Sunday, 23rd June 2024

ಭ್ರಷ್ಟಾಚಾರವನ್ನು ಗಂಭೀರವಾಗಿ ಪರಿಗಣಿಸಬೇಕಲ್ಲವೇ ?

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು 

1336hampiexpress1509@gmail.com

ಎಲ್ಲಾ ಬಿಟ್ಟು ಭಂಗಿ ನೆಟ್ಟ ಎಂಬ ಗಾದೆಯಂತೆ ಲಾಕ್‌ಡೌನ್ ಕಾಲದಲ್ಲಿ ಊರಿಗೆ ಮುಂಚೆ ಬಾರ್‌ಗಳನ್ನು ತೆರೆದಾಗಲೇ ಕುಡುಕರು
ಹೆಮ್ಮೆಪಟ್ಟುಕೊಂಡಿದ್ದರು. ಸರಕಾರದ ಬೊಕ್ಕಸ ತುಂಬಿಸುವವರೇ ನಾವುಗಳು.

ನಮ್ಮಿಂದಲೇ ಸರಕಾರಕ್ಕೆ ಆದಾಯ ಎಂದು ನಿರೂಪಿಸಿದ್ದರು. ಏಕೆಂದರೆ ಕರೋನಾ ಕಂಟಕದಿಂದಾಗಿ ಇಡೀ ದೇಶವೇ ಲಾಕ್
ಡೌನ್ ಆಗಿ ಆರ್ಥಿಕ ಸ್ಥಿತಿ ನೆಲಕಚ್ಚಿದ ಸಂದರ್ಭ ದಲ್ಲಿ ಬಾರ್‌ಗಳನ್ನು ತೆರೆದಾಗ ದಿನದಿಂದ ದಿನಕ್ಕೆ ನೂರಾರು ಕೋಟಿಗಳ ವ್ಯಾಪಾರ ಲಾಭಗಳಾಗಿ ಹಾಳೂರಿಗೆ ಉಳಿದೊಬ್ಬನೇ ಗೌಡ ಎಂಬಂತೆ ಅಬಕಾರಿ ಇಲಾಖೆ ಮಾತ್ರ ಗೆದ್ದು ಕಪ್ ನಮ್ದೆ ಎಂದು ಕುಣಿದಾಡಿತ್ತು.

ದೇಶದಲ್ಲಿ ಅತ್ಯಂತ ಭ್ರಷ್ಟ ಇಲಾಖೆ ಗಳಲ್ಲಿ ಮೊದಲ ಸ್ಥಾನ ಪಡೆದದ್ದು ಆರ್.ಟಿ.ಒ ಎಂಬ ಸಾರಿಗೆ ಇಲಾಖೆ. ಆದ್ದರಿಂದಲೇ ಕೇಂದ್ರ ಸರಕಾರ ಇಡೀ ಸಾರಿಗೆ ಇಲಾಖೆ ಸ್ವರೂಪವನ್ನು ಬದಲಾಯಿಸಲು ಹೊರಟಿದೆ. ಆ ನಂತರದಲ್ಲಿ ಉಪನೋಂದಣಿ, ಅಬಕಾರಿ,
ನಗರಾಭಿವೃದ್ಧಿ ಪ್ರಾಧಿಕಾರಗಳು, ವಾಣಿಜ್ಯ ತೆರಿಗೆ, ಲೋಕೋಪಯೋಗಿ ಇನ್ನಿತರ ಇಲಾಖೆಗಳು ಸೇರುತ್ತದೆ. ಯಾವ ಇಲಾಖೆಯಲ್ಲಿ ಆದಾಯ ಹಣಕಾಸು ಹೆಚ್ಚು ಸಂಗ್ರಹವಾಗುತ್ತದೆಯೋ ಆ ಇಲಾಖೆಯ ಭ್ರಷ್ಟಾಚಾರಗಳು ಹೆಚ್ಚು ನಡೆಯುತ್ತದೆ.

ಇಂಥ ಇಲಾಖೆಗಳಲ್ಲಿ ಡಿ ದರ್ಜೆಯ ನೌಕರರಿಂದ ಮಂತ್ರಿಗಳವರೆಗೂ ಬೇಡಿಕೆ ಹೆಚ್ಚಿರುತ್ತದೆ. ಇತ್ತೀಚೆಗೆ ಅಬಕಾರಿ ಇಲಾಖೆಯ ಜಂಟಿ ಆಯುಕ್ತ ಅಧಿಕಾರಿಯ ಹೊಸಪೇಟೆಯಿಂದ ಬೆಂಗಳೂರಿಗೆ ವರ್ಗಾವಣೆಗೆ ಬರೋಬ್ಬರಿ ಒಂದು ಕೋಟಿ ರುಪಾಯಿಗಳ ಕಪ್ಪು ಕಾಣಿಕೆಗೆ ಅಬಕಾರಿ ಸಚಿವ ಎಚ್. ನಾಗೇಶ್ ಒತ್ತಾಯಿಸಿದ್ದಾರೆಂದು ಅಧಿಕಾರಿಯ ಮಗಳು ಖುದ್ದು ಪ್ರಧಾನ ಮಂತ್ರಿಗಳಿಗೇ ದೂರು
ನೀಡಿzರೆ. ಅಲ್ಲಿಗೆ ಆಕೆಯ ಸಹನೆ ಯಾವ ಹಂತ ತಲುಪಿರಬೇಕು.

ಸಾಮಾನ್ಯವಾಗಿ ಸಾರ್ವಜನಿಕರು ಸರಕಾರಿ ಕಚೇರಿಗಳಲ್ಲಿ ಬೇರೆ ದಾರಿಯಿಲ್ಲದೆ ಲಂಚದ ಹಣವನ್ನು ಮುಖದ ಮೇಲೆ ಬಿಸಾಡಿ ಕೆಲಸ ಮಾಡಿಸಿಕೊಂಡು ಹೊರಡಬಹುದು. ಆದರೆ ಅವರು ಹಾಕುವ ಶಾಪ ಮಾತ್ರ ತಟ್ಟದೆ ಬಿಡುವುದಿಲ್ಲ. ಪ್ರಧಾನಿಗಳಿಗೆ
ದೂರು ನೀಡಿರುವ ಸ್ನೇಹ ಎಂಬುವರ ತಂದೆ ಜಂಟಿ ಆಯುಕ್ತರು ಬಿ.ಪಿ, ಶುಗರ್, ಕಿಡ್ನಿ ವೈಫಲ್ಯ ಸೇರಿದಂತೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬುದು ಪತ್ರಿಕೆಯಲ್ಲಿ ವರದಿಯಾಗಿದೆ. ಇನ್ನೇನು ನಿವೃತ್ತಿ ಅಂಚಿನಲ್ಲಿರುವ ಈ ಅಧಿಕಾರಿಯನ್ನು ಬೆಂಗಳೂರಿನ
ಖಾಲಿ ಇರುವ ಹುದ್ದೆಗೆ ವರ್ಗಾವಣೆ ಕೋರಿದ್ದಕ್ಕೆ ಮಂತ್ರಿ ನಾಗೇಶ್ ಅವರು ಒಂದು ಕೋಟಿ ರುಪಾಯಿಗಳ ಹಣಕ್ಕೆ ಬೇಡಿಕೆ ಇಟ್ಟಿದ್ದರೆಂಬುದು ಸಾಮಾನ್ಯ ವಿಚಾರವಲ್ಲ.

ಏಕೆಂದರೆ ಆ ಇಲಾಖೆಯ ಕಾಲ್ಗುಣವೇ ಅಂಥದ್ದು. ಈಗ ನೋಡಿ ಮಂತ್ರಿ ನಾಗೇಶ್ ಅವರು ತಮ್ಮ ಮೇಲಿನ ಆರೋಪವನ್ನು ಎಂದಿನಂತೆ ನಿರಾಕರಿಸಿ ಹೇಳಿಕೆ ನೀಡಿದ್ದಾರೆ. ಜತೆಗೆ ಆ ಜಂಟಿ ಆಯುಕ್ತ ಅಧಿಕಾರಿ ಮೋಹನ್ ಕುಮಾರ್ ಸರಿಯಿಲ್ಲ. ಆತನ
ಮೇಲೆಯೇ ಹಲವು ಭ್ರಷ್ಟಾಚಾರದ ಆರೋಪಗಳಿವೆ. ಅಸಲಿಗೆ ಆತನ ತಲೆಯೇ ಸರಿಯಿಲ್ಲ. ಆತ ಮಾನಸಿಕ ಅಸ್ವಸ್ಥ ಎಂದು ಹೇಳಿzರೆ. ಇನ್ನೂ ಮುಂದೆ ಹೋಗಿ ತನ್ನ ಜಾತಿಯನ್ನು ಮಧ್ಯದಲ್ಲಿ ಎಳೆದುತಂದು ತಾವು ಎಸ್ಸಿ ಸಮುದಾಯದವನು, ಆದ್ದರಿಂದ ನನ್ನ ಮೇಲೆ ದುರುದ್ದೇಶದಿಂದ ಆರೋಪ ಮಾಡುತ್ತಿದ್ದಾರೆ.

ನನ್ನನ್ನು ಹೆದರಿಸಲು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದೆ ಹೇಳುವ ಮೂಲಕ ಜಾತಿ ಅಸ ಪ್ರಯೋಗಿಸಿ ಸಾಕ್ಷಾತ್ ಪ್ರಧಾನಿ ಮೋದಿಯವರಿಗೇ ಒಂದು ರೀತಿಯಲ್ಲಿ ಯೋಚಿಸುವಂತೆ ಮಾಡಿದ್ದಾರೆ. ಏಕೆಂದರೆ ಇಂಥ ಪ್ರಕರಣದಲ್ಲಿ ನಾಗೇಶ್ ಅವರಿಗೆ ಹಿನ್ನಡೆ ಉಂಟಾದರೆ ಅದು ದಲಿತ ಸಮುದಾಯದ ಮೇಲಾದ ಆಕ್ರಮಣ, ಶೋಷಣೆ. ಬಿಜೆಪಿ ದಲಿತ ವಿರೋಧಿ ಎಂದೆ
ಆರೋಪಗಳು ಸರಕಾರದ ಮೇಲೆ, ಬಿಜೆಪಿ ಮೇಲೆ ಅಪ್ಪಳಿಸುವುದು ಸುಳ್ಳಲ್ಲ.

ಇಂಥ ಸಮಯಕ್ಕಾಗಿಯೇ ಪ್ರತಿಪಕ್ಷಗಳು, ಸಮಯಸಾಧಕ ನಕಲಿ ಹೋರಾಟಗಾರರು ಒಂಟಿ ಕಾಲಿನ ಮೇಲೆಯೇ ನಿಂತಿರುತ್ತಾರೆ.
ಇದರ ಕಳಂಕ ನೇರವಾಗಿ ಮೋದಿಯವರ ಮತ್ತು ಆರ್.ಎಸ್.ಎಸ್ ಮೇಲೆಯೇ ಬೀಳುತ್ತದೆ. ಆದ್ದರಿಂದ ಸನ್ಮಾನ್ಯ ಸಚಿವರಾದ ನಾಗೇಶ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಹೇಗೆ ಮುದ್ದಾಡಿದ್ದರೋ ಅದೇ ಮಮಕಾರದಿಂದ ಬಹಳ ಎಚ್ಚರಿಕೆಯಿಂದ ಇಂಥ
ಪ್ರಕರಣಗಳ್ನು ವಿಚಾರಣೆ ನಡೆಸಬೇಕಿದೆ.

ಇಲ್ಲದಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮತ್ತೊಂದು ತಲೆನೋವು ಹುಟ್ಟಿಕೊಂಡರೆ ಆಶ್ಚರ್ಯವಿಲ್ಲ. ಇನ್ನು ಆ ಜಂಟಿ ಆಯುಕ್ತ ಅಧಿಕಾರಿಯ ಜಾತಿ ಯಾವುದೆಂದು ಬಹಿರಂಗಗೊಂಡಿಲ್ಲ. ಸಚಿವ ನಾಗೇಶ್ ಹೇಳಿರುವಂತೆ ಆತನೂ ಭ್ರಷ್ಟ, ಹುಚ್ಚ ಎನ್ನುವುದಾದರೆ ಆತನ ಮೂರು ದಶಕಗಳ ಇತಿಹಾಸವನ್ನು ತನಿಖೆ ಮಾಡಬೇಕಾಗುತ್ತದೆ. ಪ್ರಸ್ತುತ ಸಚಿವರೇ ತನಿಖೆಗೆ
ಆದೇಶಿದ್ದೇನೆ ಎನ್ನುತ್ತಾರೆ. ಅದರೆ ಎರಡೂ ಕಡೆಯಿಂದ ತನಿಖೆಯಾಗಿ ಅಧಿಕಾರಿಯ ಮತ್ತು ಸಚಿವರ ಆಪ್ತ ಸಹಾಯಕರ ಸುತ್ತಮುತ್ತಲಿನ ನಡವಳಿಯನ್ನು ತನಿಖೆ ಮಾಡಲೇಬೇಕೆಂದು ಆರಂಭಿಸಿದರೆ ಸತ್ಯ ಬಯಲಾಗುತ್ತದೆ.

ಇಲ್ಲದಿದ್ದರೆ ಎಲ್ಲವೂ ಹಳ್ಳ ಹಿಡಿದು ಜನರೂ ಮರೆತುಹೋಗುತ್ತಾರೆ. ಅಸಲಿಗೆ ಈ ಅಬಕಾರಿ ಇಲಾಖೆಯ ಹಣೆಬರಹವೇ ಒಂದು ರೋಚಕ. ಮೊದಲಿಗೆ ಬಾರ್ ಅಂಡ್ ರೆಸ್ಟೊರೆಂಟ್ ತೆರೆದು ಅದರಿಂದ ಸಂಪಾದನೆ ಮಾಡಿ ಜೀವನ ಕಟ್ಟಿಕೊಳ್ಳಬೇಕೆಂದು ಸಂಭಾವಿತ ಜನಸಾಮಾನ್ಯರಾರೂ ಯೋಚಿಸುವುದೇ ಇಲ್ಲ. ಅಂಥ ವ್ಯಾಪಾರಕ್ಕೆ ಇಳಿಯುವುದೇ ಸ್ಥಿತಿವಂತರು, ಹಣವಂತರು, ಪ್ರಭಾವಿಗಳು. ಸಾರ್ವಜನಿಕರ ತಿಳಿವಳಿಕೆಯಂತೆ ಬಾರ್ ತೆರೆಯಲು ಲೈಸೆನ್ಸ್ ಪಡೆಯುವುದಕ್ಕೆ ಹೊರಟಾಗಲೇ ಅವರು ಮೂರನ್ನೂ (ಮುಗ್ಧತೆ ವಿನಮ್ರತೆ ಜಿಪುಣತೆ) ಬಿಟ್ಟವರಾಗಿಬೇಕು.

ಎಂಥ ಪರಿಸ್ಥಿತಿಯನ್ನೂ ಎದುರಿಸಲು ಸಜ್ಜಾಗಿರಬೇಕು. ಅಂಥ ಪರಿಸ್ಥಿತಿ ಎದುರಾದರೆ ಹಣದ ಫುಲ್ ಬಾಟಲನ್ನೇ ಸುರಿಯುವ
ಗುಂಡಿಗೆ ಇರಬೇಕು. ನಿತ್ಯ ಕುಡುಕರ ಅತಿರೇಕ, ಹುಚ್ಚಾಟ, ರಗಳೆ, ರಾದ್ಧಾಂತಗಳೊಂದಿಗೆ ವ್ಯವಹರಿಸಬೇಕು. ಕೆಲವೆಡೆ
ಇಂಥವರ ಮಧ್ಯದೊಳಗೆ ಹೆಣ್ಣೊಬ್ಬಳು ಬಾರ್ ಡ್ಯಾನ್ಸರ್ ಆಗಿ ಕುಣಿಯುತ್ತಾಳೆಂದರೆ ಅಂಥ ಹೆಣ್ಣಿಗೆ ಸೂಕ್ತ ರಕ್ಷಣೆಯನ್ನು ನೀಡುವ ಬೌನರ್‌ಗಳನ್ನು ಸಾಕಬೇಕಾದ ತಯಾರಿಯಿಂದಲೇ ಬಾರ್ ಮಾಲಿಕರು ಸಜ್ಜಾಗಿರುತ್ತಾರೆ.

ಇಂಥ ಕಿಕ್ ವ್ಯಕ್ತಿತ್ವವಿದ್ದರೆ ಮಾತ್ರ ಅಬಕಾರಿ ಇಲಾಖೆಯಲ್ಲಿ ವ್ಯವಹರಿಸಿಕೊಂಡು ಬಾರ್ ಗಳನ್ನು ನೆಮ್ಮದಿಯಾಗಿ ನಡೆಸಲು ಸಾಧ್ಯ. ಇಲ್ಲಿ ಒಂದು ವೈಚಿತ್ರವೂ ಇದೆ. ಅದೇನೆಂದರೆ ಬಾರ್ ನಡೆಸಲು ಪರವಾನಗಿ ಪಡೆಯುವ ವರ್ತಕರು ಹೆಚ್ಚಾಗಿ ಮನೆಯ
ತಾಯಿ ಅಥವಾ ಹೆಂಡತಿಯ ಹೆಸರಿನ ಪಡೆಯುವುದು ವಾಡಿಕೆ. ಏಕೆಂದರೆ ಮಹಿಳೆಯರ ಹೆಸರಿನಲ್ಲಿ ವ್ಯವಹರಿಸಿದರೆ ಇಲಾಖೆ ಯೊಳಗೆ ಕೆಲಸಗಳು ಆದ್ಯತೆ ಮೇರೆಗೆ ಸುಸೂತ್ರವಾಗಿ ನಡೆಯುತ್ತದೆಂಬ ನಂಬಿಕೆಯೂ ಇದೆ.

ಕುಡಿತದಿಂದ ಸಂಸಾರ ಹಾಳು ಎನ್ನಲಾಗುತ್ತದೆ. ಆದರೆ ಇಲ್ಲಿ ಕುಡಿತದ ಪರವಾನಗಿ ಹೆಣ್ಣಿನ ಹೆಸರಿನಲ್ಲಿ ಪಡೆದರೆ ಸಂಸಾರ ಸ್ವರ್ಗ ವಾಗುತ್ತದೆ. ಇಂಥ ಕಿಕ್ ಇರುವ ಇಲಾಖೆಯ ನೌಕರರು ಗುಮಾಸ್ತರು ಅಧಿಕಾರಿಗಳು ಶಿಕ್ಷಣ ಇಲಾಖೆ ಮುಜರಾಯಿ ಇಲಾಖೆ ಯಲ್ಲಿರುವಂತೆ ನೀತಿಪಾಠ ತೀರ್ಥ ಪ್ರಸಾದ ನೀಡುವವರಂತೆ ಇದ್ದರೆ ಸೇವೆ ಸಲ್ಲಿಸಲಾಗುವುದಿಲ್ಲ. ಈ ಕಚೇರಿಗಳ ಖದರೇ ಬೇರೆ
ಯಾಗಿರುತ್ತದೆ. ಹೀಗಾಗಿ ಈ ಇಲಾಖೆಯಲ್ಲಿ ಪರಮ ಭ್ರಷ್ಟಾಚಾರ ನಡೆದರೂ ಅದು ಹೊರಜಗತ್ತಿಗೆ ಗೋಚರಿಸುವುದಿಲ್ಲ.

ರಸ್ತೆಯಲ್ಲಿ ಸಂಚಾರಿ ಪೊಲೀಸರು ಐವತ್ತು ನೂರು ಪಡೆಯುವುದನ್ನೇ ಸಾರ್ವಜನಿಕರು ಭೂತಗನ್ನಡಿಯಿಟ್ಟು ನೋಡುತ್ತಾರೆ. ಆದರೆ ಇಂಥ ಭ್ರಷ್ಟಾಚಾರಭರಿತ ಇಲಾಖೆಗಳಲ್ಲಿನ ಆಗುಹೋಗುಗಳು ಹೀಗೆ ಸಿಡಿದು ಪ್ರಧಾನಿಗಳವರೆಗೂ ಹೋಗುವ ಮಟ್ಟಕ್ಕೆ
ಬಂದಾಗಲೇ ತಿಳಿಯುತ್ತದಷ್ಟೆ. ಸದಾ ಹಾಲನ್ನು ನೀಡುವ ಸೀಮೆಹಸುವಿನಂಥ ಇಲಾಖೆಗಳು, ಕಚೇರಿಗಳು ಸರಕಾರದೊಳಗೆ ನಡೆಯುವ ವರ್ಗಾವಣೆ ಪ್ರಕ್ರಿಯೆಯನ್ನು ದೊಡ್ಡ ದಂಧೆಯನ್ನಾಗಿ ಪರಿವರ್ತಿಸಿವೆ.

ಇದು ಯಾವ ಮಟ್ಟಕ್ಕೆ ತಲುಪಿದೆಯೆಂದರೆ ಕೆಲ ನಿಂಬೆಹಣ್ಣಿನಂಥ ಮಂತ್ರಿಗಳು ವರ್ಗಾವಣೆ ದಂಧೆಯ ಸ್ಪೆಷಲಿಸ್ಟ್‌ಗಳಾಗಿ ಹೋಗಿದ್ದಾರೆ. ಆ ಇಲಾಖೆ ಈ ಇಲಾಖೆ ಯಾವ ಇಲಾಖೆಯನ್ನೂ ಬಿಡದೆ ತಮಗಿರುವ ಪ್ರಭಾವವನ್ನು ಬಳಸಿ ವರ್ಗಾವಣೆ
ದಂಧೆಯಲ್ಲಿ ತೊಡಗುತ್ತಾರೆ. ಇಂಥವರಿಂದಲೇ ಸ್ವಪಕ್ಷಗಳು, ಸಮ್ಮಿಶ್ರ ಸರಕಾರಗಳು ಸರ್ವನಾಶವಾಗಿ ಹೋಗಿವೆ. ಈ ವರ್ಗಾವಣೆ ಪ್ರಕ್ರಿಯೆಯಲ್ಲಿ ಎರಡು ತರಹದ ಶಿಫಾರಸ್ಸುಗಳು ನಡೆಯುತ್ತದೆ.

ಮೊದಲನೆಯದಾಗಿ ನೌಕರರು ಅಧಿಕಾರಿಗಳು ತಮ್ಮ ಸಂಸಾರ, ಮನೆ, ಮಕ್ಕಳ ಶಿಕ್ಷಣ ಮತ್ತು ಅನಾರೋಗ್ಯಕ್ಕೆ ಸಂಬಂಧಿಸಿದ
ಕಾರಣಗಳಿಗಾಗಿ ವರ್ಗಾವಣೆ ಕೋರಿ ಪತ್ರ ಬರೆದು ವಿನಂತಿಸುತ್ತಾರೆ. ಅದಕ್ಕೂ ಸಹ ಶಾಸಕರುಗಳಿಂದ ಮಂತ್ರಿಗಳಿಂದ ಶಿಫಾರಸ್ಸು ಪತ್ರ ಪಡೆಯಲು ಆಯಾ ಕಚೇರಿಗೆ ಎಡತಾಕುತ್ತಾರೆ. ಅಲ್ಲಿಯೂ ಸಹ ಶಾಸಕರು ಮಂತ್ರಿಗಳ ಆಪ್ತಸಹಾಯಕರು ನೌಕರರು ಪುಗಸಟ್ಟೆ ಶಿಫಾರಸ್ಸು ಪತ್ರಗಳನ್ನು ಕೊಡಿಸುವುದಿಲ್ಲ. ಕೆಲವೆಡೆ ಚೋರು ಗುರು ಚಂಡಾಲ ಶಿಷ್ಯರು ಇದ್ದೇ ಇರುತ್ತಾರೆ. ಹೀಗಾಗಿ ಈ ವರ್ಗಾವಣೆ ಅವಧಿ ಭ್ರಷ್ಟರಿಗೆ ವಸಂತಕಾಲವಾದರೆ ಮತ್ತೊಂದು ವರ್ಗಕ್ಕೆ ಕೇಡುಗಾಲ ವಾಗಿ ಪರಿಣಮಿಸುತ್ತದೆ.

ಪಾಪ ಕೆಲವರು ಕೇಳಿದಷ್ಟು ಬಿಸಾಡಿ ತಮ್ಮ ಕೆಲಸವನ್ನು ಮಾಡಿಸಿಕೊಂಡು ಸೇವೆ ಸಲ್ಲಿಸುತ್ತಾ ಹೊಗುತ್ತಾರೆ. ಇದರ ಮೌಲ್ಯಗಳು
ಇಲಾಖೆಯಿಂದ ಇಲಾಖೆಗೆ ವ್ಯತ್ಯಾಸವಿರುತ್ತದೆ. ಶಿಕ್ಷಣ, ಆರೋಗ್ಯ, ತೋಟಗಾರಿಕೆ, ಕೃಷಿ, ಅರಣ್ಯ ಇಲಾಖೆಗಳು ಇಂಥವರ ಪಾಲಿಗೆ ಒಂದು ರೀತಿ ಗೊಡ್ಡು ಹಸುಗಳಿದ್ದಂತೆ. ಅಲ್ಲಿ ಅಷ್ಟೊಂದು ಬಿಸಿನೆಸ್ ಇರುವುದಿಲ್ಲ.

ಇನ್ನು ಎರಡನೇ ರೀತಿಯ ವರ್ಗಾವಣೆಯ ದಂಧೆ ಮಾತ್ರ ಮಾಸ್ಟರ್ ಹಿರಣ್ಣಯ್ಯನವರ ಲಂಚಾವತಾರದ ರಂಗಮಂದಿರವೇ ಆಗಿರುತ್ತದೆ. ಮೇಲೆ ಹೇಳಿದ ಸೀಮೆಹಸುವಿನಂಥ ಇಲಾಖೆಗಳಲ್ಲಿ ಡಿ ದರ್ಜೆಯ ನೌಕರರಿದಂದ ಹಿಡಿದು ಐಎಎಸ್ ಅಧಿಕಾರಿ ಗಳವರೆಗೂ ಇಂತಿಷ್ಟು ಮೌಲ್ಯಾಧಾರಿತ ಮಾನದಂಡಗಳು ಇರುತ್ತದೆ. ಆಯಾಕಟ್ಟಿನ, ಕಚೇರಿಗಳು, ಅಲ್ಲಿನ ಮಂತ್ರಿಗಳು, ಹೀಗೆ ಅಂಥ ಸ್ಥಳಗಳಿಗೆ ಹರಕೆಹೊತ್ತು ಕಾಣಿಕೆ ತುಂಬಿ ವರ್ಗಾವಣೆ ಮಾಡಿಸಿಕೊಳ್ಳಬೇಕಾದ ವ್ರತಗಳಿಂದ ಕೂಡಿರುವುದು ಸುಳ್ಳಲ್ಲ.

ಇದು ಬರಿಯ ವರ್ಗಾವಣೆಯ ಕಾಲದಲಷ್ಟೇ ಅಲ್ಲ, ಅನುಕಂಪ ಆಧಾರಿತ ನೌಕರಿ, ಹೊಸದಾಗಿ ಸೇವೆಗೆ ನೇಮಕಗೊಳ್ಳುವ ಅವಕಾಶಗಳಲ್ಲೂ ಈ ಸೀಮೆಹಸುಗಳನ್ನೇ ಬಯಸುತ್ತಾರೆ. ಹೀಗಾಗಿ ವರ್ಗಾವಣೆ, ನೇಮಕಾತಿ ಎಂಬುದು ಒಂದು ದಂಧೆ ಯಂತಾಗಿರುವುದರಿಂದಲೇ ದುರುಳ ಶಾಸಕರು ಮಂತ್ರಿ ಪದವಿಗಾಗಿ ಕಚ್ಚಾಡುತ್ತಾ ಬಂಡಾಯವೇಳುತ್ತಾ ಸರಕಾರಗಳನ್ನೇ ಉರುಳಿಸುವ ಮಟ್ಟಕ್ಕೆ ಇಳಿಯುತ್ತಾರೆ. ಈ ಮಟ್ಟಕ್ಕೆ ವರ್ಗಾವಣೆ ದಂಧೆಯು ದೈತ್ಯಾಕಾರವಾಗಿ ಬೆಳೆದು ನಿಂತಿದೆ.

ಹಾಗಂತ ಎಲ್ಲರೂ ಇದೇ ಕಾರಣಕ್ಕೆ ಮಂತ್ರಿ ಪದವಿ ಬಯಸುತ್ತಾರೆಂದಲ್ಲ. ಕೆಲವರು ತಮ್ಮ ಹಿರಿತನಕ್ಕಾಗಿ, ಕೆಲವರು ಹೆಸರಿಗಾಗಿ, ಕೀರ್ತಿಗಾಗಿ, ಶೋಕಿಗಾಗಿಯೂ ಅಹಂ ತಣಿಸಿಕೊಳ್ಳಲು ಮಂತ್ರಿಯಾಗಬೇಕೆಂಬ ವಾಂಛೆಯನ್ನು ಹೊಂದಿರುತ್ತಾರೆ. ಇಂಥವರು ಕೋಟ್ಯಾಧಿಪತಿಗಳಾಗಿದ್ದು ಚುನಾವಣೆಯಲ್ಲಿ ಧಾರಾಳವಾಗಿ ಗೆದ್ದು ಬಂದು ಮಂತ್ರಿಯಾಗುವ ಹಪಾಹಪಿ ಹೊಂದಿರುತ್ತಾರೆ.

ಇಂಥವರನ್ನು ಯಡಿಯೂರಪ್ಪನವರಂಥ ಮುತ್ಸದ್ಧಿಗಳು ಮತ್ತು ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯೂ ಸಹ ಸಹಿಸಿ ಕೊಂಡು ಸರಕಾರವನ್ನು ಉಳಿಸಿಕೊಂಡು ನಡೆಸಿಕೊಂಡು ಹೋಗಬೇಕಾದ ಅನಿವಾರ್ಯತೆಗೆ ತಂದೊಡ್ಡಿದೆ. ಈಗ ನೋಡಿ, ಮೊನ್ನೆ ಪತ್ರಿಕೆಯ ವರದಿಯಾದಂತೆ ಕಳೆದ ಎರಡು ವಾರಗಳಿಂದ ಅಬಕಾರಿ ಇಲಾಖೆಯು ಹೆಚ್ಚು ಲಾಭಗಳಿಸುತ್ತಿದೆ. ಹೀಗೆ ದಿಢೀರ್ ವ್ಯಾಪಾರ ಹೆಚ್ಚಾಗಲು ಕಾರಣ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ. ಚುನಾವಣೆ ಘೋಷಣೆಯಾದ ದಿನ ದಿಂದಲೇ ಹಳ್ಳಿಗಳಲ್ಲಿನ ಬಾರುಗಳು ನಳನಳಿಸಲು ಶುರುವಾಗಿದೆ.

ಎಲ್ಲಿಯ ಚುನಾವಣೆ ಎಲ್ಲಿಯ ಅಬಕಾರಿ ಇಲಾಖೆ. ಒಂದೊಕ್ಕೊಂದು ಸಂಬಂಧವಿಲ್ಲದಿದ್ದರೂ ಪ್ರಜಾಪ್ರಭುತ್ವದಲ್ಲಿನ ಅಡ್ಡದಾರಿ ಗಳು ಅಂಥ ಸಂಬಂಧವನ್ನು ಕಲ್ಪಿಸಿದೆ. ಇಂಥ ಸಂಬಂಧವೇ ದೇಶದೊಳಗಿನ ಭ್ರಷ್ಟಾಚಾರ, ಅಪವಿತ್ರ ಚುನಾವಣಾ
ಸೂತ್ರ ಗಳನ್ನು ಬೆತ್ತಲಾಗಿಸುತ್ತಿದೆ. ಈಗ ಇನ್ನೇನು ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯೂ ರಂಗೇರುತ್ತದೆ. ಆಗ ನೋಡಿ ಬೃಹತ್ ನಗರದಲ್ಲಿನ ಬಾರುಗಳು ರೆಸ್ಟೋರೆಂಟ್‌ಗಳು ಮದುವೆ ಮನೆಯಲ್ಲಿನ ಒಡಾಟದಂತೆ ಸಂಭ್ರಮಿಸುತ್ತದೆ.

ಜತೆಗೆ ಬಾಕ್ಸ್‌ಗಟ್ಟಲೆ ಬಾಟಲಿಗಳು ಊರಿನಿಂದ ಊರಿಗೆ ವಾರ್ಡ್‌ನಿಂದ ವಾರ್ಡ್‌ಗೆ ಸಾಗಾಣಿಕೆ ಹೆಚ್ಚಾಗುತ್ತದೆ. ಇದೆ ಸ್ಥಿತಿಗತಿಗಳ ಪ್ರತಿ-ಲವನ್ನು ಅಬಕಾರಿ ಇಲಾಖೆ ಅನುಭವಿಸುತ್ತದೆ. ಹೀಗಾಗಿ ಅಬಕಾರಿ ಇಲಾಖೆಯೊಳಗೆ ಚಟುವಟಿಕೆಗಳು ಚುರುಕುಗೊಂಡು
ಕಚೇರಿಗಳ ನಿರ್ವಹಣೆ ಬಿರುಸುಗೊಳ್ಳುತ್ತದೆ. ಅದರ ಭಾಗವಾಗಿ ವರ್ಗಾವಣೆಗಳೂ ಮೇಳೈಸುತ್ತದೆ. ಇತ್ತೀಚಿನ ಜಂಟಿ ಆಯುಕ್ತ ಮೋಹನ್ ಕುಮಾರ್ ಅವರ ವರ್ಗಾವಣೆ ಮತ್ತು ಲಂಚದ ಆರೋಪದ ವಿಚಾರದಲ್ಲಿ ಅಧಿಕಾರಿಯ ಮಗಳು ಪ್ರಧಾನಿಗಳಿಗೆ
ನೀಡಿರುವ ದೂರಿನಂತೆ ಒಂದೇ ತಿಂಗಳಲ್ಲಿ ಅಬಕಾರಿ ಇಲಾಖೆಯಲ್ಲಿ ಆರುನೂರಕ್ಕೂ ಹೆಚ್ಚು ವರ್ಗಾವಣೆ ಪ್ರಕ್ರಿಯೆಗಳು ನಡೆದಿರುವುದು ಗಮನಾರ್ಹ.

ಅದನ್ನು ಪರಿಶೀಲಸಬೇಕಿದೆ. ಒಂದೊಮ್ಮೆ ನಿಜವಾದರೆ ಸಚಿವ ನಾಗೇಶರ ಒಪ್ಪಿಗೆ ಇರಲೇಬೇಕು. ಅಥವಾ ಇರದಿದ್ದರೆ ಅದೊಂದು ದೊಡ್ಡ ಮಟ್ಟದ ವರ್ಗಾವಣೆ ದಂಧೆಯೇ ಆಗಿರುತ್ತದೆ. ಇಂಥ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಲೋಕಾಯುಕ್ತ ಸಂಸ್ಥೆ ಇದೆಯೇ ಎಂಬುದನ್ನು ಜನ ಮರೆತುಹೋಗಿದ್ದಾರೆ. ಇನ್ನು ಎಸಿಬಿ ಎಂಬ ಸರಕಾರಿ ಪೋಷಿತ ಸಂಸ್ಥೆಗೆ ಎಬಿಸಿಡಿ ಹೇಳು
ವವರು ಬೇಕಾಗಿzರೆ. ಒಟ್ಟಿನಲ್ಲಿ ಸದರಿ ಒಂದು ಕೋಟಿ ಲಂಚ ಆರೋಪದ ದೂರು ಪ್ರಧಾನಿಗಳ ಕಚೇರಿ ತಲುಪಿರುವುದರಿಂದ ಪ್ರಜ್ಞಾವಂತ ನಾಗರಿಕರು ಇದರ ಬಗ್ಗೆ ಕುತೂಹಲವಿರಿಸಿದ್ದಾರೆ. ಅಥವಾ ರಾಜ್ಯ ಬಿಜೆಪಿ ಸರಕಾರವೇ ಇದನ್ನು ಗಂಭೀರವಾಗಿ
ಪರಿಗಣಿಸುತ್ತದೆಯೋ ಕಾದು ನೋಡಬೇಕು.

ಇನ್ನು ಪ್ರತಿಪಕ್ಷಗಳು ಈ ಪ್ರಕರಣದಲ್ಲಿ ಬೊಬ್ಬೆ ಹಾಕುವುದು ಅನುಮಾನ. ಏಕೆಂದರೆ ಸಚಿವ ನಾಗೇಶ್ ಅವರು ಈಗಾಗಲೇ ತಮ್ಮ ಜಾತಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಮಾತನಾಡಿದರೆ ಒಂದು ವರ್ಗದ ಮತಗಳನ್ನು ಕಳೆದುಕೊಂಡಂತೆ.
ಪಾಕಿಸ್ತಾನದ ಭಯೋತ್ಪಾದನೆ ಭಾರತದ ಭ್ರಷ್ಟಾಚಾರ ಕೊನೆಗೊಳ್ಳುವುದಿಲ್ಲ ಎಂಬ ಅಪವಾದವಿದೆ. ಅಂಥ ಕಳಂಕವನ್ನು ಕಳೆಯಬೇಕೆಂದರೆ ಈ ರೀತಿಯ ಲಂಚಾವತಾರದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬೇಕಲ್ಲವೇ?

Leave a Reply

Your email address will not be published. Required fields are marked *

error: Content is protected !!