Saturday, 27th July 2024

ಕಾವೇರಿಗಾಗಿ ಹಾಹಾಕಾರ!

ಕಳಕಳಿ

ಗೋಪಾಲಕೃಷ್ಣ ಭಟ್.ಬಿ

ಬೆಂಗಳೂರು ನಗರ ಅತಿಶೀಘ್ರವಾಗಿ ಬೆಳೆಯುತ್ತಿದೆ. ಕಾರಣ, ನಮ್ಮ ರಾಜ್ಯದವರನ್ನಷ್ಟೇ ಅಲ್ಲದೆ, ದೇಶದ ನಾನಾ ಭಾಗ ಗಳ ನಿವಾಸಿಗಳನ್ನೂ ಇದು ಸೆಳೆಯುತ್ತಿದೆ. ಮಹಾನಗರಿಯ ಹೊರ ವಲಯವು ಕ್ಷಿಪ್ರಗತಿಯಲ್ಲಿ, ಯೋಜಿತವಲ್ಲದ ರೀತಿಯಲ್ಲಿ ಬೆಳೆದು ಜನಸಂಖ್ಯೆಗೆ ಮತ್ತಷ್ಟು ಸೇರ್ಪಡೆ ಆಗುತ್ತಲಿದೆ. ಇದರಿಂದಾಗಿ ಮೂಲಸೌಕರ್ಯಗಳನ್ನು ಕಲ್ಪಿಸುವುದು ಕಷ್ಟವಾಗಿದೆ. ಪ್ರಮುಖವಾಗಿ ನೀರು ಸರಬರಾಜು ವ್ಯವಸ್ಥೆ ಮೇಲೆ ಅಧಿಕ ಒತ್ತಡ ಉಂಟಾಗುತ್ತಿದೆ.

ಜಲಮಂಡಳಿಯವರ ಲೆಕ್ಕಾಚಾರದಂತೆ ಈ ಬಾರಿಯ ಬೇಸಗೆಗೆ ಒಟ್ಟಾರೆಯಾಗಿ ಜುಲೈ ಅಂತ್ಯದವರೆಗೆ ೯.೪೮ ಟಿಎಂಸಿ ನೀರು ಅವಶ್ಯಕತೆಯಿದೆ. ನಾಲ್ಕು ಹಂತಗಳಲ್ಲಿ ಆ ತನಕ ಕಾವೇರಿ ನದಿಯಿಂದ ಬೆಂಗಳೂರು ನಗರಕ್ಕೆ ಸರಬರಾಜು ಆಗುವ ನೀರಿನ ಪ್ರಮಾಣ ೯೦೦ ದಶಲಕ್ಷ ಲೀಟರ್. ಬೇಸಗೆ ಮುಂದು ವರಿದಂತೆ ನೀರಿನ ಬವಣೆ ತೀವ್ರ ವಾಗುವುದರ ಜತೆಗೆ ಬೇಡಿಕೆಯೂ ಹೆಚ್ಚಾಗುತ್ತದೆ. ಹೀಗಾಗಿ ಜನರಿಗೆ ಕುಡಿಯುವ ಉದ್ದೇಶಕ್ಕೆ ಆದ್ಯತೆ ನೀಡಿ ನೀರನ್ನು ವ್ಯವಸ್ಥಿತವಾಗಿ ಒದಗಿಸಲು ಸಿದ್ಧತೆ ನಡೆಯುತ್ತಿದೆ. ಕಾವೇರಿ ನದಿ ಪಾತ್ರದ ಕೆಆರ್ ಎಸ್ ಮತ್ತು ಕಬಿನಿಯಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣದ ಮಾಹಿತಿ ಪಡೆದುಕೊಂಡಿ ರುವ ಜಲಮಂಡಳಿ, ನಗರದ ವಿವಿಧ ಪ್ರದೇಶ ಗಳಿಗೆ ಆದ್ಯತೆಯ ಮೇರೆಗೆ ಹೇಗೆ ನೀರು ಪೂರೈಸಬೇಕು ಎಂಬ ಬಗ್ಗೆ ಯೋಜಿಸು ತ್ತಿದೆ.

ನಗರದ ಒಟ್ಟು ೨೫೭ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತಲೆದೋರಲಿದೆ ಎಂಬುದು ಜಲಮಂಡಳಿ ಯವರ ಅಂದಾಜು. ಹೀಗಾಗಿ ಈ ಪ್ರದೇಶಗಳಿಗೆ ತುರ್ತು ಸಂದರ್ಭಗಳಲ್ಲಿ ನೀರು ಒದಗಿಸಲು ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಜನರು ಟ್ಯಾಂಕರ್ ಮೂಲಕ ಪೂರೈಕೆಯಾಗುವ ನೀರಿನ ಮೇಲೆ ಅವಲಂಬಿತರಾಗಿದ್ದು, ಟ್ಯಾಂಕರ್ ನೀರಿನ ದರ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಮುಂದಿನ ದಿನಗಳಲ್ಲಿ ಈ ದರ ಎಲ್ಲಿ ನಿಲ್ಲಬಹುದು ಎಂಬುದನ್ನು ಕಾದು ನೋಡಬೇಕಷ್ಟೇ! ಮಾನವ ಸಂಕುಲದ ಉಳಿವಿಗೆ ಅತ್ಯಗತ್ಯವಾಗಿರುವ ನೀರು ಒಂದು ಅನನ್ಯ ನೈಸರ್ಗಿಕ ಸಂಪನ್ಮೂಲ. ಶಕ್ತಿ ಸಂಪನ್ಮೂಲಗಳಿಗೆ ಅನೇಕ ಪರ್ಯಾಯಗಳಿವೆ; ಆದರೆ ನೀರಿಗೆ ಅಂಥ ಯಾವುದೇ ಪರ್ಯಾಯ ಗಳಿಲ್ಲ. ಭೂಮಿಯ ಮೇಲ್ಮೈನ ಶೇ.೭೧ರಷ್ಟು ಭಾಗ ನೀರಿನಿಂದ ಆವೃತವಾಗಿದ್ದರೂ, ಸುಮಾರು ಶೇ.೩ರಷ್ಟು ನೀರು ಮಾತ್ರ ಕುಡಿಯಲು ಯೋಗ್ಯವಾಗಿದೆ. ಆದ್ದರಿಂದ ನಾವು ನೀರನ್ನು ಕಲುಷಿತ ಗೊಳಿಸಬಾರದು. ಮಾಧ್ಯಮಗಳ ವರದಿಯಂತೆ ಕಾವೇರಿ ನದಿನೀರಿನ ಗುಣಮಟ್ಟದಲ್ಲಿ ಕುಸಿತವಾಗುತ್ತಿದೆ. ಸಂಸ್ಕರಿಸದ ತ್ಯಾಜ್ಯಗಳು ನದಿಗೆ ಸೇರ್ಪಡೆಯಾಗುತ್ತಿರುವುದು ಮಾತ್ರವಲ್ಲದೆ, ಕಾವೇರಿ ನದಿತೀರದ ಅರಣ್ಯ ಪ್ರದೇಶದ ಪ್ರಮಾಣದಲ್ಲಿ ಶೇ.೨೮ರಷ್ಟು ಕುಸಿತವಾಗಿ ನಗರ-ವಸಾಹತುಗಳಾಗಿ ಅದು ಮಾರ್ಪಟ್ಟಿರುವುದು ಈ ದುಸ್ಥಿತಿಗೆ ಕಾರಣ. ಕಾವೇರಿ ನದಿಯ ಒಡಲು ಖಾಲಿಯಾಗುತ್ತಿದ್ದು, ಕೆಆರ್ ಎಸ್ ಜಲಾಶಯದ ಇತ್ತೀಚಿನ ನೀರಿನ ಮಟ್ಟ ೧೦ ಟಿಎಂಸಿಗೆ ಕುಸಿದಿದೆ. ಕೃಷಿಗೆ ಇದರ ನೀರನ್ನೇ ಅವಲಂಬಿಸಿರುವ ರೈತರ ಪರಿಸ್ಥಿತಿ ಶೋಚನೀಯವಾಗ ಬಹುದು.

ಕಾವೇರಿಯ ಒಡಲೇ ಒಣಗುತ್ತಿರುವು ದರಿಂದಾಗಿ ನೀರನ್ನು ಇತಿಮಿತಿಯಲ್ಲಿ ಬಳಸಬೇಕಾದ್ದು ನಮ್ಮೆಲ್ಲರ ಹೊಣೆಗಾರಿಕೆ. ದೈನಂದಿನ ಅನಿವಾರ್ಯ ಗಳಿಗಷ್ಟೇ ಈ ಅಮೂಲ್ಯ ನೀರನ್ನು ಬಳಸಬೇಕು; ಅನಗತ್ಯ ಬಾಬತ್ತುಗಳಿಗೆ (ಕಾರು ತೊಳೆಯು ವಿಕೆ, ಮನೆಯ ಮುಂಭಾಗವನ್ನು ಸ್ವಚ್ಛಗೊಳಿಸುವಿಕೆ ಇತ್ಯಾದಿ) ನೀರನ್ನು ಪೋಲು ಮಾಡಬಾರದು. ಸೋರುತ್ತಿರುವ ಕೊಳಾಯಿ/ ಪೈಪುಗಳನ್ನು ತುರ್ತಾಗಿ ರಿಪೇರಿ ಮಾಡಿಸುವುದು ಸೇರಿದಂತೆ ನೀರಿನ ಸೋರಿಕೆಗೆ ಪರಿಣಾಮಕಾರಿಯಾಗಿ ಲಗಾಮು ಹಾಕಬೇಕು.

ಇಂಗುಗುಂಡಿಗಳನ್ನು ವ್ಯವಸ್ಥೆಗೊಳಿಸುವುದರಿಂದ, ಪೋಲಾಗುವ ನೀರು ಹರಿದು ಆ ಗುಂಡಿಯನ್ನು ತಲುಪಿದರೆ ಅದರಿಂದ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ನೀರನ್ನು ಭೂಮಿಗೆ ಇಂಗಲು ಬಿಡಬೇಕು. ಈ ನಿಟ್ಟಿನಲ್ಲಿ ನೆಲಕ್ಕೆ ಸಿಮೆಂಟ್ ಕಾಂಕ್ರೀಟ್ ಹಾಕುವುದನ್ನು ಕಡಿಮೆಗೊಳಿಸಿ ಮಳೆಯ ನೀರು ಭೂಮಿಯ ತಳಕ್ಕೆ ಇಂಗುವಂತೆ ನೋಡಿಕೊಳ್ಳೋಣ. ಪರ್ಯಾಯ ನೀರು ಸಂಗ್ರಹಣೆಗೆ ಆದ್ಯತೆ ನೀಡೋಣ.

ಜತೆಗೆ, ಇನ್ನಷ್ಟು ಗಿಡಗಳನ್ನು ನೆಟ್ಟು ಬೆಳೆಸಿ, ಭೂತಾಯಿಯನ್ನು ತಂಪಾಗಿಸಿ, ಮಳೆ ಬರಲು ಸಹಕರಿಸೋಣ. ತನ್ಮೂಲಕ ಪ್ರಕೃತಿ, ನಾಡು-ಕಾಡುಗಳನ್ನು ಸಂರಕ್ಷಿಸೋಣ. ನಮ್ಮೊಡನೆ ಪ್ರಾಣಿ-ಪಕ್ಷಿಗಳೂ ಬೆಳೆಯುವಂತಾಗಬೇಕು. ಬಾವಿ, ಕೆರೆ, ಹಳ್ಳ, ಕೊಳ, ಸರೋವರಗಳ ಹೂಳೆತ್ತಿ ನೀರು ಸಂಗ್ರಹಣೆಗೆ ಮಹತ್ವ ನೀಡಬೇಕು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಇಲ್ಲವಾದಲ್ಲಿ ವಾಯುಮಾಲಿನ್ಯವಾಗಿ ಜಾಗತಿಕ ತಾಪಮಾನದ ಏರಿಕೆಗೆ ಕಾರಣವಾಗುತ್ತದೆ. ಈ ತಾಪಮಾನದ ವೈಪರೀತ್ಯವನ್ನು ಕಳೆದ ಕೆಲ ವರ್ಷಗಳಿಂದ ಜಗತ್ತೇ ಅನುಭವಿಸುತ್ತಾ ಬಂದಿದೆ. ಹೀಗಾಗಿ ಇನ್ನಾದರೂ ವಿವೇಕವಂತರಾಗೋಣ.

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

Leave a Reply

Your email address will not be published. Required fields are marked *

error: Content is protected !!