Sunday, 19th May 2024

ಜಲಕ್ಷಾಮದಿಂದ ಕಲಿಯಬೇಕಾದ ಪಾಠಗಳೇನು ?

ಜಲಸಂಕಷ್ಟ

ಅಮಿತಾಭ್ ಕಾಂತ್

ನಿಮಗೆ ಗೊತ್ತಿರಬಹುದು, ಒಂದು ಕಾಲಕ್ಕೆ ಬೆಂಗಳೂರನ್ನು ಕೆರೆಗಳ ನಗರ ಎಂದೇ ಕರೆಯಲಾಗುತ್ತಿತ್ತು. ಆದರೆ ಇಂದು ಆಗಿರುವುದೇನು? ಎಗ್ಗುಸಿಗ್ಗಿಲ್ಲದ ನಗರೀಕರಣದ ಪರಿಪಾಠವು ಬಹಳಷ್ಟು ಕೆರೆಗಳನ್ನು ಬಲಿತೆಗೆದುಕೊಂಡು ಬಿಟ್ಟಿದೆ. ಹೀಗಾಗಿ ಈ ಮಹಾನಗರಿಯಲ್ಲಿ ತಲೆದೋರಿರುವ ನೀರಿನ ಬಿಕ್ಕಟ್ಟು ಆತಂಕಕಾರಿ ಎನ್ನುವಷ್ಟರ ಮಟ್ಟಕ್ಕೆ ತಲುಪಿಬಿಟ್ಟಿದೆ.

ಐತಿಹಾಸಿಕವಾಗಿ ಹೇಳುವುದಾದರೆ, ಸವಾಲಿನ ರೂಪದಲ್ಲಿರುವ ತನ್ನ ಭೌಗೋಳಿಕತೆ ಹಾಗೂ ವಿರಳ ಮಳೆಯ ಕಾರಣದಿಂದಾಗಿ ಬೆಂಗಳೂರು ನಗರಿಯು ತನ್ನ ಮಡಿಲಲ್ಲಿದ್ದ ಕೆರೆಗಳು ಹಾಗೂ ಜಲಾಶಯಗಳ ಮೇಲೆಯೇ ಅವಲಂಬಿತವಾಗಿತ್ತು; ಆದರೀಗ ಕಳೆದ ೪೦ ವರ್ಷಗಳಲ್ಲೇ ಭೀಕರ ಎನ್ನಬಹುದಾದ ಜಲಕ್ಷಾಮದ ಬಿಗಿಮುಷ್ಟಿಯಲ್ಲಿ ಅದು ಸಿಲುಕುವಂತಾಗಿದೆ. ಬೆಂಗಳೂರಿನ ಕ್ಷಿಪ್ರ ವಿಸ್ತರಣೆಯ ಹುಕಿಗೆ ಬಿದ್ದ ಪರಿಣಾಮವಾಗಿ, ಒಂದು ಕಾಲಕ್ಕೆ ನಗರಿಯ ಬೆಳವಣಿಗೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದ ಜಲಮೂಲಗಳು ನಾಶವಾಗುವಂತಾಗಿದೆ; ಬರೋಬ್ಬರಿ ೧,೦೦೦ದಷ್ಟಿದ್ದ ಕೆರೆಗಳ ಸಂಖ್ಯೆ ಈಗ ೧೦೦ಕ್ಕಿಂತಲೂ ಕಮ್ಮಿಯಾಗಿರುವುದು ಇದಕ್ಕೊಂದು ಸ್ಪಷ್ಟ ನಿದರ್ಶನ.

ಇದು ಪರಿಸ್ಥಿತಿಯ ವ್ಯಂಗ್ಯವಲ್ಲದೆ ಮತ್ತೇನು? ಸರಿಸುಮಾರು ೭,೦೦೦ ಹಳ್ಳಿಗಳು, ೧,೧೦೦ ವಾರ್ಡ್‌ಗಳು ಮತ್ತು ೨೨೦ ತಾಲೂಕುಗಳ ಮೇಲೆ ವ್ಯತಿರಿಕ್ತ
ಪರಿಣಾಮ ಬೀರಿರುವ ಈ ಜಲಬಿಕ್ಕಟ್ಟು, ಯೋಜಿತವಲ್ಲದ ನಗರೀಕರಣದಿಂದ ಒದಗುವ ಪರಿಣಾಮಗಳಿಗೆ ಜ್ವಲಂತಸಾಕ್ಷಿಯಾಗಿದೆ. ಕ್ಷೀಣಿಸುತ್ತಿರುವ ಹಸಿರು ಪ್ರದೇಶಗಳು, ಕಣ್ಮರೆಯಾಗುತ್ತಿರುವ ಜಲಮೂಲಗಳು ಹಾಗೂ ಕುಸಿಯುತ್ತಿರುವ ಅಂತರ್ಜಲ ಮಟ್ಟ ಇವೆಲ್ಲ ಸೇರಿಕೊಂಡು ನಗರದ ಬೇಸಗೆಯ ಬೇಗೆಯನ್ನು ಮತ್ತಷ್ಟು ಕಠೋರವಾಗಿಸಿವೆ.

ಬೆಂಗಳೂರಿನ ಕೆರೆಗಳು ಇಂದು ಎರಡು ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿವೆ. ಅವೆಂದರೆ, ಸ್ಪಷ್ಟಗೋಚರವಾಗಿರುವ ಅತಿಕ್ರಮಣ ಹಾಗೂ ಕ್ಷೀಣಿಸುತ್ತಿರುವ ಕೆರೆಗಳ ನಡುವಿನ ಅಂತರ- ಸಂಪರ್ಕಗಳು. ಇಂಥದೊಂದು ಪ್ರವೃತ್ತಿಯು ನಗರವು ಬರಗಾಲಕ್ಕೆ ಒಳಗಾಗುವ ಸಾಧ್ಯತೆಯನ್ನು ಮಾತ್ರ ವಲ್ಲದೆ, ಪ್ರವಾಹದಿಂದಾಗುವ ಅಪಾಯವನ್ನೂ ಹೆಚ್ಚಿಸಿದೆ. ೨೦೨೩ರ ವರ್ಷದಲ್ಲಿ ಕಂಡು ಬಂದ ಘಟನೆಗಳು ಇದಕ್ಕೆ ಉದಾಹರಣೆಯಾಗಬಲ್ಲವು. ಇದರ ಪರಿಣಾಮವೂ ತೀವ್ರ ಸ್ವರೂಪದಿಂದಲೇ ಕೂಡಿದೆ ಎನ್ನಬೇಕು.

ಅಂದರೆ, ಅನಿಯಂತ್ರಿತ ನಗರೀಕರಣದ ಪರಿಪಾಠವು ಹುಟ್ಟು ಹಾಕಿದ ಪ್ರವಾಹದ ಸ್ಥಿತಿಯಿಂದಾಗಿ ಅಪಾರ ಹಾನಿಗೊಳಗಾದ ಒಳಚರಂಡಿ ಜಾಲವನ್ನು ದುರಸ್ತಿ ಮಾಡಲು ಬೆಂಗಳೂರು ಮಹಾ ನಗರಿಗೆ ಈಗ ಏನಿಲ್ಲವೆಂದರೂ ೨,೮೦೦ ಕೋಟಿ ರುಪಾಯಿಗಳ ಅಗತ್ಯವಿದೆ. ಇದು ಪ್ರಸಕ್ತ ರೂಪುಗೊಂಡಿರುವ ಬಿಕ್ಕಟ್ಟಿನಿಂದಾಗಿ ಹೊರಬೇಕಾಗಿ ಬಂದಿರುವ ಆರ್ಥಿಕ ಹಾನಿಯ ಹೊರೆ ಎಂದರೆ ಅತಿಶಯೋಕ್ತಿಯಲ್ಲ. ಇಷ್ಟು ಸಾಲದೆಂಬಂತೆ, ನಗರದಲ್ಲಿನ ಕೆರೆ
ಗಳು ಹಾಗೂ ಮಳೆನೀರಿನ ಚರಂಡಿಗಳೆಲ್ಲ, ಸನಿಹದ ಕಟ್ಟಡಗಳು ಹಾಗೂ ಜಲಾನಯನ ಪ್ರದೇಶ/ಇಳಿಮೇಡುಗಳಿಂದ ಹೊರ ಹಾಕಲ್ಪಡುವ ಕೊಳಚೆ ನೀರಿನ ಭಂಡಾರಗಳಾಗಿ ರೂಪಾಂತರ ಗೊಂಡುಬಿಟ್ಟಿವೆ!

ಇದರಿಂದಾಗಿ, ಮಳೆನೀರು ಅಥವಾ ಅಸಹಜ ಪ್ರಮಾಣದ ಮೇಲ್ಮೈನೀರನ್ನು ಪರಿಣಾಮಕಾರಿಯಾಗಿ ಹಿಡಿದಿಡಬಲ್ಲ ಅವುಗಳ ಅಸಮರ್ಥತೆ ಉಲ್ಬಣಗೊಂಡಿದೆ; ಬೆಂಗಳೂರಿನಲ್ಲಿ ಪ್ರಸ್ತುತ ನಾವು ಸಾಕ್ಷಿಯಾಗಿರುವ ಜಲಸಂಕಷ್ಟ ಹಾಗೂ ೨೦೨೩ರಲ್ಲಿ ಕಂಡುಬಂದ ಪ್ರವಾಹದ ಪರಿಸ್ಥಿತಿ ಎರಡಕ್ಕೂ ಈ ದುಸ್ಥಿತಿಯೇ ಕಾರಣ. ದಿನಗಳೆದಂತೆ ಕಡಿಮೆಯಾಗುತ್ತಿರುವ ಹಸಿರು ಪ್ರದೇಶಗಳು ಹಾಗೂ ಶರವೇಗದಲ್ಲಿ ವಿಸ್ತರಿಸುತ್ತಿರುವ ‘ಕಾಂಕ್ರೀಟ್’ ಕಾಡಿನ ಕಾರಣದಿಂದಾಗಿ ಜಲಮೂಲಗಳು ಅತಿರೇಕದ ಪ್ರಮಾಣದಲ್ಲಿ ದುರುಪಯೋಗಕ್ಕೆ ಒಳಗಾಗುತ್ತಿರುವುದು ಅಥವಾ ಅವುಗಳ ಅಸಮರ್ಪಕ ನಿರ್ವಹಣೆಯೇ ಬೆಂಗಳೂರು ಮಹಾನಗರಿಯು ಪ್ರಸ್ತುತ ಅನುಭವಿಸುತ್ತಿರುವ ಜಲಸಂಕಷ್ಟಕ್ಕೆ ಮೂಲವಾಗಿದೆ. ಕಳೆದ ಕೆಲವು ದಶಕಗಳಲ್ಲಿ, ನಗರದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಬಳಕೆಯಾಗಿರುವ ಪ್ರದೇಶದ ಪ್ರಮಾಣದಲ್ಲಿ ಬರೋಬ್ಬರಿ ಶೇ.೧,೦೫೫ ರಷ್ಟು ಹೆಚ್ಚಳವಾಗಿರುವುದರಿಂದ, ನೀರಿನ ಮೇಲ್ಮೈ ಅಥವಾ
ಜಲಸ್ತರವೂ ಗಣನೀಯವಾಗಿ ಕುಗ್ಗಿದೆ.

ಕಳೆದ ೫೦ ವರ್ಷಗಳಲ್ಲಿ, ನೀರಿನ ಸ್ತರದ ಹರಡಿಕೆಯು ಶೇ.೭೦ರಷ್ಟು ಕುಸಿದಿದೆ. ಮಿಕ್ಕಿರುವ ಕೆಲವೇ ಜಲಮೂಲಗಳ ಪೈಕಿ ಶೇ.೯೮ರಷ್ಟು ಅತಿಕ್ರಮಣದ
ಬಲಿಪಶುಗಳಾಗಿದ್ದು, ಅವುಗಳ ಪೈಕಿ ಶೇ.೯೦ರಷ್ಟು ಮೂಲಗಳು ಸಂಸ್ಕರಿಸದ ಒಳಚರಂಡಿ ನೀರು ಅಥವಾ ಕೈಗಾರಿಕಾ ತ್ಯಾಜ್ಯ ಗಳಿಂದಾಗಿ ಕಲುಷಿತ ಗೊಂಡಿವೆ. ಈ ದುಸ್ಥಿತಿಯು ಅಷ್ಟಕ್ಕೇ ಸುಮ್ಮನಾಗದೆ ಅಂತರ್ಜಲ ಮರುಪೂರಣದ ಪ್ರಮಾಣಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿ, ನೀರಿನ ಸ್ತರದ ಹರಡಿಕೆಯು ಗಣನೀಯವಾಗಿ ಕುಸಿಯುವುದಕ್ಕೆ ಕಾರಣವಾಗಿದೆ. ಇವು ಬೆಂಗಳೂರು ಮಹಾನಗರಿಯು ಪ್ರಸ್ತುತ ಎದುರಿಸುತ್ತಿರುವ ಜಲ ಸಂಕಷ್ಟಕ್ಕೆ ಕಾರಣವಾಗಿರುವ ಪ್ರಧಾನ ಅಂಶಗಳು. ಬೆಂಗಳೂರನ್ನು ಭಾರತದ ತಂತ್ರಜ್ಞಾನ ವಲಯದ ಕೇಂದ್ರ ಬಿಂದು ಅಥವಾ ‘ಟೆಕ್-ಹಬ್’ ಎಂದು ಕರೆಯುವುದು ನಿಮಗೆಲ್ಲ ಗೊತ್ತಿರುವ ಸಂಗತಿಯೇ.

ಆದರೆ, ಮಹಾನಗರಿಯಲ್ಲಿನ ನೀರಿನ ಬಿಕ್ಕಟ್ಟು ವಿಷಮಸ್ಥಿತಿಯನ್ನು ತಲುಪಿರುವ ಕಾರಣದಿಂದಾಗಿ ಇಲ್ಲಿ ಠಿಕಾಣಿ ಹೂಡಿದ್ದ ತಂತ್ರಜ್ಞಾನ ವಲಯದ ವೃತ್ತಿಪರಿಣತರು ತಂತಮ್ಮ ಊರಿನೆಡೆಗೆ ಸಾಮೂಹಿಕವಾಗಿ ಹೆಜ್ಜೆಹಾಕುವ ಪರಿಪಾಠದಲ್ಲಿ ಹೆಚ್ಚಳವಾಗಿದೆ; ಜೀವನ ನಿರ್ವಹಣೆಯೇ ದುಸ್ತರವಾಗಿರುವಾಗ ಅವರು ತಾನೇ ಏನು ಮಾಡಿಯಾರು? ನೀರಿನ ಲಭ್ಯತೆಗೆ ಹೀಗೆ ಅಂಕುಶ ಬಿದ್ದಿರುವುದನ್ನು ಅಥವಾ ಅದು ತೀರಾ ಸೀಮಿತ ವಾಗಿರುವುದನ್ನು ಮೂಲಭೂತ ಸೌಕರ್ಯದಲ್ಲಿನ ಬೃಹತ್ ದೋಷವೆಂದೇ ಹೇಳಬೇಕು; ಈ ದೋಷವನ್ನು ಈಗಿಂದೀಗಲೇ ಸರಿಪಡಿಸದಿದ್ದರೆ, ಸದ್ಯೋಭವಿಷ್ಯದಲ್ಲಿ ಬೆಂಗಳೂರು ಆಕರ್ಷಿಸಲು ಹೊರಟಿರುವ ಬಂಡವಾಳ ಹೂಡಿಕೆಗಳ ಮೇಲೆ ಅದು ಭಾರಿ ಮಟ್ಟದಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು ಮತ್ತು ದುಬಾರಿ ಯಾಗಿ ಪರಿಣಮಿಸಬಹುದು.

ಮಾತ್ರವಲ್ಲ, ಇದರಿಂದಾಗಿ ಸ್ಥಿರಾಸ್ತಿ (ರಿಯಲ್ ಎಸ್ಟೇಟ್) ಮಾರುಕಟ್ಟೆಯ ಮೇಲೂ ದುಷ್ಪರಿಣಾಮವಾಗಿ, ಬೆಂಗಳೂರು ಲಗತ್ತಿಸಿಕೊಂಡಿರುವ  ‘ತಂತ್ರಜ್ಞಾನ-ಚಾಲಿತ ಆರ್ಥಿಕತೆ’ ಎಂಬ ಖ್ಯಾತಿ/ಪ್ರತಿಷ್ಠೆಯ ಹಣೆಪಟ್ಟಿಗೂ ಸಂಚಕಾರ ಒದಗಬಹುದು. ಮಹಾನಗರಿಯ ವ್ಯಾಪ್ತಿಯಲ್ಲಿ ಅಂತರ್ಜಲದ
ಸ್ತರವು ಭಾರಿ ಪ್ರಮಾಣದಲ್ಲಿ ಕುಸಿದಿರುವ ಕಾರಣದಿಂದಾಗಿ ಶೇ.೫೦ಕ್ಕೂ ಹೆಚ್ಚಿನ ಕೊಳವೆಬಾವಿಗಳು ಈಗಾಗಲೇ ಒಣಗಿ ಹೋಗಿವೆ; ಹೀಗಾಗಿ ಸ್ಥಿರಾಸ್ತಿಗಳ ಅಭಿವರ್ಧಕರು (ಅಂದರೆ, ರಿಯಲ್ ಎಸ್ಟೇಟ್ ಡೆವಲಪರ್‌ಗಳು) ಸಂದಿಗ್ಧತೆಯ ಕೂಪದಲ್ಲಿ ಸಿಲುಕಿದ್ದಾರೆ. ನೀರಿನ ಲಭ್ಯತೆಯಲ್ಲಿನ ಅನಿಶ್ಚಿತತೆಯಿಂದ
ಹುಟ್ಟಿಕೊಂಡಿರುವ ಸಮಸ್ಯೆಗಳ ಪಟ್ಟಿ ಇಷ್ಟಕ್ಕೇ ನಿಲ್ಲುವುದಿಲ್ಲ; ಹೂಡಿಕೆದಾರರ ವಿಶ್ವಾಸಕ್ಕೂ ಅದು ತಡೆಗೋಡೆಯಾಗಿ ಪರಿಣಮಿಸಿದೆ.

ಹೀಗಾಗಿ ಯೋಜನೆಗಳ ಸಕಾಲಿಕತೆ ಮತ್ತು ಲಾಭ ದಾಯಕತೆಯ ಮೇಲೆ, ಅದರಲ್ಲೂ ನಿರ್ದಿಷ್ಟವಾಗಿ ನಿರ್ಬಂಧಿತ ನಿರ್ಮಾಣ ಪರವಾನಗಿಗಳನ್ನು ಹೊಂದಿರುವಂಥ ಯೋಜನೆಗಳ ಮೇಲೆ ಆತಂಕದ ಛಾಯೆ ಮುಸುಕುವಂತಾಗಿದೆ. ಹಾಗಾದರೆ, ಈ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇ? ಖಂಡಿತಾ ಇದೆ. ಮುಖ್ಯವಾಗಿ, ಬೆಂಗಳೂರು ಮಹಾನಗರಿಯಲ್ಲಿನ ನೀರಿನ ಮರುಬಳಕೆ ಹಾಗೂ ಮಳೆನೀರು ಕೊಯ್ಲು ವ್ಯವಸ್ಥೆ/ ಕಾರ್ಯವಿಧಾನಗಳನ್ನು ಮರು ವಿನ್ಯಾಸಗೊಳಿಸಬೇಕಾದ ಹಾಗೂ ಮರುಸ್ಥಾಪಿಸಬೇಕಾದ ಅಗತ್ಯವು ಹಿಂದೆಂದಿಗಿಂತ ಹೆಚ್ಚಾಗಿದೆ.

ಪ್ರಸ್ತುತ, ಬೆಂಗಳೂರಿನ ತ್ಯಾಜ್ಯನೀರಿನ ಕೇವಲ ಮೂರನೇ ಒಂದರಷ್ಟು ಭಾಗವನ್ನು ಬಾಹ್ಯ ಸ್ವರೂಪದಲ್ಲಿ ಮರುಬಳಕೆ ಮಾಡಲಾಗುತ್ತಿದ್ದು, ಈ ಪರಿಪಾಠವು ನೀರಿನ ಜಲಾಶಯಗಳನ್ನು ಮತ್ತು ಅಂತರ್ಜಲದ ಮಟ್ಟವನ್ನು ಮರುಪೂರಣಗೊಳಿಸುತ್ತದೆ. ಮಿಕ್ಕ ಜಲಭಾಗವು ಕೆರೆಗಳಿಗೆ ಅಥವಾ ಅದರ ಹರಿವಿನ ದಿಕ್ಕಿನಲ್ಲಿರುವ ನದಿಗಳಿಗೆ ಹರಿಯುತ್ತದೆ. ಇದು ಅಗಾಧವಾಗಿದ್ದೂ ಬಳಕೆಯಾಗದ ನೀರಿನ ಸಂಪನ್ಮೂಲವನ್ನು ಪ್ರತಿನಿಧಿಸುತ್ತದೆ. ಈ ತ್ಯಾಜ್ಯನೀರನ್ನು ಸರಿಯಾಗಿ ಬಳಸಿಕೊಂಡರೆ, ಅದು ಸಿಹಿನೀರಿನ ಬಳಕೆಯನ್ನು ಗಣನೀಯವಾಗಿ ತಗ್ಗಿಸಬಲ್ಲದು ಹಾಗೂ ಇದನ್ನು ಸಮರ್ಪಕ ರೀತಿಯಲ್ಲಿ ಸಂಸ್ಕರಿಸಿದ್ದೇ ಅದಲ್ಲಿ ಬೆಂಗಳೂರು ಮಹಾನಗರಿ ಯಲ್ಲಿನ ನೀರಿನ ಲಭ್ಯತೆಯನ್ನು ಅದು ಮತ್ತಷ್ಟು ಹೆಚ್ಚಿಸಬಲ್ಲದು.

ಮುಂಬರುವ ೫-೬ ದಶಕಗಳಲ್ಲಿ, ನಗರೀಕರಣದ ಪರಿಣಾಮ ವಾಗಿ ಲಕ್ಷಾಂತರ ಜನರು ನಗರಗಳಿಗೆ ತಮ್ಮ ನೆಲೆಯನ್ನು ಬದಲಿಸಿ ಕೊಳ್ಳುವುದನ್ನು, ಅಂದರೆ ಸ್ಥಳಾಂತರಗೊಳ್ಳುವುದನ್ನು ಕಾಣಲಿ ದ್ದೇವೆ. ಇದನ್ನು ಗಮನದಲ್ಲಿಟ್ಟುಕೊಂಡು, ಪರಿಣಾಮಕಾರಿ ನೀರಿನ ನಿರ್ವಹಣೆಗೆ ಒತ್ತುನೀಡುವುದು ಸುಸ್ಥಿರ ನಗರೀಕರಣದ ಪರಿಪಾಠದಲ್ಲಿ ಆದ್ಯತೆಯಾಗಿ ಪರಿಣಮಿಸಬೇಕು. ಕಾರಣ, ಬೆಂಗಳೂರಿನಲ್ಲಿ ಪ್ರಸ್ತುತ ತಲೆದೋರಿರುವ ನೀರಿನ ಬಿಕ್ಕಟ್ಟು, ಸುಸ್ಥಿರ ನಗರೀಕರಣ ಪರ್ವದಲ್ಲಿ ನೀರಿನ ದಕ್ಷ ನಿರ್ವಹಣೆಯು ವಹಿಸುವ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುವ ಒಂದು ಎಚ್ಚರಿಕೆಯ ಗಂಟೆಯೇ ಆಗಿದೆ. ಹೀಗಾಗಿ, ಈ ಸ್ಥಿತಿಯನ್ನು ಮಿಕ್ಕ ನಗರಗಳು ಒಂದು ಪಾಠವಾಗಿ ಪರಿಗಣಿಸಬೇಕು.

ನಗರಾಭಿವೃದ್ಧಿಯ ಹುಕಿಗೆ ಬಿದ್ದವರು ತೋರಿದ ಬುದ್ಧಿಗೇಡಿತನದಿಂದಾಗಿ, ದೀರ್ಘಾವಧಿಯಲ್ಲಿ ಮೌಲ್ಯಯುತವಲ್ಲದ ಆಯ್ಕೆಗಳತ್ತ ಬೆಂಗಳೂರು ಮಹಾನಗರಿಯು ಹೆಜ್ಜೆಹಾಕುವಂತಾಯಿತು. ಮಾತ್ರವಲ್ಲ, ಅದಾಗಲೇ ಅಸ್ತಿತ್ವದಲ್ಲಿದ್ದ ಹೆಚ್ಚು ಸಮರ್ಥನೀಯ ಜಲಮೂಲಗಳೂ ಕ್ಷೀಣವಾಗುವುದಕ್ಕೆ ಅದು ಅನುವುಮಾಡಿ ಕೊಟ್ಟಿತು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆಳುಗರು ಈಗ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ. ನಮ್ಮ ಸುತ್ತಲಿನ ಬದಲಾಗುತ್ತಿರುವ ಹವಾಮಾನದೊಂದಿಗೆ ನಮ್ಮ ‘ಅಭಿವೃದ್ಧಿಯ ಮಹತ್ವಾಕಾಂಕ್ಷೆಗಳನ್ನು’ ಸಮತೋಲನ ಗೊಳಿಸಿ ಕೊಳ್ಳಬೇಕಿದೆ. ತ್ವರಿತಗತಿಯಲ್ಲಿ ನಗರೀಕರಣಕ್ಕೆ ಒಡ್ಡಿಕೊಳ್ಳುತ್ತಿರುವ ಭಾರತವು ಮುಂಬರುವ ವರ್ಷಗಳಲ್ಲಿ ಈ ಪ್ರಮುಖಾಂಶವನ್ನು ಗಮನದಲ್ಲಿಟ್ಟುಕೊಂಡರೆ ಒಳಿತು.

(ಲೇಖಕರು ನೀತಿ ಆಯೋಗದ ಮಾಜಿ ಸಿಇಒ)

Leave a Reply

Your email address will not be published. Required fields are marked *

error: Content is protected !!