Sunday, 23rd June 2024

ಆನೆಗಳೇಕೆ ನಾಡಿನತ್ತ ಪದೇ ಪದೆ ಧಾವಿಸುತ್ತಿವೆ ?

ಶಶಾಂಕಣ

ಕರಾವಳಿಯ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಸಾಕಷ್ಟು ಮಳೆಯಾಗುತ್ತಿದೆ! ಕೆಲವು ಕಡೆ ಎಷ್ಟು ಜಾಸ್ತಿ ಎಂದರೆ, ಜೂನ್ ಮೊದಲ ವಾರ ಆರಂಭವಾಗ ಬೇಕಿದ್ದ ಮಳೆಗಾಲವು ಈಗಲೇ ಆರಂಭವಾಗಿದೆಯೇನೋ ಎಂಬಷ್ಟು. ಉಪಗ್ರಹ ಚಿತ್ರಗಳು ಸಹ ಮುಂದಿನ ಕೆಲವು ದಿನ ಕರಾವಳಿಯಲ್ಲಿ, ಮಲೆನಾಡಿನಲ್ಲಿ ಸಾಕಷ್ಟು ಮಳೆಯಾಗುವ ಸೂಚನೆಯನ್ನು ನೀಡಿವೆ; ಇತ್ತ ಒಳನಾಡಿನಲ್ಲೂ ಮಳೆಯಾಗುತ್ತಿದೆ.

ಇದನ್ನೇಕೆ ಪ್ರಸ್ತಾಪಿಸಿದೆನೆಂದರೆ, ಕಳೆದ ವಾರದ ತನಕ ಎಲ್ಲೆಡೆ ವಿಪರೀತ ಬಿಸಿಲು, ಈಗ ಒಮ್ಮೆಗೇ ವಿಪರೀತ ಮಳೆ! ಇದು ಬೆರಗನ್ನೂ ಉಂಟುಮಾಡುತ್ತಿದೆ ಮತ್ತು ಸಣ್ಣಗೆ ಆತಂಕವನ್ನೂ ತರುತ್ತಿದೆ. ಮೇ ತಿಂಗಳಿನಲ್ಲೇ ಚಿಕ್ಕಮಗಳೂರು, ಕಡೂರು ಸುತ್ತಮುತ್ತಲಿನ ಕೆಲವು ಕೆರೆಗಳು ಕೋಡಿ ಬಿದ್ದಿವೆ ಎಂದರೆ, ಆತಂಕವಾಗದೇ ಇರುತ್ತದೆಯೆ? ಬೇಕಾದಾಗ ಹದವಾದ ಮಳೆ ಬೀಳದೇ, ಒಮ್ಮೆಗೇ, ನಡುಬೇಸಗೆಯಲ್ಲಿ ದಪದಪ ಸುರಿದರೆ, ಅದನ್ನು ನಂಬಿಕೊಂಡಿರುವ ಮಾನವನಿಗೆ ನಿಜಕ್ಕೂ ಸಂಕಷ್ಟವೇ ಸರಿ. ಇದನ್ನೇ ಅಲ್ಲವೆ ಹವಾಮಾನ ವೈಪರಿತ್ಯ ಎನ್ನುವುದು!

ನಮ್ಮ ನಾಡು, ನಮ್ಮ ದೇಶ, ಅಷ್ಟೇಕೆ ಇಡೀ ಜಗತ್ತು ಇಂದು ನಾನಾ ರೀತಿಯ ಪ್ರಾಕೃತಿಕ ವೈಪರಿತ್ಯಗಳಿಗೆ ಸಾಕ್ಷಿಯಾಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಉತ್ತರ ಭಾರತದ ನದಿ ತೀರಗಳಲ್ಲಿ ವಾಸಿಸುತ್ತಿರುವ ಜನರು ನಿರಂತರ ಪ್ರವಾಹದ ಪ್ರಕೋಪವನ್ನು ಎದುರಿಸಬೇಕಾದೀತೆಂದು ವಿಜ್ಞಾನಿಗಳು ಎಚ್ಚರಿಸು ತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ವೆಂದರೆ, ಹಿಮಾಲಯದಲ್ಲಿರುವ ಗ್ಲೇಸಿಯರ್‌ಗಳು, ಹಿಮ ತುಂಬಿದ ಕೆರೆಗಳು, ಕಣಿವೆಗಳು ಬಹು ವೇಗವಾಗಿ ಕರಗುತ್ತಿವೆ. ಇಂದು ಹಿಮಾಲಯ ಮತ್ತು ಜಗತ್ತಿನ ಇತರ ಭಾಗಗಳಲ್ಲಿರುವ (ಮುಖ್ಯವಾಗಿ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವ) ಹಿಮದ ವಿಶಾಲ ಭಾಗಗಳು ಕರಗುತ್ತಿರುವುದರಿಂದ ಇಂತಹ ಪ್ರಕೋಪಗಳು ಎದುರಾಗಿವೆ. ಹಿಮಾಲಯದಲ್ಲಿ ಸಹಸ್ರಾರು ವರ್ಷಗಳಿಂದ ಹೆಪ್ಪುಗಟ್ಟಿರುವ ಹಿಮವು, ನಿರೀಕ್ಷೆಗೂ ಮೀರಿದ ವೇಗದಲ್ಲಿ ಕರಗುತ್ತಿದೆ, ತನ್ನೊಂದಿಗೆ ಹಿಮಾಲಯ ಶ್ರೇಣಿಯ ಪರ್ವತ ಭಿತ್ತಿ ಗಳನ್ನು ಕೊರೆದುಕೊಂಡು ಬರುತ್ತಿದೆ. ಅಲ್ಲಿನ ನೆಲದ ಮೇಲ್ಮೈಯನ್ನು ಕತ್ತರಿಸಿಕೊಂಡು ಬರುತ್ತಿದೆ.

ಇವೆಲ್ಲಕ್ಕೂ ಪ್ರಮುಖ ಕಾರಣವೆಂದರೆ ಗ್ಲೋಬಲ್ ವಾರ್ಮಿಂಗ್ ಅಥವಾ ಭೂಮಿಯ ತಾಪಮಾನದ ಹೆಚ್ಚಳ. ಇದನ್ನು ತಡೆಯಲು ಅಥವಾ ಈ ರೀತಿಯ
ವೈಪರಿತ್ಯದ ತೀವ್ರತೆಯನ್ನು ಕಡಿಮೆ ಮಾಡಲು ಏನು ಮಾಡಬೇಕು? ಇದಕ್ಕೆ ಉತ್ತರ ಸರಳ ಮತ್ತು ಸಂಕೀರ್ಣ. ಸರಳ ಉತ್ತರವೆಂದರೆ, ಕಾಡನ್ನು ಉಳಿಸಬೇಕು, ಮರಗಿಡಗಳನ್ನು ಬೆಳೆಸಬೇಕು, ಹುಲ್ಲುಗಾವಲು ಗಳನ್ನು ರಕ್ಷಿಸಬೇಕು, ಕುರುಚಲು ಕಾಡನ್ನು ಪೋಷಿಸಬೇಕು. ಆದರೆ, ಈ ಸರಳ ಉತ್ತರಕ್ಕೆ ಪ್ರತಿಯಾಗಿ, ಸಂಕೀರ್ಣ ಉತ್ತರವೂ ಇದೆ. ಏಕೆಂದರೆ ಇದು ಇಂದು ಸರಳ ಸಮಸ್ಯೆ ಅಲ್ಲವಲ್ಲ! ಮನುಷ್ಯನ ನಾಗರಿಕತೆಯ ನಾಗಾಲೋಟದ ವೇಗವನ್ನು ತಡೆಯುವುದಾದರು ಹೇಗೆ? ಈ ರೀತಿಯ ನಾಗರಿಕತೆಯ ಬೆಳವಣಿಗೆಯಿಂದಾಗಿಯೇ, ಪರಿಸರದ ನಾಶವಾಗುತ್ತಿದೆ, ಅದು ಗೊತ್ತಿದ್ದರೂ, ಅದನ್ನು ತಡೆಯುವುದು ಅಷ್ಟು ಸುಲಭವಿಲ್ಲವಲ್ಲ!

ಕಳೆದ ಒಂದೆರಡು ನೂರು ವರ್ಷಗಳಲ್ಲಿ ಕಾಡನ್ನು ಕಡಿದು, ಸಂಪನ್ಮೂಲಗಳನ್ನು ಬಳಸಿ, ಕಲ್ಮಶ ಉಗುಳುವ ತೈಲವನ್ನು ಬಳಸಿ, ಕೆಲವು ದೇಶಗಳು ಅಭಿವೃದ್ಧಿ
ಸಾಽಸಿವೆ. ಇನ್ನು ಕೆಲವು ದೇಶಗಳು ಬೆಳವಣಿಗೆಯ ಹಾದಿಯಲ್ಲಿವೆ (ಉದಾ: ಭಾರತ, ಚೀನಾ, ದಕ್ಷಿಣ ಅಮೆರಿಕದ ಕೆಲವು ದೇಶಗಳು). ಇನ್ನೂ ಅಭಿವೃದ್ಧಿ
ಹೊಂದುತ್ತಿರುವ ಬಡ ದೇಶಗಳು ಇದೇ ದಾರಿ ಯನ್ನು ಅನುಕರಿಸುವ ಪ್ರಯತ್ನ ಮಾಡುತ್ತಿವೆ, ಅಭಿವೃದ್ಧಿಯನ್ನು ಸಾಧಿಸಲು ಹಾತೊರೆಯುತ್ತಿವೆ. ‘ಇದೇ ದಾರಿ’ ಎಂದರೆ, ಕಲ್ಮಶ ಹೊರಸೂಸುವ ತೈಲದ ಬಳಕೆ, ಪ್ರಾಕೃತಿಕ ಸಂಪನ್ಮೂಲಗಳ ನಾಶ ಅಥವಾ ಬಳಕೆ, ಕಾಡಿನ ನಾಶ, ನದಿಗಳ ನಾಶ – ಇದು ಈ ವರೆಗೆ ಹಲವು ದೇಶಗಳು ತುಳಿದಿರುವ ಅಭಿವೃದ್ಧಿಯ ಮೆಟ್ಟಿಲುಗಳು. ಇದುವರೆಗೆ ಜಗತ್ತು ಅಭಿವೃದ್ಧಿ ಹೊಂದಿರುವುದು, ಈಗ ಅಭಿವೃದ್ಧಿ ಹೊಂದುತ್ತಾ ಇರುವುದು ಇದೇ ಸಿದ್ಧ ಸೂತ್ರಗಳನ್ನು ಬಳಸಿ. ಇದರ ಜತೆ, ಕೆಲವು ದೇಶಗಳು ಅಣು ವಿದ್ಯುತ್‌ನ್ನು ಸಹ ಬಳಸುತ್ತಿವೆ, ಒಂದಲ್ಲಾ ಒಂದು ದಿನ ಅದು ಭಸ್ಮಾಸುರನಾಗಬಹುದು ಎಂಬ ತಿಳಿವಳಿಕೆ ಇದ್ದರೂ.

ಈ ಎಲ್ಲಾ ಮಾರ್ಗ, ಪಥ, ಮೆಟ್ಟಿಲುಗಳ ದೂರಗಾಮಿ ಪರಿಣಾಮವೆಂದರೆ, ಪರಿಸರದ ನಾಶ, ಪ್ರಕೃತಿಯ ನಾಶ, ನಮ್ಮ ಸುತ್ತಲಿನ ವಾತಾವರಣದ ನಾಶ. ಇದು ಎಲ್ಲಿಗೆ ಹೋಗಿ ಮುಟ್ಟಬಹುದು ಎಂದರೆ, ಇದೇ ರೀತಿ ಮುಂದುವರಿದರೆ, ಒಂದಲ್ಲಾ ಒಂದು ದಿನ ಭೂಮಿಯು ಮನುಷ್ಯನಿಗೆ ವಾಸ ಯೋಗ್ಯವಾಗದೇ ಇರಬಹುದು! ಈಗ, ‘ಪರಿಸರ ರಕ್ಷಿಸಿ’ ಎಂಬ ಕೂಗು ಅಲ್ಲಲ್ಲಿ ಎದ್ದಿದ್ದೆ. ಕಳೆದ ಒಂದೆರಡು ದಶಕಗಳ ಅವಽಯಲ್ಲಿ ಪರಿಸರ ರಕ್ಷಿಸುವ, ಮೇಲ್ನೋಟಕ್ಕೆ ವ್ಯಾಪಕ ಎಂದು ಕಾಣಿಸು ತ್ತಿರುವ ಪ್ರಯತ್ನವೂ ನಡೆದಿದೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸಿದರೆ, ಅವರು ದೊಡ್ಡವರಾದಾಗ, ಪರಿಸರದ ಕುರಿತು ಕಾಳಜಿಯನ್ನು ಬೆಳೆಸಿಕೊಂಡಾರು ಎಂಬ ಉದ್ದೇಶದಿಂದ, ನಮ್ಮ ಪಠ್ಯಪುಸ್ತಕಗಳಲ್ಲೂ ಪರಿಸರ ರಕ್ಷಣೆಯ ಪ್ರಾಮುಖ್ಯತೆಯನ್ನು ವಿವರಿಸುವ ಕೆಲವು ಪಾಠಗಳು ಸೇರಿಕೊಂಡಿವೆ.

ಆದರೂ, ಆಗಬೇಕಾದದ್ದು ಬಹಳಷ್ಟಿದೆ; ಕೆಲವು ವಲಯಗಳಲ್ಲಿ ನಾವಾಗಲೇ ಹಿಂದಿರುಗಿ ಬಾರದಷ್ಟು ದೂರ ಈ ಹಾದಿಯಲ್ಲಿ ಬಂದಿದ್ದೇವೆ, ವಿನಾಶದ ಹಾದಿಯನ್ನು ಹಿಡಿದಿದ್ದೇವೆ, ಹಿಂದಿರುಗುವ ದಾರಿ ಕೆಲವು ವಲಯ ಗಳಲ್ಲಿ ಅದಾಗಲೇ ಮುಚ್ಚಿ ಹೋಗಿದೆ. ಸರಕಾರವಾಗಲೀ, ಖಾಸಗಿಯವರಾಗಲೀ, ಪರಿಸರ ಉಳಿಸುವ ಏಕೈಕ ದೃಷ್ಟಿಯಿಂದ ಯಾವುದೇ ಬೃಹತ್ ಚಟುವಟಿಕೆಯನ್ನು ಕೈಗೊಂಡಿದ್ದು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಸಂದರ್ಭದಲ್ಲಿ ಶಿವರಾಮ ಕಾರಂತರು ನೆನಪಾಗುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಪರಿಸರವನ್ನು ರಕ್ಷಿಸುವ ಚಳವಳಿಯಲ್ಲಿ (೧೯೮೦ರ ದಶಕ) ನೇರವಾಗಿ ಧುಮುಕಿ, ಪರಿಸರ ರಕ್ಷಣೆಯ ಮಹತ್ವವನ್ನು ಬಹಿರಂಗವಾಗಿ ಸಾರಿದರು. ಈ ಖ್ಯಾತ ಸಾಹಿತಿಯ ಭಾಗವಹಿಸುವಿಕೆಯಿಂದ, ಹಳ್ಳಿ ಹಳ್ಳಿಗಳಲ್ಲೂ ಪರಿಸರದ ಪ್ರಾಮುಖ್ಯತೆಯ ಜಾಗೃತಿ ಮೂಡಿತು.

ಜತೆಗೆ, ಅವರ ಸಾಹಿತ್ಯದಲ್ಲಿ ಮೊದಲಿನಿಂದಲೂ ಪರಿಸರ, ಪ್ರಕೃತಿಯನ್ನು ಅಳವಡಿದ ಸಾಹಿತಿ ಅವರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕುವ ಮೊದಲೇ ಹಲವು ಕಾದಂಬರಿಗಳನ್ನು ರಚಿಸಿ, ಆ ಪ್ರಕಾರದಲ್ಲಿ ಹೆಸರು ಮಾಡಿದ್ದ ಅವರು, ಕಾದಂಬರಿ ಯಂತಹ ಪ್ರಮುಖ ಸೃಜನಶೀಲ ಬರವಣಿಗೆಯ ಜತೆಯೇ, ಹಲವು ಪರಿಸರ ಕಾಳಜಿಯ ಕೆಲಸಗಳನ್ನು ಕೈಗೆತ್ತಿಕೊಂಡಿದ್ದರು. ಅವರು ನಡೆಸುತ್ತಿದ್ದ ಪುತ್ತೂರಿನ ಬಾಲವನದಲ್ಲೂ ಪರಿಸರ ಕಾಳಜಿಯನ್ನು ಬೆಳೆಸುವ ಕೆಲಸ ನಡೆದಿತ್ತು. ೧೯೩೦ರ ದಶಕದಲ್ಲೇ, ವಿಜ್ಞಾನ ಮತ್ತು ಭೂಗೋಳದ ಕೆಲವು ಪುಸ್ತಕ ಮತ್ತು ಬರಹ ಗಳನ್ನು ಬರೆದು, ಜನರಲ್ಲಿ ಅದರಲ್ಲೂ ಮುಖ್ಯವಾಗಿ ಮಕ್ಕಳಲ್ಲಿ ಪರಿಸರದ ಕುರಿತು ಅರಿವು ಮೂಡಿಸುವ ಗಂಭೀರ ಪ್ರಯತ್ನ ನಡೆಸಿದ್ದರು. ಆ ಕಾಲದಲ್ಲೇ, ಪಶ್ಚಿಮ ಘಟ್ಟಗಳ ಹಲವು ಜಲಪಾತಗಳನ್ನು ಕಂಡು, ಅಲ್ಲಿಗೆ ಚಾರಣ ಮಾಡಿ, ಅವುಗಳ ಭೂಪಟವನ್ನು ರಚಿಸಿ, ಮುದ್ರಿಸಿದ್ದರು! ಕೊಡಚಾದ್ರಿ, ಕುದುರೆ ಮುಖ, ಕುಮಾರ ಪರ್ವತದಂತಹ ಗಿರಿ ಶಿಖರಗಳಿಗೆ ೧೯೨೦ರ ದಶಕದಲ್ಲೇ, ಅಂದರೆ, ಇಂದಿಗೆ ಸುಮಾರು ೧೦೦ ವರ್ಷಗಳ ಮುಂಚೆ ಚಾರಣ ಮಾಡಿ, ಅಲ್ಲಿನ ಜೀವವೈವಿಧ್ಯವನ್ನು ದಾಖಲಿಸಿ, ಆ ಕುರಿತು ಬರೆದು ಪ್ರಕಟಿಸಿದ್ದರು.

ಇಂದಿಗೂ ಕನ್ನಡದ ಪ್ರಮುಖ ಕಾದಂಬರಿಗಳಲ್ಲಿ ಒಂದಾಗಿರುವ ‘ಬೆಟ್ಟದ ಜೀವ’ ಪ್ರಕಟಗೊಂಡದ್ದು ೧೯೩೪ರಲ್ಲಿ, ಅಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ
ದೊರಕುವ ೧೩ ವರ್ಷಗಳಿಗೂ ಮುಂಚೆ. ‘ಪರಿಸರ ವಾದ’ ಎಂಬ ಪರಿಕಲ್ಪನೆಯು ನಮ್ಮ ದೇಶದಲ್ಲಿ ರೂಢಿಗತಗೊಳ್ಳುವ ಬಹಳ ಮುಂಚೆಯೇ, ಕಾರಂತರು ಪರಿಸರ ಪ್ರಧಾನವಾದ ‘ಬೆಟ್ಟದ ಜೀವ’ ರಚಿಸಿದರು ಎಂಬುದು ಒಂದು ವಿಸ್ಮಯ, ಅದ್ಭುತ!

ಕಾಡಿನ ಮೂಲೆಯಲ್ಲಿ, ವನ್ಯಜೀವಿಗಳ ಹಾವಳಿ ಯನ್ನು ದಿನನಿತ್ಯವೂ ಎದುರಿಸುತ್ತಾ, ಗೋಪಾಲಯ್ಯ ಮತ್ತು ಶಂಕರಿ ದಂಪತಿ ಅಲ್ಲೇ ಮನೆ ಕಟ್ಟಿಕೊಂಡು, ಕೃಷಿ ನಡೆಸುತ್ತಾ ಬದುಕು ಕಟ್ಟಿಕೊಳ್ಳುವುದು ಈ ಕಾದಂಬರಿಯ ಪ್ರಮುಖ ಕಥನ. ಮನುಷ್ಯನ ಜೀವನ ಪ್ರೀತಿಯ ಅದಮ್ಯ ಪ್ರತೀಕ ವಾಗಿ ಈ ಕಾದಂಬರಿಯ ನಾಯಕ ಗೋಪಾಲಯ್ಯ ಕಾಣಿಸುತ್ತಾನೆ. ಗೋಪಾಲಯ್ಯನ ಬದುಕಿನ ಹೋರಾಟವನ್ನು, ಬೆಟ್ಟಗಳ ನಡುವೆ ಇಷ್ಟಪಟ್ಟು ಜೀವಿಸುವ ಪರಿಯನ್ನು ಬರೆಯುತ್ತಲೇ, ಕಾರಂತರು ಈ ಕಾದಂಬರಿಯಲ್ಲಿ ಪ್ರಕೃತಿಯನ್ನು, ಪ್ರಕೃತಿಯ ವ್ಯಾಪಾರಗಳನ್ನು ಪ್ರಧಾನವಾಗಿ ಬಿಡಿಸಿಟ್ಟಿರುವ ಪರಿ ಒಂದು ಪುಟ್ಟ ವಿಸ್ಮಯ. ತೇಜಸ್ವಿಯವರು ೧೯೭೦ರ ದಶಕದಲ್ಲಿ ‘ಕರ್ವಾಲೋ’ ಕಾದಂಬರಿಯನ್ನು ರಚಿಸುವ ತನಕ, ಕನ್ನಡ ಕಾದಂಬರಿಯೊಂದರಲ್ಲಿ, ಇಷ್ಟು ವ್ಯಾಪಕವಾಗಿ, ವಿವರವಾಗಿ, ಪ್ರಧಾನವಾಗಿ ಪರಿಸರದ ವ್ಯಾಪಾರಗಳನ್ನು ನಿರೂಪಿಸಿದ ಕಾದಂಬರಿ ಇನ್ನೊಂದಿಲ್ಲ.

೧೯೩೪ರಷ್ಟು ಮುಂಚೆಯೇ, ಪರಿಸರ, ಪ್ರಕೃತಿ, ವನ್ಯಜೀವಿಗಳನ್ನು ‘ಬೆಟ್ಟದ ಜೀವ’ದಲ್ಲಿ ಕಾರಂತರು ಸಶಕ್ತವಾಗಿ, ಅರ್ಥಪೂರ್ಣವಾಗಿ ಅಳವಡಿಸಿರುವ ವಿಚಾರವು ಕನ್ನಡ ಸಾಹಿತ್ಯಲೋಕದ ಬೆರಗುಗಳಲ್ಲಿ ಒಂದು. ರಾತ್ರಿ ಹೊತ್ತು ಕಾಡಿನ ನಡುವಿನ ರಸ್ತೆದಾರಿಯಲ್ಲಿ ದಾರಿತಪ್ಪುವ ಕಾದಂಬರಿಯ ನಿರೂಪಕರು, ದಟ್ಟಡ ವಿಯನಡುವಿನ ಕೆಳಬೈಲು ಎಂಬಲ್ಲಿ ಕೃಷಿ ಮಾಡಿಕೊಂಡು, ತಮ್ಮ ಪಾಡಿಗೆ ತಾವು ವಾಸಿಸುತ್ತಿರುವ ಗೋಪಾಲಯ್ಯನವರ ಮನೆಗೆ ಹೋಗುತ್ತಾರೆ.
ಮುಂದಿನ ನಾಲ್ಕಾರು ದಿನ ಅಲ್ಲೇ ತಂಗುವ ನಿರೂಪಕರು, ಆ ಸುತ್ತಲಿನ ಜಲಪಾತಗಳ, ಅಬ್ಬಿಗಳ, ತೊರೆಗಳ, ಹೊಳೆಗಳ ಸೌಂದರ್ಯಕ್ಕೆ ಮಾರು
ಹೋಗುತ್ತಾರೆ, ಅಲ್ಲಿನ ಹಸಿರ ಸಿರಿಯನ್ನು ಕಂಡು ಬೆರಗಾಗುತ್ತಾರೆ, ಹೊಳೆಯ ಶೀತಲ ನೀರಿನಲ್ಲಿ ಸ್ನಾನ ಮಾಡುತ್ತಾರೆ, ಕಾಡಿನ ನಡುವೆ ವಾಸಿಸುವ ಜನರನ್ನು
ಅನಿವಾರ್ಯವಾಗಿ ಕಾಡುವ ಜ್ವರವನ್ನು ಅನುಭವಿಸುತ್ತಾರೆ, ಜತೆಜತೆಗೇ, ಕಾಟುಮೂಲೆ ಎಂಬ, ಇನ್ನೂ ದಟ್ಟವಾದ ಅರಣ್ಯ ಪ್ರದೇಶದ ನಡುವೆ ಇರುವ
ಮತ್ತೊಂದು ಮನೆಯನ್ನು ಕಂಡು ಅಚ್ಚರಿಗೆ ಒಳಗಾಗುತ್ತಾರೆ.

ಈ ಕಾಡಿನ ನಡುವಿನ ಬದುಕಿನಲ್ಲಿ, ಹಸುವನ್ನು ಹಿಡಿಯುವ ಹುಲಿಯನ್ನು ಬಲೆಗೆ ಬೀಳಿಸುವ ಸಾಹಸದ ಕೆಲಸಕ್ಕೆ ನಿರೂಪಕನು ಸಾಕ್ಷಿಯಾಗುತ್ತಾನೆ.
ಗೋಪಾಲಯ್ಯ ಮತ್ತು ಇತರ ಸಹಾಯಕರು ಮರದ ಬೋನನ್ನು ತಯಾರಿಸಿ, ಅದರೊಳಗೆ ನಾಯಿಯನ್ನು ಕಟ್ಟಿ, ಹುಲಿಯನ್ನು ಬೋನೊಳಗೆ ಕೆಡಹುವ ಸಾಹಸವೂ, ಕಾದಂಬರಿಯ ಪ್ರಮುಖ ವಿದ್ಯಮಾನಗಳಲ್ಲಿ ಒಂದು. ಮನುಷ್ಯ ಮತ್ತು ವನ್ಯಜೀವಿಗಳ ಮುಖಾಮುಖಿಯ ಪ್ರಖರ ಉದಾಹರಣೆ ಇದು. ಬೋನಿನಲ್ಲಿ ಬಿದ್ದ ಹುಲಿಯನ್ನು ಗೋಪಾಲಯ್ಯ, ದೇರಣ್ಣ ಮೊದಲಾದವರು ಬಂದೂಕು ಚಲಾಯಿಸಿ ಸಾಯಿಸಿದ ಘಟನೆಯಂತೂ ಮೈನವಿರೇಳಿಸುವಂತಹದ್ದು. ಆಗ, ಅಂದರೆ, ಬ್ರಿಟಿಷರ ಆಡಳಿತ ಕಾಲದಲ್ಲಿ, ಹುಲಿಯನ್ನು ಸಾಯಿಸುವುದು ಕಾನೂನು ಬಾಹಿರವಾಗಿರಲಿಲ್ಲ.

ಕಾಟುಮೂಲೆಯ ಮನೆ ಮತ್ತು ಅಡಿಕೆ ತೋಟಕ್ಕೆ ಆನೆಗಳು ಬಾರದಂತೆ ಕಂದಕ ತೋಡುವ ಧೀರರು ಅಲ್ಲಿನ ಜನರು. ಆದರೇನು ಮಾಡುವುದು, ಆ ರೀತಿ
ಕಂದಕ ತೋಡಿ ಕಬ್ಬು ನೆಟ್ಟಾಗ, ಕಂದಕದ ದಾರಿ ಯನ್ನು ಅತ್ತ ಬಿಟ್ಟು, ಇನ್ನೊಂದು ಕಡೆ ಹರಿಯುತ್ತಿದ್ದ ಹೊಳೆಯನ್ನು ದಾಟಿ ಬರುವ ಆನೆಗಳ ಹಿಂಡು,
ಕಬ್ಬಿನ ಗದ್ದೆಯನ್ನು ಪೂರ್ತಿ ತಿಂದು, ನಾಚಾರ ಮಾಡುತ್ತವೆ! ಆ ನಂತರ ಗೋಪಾಲಯ್ಯ ಅಲ್ಲ ಕಬ್ಬು ಬೆಳೆಯುವುದನ್ನೇ ಬಿಟ್ಟುಬಿಟ್ಟರು!

೧೯೩೪ರಲ್ಲಿ ಪ್ರಕಟಗೊಂಡ ‘ಬೆಟ್ಟದ ಜೀವ’ ಕಾದಂಬರಿಯು, ೧೯೩೦ರ ದಶಕದ ಪಶ್ಚಿಮ ಘಟ್ಟಗಳ ನಡುವಿನ ಬದುಕನ್ನು ಬಿಂಬಿಸುತ್ತದೆ. ನಂತರದ ದಶಕ
ಗಳಲ್ಲಿ ಆ ಪ್ರದೇಶದ ಮತ್ತು ಒಟ್ಟೂ ನಮ್ಮ ರಾಜ್ಯದ ಅರಣ್ಯ ಸಾಕಷ್ಟು ನಾಶಗೊಂಡಿತು; ಕೆಲವು ಕಡೆ ರಬ್ಬರ್ ಬೆಳೆ ವ್ಯಾಪಕವಾಯಿತು. ವಿಶಾಲ ಪ್ರದೇಶ
ಗಳು ನಾಶಗೊಂಡವು, ಡ್ಯಾಂ ಮತ್ತು ಇತರ ಉದ್ದೇಶ ಗಳಿಗೆ ತಮ್ಮನ್ನು ತಾವೇ ತ್ಯಾಗ ಮಾಡಿಕೊಂಡವು. ೧೯೪೭ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದರು, ವನ್ಯಜೀವಿಗಳಿಗೆ ಬದುಕುವ ಸ್ವಾತಂತ್ರ್ಯ ದೊರಕಿರಲಿಲ್ಲ. ೧೯೭೨ರಲ್ಲಿ ಕಾಡುಪ್ರಾಣಿಗಳನ್ನು ರಕ್ಷಿಸುವ ಪ್ರಬಲವಾದ ಕಾನೂನು ನಮ್ಮ ದೇಶದಲ್ಲಿ ಜಾರಿಗೊಂಡಿತು; ಅದರ ಪ್ರಭಾವದಿಂದಲೋ ಏನೋ, ಈಚಿನ ಒಂದೆರಡು ದಶಕಳಗಲ್ಲಿ ನಮ್ಮ ರಾಜ್ಯದ ಕೆಲವು ಪ್ರದೇಶಗಳಲ್ಲಿ ಹುಲಿ, ಚಿರತೆ, ಆನೆ ಮೊದ
ಲಾದ ವನ್ಯಜೀವಿಗಳ ಸಂಖ್ಯೆ ಹೆಚ್ಚಳಗೊಂಡಿದೆ.

ಆದರೆ, ಇದೇ ಸಮಯದಲ್ಲಿ, ಅವುಗಳ ವಾಸ ಸ್ಥಾನವನ್ನು ಮನುಷ್ಯನು ಅಗಾಧ ಪ್ರಮಾಣದಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿದ್ದಾನೆ; ರಬ್ಬರ್ ತೋಟ,
ಸೈಟು, ಕಾಲೊನಿ ನಿರ್ಮಾಣ, ಜಲಾಶಯ ನಿರ್ಮಾಣ, ಕುಡಿಯುವ ನೀರಿನ ಯೋಜನೆಗಳಿಗಾಗಿ ಅಗಾಧ ಪ್ರಮಾಣದ ಕಾಡಿನ ನಾಶ (ಎತ್ತಿನ ಹೊಳೆ, ಮೇಕೆದಾಟು ಯೋಜನೆ ಇತ್ಯಾದಿ) ಮೊದಲಾದ ಕಾಮಗಾರಿಗಳ ಮೂಲಕ, ಎಲ್ಲಾ ರೀತಿಯ ವನ್ಯಜೀವಿಗಳ ವಾಸಸ್ಥಳವನ್ನು ನುಂಗುತ್ತಿದ್ದಾಮೆ. ಆದ್ದರಿಂದ, ಈಗ ಇಪ್ಪತ್ತೊಂದನೆಯ ಶತಮಾನದ ಮೂರನೆಯ ದಶಕದಲ್ಲಿ ವನ್ಯಜೀವಿ ಮತ್ತು ಮಾನವನ ಮುಖಾಮುಖಿ ತೀವ್ರವಾಗಿ ಹೆಚ್ಚಳಗೊಂಡಿದೆ. ಆನೆ ದಾಳಿಯಿಂದ ತೋಟ, ಬೆಳೆ ನಾಶವಾಗುವುದರ ಜತೆ, ಮನುಷ್ಯರು ಸಾಯುತ್ತಿರುವುದು ಕರ್ನಾಟಕದಲ್ಲಿ ತೀರಾ ಸಾಮಾನ್ಯ ಎನಿಸಿದೆ. ಹುಲಿ, ಚಿರತೆಗಳು ಮನುಷ್ಯನ ವಾಸಸ್ಥಳದ ಬಳಿ (ಅಂದರೆ, ಹಿಂದೆ ಇದು ಅವುಗಳ ವಾಸಸ್ಥಳ ವಾಗಿತ್ತು!) ಕಾಣಿಸಿಕೊಂಡು, ಸಿಸಿಟಿವಿಯಲ್ಲಿ ಸೆರೆ ಯಾಗಿ, ಮನುಷ್ಯನಲ್ಲಿ ಭಯ ಹುಟ್ಟಿಸಿ, ಅವುಗಳನ್ನು ಹಿಡಿದು ಬೇರೆ ಕಡೆ ಬಿಡುವಂತಹ ಕೆಲಸವೂ ನಡೆಯುತ್ತಿದೆ. ಆ ಪ್ರಯತ್ನದಲ್ಲಿ ಅವು ಸಾಯುತ್ತಿವೆ.

ಬಹುಷಃ, ಇನ್ನು ಕೆಲವೇ ದಶಕಗಳಲ್ಲಿ ನಮ್ಮ ನಾಡಿನಲ್ಲಿ, ಕಾಡುಪ್ರಾಣಿಗಳ ಸಹಜ ವಾಸಸ್ಥಳ ಇಲ್ಲವಾಗುವ ಸಾಧ್ಯತೆ ತೀರಾ ದಟ್ಟವಾಗಿದೆ. ಅವುಗಳಿ
ಗಾಗಿ ಮೀಸಲಿಟ್ಟ ಅಭಯಾರಣ್ಯ, ನ್ಯಾಷನಲ್ ಪಾರ್ಕ್, ವನ್ಯಜೀವಿ ಸಂಗ್ರಹಾಲಯಗಳೇ ಅವುಗಳ ಕೊನೆಯ ಠಾವು ಆಗುವ ಸಾಧ್ಯತೆ ನಿಚ್ಚಳವಾಗಿದೆ.

Leave a Reply

Your email address will not be published. Required fields are marked *

error: Content is protected !!