Saturday, 27th July 2024

ಚರಿತ್ರೆಯ ಕ್ರೌರ್ಯಕ್ಕೆ ಸಾಕ್ಷಿ ಆನಾಳ ಡೈರಿ

ಇತಿಹಾಸದ ಪುಟಗಳಿಂದ

ರಾಸುಮ ಭಟ್

ಮಕ್ಕಳ ಮನಸ್ಸು ಮುಗ್ಧವಾಗಿರುತ್ತದೆ. ಮಕ್ಕಳ ಮನಸ್ಸಿನಲ್ಲಿ ಸದಾ ಒಳ್ಳೆಯ ಆಲೋಚನೆಗಳು ತುಂಬಿರುತ್ತದೆ ಮತ್ತು ತಾವು ಏನು ನೋಡುತ್ತಾರೊ, ಏನು ಅನುಭವಿಸುತ್ತಾರೊ ಅದನ್ನು ಯಾವುದೇ ಪೂರ್ವಗ್ರಹವಿಲ್ಲದೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಇದೇ ಹಾದಿಯಲ್ಲಿ ತನ್ನ ಮುಗ್ಧ ಬರವಣಿಗೆ ಯ ಮೂಲಕ ತನ್ನ ಮತ್ತು ಸಂಪೂರ್ಣ ಒಂದು ಸಮುದಾಯದ ಕಷ್ಟ ಕೋಟಲೆಯನ್ನು ಜಗತ್ತಿಗೆ ತಿಳಿಸಿದ ಕೀರ್ತಿ ‘ಆನಾ ಫ್ರಾಂಕ್’ ಎಂಬ ೧೩ ವಯಸ್ಸಿನ ಹುಡುಗಿಗೆ ಸಲ್ಲಬೇಕು. ಆಕೆ ತನ್ನ ಬರವಣಿಗೆಯ ಮೂಲಕ ಅಜರಾಮರವಾಗಿದ್ದಾಳೆ.

ಫ್ರಾಂಕ್ ಅನ್ನೆಲೀಸ್ ಅಥವಾ ಅನ್ನೆಲೀಸ್ ಮೇರಿ ಫ್ರಾಂಕ್ ಅಥವಾ ಆನಾ ಫ್ರಾಂಕ್ ಜೂನ್ ೧೨, ೧೯೨೯ರಂದು ಜರ್ಮನಿಯ ಫ್ರಾಂಕ್ ಫರ್ಟ್‌ನಲ್ಲಿರುವ ಮೈಂಗೌ ರೆಡ್ ಕ್ರಾಸ್ ಕ್ಲಿನಿಕ್‌ನಲ್ಲಿ ಎಡಿತ್ (ನೀ ಹಾಲೆಂಡರ್) ಮತ್ತು ಒಟ್ಟೊ ಹೆನ್ರಿಚ್ ಫ್ರಾಂಕ್ ಎಂಬ ಯಹೂದಿ ದಂಪತಿಗೆ ಜನಿಸಿದಳು. ಆಕೆಗೆ ಮಾರ್ಗಾಟ್ ಎಂಬ ಅಕ್ಕ ಸಹ ಇದ್ದಳು. ಅದು ೧೯೪೦ – ೪೫ ಎರಡನೇ ಮಹಾಯುದ್ಧದ ಸಮಯ. ಮೊದಲ ಮಹಾಯುದ್ಧದಿಂದಾದ ಅವಮಾನ ಜರ್ಮನಿಯ ಜನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುವ ಜತೆಗೆ ಅಡಾಲ ಹಿಟ್ಲರ್ ಎಂಬ ಸರ್ವಾಧಿಕಾರಿಯ ಉದಯಕ್ಕೆ ಕಾರಣವಾಯಿತು.

ಸಾವಿರಾರು ವರ್ಷಗಳಿಂದ ಹಿಂಸೆಯಿಂದ ನರಳುತ್ತಿದ್ದ ಯಹೂದಿಗಳಿಗೆ ಭೂಮಿಯಲ್ಲಿ ನರಕ ಹಿಟ್ಲರ್‌ನ ಮೂಲಕ ಸೃಷ್ಟಿಯಾಯಿತು. ಹಿಟ್ಲರ್‌ಗೆ ಯಹೂದಿಗಳ ಮೇಲೆ ವಿಪರೀತ ದ್ವೇಷವಿತ್ತು. ಇದಕ್ಕೆ ಹಲವು ಉದಾಹರಣೆ: ಏಸು ಕ್ರಿಸ್ತ ಗಲ್ಲಿಗೇರಲು ಮುಖ್ಯ ಕಾರಣ ಯಹೂದಿಗಳು. ಆ ಸಮಯದ ಯಹೂದಿ ವಿeನಿಗಳು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಸಹಕರಿಸುತ್ತಿದ್ದರು. ಆರ್ಯನ್ ಜನಾಂಗವೇ ಶ್ರೇಷ್ಠ ಎಂಬ ಹಿಟ್ಲರ್‌ನ ನಂಬಿಕೆ. ಇಷ್ಟಲ್ಲದೇ ಇನ್ನೂ ಕೆಲವರ ಪ್ರಕಾರ ಯಹೂದಿ ಹುಡುಗಿಯೊಬ್ಬಳು ಪ್ರೀತಿಯಲ್ಲಿ ಹಿಟ್ಲರ್‌ಗೆ ಮೋಸ ಮಾಡಿದಳೆಂಬ ವಾದವೂ ಇದೆ. ಒಟ್ಟಾರೆ, ಹಿಟ್ಲರ್‌ನ ದ್ವೇಷ ೬೦ ಲಕ್ಷ
ಯಹೂದಿಗಳ ಸಾವಿಗೆ ಕಾರಣವಾಯಿತು.

ಯಹೂದಿಗಳು ತಮ್ಮ ತಲೆಯ ಮೇಲೆ ಹಳದಿ ಪಟ್ಟಿಯನ್ನು ಧರಿಸಬೇಕಾಗಿತ್ತು. ಈ ಮೂಲಕ ಜರ್ಮನಿಯ ಜನರಿಂದ ಪ್ರತ್ಯೇಕಗೊಳಿಸಲಾಗಿತ್ತು. ಹೀಗೆ ಯಹೂದಿಗಳನ್ನು ಕಾನ್ಸಂಟ್ರೇಶನ್ ಕ್ಯಾಂಪ್ ನಲ್ಲಿ ಚಿತ್ರ ವಿಚಿತ್ರ ಹಿಂಸೆ ನೀಡಿ ಕೊಲ್ಲಲಾಗುತ್ತಿತ್ತು. ಯಹೂದಿ ಗಂಡು ಹೆಣ್ಣು ಇಬ್ಬರ ತಲೆ ಬೋಳಿಸಿ ಗ್ಯಾಸ್ ಚೇಂಬರ್‌ನಲ್ಲಿ ವಿಷಕಾರಿ ಹೊಗೆಯನ್ನು ಕುಡಿದು ಸಾಯುವಂತೆ ಮಾಡಲಾಗುತ್ತಿತ್ತು. ಇನ್ನೂ ಕೆಲವು ಮಾಹಿತಿಗಳ ಪ್ರಕಾರ ಜರ್ಮನಿಯ ವಿಜ್ಞಾನಿಗಳು ಜೀವಂತ ಯಹೂದಿಗಳನ್ನು ವೈಜ್ಞಾನಿಕ ಸಂಶೋಧನೆಗಾಗಿ ಪ್ರಾಣಿಗಳಂತೆ ಬಳಸಿಕೊಳ್ಳಲಾಗುತ್ತಿತ್ತು.ಇದೆ ಯಹೂದಿ ಸಮುದಾಯಕ್ಕೆ ಸೇರಿದ ಆನಾ ಫ್ರಾಂಕ್ನ ಕುಟುಂಬದ ಮೇಲೆ ಸಹ ಹಿಟ್ಲರ್‌ನ ಕ್ರೂರ ದೃಷ್ಟಿ ಬೀಳಲು ಸ್ವಲ್ಪ ಸಮಯ ಹಿಡಿಯಿತು. ಇದೆ ಸಮಯದಲ್ಲಿ ನಾಝಿಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಆನ್ ಫ್ರಾಂಕ್ ಳ ಕುಟುಂಬ ಆಮ್‌ಸ್ಟರ್ ಡಾಂನ ಅಡಗುತಾಣವೊಂದರಲ್ಲಿ ಸುಮಾರು ೨೫ ತಿಂಗಳುಗಳ ಕಾಲ ಅವಿತು ಕುಳಿತಿತ್ತು.

ಹಾಗೆ ಕಾಲ ಕಳೆದಿದ್ದ ಅವಧಿಯಲ್ಲಿ ತನ್ನ ೧೩ ನೇ ಹುಟ್ಟುಹಬ್ಬದಂದು ಉಡುಗೊರೆಯಾಗಿ ದೊರೆತ ಡೈರಿಯಲ್ಲೇ ಪುಟ್ಟ ಆನಾ ತನ್ನ ಅನುಭವಗಳನ್ನು ಬರೆಯತೊಡಗಿದಳು. ಆದರೆ ಅದಾರೋ ಸುಳಿವು ನೀಡಿದ ಹಿನ್ನೆಲೆಯಲ್ಲಿ ಹಿಟ್ಲರ್‌ನ ಪಡೆ ಅಡಗುತಾಣದಲ್ಲಿದ್ದ ಎಲ್ಲರನ್ನೂ ಬಂಧಿಸಿ ಕಾನ್ಸೆಂಟ್ರೆಷನ್ ಕ್ಯಾಂಪ್‌ಗೆ ಕಳುಹಿಸಿತು. ಆನ್ ಮತ್ತು ಆಕೆಯ ಸಹೋದರಿ ಅ ಕೊನೆಯುಸಿರೆಳೆದರು. ಆನಾಳ ತಂದೆಯನ್ನು ಹೊರತುಪಡಿಸಿ ಇತರರಾರೂ ಜೀವ ಸಹಿತ ಅಲ್ಲಿಂದ ಹೊರಬರಲೇ ಇಲ್ಲ. ಹಾಗೆ ಜೀವಂತವಾಗಿ ಬದುಕಿ ಬಂದ ತಂದೆ, ಮಗಳು ಬರೆದಿದ್ದ ಡೈರಿಯನ್ನು ಬಹಿರಂಗಗೊಳಿಸಿದರು. ಬಹಳ ಜಾಗರೂ ಕತೆಯಿಂದ ಅದನ್ನು ಪ್ರಕಟಿಸಿದರು.

೧೯೪೭ರಲ್ಲಿ ಮುದ್ರಣ ಕಂಡ ಆ ಡೈರಿ ಸುಮಾರು ೬೦ ಭಾಷೆಗಳಿಗೆ ಅನುವಾದಗೊಂಡಿದೆ. ಆ ಬರಹಗಳಲ್ಲಿ ನೋವಿತ್ತು, ಹತಾಶೆಯಿತ್ತು. ಹಿಟ್ಲರ್‌ನ ಸರ್ವಾಧಿಕಾರಿ ಧೋರಣೆಯನ್ನು ಆನಾ ಫ್ರಾಂಕ್ ಳ ಮಾತುಗಳ ಮೂಲಕ ಇಡೀ ಜಗತ್ತು ಕೇಳಿಸಿಕೊಂಡಿತು. ಅದನ್ನು ಓದಿದ ಸಾಕಷ್ಟು ಮಂದಿ ಆ ಬರಹಗಳಿಂದ ಪ್ರೆರಣೆ ಪಡೆದಿದ್ದಾರೆ. ಇಂಥ ಮುಗ್ಧೆ ೧೯೪೫ ಆಗಸ್ಟ ೧೫, ರಂದು ಜರ್ಮನಿ ನ್ಯಾಜಿಗಳ ಕ್ಯಾಂಪ್‌ನಲ್ಲಿ ಮರಣ ಹೊಂದುತ್ತಾಳೆ. ಆದರೆ ತನ್ನ ಮುಗ್ಧ ಬರವಣಿಗೆಯ ಮೂಲಕ ಜಗತ್ತು ಇರುವ ತನಕವು ಇತಿಹಾಸವಾಗಿ, ಚರಿತ್ರೆಯ ಕ್ರೌರ್ಯಕ್ಕೆ ಸಾಕ್ಷಿಯಾಗಿ ಜೀವಂತವಾಗುಳಿದು ಬಿಟ್ಟಿದ್ದಾಳೆ.

Leave a Reply

Your email address will not be published. Required fields are marked *

error: Content is protected !!