Tuesday, 14th May 2024

ಸೆಲೆಬ್ರಿಟಿಗಳ ಜೀವನ ಜಟಿಲವಾಗದಿರಲಿ

ಸದಾಶಯ

ಪ್ರೊ.ಆರ್‌.ಜಿ.ಹೆಗಡೆ

ಬ್ರಿಟಿಷ್ ಕಾದಂಬರಿಕಾರ ಚಾರ್ಲ್ಸ್ ಡಿಕನ್ಸ್ ಬರೆದ ‘ಪಿಕ್‌ವಿಕ್ ಪೇಪರ‍್ಸ್’ ಕಾದಂಬರಿ ಆತನಿಗೆ ರಾತ್ರಿ ಬೆಳಗಾಗುವಷ್ಟರಲ್ಲಿ ವಿಶ್ವಪ್ರಸಿದ್ಧಿ ತಂದುಕೊಟ್ಟಿತು. ಆ ಕುರಿತು ಡಿಕನ್ಸ್ ಹೇಳಿಕೊಂಡಿದ್ದು ಹೀಗಿದೆ: ‘ರಾತ್ರಿ ತಣ್ಣಗೆ ಚಾದರ ಮುಚ್ಚಿ ಮಲಗಿದ್ದವನು ಬೆಳಗಾಗುವಷ್ಟರಲ್ಲಿ ಜಗತ್ಪ್ರಸಿದ್ಧನಾಗಿ ಹೋಗಿದ್ದೆ.

ಎಲ್ಲ ಪತ್ರಿಕೆಗಳಲ್ಲೂ ನನ್ನ ಫೋಟೋಗಳು. ಹಿಂದಿನ ದಿನ ಸಾಯಂಕಾಲದ ತನಕ ಪಕ್ಕದ ಮನೆಯವರಿಗೂ ನನ್ನ ಪರಿಚಯ ಇರಲಿಲ್ಲ. ಬೆಳಗ್ಗೆ ಸೆಲೆಬ್ರಿಟಿ ಯಾಗಿಬಿಟ್ಟಿದ್ದೆ. ಸೂರ್ಯೋದಯದ ಮೊದಲೇ ನನ್ನ ಚಿಕ್ಕ ಮನೆಯ ಎದುರು ಬ್ರಿಟಿಷ್ ಸರಕಾರದ ದೊಡ್ಡ ದೊಡ್ಡ ಕಾರುಗಳ ಹಾರ್ನ್ ಸದ್ದು ಮಾಡಲಾರಂಭಿಸಿದ್ದವು. ಯಾರೋ ನನಗೆ ಶೇವ್ ಮಾಡಿ ಹೊಸ ಸೂಟು- ಬೂಟು ತೊಡಿಸಿದರು. ಕಂಡು ಕೇಳಿರದಿದ್ದ ರೀತಿಯ ಹೋಟೆಲ್‌ಗಳಲ್ಲಿ ತಿಂಡಿ ತಿನ್ನಿಸಿದರು. ಟಾಯ್ಲೆಟ್‌ಗೆ ಹೋಗುವಾಗ ಒಬ್ಬ ಅಂಗರಕ್ಷಕ ಬಾಗಿಲ ಹೊರಗೆ ನಿಂತ.

ಅರಮನೆಗೆ ಕರೆದುಕೊಂಡು ಹೋದರು. ರಾಣಿಯ ಜತೆ ಊಟ. ಮೊದಲೆಲ್ಲಾ ಹೊತ್ತುಹೊತ್ತಿಗೆ ಊಟದ ಕುರಿತು ಖರ್ಚುಮಾಡುವಾಗ ಯೋಚಿಸ
ಬೇಕಾಗುತ್ತಿತ್ತು. ಬರೆಯುವಾಗ ಈಗಾಗಲೇ ಬಳಸಲ್ಪಟ್ಟ ಕಾಗದದ ಹಿಂಭಾಗದಲ್ಲಿ ಬರೆಯುತ್ತಿದ್ದೆ. ಈಗ ರೀಮುಗಟ್ಟಲೆ ಕಾಗದ, ಬಂಗಾರಲೇಪಿತ
ಫೌಂಟನ್ ಪೆನ್ನುಗಳು. ಜೀವನವೇ ಬದಲಾಗಿ ಹೋಯಿತು. ದುಡ್ಡಿನ ಹೊಳೆಯೇ ಹರಿದುಬಂತು.

ಆದರೆ ವಿಷಾದವೆಂದರೆ, ನನಗೆ ನಾನಾಗಿ ಉಳಿಯಲು ಸಾಧ್ಯವಾಗಲೇ ಇಲ್ಲ. ಹೊರಗಿನ ಗದ್ದಲದಲ್ಲಿ ನನ್ನ ಬದುಕು ಕಾಣೆಯಾಗಿಹೋಯಿತು’. ಇದು ಬರೀ ಡಿಕನ್ಸ್‌ನ ಕಥೆಯಲ್ಲ, ಬಹುತೇಕ ಎಲ್ಲ ಸೆಲೆಬ್ರಿಟಿಗಳದೂ ಹೌದು. ಭಾರತದ ಮೊದಲ ಪ್ರಧಾನಿ ನೆಹರು ಅವರ ಮನೆಯ ಸುತ್ತಮುತ್ತ ಪ್ರತಿದಿನ ಜಾತ್ರೆಯೇ ಇರುತ್ತಿತ್ತು. ಅಲ್ಲಿಯೇ ಹುಲ್ಲು ಹಾಸಿನ ಮೇಲೆ ಕುಳಿತ ಜನ ಇಡೀ ದಿನ ನೆಹರುರನ್ನು ಕಾಣಲು, ಮುಟ್ಟಲು ತವಕಿಸುತ್ತಿದ್ದರು. ಅಂದಿನ ದಿನಗಳಲ್ಲಿ ಇಂದಿನ ರೀತಿಯ ಸೆಕ್ಯುರಿಟಿ ಇರಲಿಲ್ಲ. ಸ್ವಾತಂತ್ರ್ಯದ, ಪ್ರಜಾಪ್ರಭುತ್ವದ ಸಂಭ್ರಮದ ದಿನ ಗಳು ಅವು. ಎಲ್ಲರಿಗೂ ಎಲ್ಲ ಕಡೆ ಮುಕ್ತಪ್ರವೇಶ.

‘ಈ ಜನ ಕೆಲವೊಮ್ಮೆ ನನಗೆ ಹುಚ್ಚು ಹಿಡಿಸುವ ರೀತಿಯಲ್ಲಿ ವರ್ತಿಸುತ್ತಿದ್ದರು. ಅವರ ವ್ಯಕ್ತಿಪೂಜೆ ನನ್ನಲ್ಲಿ ವಿಪರೀತ ಸಿಟ್ಟು ಮತ್ತು ಅಸಹ್ಯವನ್ನು ಹುಟ್ಟಿಸುತ್ತಿತ್ತು’ ಎಂದು ನೆಹರು ಆತ್ಮಕಥನದಲ್ಲಿ ಹೇಳಿಕೊಂಡಿದ್ದಾರೆ. ಮೈಕಲ್ ಜಾಕ್ಸನ್‌ನ ಕಥೆ ನೋಡಿ. ಬಾರ್‌ನಲ್ಲಿ ಡ್ರಿಂಕ್ಸ್ ಸರಬರಾಜು ಮಾಡುವ ಮತ್ತು ಡಾನ್ಸ್ ಮಾಡುವ ಹುಡುಗನಾಗಿದ್ದ ಆತನ ಮೊದಲ ಆಲ್ಬಂ ‘ಡೇಂಜರಸ್’ ಹೊರಬಂದ ಮರುಬೆಳಗ್ಗೆ ಆತ ಸೆಲೆಬ್ರಿಟಿ ಆಗಿಹೋಗಿದ್ದ. ನಂತರ ಆತನಿಗೆ ಎಷ್ಟು ಹಣ ಬಂತೆಂದರೆ, ತನ್ನ ಬಳಿ ಎಷ್ಟು ಹಣ ತುಂಬಿದೆ ಎಂದು ಕೂಡಿಸಿ, ಗುಣಿಸಿ ಲೆಕ್ಕ ಹಾಕುವಂಥ ಮಾನಸಿಕ ಸ್ಥಿಮಿತವನ್ನೂ ಆತ ಕಳೆದುಕೊಂಡ.

ಪರಿಸ್ಥಿತಿ ಎಲ್ಲಿಗೆ ಬಂತೆಂದರೆ, ಮನೆಯಿಂದ ಹೊರಬೀಳ ಬೇಕಾದರೆ ಆತ ಬುರ್ಖಾ ಧರಿಸಬೇಕಾಗಿ ಬರುತ್ತಿತ್ತು. ಅದು ಅವನಿಗೆ ಸಂಕಷ್ಟಗಳನ್ನು ತಂದೊ ಡ್ಡಿತು. ದುಬೈನ ಏರ್‌ಪೋರ್ಟ್‌ನಲ್ಲಿ ವಾಷ್‌ರೂಮ್ ಬಳಸ ಬೇಕಾಗಿ ಬಂದಾಗ ಕಾವಲುಗಾರ ಆತನಿಗೆ ಮಹಿಳೆಯರ ಶೌಚಾಲಯದ ಕಡೆ ಕೈತೋರಿಸಿದ. ಒಳಗೆ ಹೋದ ಜಾಕ್ಸನ್ ಮಹಿಳೆಯರ ಕೈಯಲ್ಲಿ ಸಿಕ್ಕಿಹಾಕಿ ಕೊಂಡ. ದುಬೈನಲ್ಲಂತೂ ಅತಿಗಂಭೀರ ಅಪರಾಧ ಅದು. ಮೈಕಲ್ ಜಾಕ್ಸನ್ ಅಂದರೆ ಯಾರೆಂದು ತಿಳಿದಿರದ ಮತ್ತು ತಮ್ಮ ಕರ್ತವ್ಯ ಪರಿಪಾಲನೆಯ ತುರ್ತಿನಲ್ಲಿದ್ದ ದುಬೈ ಪೊಲೀಸರಿಂದಾಗಿ ಆತ ಕೆಲಹೊತ್ತು ‘ಒಳಗೂ’ ಕುಳಿತುಕೊಳ್ಳ ಬೇಕಾಯಿತು.

ಅವನ ವಿಷಯ ಎಲ್ಲರಿಗೂ ಗೊತ್ತು. ಸಾರ್ವಜನಿಕ ವಾಗಿ ದಂತಕಥೆಯಾಗಿದ್ದ ಆತನ ವೈಯಕ್ತಿಕ ಬದುಕು, ದಾರುಣ-ದುರಂತಗಳಲ್ಲಿ ಒಂದಾಗಿ
ಹೋಯಿತು. ಮತ್ತೆ ನೋಡಿ! ಜನಪ್ರಿಯತೆಯ ಉತ್ತುಂಗ ದಲ್ಲಿದ್ದ ಯುವರಾಣಿ-ಚೆಲುವೆ ಡಯಾನಾ ಸ್ಪೆನ್ಸರ್, ತಾನು ಮತ್ತು ತನ್ನ ಪ್ರಿಯಕರ ಇದ್ದ ಕಾರನ್ನು ಬೆನ್ನು ಹತ್ತಿದ್ದ ಪತ್ರಕರ್ತರಿಂದ ತಪ್ಪಿಸಿಕೊಳ್ಳಲು ಅತಿವೇಗ ವಾಗಿ ಕಾರು ಚಲಾಯಿಸುವಂತೆ ಹೇಳಿ ತನ್ನ ಪ್ರಾಣ ವನ್ನೇ ನೀಗಬೇಕಾಗಿ ಬಂತು. ಹೀಗೆಯೇ, ರಜನಿ ಕಾಂತ್, ಐಶ್ವರ್ಯಾ ರೈ ಮುಂತಾದ ನಟ- ನಟಿಯರು, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿಯವರಂಥ ಕ್ರಿಕೆಟಿಗರು ತಮ್ಮ ವೈಯಕ್ತಿಕ ಬದುಕಿನಲ್ಲಿ ಎಂಥ ಕಷ್ಟಗಳನ್ನು ಎದುರಿಸಬೇಕಾಗಿ ಬಂದಿದೆ ಎಂಬುದು ನಮಗೆ ಗೊತ್ತಿದೆ.

‘ಮನೆಯಿಂದ ಒಂಚೂರು ಹೊರನಡೆದು ಕಾಲು ಕೆ.ಜಿ. ಬದನೇ ಕಾಯಿ ತರುವ ಸಾರ್ವಜನಿಕ ಸ್ವಾತಂತ್ರ್ಯವೂ ನನಗಿಲ್ಲ’ ಎಂದು ಕೊಹ್ಲಿ ಇತ್ತೀಚೆಗಷ್ಟೇ ವಿಷಾದದಿಂದ ಹೇಳಿಕೊಂಡಿದ್ದಾರೆ. ನಮ್ಮ ದೇಶದಲ್ಲಂತೂ ಈಚೀಚೆಗೆ ಜನರು ಎಲ್ಲವನ್ನೂ (ಖ್ಯಾತರು ಮೂತ್ರ ವಿಸರ್ಜನೆಗೆ ನಿಂತಿದ್ದನ್ನೂ!) ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ‘ನೆಟ್ಟಿಗೆ’ ಮತ್ತು ‘ನೆತ್ತಿಗೆ’ ಏರಿಸಿ ಬಿಡುತ್ತಾರೆ. ಖ್ಯಾತನಾಮರೆನಿಸಿಕೊಂಡವರ ಒಳ ಗನ್ನು (ಶರೀರವನ್ನು ಕೂಡ) ಬಯಲುಮಾಡಿ ನೋಡಬೇಕೆನ್ನುವುದು ಕೆಲವರ ಇತ್ತೀಚಿನ ‘ವಿಕೃತ’ ಹವ್ಯಾಸಗಳಲ್ಲೊಂದು.

ಇಷ್ಟೆಲ್ಲಾ ಪುರಾಣ ಹೇಳಿದ್ದಕ್ಕೆ ಕಾರಣವಿದೆ. ಪ್ರಸ್ತುತ ಪತ್ರಿಕೆಗಳು, ಡಿಜಿಟಲ್ ಮಾಧ್ಯಮಗಳು ಹೀಗೆ ಎಲ್ಲವನ್ನೂ ಆಕ್ರಮಿಸಿರುವುದು ಶ್ರೇಯಾಂಕಾ
ಪಾಟೀಲ್ ಎಂಬ ಕ್ರಿಕೆಟ್ ಪಟು. ಈಕೆ ಬೆಂಗಳೂರಿನ ಸಾಧಾರಣ ಕುಟುಂಬದಿಂದ ಬಂದಿರುವ, ಜೀವಕಳೆ ತುಂಬಿಕೊಂಡಿರುವ, ಮುಗ್ಧಮುಖದ, ಮೆಲು
ಮಾತಿನ ೨೧ರ ಹರೆಯದ ಚೆಲುವೆ. ಪುರುಷಪ್ರಧಾನ ಕ್ರೀಡೆ ಎನಿಸಿಕೊಂಡಿರುವ ಕ್ರಿಕೆಟ್ ಅನ್ನು ತನ್ನ ಪ್ಯಾಷನ್ ಆಗಿ ಆಯ್ದುಕೊಂಡಿರುವ ಈಕೆಯನ್ನು,
ಮೊನ್ನೆ ಮೊನ್ನೆ ಮುಕ್ತಾಯವಾದ ‘ಮಹಿಳಾ ಐಪಿಎಲ್’ ಪಂದ್ಯಾವಳಿ ತಾರೆಯನ್ನಾಗಿಸಿಬಿಟ್ಟಿದೆ.

ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದು, ಈಕೆಯ ಉತ್ಕೃಷ್ಟ ಆಟ. ನಂತರದವು ಈಕೆಯ ಸರಳತೆ, ಮುಗ್ಧತೆ ತುಂಬಿದ ಮಾತು ಹಾಗೂ ನಗು,
ವಯಸ್ಸಿನ ಹುಡುಗ-ಹುಡುಗಿಯರಲ್ಲಿ ಸಹಜವಾಗಿರುವ, ಪ್ರೀತಿಯನ್ನು ಹೊರಸೂಸುವ ಹೊಳೆಯುವ ಕಣ್ಣುಗಳು, ಸಂತೋಷ ಉಕ್ಕಿ ಬಂದಾಗ ಈಕೆ
ಮೈದಾನದಲ್ಲೇ ಜಿಂಕೆಯಂತೆ ನರ್ತಿಸುವುದು ಇತ್ಯಾದಿ. ಇವೆಲ್ಲವೂ ಕಣ್ಣಿಗೆ ಹಬ್ಬವೇ. ಹಾಗಾಗಿ ಈಕೆ ಈಗ ಮನೆಮನೆಯ ಮಾತು. ಕೋಟ್ಯಂತರ ಯುವ
ಕರ ಕನಸಿನ ರಾಣಿ. ಒಟ್ಟಾರೆಯಾಗಿ, ಸೆಲೆಬ್ರಿಟಿ ವಲಯದಲ್ಲಿ ಹೊಸ ತಾರೆಯೊಂದು ಹುಟ್ಟಿಬಿಟ್ಟಿದೆ. ಬಹುಶಃ ಈಕೆ ತನ್ನ ಸಂತೋಷದ ತುತ್ತತುದಿ
ಯಲ್ಲಿರಬೇಕು. ದೇವರೇ, ನನ್ನ ಮೊಮ್ಮಗಳಂಥ ಈಕೆಯ ನಗು ಮಾಸದಿರಲಿ!

ಮುಂದೆ ಶ್ರೇಯಾಂಕಾರ ಜೀವನ ಯಾವ ದಾರಿಯಲ್ಲಿ ಸಾಗಬಹುದು? ಟನ್‌ಗಟ್ಟಲೆ ಹಣ ಈಕೆಯ ಮನೆಗೆ ಬಂದು ಬೀಳಬಹುದು. ಕೋಟ್ಯಧಿಪತಿ
ಹುಡುಗರು, ತಾರೆಯರು ಈಕೆಯ ಬೆನ್ನುಬೀಳ ಬಹುದು. ಸನ್ಮಾನ ಸಮಾರಂಭಗಳು ನಡೆಯಬಹುದು. ಮನೆಯಲ್ಲಿ ಇಡಲು ಸ್ಥಳವಿಲ್ಲದಷ್ಟು ಸಂಖ್ಯೆ ಯಲ್ಲಿ ಬಂಗಾರದ ಕಿರೀಟ/ಬ್ಯಾಟು, ಬೆಳ್ಳಿಯ ಗದೆ/ಚೆಂಡು, ಬಿಲ್ಲು-ಬಾಣ ಇತ್ಯಾದಿಗಳು ಬರಬಹುದು. ಟಿವಿಯವರು ಮುಗಿಬಿದ್ದು ಈಕೆಯನ್ನು, ಈಕೆಯ ಎಲ್ಲ ಖಾಸಗಿತನವನ್ನು ಬಯಲಿಗೆ ತರಬಹುದು. ರಾಷ್ಟ್ರ, ರಾಜ್ಯ ಪ್ರಶಸ್ತಿಗಳು ಬರಬಹುದು. ಸಿನಿಮಾಗಳಲ್ಲಿ ನಟಿಸುವಂತೆ ಕರೆಬರಬಹುದು. ರಾಜಕೀಯ ಪಕ್ಷಗಳು ಈಕೆಗೆ ಚುನಾವಣಾ ಸ್ಪರ್ಧೆಗೆ ಟಿಕೆಟ್ ನೀಡಲು ಮುಂದೆ ಬರ ಬಹುದು ಅಥವಾ ರಾಜ್ಯಸಭಾ ಸದಸ್ಯೆಯನ್ನಾಗಿಸಬಹುದು. ಮಹಿಳೆಯರ ಒಳ ಉಡುಪುಗಳ ಮತ್ತು ಆಭರಣಗಳ ಕಂಪನಿಗಳು ಈಕೆಯನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿಸಬಹುದು.

ಆದರೆ, ದುಃಖದ ವಿಷಯವೆಂದರೆ, ಇದು ಕೆಟ್ಟ ಜಗತ್ತು. ಹಾಗೆಯೇ ಈಕೆಯ ದಾರಿ ತಪ್ಪಿಸಿ, ಸಂಕಷ್ಟದಲ್ಲಿ ಸಿಲುಕಿಸಿ, ಹಣಕೀಳುವ, ಬಗ್ಗಿಸುವ ಒಂದು ಜಾಲವೂ ಹುಟ್ಟಿಕೊಳ್ಳಬಹುದು. ಒಂದೊಮ್ಮೆ ಈಕೆ ಅರೆಕ್ಷಣ ತಪ್ಪಿದರೆ, ಮೈಮರೆತು ಮಾತಾಡಿದರೆ, ಹಿಂದೆ ಖ್ಯಾತಿಯ ಉತ್ತುಂಗಕ್ಕೇರಿಸಿದ್ದ ಅವೇ ಮಾಧ್ಯಮಗಳೇ ಈಕೆಯನ್ನು ಯಾವುದಾದ ರೊಂದು ವಿಷಯದಲ್ಲಿ ಸಿಲುಕಿಸಿ ಈಕೆಯ ಸಹಜ ಸಂತೋಷವನ್ನೇ ಹಾಳುಗೆಡವಬಹುದು. ಕೊನೆಗೆ,
ತಾನು ಯಾಕಾದರೂ ಇಲ್ಲಿಗೆ ಬಂದೆನೋ, ಸೆಲೆಬ್ರಿಟಿ ಯಾದೆನೋ ಎಂಬ ಭಾವನೆ ಈಕೆಯಲ್ಲಿ ಸುರಿಸಬಹುದು. ಈ ಮಾತು ಹೇಳುವುದಕ್ಕೆ ಕಾರಣ,
ಬಹುಶಃ ಇವೆಲ್ಲ ಸಂಗತಿಗಳು ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ತೆಂಡೂಲ್ಕರ್, ವಿರಾಟ್ ಕೊಹ್ಲಿಯಂಥವರ ವಿಷಯದಲ್ಲೂ ನಡೆದು ಹೋಗಿವೆ. ಹೀಗಾಗಿಯೇ ಬಹುಶಃ ಅವರು ಸಾರ್ವಜನಿಕ ಜೀವನದ ಕಡೆ ತಲೆಹಾಕಿ ಮಲಗಲೂ ಇಷ್ಟಪಡುವುದಿಲ್ಲ.

ಅಂದರೆ, ಈ ಸೆಲೆಬ್ರಿಟಿಗಳ ಬಳಿ ಎಲ್ಲವೂ ಇರುತ್ತದೆ, ಆದರೆ ‘ಸಹಜ’ ಬದುಕು ಬದುಕಲು ಬೇಕಾಗುವ ಮೂಲವಸ್ತುವಾದ ಸಂತೋಷವನ್ನೇ ಅವರ ಖ್ಯಾತಿ ಮತ್ತು ಸಾರ್ವಜನಿಕತೆ ಕಸಿದುಕೊಂಡು ಬಿಡುತ್ತವೆ. ಮಾನಸಿಕ ನೆಮ್ಮದಿ ಮತ್ತು ಶಾಂತಿ ಮಾಯವಾಗಿಬಿಡುವ ಸಾಧ್ಯತೆ ಇರುತ್ತದೆ. ಅವರ ಸರಳತೆ, ಮುಗ್ಧತೆ ನಾಶವಾಗಿ ಜೀವನ ವಿಷವರ್ತುಲ ದಲ್ಲಿ ಸಿಲುಕಿಕೊಳ್ಳುವ ಸಂಭವ ಇರುತ್ತದೆ. ಸಹಜ ಬದುಕು ಬೇಕಾದರೆ ಇಂಥ ಸೆಲೆಬ್ರಿಟಿಗಳು, ಜನರು
ತಮ್ಮ ಬೆನ್ನು ಬೀಳದ ದೇಶಗಳಿಗೆ ಹೋಗಬೇಕು. ನಮ್ಮ ದೇಶದಲ್ಲಿ ಅದೆಲ್ಲ ಸಾಧ್ಯವಾಗುವುದಿಲ್ಲ.

ಇನ್ನೊಂದು ವಿಷಯ- ಇಂಥದ್ದನ್ನೆಲ್ಲ ತಪ್ಪಿಸಿಕೊಂಡು ದೇಶದೊಳಗೇ ಇರಬೇಕೆಂದಿದ್ದರೆ ಸೆಲೆಬ್ರಿಟಿಗಳು ಮುಖದ ಮೇಲೊಂದು ಮಾಸ್ಕ್ ಧರಿಸಿ ಬದುಕಬೇಕು. ಅಂದರೆ, ಸಾರ್ವಜನಿಕವಾಗಿ ‘ಸಿಂಕ್ಸ್’ ಆಗಿ ಬದುಕಬೇಕು. ಯಾವುದೇ ಸಂದರ್ಭದಲ್ಲೂ ಮುಖದ ಮೇಲೆ ಯಾವುದೇ ಭಾವನೆಯನ್ನು
ತೋರಿಸಿಕೊಳ್ಳದೆ, ನಗದೆ, ಅಳದೆ, ಆಸೆ, ನಿರಾಸೆ, ಉತ್ಸಾಹ, ಕೋಪ, ಹಾಸ್ಯ ಯಾವುದೂ ಇಲ್ಲದೆ ಬದುಕಬಲ್ಲ, ‘ಮಿಸ್ಟರ್ ಕೂಲ್’/‘ಮಿಸ್ ಕೂಲ್’
ಎಂದು ಮಾಧ್ಯಮಗಳಿಂದ ಕರೆಸಿಕೊಳ್ಳಬಲ್ಲ ಅತ್ಯಂತ ಕೃತಕ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು.

ಎಂಥ ಸಂದರ್ಭದಲ್ಲೂ ನಗಬಾರದು. ಕಂಠಪಾಠ ಮಾಡಿದ ನಾಲ್ಕೈದು ವಾಕ್ಯಗಳನ್ನು ಮಾತ್ರವೇ ಸಾರ್ವಜನಿಕವಾಗಿ ಹೇಳಬೇಕು. ಮನದೊಳಗಿನ
‘ನಿಜಮಾತು’ ಹೇಳುವಂತಿಲ್ಲ, ಹೇಳಿದರೆ ಅದು ವಿವಾದವನ್ನು ಹುಟ್ಟುಹಾಕಿಬಿಡಬಹುದು. ನೀವು ಗಮನಿಸಿದ್ದೀರಾ? ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಡಿಮೆ ಎಲ್ಲ ಸೆಲೆಬ್ರಿಟಿಗಳೂ ಇದೇ ಮಾದರಿ ಯನ್ನು ಆಯ್ದುಕೊಳ್ಳುತ್ತಿದ್ದಾರೆ. ಅವರು ಸಾರ್ವಜನಿಕವಾಗಿ ಬರುವುದು ಕಡಿಮೆ. ಆಡುವುದು ಕೇವಲ ‘ಸರಿಯಾದ’ (ಅಂದರೆ, ‘ಪೊಲಿಟಿಕಲಿ ಕರೆಕ್ಟ್’ ಎನ್ನುವಂಥ!) ಮಾತುಗಳನ್ನಷ್ಟೇ. ಒಳಗಿನ ಮಾತು ಹೊರಬರುವುದೇ ಇಲ್ಲ. ಕಣ್ಣುಗಳು ಅಕಸ್ಮಾತ್ ಹೇಳಿಬಿಡುವ ಭಾವನೆಗಳಿಗೆ ಬೇಲಿ ಹಾಕಲು ದೊಡ್ಡ ತಂಪಿನ ಕನ್ನಡಕಗಳ ಅಲಂಕಾರ!

ಯಶಸ್ಸು ಎಂಬುದು ಹೀಗೆ ಸೆಲೆಬ್ರಿಟಿಗಳನ್ನು ಅತ್ಯಂತ ಕೃತಕವಾಗಿ ಮಾತಾಡುವ, ವರ್ತಿಸುವ, ಬದುಕುವ ಗೊಂಬೆಗಳನ್ನಾಗಿ ಮಾರ್ಪಡಿಸಿ ಬಿಡುತ್ತದೆ.
ನಮ್ಮ ಶ್ರೇಯಾಂಕಾ ಮುಖದ ಮುದ್ದುನಗು ಮರೆಯಾಗದಿರಲಿ, ಈಕೆ ಕೂಡ ಗೊಂಬೆಯಾಗದಿರಲಿ. ನಮ್ಮ ಜನರು, ಮಾಧ್ಯಮಗಳು ಈಕೆಯ ಮತ್ತು ಎಲ್ಲ ಸೆಲೆಬ್ರಿಟಿಗಳ ಖಾಸಗಿತನವನ್ನು ಗೌರವಿ ಸುವಂತಾಗಲಿ. ಶ್ರೇಯಾಂಕಾ ಅವರಿಗೂ ಈ ಕಡೆ ಒಂಚೂರು ಲಕ್ಷ್ಯವಿರಲಿ. ಇದರಲ್ಲಿ ನಮ್ಮ ಸ್ವಾರ್ಥವೂ ಇದೆ. ಅದೆಂದರೆ, ಸಾರ್ವಜನಿಕ ಬದುಕಿಗೆ ಲವಲವಿಕೆ ತುಂಬಲು ಶ್ರೇಯಾಂಕಾ ಅವರಂಥ ಸಹಜತೆಯುಳ್ಳ ಸೆಲೆಬ್ರಿಟಿಗಳು ಬೇಕು.

(ಲೇಖಕರು ಮಾಜಿ ಪ್ರಾಂಶುಪಾಲರು
ಮತ್ತು ಪ್ರಾಧ್ಯಾಪಕರು)

Leave a Reply

Your email address will not be published. Required fields are marked *

error: Content is protected !!