Monday, 20th May 2024

ಕಲಿಯಬೇಕೆಂದವರಿಗೆ ಭಾರತೀಯ ೬೪ ವಿದ್ಯೆಗಳು ಇಲ್ಲಿವೆ

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ಕಲಿಯುವಿಕೆಗೆ ಕೊನೆ, ಮೊದಲಿಲ್ಲ. ಕಲಿಯಬೇಕಾದ ವಿಷಯ, ಜ್ಞಾನಗಳಿಗೂ ಮಿತಿಯಿಲ್ಲ. ನಾವು ಸಹಜವಾಗಿ ಮಾತನಾಡುವಾಗ ಇನ್ನೊಬ್ಬರನ್ನು ಛೇಡಿಸುವಾಗ ‘ಓ.. ಅವನೋ, ಅರವತ್ತನಾಲ್ಕು ವಿದ್ಯೆಗಳ ಪಾರಂಗತ’ ಎನ್ನುತ್ತೇವೆ.

ಹೆಚ್ಚಾಗಿ ಇಂತಹ ಮಾತುಗಳನ್ನು ಮೋಸ, ವಂಚನೆ, ದ್ರೋಹ ಮಾಡುವವರಿಗಾಗಿಯೇ ಬಳಸುತ್ತೇವೆ. ನಿಜಕ್ಕೂ ಆ ಅರವತ್ತನಾಲ್ಕು ವಿದ್ಯೆಗಳು ಯಾವುವು? ಇತ್ತೀಚೆಗೆ ‘ತತ್ತ್ವವಾದ’ ಎಂಬ ಪೇಜಾವರ ಮಠದ ಹಿಂದಿನ ಶ್ರೀಗಳ ನೇತೃತ್ವದಲ್ಲಿ ಬರುತ್ತಿದ್ದ ಮಾಸಪತ್ರಿಕೆಯ ಹಿಂದಿನ ಸಂಚಿಕೆಗಳನ್ನು ಓದುತ್ತಿದ್ದಾಗ ಈ ಕೆಳಕಂಡ ಲೇಖನ ಮನಸೆಳೆಯಿತು. ಬರೆದವರ ಹೆಸರು ಇದರಲ್ಲಿ ಕಾಣಲಿಲ್ಲ. ಆದರೂ ಆ ಲೇಖಕರಿಗೆ ವಂದಿಸಿ ನಮ್ಮ ಈಗಿನ ಯವ ಪೀಳಿಗೆಗೆ ಈ ಅರವತ್ತನಾಲ್ಕು ವಿದ್ಯೆಗಳ ಮಾಹಿತಿಯನ್ನು ನಿಮ್ಮ ಮುಂದಿಟ್ಟಿದ್ದೇನೆ.

ಜಗತ್ತಿನಲ್ಲಿ ೬೪ ಕಲೆಗಳು (ವಿದ್ಯೆಗಳು) ಎಂದು ಪ್ರಸಿದ್ಧವಾಗಿವೆ. ವಾಚಕರ ಅವಗಾಹನೆಗಾಗಿ ೬೪ ಕಲೆಗಳ  ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ. ೧) ಗೀತ : ಸಂಗೀತ – ಹಾಡುಗಾರಿಕೆ, ೨) ವಾದ್ಯ: ವೀಣೆ ಮೊದಲಾದ ವಾದ್ಯಗಳನ್ನು ನುಡಿಸುವುದು. ೩) ನೃತ್ಯ: ನರ್ತಿಸುವುದು. ೪) ಆಲೇಖ್ಯ: ಬಗೆ ಬಗೆಯ ವಿಚಿತ್ರ ಚಿತ್ರಗಳನ್ನು ಬರೆಯುವುದು. ೫) ವಿಶೇಷ ಕಚ್ಛೇದ್ಯ: ವಿಧವಿಧವಾದ ತಿಲಕದ ರಚನೆ-ಹಣೆಯ ಮೇಲೆ ತೊಡಲು ಆಗುವಂತೆ ವಿಧವಿಧಾಕೃತಿಯಲ್ಲಿ ಎಲೆ ಬಿಡಿಸುವುದು. ೬) ತಂಡುಲ ಕುಸುಮ ಬಲಿವಿಕಾರ: ಪೂಜೆಗಾಗಿ ಅಕ್ಕಿ ಮತ್ತು ಹೂ ಗಳನ್ನು ಬಗೆಬಗೆಯಾಗಿ ಜೋಡಿಸುವುದು. ಬಣ್ಣ ಬಣ್ಣದ ಅಕ್ಕಿಕಾಳುಗಳು ಮತ್ತು ಹೂಗಳಿಂದ ದೇವರ ಮುಂದೆ ಪದ್ಮಾದಿಗಳ ರಚನೆ. ೭) ಪುಷ್ಪಾಸ್ತರಣ: ಮನೆಯನ್ನೋ ಕೊಠಡಿಯನ್ನೋ ಹೂಗಳಿಂದ ಮುಚ್ಚು ವುದು ಅಥವಾ ಅಲಂಕರಿಸುವುದು-ಹೂಗಳನ್ನು ಹರಡಿ ಅಲಂಕರಿಸುವುದು. ೮) ದಶನವಸನಾಂಗರಾಗ: ಹಲ್ಲುಗಳಿಗೂ, ಬಟ್ಟೆಗಳಿಗೂ ಮತ್ತು ಶರೀರಕ್ಕೂ ಬಣ್ಣಗಳನ್ನು ಹಚ್ಚುವುದು-ದೇಹಕ್ಕೂ ದಂತಗಳಿಗೂ.

೯) ಮಣಿ ಭೂಮಿಕಾ ಕರ್ಮ: ರತ್ನಾಲಂಕಾರ ಕೆಲಸ-ರತ್ನಖಚಿತವಾದ ನೆಲಗಟ್ಟು ಮಾಡುವುದು- ಮೋಸಾಯಿಕ್ ಕೆಲಸ-ಗೊಂಬೆಗಳನ್ನು ಮಾಡುವುದು. ೧೦) ಶಯನ ರಚನ: ಹಾಸಿಗೆಗಳನ್ನು ಮಾಡುವುದು, ಹಾಸಿಗೆಯ ಶೃಂಗರಿಸುವಿಕೆಯ ವಿದ್ಯೆ. ೧೧) ಉದಕ ವಾದ್ಯ: ಮುರಜ ಮೊದಲಾದುದರ ದನಿಯಾ ಗುವಂತೆ ನೀರಿನ ಮೇಲೆ ಬಾರಿಸುವುದು-ಜಲತರಂಗವಾದ್ಯ ಮತ್ತು ನೀರಿನಿಂದ ತುಂಬಿದ ಪಾತ್ರೆಯಲ್ಲಿ ನುಡಿಸುವ ಕರ್ಣಾನಂದಕರವಾದ ವಾದ್ಯವಿಶೇಷ. ೧೨) ಉದಕ ಪಾತ್ರ: ಜಲಕ್ರೀಡೆಯಲ್ಲಿ ನೀರನ್ನು ಬೊಗಸೆಯಲ್ಲಿ ತುಂಬಿ ಇತರರ ಮೇಲೆ ಬಲವಾಗಿ ಸೂಸುವುದು, ಜಲತಾಡನ ವೈಖರಿ. ೧೩) ಚಿತ್ರಾ ಯೋಗ: ಮದ್ದು ಮೂಲಿಕೆಗಳಿಂದ-ಔಷಧಗಳಿಂದ-ಮಂತ್ರಗಳಿಂದ ಬೇರೆಯವರನ್ನು ಕೃಶಕಾಯರನ್ನಾಗಿ-ಅಕಾಲದಲ್ಲಿ ತಲೆ ನರೆತವರನ್ನಾಗಿ ಮತ್ತು ಹುಚ್ಚರನ್ನಾಗಿ ಮಾಡುವುದು. ೧೪) ಮಾಲ್ಯ ಗ್ರಥನ ವಿಕಲ್ಪ: ಅನೇಕ ರೀತಿಯಲ್ಲಿ ಪುಷ್ಪಗಳ ಹಾರಗಳನ್ನು ತಯಾರಿಸುವುದು. ೧೫) ಶೇಖರಕಾ ಪೀಡ ಯೋಜನ: ಶೇಖರಕಗಳನ್ನು-ಅಪೀಡಕಗಳನ್ನು ಧರಿಸುವುದು- (ಯೋಗ್ಯವಾದ ಸ್ಥಳಗಳಲ್ಲಿ ಶಿರೋಭೂಷಣವಾಗಿ ತೊಡುವ ಎರಡು ಆಭರಣಗಳು. ೧೬) ನೇಪಥ್ಯಪ್ರಯೋಗ: ತಾನು ವಸಾಲಂಕಾರ ಮಾಡಿಕೊಳ್ಳುವುದು ಅಥವಾ ಇತರರಿಗೆ ಮಾಡುವುದು-ನಾನಾಬಗೆಯಾಗಿ ವೇಷ ಹಾಕುವಿಕೆ. ೧೭) ಕರ್ಣ ಪತ್ರ ಭಂಗ: ದಂತ ಮೊದಲಾದವುಗಳಿಂದ ಕರ್ಣಾಭರಣಗಳನ್ನು ಮಾಡುವುದು. ರತ್ನಖಚಿತವಾದ ಪತ್ರಾಕಾರದ ಆಭರಣಗಳಿಂದ ಕಿವಿಯನ್ನು ಅಲಂಕರಿಸು ವುದು. ೧೮) ಗಂಧಯುಕ್ತಿ: ಪರಿಮಳ ದ್ರವ್ಯಗಳನ್ನು ಸೇರಿಸಿ ಸಿದ್ಧಪಡಿಸುವುದು. ೧೯) ಭೂಷಣಯೋಜನ: ಆಭರಣಗಳನ್ನು ಮಾಡಿ ಅವಯವಗಳಿಗೆ ತಕ್ಕಂತೆ ಒಡವೆಗಳನ್ನು ತೊಡಿಸುವುದು. ೨೦) ಐಂದ್ರಜಾಲಯೋಗ: ಇಂದ್ರಜಾಲದ ವಿಧಾನಗಳು. ೨೧) ಕೌಚುಮಾರ ಯೋಗ: ಕುಚುಮಾರನ ಚಿಕಿತ್ಸಾ ನಿದೇಶನ, ದೃಢವಾದ ದೇಹಿಯೂ ಹಾಗೂ ವೀರ್ಯವಂತೂ ಆಗುವಂತೆ ಮಾಡುವುದು. ೨೨) ಹಸ್ತಲಾಘವ: ಎಲ್ಲ ಕೆಲಸಗಳಲ್ಲಿಯೂ ಕೈಗಳ (ಹಸ್ತಗಳ) ಚುರುಕು ವ್ಯಕ್ತಿಗಳ ಎದುರಿನಲ್ಲೇ ಪದಾರ್ಥಗಳನ್ನು ಕದಿಯುವುದು ಎಂದೂ ಅರ್ಥೈಸಿದ್ದಾರೆ- ಕೈಚಳ- ಜಾಣತನ-ಚರುಕು. ೨೩) ವಿಚಿತ್ರಶಾಕಯೂಪ/ಭಕ್ಷ್ಯ ವಿಕಾರಕ್ರಿಯಾ: ಬಗೆ ಬಗೆಯ  ಕಾಯಿ ಪಲ್ಯೆ ಸಾರು,ಹುಳಿ ಇತ್ಯಾದಿಗಳನ್ನೂ ಭಕ್ಷ್ಯಗಳನ್ನೂ ತಯಾರಿಸುವುದು. ೨೪) ಪಾನಕರಸ ರಾಗಾಸವ ಭೋಜನ: ಪಾನಕ-ರಸಮೊದಲಾದ ಬಗೆಬಗೆಯ ಪೇಯ (ಕುಡಿಯಲು ಯೋಗ್ಯವಾದವು) ಗಳನ್ನು ಸಿದ್ಧಮಾಡುವುದು. ೨೫) ಸೂಚೀವಾನಕರ್ಮ: ಹೊಲಿಯುವುದು. ನೇಯುವುದು, ಕಸೂತಿ ಹಾಕುವುದು, ಮಡಿಕೆ ಮಾಡುವುದು. ೨೬) ಸೂತ್ರ ಕ್ರೀಡಾ: ದಾರಗಳಿಂದ ಆಡುವುದು ಎಂದರೆ ಬೆರಳುಗಳಲ್ಲಿ ದಾರವೊಂದನ್ನು ಹಿಡಿಯುವುದು ಮತ್ತು ಅದು ಮನೆ- ದೇವಾಲಯ ಇತ್ಯಾದಿ ಸ್ಥೂಲರೇಖೆಗಳನ್ನು ತಳೆಯುವಂತೆ ಮಾಡುವುದು, ದಾರಗಳನ್ನು ಎಳೆಯುವುದರಿಂದ ಆಕೃತಿಗಳನ್ನು ಚಲಿಸುವಂತೆ ಮಾಡುವುದು, ನೂಲನ್ನು ಕತ್ತರಿಸುವುದು ಪುನಃ ಅಖಂಡವಾಗಿ ತೋರಿಸುವುದು, ನೂಲನ್ನು ಸುಟ್ಟು ಪುನಃ ಮೊದಲಿನಂತೆಯೇ ನೂಲನ್ನು ತೋರಿಸುವುದು. ೨೭ ) ವೀಣಾ ಡಮರುಕ ವಾದ್ಯಗಳು: ವೀಣೆ-ಡಮರುಕ ಮತ್ತಿತರ ವಾದ್ಯಗಳನ್ನು ನುಡಿಸುವುದು. ೨೮) ಪ್ರಹೇಲಿಕಾ: ಒಗಟು, ಗೂಡಾರ್ಥವಾಕ್ಯಗಳ ಪ್ರಯೋಗ. ೨೯) ಪ್ರತಿಮಾಲಾ: ಒಂದು ಆಟ. ಒಬ್ಬನು ಒಂದು ಶ್ಲೋಕವನ್ನು ಹೇಳುತ್ತಾನೆ. ಇನ್ನೊಬ್ಬನು ಅದರ ಅಂತ್ಯಾಕ್ಷರದಿಂದ ಮೊದಲು ಮಾಡಿ ಇನ್ನೊಂದು ಶ್ಲೋಕವನ್ನು ಹೇಳುತ್ತಾನೆ. ಇದನ್ನು ಅಂತ್ಯಾಕ್ಷರೀ ಎನ್ನುತ್ತಾರೆ.

೩೦) ದುರ್ವಾಚಕ: ಇನ್ನೊಂದು ಆಟ. ಪ್ರತಿಯೊಬ್ಬ ಸ್ಪಽಯೂ ಪರುಷಾಕ್ಷರ ಘಟಕವಾದ ಶ್ಲೋಕಗಳನ್ನು ಹೇಳುವುದು. ವಾದಕ್ಕಾಗಿಯೂ ವಿನೋದ ಕ್ಕಾಗಿಯೂ ಉಚ್ಚರಿಸಲಾಗದ ಅಕ್ಷರಗಳಿಂದ ಕೂಡಿದ ಶಬ್ದಗಳ ಪ್ರಯೋಗ. ೩೧) ಪುಸ್ತಕವಾಚನ: ಪುಸ್ತಕಗಳನ್ನು ಓದುವುದು. ೩೨) ನಾಟಕಾಖ್ಯಾಯಿಕಾ ದರ್ಶನ: ನಾಟಕಗಳು ಮತ್ತು ಅಖ್ಯಾಯಿಕೆಗಳ ಜ್ಞಾನ. ನಾಟಕ ಕಥೆ ಮೊದಲಾದವುಗಳನ್ನು ಅಭಿನಯಿಸಿ ತೋರಿಸುವುದು. ೩೩) ಕಾವ್ಯಸಮಸ್ಯಾಪೂರಣ: ಕವಿತೆಯ ರಚನೆ, ಶ್ಲೋಕದ ಕೊನೆಯ ಪಾದವು ಮೊದಲೇ ಕೊಡಲಾಗಿದ್ದು, ಅದರ ಮೊದಲ ಮೂರು ಪಾದಗಳನ್ನು ರಚಿಸಿ, ನಾಲ್ಕೂ ಪಾದಗಳು ಕೂಡಿ ಸಮಂಜಸ ಅರ್ಥಬರುವಂತೆ ಮಾಡುವುದು ಪದ್ಯರೂಪದಿಂದ ಸಮಸ್ಯೆಗಳನ್ನು ಪೂರ್ತಿಗೊಳಿಸುವುದು. ೩೪) ಪಟ್ಟಿಕಾ ವೇತ್ರವಾನವಿಕಲ್ಪ: ಬೆತ್ತ ಮತ್ತು ಬಿದುರುಗಳಿಂದ ಮಂಚಗಳು, ಆಸನಗಳು ಮೊದಲಾದ ಬೇರೆ ಬೇರೆ ವಸ್ತುಗಳನ್ನು ಮಾಡುವುದು. ೩೫) ತಕ್ಷಕರ್ಮಗಳು: ಕೆತ್ತನೆ ಕೆಲಸ ಅಂದರೆ ಚಿನ್ನ,ಉಕ್ಕು, ಮರ ಮೊದವುಗಳಲ್ಲಿ ಕೆಲಸ ಮಾಡುವುದು. ಮರಗೆಲಸ.

೩೬) ತಕ್ಷಣ: ಬಡಿಗೆಯ ಕೆಲಸ, ಮರಗೆಲಸ, ಗುಡಿಗಾರಿಕೆ, ಮರಗಳನ್ನು ಕೆತ್ತಿ ಆಸನ, ಬೊಂಬೆ ಮೊದಲಾದವುಗಳನ್ನು ತಯಾರಿಸುವುದು. ೩೭) ವಾಸ್ತು ವಿದ್ಯಾ: ಗೃಹ ನಿರ್ಮಾಣ ಮುಂತಾದ ಶಿಲ್ಪವಿದ್ಯೆ. ಗೃಹನಿರ್ಮಾಣ ವಿಜ್ಞಾನ. ಮನೆಗಳನ್ನು ಹೇಗೆ ಕಟ್ಟಬೇಕು, ಎಂಥ ಭೂಮಿಯ ಮೇಲೆ ಕಟ್ಟಬೇಕು, ಎಂಥ ಪದಾರ್ಥಗಳನ್ನು ಬಳಸಬೇಕು ಇತ್ಯಾದಿ. ೩೮) ರೂಪ್ಯರತ್ನಪರೀಕ್ಷಾ: ನಾಣ್ಯಗಳು ಮತ್ತು ರತ್ನಗಳ ಪರೀಕ್ಷೆ. ಬೆಳ್ಳಿ-ರತ್ನ ಮೊದಲಾದವುಗಳನ್ನು ಪರೀಕ್ಷಿಸುವುದು. ೩೯) ಧಾತುವಾದ: ಧಾತುಗಳ ಅಂದರೆ ಖನಿಜಗಳ ಮಿಶ್ರಣ, ಶುದ್ಧೀಕರಣ ಇತ್ಯಾದಿ. ಕಲ್ಲು,ಮಣ್ಣು, ಲೋಹ, ರತ್ನ ಮೊದಲಾದ ಧಾತುಗಳ ಶೋಧನ, ಮೇಳನ ಮುಂತಾದ ಜ್ಞಾನಕ್ಕಾಗಿ ಲೋಹವಿದ್ಯೆ. ೪೦) ಮಣಿರಾಗ ಕರಜ್ಞಾನ: ಹರಳುಗಳ ಮತ್ತು ರತ್ನಗಳಿಗೆ ಬಣ್ಣ ಹಾಕುವ ವಿಧಾನಗಳ ತಿಳಿವಳಿಕೆ ಮತ್ತು ಗಣಿಗಳ ಸ್ಥೂಲ ಪರಿಜ್ಞಾನ.

ರತ್ನಗಳ ಬಣ್ಣ ಮತ್ತು ಆಕಾರಗಳನ್ನು ತಿಳಿಯುವುದು. ೪೧) ವೃಕ್ಷಾಯುರ್ವೇದ ಯೋಗ: ಮರಗಿಡಗಳು ರೋಗರುಜಿನವಿಲ್ಲದಲೇ  ಸೊಂಪಾಗಿರು ವಂತೆಯೂ, ವಿಶೇಷ ಚಿಕ್ಕದಾಗಿ ಅಥವಾ ಎತ್ತರವಾಗಿ ಮಾಡಲು ಉಪಯುಕ್ತವಾಗುವ ವಿಧಾನಗಳ ತಿಳಿವಳಿಕೆ. ಸಸಿ ಮರಗಳನ್ನು ಬೆಳೆಯಿಸಿ
ತೋಟಗಳನ್ನು ನಿರ್ಮಾಣ ಮಾಡುವುದು. ೪೨) ಮೇಷ-ಕುಕ್ಕುಟ ಲಾವಕಯುದ್ಧವಿಧಿ: ಟಗರು,ಕೋಳಿ ಮತ್ತು ತಿತ್ತಿರಿಪಕ್ಷಿ ಇವುಗಳ ಕಾಳಗವನ್ನು ಮಾಡಿಸುವುದು. ೪೩) ಶುಕ ಸಾರಿಕಾ ಪ್ರಲಾಪನ: ಗಂಡು ಮತ್ತು ಹೆಣ್ಣು ಗಿಳಿಗಳು ಮಾತುಗಳನ್ನು ಆಡುವಂತೆ ಮಾಡುವುದು. ಗಿಳಿ ಮೊದಲಾದ
ಪಕ್ಷಿಗಳಿಂದ ಮಾತನಾಡಿಸುವುದು. ೪೪) ಉತ್ಸಾದನ-ಸಂವಾಹ ನ-ಕೇಶಮರ್ದನ ಕೌಶಲ: ಹಸ್ತಪಾದಾದಿಗಳಿಂದ ತಲೆ ಮತ್ತು ಶರೀರವನ್ನು ತಿಕ್ಕುವ ಅಂದರೆ ಮರ್ದಿಸುವ ಕೌಶಲ.ಕಾಲಿನಿಂದ ತುಳಿಯುವುದು, ಈಗಿನ ಮಸಾಜ್ ಇವುಗಳಲ್ಲಿ ನೈಪುಣ್ಯ.

೪೫) ಅಕ್ಷರ ಮುಷ್ಟಿಕಾ ಕಥನ: ಅಕ್ಷರ ಶ್ರೇಣಿಗಳಿಂದ ಅರ್ಥವನ್ನರಿಯುವುದು.ಗುಟ್ಟಾದ ವಿಷಯಗಳನ್ನು ಕುರಿತು ಮಾತಾಡುವುದಕ್ಕೂ ಗ್ರಂಥಗಳನ್ನು ಸಂಗ್ರಹಿಸಿ ಹೇಳುವುದಕ್ಕೂ ಬೆರಳುಗಳಿಂದ ಮುದ್ರೆಗಳ ಮೂಲಕ ಅಕ್ಷರಗಳನ್ನು ಸೂಚಿಸಿ ವಿಷಯಗಳನ್ನು ತಿಳಿಸುವುದು. ೪೬) ಮ್ಲೇಚ್ಛ ಕವಿ ಕಲ್ಪ:
ಗೂಢಲಿಪಿ ಭಾಷಾಭೇದಗಳು ಅಂದರೆ ಉದ್ದಿಷ್ಟ ವ್ಯಕ್ತಿಗಳಿಲ್ಲದೆ ಬೇರೆ ಯಾರಿಗೂ ತಿಳಿಯಲಾಗದ ಭಾಷೆಗಳು. ಗುಟ್ಟಾದ ವಿಷಯಗಳನ್ನು ತಿಳಿಸಲು ಸರಿಯಾದ ಶಬ್ದಗಳನ್ನು ಉಪಯೋಗಿಸಿದರೂ ಇತರರಿಗೆ ಸ್ಪಷ್ಟವಾಗಿ ತಿಳಿಯದಿರಲು ಅಕ್ಷರಗಳನ್ನು ಬದಲಾಯಿಸಿ ಹೇಳುವುದು. ೪೭) ದೇಶಭಾಷಾ
ವಿಜ್ಞಾನ: ನಿಖಿಲ ದೇಶೀಯ ಭಾಷಾಪಾಂಡಿತ್ಯ ಆಯಾಯ ದೇಶದ ಭಾಷೆಗಳನ್ನು ತಿಳಿಯುವುದು.

೪೮) ಪುಷ್ಪಶಕಟಿಕಾ: ಪುಷ್ಪಗಳ ಗಾಡಿ ಅಂದರೆ ಪ್ರೇಮಪತ್ರಗಳನ್ನು ಇಟ್ಟು ಕಳುಹಿಸಲು ಪುಷ್ಪಗಳಿಂದ ಗಾಡಿಗಳು, ಕುದುರೆಗಳು, ಆನೆಗಳು, ಪಲ್ಲಕ್ಕಿಗಳು ಇವುಗಳನ್ನು ಮಾಡುವುದು. ಹೂವಿನ ಬಂಡಿಯನ್ನು ತಯಾರಿಸುವುದು. ೪೯) ನಿಮಿತ್ತಜ್ಞಾನ: ಶುಭಾಶುಭ ಶಕುನಗಳ ಜ್ಞಾನ. ಶಕುನಗಳನ್ನು ತಿಳಿಯುವುದು. ೫೦) ಯಂತ್ರಮಾತೃಕಾ: ಸಂಚಾರ ಕಾರ್ಯಕ್ಕಾಗಿ ಜಲ ಮತ್ತು ಯುದ್ಧೋದ್ಯೋಗಿಗಳಿಗೆ ಯಂತ್ರ ನಿರ್ಮಾಣ ಮಾಡುವುದು. ೫೧) ಧಾರಣಮಾತೃಕಾ: ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ವಿದ್ಯೆ. ಕೈಗಳಲ್ಲಿ ವಸ ಮತ್ತು ಇತರ ಪದಾರ್ಥಗಳನ್ನು ಹಿಡಿದುಕೊಳ್ಳುವುದು ಎಂದೂ
ಅರ್ಥೈಸಿದ್ದಾರೆ. ೫೨) ಸಂಪಾಠ್ಯ: ಒಂದು ಕ್ರೀಡೆ. ಒಬ್ಬನು ಒಂದು ಶ್ಲೋಕವನ್ನು ಹೇಳುತ್ತಾನೆ. ಅದು ಇನ್ನೊಬ್ಬನಿಗೆ ಅಪರಿಚಿತವಾದದ್ದು. ಆದರೂ ಆತನು ಅದನ್ನು ಮತ್ತೊಮ್ಮೆ ಹೇಳಿ ಒಪ್ಪಿಸಬೇಕು. ಚೆನ್ನಾಗಿ ಓದುವುದು. ೫೩) ಮಾನನೆ: ಇನ್ನೊಂದು ಕ್ರೀಡೆ. ಅನುಸ್ವಾರ ವಿಸರ್ಗಗಳನ್ನು ಯಥಾವತ್ತಾಗಿ
ಬರೆದು ಉಳಿದ ಅಕ್ಷರಗಳೆಡೆಯಲ್ಲಿ ಕೇವಲ ಅವುಗಳ ತಲೆಕೊಟ್ಟು, ಕೊಂಬು ಇತ್ಯಾದಿ ಚಿಹ್ನೆಗಳನ್ನು ತೋರಿಸಿ ಒಬ್ಬನು ಒಂದು ಶ್ಲೋಕವನ್ನು ಬರೆಯುತ್ತಾನೆ. ಇನ್ನೊಬ್ಬ ಆಟಗಾರ ಆ ಚಿಹ್ನೆಗಳಿರುವೆಡೆಯಲ್ಲಿ ಉಚಿತವಾದ ಅಕ್ಷರಗಳನ್ನು ಪೂರ್ತಿಯಾಗಿ ಬರಬೇಕು. ೫೪) ಕಾವ್ಯಕ್ರಿಯಾ: ಕಾವ್ಯಗಳ
ರಚನೆ. ೫೫) ಅಭಿಧಾನಕೋಶ ಛಂದೋವಿಜ್ಞಾನ: ಶಬ್ದಕೋಶ ಮತ್ತು ಛಂದಃಶಾಸಗಳ ಜ್ಞಾನ.

೫೬) ಕ್ರಿಯಾಕಲ್ಪ: ಕಾರ್ಯವಿಧಾನದ ತಿಳಿವಳಿಕೆ. ೫೭) ಫಲಿತಕಯೋಗ : ಜೂಜು ಮೊದಲಾದವುಗಳಲ್ಲಿ ಇತರರನ್ನು ಮರಳು ಮಾಡುವುದು. ೫೮) ವಸಗೋಪನ: ವಸಗಳ ರಕ್ಷಣೆ. ವಸಗಳನ್ನು ಕೊಡುವುದರಲ್ಲಿ ಭ್ರಮೋತ್ಪಾದನೆ. ತುಂಡು ಬಟ್ಟೆ ಕೊಟ್ಟರೂ ತುಂಡು ಬಟ್ಟೆಯಂತೆ ಕಾಣದಂತೆ ಮಾಡುವುದು ಇತ್ಯಾದಿ. ೫೯) ದ್ಯೂತ ವಿಶೇಷ: ಬಗೆ ಬಗೆಯ ಜೂಜುಗಳು. ೬೦) ಆಕರ್ಷಕ್ರೀಡಾ: ಪಗಡೆಯಾಟ. ೬೧) ಬಾಲಕ್ರೀಡೆಗಳು: ಮಕ್ಕಳ
ಆಟಗಳು ಚೆಂಡು ಬೊಂಬೆ ಇತ್ಯಾದಿ ಮಕ್ಕಳ ಆಟಗಳು. ೬೨) ವೈನತೆಯ ವಿದ್ಯೆಗಳ ಜ್ಞಾನ: ವ್ಯಕ್ತಿಯನ್ನು ವಿದ್ಯಾವಂತನನ್ನಾಗಿಸುವ ವಿಷಯಗಳ ಮತ್ತು ಕಲೆಗಳ ತಿಳಿವಳಿಕೆ. ೬೩) ವೈಜಕೀಯ ವಿದ್ಯೆಗಳ ಜ್ಞಾನ: ಜಯವನ್ನು ಗಳಿಸಿಕೊಡುವ ವಿದ್ಯೆಗಳ ತಿಳಿವಳಿಕೆ. ೬೪) ವ್ಯಾಯಾಮಕೀಯ ವಿದ್ಯೆ: ವ್ಯಾಯಾಮ ಅಥವಾ ಅಂಗಸಾಧನೆಯ ವಿದ್ಯೆಗಳ ತಿಳಿವಳಿಕೆ.

ಇಷ್ಟೆಲ್ಲ ವಿದ್ಯೆಗಳನ್ನು ಕಲಿತವರೂ ಇದ್ದರು. ಅವರೇ ಶ್ರೀಮಧ್ವಾಚಾರ್ಯರು, ಶ್ರೀ ಟೀಕಾಕೃತ್ಪಾದರು ಅಂದರೆ ಶ್ರೀ ಜಯತೀರ್ಥರು, ಶ್ರೀ ವಿಭುಧೇಂದ್ರ ತೀರ್ಥರು, ಶ್ರೀ ವಿಜಯೀಂದ್ರತೀರ್ಥರು, ಶ್ರೀ ರಾಘವೇಂದ್ರ ತೀರ್ಥರು ಇವರೇ ಮೊದಲಾದ ದೊಡ್ಡ ದೊಡ್ಡ ಜ್ಞಾನಿಗಳು ಈ ಮೇಲೆ ಕಾಣಿಸಿದ ೬೪ ವಿದ್ಯೆ ಗಳಲ್ಲಿ ಪಾರಂಗತರಾಗಿದ್ದರು

error: Content is protected !!