Monday, 20th May 2024

ಪದವಿ ಪತ್ರದಲ್ಲಿ He ಕಾಟು ಹಾಕಿ She ಬರೆಸಿದ ಸಾಧಕಿ ಈ ಮಹಿಳೆ !

ತಿಳಿರು ತೋರಣ

srivathsajoshi@yahoo.com

ಪ್ರೇರಣೆಯ ಸ್ರೋತಗಳನ್ನು, ಸಾಧನೆಯ ಗಾಥೆಗಳನ್ನು ನೆನಪಿಸಿಕೊಳ್ಳಲಿಕ್ಕೆ ಇಂಥಿಂಥ ದಿನಗಳು ಮಾತ್ರ ಸೂಕ್ತ ಎಂದೇ ನಿಲ್ಲ. ಈ ರೀತಿಯ ಪ್ರಥಮರನ್ನು, ಸಾಧನೆಯ ಹಾದಿ ತುಳಿದವರನ್ನು ನಾವು ಆಗಾಗ ನೆನಪಿಸಿಕೊಳ್ಳಬೇಕು. ಹೊಸ ತಲೆಮಾರಿನವರಿಗೂ ಇಂಥವರ ವಿಚಾರಗಳು ತಿಳಿಯಬೇಕು. ಆದ್ದರಿಂದಲೇ ಈದಿನ ಎ.ಲಲಿತಾ ರಾವ್ ಎಂಬ ಪ್ರತಿ ಭಾನ್ವಿತ ಭಾರತೀಯ ನಾರಿಯ ಸ್ಮರಣೆ.

ಅಯ್ಯಲಸೋಮಯಾಜುಲ ಲಲಿತಾ ರಾವ್ ಎಂದು ಪೂರ್ತಿ ಹೆಸರನ್ನಷ್ಟೇ ಹೇಳಿದರೆ ಥಟ್ಟನೆ ಯಾರು ಅಂತ ಗೊತ್ತಾಗಲಿಕ್ಕಿಲ್ಲ. ಹೆಸರಿನ ಪಕ್ಕದಲ್ಲಿ ಬಿ.ಇ ಎಂದು ಡಿಗ್ರಿ ಸೂಚಿಸಿದರೂ ಹೆಚ್ಚೇನೂ ತಿಳಿಯಲಿಕ್ಕಿಲ್ಲ. ಆದರೆ ‘ಭಾರತದ ಮೊತ್ತಮೊದಲ ಮಹಿಳಾ ಎಂಜಿನಿಯರ್ ಯಾರು?’ ಎಂದು ಕೇಳಿದರೆ ಉತ್ತರ ಇದೇ ಹೆಸರು!

ಮದ್ರಾಸ್ ವಿಶ್ವವಿದ್ಯಾಲಯದ ಬ್ಯಾಚಲರ್ ಆಫ್ ಎಂಜಿನಿಯರಿಂಗ್ ಡಿಗ್ರಿ ಸರ್ಟಿಫಿಕೇಟ್‌ ಗಳಲ್ಲಿ ಅದುವರೆಗೆ He passed the Examination with Honours ಎಂದೇ ಇರುತ್ತಿದ್ದ ವಾಕ್ಯವನ್ನು ಲಲಿತಾ ರಾವ್‌ಗೆ ಪದವಿ ಪ್ರದಾನ ಮಾಡುವಾಗ ಮೊದಲ ಬಾರಿಗೆ He ಕಾಟುಹಾಕಿ She ಎಂದು ಬರೆಯಬೇಕಾಗಿ ಬಂತಂತೆ. ಎಂಜಿನಿಯರಿಂಗ್ ಪದವಿಯ ಮಟ್ಟಿಗೆ ಮದ್ರಾಸ್ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಷ್ಟೇ ಅಲ್ಲ ಇಡೀ ಭಾರತ ದೇಶದಲ್ಲೇ ಪ್ರಪ್ರಥಮ ಬಾರಿಗೆ ಮಹಿಳೆಯೊಬ್ಬಳಿಗೆ ಆ ಗೌರವ ಸಿಕ್ಕಿದ ಚಾರಿತ್ರಿಕ ಸಂದರ್ಭ ವದು.

ಸರಿ, ಈಗೇಕೆ ಅವರ ಪ್ರಸ್ತಾವ? ಇಂದು ಎಂಜಿನಿಯರ್ಸ್ ಡೇ ಆಗಲಿ ವುಮನ್ಸ್ ಡೇ ಆಗಲಿ ಅಲ್ಲವಲ್ಲ? ಲಲಿತಾ ರಾವ್ ಜನ್ಮದಿನವೋ
ಪುಣ್ಯತಿಥಿಯೋ ಅಂದರೆ ಅದೂ ಅಲ್ಲ. ಆದರೇನಂತೆ, ಪ್ರೇರಣೆಯ ಸ್ರೋತಗಳನ್ನು ಸಾಧನೆಯ ಗಾಥೆಗಳನ್ನು ನೆನಪಿಸಿಕೊಳ್ಳಲಿಕ್ಕೆ
ಇಂಥಿಂಥ ದಿನಗಳು ಮಾತ್ರ ಸೂಕ್ತ ಎಂದೇನಿಲ್ಲ. ಈ ರೀತಿಯ ಪ್ರಥಮರನ್ನು, ಸಾಧನೆಯ ಹಾದಿ ತುಳಿದವರನ್ನು ನಾವು ಆಗಾಗ
ನೆನಪಿಸಿಕೊಳ್ಳಬೇಕು. ಹೊಸ ತಲೆಮಾರಿನವರಿಗೂ ಇಂಥವರ ವಿಚಾರಗಳು ತಿಳಿಯಬೇಕು. ಆದ್ದರಿಂದಲೇ ಈದಿನ ಎ.ಲಲಿತಾ ರಾವ್ ಎಂಬ ಪ್ರತಿಭಾನ್ವಿತ ಭಾರತೀಯ ನಾರಿಯ ಸ್ಮರಣೆ.

ಮದ್ರಾಸಿನ ಒಂದು ಮಧ್ಯಮವರ್ಗದ ತೆಲುಗು ಕುಟುಂಬದಲ್ಲಿ ೨೭ ಆಗಸ್ಟ್ ೧೯೧೯ರಂದು ಲಲಿತಾ ಜನನ. ಏಳು ಮಕ್ಕಳ ಕುಟುಂಬ ದಲ್ಲಿ ಈಕೆ ಐದನೆಯ ಮಗು. ತಂದೆ ಪಪ್ಪು ಸುಬ್ಬ ರಾವ್ ಅವರು ಮದ್ರಾಸ್‌ನ ಗಿಂಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾ ಭ್ಯಾಸ ಮಾಡಿ ಬಿ.ಇ ಪದವಿ ಗಳಿಸಿದ್ದರು. ಲಲಿತಾ ಮತ್ತು ಉಳಿದ ಆರು ಮಕ್ಕಳಿಗೂ ಒಳ್ಳೆಯ ಶಿಕ್ಷಣ ಕೊಡಿಸಿದ್ದರು. ಆಗಿನ
ಕಾಲದಲ್ಲಿ ಹೆಣ್ಣುಮಕ್ಕಳಿಗೂ ಹತ್ತನೆಯ ಕ್ಲಾಸ್‌ವರೆಗೆ ಕಲಿಸಿದ್ದರೆಂದರೆ ಶಿಕ್ಷಣಕ್ಕೆ ಅಷ್ಟು ಮಹತ್ತ್ವ ಕೊಟ್ಟಿದ್ದರೆಂದೇ ಅರ್ಥ. ಆದರೆ
ಆಗಿನ ಕಾಲದ ಪದ್ಧತಿಯಂತೆಯೇ ಹೆಣ್ಣುಮಕ್ಕಳ ವಿವಾಹವನ್ನೂ ಬೇಗ ಮಾಡುತ್ತಿದ್ದರಾದ್ದರಿಂದ ಲಲಿತಾಗೆ ೧೫ ವರ್ಷ ತುಂಬಿ ದಾಗ, ಅಂದರೆ ಮೆಟ್ರಿಕ್ ಪರೀಕ್ಷೆಗೆ ಇನ್ನೂ ಒಂದು ವರ್ಷ ಇರುವಾಗಲೇ, ಮದುವೆಯಾಯಿತು.

ಕನಿಷ್ಠ ಮೆಟ್ರಿಕ್‌ವರೆಗಾದರೂ ಶಿಕ್ಷಣ ಮುಂದುವರಿಸಬೇಕೆಂದು ಗಂಡಿನ ಮನೆಯವರಲ್ಲಿ ಕೇಳಿಕೊಂಡರು. ಅವರೂ ಒಪ್ಪಿ ಅಷ್ಟುಮಾತ್ರ ಮಾಡಿಸಿದರು. ೧೯೩೭ ರಲ್ಲಿ ಲಲಿತಾ ೧೮ ವರ್ಷ ಪ್ರಾಯದಲ್ಲಿ ಹೆಣ್ಣುಮಗುವಿಗೆ ಜನ್ಮವಿತ್ತರು. ಶ್ಯಾಮಲಾ ಎಂದು ಆ ಮಗುವಿನ ಹೆಸರು. ಅದಿನ್ನೂ ನಾಲ್ಕು ತಿಂಗಳ ಕೂಸಾಗಿದ್ದಾಗ ಲಲಿತಾರ ಗಂಡ ವಿಧಿವಶರಾದರು. ಅದು ಲಲಿತಾ ಬಾಳಿ ನಲ್ಲೊಂದು ಕ್ರೂರ ಹೊಡೆತ. ಆ ಕಾಲ ಇಂದಿಗಿಂತ ಒಂದು ಶತಮಾನ ಹಿಂದಿನದು ಎಂಬುದನ್ನೂ ನಾವು ಗಮನಿಸಬೇಕು. ಎಳೆ ಪ್ರಾಯದಲ್ಲಿ ಅಮ್ಮನಾದರೆ ಮಗುವನ್ನು ನೋಡಿಕೊಳ್ಳುವುದು ಕಷ್ಟ. ಅದರಲ್ಲೂ ಗಂಡ ಸತ್ತನೆಂದಮೇಲೆ ಕೇಳುವುದೇ ಬೇಡ. ಸಂಪ್ರದಾಯದ ಬಿಗಿಮುಷ್ಟಿಯಿಂದಾಗಿ ವಿಧವೆಯ ಬಾಳು ಗೋಳು.

ಪುಣ್ಯಕ್ಕೆ ಸತಿಸಹಗಮನದಷ್ಟು ಕ್ರೂರ ಪದ್ಧತಿ ಆಗ ಕಡಿಮೆಯಾಗತೊಡಗಿತ್ತು. ಆದರೂ ಒಂದು ರೀತಿಯಲ್ಲಿ ಬದುಕಿಯೂ ಸತ್ತಂತೆ- ಒನಪು ವೈಯಾರ ಅನಿಸುವುದೆಲ್ಲವನ್ನೂ ತ್ಯಜಿಸಿ, ತಲೆ ಬೋಳಿಸಿ ಬಿಳಿ ಉಡುಪು ಧರಿಸಿ ‘ಫಣಿಯಮ್ಮ’ನಂತೆ- ಇರಬೇಕಿತ್ತು. ಲಲಿತಾ ಮೇಲೆ ಅದನ್ನೆಲ್ಲ ಹೇರಿರಲಿಕ್ಕಿಲ್ಲ, ಆದರೂ ಆಕೆಯ ಅತ್ತೆ ತನ್ನ ಮಗನನ್ನು ಕಳೆದುಕೊಂಡ ದುಃಖ ಸಿಟ್ಟು ವ್ಯಗ್ರತೆಗಳಿಂದ ಲಲಿತಾಗೆ ವಿಪರೀತ ಹಿಂಸೆ ಕೊಡುತ್ತಿದ್ದಂತೆ. ಅಷ್ಟಾಗಿ, ಲಲಿತಾಳ ಗಂಡನಾಗಿದ್ದವನು ಆ ಅತ್ತೆಮ್ಮನ ಹದಿನಾರ ನೆಯ ಮಗು! ಬಹುಶಃ ಅಂಥದೊಂದು ಮಾನಸಿಕ ಕ್ಷೋಭೆಯೇ ಲಲಿತಾಳಲ್ಲಿ ಹೊಸದೊಂದು ಛಲದ ಕಿಡಿ ಹೊತ್ತಿಕೊಳ್ಳಲಿಕ್ಕೆ ಕಾರಣವಾಯ್ತೇನೋ. ತಾನು ಸಮಾಜಕ್ಕೆ ಹೆದರಿ ಶಾಶ್ವತವಾಗಿ ಮುರುಟಿಹೋಗುವ ಬದಲಿಗೆ ಇನ್ನಷ್ಟು ಶಿಕ್ಷಣ ಪಡೆಯಬೇಕು, ಒಳ್ಳೆಯದೊಂದು ನೌಕರಿ ಗಳಿಸಿ ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂಬ ಅದಮ್ಯ ಛಲ ಅದು.

ತವರುಮನೆಯವರು ಕೈಬಿಡದಿದ್ದುದರಿಂದ ಲಲಿತಾ ಬಚಾವಾದಳು. ಮದ್ರಾಸಿನ ಕ್ವೀನ್ ಮೇರಿಸ್ ಕಾಲೇಜಿನಲ್ಲಿ ಇಂಟರ್‌ಮೀಡಿ
ಯೆಟ್ ಶಿಕ್ಷಣಕ್ಕೆ ಸೇರಿಕೊಂಡಳು. ಮೊದಲ ದರ್ಜೆಯಲ್ಲಿ ತೇರ್ಗಡೆಯಾದಳು. ಆ ಕಾಲದಲ್ಲಿ ಮಹಿಳೆಯರು ಕಾಲೇಜಿನ ಮೆಟ್ಟಲು
ಹತ್ತುವುದು, ಡಿಗ್ರಿ ಪಡೆಯುವುದೆಲ್ಲ ವಿರಳಾತಿವಿರಳ. ವೈದ್ಯಕೀಯ ಪದವಿ ಪಡೆದವರು ಒಂದಿಬ್ಬರು ಮಹಿಳೆಯರಿದ್ದರು. ಲಲಿತಾಗೆ ಮೆಡಿಕಲ್‌ನಲ್ಲಿ ಆಸಕ್ತಿ ಇಲ್ಲ. ಶಿಕ್ಷಣದ ವೇಳೆ, ಆಮೇಲೆ ವೃತ್ತಿಯಲ್ಲೂ ಅದು ಕಷ್ಟವಾದೀತು, ಚಿಕ್ಕ ಮಗುವನ್ನು ನೋಡಿ
ಕೊಳ್ಳುವುದು ಬಹಳವೇ ತ್ರಾಸವೆನಿಸಬಹುದು ಎಂದು ಹಿಂಜರಿಕೆ. ಅದಕ್ಕಿಂತ ತಂದೆಯಂತೆ ಮತ್ತು ಇಬ್ಬರು ಅಣ್ಣಂದಿರಂತೆ ತಾನೂ ಎಂಜಿನಿಯರ್ ಆಗಬೇಕೇಕೆಂದು ನಿರ್ಧರಿಸಿದಳು.

‘೯ರಿಂದ ೫’ ರೀತಿಯ ಉದ್ಯೋಗವಿದ್ದರೆ ಮಗಳನ್ನು ನೋಡಿಕೊಳ್ಳುವುದಕ್ಕೂ ಆಗುತ್ತದೆಂಬ ಲೆಕ್ಕಾಚಾರ. ಎಲ್ಲ ಸರಿ, ಆದರೆ ಆ ಕಾಲದಲ್ಲಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹುಡುಗಿಯರಿಗೆ ಪ್ರವೇಶ ಇರುತ್ತಿರಲಿಲ್ಲವಲ್ಲ! ಪ್ರವೇಶವಿಲ್ಲ ಎನ್ನುವುದಕ್ಕಿಂತಲೂ ಹುಡುಗಿಯರು ಎಂಜಿನಿಯರಿಂಗ್‌ನತ್ತ ಒಲವು ತೋರಿಸುತ್ತಿರಲಿಲ್ಲ. ತಂದೆ ಸುಬ್ಬರಾವ್ ಮದ್ರಾಸಿನ ಗಿಂಡಿ ಎಂಜಿನಿಯರಿಂಗ್ ಕಾಲೇಜಿನಲ್ಲೇ ಪ್ರಾಧ್ಯಾಪಕ ರಾಗಿದ್ದರು, ಮಗಳ ಪರವಾಗಿ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಸಿ. ಚಾಕೋರನ್ನು ಭೇಟಿಯಾದರು. ಲಲಿತಾಳ ಇಂಟರ್‌ಮೀಡಿಯೇಟ್ ಅಂಕಗಳೂ ಚೆನ್ನಾಗಿಯೇ ಇದ್ದುವು, ಹುಡುಗನಾಗಿದ್ದರೆ ಪ್ರವೇಶ ಸುಲಭವಿತ್ತು.

ಹುಡುಗಿಯಾದ್ದರಿಂದ ಪ್ರಾಂಶುಪಾಲರದಷ್ಟೇ ಅಲ್ಲ ಬ್ರಿಟಿಷ್ ಸರಕಾರದ ಅನುಮತಿಯನ್ನೂ ಪಡೆಯಬೇಕಿತ್ತು. ಅಂತೂ ಎಲ್ಲ ಅಡೆತಡೆಗಳನ್ನು ದಾಟಿ ೧೯೪೦ರಲ್ಲಿ ಲಲಿತಾ ಎಂಜಿನಿಯರಿಂಗ್ ಕೋರ್ಸ್‌ಗೆ ಪ್ರವೇಶ ಪಡೆದಳು. ಆರಂಭದಲ್ಲಿ ಕಾಲೇಜಿನ ಸಿಬ್ಬಂದಿಯಿಂದ, ಸಹಪಾಠಿಗಳಿಂದ ಅಷ್ಟಿಷ್ಟು ಕಿರುಕುಳ, ಒಂದುರೀತಿಯ ತಾತ್ಸಾರ ಮತ್ತು ವಕ್ರದೃಷ್ಟಿ ಅನುಭವಿಸಬೇಕಾಗಿ ಬಂತು. ಕ್ರಮೇಣ ಅವೆಲ್ಲ ಮರೆಯಾದುವು.

ಮಾತ್ರವಲ್ಲ ಲಲಿತಾಳ ಸಚ್ಚಾರಿತ್ರ್ಯದ ಒಳ್ಳೆಯ ಸ್ವಭಾವದಿಂದಾಗಿ ಅವರೆಲ್ಲ ತುಂಬುಹೃದಯದ ಸಹಕಾರ ನೀಡಲಾರಂಭಿಸಿದರು.
ಲಲಿತಾಳ ವಾಸ್ತವ್ಯಕ್ಕೆಂದೇ ಪ್ರತ್ಯೇಕ ಹಾಸ್ಟೆಲ್ ಕೊಠಡಿ ವ್ಯವಸ್ಥೆಯನ್ನೂ ಕಾಲೇಜಿನ ಅಽಕಾರಿಗಳೇ ಮಾಡಿಕೊಟ್ಟರು. ಮಗು
ಶ್ಯಾಮಲಾಳನ್ನು ಅಜ್ಜಿ-ತಾತ ನೋಡಿಕೊಳ್ಳುತ್ತಿದ್ದರು. ವಾರಾಂತ್ಯಗಳಲ್ಲಿ ಹಾಸ್ಟೆಲ್‌ನಿಂದ ಬಂದ ಲಲಿತಾ ತನ್ನ ಮಗಳೊಂದಿಗೆ
ಸಮಯ ಕಳೆಯುವುದು ಸಾಧ್ಯವಾಗುತ್ತಿತ್ತು.

ಅಷ್ಟುಹೊತ್ತಿಗೆ ಸುಬ್ಬರಾವ್ ಅವರ ಆಲೋಚನೆಯಂತೆ ಗಿಂಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹೆಣ್ಮಕ್ಕಳಿಗೂ  ಪ್ರವೇಶವಿದೆ ಯೆಂದು ಜಾಹಿರಾತು ಪ್ರಕಟಿಸಲಾಯಿತು. ಪರಿಣಾಮವೆಂಬಂತೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪಿ.ಕೆ.ತೆರೀಸಾ ಮತ್ತು ಲೀಲಮ್ಮ ಜಾರ್ಜ್ ಎಂಬಿಬ್ಬರು ಹುಡುಗಿಯರು ಸಿವಿಲ್ ಎಂಜಿನಿಯರಿಂಗ್ ಕಲಿಯಲಿಕ್ಕೆ ಸೇರಿಕೊಂಡರು. ೧೯೪೩ರಲ್ಲಿ ಮೂವರಿಗೂ ಪದವಿಪ್ರದಾನ ನಡೆಯಿತು. ಅಂದರೆ ಲಲಿತಾಳದು ಆಗ ನಾಲ್ಕು ವರ್ಷಗಳ ವಿದ್ಯಾಭ್ಯಾಸ ಪೂರ್ಣವಾಗಿತ್ತು, ಈ ಇಬ್ಬರದು ಮೂರೇ ವರ್ಷ ಆಗಿದ್ದದ್ದು.

ಆದರೆ ಆಗಲೇ ಎರಡನೆಯ ಪ್ರಪಂಚಯುದ್ಧ ತಾರಕಾವಸ್ಥೆ ತಲುಪಿದ್ದರಿಂದ ಗಿಂಡಿ ಕಾಲೇಜ್ ಆಡಳಿತವು ಪದವಿ ಶಿಕ್ಷಣ ಅವಧಿ ಯನ್ನು ಮೊಟಕುಗೊಳಿಸಿತ್ತು. ತೆರೀಸಾ ಪದವಿ ಗಳಿಸಿ ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್ ಆಗಿ ಸೇರಿಕೊಂಡಳು. ಲಲಿತಾ ಮತ್ತೂ ಒಂದು ವರ್ಷ ಅದೇ ಕಾಲೇಜಿನಲ್ಲಿದ್ದು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಆನರ್ಸ್ ಪದವಿಯನ್ನೂ ಪಡೆದಳು. ಬರೀ ಡಿಗ್ರಿ ಪಡೆದರೆ ಸಾಲದು, ಕೆಲಸಕ್ಕೆ ಸೇರಬೇಕಿದ್ದರೆ ಎಪ್ರೆಂಟಿಸ್‌ಶಿಪ್ ಸಹ ಮಾಡಬೇಕಿತ್ತು. ಅದಕ್ಕೋಸ್ಕರ ಜಮಲ್
ಪುರ್‌ನ ಒಂದು ರೈಲ್ವೇ ವರ್ಕ್‌ಶಾಪ್‌ಗೆ ಸೇರಿಕೊಂಡ ಲಲಿತಾ ಅಲ್ಲಿ ಒಂದು ವರ್ಷ ಕಳೆದ ಮೇಲೆ ಮೊದಲ ಉದ್ಯೋಗವಾಗಿ ಸೆಂಟ್ರಲ್ ಸ್ಟಾಂಡರ್ಡ್ಸ್ ಆರ್ಗನೈಸೇಷನ್‌ನಲ್ಲಿ ಎಂಜಿನಿಯರಿಂಗ್ ಎಸಿಸ್ಟೆಂಟ್ ಹುದ್ದೆಗೆ ಸೇರಿಕೊಂಡಳು. ಅದಿದ್ದದ್ದು ಶಿಮ್ಲಾದಲ್ಲಿ.

ಲಲಿತಾಳ ಅಣ್ಣನೂ ಅದೇ ಎಂಜಿನಿಯರಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದದ್ದು ಲಲಿತಾಗೆ ಬಹಳವೇ ಸುಲಭವಾಯಿತು. ವಾಸ್ತವ್ಯಕ್ಕೆ ಅವರ ಮನೆಯೇ ಇತ್ತು. ಆರು ವರ್ಷದ ಮಗು ಶ್ಯಾಮಲಾಳನ್ನುಅತ್ತಿಗೆ ತುಂಬ ಪ್ರೀತಿಯಿಂದ ನೋಡಿಕೊಂಡರು. ಎರಡು ವರ್ಷ ಕಾಲ ಆ ಉದ್ಯೋಗ ಮಾಡಿದ ಮೇಲೆ ತಂದೆ ಸುಬ್ಬ ರಾವ್ ಅವರ ಅಪೇಕ್ಷೆಯಂತೆ ಲಲಿತಾ ಮದ್ರಾಸಿಗೆ ಮರಳಿ ತಂದೆಯ ಜೊತೆ ಸಂಶೋಧನೆಯಲ್ಲಿ ತೊಡಗಿಕೊಂಡಳು. ಅದರಿಂದಾಗಿ ಸುಬ್ಬರಾವ್ ಸಾಕಷ್ಟು ಪೇಟೆಂಟ್‌ಗಳನ್ನೂ ಪಡೆದು ಕೊಳ್ಳುವುದಕ್ಕಾಯಿತು.

ಜೆಲೆಕ್ಟ್ರೊಮೊನಿಯಮ್ ಎಂಬೊಂದು ಸಂಗೀತವಾದ್ಯ, ಹೊಗೆ ರಹಿತ ಒಲೆ, ಎಲೆಕ್ಟ್ರಿಕ್ ಫ್ಲೇಮ್ ಪ್ರೊಡ್ಯುಸರ್ ಮುಂತಾದುವೆಲ್ಲ
ಸುಬ್ಬ ರಾವ್ ಸಂಶೋಧನೆಗಳು. ತಂದೆಯ ಜೊತೆಗಿದ್ದಾಗ ಇದು ತನ್ನದೇ ಸಂಪಾದನೆ ಅಲ್ಲವೆಂಬ ಕೊರಗು ಲಲಿತಾಳನ್ನು ಕಾಡಿ ದ್ದರಿಂದ ಮತ್ತೊಮ್ಮೆ ಉದ್ಯೋಗಕ್ಕೆ ಸೇರಿಕೊಂಡಳು. ಈ ಬಾರಿ ಎಸೋಸಿಯೇಟೆಡ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಎಂಬ ಬ್ರಿಟಿಷ್ ಸಂಸ್ಥೆಯಲ್ಲಿ. ಕೆಲಸ ಕಲ್ಕತ್ತಾದಲ್ಲಿ. ಅಲ್ಲಿಯೂ ಅನುಕೂಲವೆಂಬಂತೆ ಎರಡನೆಯ ಅಣ್ಣ ಅಲ್ಲೇ ಎಂಜಿನಿಯರ್ ಆಗಿದ್ದನು. ಆತನ ಸಂಸಾರವೂ ಲಲಿತಾಳಿಗೆ ಪ್ರೀತಿಯ ಆಶ್ರಯ ಕೊಟ್ಟಿತು.

ಅಣ್ಣನ ಮಗ ಶ್ಯಾಮಲಾಳ ಪ್ರಾಯದವನೇ ಇದ್ದುದರಿಂದ ಮಕ್ಕಳಿಗೆ ಆಟ ಆಡಿಕೊಂಡಿರುವುದಕ್ಕೆ ಒಳ್ಳೆಯದಾಯಿತು. ಲಲಿತಾಳಿಗೆ ನಿತ್ಯದ ಜಂಜಡಗಳು ಹಗುರೆನಿಸಿದುವು. ಹೀಗೆ ಅಣ್ಣಂದಿರ ಸಹಾಯವಿಲ್ಲದಿರುತ್ತಿದ್ದರೆ, ವಿಧವೆ ಹೆಂಗಸು ಚಿಕ್ಕ ಮಗುವಿನೊಂದಿಗೆ ಪರವೂರು ಗಳಲ್ಲಿ ಕೆಲಸ ಮಾಡಿಕೊಂಡಿರುವುದು- ಕುಹಕವಾಡುವವರನ್ನು, ಕ್ರೂರ ಕಾಮುಕ ನೋಟದವರನ್ನು, ತುಟಿಮರುಕ ತೋರುವವರನ್ನೆಲ್ಲ ಸಂಭಾಳಿಸುವುದು- ಊಹೆಗೂ ನಿಲುಕದಷ್ಟು ಕಷ್ಟವಿರುತ್ತಿತ್ತು.

ಕಲ್ಕತ್ತಾದಲ್ಲಿ ಆ ಸಂಸ್ಥೆಯಲ್ಲಿ ಲಲಿತಾ ಬಹಳ ವರ್ಷ ಮುಂದುವರಿದರು. ಎಂಜಿನಿಯರಿಂಗ್ ಡಿಪಾರ್ಟ್‌ಮೆಂಟ್‌ನಲ್ಲಿ ಮತ್ತು ಕೆಲ ಕಾಲ ಸೇಲ್ಸ್ ಡಿವಿಷನ್‌ನಲ್ಲಿಯೂ ಕೆಲಸ ಮಾಡಿದರು. ಬೇರೆಬೇರೆ ಪ್ರಾಜೆಕ್ಟ್‌ಗಳಲ್ಲಿ ಅವರ ಸೇವೆ ಗಣನೀಯವಾಗಿತ್ತು. ಭಾರತದ ಅತಿದೊಡ್ಡ ಅಣೆಕಟ್ಟುಗಳಲ್ಲೊಂದಾದ ಭಾಕ್ರಾ-ನಂಗಲ್ ಯೋಜನೆಯಲ್ಲೂ ಎಲೆಕ್ಟ್ರಿಕಲ್ ಜನರೇಟರ್‌ಗಳ ಉಸ್ತುವಾರಿ ಲಲಿತಾ ಅವರದಾಗಿತ್ತು. ಟ್ರಾನ್ಸ್‌ಮಿಷನ್ ಲೈನ್‌ಗಳ ಡಿಸೈನ್ ಸಹ ಆಕೆಯ ನೈಪುಣ್ಯ ಬಯಸಿತು. ಅಂತೂ ದಕ್ಷತೆ ಕಾರ್ಯಕ್ಷಮತೆಯಲ್ಲಿ ಯಾವ ಗಂಡಸಿಗೂ ಕಮ್ಮಿಯಿಲ್ಲ ಬೇಕಿದ್ದರೆ ಒಂದು ತೂಕ ಹೆಚ್ಚೇ ಸಾಮರ್ಥ್ಯವುಳ್ಳವಳೆಂದು ಲಲಿತಾ ಕೆಲಸದಿಂದಲೇ ತೋರಿಸಿ
ದರು. ಕ್ರಮೇಣ ಅದೇ ಸಂಸ್ಥೆಯ ಕಾಂಟ್ರಾಕ್ಟ್ ಡಿಪಾರ್ಟ್ಮೆಂಟ್‌ನಲ್ಲಿ, ಇಂಗ್ಲೇಂಡ್‌ನಲ್ಲಿ ಬೃಹತ್ ಯಂತ್ರಗಳ ಉತ್ಪಾದಕರು ಮತ್ತು ಸ್ಥಳೀಯವಾಗಿ ಅವುಗಳ ಇನ್ಸ್ಟಲೇಷನ್ ಮತ್ತು ಸರ್ವಿಸಿಂಗ್ ಮಾಡುವ ಎಂಜಿನಿಯರ್‌ಗಳ ನಡುವೆ ಸಮನ್ವಯದ ಕೆಲಸದಲ್ಲೂ ಲಲಿತಾ ಮಿಂಚಿದರು.

ಆಕೆ ಕೆಲಸ ಮಾಡುತ್ತಿದ್ದ ಆಫೀಸು ಆಮೇಲೆ ಜನರಲ್ ಎಲೆಕ್ಟ್ರಿಕ್ ಕಂಪನಿಯ ಆಡಳಿತಕ್ಕೆ ಬಂದು ನಿವೃತ್ತಿಯವರೆಗೆ ಅಲ್ಲಿಯೇ ಕೆಲಸ ಮುಂದುವರಿದರು. ಏತನ್ಮಧ್ಯೇ ಲಂಡನ್‌ನ ಕೌನ್ಸಿಲ್ ಆಫ್ ದಿ ಇನ್ಸ್ಟಿಟ್ಯೂಷನ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರ್ಸ್ ೧೯೫೩ರಲ್ಲಿ ಲಲಿತಾರನ್ನು ಅಸೋಸಿಯೇಟ್ ಮೆಂಬರ್ ಅಂತಲೂ ಆಮೇಲೆ ಪೂರ್ಣಪ್ರಮಾಣದ ಸದಸ್ಯತ್ವದಿಂದಲೂ ಗೌರವಿ ಸಿತು.

೧೯೬೪ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಇಂಟರ್‌ನ್ಯಾಷನಲ್ ಕಾನ್‌ಫರೆನ್ಸ್ ಆಫ್ ವಿಮೆನ್ ಎಂಜಿನಿಯರ್ಸ್ ಏಂಡ್ ಸೈಂಟಿಸ್ಟ್ಸ್ ಮೊತ್ತಮೊದಲ ಸಮಾವೇಶದಲ್ಲಿ ಭಾಗವಹಿಸಲಿಕ್ಕೆ ಲಲಿತಾಗೂ ಆಹ್ವಾನ ಬಂತು- ಆಗಿನ್ನೂ ಆ ಸಂಸ್ಥೆಯ ಇಂಡಿಯಾ ಚಾಪ್ಟರ್ ಇರದಿದ್ದರೂ. ಆ ಸಮ್ಮೇಳನದಲ್ಲಿ ಮಾತನಾಡುವಾಗಲೇ ಲಲಿತಾ ಭಾವುಕರಾಗಿ ನುಡಿದದ್ದು ‘ನಾನೇನಾದರೂ ಇನ್ನೂ ನೂರು ವರ್ಷ ಹಿಂದಿನ ಕಾಲದ ಭಾರತದಲ್ಲಿ ಹುಟ್ಟಿದ್ದಿದ್ದರೆ ನನ್ನ ಗಂಡನ ಚಿತೆಯಲ್ಲಿ ಉರಿದುಹೋಗಿರುತ್ತಿದ್ದೆ. ಹಾಗಾಗದೆ ಈಗ ಇಲ್ಲಿ ಈ ಅಮೆರಿಕದಲ್ಲಿ ನಿಮ್ಮೆದುರಿಗೆ ನಿಂತು ಮಾತನಾಡುತ್ತಿದ್ದೇನೆ’ ಎಂದು.

ಸಮ್ಮೇಳನ ಮುಗಿಸಿ ಅಮೆರಿಕದಿಂದ ಹಿಂದಿರುಗು ವಾಗ ಯುನೈಟೆಡ್ ಕಿಂಗ್ ಡಂನಲ್ಲಿ ಬೇರೆಬೇರೆ ಎಲೆಕ್ಟ್ರಿಕಲ್ ಫ್ಯಾಕ್ಟರಿಗಳು ಮತ್ತು ರಿಸರ್ಚ್ ಲ್ಯಾಬೊರೆಟರಿಗಳನ್ನೆಲ್ಲ ಸಂದರ್ಶಿಸಿ ಅಲ್ಲಿ ಮತ್ತೊಂದಿಷ್ಟು ಜ್ಞಾನಾನುಭವ ಗಳಿಸಿಕೊಂಡರು. ಅಮೆರಿಕದ ಸಮ್ಮೇಳನದಿಂದ ಹಿಂದಿರುಗಿದ ಮೇಲೆ, ಆ ಸಮ್ಮೇಳನದಲ್ಲಿ ಸೇರಿದ್ದ ಬೇರೆಬೇರೆ ದೇಶಗಳ ಮಹಿಳಾ ಎಂಜಿನಿಯರ್‌ಗಳು ನಿರ್ಣ
ಯಿಸಿದ್ದಂತೆ ತಮ್ಮತಮ್ಮ ದೇಶ ಗಳಲ್ಲಿ ಮಹಿಳೆಯರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನ- ತಂತ್ರಜ್ಞಾನ ಕಲಿಕೆ ಮತ್ತು ಸಾಧನೆಗೆ ಮುಂದೆ ಬರುವಂತೆ ಪ್ರೋತ್ಸಾಹಿಸುವ ಕೆಲಸಗಳಲ್ಲಿ ಲಲಿತಾ ತೊಡಗಿಸಿಕೊಂಡರು. ಪತ್ರಿಕೆಗಳಲ್ಲಿ ನಿಯತಕಾಲಿಕೆಗಳಲ್ಲಿ ಸಂದರ್ಶನ ನೀಡಿ ಈಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.

೧೯೬೭ರಲ್ಲಿ ಕೇಂಬ್ರಿಡ್ಜ್‌ನಲ್ಲಿ ನಡೆದ ಎರಡನೆಯ ಸಮ್ಮೇಳನದಲ್ಲಿ ಭಾರತದಿಂದ ಇನ್ನೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸು ವಂತೆ ಹುರಿದುಂಬಿಸಿದರು. ತತ್ಪರಿಣಾಮವಾಗಿ ಆ ಸಮ್ಮೇಳನದಲ್ಲಿ ಭಾರತದಿಂದ ಐದು ಮಂದಿ ಮಹಿಳಾ ಎಂಜಿನಿಯರ್‌ಗಳು ಭಾಗವಹಿಸಿದರು. ೧೯೭೭ರಲ್ಲಿ ನಿವೃತ್ತಿ ಪಡೆದ ಲಲಿತಾ ಆಮೇಲೆ ತಂಗಿಯ ಜೊತೆ ಪ್ರವಾಸಗಳಲ್ಲಿ ಖುಶಿ ಕಂಡರು. ಸಂವತ್ಸರಗಳ ಒಂದು ಚಕ್ರ ಮುಗಿಯುವ ಹೊತ್ತಿಗೆ ಸರಿಯಾಗಿ, ಅಂದರೆ ೬೦ ವರ್ಷ ವಯಸ್ಸಿನಲ್ಲಿ ಮೆದುಳಿನ ಕಾಯಿಲೆ ಯೊಂದರಿಂದ ಬಳಲಿ ೧೨ ಅಕ್ಟೋಬರ್ ೧೯೭೯ರಂದು ಇಹಲೋಕ ತ್ಯಜಿಸಿದರು. ಮಗಳು ಶ್ಯಾಮಲಾ ವಿಜ್ಞಾನದಲ್ಲಿ ಪದವಿ ಪಡೆದು ಬಿ.ಎಡ್ ಸಹ ಮಾಡಿ ೩೦ ವರ್ಷಕಾಲ ಭಾರತದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ಆಕೆಯ ಪತಿ ಸಹ ಒಬ್ಬ ವಿಜ್ಞಾನಿಯೇ, ಅಂತೆಯೇ ಮಕ್ಕಳು ಕೂಡ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದವರೇ. ಒಂದು ಹೆಣ್ಣಿಗೆ ಶಿಕ್ಷಣ ಒದಗಿಸಿದರೆ ಒಂದು ವಿಶ್ವವಿದ್ಯಾಲಯ ತೆರೆದಂತೆಯೇ ಎಂಬ ಮಾತು ಲಲಿತಾ ವಿಚಾರದಲ್ಲಿ ನೂರಕ್ಕೆ ನೂರು ನಿಜ.

೧೯೯೪ರಲ್ಲಿ ಅಮೆರಿಕ ದೇಶಕ್ಕೆ ವಲಸೆ ಬಂದ ಶ್ಯಾಮಲಾ ಈಗ ಇಲ್ಲಿ ೮೦ರ ವಯಸ್ಸಿನಲ್ಲೂ ಮಕ್ಕಳಿಗೆ ಗಣಿತ ಕಲಿಸುತ್ತಿದ್ದಾರೆ.
ಕಂಕುಳಲ್ಲಿ ಚೊಚ್ಚಲ ಕೂಸು ಇರುವಾಗಲೇ ಗಂಡನನ್ನು ಕಳೆದುಕೊಂಡು, ಅತ್ತೆಯ ಭರ್ತ್ಸನೆಗೆ ಒಳಗಾದ ಜೀವ ಅದೆಷ್ಟು ನೊಂದಿತ್ತೋ. ಆದರೆ ಆ ಸಂಕಷ್ಟದಲ್ಲೇ ಒಂದು ಸ್ವಾಭಿಮಾನದ, ಸಾಹಸ ಮಾಡಬೇಕೆನ್ನುವ ಕಿಡಿ ಹೊತ್ತಿಕೊಂಡಿತು. ಗೀತೆಯಲ್ಲಿ
ಕೃಷ್ಣ ಪರಮಾತ್ಮ ಹೇಳಿರುವಂತೆ- ಉದ್ಧರೇದಾತ್ಮನಾತ್ಮಾನಂ… ನಮ್ಮನ್ನು ಇನ್ನ್ಯಾರೋ ಕೈಹಿಡಿದು ನಡೆಸುತ್ತಾರೆಂದು ಕಾಯದೆ
ನಾವೇ ಮೈಕೊಡವಿ ಎದ್ದುನಿಂತು ನಡೆಯತೊಡಗಿದರೆ ಆ ಮೇಲೆ ಸುತ್ತಮುತ್ತಲಿನ ಜನರು, ಸಮಾಜ, ಪ್ರಪಂಚ ಎಲ್ಲ ನಮಗೆ ಅನುಕೂಲಕರವಾಗಿಯೇ ಒದಗಿಬರಬಹುದು.

ಲಲಿತಾಗೆ ತವರುಮನೆಯವರ ನಿರ್ವ್ಯಾಜ ಪ್ರೇಮ ನಿರಂತರವಾಗಿ ದೊರೆತದ್ದು ಅತಿದೊಡ್ಡ ಆಧಾರ. ತಂದೆಯಂತೂ ಆಕೆಗಷ್ಟೇ ಅಲ್ಲ, ಬೇರೆ ಹುಡುಗಿಯರಿಗೂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಸಿಗುವಂತೆ ಪ್ರಯತ್ನಪಟ್ಟು ಸಫಲರಾದರು. ಅಣ್ಣಂದಿರು- ಮುಖ್ಯವಾಗಿ ಅತ್ತಿಗೆಯಂದಿರು- ಲಲಿತಾರನ್ನೂ ಅವರ ಚಿಕ್ಕ ಮಗುವನ್ನೂ, ಪ್ರೀತಿಯಲ್ಲಿ ತೋಯಿಸಿ ಎಂಬಂತೆ ನೋಡಿ ಕೊಂಡರು. ಇದು ಎಲ್ಲರಿಗೂ ಸಿಗುವ ಭಾಗ್ಯವಲ್ಲ. ಅಂತೆಯೇ ಕಾಲೇಜಿನಲ್ಲಿ ಸಹಪಾಠಿಗಳು, ಕೆಲಸದ ಸ್ಥಳದಲ್ಲಿ
ಸಹೋದ್ಯೋಗಿಗಳು ಆರಂಭದಲ್ಲಿ ಒಂದಿನಿತು ಉಪಟಳ ಕೊಟ್ಟರೇನೋ ಆದರೆ ಈಕೆ ಗಟ್ಟಿಗಿತ್ತಿ ಯಾವುದಕ್ಕೂ ಹೆದರುವವಳಲ್ಲ ಎಂದು ಅರಿವಾದಮೇಲೆ ಸಹಜವಾಗಿ ಅವರೆಲ್ಲ ಈಕೆಯ ಅಭಿಮಾನಿಗಳೇ ಆದರು, ಸರ್ವ ಸಹಕಾರವನ್ನೂ ಕೊಟ್ಟರು.

‘ವಿಧವೆಯಾದರೆ ಬಾಳಿನ ಕೊನೆಯೆಂದೇನಲ್ಲ, ಸಂಬಂಧ ಹೊಂದಿಬಂದರೆ ಮತ್ತೊಮ್ಮೆ ಮದುವೆಯಾಗುವುದೇ ಒಳ್ಳೆಯದು’ ಎಂದು ಪ್ರತಿಪಾದಿಸುತ್ತಿದ್ದ ಲಲಿತಾ ತಾನು ಸ್ವತಃ ಮರುಮದುವೆಯಾಗಲಿಲ್ಲ. ಬಹುಶಃ ಮಗಳ ಮೇಲಿನ ಅಪರಿಮಿತ ಮಮತೆ ಯೂ ಕಾರಣವಿರಬಹುದು. ‘ನನಗೆ ಅಪ್ಪ ಇಲ್ಲ ಎಂದು ಜೀವನದಲ್ಲಿ ಒಮ್ಮೆಯೂ ಅನಿಸಿದ್ದಿಲ್ಲ, ಅಷ್ಟೂ ಚೆನ್ನಾಗಿ ನನ್ನ ಅಮ್ಮನೇ ನನ್ನನ್ನು ನೋಡಿಕೊಂಡಿದ್ದಾರೆ. ಯಾಕೆ ಮರುಮದುವೆಯಾಗಲಿಲ್ಲ ಎಂದು ಯಾರಾದರೂ ಕೇಳಿದರೆ- ಇನ್ನೊಬ್ಬರು ನಮ್ಮ ಜೀವನದಲ್ಲಿ ನಿರ್ದಿಷ್ಟವಾದೊಂದು ಉದ್ದೇಶದಿಂದ ಬರುತ್ತಾರೆ, ಅದು ಈಡೇರಿದ ಮೇಲೆ ನಿರ್ಗಮಿಸುತ್ತಾರೆ ಎಂದು ತತ್ತ್ವಜ್ಞಾನಿ ಯಂತೆ ಉತ್ತರಿಸುತ್ತಿದ್ದರು’ – ಇದು ಶ್ಯಾಮಲಾ ತನ್ನ ಅಮ್ಮನನ್ನು ನೆನಪಿಸಿಕೊಳ್ಳುವ ರೀತಿ.

ಒಂದು ಮೇಣದಬತ್ತಿ ಉರಿದರೆ ಕೋಣೆಯೊಳಗಿನ ಕತ್ತಲೆ ಹೋಗುವುದು; ಹಲವು ಮೇಣದಬತ್ತಿಗಳು ಉರಿದರೆ ಅಲ್ಲೊಂದು
ಕ್ರಾಂತಿಯೇ ಆಗುವುದು ಎಂಬರ್ಥದ ಒಂದು ಇಂಗ್ಲಿಷ್ ನುಡಿಗಟ್ಟಿದೆ. ಅಯ್ಯಲಸೋಮಯಾಜುಲ ಲಲಿತಾ ರಾವ್ ಬರೀ ಒಂದು ಮೇಣದಬತ್ತಿ ಅಲ್ಲ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ತನ್ನ ರಕ್ತದಲ್ಲೇ ಇದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದವರು.
ಅದ್ಯಾವುದೋ ವಿಶೇಷ ವಿದ್ಯುಚ್ಛಕ್ತಿಯ ಸಲಾಕೆ ಆಕೆಯ ವ್ಯಕ್ತಿತ್ವದಲ್ಲಿ ಸಂಚರಿಸುತ್ತಿದ್ದಿರಬೇಕು ಅಂತನಿಸುತ್ತದೆ.

Leave a Reply

Your email address will not be published. Required fields are marked *

error: Content is protected !!