Saturday, 27th July 2024

ಹುರಿಯನು ನೆನೆಯದ ನರಜನ್ಮವೇಕೆ ಹುರಿಯ ಕೊಂಡಾಡದ ನಾಲಗೆಯೇಕೆ…

ತಿಳಿರು ತೋರಣ

srivathsajoshi@yahoo.com

ಪುರಿ/ಹುರಿ ಆದಮೇಲೆ ಪುರಿಗಡಲೆ ಅಥವಾ ಹುರಿಗಡಲೆ ಬರುತ್ತದೆ. ನೀರಿನಲ್ಲಿ ನೆನೆಯಿಟ್ಟು ಕಾದ ಮರಳಿನಲ್ಲಿ ಅರಳುವಂತೆ ಹುರಿದ ಕಡಲೆ. ಅದನ್ನು ಹುರಿಗಾಳು ಅಥವಾ ಪುಟಾಣಿ ಎಂದು ಕೂಡ ಹೇಳುತ್ತೇವೆ. ನಾವು ಕರಾವಳಿಯವರು ಇಡ್ಲಿ-ದೋಸೆಗೆ ಕಾಯಿಚಟ್ನಿ ಮಾಡುತ್ತೇವೆ.

ಅರಳು ಹುರಿದಂತೆ ಮಾತು ಎಂಬ ನುಡಿಗಟ್ಟನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ಅಂತಹ ಮಾತುಗಾರರನ್ನು ನೋಡಿರುತ್ತೇವೆ, ಅವರ ವಾಗ್ಝರಿಯನ್ನು ಆಲಿಸಿರುತ್ತೇವೆ. ಮಾತಿನ ಮಲ್ಲಿ (ಅಥವಾ ಮಲ್ಲ) ಎಂದು, ಚಾಟರ್ ಬಾಕ್ಸ್ ಎಂದು ಕೂಡ ಅಂಥವರನ್ನು ಕೆಲವೊಮ್ಮೆ ಬಣ್ಣಿಸುವುದುಂಟು.

ಸಾಮಾನ್ಯವಾಗಿ ರೇಡಿಯೊ ಜಾಕಿಗಳು, ಅದರಲ್ಲೂ ಎಫ್‌ಎಂ ವಾಹಿನಿಗಳಲ್ಲಿ ವಟಗುಟ್ಟುವವರು ಈ ಗುಂಪಿನವರು. ಅವರಿಗೆ ಮಾತೇ ಬಂಡವಾಳ. ಮನಸ್ಸಿಗೆ ಮುದ ನೀಡುವ ಪದ ಕಟ್ಟುವ ಕಲೆ. ಭಾಷೆಯ ಮೇಲಿನ ಹಿಡಿತ ಅವರ ನಿರೂಪಣೆಯ ಜೀವಾಳ. ಉದ್ಯೋಗಕ್ಕೆ ಅದೇ ಮುಖ್ಯ ಅರ್ಹತೆ. ಹಾಗೆ ವಾಚಾಳಿ ಅಥವಾ ಚಾಟರ್ ಬಾಕ್ಸ್ ಎನಿಸಿಕೊಳ್ಳದಿದ್ದರೂ, ಒಟ್ಟಾರೆಯಾಗಿ ಅರಳು ಹುರಿದಂತೆ ಮಾತನಾಡುವ ವ್ಯಕ್ತಿಗಳಲ್ಲಿ ಜನರನ್ನು ಆಕರ್ಷಿಸುವ ಏನೋ ಒಂದು ವಿಶೇಷ ಶಕ್ತಿ ಇರುತ್ತದೆ. ಬೇಕಿದ್ದರೆ ನೋಡಿ: ಅವರದು ಯಾವಾಗಲೂ ಫಟಾಫಟ್ ಕೆಲಸ, ಪಾದರಸದಂತೆ ಓಡಾಟ, ಸದಾ ಹಸನ್ಮುಖಿ ಮತ್ತು ಜನಸ್ನೇಹಿ- ಇಂಗ್ಲಿಷ್‌ನಲ್ಲಾದರೆ ಪೀಪಲ್ ಪರ್ಸನ್- ಆಗಿರುವುದು ಅಂಥವರ ಸಾಮಾನ್ಯ ಲಕ್ಷಣಗಳು. ಬೆಸ್ಟ್ ಉದಾಹರಣೆಯಾಗಿ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಮೋದಿ ಇದ್ದಾರಲ್ಲ, ಹಾಗೆ!

ಆದರೆ ಆ ನುಡಿಗಟ್ಟನ್ನೇ ಇನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸೋಣ. ಅರಳು ಹುರಿಯುವುದು ಎಂದರೇನು? ಅದು ಅರಳು ತಯಾರಿಸಲಿಕ್ಕಾಗಿ ಬತ್ತವನ್ನು ಹುರಿಯುವುದು ಅಲ್ಲವೇ? ಹಿಂದಿನ ಕಾಲ ದಲ್ಲಿ ನಮ್ಮಲ್ಲೆಲ್ಲ ಮನೆಯಲ್ಲೇ ಬತ್ತ ಹುರಿದು ಅರಳು ತಯಾರಿಸುವುದಿತ್ತು. ವರ್ಷಕ್ಕಿಡೀ ಮನೆಖರ್ಚಿಗೆ ಪೂಜೆ-ಪುರಸ್ಕಾರಗಳಿಗೆ ಬೇಕಾಗುವ ಅರಳನ್ನು ನನ್ನಮ್ಮ ಮನೆಯಲ್ಲೇ ತಯಾರಿಸುತ್ತಿದ್ದರು. ಗುಡಾಣದಂಥ ದೊಡ್ಡ ಮಡಕೆ ಉದ್ದಕ್ಕೆ ಸೀಳಿ ಅರ್ಧ ಮಾಡಿದ್ದರ
ಒಂದು ಭಾಗವನ್ನು ಧಗಧಗ ಉರಿಯುವ ಕಟ್ಟಿಗೆ ಒಲೆಯ ಮೇಲಿಟ್ಟು, ಅದರಲ್ಲಿ ಹಸಿ ಬತ್ತ ಮತ್ತು ಮುಷ್ಟಿಯಷ್ಟು ಮರಳನ್ನೂ ಹಾಕಿ, ಕಡ್ಡಿಪೊರಕೆ ಯನ್ನೇ ಸಟ್ಟುಗದಂತೆ ಬಳಸಿ, ಬತ್ತ ಹುರಿದಾಗ ಅದು ಚಟಪಟ ಸಿಡಿದು ಅರಳು ಹೊರಹೊಮ್ಮುವ ದೃಶ್ಯ- ಚಿಕ್ಕಂದಿನಲ್ಲಿ ನೋಡಿದ್ದು ನನಗೆ ಅಸ್ಪಷ್ಟ ವಾಗಿ ನೆನಪಿದೆ; ಬೂತಯ್ಯನ ಮಗ ಅಯ್ಯು ಚಿತ್ರದ ‘ಮಲೆನಾಡ ಹೆಣ್ಣ ಮೈಬಣ್ಣ…’ ಹಾಡಿನಲ್ಲಿ ಬರುವ ‘ಮಾತು ನಿಂದು ಹುರಿದಾ ಅರಳು
ಸಿಡಿದ್ಹಂಗೆ…’ ಸಾಲನ್ನು ಕೇಳಿದಾಗ ಈಗಲೂ ಅದೇ ಕಣ್ಮುಂದೆ ಬರುವಷ್ಟು ನೆನಪಿದೆ ಎಂದು ಕೂಡ ಹೇಳಬಲ್ಲೆ.

ಆದರೆ ಇಲ್ಲಿಯೂ ಒಂದು ಸೂಕ್ಷ್ಮವನ್ನು ಗಮನಿಸಬೇಕಾದ್ದಿದೆ. ಅದು ‘ಮಾತು ನಿಂದು ಹುರಿದಾ ಅರಳು ಸಿಡಿದ್ಹಂಗೆ…’ ಅಂತಲೇ ಇರುವುದೆಂದು ನಾನು ಬಹುಕಾಲ ಭಾವಿಸಿದ್ದೆ. ಅರಳು ಹುರಿದಂತೆ ಮಾತು ಎಂಬ ನುಡಿಗಟ್ಟಿಗೆ ಅನುಗುಣವಾಗಿಯೇ ಇದೆ ಎಂದುಕೊಂಡಿದ್ದೆ. ಕೆಲವರು ಅದು ‘ಹುರಿದಾ ಅರಳು ಸಿಡಿದ್ಹಂಗೆ’ ಅಲ್ಲ, ‘ಉರಿದಾ ಹರಳು ಸಿಡಿದ್ಹಂಗೆ’ ಎಂದು ನನ್ನನ್ನು ತಿದ್ದಿದರು. ಹರಳೆಣ್ಣೆ ತಯಾರಿಸುವಾಗ ಹರಳುಗಳು ಉರಿದು ಸಿಡಿಯುತ್ತವೆ ಎಂಬ ವಿವರಣೆಯನ್ನೂ ಕೊಟ್ಟರು. ಡಾ.ಪಿ.ಬಿ.ಶ್ರೀನಿವಾಸ್ ಆ-ಹಾ ಕಾರದ ರೀತಿ ತಪ್ಪು ಉಚ್ಚಾರ ಮಾಡಲಿಕ್ಕೆ ಸಾಧ್ಯವಿಲ್ಲ, ‘ಹುರಿದಾ ಅರಳು’ ಅವರ ಬಾಯಿ ಯಲ್ಲಿ ‘ಉರಿದಾ ಹರಳು’ ಆಗಲಿಕ್ಕೆ ಸಾಧ್ಯವೇ ಇಲ್ಲ ಎಂದು ನನ್ನ ಒಳಮನಸ್ಸು ಹೇಳುತ್ತಿತ್ತು.

ಈ ಬಗ್ಗೆ ಬಗ್ಗೆ ನನ್ನ ಸೋದರಮಾವ ಚಿದಂಬರ ಕಾಕತ್ಕರ್ ಏನೆನ್ನುತ್ತಾರೆಂಬ ಕುತೂಹಲದಿಂದ ಅವರನ್ನು ಕೇಳಿದೆ. ಅವರಲ್ಲಿ ಹಳೆಯ ಚಿತ್ರಗೀತೆಗಳ ಧ್ವನಿಭಂಡಾರ ಅಷ್ಟೇಅಲ್ಲ, ಆಗಿನ ಕಾಲದಲ್ಲಿ ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನದ ವೇಳೆ ನಾಲ್ಕಾಣೆ ಎಂಟಾಣೆಗಳಿಗೆ ಮಾರಾಟವಾಗುತ್ತಿದ್ದ ಪದ್ಯಾ ವಳಿಗಳ ಸಂಗ್ರಹ ಸಹ ಇದೆಯಾದ್ದರಿಂದ, ಬೂತಯ್ಯನ ಮಗ ಅಯ್ಯು ಚಿತ್ರದ ಪದ್ಯಾವಳಿ ಇದೆಯೇ, ಇದ್ದರೆ ಆ ನಿರ್ದಿಷ್ಟ ಸಾಲು ಯಾವ ರೀತಿ ಅಚ್ಚಾಗಿದೆ ಎಂದು ಅವರಿಗೆ ನನ್ನ ಪ್ರಶ್ನೆ. ‘ನನ್ನ ಬಳಿ ಆ ಚಿತ್ರದ ಪದ್ಯಾವಳಿ ಇಲ್ಲ.

ಆದರೆ ಪಿಬಿಎಸ್ ಉಚ್ಚಾರದಲ್ಲಿ ಅದು ‘ಹುರಿದಾ ಅರಳು’ ಕೂಡ ಅಲ್ಲ ‘ಉರಿದಾ ಹರಳು’ ಕೂಡ ಅಲ್ಲ. ಅವರು ಎರಡೂ ಕಡೆಯಲ್ಲಿ ಹ-ಕಾರವನ್ನೇ ಬಳಸಿ ‘ಹುರಿದಾ ಹರಳು’ ಎಂದೇ ಉಚ್ಚರಿಸಿದ್ದಾರೆ, ಮತ್ತು ಅದು ಸರಿಯಾಗಿದೇ ಇದೆ. ಒಗ್ಗರಣೆಯ ಸಾಸಿವೆ ಸಿಡಿದಂತೆ ಹುರಿದ ಹರಳೂ ಸಿಡಿಯಬಹುದು!’ ಎಂದು
ಕನ್ವಿನ್ಸಿಂಗ್ ಉತ್ತರ ಬಂತು. ಹಾಗಾದರೆ ಮಲೆನಾಡ ಹೆಣ್ಣಿನ ಮಾತು ಬರೀ ಅರಳು ಹುರಿದಂತೆ ಅಲ್ಲ, ಅದಕ್ಕಿಂತಲೂ ಹೆಚ್ಚಾಗಿ ಹರಳು ಹುರಿದಂತೆ ಅಂತಾಯ್ತು!

ಅಲ್ಲಿಗೆ ಇಂದಿನ ಮುಖ್ಯ ವಿಷಯಕ್ಕೆ ಪ್ರವೇಶಿಸಿದೆವು. ಅದೇ- ಹುರಿಯುವುದು ಅಥವಾ ಹುರಿ. ಈಗ ನಿಮಗೆ ತಲೆಬರಹದ ಚೋದ್ಯವೂ ಅರ್ಥ ವಾಯಿ ತೆಂದುಕೊಂಡಿದ್ದೇನೆ. ಬಿಡುವು ಸಿಕ್ಕಾಗ ಶಬ್ದಕೋಶ ತೆರೆದು ಒಂದೆರಡು ಪುಟಗಳಷ್ಟು ಓದುವ ನನ್ನದೊಂದು ವಿಚಿತ್ರ ಹವ್ಯಾಸದಂತೆ ಮೊನ್ನೆ ಒಂದು ದಿನ ಕನ್ನಡ ಸಾಹಿತ್ಯ ಪರಿಷತ್ತಿನ ಎಂಟು ಸಂಪುಟಗಳ ಬೃಹತ್ ನಿಘಂಟುವಿನ ಕೊನೆಯ ಸಂಪುಟದ ಒಂದು ಪುಟ ತೆರೆದಾಗ ನನಗೊಂದು ಆಶ್ಚರ್ಯ ಕಣ್ಣಿಗೆ ಬಿತ್ತು. ಹುರಿ ಎಂಬ ಶಬ್ದಕ್ಕೆ ಅಲ್ಲಿ ಬೇರಾವ ವಿವರಗಳನ್ನೂ ಕೊಡದೆ ‘ಪುರಿ ನೋಡಿ’ ಎಂದಷ್ಟೇ ನಮೂದಿಸಿದ್ದಾರೆ!

ಅಂದರೆ ಈಗ ನಾವು ಬಳಸುವ ಹುರಿ ಶಬ್ದ ಪ್ರಾಚೀನ ಕಾಲದಲ್ಲಿ ಪುರಿ ಎಂಬ ರೂಪದಲ್ಲಿ ಇತ್ತು. ಹೆಣ್ಣು-ಪೆಣ್ಣು, ಹೂ-ಪೂ, ಹಾಲು-ಪಾಲು, ಹವಳ-ಪವಳ ಇದ್ದಂತೆ. ಸೂಚನೆಯಂತೆ ‘ಪುರಿ’ ಶಬ್ದವಿರುವ ಆರನೆಯ ಸಂಪುಟದ ಪುಟಕ್ಕೆ ಹೋದರೆ ಅಲ್ಲಿ ಕೊಟ್ಟಿರುವ ಅರ್ಥ, ಬಳಕೆ ಸಂದರ್ಭ, ಮತ್ತು ಉದಾಹರಣೆಗಳನ್ನು ನೋಡಿ ನಾನು ದಂಗಾಗಿ ಹೋದೆ! ಎರಡೇಎರಡು ಅಕ್ಷರಗಳ ಸಿಂಪಲ್ ಪದ ಅದೆಷ್ಟು ಅಗಾಧವಾಗಿದೆ! ಆ ವಿವರಣೆಯ ಸಂಕ್ಷಿಪ್ತ ಸಾರಾಂಶ ವನ್ನಷ್ಟೇ ಇಲ್ಲಿ ದಾಖಲಿಸುತ್ತೇನೆ. ಮೊದಲನೆಯದಾಗಿ, ಕ್ರಿಯಾಪದದ ರೂಪದಲ್ಲಿ ಪುರಿ(ಹುರಿ) ಅಂದರೆ – ಬಾಣಲೆ ಅಥವಾ ಹಂಚಿನ ಮೇಲಾಗಲಿ, ಕಾಯಿಸಿದ ಮರಳಿನಲ್ಲಾಗಲಿ, ಕಾಳು ಬೇಳೆ ಬತ್ತ ಮೊದಲಾದುವನ್ನು ಕಾಯಿಸಿ ಹದಗೊಳಿಸು; ಅರಳು ಮಾಡು ಎಂದು ಅರ್ಥ. ಉಪ್ಪಿಟ್ಟು
ಮಾಡುವ ಮೊದಲು ರವೆಯನ್ನು ಬಾಣಲೆಯಲ್ಲಿ ಒಂಚು ಚಮಚ ತುಪ್ಪವನ್ನೂ ಸೇರಿಸಿ ಮಂದ ಉರಿಯಲ್ಲಿ ಹುರಿಯುತ್ತೇವಲ್ಲ, ಇದೇ ಕ್ರಿಯೆ.

ಹಾಗೆ ರವೆಯನ್ನು ಹುರಿದರೆ ಮಾತ್ರ ಉಪ್ಪಿಟ್ಟು ಉದುರು ದುರಾಗುತ್ತದೆ, ಇಲ್ಲದಿದ್ದರೆ ಲೋಳೆಗಟ್ಟಿ ಮುದ್ದೆಯಾಗುತ್ತದೆ. ಚಟ್ನಿಪುಡಿ ಮಾಡಲಿಕ್ಕೆ ಬೇರೆಬೇರೆ ಧಾನ್ಯಗಳನ್ನು ಹುರಿಯುವುದು, ಬೇಸನ್ ಲಾಡು ಮಾಡುವಾಗ ಕಡ್ಲೆಹಿಟ್ಟನ್ನು ಹುರಿಯುವುದು, ಪತ್ರೊಡೆಯ ಮಸಾಲೆ ತಯಾರಿಸಲಿಕ್ಕೆ ಅಕ್ಕಿಯನ್ನು ಹುರಿಯುವುದು-ಎಲ್ಲ ಇದೇ ಅರ್ಥದಲ್ಲಿ. ರಾಗಿಯಿಂದ ಮಾಡುವ ಹುರಿಹಿಟ್ಟು ಅಥವಾ ಹುರಿಟ್ಟು ಮೂಲವೂ ಇದೇ. ‘ನೆಲ್ಲಂ ಪುರಿದು ಮಾಱದೆ ಕಾಣದಂತಿರಿಸಂಗಡಿಯೊಳ್’ ಎಂದು ಕನ್ನಡದ ಮೊತ್ತ ಮೊದಲ ಗ್ರಂಥ ಕವಿರಾಜಮಾರ್ಗದಲ್ಲಿಯೂ ಹುರಿಯುವಿಕೆ ಉಲ್ಲೇಖಗೊಂಡಿದೆಯಂತೆ. ಪುರಿ ಪದಕ್ಕೆ ಕಾಯಿಸು, ತಪ್ತಗೊಳಿಸು, ಸೀದುಹೋಗು, ಕರಿಕಾಗು, ಸುಟ್ಟುಹೋಗು, ಜಿಡ್ಡನ್ನು ಸವರಿ ಬಾಡಿಸು, ಹಪ್ಪಳ ಮೊದಲಾದುವುಗಳನ್ನು ಕೆಂಡದ ಮೇಲಿಟ್ಟು ಸುಡು, ಎಣ್ಣೆ ಅಥವಾ ತುಪ್ಪದಲ್ಲಿ ಕರಿ ಮುಂತಾದ ಅರ್ಥಗಳನ್ನೂ ಕೊಡಲಾಗಿದೆ.

‘ಹುರಿದುಕೊಂಡು ತಿನ್ನು’, ‘ಹುರಿದು ಮುಕ್ಕು’ ನುಡಿಗಟ್ಟುಗಳ ವಿವರಗಳಿವೆ. ಪೀಡಿಸು, ಹಿಂಸಿಸು, ಗೋಳು ಹುಯ್ದುಕೊಳ್ಳು ಎಂಬ ಅರ್ಥ. ಉದಾ: ಮಲಮಗಳು ಇದ್ದಷ್ಟು ದಿನವೂ ಆಕೆಯನ್ನು ಹುರಿದುಕೊಂಡು ತಿನ್ನುತ್ತಿದ್ದಳು; ಮಾತು ಮಾತಿಗೂ ಸೊಸೆಯ ದೋಷಗಳನ್ನು ಎಣಿಸಿ ಹುರಿದು
ತಿನ್ನು ತ್ತಿದ್ದಳು. ಘಟವಾಣಿ ಹೆಂಗಸರದಷ್ಟೇ ಉದಾಹರಣೆಗಳೇ? ಗಂಡಸರು ಹುರಿದು ಮುಕ್ಕುವುದಿಲ್ಲವೇ ಎಂದು ನೀವೀಗ ನನ್ನನ್ನು ಕೇಳಬೇಡಿ! ನಿಘಂಟುಕಾರರು ಹೇಳಿರುವುದನ್ನೇ ನಾನಿಲ್ಲಿ ಬರೆಯುತ್ತಿದ್ದೇನೆ.

ಎರಡನೆಯದಾಗಿ ನಾಮಪದದ ರೂಪದಲ್ಲಿ ಪುರಿ(ಹುರಿ) ಅಂದರೆ ಹಂಚಿನಲ್ಲಿ ಅಥವಾ ಮರಳಲ್ಲಿಟ್ಟು ಕಾಯಿಸಿದ ಮಂಡಕ್ಕಿ, ಚುರುಮುರಿ ಎಂಬ ಅರ್ಥ. ಇಲ್ಲಿ ಹಳಗನ್ನಡದ ಪುರಿ ಪದವೇ ಈಗಲೂ ಬಳಕೆಯಲ್ಲಿರುವುದು ಸ್ವಾರಸ್ಯಕರ. ನಾಮಪದವಾಗಿಯೇ ಪುರಿ ಪದಕ್ಕೆ ದಾರ ಅಥವಾ ಹಗ್ಗದಂತೆ ಹೊಸೆ ಯುವಿಕೆ, ನುಲಿಯುವಿಕೆ, ಹೊಸೆದು ಮಾಡಿದ ನೇಣು-ಹಗ್ಗ, ರಜ್ಜು ಎಂಬ ಅರ್ಥಗಳೂ ಇವೆ. ‘ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು
ಕನ್ನಡದ ದೀಪ’ ಎನ್ನುತ್ತೇವಲ್ಲ ಅದೇ ಹುರಿ ಇದು. ಜಾನುವಾರು ಗಳನ್ನು ಕಟ್ಟಲಿಕ್ಕೆ ಬಳಕೆಯಾಗುವ ಹುರಿಹಗ್ಗ ಈ ಹುರಿಯಿಂದಲೇ ಬಂದದ್ದು. ‘ಬೆರಳ ದರ್ಭೆಯ ಹರಿದು ಧೌತಾಂ| ಬರವನುಟ್ಟನು ಬಿಗಿದು ಕುಂತಿಯ| ಚರಣ ರಜವನು ಕೊಂಡು ಧರ್ಮಜನಂಘ್ರಿ ಗಭಿನಮಿಸಿ| ಹರುಷಮಿಗೆ ಹರಿತಂದು ಬಂಡಿಯ| ಶಿರದ ಹಲಗೆಯನಡರಿದನು ಬಲು| ಹುರಿಯ ಹಗ್ಗವ ಹಿಡಿದು ಜಡಿದನು ಹೂಡಿದೆತ್ತುಗಳ…’ ಭೀಮಸೇನನು ಬಕಾಸುರನಲ್ಲಿಗೆ ಹೊರಟಾಗಿನ
ಚಿತ್ರಣದಲ್ಲಿ ಕುಮಾರವ್ಯಾಸ ಬಳಸಿದ್ದೂ ಅದೇ ಹುರಿಹಗ್ಗ.

ಪ್ರೋತ್ಸಾಹ, ಮೆಚ್ಚುಗೆಯ ಕೊಂಡಾಟ ಎಂದು ಇನ್ನೊಂದು ಅರ್ಥವೂ ಇದೆ ಪುರಿ ಪದಕ್ಕೆ. ‘ಹುರಿದುಂಬಿಸು’ ಇದೇ ಅರ್ಥದ್ದು. ‘ಹುರಿಗಟ್ಟು’ ಅಂದರೆ ಉತ್ಸಾಹ, ಹುರುಪು ತುಂಬು ಎಂದು. ಮೀಸೆ ಹುರಿ ಮಾಡುವುದು ಎಂದರೆ ನುಲಿಯುವುದು, ತೀಡುವುದು. ಹಾಗೆಯೇ ಬಲವುಳ್ಳ, ಸತ್ತ್ವಶಾಲಿಯಾದ ಎಂಬರ್ಥದಲ್ಲಿ ‘ಹುರಿಯಾಳು’ ಶಬ್ದ ಇದೆ. ಈಗ ಹೆಚ್ಚಾಗಿ ಚುನಾವಣೆಗೆ ನಿಲ್ಲುವ ಸ್ಪರ್ಧಿಗಳನ್ನು ಹುರಿಯಾಳು ಎನ್ನುತ್ತೇವೆ. ಅವರಲ್ಲಿ ಸದ್ಗುಣ
ಸತ್ತ್ವಗಳೇನೂ ಇರುವುದಿಲ್ಲ, ಏನಿದ್ದರೂ ಧನಬಲ ಮಾತ್ರ ಎಂದು ಎಲ್ಲರಿಗೂ ಗೊತ್ತಿರುತ್ತದೆ.

ಪುರಿ/ಹುರಿ ಆದಮೇಲೆ ಪುರಿಗಡಲೆ ಅಥವಾ ಹುರಿಗಡಲೆ ಬರುತ್ತದೆ. ನೀರಿನಲ್ಲಿ ನೆನೆಯಿಟ್ಟು ಕಾದ ಮರಳಿನಲ್ಲಿ ಅರಳುವಂತೆ ಹುರಿದ ಕಡಲೆ. ಅದನ್ನು ಹುರಿಗಾಳು ಅಥವಾ ಪುಟಾಣಿ ಎಂದು ಕೂಡ ಹೇಳುತ್ತೇವೆ. ನಾವು ಕರಾವಳಿಯವರು ಇಡ್ಲಿ-ದೋಸೆಗೆ ಕಾಯಿಚಟ್ನಿ ಮಾಡುತ್ತೇವೆ. ಕರ್ನಾಟಕದ ಇತರ ಪ್ರದೇಶಗಳಲ್ಲಿ ಹುರಿಗಡಲೆ ಚಟ್ನಿಯದೇ ಪ್ರಾಧಾನ್ಯ. ನಮ್ಮಲ್ಲಿ ಹುರಿಗಡಲೆ (ಪುಟಾಣಿ) ಬಳಕೆಯಾಗುವುದು ಸಕ್ಕರೆ ಬೆರೆಸಿ ಹಿಟ್ಟು ಮಾಡಿ ಆ ಪಂಚ ಕಜ್ಜಾಯವನ್ನು ಬಾಯಿಗೆ ಹಾಕಿದಕೂಡಲೆ ‘ಬೃಹಸ್ಪತಿವಾರ’ ಎಂದು ಹೇಳುವಾಗ ಭುಸ್ ಎಂದು ಅದು ಹೊರಹಾರುವ ಪರಿ ನೋಡಿ ಆನಂದಿಸಲಿಕ್ಕೆ ಮಾತ್ರ. ಪುರಿಗಡಲೆಯ ಬಳಿಕ ಪುರಿಗಡುಬು. ತುಪ್ಪ ಅಥವಾ ಎಣ್ಣೆಯಲ್ಲಿ ಕರಿದ ಕಡುಬು.

ಕರ್ಜಿಕಾಯಿ ಎನ್ನುತ್ತೇವಲ್ವಾ ಅದೇ ಇರಬೇಕು. ಅಥವಾ ಕೊಂಚ ಭಿನ್ನ ಪ್ರಕಾರವೂ ಇರಬಹುದು. ‘ಪುರಿಗಡುಬು ತಱಗು ಚಕ್ಕುಲಿ| ಕರಂಜಿಗಾಯತಿರಸಂ ಚಿಗುಳಿ ಲಡ್ಡುಗೆ ಸ| ಕ್ಕರೆ ಪೇಣೆಯೊಳವು ಮನ್ಮಂ| ದಿರದೊಳ್ನೀಂ ಬಯಸೆ ಪೋಗಿ ತಂದಪೆನೀಗಳ್’ ಎಂದು ಭಕ್ತನಿಂದ ಶಿವನಿಗೆ ಪ್ರಲೋಭನೆ. ಪುರಿಯೋಡು ಅಂದರೆ ಹುರಿಯುವುದಕ್ಕಾಗಿ ಬಳಸುವ ಲೋಹದ ಅಥವಾ ಮಣ್ಣಿನ ಬಾಣಲೆ ಅಂತೆ. ಹಿಂದೊಮ್ಮೆ ನನ್ನ ‘ವಿಚಿತ್ರಾನ್ನ’ ಪುಸ್ತಕ ಬಿಡುಗಡೆ ವೇಳೆ ಹೊಸ ಪುಸ್ತಕಗಳ ಕಟ್ಟನ್ನು ಮುಖ್ಯ ಅತಿಥಿಗಳು ಬಾಣಲೆಯಿಂದ ತೆಗೆದು ಲೋಕಾರ್ಪಣೆ ಮಾಡುವ ಏರ್ಪಾಡು ಮಾಡಿದ್ದೆ.

ಪುರಿಯೋಡುವಿನಿಂದ ಪೊರೆಕಳಚಿದ ಪುಸ್ತಕಗಳು ಎಂದು ಎಲ್ಲಿಟರೇಟಿವ್ ಹೆಡ್‌ಲೈನ್ ಕೊಡಬಹುದಿತ್ತು ಎಂದು ಈಗ ಅನಿಸುತ್ತಿದೆ. ಇರಲಿ, ಪುರಿ ಪ್ರಿಫಿಕ್ಸ್ ಆಗಿರುವ ಇನ್ನೂ ಕೆಲವು ಪದಗಳ ರಾಶಿಯಲ್ಲಿ ನನ್ನನ್ನು ವಿಶೇಷವಾಗಿ ಆಕರ್ಷಿಸಿದ್ದು ಪುರಿ ವಿಳಂಗಾಯಿ. ‘ಹೆಸರುಬೇಳೆಯ ಹುರಿದು ಬೇಯಿಸಿ ಕೊಂಬುದು, ದೊಡ್ಡ ಸಜ್ಜಿಗೆಯ ಬೇಯಿಸಿಕೊಂಬುದು, ತೆಂಗಿನಕಾಯ ಹೆಸರ ತೋರದಲಿ ಕೊಯಿದು ಹಾಕಿ ಸಕ್ಕರೆಯ ಹಾಕಿ, ಮೆಣಸು ಏಲಕ್ಕಿ
ಕರ್ಪೂರವ ತಳಿದು ಕಲಸುವುದು, ಅಡಕೆಯಷ್ಟು ತೋರ ಉಂಡೆಯ ಮಾಡಿ, ಅಕ್ಕಿಯ ಹಿಟ್ಟ ಸಣ್ಣವಾಗಿ ಅರೆದು, ಗಟ್ಟಿಯಾಗಿ ಕಲಸಿ, ಈ ಉಂಡೆಗಳ ಆ ಹಿಟ್ಟಿನೊಳಗೆ ಅದ್ದಿ, ಕಾದ ತುಪ್ಪದಲ್ಲಿ ಹಾಕಿ ತೆಗೆವುದು. ಇದು ಪುರಿವಿಳಂಗಾಯಿಯೆನಿಸಿಕೊಂಬುದು’ ಎಂದು ಅದರ ರೆಸಿಪಿ, ನಡುಗನ್ನಡ ಶೈಲಿಯಲ್ಲಿ. ಹೆಸರುಬೇಳೆಯ ಸುಕ್ಕಿ ನುಂಡೆಗೆ ಹೋಲಿಕೆಯಿದೆ ಅನಿಸುತ್ತದೆ.

ಈಗಿನ್ನು ಶಬ್ದಕೋಶವನ್ನು ಮುಚ್ಚಿಟ್ಟು ಹುರಿಯ ಹೊಸದೊಂದು ವಿಧವನ್ನು ನಿಮಗೆ ಪರಿಚಯಿಸುತ್ತಿದ್ದೇನೆ. ಇದು ‘ಹುರಿಗವಿತೆ’ ಎಂಬ ಒಂದು ಕಾವ್ಯ ಪ್ರಕಾರ. ಇದರ ಹುರಿಕಾರರು(ಅಲ್ಲ, ಹರಿಕಾರರು) ಖ್ಯಾತ ಅಮೆರಿಕನ್ನಡಿಗ ಸಾಹಿತಿ ಡಾ.ಮೈಸೂರು ನಟರಾಜ. ಇದೊಂಥರದಲ್ಲಿ ದಾಸಸಾಹಿತ್ಯ ದಲ್ಲಿ ಕಂಡುಬರುವ ‘ನಿಂದಾಸ್ತುತಿ’ಗೆ ಹೋಲಿಕೆಯುಳ್ಳದ್ದೇ. ಏನೆಂದರೆ ಒಬ್ಬ ವ್ಯಕ್ತಿಯ ಮೇಲೆ ಉತ್ಕಟ ಪ್ರೀತಿ ಗೌರವಗಳಿದ್ದರೂ ಆತನ ಕಾಲೆಳೆಯುತ್ತ
ಕಿಚಾಯಿಸುತ್ತ ಕೀಟಲೆ ಮಾಡುತ್ತ ಬರೆಯುವ ಕವಿತೆ. ಹೀಗೆಂದಾಗ ನಿಮಗೆ ಮಲ್ಲಿಗೆಕವಿ ಕೆ.ಎಸ್.ನರಸಿಂಹ ಸ್ವಾಮಿಯವರ ಬಗ್ಗೆ ಗೋಪಾಲಕೃಷ್ಣ ಅಡಿಗರು ಬರೆದ ‘ಪುಷ್ಪಕವಿಯ ಪರಾಕು’ ಕವಿತೆ ನೆನಪಾಗಬಹುದು. ಆದರೆ ನನ್ನ ದೃಷ್ಟಿಯಲ್ಲಿ ಅದು ಹುರಿಗವಿತೆ ಅಲ್ಲ.

ಅಲ್ಲಿ ಅಡಿಗರಿಗೆ ಕೆಎಸ್‌ನ ಮೇಲೆ ವಿಪರೀತ ಈರ್ಷೆ ವ್ಯಕ್ತವಾಗಿರುವುದರಿಂದ ಅದು ‘ಉರಿಗವಿತೆ’. ನಟರಾಜರು ಆರಂಭಿಸಿದ ಪ್ರಕಾರದಲ್ಲಿ ಈರ್ಷೆ, ಮತ್ಸರಗಳಿಲ್ಲ. ಜಲಸಿ ಎನ್ನದೆ ಎನ್ವಿ ಎಂದಷ್ಟೇ ಹೇಳಬಹುದಾದ ಆರೋಗ್ಯಕರ ಹೊಟ್ಟೆಯುರಿ ಮಾತ್ರ. ಅಮೆರಿಕದಲ್ಲಿ ಕನ್ನಡದ ಕಟ್ಟಾಳು ಆಗಿದ್ದ ಶಿಕಾರಿಪುರ ಹರಿಹರೇಶ್ವರರನ್ನು ೧೯೯೯ರಲ್ಲಿ ಕ್ಯಾಲಿಫೋರ್ನಿಯಾ ಕನ್ನಡಿಗರು ಸನ್ಮಾನಿಸಿದ ಸಂದರ್ಭದಲ್ಲಿ ನಟರಾಜ್ ಬರೆದ ‘ಹುರಿಯೋಣ ಬನ್ನಿ, ಹರಿಯನ್ನ!’ ಕವಿತೆಯೇ ಇದಕ್ಕೆ ಸಾಕ್ಷಿ.

‘ಹರಿ, ನಿಮ್ಮನ್ನು ಕಂಡರೆ ನನಗೆ ಕೊಂಚ ಉರಿ! ‘ಉರಿಯುವುದು ಸರಿಯೇ?’ ಎನ್ನುವಿರೋ? ಸರಿಯಲ್ಲ, ಅದೂ ನನಗೆ ಗೊತ್ತು, ಆದರೂ… ನನಗೆ ಅರಿವಿಲ್ಲದಂತೆ ಉರಿಯುತ್ತೇನೆ, ಏನು ಮಾಡಲಿ?’ ಎಂದು ಆರಂಭವಾಗುವ ಕವಿತೆ, ಸಲಿಗೆ ತಮಾಷೆ ಧ್ವನಿಯಲ್ಲೇ ಮುಂದುವರಿದು ಹರಿಹರೇಶ್ವರರ ಗುಣಗಾನವನ್ನೆಲ್ಲ ಮಾಡಿ ‘ಹರಿ, ನೀವು ಹೆಣೆದಿರುವ ಈ ಮಿತ್ರರ ಅಂತರ್ಜಾಲ, ಹಿಗ್ಗಿಹಿರಿದಾಗುತಿರಲಿ ಬಹುಕಾಲ! ‘ಸ್ನೇಹದಲಿ ನಿಮ್ಮ’ ಎಂದೇ ಮುಗಿಯುವ ನಿಮ್ಮ ಬರಹದ ಬಾಲ, ಬೀಸುತ್ತಿರಲಿ ನಾನಾ ದಿಕ್ಕಿಗೆ, ಚಿಗುರುತ್ತಿರಲಿ ಚಿರಕಾಲ! ನಿಮ್ಮ ನಿಸ್ವಾರ್ಥ-ಸ್ನೇಹದ ತಂಗಾಳಿ ಸುಯ್ದರೆ ನನ್ನ ಉರಿಗೆಲ್ಲಿದೆ ಉಳಿಗಾಲ?!’ ಎಂದು ಕೊನೆಯಾಗುತ್ತದೆ. ಇಂಗ್ಲಿಷಲ್ಲಿ ‘ಟೋಸ್ಟ್’ಗೆ ಸಂವಾದಿಯಾದ, ಉದ್ದೇಶಿತ ವ್ಯಕ್ತಿಯನ್ನು ಹದವಾಗಿ ರೋಸ್ಟ್ ಮಾಡುವ
ಅತ್ಯಾಕರ್ಷಕ ರೀತಿ.

ಹರಿಯ ಬಗ್ಗೆ ಮಾತ್ರವಲ್ಲ, ಈ ಥರದ ಹುರಿಗವಿತೆಗಳನ್ನು ನಟರಾಜ್ ಆಗಾಗ ಸಂದರ್ಭೋಚಿತವಾಗಿ- ಅಂದರೆ ಷಷ್ಟ್ಯಬ್ದ, ಎಪ್ಪತ್ತು-ಎಂಬತ್ತರ ಶಾಂತಿಗಳು, ವಿವಾಹ ಅಥವಾ ಬೇರೇನಾದರೂ ವ್ಯಕ್ತಿಗತ ಸಮಾರಂಭಗಳಲ್ಲಿ ಆಯಾ ವ್ಯಕ್ತಿಗಳಿಗೆ ಉಡುಗೊರೆ ಯೆಂಬಂತೆ ವಾಚಿಸಿದ್ದಾರೆ. ೧೯೯೫ರಲ್ಲಿ ಅನಂತಮೂರ್ತಿಯವರು ವಾಷಿಂಗ್ಟನ್‌ಗೆ ಬಂದಿದ್ದಾಗ ಇಲ್ಲಿ ಕಾವೇರಿ ಕನ್ನಡ ಸಂಘದಿಂದ ಅವರಿಗೆ ಸನ್ಮಾನ ನಡೆದಾಗ ನಟರಾಜ್ ಒಂದು ಹುರಿಗವಿತೆ ಬರೆದು ಅದೇ ಸಮಾರಂಭದಲ್ಲಿ ವಾಚಿಸಿದ್ದರು. ಅದರಲ್ಲಿ ‘ಸಾರ್, ನಮಗೆ ನೀವು ಹಾಸನದಲ್ಲಿ ಮೇಷ್ಟ್ರಾಗಿದ್ದಾಗ, ನೀವಿನ್ನೂ ನಿಮ್ಮ ಜೀವನದ
ಸ್ತರಗಳನ್ನು ಹುಡುಕುತ್ತಿದ್ದಾಗ, ಯೌವನದ ಹಾದಿಯಲ್ಲಿ ಆ-ಸ್ತರ ಗಳನ್ನು ಈ-ಸ್ತರಗಳನ್ನು ತಡಕುತ್ತಿದ್ದಾಗ ನಿಮಗೆ ದೊರೆತದ್ದು? ಯಾವ ಸ್ತರ? ಎಸ್ತರಾ?!’ ಎಂಬ ಚರಣ ನನ್ನ ಮೋಸ್ಟ್ ಫೇವರಿಟ್.

ಇವು ನಟರಾಜರ ಪ್ರಶಸ್ತಿವಿಜೇತ ‘ಮಧುಚಂದ್ರ ಸಿರಿಕೇಂದ್ರ’ ಕವನ ಸಂಕಲನದಲ್ಲಿರುವ ಕವಿತೆಗಳು. ಇದೀಗ ಅಚ್ಚಿಗೆ ಸಿದ್ಧವಾಗುತ್ತಿರುವ ಹೊಸ ಕವನಸಂಕಲನದ ಕರಡುಪ್ರತಿಯನ್ನು ಮೊನ್ನೆ ಅವರು ಮೊದಲ ಓದಿಗೆಂದು ನನಗೆ ಕಳುಹಿಸಿದ್ದರು. ಅದರಲ್ಲಿಯೂ ಹುರಿ ಗವಿತೆ ಪ್ರಕಾರದವು ಕೆಲವಿವೆ. ಹ್ಯೂಸ್ಟನ್‌ನಲ್ಲಿರುವ ಹಿರಿಯ ಅಮೆರಿಕನ್ನಡಿಗ ವತ್ಸಕುಮಾರ್ ಅವರಿಗೆ ೮೦ ತುಂಬಿದ ಸಂದರ್ಭದಲ್ಲಿ ಬರೆದ ‘ಅಮೆರಿಕದಲ್ಲಿ ಕಾಲಿಟ್ಟ್ ಮೇಲೆ ಏನೇನ್ ಕಂಡಿ? ನ್ಯೂಯಾರ್ಕ್‌ನಲ್ಲಿ ಒಂದಷ್ಟ್ ದಿನ ಸೇರೀ ಕೊಂಡಿ| ಉತ್ತರ್‌ದಲ್ಲಿ ಛಳಿಗಾಲ್‌ದಲ್ಲಿ ತುಂಬಾ ಥಂಡಿ| ದಕ್ಷಿಣ್‌ದಲ್ಲಿ ಸೆಖೆ ಆದ್ರೇನು ಸಿಕ್ ತೈತ್ ತಿಂಡಿ|| ಹ್ಯೂಸ್ಟನ್‌ನಲ್ಲಿ ಸಿಕ್ಕೂತೈತೆ ಹುಳೀ ಹೆಂಡ| ವತ್ಸಂಗ್ ಮಾತ್ರ ಪುರುಸೊತ್ತಿಲ್ಲ ಹಾಕಕ್ ಗುಂಡ| ಟೆಂಪಲ್‌ನಲ್ಲಿ ವೀಕೆಂಡ್ ನಾಗೆ ಜನಗೋಳ್ ತಂಡ| ವೀಕ್‌ಡೇನಲ್ಲಿ ಸಮಯ ಸಿಕ್ಕಾಗ್ ಆಗ್ತಾನ್ ಪುಂಡ…’ ಎಂದು ಮುಂದುವರಿಯುವ ಒಂದು ಹುರಿ ಗವಿತೆ; ಇಲ್ಲಿ ವಾಷಿಂಗ್ಟನ್‌ನಲ್ಲಿ ಎಲ್ಲರಿಗೂ ನೆಚ್ಚಿನ ‘ಆಂಟಿ’ ಆಗಿರುವ ಸುಭದ್ರಾ ಕೇಶವಮೂರ್ತಿ ಅವರಿಗೆ ೮೦ ತುಂಬಿದಾಗ ರಚಿಸಿ ದ್ದೊಂದು ಹುರಿಗವಿತೆ; ಅಷ್ಟೇಏಕೆ, ತನ್ನ ಸ್ವಂತ ಅತ್ತೆ (ಹೆಂಡತಿಯ ತಾಯಿ)ಯನ್ನೂ ‘ಅತ್ತೇನ್ ಹಾಸ್ಯ ಮಾಡಿದ್ರೆ ನಿಮ್ ಕಿವಿ ಕಿತ್ತೆ| ಅಂತ ಅಟ್ಟಿಸ್ಕೊಂಡ್ ಬರೋ ಅತ್ತೆ ಮಗಳನ್ನ ಕಂಡ್ರೆ ತುಂಬ ಭಯವಾಗತ್ತೆ| ಆದ್ರೆ ನಿಜವಾದ್ ವಿಷ್ಯ ಏನ್ ಗೊತ್ತೆ? ಎಲ್ಲಾರ್ಹಂಗಲ್ಲ ನಮ್ಮತ್ತೆ ಲಾಖೋಂಮೆ ಏಕ್ ಅನ್ಸತ್ತೆ ಅಂತ ಹೇಳಿದ್ರೆ ಕೊಂಚ ಉತ್ಪ್ರೇಕ್ಷೆ ಆಗತ್ತೆ!’ ಎಂದು ಹುರಿಗವಿತೆಯಿಂದ ಹುರಿದ ಧೀರ ಅಳಿಯ ನಟರಾಜ್!

ಆದ್ದರಿಂದ ಇನ್ನುಮುಂದೆ ಹುರಿಯುವುದು ಅಂದರೆ ಉಪ್ಪಿಟ್ಟಿಗೆ ರವೆ ಹುರಿಯುವುದು ಎಂಬ ಸೀಮಿತ ಅರ್ಥ ಕಲ್ಪಿಸಿಕೊಳ್ಳಬೇಡಿ. ಸುಮಧುರ ಪ್ರೀತಿಯ ತುಪ್ಪ ಸವರಿ ಸಮಶೀತೋಷ್ಣ ಉರಿಯಲ್ಲಿ ನಿಮ್ಮ ಆಪ್ತರನ್ನೂ ಹದವಾಗಿ ಹುರಿಯಬಹುದು ಎಂದು ಗೊತ್ತಿರಲಿ. ಹುರಿದು ಮುಕ್ಕಬಾರದು ಅಷ್ಟೇ.

Leave a Reply

Your email address will not be published. Required fields are marked *

error: Content is protected !!