಿತವನ್ನು ಕಾಯುವಂಥ ಕ್ರಮಗಳು ಆಳುಗರಿಂದ ಹೊಮ್ಮಲಿ’ ಎಂದು ಆಶಿಸೋಣ.
‘ಕನ್ನಡದ ಹಿತ ಕಾಯುವಿಕೆ’ ಎಂದರೆ, ಭಾಷಾಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸುವಿಕೆ ಎಂಬ ಸೀಮಿತ ದೃಷ್ಟಿಕೋನದಿಂದ ಹೊರಬಂದು, ಕನ್ನಡಿಗರ ಸಾಮಾಜಿಕ-ಆರ್ಥಿಕ-ಔದ್ಯೋಗಿಕ ಸ್ಥಿತಿಗತಿಗಳನ್ನು ಉನ್ನತೀ ಕರಿಸುವ, ನೆಲ ಮತ್ತು ಜಲದ ವಿಷಯದಲ್ಲಿ ರಾಜ್ಯಕ್ಕೆ ದಶಕಗಳಿಂದಲೂ ಆಗುತ್ತಿರುವ ಅನ್ಯಾಯಕ್ಕೆ ಪರಿಣಾಮಕಾರಿ ಮದ್ದು ಅರೆಯುವ ಸಂಕಲ್ಪವನ್ನೂ ತೊಡಬೇಕಾಗಿರುವುದು ಈ ಕ್ಷಣದ ಅನಿವಾರ್ಯತೆಯಾಗಿದೆ. ಇಂಥ ಚರ್ಚಾ ವಿಷಯಗಳು ಮುನ್ನೆಲೆಗೆ ಬಂದಾಗ ನೆರೆಯ ತಮಿಳುನಾಡಿನಲ್ಲಿ ಅಲ್ಲಿನ ರಾಜಕೀಯ ಪಕ್ಷಗಳು ಪಕ್ಷಭೇದವನ್ನು ಮರೆತು ಒಂದಾಗಿ ಹೋರಾಡುವ ಪರಿಪಾಠವಿದ್ದು, ನಮ್ಮ ರಾಜಕಾರಣಿಗಳಿಗೆ ಇದು ಮೇಲ್ಪಂಕ್ತಿಯಾಗಬೇಕಿದೆ.
ಏಕೆಂದರೆ, ಕನ್ನಡಿಗರ ಸಾಮಾಜಿಕ-ಆರ್ಥಿಕ-ಔದ್ಯೋಗಿಕ ಸ್ಥಿತಿಗತಿಗಳ ಸುಧಾರಣೆಗೆಂದೇ ಇವರೆಲ್ಲ ಟೊಂಕ ಕಟ್ಟಿರುವುದಲ್ಲವೇ? ಜನಸೇವೆ ಎಂಬ ಪರಿಕಲ್ಪನೆಗೆ ಮೂಲಾಧಾರವಾಗಿರುವುದೇ ಈ ಅಂಶ. ಹಾಗಿರುವಾಗ ಅದರೆಡೆಗೆ ಆದ್ಯಗಮನವನ್ನು ನೀಡಿದರೆ, ಅಂದುಕೊಂಡ ಉದ್ದೇಶ ನೆರವೇರುವುದರಲ್ಲಿ ಸಂದೇಹವಿಲ್ಲ. ಅದಕ್ಕೆ ಬೇಕಾಗಿರು ವುದು ರಾಜಕೀಯ ಇಚ್ಛಾಶಕ್ತಿಯಷ್ಟೇ. ಆದರೆ, ಯಾವ ಪಕ್ಷವು ಅಧಿಕಾರಕ್ಕೆ ಬಂದರೂ, ತಂತಮ್ಮ ಅಸ್ತಿತ್ವದ ಉಳಿವಿ ಗಾಗಿರುವ ಕಾರ್ಯತಂತ್ರಗಳಿಗೆ ಆದ್ಯಗಮನ ನೀಡುವವರೇ ಹೆಚ್ಚಾಗಿರುವುದರಿಂದ, ಜನಕಲ್ಯಾಣದ ಆಶಯ ಕ್ರಮೇಣ ಮೂಲೆಗುಂಪಾಗುತ್ತಿರುವಂತೆ ಭಾಸವಾಗುತ್ತಿದೆ.
ಇದು ತರವಲ್ಲದ ಬೆಳವಣಿಗೆ. ಶ್ರೀಸಾಮಾನ್ಯರ ಹಿತಕಾಯುವ ಬದ್ಧತೆ ನಮ್ಮ ಜನಪ್ರತಿನಿಧಿಗಳಲ್ಲಿ ಕೆನೆಗಟ್ಟಲಿ
ಎಂಬುದೇ ಎಲ್ಲರ ಆಶಯ ಮತ್ತು ನಿರೀಕ್ಷೆ.
ಇದನ್ನೂ ಓದಿ: Vishwavani Editorial: ಚದುರಂಗ ಬಲದ ಚತುರ