Sunday, 23rd June 2024

ಹೊಸ ತಳವನ್ನು ತಲುಪಿರುವ ಪ್ರಚಾರ ವೈಖರಿ !

ಶಶಾಂಕಣ

shashidhara.halady@gmail.com

ಇವಿಎಂ ಬರುವ ಮುಂಚೆ, ಕೆಲವು ಮತಗಟ್ಟೆಗಳಲ್ಲಿ ಮತಗಳನ್ನು ಸಾಮೂಹಿಕವಾಗಿ ಚಲಾಯಿಸಿದ ವರದಿಗಳು ಬರುತ್ತಿದ್ದವು. ಆದರೆ, ಅವು ತನಿಖೆಗೆ ಒಳಪಡುತ್ತಿರಲಿಲ್ಲ. ಒಳಪಟ್ಟರೂ, ಋಜುವಾತಾಗುತ್ತಿರಲಿಲ್ಲ. ಕರ್ತವ್ಯನಿರತ ಸರಕಾರಿ ಅಧಿಕಾರಿಗಳನ್ನು ಆಡಳಿತಾರೂಢ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿಯೋ ಅನಧಿಕೃತವಾಗಿಯೋ ಬಳಸಿಕೊಳ್ಳುವುದು ಅಪರೂಪ ಎನಿಸಿರಲಿಲ್ಲ.

ಮತಪತ್ರಗಳನ್ನು (ಬ್ಯಾಲಟ್ ಪೇಪರ್) ಉಪಯೋಗಿಸಿ ಮತ ಚಲಾಯಿಸುತ್ತಿದ್ದ ದಿನಗಳು ಅವು. ಒಬ್ಬ ವ್ಯಕ್ತಿ ತೂರಾಡುತ್ತಲೇ, ಮತಗಟ್ಟೆಯನ್ನು ಪ್ರವೇಶಿಸಿದ- ಆ ಸಂಜೆ ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಂತಿದ್ದ ಹಲವರ ಸ್ಥಿತಿಯೂ ಅದೇ ಇತ್ತು. ಆತನ ಕೈಗೆ ಮತಪತ್ರವನ್ನು, ಮುದ್ರೆ ಒತ್ತಲು ಒಂದು ಮರದ ಸೀಲನ್ನು ಸಹ ನೀಡಲಾಯಿತು. ‘ಗುಪ್ತ ಮತದಾನ’ಕ್ಕೆ ಅವಕಾಶ ನೀಡಲಾಗಿದ್ದ ಒಂದು ಮೂಲೆಗೆ ಆತ ಹೋಗಿ ನಿಂತ. ಮುಂದೇನು ಮಾಡಬೇಕೆಂದು ಆತನಿಗೆ ಆ ಕ್ಷಣದಲ್ಲಿ ಹೊಳೆಯಲಿಲ್ಲ ಎಂದು ಕಾಣುತ್ತದೆ. ಮತಪತ್ರವನ್ನು ಮತ್ತು ಮುದ್ರೆ ಒತ್ತಬೇಕಾದ ಸೀಲನ್ನು ಕೈಯಲ್ಲಿ ಹಿಡಿದು,
ಅತ್ತಿತ್ತ ನೋಡುತ್ತಾ ನಿಂತ. ಕೊನೆಗೆ, ಮತದಾನ ಪ್ರಕ್ರಿಯೆ ನಡೆಸಲು ಬಂದಿದ್ದ ಒಬ್ಬರು ಸಿಬ್ಬಂದಿ ಆತನ ಬಳಿಗೆ ಹೋಗಿ ‘ಈ ಪತ್ರದ ಮೇಲೆ ಇರುವ ಅಭ್ಯರ್ಥಿಗಳಲ್ಲಿ ಯಾವ ಅಭ್ಯರ್ಥಿಗೆ ಮತ ನೀಡಬೇಕು ಎಂದು ನಿನ್ನ ಆಸೆ ಇದೆಯೋ, ಅವರ ಚಿಹ್ನೆಯ ಮೇಲೆ ಮುದ್ರೆ ಒತ್ತು’ ಎಂದು ಮಾರ್ಗ ದರ್ಶನ ಮಾಡಿ, ವಾಪಸು ಬಂದು ತಮ್ಮ ಜಾಗದಲ್ಲಿ ಕುಳಿತರು. ಮದ್ಯದ ನಶೆಯಲ್ಲಿದ್ದ ಆ ವ್ಯಕ್ತಿ, ಕೊನೆಗೂ ನಿಧಾನವಾಗಿ ತನ್ನ ‘ಗುಪ್ತ ಮತದಾನ’ ಮಾಡಿ,
ಮುದ್ರೆಯನ್ನು ಒತ್ತಿ, ಮತ ಪತ್ರವನ್ನು ಅಲ್ಲಿದ್ದ ಡಬ್ಬಿಗೆ ಹಾಕಿದ. ಸಣ್ಣಗೆ ತೂರಾಡುತ್ತಿದ್ದ ಆ ವ್ಯಕ್ತಿಗೆ ತನ್ನ ಅಭ್ಯರ್ಥಿಯ ಚಿಹ್ನೆ ಗೊತ್ತಾಯಿತೋ, ಇಲ್ಲವೋ ಎಂದು ಗೊತ್ತಾಗಲಿಲ್ಲ!

ಅವನ ನಂತರ ಮತ ಚಲಾಯಿಸಲು ಬಂದ ಕೆಲವರು ಸಹ ಸಾರಾಯಿ ಸೇವಿಸಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿತ್ತು; ಆದರೂ, ಅವರು ಆ ವ್ಯಕ್ತಿಯಷ್ಟು ‘ಖರಾಬು’ ಸ್ಥಿತಿಯಲ್ಲಿರಲಿಲ್ಲ. ಅಂತೂ ಇಂತೂ ಎಲ್ಲರೂ ‘ಮತದಾನ’ ಮಾಡಿದರು. ಇದನ್ನು ಇಷ್ಟು ನಿಖರವಾಗಿ ಹೇಳಲು ನನಗೆ ಹೇಗೆ ಸಾಧ್ಯವಾಯಿತು ಎಂದು ನೀವು ಪ್ರಶ್ನಿಸಬಹುದು! ಒಳ್ಳೆಯ ಪ್ರಶ್ನೆಯೇ ಸರಿ. ಆ ದಿನ ನಾನು ಆ ಮತಗಟ್ಟೆಯ ಸಿಬ್ಬಂದಿಯಲ್ಲಿ ಒಬ್ಬನಾಗಿದ್ದೆ! ನಾವು ಐವರು, ಸರಕಾರದ
ಪ್ರತಿನಿಧಿಗಳಾಗಿ, ಮತದಾನ ನಡೆಸಲು ಆ ಹಳ್ಳಿಗೆ ಹೋಗಿದ್ದೆವು. ಅರಸೀಕೆರೆ ತಾಲೂಕಿನ ಹೆಬ್ಬಳ್ಳಿ ಎಂಬ ಗ್ರಾಮದ ಮತಗಟ್ಟೆ ಅದು. ಜಲ್ಲಿ ಹಾಕಿದ್ದ ರಸ್ತೆ ಸಂಪರ್ಕ ಹೊಂದಿದ್ದ ಪುಟ್ಟ ಹಳ್ಳಿ; ವಿದ್ಯುತ್ ಸಂಪರ್ಕ ಇಲ್ಲದ ಅಲ್ಲಿನ ಶಾಲೆಯಲ್ಲಿದ್ದ ಮತಗಟ್ಟೆಯಲ್ಲಿ ಹಿಂದಿನ ರಾತ್ರಿಯೇ ತಂಗಿ, ರಾತ್ರಿಯ ಊಟದ ಸಮಯದಲ್ಲಿ, ಬ್ರೆಡ್, ಬಿಸ್ಕೆಟ್ ತಿಂದಿದ್ದೆವು. ಬೆಳಗ್ಗೆ ಎದ್ದ ಕೂಡಲೇ ಮಾಡಬೇಕಿದ್ದ ಮುಖಮಾರ್ಜನ ಮತ್ತು ಇತರ ಕೆಲಸಗಳಿಗೆ, ಊರಂಚಿನಲ್ಲಿ ರುವ
ತೋಟಕ್ಕೆ ಹೋಗಬೇಕಾದ ಅನಿವಾರ್ಯತೆ.

ಊರಿನ ಅದಾರೋ ಒಬ್ಬರು ದೊಡ್ಡ ತಪ್ಪಲೆಯಲ್ಲಿ ಉಪ್ಪಿಟ್ಟು ತಂದುಕೊಟ್ಟು ಹೋಗಿದ್ದರು; ಮಧ್ಯಾಹ್ನದ ಊಟಕ್ಕೂ ಅದೇ ಗತಿ! ಸಂಜೆ ಮೂರು ಗಂಟೆಯ ನಂತರ, ಮತ ಚಲಾಯಿಸಲು ನಿಂತಿದ್ದ ಸರದಿ ಒಮ್ಮೆಗೇ ಬೆಳೆದಿತ್ತು! ಅಷ್ಟು ಹೊತ್ತು ಇಲ್ಲದೇ ಇದ್ದ ಸರದಿ ಈಗೇಕೆ ಬೆಳೆಯಿತು? ಅವರಲ್ಲಿ ಕೆಲವರಾದರೂ ಖೊಟ್ಟಿ ಮತದಾನ ಮಾಡಲು ಬಂದಿರಬೇಕು ಎಂದು ನಮಗೆ ಅನಿಸುತ್ತಿತ್ತು. ಆದರೆ ಪರಿಶೀಲಿಸುವ ಮಾರ್ಗ ಇರಲಿಲ್ಲ. ಆಗಿನ್ನೂ ವೋಟರ್ ಐಡಿ ವ್ಯವಸ್ಥೆ ಬಂದಿರಲಿಲ್ಲ. ಸಂಜೆಯ ಹೊತ್ತಿನಲ್ಲಿ ಒಳಗೆ ಮತ ಚಲಾಯಿಸಲು ಬರುತ್ತಿದ್ದ ಹೆಚ್ಚಿನವರು ಮದ್ಯ ಸೇವಿಸಿದ ವಾಸನೆ ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.

ಆದರೇನು ಮಾಡುವುದು? ಮತದಾನ ಎಂಬ ‘ಪವಿತ್ರ ಕರ್ತವ್ಯ’ವನ್ನು ಪೂರೈಸಲು ಬಂದಿದ್ದ ಆ ಹಳ್ಳಿಯ ನಾಗರಿಕರ ಕರ್ತವ್ಯ ನಿಷ್ಠೆಯನ್ನು ಪ್ರಶ್ನಿಸುವ ಅಧಿಕಾರ ನಮಗಿರಲಿಲ್ಲ. ಹೆಸರು, ತಂದೆಯ ಹೆಸರು ಹೇಳಿದ ತಕ್ಷಣ ಅವರ ಕೈಬೆರಳಿಗೆ ಮಸಿಯ ಗುರುತು ಮಾಡಿ, ಮತ ಚಲಾಯಿಸಲು ಅನುವು ಮಾಡಿ ಕೊಡಬೇಕಾಗಿದ್ದು ನಮ್ಮ ಕರ್ತವ್ಯವಾಗಿತ್ತು. ‘ಮತ ಚಲಾಯಿಸಲು ಬಂದವರು ಸಾರಾಯಿಯ ಅಮಲಿನಲ್ಲಿದ್ದಾರೆ, ಆದ್ದರಿಂದ ತಮ್ಮ ಮತವನ್ನು ಯಾರಿಗೆ ಹಾಕಬೇಕು ಎಂಬ ನಿರ್ಣಯ ತೆಗೆದುಕೊ ಳ್ಳುವ ಮಾನಸಿಕ ಸ್ಥಿಮಿತದಲ್ಲಿ ಅವರು ಇಲ್ಲ’ ಎಂದು ನಮಗೆ ಮೇಲ್ನೋಟಕ್ಕೆ ಗೊತ್ತಾಗುತ್ತಿದ್ದರೂ, ಆ
ಕುರಿತು ನಿರ್ಣಯ ತೆಗೆದುಕೊಳ್ಳಲು ಮತಗಟ್ಟೆಯ ಅಧಿಕಾರಿಗೆ ಅಧಿಕಾರವೆಲ್ಲಿತ್ತು? ಆತ ಮದ್ಯ  ಸೇವಿಸಿದ್ದಾರೆಂದು ಪರಿಶೀಲಿಸಿ, ಖಚಿತಪಡಿಸಲು ವೈದ್ಯರು
ಅಲ್ಲಿರಲಿಲ್ಲವಲ್ಲ!

ಆದ್ದರಿಂದ ಸಾರಾಯಿ ಅಮಲಿನಲ್ಲಿದ್ದವರು ಅಡ್ಡಾದಿಡ್ಡಿಯಾಗಿ ಮತವನ್ನು ಚಲಾಯಿಸಿದರೂ, ಅದನ್ನು ಸ್ವೀಕರಿಸಿ ‘ಗುಪ್ತ ಮತದಾನ’ಕ್ಕೆ ಅನುವು ಮಾಡಿಕೊಟ್ಟು, ಸಹಕರಿಸುವುದು ನಮ್ಮ ಕರ್ತವ್ಯವಾಗಿತ್ತು. ಹಗಲಿನಲ್ಲೇ ವಿಪರೀತ ಸಾರಾಯಿ ಸೇವಿಸಿ, ಮತ ಚಲಾಯಿಸಿದ ಹಲವು ವ್ಯಕ್ತಿಗಳನ್ನು ಆ ದಿನ
ನೋಡಿದೆವು. ಇದಾಗಿ ಕೆಲವು ವರ್ಷಗಳ ನಂತರ ಇವಿಎಂ ವ್ಯವಸ್ಥೆಯ ಮೂಲಕ ‘ಗುಪ್ತ ಮತದಾನ’ ನಡೆಸುವ ಪದ್ಧತಿ ನಮ್ಮ ದೇಶದಲ್ಲಿ ಜಾರಿಗೆ ಬಂತು. ಮತ್ತೊಮ್ಮೆ ಚುನಾವಣೆಯ ಸಿಬ್ಬಂದಿಯಾಗಿ ಭಾಗವಹಿಸುವ ಅವಕಾಶ ದೊರಕಿತು. ಈ ಬಾರಿ, ಬೆಂಗಳೂರಿಗೆ ಹತ್ತಿರವಿರುವ ಒಂದು ಹಳ್ಳಿಗೆ ನನ್ನನ್ನು
ನಿಯೋಜಿಸಿದ್ದರು.

ಹಿಂದಿನ ರಾತ್ರಿಯೇ ಆ ಹಳ್ಳಿಯ ಶಾಲೆಯಲ್ಲಿದ್ದ ಮತಗಟ್ಟೆಯಲ್ಲಿ ತಂಗಿದೆವು. ಸೌಕರ್ಯಗಳು ಹಿಂದಿಗಿಂತ ಪರವಾಗಿಲ್ಲ- ವಿದ್ಯುತ್ ಸಂಪರ್ಕವಿತ್ತು. ಬಾತ್ ರೂಂ, ವಾಶ್ ರೂಂ ಇತ್ತು. ಪ್ಯಾಕೆಟ್‌ಗಳಲ್ಲಿ ಇಡ್ಲಿ, ಚಿತ್ರಾನ್ನ ಸರಬರಾಜಾಯಿತು. ಆದರೆ ಬೆಂಗಳೂರಿಗೆ ಒಂದು ಗಂಟೆಯಷ್ಟು ದೂರವಿದ್ದರೂ, ಆ ಹಳ್ಳಿಯಲ್ಲಿ ಅರೆ ಅಕ್ಷರಸ್ಥರಿಗೆ, ಅನಕ್ಷರಸ್ಥರಿಗೆ ಬರವಿರಲಿಲ್ಲ. ಅಲ್ಲಿ ಇವಿಎಂ ಅನ್ನು ಮೊದಲ ಬಾರಿಗೆ ಬಳಕೆ ಮಾಡಲಾಗಿತ್ತು. ಇವಿಎಂ ಬಳಿಗೆ ಬಂದು,
ಅದರ ಸ್ವರೂಪ ಕಂಡು ಕಕ್ಕಾಬಿಕ್ಕಿಯಾದವರಂತೆ ಅತ್ತಿತ್ತ ನೋಡುತ್ತಿದ್ದ ಹಿರಿಯರಿಗೆ, ಮಹಿಳೆಯರಿಗೆ ಕೊರತೆಯಿರಲಿಲ್ಲ. ಅವರ ಗೊಂದಲ ಕಂಡು, ನಮ್ಮ ಮತಗಟ್ಟೆಯ ಅಧಿಕಾರಿಯು ಅವರಿಗೆ ಸಹಾಯ ಮಾಡಲು ಸನಿಹ ಸಾರುತ್ತಿದ್ದರು.

ಇವಿಎಂನ ರಟ್ಟಿನ ಪ್ರತಿಕೃತಿಯನ್ನು ಹಿಡಿದು, ಹತ್ತಿರ ಹೋಗಿ ‘ಈ ರೀತಿ ಒತ್ತಿ, ಇದಕ್ಕೆ ಒತ್ತಿ’ ಎಂದು ಚೌಕಾಕಾರ ಕಾರ್ಡ್‌ಬೋರ್ಡ್ ಮರೆಯಲ್ಲೇ ಮತದಾರ ರಿಗೆ ಮಾರ್ಗ ದರ್ಶನ ನೀಡುತ್ತಿದ್ದರು. ಈ ರೀತಿ ಹಲವರಿಗೆ ಅವರು ಮಾರ್ಗದರ್ಶನ ಮಾಡಿದ ರೀತಿಯನ್ನು ಕಂಡು, ಅಲ್ಲೇ ಇದ್ದ ‘ಚುನಾವಣಾ ವೀಕ್ಷಕ’ರಿಗೆ (ಅವರೂ ಮತಗಟ್ಟೆಯ ಸಿಬ್ಬಂದಿ) ಅನುಮಾನ ಬಂತು. ಅದೇಕೆ ಆ ಅಧಿಕಾರಿಯು ತನ್ನ ಕುರ್ಚಿಯಿಂದ ಎದ್ದು, ಅಷ್ಟು ದೂರ ನಡೆದು ಹೋಗಿ, ಮಾರ್ಗದರ್ಶನ ಮಾಡುತ್ತಿದ್ದಾರೆ ಎಂಬ ಕುತೂಹಲದಿಂದ ಹಿಂಬಾಲಿಸಿ ನೋಡಿದರು. ಮತಗಟ್ಟೆ ಅಧಿಕಾರಿಯು, ಅಮಾಯಕ ಹಳ್ಳಿಯವರಿಗೆ, ಒಂದು ನಿರ್ದಿಷ್ಟ ಚಿಹ್ನೆಯನ್ನು ತೋರಿಸಿ, ಅದಕ್ಕೆ ಮತ ಚಲಾಯಿಸುವಂತೆ ಮಾರ್ಗದರ್ಶನ ನೀಡುತ್ತಿದ್ದ!

ಆ ಚಿಹ್ನೆಯು ಅಂದು ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದ ಪಕ್ಷದ್ದು! ಇದನ್ನು ಗಮನಿಸಿದ ‘ಚುನಾವಣಾ ವೀಕ್ಷಕ’ ಅಧಿಕಾರಿಯು ಎಚ್ಚೆತ್ತುಕೊಂಡು, ‘ಸರ್, ನೀವು ಈ ರೀತಿ ಒಂದು ಪಕ್ಷದ ಚಿಹ್ನೆಯನ್ನು ಮತದಾರರಿಗೆ ತೋರಿಸಿ, ಮಾರ್ಗದರ್ಶನ ನೀಡುವುದು ತಪ್ಪು’ ಎಂದರು. ನಂತರ, ಆ ರೀತಿಯ ಮಾರ್ಗ ದರ್ಶನ ನಿಂತುಹೋ ಯಿತು. ಅಷ್ಟರಲ್ಲಾಗಲೇ ಒಂದು ಗಂಟೆಯ ಅವಽ ಯ ಮತದಾನ ನಡೆದಿತ್ತು; ಆ ಭೂಪನು ಕೆಲವು ಮತಗಳನ್ನಾದರೂ ತನ್ನ ಇಷ್ಟದ ಪಕ್ಷಕ್ಕೆ ಹಾಕಿಸಿದ್ದ! ಆ ದಿನವೂ ಮತ ಚಲಾಯಿಸಲು ಬಂದ ಕೆಲವರು ಮದ್ಯ ಸೇವಿಸಿದ ವಾಸನೆ ಬರುತ್ತಿತ್ತು; ಆದರೆ, ಕಮಕ್, ಕಿಮಕ್ ಎನ್ನದೇ ಅವರಿಂದಲೂ ಮತ ಚಲಾಯಿಸು ವಂತೆ ಮಾಡುವುದು ಮಾತ್ರ ಚುನಾವಣಾ ಸಿಬ್ಬಂದಿಯ ಕರ್ತವ್ಯವಾಗಿತ್ತು, ಅಷ್ಟೆ.

ಇದು ಕೇವಲ ಎರಡು ಸ್ಯಾಂಪಲ್ ಅಷ್ಟೆ. ನಮ್ಮ ದೇಶದ ನಾಗರಿಕರು, ತಮ್ಮ ಅಧಿಕಾರ ಚಲಾಯಿಸುವ, ‘ಗುಪ್ತಮತದಾನ’ವು ಕೆಲವು ಬಾರಿ ಅರ್ಥಕಳೆದು
ಕೊಳ್ಳುತ್ತಿದೆ ಎಂದು ತೋರಿಸುವ ಪುಟ್ಟ ಉದಾಹರಣೆಗಳಿವು. ಬೆಂಗಳೂರು, ಮಂಗಳೂರು ಮೊದಲಾದ ದೊಡ್ಡ ನಗರಗಳಲ್ಲಿ ಸ್ವಲ್ಪವಾದರೂ ಪರವಾಗಿಲ್ಲ. ಆದರೆ, ಹಳ್ಳಿಗಳಲ್ಲಿ, ಹೆಚ್ಚು ಮಾಹಿತಿ ಇಲ್ಲದ ಕೃಷಿ ಕಾರ್ಮಿಕರೇ ತುಂಬಿರುವ ಊರುಗಳಲ್ಲಿ, ಅಮಾಯಕ ಮತದಾರರೇ ಇರುವ ಮತಗಟ್ಟೆಗಳಲ್ಲಿ, ‘ಗುಪ್ತ ಮತ ದಾನ’ವು ಅದೆಷ್ಟು ಮಟ್ಟಿಗೆ ಸಮರ್ಪ ಕವಾಗಿ ನಡೆ ಯುತ್ತಿತ್ತೋ, ನೀವೇ ನಿರ್ಧರಿಸಬಹುದು. ಮದ್ಯದ ಅಮಲಿನಲ್ಲಿ ಮತ
ಚಲಾಯಿಸಲು ಬರುವವರು, ಸೂಕ್ತ ನಿರ್ಧಾರ ತೆಗೆದುಕೊಂಡು ಮತ ಚಲಾಯಿಸುವ ಸ್ಥಿಮಿತ ಹೊಂದಿರುತ್ತಾರೆಯೆ? ಇದಕ್ಕೆ ಯಾರು ಉತ್ತರ ಹೇಳಬೇಕು? ಆ ರೀತಿ ಅವರಿಗೆ ಮದ್ಯವನ್ನು ಸರಬರಾಜು ಮಾಡುವವರು ಯಾರು ಎಂದು ಬಾಯಿಬಿಟ್ಟು ಹೇಳಬೇಕಿಲ್ಲ; ವಿಪರೀತ ಮದ್ಯ ಸೇವಿಸಿದವರು ಚಲಾಯಿ ಸುವ ಮತಗಳು ಸಹ, ಅಭ್ಯರ್ಥಿಯೊಬ್ಬರ ಗೆಲುವಿಗೆ ಪ್ರಮುಖ ಕಾರಣವಾಗಬಲ್ಲವು! ಅಷ್ಟರ ಮಟ್ಟಿಗೆ ಆ ಮತಗಳು ‘ಅಮೂಲ್ಯ’!

ಇವೆರಡು ಘಟನೆಗಳು ನಡೆದು, ಕೆಲವು ವರ್ಷಗಳೇ ಆದವು, ಬಿಡಿ; ೨೦೧೯ರ ಚುನಾವಣೆಯ ಸಮಯದಲ್ಲಿ ನಡೆದ ಘಟನೆಯನ್ನು ಹೇಳುತ್ತೇನೆ. ನಮ್ಮ ರಾಜ್ಯದ ‘ಬುದ್ಧಿವಂತರ ಜಿಲ್ಲೆ’ ಎಂದೇ ಹೆಸರಾದ ಕರವಾಳಿಯ ಜಿಲ್ಲೆಯೊಂದರ ಪುಟ್ಟ ಹಳ್ಳಿ; ಸುತ್ತಲೂ ನದಿಯಿಂದ, ದಟ್ಟವಾಗಿ ಬೆಳೆದ ಮರಗಳಿಂದ ತುಂಬಿದ ಸುಂದರ ತಾಣವದು. ಅಲ್ಲಿನ ಬಹುತೇಕ ಜನರು ಸಜ್ಜನರು; ಕ್ಷುಲ್ಲಕ ರಾಜಕೀಯ, ಕಪಟ, ವಂಚನೆಗಳಿಂದ ದೂರವಿರುವವರು. ಮತದಾನದ ಹಿಂದಿನ ರಾತ್ರಿ, ಅಲ್ಲಿದ್ದ ನಮ್ಮ ಬಂಧುಗಳ ಮನೆಗೆ ಪಕ್ಷವೊಂದರ ಕಾರ್ಯಕರ್ತರು ಬಂದರು, ‘ನಮಸ್ತೆ ಅಯ್ಯ. ನಿಮ್ಮ ವೋಟು ದಯವಿಟ್ಟು ನಮಗೇ
ಕೊಡಿ’ ಎಂದರು. ಮನೆಯೊಡೆಯರು ‘ಖಂಡಿತ’ ಎಂದರು.

ವಾಪಸು ಹೊರಟ ಕಾರ್ಯಕರ್ತರ ಪೈಕಿ ಇಬ್ಬರು, ತುಸು ದೂರ ನಡೆದು ವಾಪಸು ಬಂದು, ಮನೆಯೊಡೆಯರ ಕೈಗೆ ಮತ್ತು ಅವರ ಮಡದಿಯ ಕೈಗೆ
ತಲಾ ೫೦೦ ರುಪಾಯಿಯ ಒಂದೊಂದು ನೋಟನ್ನು ಇಟ್ಟು ಕೈಮುಗಿದರು. ‘ಇದು ಎಂತಕೆ?’ ಎಂದು ಕೇಳಿದ್ದಕ್ಕೆ, ‘ ಸುಮ್ಮನೆ, ಇಟ್ಟುಕೊಳ್ಳಿ’ ಎಂದರು.
ಆ ಮನೆಯೊಡೆಯರು ಅದೆಷ್ಟು ಅಮಾಯಕ ರೆಂದರೆ, ನೋಟನ್ನು ಕೈಯಲ್ಲಿ ಹಿಡಿದು, ಅತ್ತಿತ್ತ ತಿರುಗಿಸಿ ನೋಡಿ ಬೆರಗಾದವರಂತೆ, ‘ನಾಳೆ ವೋಟು, ಇವತ್ತು ನೀವು ನಮಗೆ ದುಡ್ಡು ಕೊಟ್ಟರೆ, ನಾವು ತೆಗೆದುಕೊಳ್ಳಬಹುದೆ? ತಪ್ಪಾಗುವುದಿಲ್ಲವೆ?’ ಎಂದು ಕಾರ್ಯಕರ್ತರನ್ನೇ ಪ್ರಶ್ನಿಸಿದರು! ಅದಕ್ಕೆ ಕಾರ್ಯ ಕರ್ತರು ‘ಹೇ ಪರವಾಗಿಲ್ಲ, ಏನೂ ತೊಂದರೆ ಇಲ್ಲ, ಇಟ್ಟುಕೊಳ್ಳಿ’ ಎಂದು ಧೈರ್ಯ ತುಂಬಿ, ಮುಂದಿನ ಮನೆಯತ್ತ ನಡೆದರು.

ಕರಾವಳಿಯ ಆ ಪುಟ್ಟ ಹಳ್ಳಿಯ ಲ್ಲಿರುವ ಆ ಮಹನೀಯರಿಗೆ ಇದೇ ಮೊದಲ ಬಾರಿ, ಪಕ್ಷವೊಂದರ ಕಾರ್ಯಕರ್ತರು ಚುನಾವಣೆಯ ಮುಂಚಿನ ದಿನ ಹಣ ಹಂಚಿದ್ದರು! ಈ ವಿಚಾರವನ್ನು ಅವರು ನನ್ನೊಂದಿಗೆ ಹಂಚಿಕೊಂಡಾಗ, ನಾನು ಅವರನ್ನು ಕಿಚಾಯಿಸಲು ‘ಬರೇ ೫೦೦ ಮಾತ್ರವೆ? ಇಲ್ಲಿ ಬೆಂಗಳೂರಿಗೆ ಹತ್ತಿರವಿರುವ ಒಂದು ಹಳ್ಳಿಯಲ್ಲಿ ಒಬ್ಬೊಬ್ಬರಿಗೆ ೨೦೦೦ ಕೊಟ್ಟಿದ್ದಾರೆ’ ಎಂದೆ. ಅವರು ಇನ್ನಷ್ಟು ಬೆರಗುಗೊಂಡು, ಹಣೆ ಚಚ್ಚಿಕೊಂಡರು. ನಮ್ಮ ದೇಶದ ಚುನಾವಣಾ ಕಾಲದಲ್ಲಿ ನಡೆಯುವ ವಿದ್ಯಮಾನಗಳನ್ನು ಗಮನಿಸುತ್ತಾ ಹೋದರೆ, ಇಂಥ ಹಲವು ಘಟನೆಗಳನ್ನು ಗುರುತಿಸಲು ಸಾಧ್ಯ. ಇವಿಎಂ
ಬರುವ ಮುಂಚೆ, ಕೆಲವು ಮತಗಟ್ಟೆಗಳಲ್ಲಿ ಮತಗಳನ್ನು ಸಾಮೂಹಿಕವಾಗಿ ಚಲಾಯಿಸಿದ ವರದಿಗಳು ಬರುತ್ತಿದ್ದವು.

ಆದರೆ, ಅವೆಲ್ಲಾ ವರದಿಗಳು ತನಿಖೆಗೆ ಒಳಪಡುತ್ತಿರಲಿಲ್ಲ. ತನಿಖೆಗೆ ಒಳಪಟ್ಟರೂ, ಋಜುವಾತಾಗುತ್ತಿರಲಿಲ್ಲ. ಕರ್ತವ್ಯ ನಿರತ ಸರಕಾರಿ ಅಧಿಕಾರಿಗಳನ್ನು
ಆಡಳಿತಾರೂಢ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿಯೋ ಅನಽಕೃತವಾಗಿಯೋ ಬಳಸಿಕೊಳ್ಳುವುದು ಅಪರೂಪ ಎನಿಸಿರಲಿಲ್ಲ. ಅದು ಅಕ್ರಮ; ಆದರೆ ಋಜುವಾತು ಮಾಡಲು ಕಷ್ಟ ಎನಿಸಿತ್ತು. ೧೯೭೦ರ ದಶಕದಲ್ಲಿ ಇಂಥ ಒಂದು ಅಕ್ರಮವು ಅಲಹಾಬಾದ್ ನ್ಯಾಯಾಲಯದಲ್ಲಿ ಋಜು ವಾತು ಗೊಂಡಿತು; ಇದು ಒಂದು ಐತಿಹಾಸಿಕ ದಾಖಲೆ. ಇದರ ಫಲವಾಗಿ, ೧೯೭೫ರಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾಗುವಂತಾಯಿತು.

ಇದರಿಂದಾಗಿ, ೧೯೭೭ ರಲ್ಲಿ ಮೊದಲ ಬಾರಿ, ದೇಶದ ರಾಜಕೀಯ ಬದಲಾಯಿತು; ಅದುವರೆಗೆ ವಿರೋಧ ಪಕ್ಷದಲ್ಲಿದ್ದವರು, ಅದೇ ಮೊದಲ ಬಾರಿಗೆ ಅಧಿಕಾರ ಹಿಡಿದರು. ಮೂರು ದಶಕಗಳ ಕಾಲ ಅಽಕಾರ ಹಿಡಿದಿದ್ದ ಪಕ್ಷವು ಮೊದಲ ಬಾರಿ ಅಧಿಕಾರ ಕಳೆದುಕೊಂಡಿತು. ಬಹುಶಃ, ಇದೊಂದು ಐತಿಹಾ ಸಿಕ ಘಟನೆ ನಡೆಯದೇ ಇದ್ದರೆ, ಇಂದಿಗೂ ಆ ಒಂದು ಪಕ್ಷವು ಕೇಂದ್ರದಲ್ಲಿ ಆಡಳಿತವನ್ನು ಮುಂದುವರಿಸುತ್ತಿತ್ತೇನೊ! ಅದಿರಲಿ, ಈ ವರ್ಷ ನಡೆಯು ತ್ತಿರುವ ಚುನಾವಣೆಗಳು ಹೊಸ ಮಜಲನ್ನು ತಲುಪಿವೆ; ಒಂದು ರೀತಿಯಲ್ಲಿ, ಹೊಸ ತಳವನ್ನೂ ತಲುಪಿವೆ! ‘ಚೊಂಬು’, ‘ಪಿಕ್‌ಪಾಕೆಟ್’ ಇವು
ಎದುರಾಳಿಯನ್ನು ದೂರಲು ಬಳಕೆಯಾದ ಪದಗಳು! ಎಲ್ಲರೂ ಸಭ್ಯತೆಯನ್ನು ಮರೆತಂತಿದೆ.

ಅದೇನೇ ಇದ್ದರೂ, ಚುನಾವಣೆಯ ಮಹತ್ವವನ್ನು ಅಲ್ಲಗಳೆಯಲಾಗದು. ಪ್ರತಿ ನಾಗರಿಕನ ಪ್ರತಿಯೊಂದು ಮತವೂ ಪವಿತ್ರ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ನಮ್ಮದು. ಇಷ್ಟೊಂದು ಸಂಖ್ಯೆಯ ಮತದಾರರು ನಿರ್ಭೀತರಾಗಿ ಮತ ಚಲಾಯಿಸುವ ಬೇರೊಂದು ದೇಶ ಜಗತ್ತಿನಲ್ಲೇ ಇಲ್ಲ! ಅದೇ ಭಾರತದ ಹೆಮ್ಮೆ. ಆದ್ದರಿಂದ, ಮತ ಚಲಾಯಿಸಲು ಮರೆಯಬೇಡಿ.

(ಕೆಲವು ಘಟನೆ, ಊರುಗಳು ಕಾಲ್ಪನಿಕವೆಂದೇ ತಿಳಿಯಬೇಕು).

Leave a Reply

Your email address will not be published. Required fields are marked *

error: Content is protected !!