Saturday, 27th July 2024

ನಾಯಕತ್ವವಿಲ್ಲದೆ ರಾಜ್ಯ ಬಿಜೆಪಿ ನಿತ್ರಾಣ

ವರ್ತಮಾನ

maapala@gmail.com

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವಾದರೂ ರಾಜ್ಯ ನಾಯಕತ್ವ ಇಲ್ಲದಿದ್ದರೆ ಏನು ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಬಿಜೆಪಿ ಉದಾಹರಣೆ. ಪ್ರಧಾನಿ ಮೋದಿ ಅವರಂಥ ರಾಷ್ಟ್ರೀಯ ನಾಯಕರಿದ್ದರೂ, ಪಕ್ಷ ಸಂಘಟನೆಗಾಗಿಯೇ ತಮ್ಮನ್ನು ಸಮರ್ಪಿಸಿಕೊಳ್ಳುತ್ತಿರುವ ಕಾರ್ಯಕರ್ತರಿದ್ದರೂ ದಿನೇ ದಿನೇ ರಾಜ್ಯದಲ್ಲಿ ಬಿಜೆಪಿ ನಿತ್ರಾಣವಾಗುತ್ತಿದೆ.

ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿಗೆ ಪಕ್ಷದ ವರಿಷ್ಠರು ನೀಡುತ್ತಿರುವ ಶಿಕ್ಷೆ ಇದೀಗ ಮುಳುವಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ಅತ್ತ ಕಾಂಗ್ರೆಸ್ ಜತೆಗೆ ಹೋರಾಡಲೂ ಸಾಧ್ಯವಾಗದೆ, ಇತ್ತ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಲೂ ಆಗದೆ ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. ಇದರ ಪರಿಣಾಮ ಪಕ್ಷದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ಪ್ರವಾಸ, ರೋಡ್‌ಶೋ, ಸಾರ್ವಜನಿಕ ಸಭೆ, ಚುನಾವಣಾ ಚಾಣಕ್ಯ ಎಂದೇ ಕರೆಯುತ್ತಿರುವ ಕೇಂದ್ರ ಸಚಿವ ಅಮಿತ್ ಶಾ ಅವರ ನಾನಾ ತಂತ್ರಗಾರಿಕೆ ಮಧ್ಯೆಯೂ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿ ಅಧಿಕಾರ ಕಳೆದುಕೊಂಡ ಬಿಜೆಪಿ ಇದೀಗ ಅಧಿಕಾರದಲ್ಲಿದ್ದಾಗ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿರುವ ಜತೆಗೆ ಶಿಕ್ಷೆಯನ್ನೂ ಅನುಭವಿ ಸುವಂತಾಗಿದೆ.

ಈ ಸೋಲನ್ನು ಸ್ವೀಕರಿಸಿ ರಾಜ್ಯ ಬಿಜೆಪಿಯವರು ಮತ್ತೆ ಮೇಲೇಳಲು ಪ್ರಯತ್ನಿಸುತ್ತಿದೆಯಾದರೂ ಆಂತರಿಕ ಬಿಕ್ಕಟ್ಟು ಅದಕ್ಕೆ ಪೂರ್ಣ ಸಹಕರಿಸುತ್ತಿಲ್ಲ. ಈ ಸಮಸ್ಯೆಯನ್ನು ಸರಿಪಡಿಸಬೇಕಾದ ಪಕ್ಷದ ವರಿಷ್ಠರು ಹೀನಾಯ ಸೋಲನ್ನು ಅರಗಿಸಿಕೊಳ್ಳಲು ಸಿದ್ಧರಿಲ್ಲ. ಇದರ ಪರಿಣಾಮ ರಾಜ್ಯ ಬಿಜೆಪಿಯ ಪರಿಸ್ಥಿತಿ ಯಾರಿಗೂ ಬೇಡವಾಗಿದೆ. ತಮಗೆ ಎಲ್ಲವೂ ಪಕ್ಷವೇ ಎಂದು ಕೊಂಡಿರುವ ಕಾರ್ಯಕರ್ತರು ನಾಯಕರಿಲ್ಲದೆ ಸುಮ್ಮನಾಗುವಂತಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಈ ರೀತಿಯ ಫಲಿತಾಂಶ ಬರುತ್ತದೆ ಎಂದು ಬಿಜೆಪಿ ಮಾತ್ರವಲ್ಲ, ಅದನ್ನು ಸೋಲಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕೂಡ ನಿರೀಕ್ಷಿಸಿರಲಿಲ್ಲ. ಅಂತಹ ಒಂದು ತೀರ್ಪನ್ನು ಮತದಾರ ಕೊಟ್ಟಿದ್ದ. ಮತದಾರರ ತೀರ್ಪನ್ನು ಶಿರಸಾ ಪಾಲಿಸಿ ಮುಂದೆ ಆಗಿರುವ ತಪ್ಪು ಸರಿಪಡಿಸಿಕೊಂಡು ಮುಂದಕ್ಕೆ ಸಾಗಬೇಕಾದ ಪರಿಸ್ಥಿತಿಯಲ್ಲಿರುವ ರಾಜ್ಯ ಬಿಜೆಪಿಗೆ ಇದೀಗ ನಾಯಕತ್ವದ ಕೊರತೆ ತೀವ್ರವಾಗಿ ಬಾಧಿಸುತ್ತಿದೆ. ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ
ತರುವಂತೆ ಮಾಡಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ೨೦೦೪ರ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ವಾಜಪೇಯಿ ಜತೆಗೆ ಲಾಲ್‌ಕೃಷ್ಣ ಆಡ್ವಾಣಿ ಅವರಂಥ ನಾಯಕರಿದ್ದರೂ ನರೇಂದ್ರ ಮೋದಿ, ಅಮಿತ್ ಶಾ ಜೋಡಿ ಬರುವವರೆಗೆ ಅಂದರೆ ೨೦೧೪ರ ಲೋಕಸಭೆ ಚುನಾವಣೆವರೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟವನ್ನು ಸೋಲಿಸಲು ಬಿಜೆಪಿಗೆ ಆಗಲಿಲ್ಲ.

ಆದರೆ, ಗುಜರಾತ್‌ನಲ್ಲಿ ೨೦೦೨ರಲ್ಲಿ ನಡೆದ ಗೋಧ್ರಾದಲ್ಲಿ ನಡೆದ ಹಿಂದೂ ಕರಸೇವಕರ ಹತ್ಯಾಕಾಂಡ ಮತ್ತು ನಂತರದ ಹಿಂಸಾಚಾರದ ಬಳಿಕ ಮುನ್ನಲೆಗೆ ಬಂದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ರಾಷ್ಟ್ರ ರಾಜಕಾರಣದಲ್ಲಿ ಕಾಣಿಸಿಕೊಳ್ಳುವವರೆಗೆ ರಾಷ್ಟ್ರದ ಬಿಜೆಪಿ ಪರಿಸ್ಥಿತಿಯೂ ಸರಿಯಾಗಿರಲಿಲ್ಲ.
ವಾಜಪೇಯಿ, ಆಡ್ವಾಣಿಯಂಥ ನಾಯಕರನ್ನೂ ದೇಶದ ಜನ ಮತ್ತೆ ಅಽಕಾರಕ್ಕೆ ತರುವ ಮನಸ್ಸು ಮಾಡಿರಲಿಲ್ಲ. ಹೀಗಾಗಿ ಮಹತ್ವದ ಬದಲಾವಣೆಗೆ ಕೈಹಾಕಿದ ಬಿಜೆಪಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ೨೦೧೪ರಲ್ಲಿ ಮತ್ತೆ ಯುಪಿಎಅನ್ನು ಹೀನಾಯ ವಾಗಿ ಸೋಲಿಸಿ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಯಿತು.

ಸದ್ಯ ರಾಜ್ಯ ಬಿಜೆಪಿಯೂ ೨೦೦೪ರ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಬಿಜೆಪಿ ಇದ್ದ ಪರಿಸ್ಥಿತಿಯಲ್ಲೇ ಇದೆ. ವ್ಯತ್ಯಾಸವೆಂದರೆ ಆಗ ಪಕ್ಷವನ್ನು ಸಂಘಟಿಸಲು ವಾಜಪೇಯಿ, ಆಡ್ವಾಣಿಯಂಥ ನಾಯಕರು ಸಕ್ರಿಯವಾಗಿದ್ದರು. ಅವರ ಕಾಲೆಳೆಯುವ ಅವ್ಯವಸ್ಥೆಗೆ ಅವಕಾಶವಿರಲಿಲ್ಲ. ವಾಜಪೇಯಿ ಅವರು ವಯೋಸಹಜ ಸಮಸ್ಯೆಯಿಂದಾಗಿ ರಾಜಕೀಯವಾಗಿ ಬದಿಗೆ ಸರಿಯುವವರೆಗೆ ಅವರಿಬ್ಬರನ್ನು ಅಲುಗಾಡಿಸುವ ಪರ್ಯಾಯ ನಾಯಕತ್ವ ಇರಲಿಲ್ಲ. ಇದರ ಪರಿಣಾಮ ೨೦೧೪ರಲ್ಲಿ ವಾಜಪೇಯಿ ಮತ್ತು ಆಡ್ವಾಣಿ ಅವರಿಗೆ ಪರ್ಯಾಯವಾಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಬಂದಾಗ ಎಲ್ಲರೂ ಎರಡೂ ಕೈಗಳನ್ನು
ಚಾಚಿ ತಬ್ಬಿಕೊಂಡರು. ಹೇಗಾದರೂ ಮಾಡಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಸೋಲಿಸಿ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಬೇಕು ಎನ್ನುವುದಷ್ಟೇ ಎಲ್ಲರ ಯೋಚನೆಯಾಗಿತ್ತು.

ಅಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ವಾದವಷ್ಟೇ ಇತ್ತು. ಇದರ ಪರಿಣಾಮ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂತು. ಇದೀಗ ಸರಕಾರ
ಬಂದು ೧೦ ವರ್ಷ ಕಳೆದರೂ ಮೋದಿ-ಅಮಿತ್ ಶಾ ಜೋಡಿಯನ್ನು ಸೋಲಿಸುವುದು ಕಷ್ಟಸಾಧ್ಯ ಎನ್ನುವ ಪರಿಸ್ಥಿತಿ ಇದೆ. ಈ ಜೋಡಿಯನ್ನು ಸೋಲಿಸಲು ಎನ್‌ಡಿಎ ಹೊರತಾದ ಎಲ್ಲಾ ಪಕ್ಷಗಳನ್ನು ಜತೆ ಸೇರಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯ ಮೈತ್ರಿಕೂಟ ರಚನೆ ಮಾಡಿಕೊಂಡಿದ್ದರೂ ಬಿಜೆಪಿಯಿಂದ ಗೆಲುವು ಕಸಿದುಕೊಳ್ಳುವುದು ಸುಲಭವಿಲ್ಲ ಎಂಬ ವಾತಾವರಣವೇ ಇದೆ.

ಆದರೆ, ರಾಜ್ಯದಲ್ಲಿ…. ಸೂಕ್ತ ನಾಯಕತ್ವವೇ ಕಾಣಿಸುತ್ತಿಲ್ಲ. ಬಿಜೆಪಿ ಯನ್ನು ಬೆಳೆಸಿ ಅಧಿಕಾರಕ್ಕೆ ತಂದವರಲ್ಲಿ ಪ್ರಮುಖರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್
.ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂಬ ಕಾರಣಕ್ಕೆ ಅವರನ್ನು ಬದಿಗೆ ಸರಿಸುವ ಪ್ರಯತ್ನಗಳಾಗುತ್ತಿವೆ. ಅನಿವಾರ್ಯ ಪರಿಸ್ಥಿತಿ ಬಂದಿರುವುದರಿಂದ
ಅವರನ್ನು ಓಲೈಸುವ ಪ್ರಯತ್ನಗಳಾಗುತ್ತಿವೆಯಾ ದರೂ ಪಕ್ಷ ಸಂಘಟನೆಗೆ ಪೂರ್ಣ ಸಹಕಾರ ಉಳಿದವರಿಂದ ಸಿಗುತ್ತಿಲ್ಲ. ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಮುಂದಾದರಾದರೂ ಅದಕ್ಕೆ ಅವಕಾಶ ನೀಡಲಿಲ್ಲ. ವಿಧಾನಸಭೆ ಚುನಾವಣೆ ಸಮೀಪಿಸಿದಾಗ ಮತ್ತೆ ಅವರನ್ನು ಕರೆದು ಅವರ ಮಾರ್ಗದರ್ಶನದಲ್ಲೇ ಚುನಾವಣೆಗೆ ಹೋಗುವುದಾಗಿ ನಿರ್ಧಾರ ಕೈಗೊಳ್ಳಲಾಯಿತಾದರೂ ಎಲ್ಲರೂ ಅವರ ಜತೆಗೆ ನಿಲ್ಲಲಿಲ್ಲ. ಟಿಕೆಟ್ ಹಂಚಿಕೆ ಸೇರಿದಂತೆ
ಬಹುತೇಕ ನಿರ್ಧಾರಗಳನ್ನು ಕೈಗೊಳ್ಳುವಾಗ ಅವರ ಮಾತಿಗೆ ಮನ್ನಣೆ ಸಿಗಲಿಲ್ಲ. ಇದರ ಪರಿಣಾಮ ಬಿಜೆಪಿಯ ವೋಟ್‌ಬ್ಯಾಂಕ್ ಆಗಿದ್ದ ಲಿಂಗಾಯತ ಮತಗಳು ವಿಭಜನೆಯಾದವು.

ಮೀಸಲು ವಿಚಾರದಲ್ಲಿ ಬಿಜೆಪಿ ಸರಕಾರ ತೆಗೆದುಕೊಂಡ ಕೆಲವೊಂದು ತೀರ್ಮಾನಗಳು ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ಮತಗಳೂ ಬಿಜೆಪಿಯಿಂದ ದೂರವಾಗುವಂತೆ ಮಾಡಿತು. ಜತೆಗೆ ಸರಕಾರದ ವಿರುದ್ಧದ ಭ್ರಷ್ಟಾಚಾರ, ಅಕ್ರಮ ಪ್ರಕರಣಗಳಿಂದಾಗಿ ಪಕ್ಷ ಅಧಿಕಾರ ಕಳೆದುಕೊಳ್ಳುವಂತಾಯಿತು.
ಪಕ್ಷ ಅಧಿಕಾರ ಕಳೆದುಕೊಂಡ ಮೇಲಾದರೂ ಪರಿಸ್ಥಿತಿ ಸುಧಾರಿಸಬಹುದು ಎಂಬ ಮಾತು ಇದೀಗ ಸುಳ್ಳಾಗಿದೆ. ಯಡಿಯೂರಪ್ಪ ಅವರನ್ನು ಒಪ್ಪಿಕೊಂಡು
ಸಂಘಟನೆ ಬಲಪಡಿಸಲು ವರಿಷ್ಠರಾಗಲಿ, ಪಕ್ಷದ ಕೆಲವು ನಾಯಕರಾಗಲಿ ಸಿದ್ಧರಿಲ್ಲ.

ಹಾಗೆಂದು ಪರ್ಯಾಯ ನಾಯಕರನ್ನು ಬೆಳೆಸುವ ಪ್ರಯತ್ನಗಳೂ ನಡೆಯುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅವಧಿ ೨೦೨೨ರ
ಆಗಸ್ಟ್‌ನಲ್ಲೇ ಮುಗಿದಿತ್ತು. ಹೀಗಾಗಿ ವಿಧಾನಸಭೆ ಚುನಾವಣೆವರೆಗೆ ಅವರನ್ನು ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಯಿತು. ಚುನಾವಣೆ ಸೋಲಿನ ಬಳಿಕ ನೈತಿಕ ಹೊಣೆ ಹೊತ್ತು ನಳಿನ್ ಕುಮಾರ್ ಕಟೀಲ್ ರಾಜೀನಾಮೆ ನೀಡಲು ಮುಂದಾದರೂ ಹೊಸ ಅಧ್ಯಕ್ಷರ ಆಯ್ಕೆವರೆಗೆ ಮುಂದುವರಿಯುವಂತೆ ಸೂಚಿಸಲಾಯಿತು.

ಆದರೆ, ಇನ್ನೂ ಹೊಸ ಅಧ್ಯಕ್ಷರ ನೇಮಕ ಆಗಿಲ್ಲ. ಮತ್ತೊಂದೆಡೆ ಶಾಸಕರನ್ನು ಒಟ್ಟಾಗಿ ಕರೆದೊಯ್ಯಲು ಶಾಸಕಾಂಗ ಪಕ್ಷದ ನಾಯಕನನ್ನು ನೇಮಿಸುವ
ಕೆಲಸವೂ ಆಗಿಲ್ಲ. ವಿಧಾನಸಭೆ ಮತ್ತು ವಿಧಾನ ಪರಿಷತ್‌ಗಳಲ್ಲಿ ಪ್ರತಿಪಕ್ಷ ನಾಯಕರಿಲ್ಲದೆ ಶಾಸಕರನ್ನು ಒಟ್ಟಾಗಿ ಕರೆದೊಯ್ಯಲು ಯಾರೂ ಇಲ್ಲದಂತಾಗಿದೆ. ಮತ್ತೊಂದೆಡೆ ರಾಜ್ಯಾಧ್ಯಕ್ಷರೂ ಬದಲಾವಣೆಯ ಗುಂಗಿನಲ್ಲಿರುವುದರಿಂದ ರಾಜ್ಯ ಘಟಕಕ್ಕೂ ನಾಯಕತ್ವದ ಕೊರತೆ ಕಾಡುತ್ತಿದೆ. ರಾಜ್ಯ ಬಿಜೆಪಿಯ ಈ ಅಸಹಾಯಕ ಪರಿಸ್ಥಿತಿ ಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಮುಖಂಡರಿಗೆ ಗಾಳ ಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಈ ರೀತಿ ಬರುವ ಮುಖಂಡರಿಗೆ ಸೂಕ್ತ ಸ್ಥಾನಮಾನ ನೀಡುವುದಕ್ಕಿಂತಲೂ ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಕಾಂಗ್ರೆಸ್‌ನ ಮೂಲ ಉದ್ದೇಶ. ಈ ಕಾರಣಕ್ಕಾಗಿ ಬಿಜೆಪಿಯಿಂದ ಬಂದಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ಈ ತಂತ್ರಕ್ಕೆ ಬಲಿ ಯಾಗಿರುವ ಅವರಿಬ್ಬರೂ ಹಿಂದೆ ಬಿಜೆಪಿ ಯಲ್ಲಿದ್ದಾಗ ಮಾಡಿದ ಸಂಘಟನೆ ಕೆಲಸಕ್ಕಿಂತಲೂ
ಚುರುಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷ ತೊರೆಯಲು ಮುಂದಾಗಿರುವ ಮುಖಂಡರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾದ ನಾಯಕತ್ವದ ಕೊರತೆ ಬಿಜೆಪಿಯನ್ನು ಕಾಡುತ್ತಿದೆ.

ನಾಯಕತ್ವಕ್ಕೆ ಸೂಕ್ತ ಮತ್ತು ಅರ್ಹ ವ್ಯಕ್ತಿಗಳಿದ್ದರೂ ತಮಗೆ ಆ ಅವಕಾಶವನ್ನು ವರಿಷ್ಠರು ಮಾಡಿಕೊಡುವ ಅನುಮಾನ ಇರುವುದರಿಂದ ಅವರೂ ಕೂಡ ತಮ್ಮ ಪಾಡಿಗೆ ತಾವು ಎನ್ನುವಂತೆ ಹೇಳಿಕೆಗಳಲ್ಲಷ್ಟೇ ಸರಕಾರವನ್ನು ಟೀಕಿಸುತ್ತಾ ಕಾಲ ಕಳೆಯುತ್ತಿದ್ದಾರೆ. ಮತ್ತೊಂದೆಡೆ ಲೋಕಸಭೆ ಚುನಾವಣೆಗಾಗಿ ಪಕ್ಷ ಸಂಘಟನೆ ಮತ್ತು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಜನಜಾಗೃತಿ ಮೂಡಿಸಲು ರಾಜ್ಯ ಪ್ರವಾಸ ನಡೆಸುವುವುದಾಗಿ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುರುಡುಮಲೆ ವಿನಾಯಕ ಸ್ವಾಮಿಯ ಮುಂದೆ ಸಂಕಲ್ಪ ಮಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನೂ ಪ್ರವಾಸ ಆರಂಭಿಸಿಲ್ಲ. ಹೊಸ ನಾಯಕತ್ವ ಬರಲಿ ಎಂಬ ಕಾರಣಕ್ಕಾಗಿ ಅವರು ಪ್ರವಾಸ ವಿಳಂಬ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಅದರ ಹಿಂದೆ ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಉದ್ದೇಶ ಇದ್ದಂತೆ ಕಾಣಿಸುತ್ತದೆ.

ಮತ್ತೊಂದೆಡೆ ಯಡಿಯೂರಪ್ಪ ಅವರು ಮತ್ತೆ ಮುನ್ನಲೆಗೆ ಬಂದರೆ, ಅವರ ಪುತ್ರನಿಗೆ ಸೂಕ್ತ ಸ್ಥಾನಮಾನ ಸಿಕ್ಕಿದರೆ ಮತ್ತೆ ಪಕ್ಷದ ಮೇಲಿನ ಹಿಡಿತ ಕೈತಪ್ಪುತ್ತದೆ ಎಂಬ ಕಾರಣಕ್ಕೆ ಪಕ್ಷದೊಳಗಿನ ಕೆಲವರೇ ಯಡಿಯೂರಪ್ಪ ಅವರ ರಾಜ್ಯ ಪ್ರವಾಸಕ್ಕೆ ಅಡ್ಡಿಪಡಿಸುತ್ತಿದ್ದಾರೆ. ವರಿಷ್ಠರಿಂದ ಹಸಿರು ನಿಶಾನೆ ಸಿಗದಂತೆ  ನೋಡಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಜೆಡಿಎಸ್ ಜತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ವರಿಷ್ಠರು ನಿರ್ಧರಿಸಿ ಜೆಡಿಎಸ್ ನಾಯಕ ರೊಂದಿಗೆ ಮಾತುಕತೆ ನಡೆಸಿದ್ದಾರಾದರೂ ಇದುವರೆಗೂ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿಲ್ಲ, ಮಾಡುವ ಸಾಧ್ಯತೆಯೂ ಇಲ್ಲ.

ಈ ಎಲ್ಲಾ ಸಮಸ್ಯೆಗಳಿಗೂ ಕಾರಣ ರಾಜ್ಯ ಬಿಜೆಪಿಯಲ್ಲಿ ಪಕ್ಷವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ನಾಯಕತ್ವದ ಕೊರತೆ. ಇದರಿಂದಾಗಿ ತಮ್ಮ ಮಾತೇ ವೇದವಾಕ್ಯ ಎಂಬಂತೆ ಬಿಜೆಪಿ ವರಿಷ್ಠರು ನಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಬಲಿಷ್ಠ ನಾಯಕ ಇಲ್ಲದ ಕಾರಣ ನಿಮ್ಮನ್ನು ಪರಿಗಣಿಸದಿದ್ದರೂ ಏನೂ ಆಗುವುದಿಲ್ಲ ಎನ್ನುವಂತಿದ್ದಾರೆ. ರಾಜ್ಯಾಧ್ಯಕ್ಷ, ಶಾಸಕಾಂಗ ಪಕ್ಷದ ನಾಯಕನನ್ನು ನೇಮಿಸುವ ವಿಚಾರದಲ್ಲೂ ಇದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಇದರ ಪರಿಣಾಮ
ಪಕ್ಷಾಂತರ ಹೆಚ್ಚಾಗಿ ಬಿಜೆಪಿ ಸಂಘಟನೆ ಕ್ಷೀಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಲಾಸ್ಟ್ ಸಿಪ್: ನಾಯಕರಾಗುವ ಯೋಗ್ಯತೆ ಇಲ್ಲದಿದ್ದರೆ ಇರುವ ನಾಯಕರನ್ನು ಒಪ್ಪಿಕೊಳ್ಳುವ ಮನಸ್ಥಿತಿಯಾದರೂ ಇರಬೇಕು.

Leave a Reply

Your email address will not be published. Required fields are marked *

error: Content is protected !!