Saturday, 27th July 2024

ಪದವಿ ಶಿಕ್ಷಣದೆದುರು ಭಾರಿ ಅವಕಾಶಗಳು

ಶಿಕ್ಷಣ

ಡಾ.ಆರ್.ಜಿ.ಹೆಗಡೆ 

ಪದವಿ ಶಿಕ್ಷಣದ ಉದ್ದೇಶದಲ್ಲಿ ವ್ಯಾಪಕ ಬದಲಾವಣೆ ಬಂದಿದೆ. ಅದರ ಗುರಿ ಹಿಂದೆ (ಕೆಲವರು) ಭಾವಿಸಿದ್ದಂತೆ dispassionate pursuit of knowledge ಅಂದರೆ ‘ಭಾವನಾರ ಹಿತವಾದ ಸತ್ಯದ ಶೋಧವಾಗಿ’ ಉಳಿದಿಲ್ಲ. ಅಥವಾ ಬ್ರಿಟಿಷ್‌ರಾಜ್ ಕಾಲದಲ್ಲಿದ್ದಂತೆ ಗುಮಾಸ್ತರನ್ನು ಮತ್ತು ಅಂತಹ ದರ್ಜೆಯ ಪ್ರಭುತ್ವದ
ಸೇವೆಯ ಕೆಲಸಕಾರರನ್ನು ತಯಾರಿಸುವುದು ಆಗಿ ಉಳಿದಿಲ್ಲ.

ಗುರಿಗಳು ಬದಲಾಗಿ ಹೋಗಿವೆ. ನಿರ್ದಿಷ್ಟ, ಸ್ಪಷ್ಟ ಗುರಿಗಳು, ನಿರೀಕ್ಷೆಗಳ ಜತೆಗೆ ಪದವಿ ಶಿಕ್ಷಣವೂ ತಾಂತ್ರಿಕ ಶಿಕ್ಷಣದ ಹಾಗೆ ಆಗಬೇಕು. ಮೂಲಭೂತವಾಗಿ ಡೀಸೆಂಟ್ ಆದ ನೌಕರಿ ದೊರಕಿಸಿಕೊಡಬೇಕು. ಕ್ಯಾಂಪಸ್ ರಿಕ್ರೂಟ್ ಮೆಂಟ್ ಒದಗಿಸಬೇಕು. ಕನಿಷ್ಠ ಉತ್ತಮ ಉದ್ಯೋಗ ದೊರಕಿಸಿ ಕೊಡಬಲ್ಲ ಪೋಸ್ಟ ಗ್ರಾಜುವೇಟ್‌ನ ಮೆಟ್ಟಿಲಾಗಬೇಕು. ಆರ್ಥಿಕ ವ್ಯವಸ್ಥೆಯ ನಿರೀಕ್ಷೆ ಕೂಡ ಇದೇ. ಕಲಿತು ಮುಗಿಸಿದ ವಿದ್ಯಾರ್ಥಿಗಳು ವಿಶಿಷ್ಟ , ವಿಶೇಷ ಜ್ಞಾನ ಮತ್ತು ಕೌಶಲಗಳನ್ನು ಹೊಂದಿ ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕ್ಷಮತೆ ಹೊಂದಿರಬೇಕು.

ಎಂಜಿನಿಯರಿಂಗ್, ಎಂಬಿಎ. ನಾನಾ ಪೋಸ್ಟ್‌ಗ್ರಾಜುವೇಟ್ ಕೋರ್ಸಗಳು, ಕಾನೂನು, ಇವುಗಳಿಗಿಂತ ತುಸು ಕೆಳಗಿನ ಹಂತದಲ್ಲಿ ಸೃಷ್ಟಿಯಾಗಿರುವ, ಬ್ಯಾಂಕು ಗಳು, ಇನ್‌ಶುರನ್ಸ್, ವಾಣಿಜ್ಯ, ಐಟಿ, ಬಿ.ಟಿ, ವಿಜ್ಞಾನ ಸಂಬಂಧಿ ಉತ್ಪಾದನಾ ಉದ್ದಿಮೆಗಳು, ಆಹಾರ ಸಂಸ್ಕರಣೆ, ಕೇಟರಿಂಗ್ ಮತ್ತು ಟೂರಿಸಂನಂತಹ ನಾನಾ
ಕ್ಷೇತ್ರಗಳಲ್ಲಿ ಕೆಲಸ ಮಾಡಬಲ್ಲ ಮೂಲ ತರಬೇತಿ ಹೊಂದಿರಬೇಕು. ಕೆಳಗಿನ ಹಂತದ ಶಿಕ್ಷಣದ ಅವಶ್ಯಕತೆ ಪೂರೈಸಬಲ್ಲ ಜಾಗತಿಕ ಗುಣಮಟ್ಟದ ಶಿಕ್ಷಕರನ್ನು ತಯಾರಿಸುವಂತಿರಬೇಕು. ಸಮಾಜದ ಅಭಿಪ್ರಾಯದಲ್ಲಿ ಇಂದು ಹಾಗೆ ಆಗುತ್ತಿಲ್ಲ. ಬಹುತೇಕ ಪದವೀಧರರು ಈ ನಿರೀಕ್ಷೆ ಮುಟ್ಟಲು ವಿಫಲರಾಗಿದ್ದಾರೆ.

ಆದ್ದರಿಂದ ಅವರು ಅನ್ ಎಂಪ್ಲಾಯೆಬಲ್ (ಕೆಲಸಗಳನ್ನು ನಿರ್ವಹಿಸಲು ಅಶಕ್ತರಾದವರು) ಎಂಬ ಭಾವನೆ ಈ ವಲಯಕ್ಕೆ ಇದೆ. ಪದವಿ ಶಿಕ್ಷಣದ ಮೇಲಿನ ನಿರೀಕ್ಷೆಯಲ್ಲಿ ವ್ಯಾಪಕ ಬದಲಾವಣೆ ಬಂದಿರುವುದಕ್ಕೆ ಹಲವು ಕಾರಣಗಳಿವೆ. ಒಂದನೆಯದು ಇದು ದೇಶದ ಅತಿ ದೊಡ್ಡ ಯುವಕ ಯುವತಿಯರ ಪೂಲ್. ಕೋಟಿ ಗಟ್ಟಲೆ ಯುವಜನ ಈ ಸಂಸ್ಥೆಗಳಲ್ಲಿ ಈಗ ಕಲಿಯುತ್ತಿದ್ದಾರೆ. ಭಾರೀ ಪ್ರಮಾಣದಲ್ಲಿ ಮತ್ತು ಸುಮಾರಾಗಿ ಎರಡನೇ ದರ್ಜೆಯ, ಲಕ್ಷಗಟ್ಟಲೆ ಜನ ಬೇಕಾಗುವ ಕೆಲಸದ ಕ್ಷೇತ್ರಗಳಿಗೆ ವರ್ಕ್ ಫೋರ್ಸ್ ಬರಬೇಕಾದುದು ಇಲ್ಲಿಂದಲೇ. ಹಾಗೆಯೇ, ಹೆಚ್ಚಾಗಿ ಈ ಜನರಲ್ ಪದವಿ ಶಿಕ್ಷಣದಿಂದ ಹೊರಬರುವವರು ಕೆಳಮಧ್ಯಮ ವರ್ಗ ಅಥವಾ ಹಳ್ಳಿಗಳಿಂದ ಬರುವವರು. ಈ ವರ್ಗ ಇಂದಿನ ದಿನಗಳಲ್ಲಿ ತುಂಬ ಅಸ್ಪಿರೇಶನಲ್ ಆದ ಯುವಜನತೆಯನ್ನು ಹೊಂದಿದ ವರ್ಗ. ಈ ಯುವಕ ಯುವತಿಯರು ಹದಿನೈದು ಇಪ್ಪತ್ತು ವರ್ಗಗಳ ಹಿಂದಿನ ಹಿಂದಿನವರಂತಲ್ಲ. ಭಾರೀ ಶಕ್ತಿ ಮತ್ತು ಉತ್ಸಾಹ ಹೊಂದಿದ ವರ್ಗ ಇದು.

ಮಧ್ಯಮ ವರ್ಗದ ಜೀವನ ವಿಧಾನ ಪಡೆಯಲಿಚ್ಛಿಸುವವರು ಇವರು. ಈ ಯುವಜನರಿಗೆ ಕಠಿಣವಾದ ದೈಹಿಕ ಪರಿಶ್ರಮದಲ್ಲಿ ತೊಡಗಿಕೊಳ್ಳುವ ಶಕ್ತಿ ಕೂಡ ಇದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಹೋಗಿ ಯಾವ ರೀತಿ ಉದ್ಯೋಗ ಮಾಡಲು ಕೂಡ ಅವರು ಸಿದ್ಧ. ಅವರ ಇಂತಹ ಆಶೋತ್ತರಗಳಿಗೆ ಅವರ ಹೆತ್ತವರ
ಬೆಂಬಲವೂ ಇದೆ. ಏಕೆಂದರೆ ಸಾಂಪ್ರದಾಯಿಕ ಕೃಷಿ ವ್ಯವಸ್ಥೆ ಕುಸಿದಿರುವ ಹಿನ್ನೆಲೆಯಲ್ಲಿ ಬೇರೆ ದಾರಿ ಇಲ್ಲ. ಅಲ್ಲದೆ ಸರಿಯಾದದ್ದನ್ನು, ಸರಿ ರೀತಿಯಲ್ಲಿ ಕಲಿತರೆ ಬೇಕಷ್ಟು ಉದ್ಯೋಗಾವಕಾಶಗಳಿವೆ ಎಂಬುದು ಅರ್ಥವಾಗಿದೆ.

ಇನ್ನೂ ಒಂದು ವಿಷ ಯ. ಜಾಗತೀಕರಣದ ನಂತರ ಮೊದಲ ಹಂತದಲ್ಲಿ ದೇಶದ ಬೆಳವಣಿಗೆಗೆ ಭಾರಿ ಕೊಡುಗೆ ನೀಡಿದವು ಎಂಜಿನಿಯರಿಂಗ್, ಸೈನ್ಸ್ ಅಂಡ್ ಟೆಕ್ನಾಲಜಿ, ಮ್ಯಾನೇಜ್ಮೆಂಟ್ ಮತ್ತು ಮೆಡಿಕಲ್ ಶಿಕ್ಷಣ (ಸ್ಟೆಮ್) ವ್ಯವಸ್ಥೆ ಗಳು. ಅವು ಭಾರಿ ಪ್ರಮಾಣದಲ್ಲಿ ಗುಣಮಟ್ಟದ ಪದವೀಧರರನ್ನು, ಸ್ನಾತಕೋತ್ತರ ಪದವೀಧರರನ್ನು ಸೃಷ್ಟಿಸಿ ದೇಶದ ಹೊಸ ಆರ್ಥಿಕತೆಯ ಬೆನ್ನೆಲುಬಾದವು. ಐಟಿಗೆ ಸಂಬಂಧಿಸಿಯಂತೂ ಜಗತ್ತಿನಾದ್ಯಂತದ ಬೇಡಿಕೆಗಳನ್ನೂ ಪೂರೈಸಿದವು.
ಆಗ ಅಂತಹ ಶಿಕ್ಷಣ ಪಡೆದ ಲಕ್ಷ ಲಕ್ಷ ಜನ ಅದರ ಫಲವಾಗಿ ಇಂದು ಉನ್ನತ ಮಧ್ಯಮ ಮತ್ತು ಶ್ರೀಮಂತ ವರ್ಗ ಸೇರಿ ಬಿಟ್ಟಿದ್ದಾರೆ. ಅದರಿಂದ ಸೃಷ್ಟಿಯಾಗಿರುವ ಬೃಹತ್ ಆರ್ಥಿಕತೆ ದೇಶದಲ್ಲಿ ಈವರೆಗೆ ಅಷ್ಟೊಂದು ಚುರುಕಾಗಿರದಿದ್ದ ಟ್ರಾವೆಲ್ ಮತ್ತು ಹಾಸ್ಪಿಟಾಲಿಟಿ, ಕ್ಯಾಟರಿಂಗ್, ಸೌಂದರ್ಯ ವರ್ಧನೆ, ಫುಡ್ ಪ್ರಿಪರೇಶನ್ ಮತ್ತು ಹಂಚಿಕೆ, ವೆಲ್‌ನೆಸ್, ಬಟ್ಟೆ, ಪ್ಯಾನ್ಸಿ ಮಾರಾಟ ಕ್ಷೇತ್ರಗಳನ್ನು ಚುರುಕಾಗಿಸಿವೆ.

ಕೆಳ ಹಂತದಲ್ಲಿ, ಚಿಕ್ಕ ಚಿಕ್ಕ ನಗರಗಳಲ್ಲಿ ಕೂಡ ದೊಡ್ಡ ಪ್ರಮಾಣದಲ್ಲಿ ವಾಣಿಜ್ಯ ವ್ಯವಹಾರವನ್ನು ಸೃಷ್ಟಿಸಿದೆ. ಹೀಗೆ ಬಂದಿರುವ ೨ನೆಯ ಹಂತದ ಆರ್ಥಿಕ ಕ್ರಾಂತಿ ರಥವನ್ನು ಎಳೆಯಬಹುದಾದ, ಉದ್ಯೋಗಗಳನ್ನು ಹ್ಯಾಂಡಲ್ ಮಾಡಬಲ್ಲ ಕೆಲಸ ವನ್ನು ಜನರಲ್ ಪದವಿ ಶಿಕ್ಷಣ ಮಾಡಬೇಕಿದೆ. ಸೂಕ್ತ ಬದಲಾವಣೆ ಮಾಡಿದ ರೆ ಅದು ಸಾಧ್ಯ ಅನ್ನುವ ವಿಷಯ ಆರ್ಥಿಕ ವಲಯಕ್ಕೆ, ಸಮಾಜಕ್ಕೆ ತಿಳಿದಿದೆ. ಹಾಗಾಗಿ ಮೊದಲ ದರ್ಜೆಯ ಉದ್ಯೋಗಗಳಿಗೆ ಪೂರಕ ವಾದ ಉದ್ಯೋಗಗ ನಿಭಾಯಿಸುವ ಹೊಣೆಯನ್ನು ಪದವಿ ಶಿಕ್ಷಣದ ಮೇಲೆ ಸಮಾಜ ಮತ್ತು ಆರ್ಥಿಕ ವ್ಯವಸ್ಥೆಯೇ ಹಾಕಿ ಬಿಟ್ಟಿವೆ. ಪದವಿ ಶಿಕ್ಷಣದ ಮೇಲೆ ಒಮ್ಮೆಲೇ ಭಾರಿ ಪ್ರಮಾಣದ ನಿರೀಕ್ಷೆ ಬಂದಿದೆ. ಇದು ಪದವಿ ಶಿಕ್ಷಣ ಸಂಸ್ಥೆಗಳಿಗೆ ಬೃಹತ್ತಾಗಿ ಬೆಳೆಯುವ ಅವಕಾಶ ಸೃಷ್ಟಿಸಿದೆ.

ಒಂದು ರೀತಿಯ ತಳಮಳ, ರೆಸ್ಟಲೆಸ್‌ನೆಸ್ ಕಾಲೇಜು ಕ್ಯಾಂಪಸ್‌ಗಳನ್ನು ತುಂಬಿದೆ. ತಡಕಾ ಡುತ್ತ, ಹುಡುಕಾಡುತ್ತ, ಅನುಮಾನ ಪಡುತ್ತ ಆದರೂ ಅಲ್ಲಿ ಇಲ್ಲಿ ಕಾಲೇಜುಗಳಲ್ಲಿ (ಸಣ್ಣ ಪ್ರಮಾಣದ) ಕ್ಯಾಂಪಸ್ ರಿಕ್ರೂ ಟ್ ಮೆಂಟ್‌ಗಳು ಆರಂಭವಾಗಿವೆ. ಪದವಿಯ ಸಿಲಬಸ್ ಏನಿರಬೇಕು? ಹೇಗಿರಬೇಕು? ಯಾವ ವಿಷಯ, ಹೇಗೆ ಕಲಿಸಬೇಕು ಇತ್ಯಾದಿ ಕುರಿತು ಹುಡುಕಾಟ ಆರಂಭವಾಗಿದೆ. ಸಿಲಬಸ್ ಜತೆ ಆರ್ಥಿಕ ವ್ಯವಸ್ಥೆ ಬೇಡುವ ಸ್ಕಿಲ್‌ಗಳನ್ನು ಜೋಡಿಸುವುದು ಹೇಗೆ ಎನ್ನುವ ಚಿಂತನೆ ಸರಕಾರ ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲೂ ಆರಂಭವಾಗಿದೆ. ಖಾಸಗಿ ಯಾಗಿ ‘ಫಿನಿಶಿಂಗ್’ ಸ್ಕೂಲ್‌ಗಳು ಆರಂಭವಾಗಿವೆ.

ಮಹತ್ವದ ಬೆಳವಣಿಗೆಯಲ್ಲಿ ಅವಕಾಶದ ವಾಸನೆ ಬಡಿದಿರುವ ಹಲವು ಪ್ರಸಿದ್ಧ ಎಂಜಿನಿಯರಿಂಗ್ ಕಾಲೇಜು ಗಳು ತಮ್ಮಲ್ಲಿ ಪದವಿ ಕೋರ್ಸ್‌ಗಳನ್ನು ಆರಂಭಿಸಿವೆ. ಇವನ್ನೆಲ್ಲ ಗಮನಿಸಿರುವ ರಾಷ್ಟೀಯ ಶಿಕ್ಷಣ ನೀತಿ ಗ್ರಾಜುವೇಟ್ ಕೋರ್ಸನ ಸ್ಟ್ರಕ್ಚರ್ ಅನ್ನು ಬದಲಾಯಿಸಿ ನಾನಾ ರೀತಿಯ ಫ್ಲೆಕ್ಸಿಬಲ್ ಆದ, ಕೌಶಲ ಆಧರಿತ ಕೋರ್ಸ್ ಗಳನ್ನು ಪದವಿ ಸಿಲಬಸ್ ಜತೆ ಜೋಡಿಸಬಲ್ಲ ಕಾನೂನಾತ್ಮಕ ಅವಕಾಶಗಳನ್ನು, ಸ್ಟ್ರಕ್ಚರ್ ಗಳನ್ನು ಮುಂದೆ ಇಟ್ಟಿದೆ. ಮೂರು ಅಥವಾ ನಾಲ್ಕು ವರ್ಷ
ಗಳಲ್ಲಿ ಪದವಿಯನ್ನು (ಹಾನರ್ಸ) ಅನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳಿಗೆ ಒದಗಿಸಿದೆ. ಇದು ಬಹಳ ಮಹತ್ವದ್ದು. ಏಕೆಂದರೆ ನಾಲ್ಕನೆಯ ವರ್ಷವನ್ನು ತಾಂತ್ರಿಕ ಸ್ವರೂಪದಲ್ಲಿ ಕಲಿಯುವ ಅವಕಾಶ ಇದೆ. ಒಟ್ಟಾರೆ ಈ ಹಿಂದೆ ಎಂಜಿನಿಯರಿಂಗ್ ಕಾಲೇಜುಗಳು ಬೆಳೆದುನಿಂತ ರೀತಿಯ ಅವಕಾಶ ನಿಚ್ಚಳವಾಗಿದೆ.

ಆದರೂ ಯಾಕೋ ಜನರಲ್ ಪದವಿ ಶಿಕ್ಷಣ ಸಂಸ್ಥೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಅವಕಾಶವನ್ನು ಬಳಸಿಕೊಂಡು ಭಾರಿ ಪ್ರಮಾಣದಲ್ಲಿ ಎದ್ದು ನಿಂತು ಸವಾಲನ್ನು ಸ್ವೀಕರಿಸುತ್ತಿರುವಂತಿಲ್ಲ. ಬಹುಶಃ ಇದಕ್ಕೆ ಕಾರಣ ಸುದೀರ್ಘ ಕಾಲ ಅಂತಹ ‘ಚಾರ್ಮ್’ ಇಲ್ಲದಿದ್ದ ಕಾಲೇಜುಗಳನ್ನು ನಡೆಸಿ ಸುಸ್ತಾಗಿ ಹೋಗಿರುವ ಮ್ಯಾನೇಜುಮೆಂಟ್‌ಗಳಿಗೆ ಬದಲಾಗುವ, ಹೊಸ ಬದಲಾವಣೆಗೆ ಬೇಕಾಗುವ ರೀತಿಯಲ್ಲಿ ಬಂಡವಾಳ ತೊಡಗಿಸುವ, ಧೈರ್ಯ ಬರುತ್ತಿಲ್ಲ. ಅದಕ್ಕೂ
ಹಲವು ಕಾರಣಗಳಿವೆ. ಒಂದನೆಯದು.

ಸ್ಕಿಲ್ ಕಂಪೋನೆಂಟ್ ಅನ್ನು ಎಲ್ಲಿ ಹೇಗೆ ಸಿಲಬಸ್‌ನಲ್ಲಿ ಕೂಡಿಸಬೇಕು ಎನ್ನುವುದ ಹೊಳೆಯುತ್ತಿಲ್ಲ. ನೀತಿಗಳು ಬದಲಾದರೂ ಸಿಲಬಸ್ ಬದಲಾಗುತ್ತಿಲ್ಲ. ಮುಖ್ಯವಾಗಿ ಕಾಲೇಜುಗಳ ಹೆಚ್ಚಿನ ಸಮಯ ಮತ್ತು ಶಕ್ತಿ ಸಿಲಬಸ್ ಮುಗಿಸುವದರಲ್ಲಿ, ಪರೀಕ್ಷೆ ನಡೆಸುವು ದರಲ್ಲಿ ಖರ್ಚಾಗಿ ಹೋಗುತ್ತಿದೆ. ನಕಾರಾತ್ಮಕ ಮನಸ್ಸಿನ ಶಿಕ್ಷಕರು ಮತ್ತು ಆ ಇಡೀ ವ್ಯವಸ್ಥೆ ಹೊಸ ಬೆಳಕು ಮತ್ತು ಗಾಳಿ ಒಳಬರದಂತೆ ಭದ್ರವಾಗಿ ಬಾಗಿಲು ಹಾಕಿಬಿಟ್ಟಿವೆ. ಸಂಸ್ಥೆ ಗಳಿಗೆ ಆ ದಿಸೆಯಲ್ಲಿ ಕಾಲೇಜುಗಳನ್ನು ಒಯ್ಯಬಲ್ಲ ಮಾನವ ಸಂಪನ್ಮೂಲ ಸಿಗುತ್ತಿಲ್ಲ.

ಆದರೆ ಇರುವ ಅವಕಾಶಗಳಿಗೆ ಹೋಲಿಸಿದರೆ ಪರಿಮಿತಿ ಗಳು ತುಂಬ ಚಿಕ್ಕವು. ಹಾಗಾಗಿ ಇಂತಹ ಸಂದರ್ಭವನ್ನು ಬಳಸಿಕೊಳ್ಳಲು ಮನಸ್ಸುಳ್ಳ ‘ಕಾಲೇಜ್ ಆಪ್ ಎಕ್ಸಲೆನ್ಸ್’ ಅನ್ನು ಆರಂಭಿಸುವ ಆಸಕ್ತಿಯುಳ್ಳ ( ಕನಿಷ್ಠ ) ದೇಶದಾದ್ಯಂತ ಇರುವ ದೊಡ್ಡ ದೊಡ್ಡ ಸಂಸ್ಥೆಗಳು, ಬಂಡವಾಳ ಹೂಡಬಯಸುವವರು ಈಗ ಏನು ಮಾಡ ಬಹುದು? ಗಮನಿಸಬೇಕು. ಸಂತೋಷದ ವಿಷ ಯವೆಂದರೆ ಎನ್‌ಇಪಿ ಇಂತಹ ಹೂಡಿಕೆಗೆ ಅಗತ್ಯ ವಾಗಿರುವ ಕಾನೂನಾತ್ಮಕ ಅವಕಾಶಗಳನ್ನು ಕಲ್ಪಿಸಿದೆ.
ಇಂದಿನ ತನಕ ಔಟ್ ಆಫ್ ಸಿಲಬಸ್ ಆಗಿದ್ದ ವಿಷಯಗಳನ್ನು ಸಿಲಬಸ್ ಒಳಗೆ ತರಲು ಎನ್‌ಇಪಿ ಹಲವು ರೀತಿಯ ಅವಕಾಶಗಳನ್ನು ಕಲ್ಪಿಸಿದೆ. ಅಂತಹ ಟೈಮ್ ಟೇಬಲ್ ಅನ್ನು ಸ್ಟ್ರಕ್ಚರ್ ಅನ್ನು ಒದಗಿಸಿದೆ. ಕಾಲೇಜುಗಳು ಮಾಡಬೇಕಿರುವುದು ಕೌಶಲ ಅಭಿವೃದ್ಧಿಯನ್ನು ಗಂಭೀರವಾಗಿ ತೆಗೆದುಕೊಂಡು ಅದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವುದು.

ಇಂತಹ ಪಾಠಗಳನ್ನು ಅವು ಎಂಜಿನಿಯರಿಂಗ್ ಕಾಲೇಜು, ಐಟಿಐ ಮತ್ತಿತರ ಕೌಶಲ ಅಭಿವೃದ್ಧಿ ಸಂಸ್ಥೆಗಳಿಂದ ಕಲಿಯಬಹುದಾಗಿದೆ.

೧ ಸಂಪೂರ್ಣ ರೆಸಿಡೆನ್ಯಿಯಲ್ ಮಾದರಿ ಕಾಲೇಜುಗಳನ್ನು ಆರಂಭಿಸಬೇಕು. ಅಂದರೆ ವಿದ್ಯಾರ್ಥಿಗಳ ಸಂಪೂರ್ಣ ಸಮಯ ಕಾಲೇಜಿಗೆ ಅವರ ಕಲಿಕೆಗೆ ಲಭ್ಯವಾಗಬೇಕು.
೨ ಇಂಟಿಗ್ರೇಟೆಡ್ ಮಾದರಿ ಕಾಲೇಜುಗಳನ್ನು ನಡೆಸಬೇಕು. ಕೌಶಲ ಬೋಧನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕೇವಲ ವಿಜ್ಞಾನ ವಿಷಯವೊಂದಕ್ಕೇ ಅಲ್ಲ, ಕಾಮರ್ಸ್ ಹಾಗೂ ಆರ್ಟ್‌ಗೆ ಕೂಡ ಅರ್ಥ ಪೂರ್ಣ ಪ್ರಾಕ್ಟಿಕಲ್‌ಗಳನ್ನು ನಡೆಸಬೇಕು. ಸಿಲಬಸ್ ಮತ್ತು ಪ್ರಾಕ್ಟಿಕಲ್ ಗಳು ಹೇಗಿರಬೇಕು ಎನ್ನುವುದನ್ನು ಅಕಾಡೆಮಿಕ್, ಕೈಗಾರಿಕೆ ಮತ್ತು ಪ್ರಾದೇಶಿಕವಾಗಿ ಯಶಸ್ವಿಯಾಗಿರುವ ತಜ್ನರು ನಿಜಕ್ಕೂ ಸೇರಿ ರೂಪಿಸಬೇಕು.
೩ ಆಧುನಿಕ ಮನೋಭಾವದ ಶಿಕ್ಷಕರನ್ನು ಮಾತ್ರ ಉಳಿಸಿಕೊಳ್ಳಬೇಕು.
೪ ಎನ್‌ಸಿಸಿ ಒಂದು ಪ್ರಾದೇಶಿಕ ಮತ್ತು ಒಂದು ಜಾಗತಿಕ ಕೌಶಲಗಳನ್ನು ಕಲಿಸಬೇಕು.
೫ ಕ್ಯಾಂಪಸ್ ರಿಕ್ರೂಟ್‌ಮೆಮಟ್ ತರಬೇತಿಯನ್ನು ವ್ಯವಸ್ಥಿತವಾಗಿ ನೀಡಬೇಕು.

ಇಂತಹ ಕಾಲೇಜುಗಳು ಬಿಸಿನೆಸ್ ಆಗಿ ಕೂಡ ಭಾರಿ ಯಶಸ್ವಿ ಯಾಗಲಿವೆ. ಏಕೆಂದರೆ ರಾಜ್ಯಾದ್ಯಂತ ಹಲವು ಪದವಿ ಕಾಲೇಜುಗಳು ದುಃಸ್ಥಿತಿಯಲ್ಲಿವೆ. ಮತ್ತು ಇಂದಿನ ಪಾಲಕರು ಮಕ್ಕಳ ಒಳ್ಳೆಯ ಶಿಕ್ಷಣಕ್ಕಾಗಿ ಎಷ್ಟು ಖರ್ಚು ಮಾಡಲು ಕೂಡ ಸಿದ್ಧ.

ಮತ್ತೆ ಇಂತಹ ಪದವಿ ಕಾಲೇಜುಗಳನ್ನು ಆರಂಭಿಸುವುದು ಕೇವಲ ಬಿಸಿನೆಸ್ ಮಾತ್ರ ಅಲ್ಲ. ದೇಶಸೇವೆ ಕೂಡ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವರಿಗೊಂದು ಬಾಳು ಒದಗಿಸಿ ಅದಕ್ಕೆ ಸೂಕ್ತ ಶುಲ್ಕ ತೆಗೆದುಕೊಳ್ಳುವುದು ತಪ್ಪೇನೂ ಅಲ್ಲ. ಹಿಂದುಳಿದ, ಬಡ ವಿದ್ಯಾರ್ಥಿಗಳಿಗೆ ನೆರವಾಗಲು ಸರಕಾರಗಳು ಕೂಡ ಇಂತಹ ಶ್ರೇಷ್ಠತೆಯ ಪದವಿ ಕಾಲೇಜುಗಳ ಆರಂಭಕ್ಕೆ ಮುಂದಾಗಬೇಕು.

Leave a Reply

Your email address will not be published. Required fields are marked *

error: Content is protected !!