Friday, 19th April 2024

ಹಣಕಾಸು ಆಯೋಗ; ರಾಜ್ಯಕ್ಕೇಗೆ ವಿಯೋಗ ?

ಅಶ್ವತ್ಥಕಟ್ಟೆ

ranjith.hoskere@gmail.com

ರಾಷ್ಟ್ರ ರಾಜಕೀಯದಲ್ಲಿ ಕಳೆದೊಂದು ತಿಂಗಳು ಅತಿಹೆಚ್ಚು ಚರ್ಚಿತ ವಿಷಯವೆಂದರೆ ೧೫ನೇ ಹಣಕಾಸು ಆಯೋಗ ಮಾಡಿದ್ದ ಶಿಫಾರಸಿನಿಂದ ದೇಶದ ಹಲವು ರಾಜ್ಯಗಳಿಗೆ ಅನ್ಯಾಯವಾಗಿದೆ ಎನ್ನುವುದು. ಇದೇ ವಿಷಯ ಮುಂದಿಟ್ಟುಕೊಂಡು, ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತಾರತಮ್ಯವೆಂದು ಹಲವು ಬಿಜೆಪಿ ಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಸರಕಾರಗಳು ಕೇಂದ್ರದ ವಿರುದ್ಧ ವಾಕ್ಸಮರ ಆರಂಭಿಸಿವೆ. ಅದರಲ್ಲಿಯೂ ಉತ್ತರ ಭಾರತಕ್ಕಿಂತ ಹೆಚ್ಚಾಗಿ ಈ ಹೋರಾಟದ ಕಾವು ದಕ್ಷಿಣ ಭಾರತದಲ್ಲಿ ಹೆಚ್ಚಿದೆ ಎಂದರೆ ತಪ್ಪಲ್ಲ. ಹೇಗೇ ನೋಡಿದರೂ ಕೇಂದ್ರ ಸರಕಾರದ ವಿರುದ್ಧ ಅನು
ದಾನ ತಾರತಮ್ಯದ ಕಿಚ್ಚನ್ನು ದಕ್ಷಿಣ ಭಾರತದಲ್ಲಿ ಮೊದಲಿಗೆ ಹಚ್ಚಿದ್ದು ಕರ್ನಾಟಕವೇ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯದ ಸ್ಥಾಪಿತ ಸರಕಾರವೊಂದು ಕೇಂದ್ರ ಸರಕಾರದ ವಿರುದ್ಧ ದೆಹಲಿಯಲ್ಲಿ ಅಧಿಕೃತವಾಗಿ ಪ್ರತಿಭಟನೆಗೆ ಕರೆ ನೀಡಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದಿಂದಾಗುತ್ತಿರುವ ಅನ್ಯಾಯವನ್ನು ವಿರೋಧಿಸಿ, ಪ್ರತಿಭಟನೆಯ ಹಾದಿ ಹಿಡಿದ ಬೆನ್ನಲ್ಲೇ, ಕೇರಳ ಸೇರಿದಂತೆ ಹಲವು ರಾಜ್ಯ ಸರಕಾರಗಳು ಕರ್ನಾಟಕದ ಹಾದಿಯಲ್ಲಿಯೇ ಸಾಗಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಕಿಡಿಕಾರಿದವು.
ಕೇಂದ್ರದಿಂದ ಅನ್ಯಾಯವಾಗಿರುವುದು ಪ್ರಮುಖವಾಗಿ ೧೫ನೇ ಹಣಕಾಸು ಆಯೋಗದ ಶಿಫಾರಸಿನ ವಿಚಾರದಲ್ಲಿ ಎಂಬುದು ದಟ್ಟ ಆರೋಪ.

೨೦೨೧ರಿಂದ ೨೦೨೬ನೇ ಸಾಲಿಗೆ ಅನ್ವಯವಾಗುವಂತೆ ಸಿದ್ಧಪಡಿಸಿರುವ ಈ ಹಣಕಾಸು ಆಯೋಗದ ವರದಿಯಲ್ಲಿ, ಮಾಡಿರುವ ಹಲವು ಶಿಫಾರಸುಗಳಲ್ಲಿ ರಾಜ್ಯಗಳಿಗೆ ಕೇಂದ್ರದಿಂದ ಬರಬೇಕಿರುವ ಅನುದಾನಕ್ಕೆ ಕತ್ತರಿ ಹಾಕಲಾಗಿದೆ ಎಂಬುದು ಆಕ್ಷೇಪಕ್ಕೆ ಕಾರಣ. ಇದೇ ವಿಷಯವನ್ನು ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿಯೂ ಕಾಂಗ್ರೆಸ್ ಅಸವಾಗಿ ಬಳಸಿಕೊಂಡಿತ್ತು. ಇದೀಗ ಕಳೆದೊಂದು ತಿಂಗಳಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರು, ಕೇಂದ್ರದಿಂದ ಬರಬೇಕಿರುವ ಅನುದಾನದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಲೇ ಬಂದಿದ್ದಾರೆ.

ಹಾಗೇ ನೋಡಿದರೆ, ಯುಪಿಎ ಸರಕಾರದ ಅವಧಿಯಲ್ಲಿದ್ದ ೧೪ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶೇ.೪.೭೨ ತೆರಿಗೆ ಪಾಲನ್ನು ನಿಗದಿಪಡಿಸಿತ್ತು. ಆದರೆ ಬಿಜೆಪಿ ಸರಕಾರದ ಅವಧಿಯಲ್ಲಿ ಜಾರಿಗೆ ಬಂದ ೧೫ನೇ ಹಣಕಾಸು ಆಯೋಗ ಇದನ್ನು ಶೇ.೩.೬೪ಕ್ಕೆ ಇಳಿಕೆ ಮಾಡಿತ್ತು. ಇದರಿಂದ ನಾಲ್ಕು ವರ್ಷದ ಅವಧಿಯಲ್ಲಿ ೪೫,೦೦೦ ಕೋಟಿ ರು. ನಷ್ಟವಾಗಿದೆ ಎನ್ನುವ ಆರೋಪವನ್ನು ಕಾಂಗ್ರೆಸ್ ನಾಯಕರು ಬಹುದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದಾರೆ. ಇದರೊಂದಿಗೆ ಈ ನಷ್ಟ ಸರಿದೂಗಿಸಲು ೧೫ನೇ ಹಣಕಾಸು ಆಯೋಗ ಶಿ-ರಸು ಮಾಡಿದ್ದ ೫೪೯೫ ಕೋಟಿ ರು. ವಿಶೇಷ ಅನುದಾನ, ಬೆಂಗಳೂರು ಅಭಿವೃದ್ಧಿಗೆ ನೀಡಿದ್ದ ೬೦೦೦ ಕೋಟಿ ಸೇರಿದಂತೆ ನಾನಾ ಯೋಜನೆಗೆ ಶಿಫಾರಸು ಮಾಡಿದ್ದ ೧೧೪೯೫ ಕೋಟಿ ರು.ಗಳನ್ನು ಕೇಂದ್ರ ಹಣಕಾಸು ಇಲಾಖೆ ನೀಡಿಲ್ಲ ಎಂಬುದು ಆರೋಪದ ತಿರುಳು.

ರಾಜ್ಯ ರಾಜಕೀಯದಲ್ಲಿ ಪದೇಪದೆ ಪ್ರಸ್ತಾಪವಾಗುತ್ತಿರುವ ‘೧೫ನೇ ಹಣಕಾಸು ಆಯೋಗ’ ಎಂದರೆ ಏನು ಎನ್ನುವುದೇ ಬಹುತೇಕ ಜನಸಾಮಾನ್ಯರಿಗೆ ತಿಳಿಯದ ವಿಷಯ. ಪ್ರತಿ ಐದು ವರ್ಷಗಳಿಗೊಮ್ಮೆ ಭಾರತ ಸಂವಿಧಾನದ ೨೮೦(೧) ವಿಧಿಯನ್ವಯ ಹಣಕಾಸು ಆಯೋಗವನ್ನು ರಚಿಸಲಾಗುತ್ತದೆ. ಈ ಆಯೋಗ ರಾಜ್ಯಗಳಿಂದ ಕೇಂದ್ರಕ್ಕೆ ಬರುತ್ತಿರುವ ತೆರಿಗೆ, ಒಟ್ಟು ಸಂಗ್ರಹ, ಡೆವುಲ್ಯೂಷನ್ ಫಂಡ್ ಸೇರಿದಂತೆ ಹಲವು ಆಯಾಮಗಳನ್ನು ಗಮನದಲ್ಲಿರಿಸಿಕೊಂಡು ರಾಜ್ಯವಾರು ಅನುದಾನವನ್ನು ಹಂಚಿಕೆ ಮಾಡುತ್ತದೆ.

ಹಣಕಾಸು ಆಯೋಗವನ್ನು ನೇಮಕ ಮಾಡಿದ ಐದು ವರ್ಷಗಳ ಬಳಿಕ ಹೊಸ ಆಯೋಗವನ್ನು ನೇಮಕ ಮಾಡಲಾಗುತ್ತದೆ. ಪ್ರತಿ ಐದು ವರ್ಷಕ್ಕೊಮ್ಮೆ ಹಣಕಾಸು ಆಯೋಗವನ್ನು ರಚಿಸುವ ಕೇಂದ್ರ ಸರಕಾರ, ಆ ಆಯೋಗದ ಶಿಫಾರಸುಗಳ ಆಧಾರದಲ್ಲಿ ರಾಜ್ಯಗಳಿಗೆ ನೀಡುವ ಅನುದಾನವನ್ನು ತೀರ್ಮಾ
ನಿಸುತ್ತದೆ. ಈ ವರದಿ ಸಿದ್ಧಪಡಿಸುವಾಗ ಕೇಂದ್ರ ಮತ್ತು ರಾಜ್ಯ ಸರಕಾರಗಳು, ನಾನಾ ಹಂತಗಳ ಸ್ಥಳೀಯ ಸಂಸ್ಥೆ, ಹಿಂದಿನ ಹಣಕಾಸು ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರು, ಆಯೋಗದ ಸಲಹಾ ಮಂಡಳಿ, ಇತರ ಕ್ಷೇತ್ರಗಳ ತಜ್ಞರು ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ನಡೆಸಿದ ಬಹು ಆಯಾಮದ
ಸಮಾಲೋಚನೆಗಳು ನಡೆಯುತ್ತವೆ. ನಂತರವಷ್ಟೇ ಆಯೋಗವು ವರದಿಯನ್ನು ಅಂತಿಮಗೊಳಿಸಿದೆ. ೨೦೨೧- ೨೨ರಿಂದ ೨೦೨೫-೨೬ರ ಅವಧಿಗೆ ಸಲ್ಲಿಸಿರುವ ೧೫ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಎನ್.ಕೆ.ಸಿಂಗ್ ಇದ್ದರು.

ಹಾಗೇ ನೋಡಿದರೆ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿದ್ದಾಗಲೂ ಇದೇ ವಿಷಯವನ್ನು ವಿಧಾನ ಸಭೆಯ ಪ್ರತಿ ಕಲಾಪದ ಸಂದರ್ಭದಲ್ಲಿಯೂ ಪ್ರಸ್ತಾಪ ಮಾಡುತ್ತಿದ್ದರು. ಆದರೆ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವೇ ಅಧಿಕಾರದಲ್ಲಿದ್ದರಿಂದ ಈ ವಿಷಯದಲ್ಲಿ ಹೆಚ್ಚು
ಚರ್ಚೆಗೆ ಅವಕಾಶವಿರಲಿಲ್ಲ. ಕೇಂದ್ರದಿಂದ ಬರಬೇಕಾದ ಅನುದಾನ ಬೆಟ್ಟದಷ್ಟಿದ್ದರೂ, ರಾಜ್ಯ ಸರಕಾರ ಈ ವಿಷಯದಲ್ಲಿ ಚಕಾರವೆತ್ತದೇ ಮನವಿ-ಪತ್ರಗಳಿಗೆ ಸೀಮಿತವಾಗಿತ್ತು.

ಆದರೆ ಸರಕಾರ ಬದಲಾಗುತ್ತಿದ್ದಂತೆ, ಮುಂದಿನ ಲೋಕಸಭಾ ಚುನಾವಣೆಗೆ ಈ ವಿಷಯವನ್ನೇ ‘ಅಸ’ವಾಗಿ ಪ್ರಯೋಗಿಸಲು ತೀರ್ಮಾನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಹಂಚಿಕೆ ವಿಷಯದಲ್ಲಿ ಆಗಿರುವ ತಾರತಮ್ಯವನ್ನು ಪದೇಪದೆ ಎತ್ತಿ ಹಿಡಿ ಯುತ್ತಿದ್ದಾರೆ. ೧೫ನೇ ಹಣಕಾಸು ಆಯೋಗದ ಶಿಫಾರಸು ಜಾರಿಯಾದಾಗಿನಿಂದ ದಕ್ಷಿಣ ಭಾರತಕ್ಕೆ ಭಾರಿ ನಷ್ಟವಾಗಿದೆ ಎನ್ನುವ ಆರೋಪ ಸರ್ವೇ ಸಾಮಾನ್ಯ. ಒಂದು ಹಂತಕ್ಕೆ ಈ ಆರೋಪದಲ್ಲಿ ಹುರುಳಿದೆ. ೧೫ನೇ ಹಣಕಾಸು ಆಯೋಗದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಭಾರತದ ರಾಜ್ಯಗಳಿಗೆ ಅನುದಾನ ಹಂಚಿಕೆ ದೊಡ್ಡ ಪ್ರಮಾಣದಲ್ಲಿ ಹರಿದು ಹೋಗಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ಮೂರನೇ ಸ್ಥಾನದಲ್ಲಿರುವ ಕರ್ನಾಟಕ ನೂರು ರುಪಾಯಿ ಕೇಂದ್ರಕ್ಕೆ ನೀಡಿದರೆ, ವಾಪಸು ೧೨ರಿಂದ ೧೩ ರು. ನೀಡಲಾಗುತ್ತಿದೆ.
ಇದೇ ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಗುಜರಾತ್ ನೀಡುವ ನೂರು ರುಪಾಯಿಗೆ ೧೨೦ರಿಂದ ೧೫೦ ರು.ತನಕ ವಾಪಸು ನೀಡುವ ಕೆಲಸವಾಗುತ್ತಿದೆ. ಈ ರೀತಿ ತಾರತಮ್ಯವಾಗುವುದಕ್ಕೆ ೧೫ನೇ ಹಣಕಾಸು ಆಯೋಗದಲ್ಲಿ ಮಾಡಿರುವ ಶಿಫಾರಸುಗಳೇ ಕಾರಣ ಎನ್ನುವುದು ಸ್ಪಷ್ಟ. ೧೫ನೇ ಹಣಕಾಸು ಆಯೋಗದ ಶಿಫಾರಸಿನಲ್ಲಿ ಕರ್ನಾಟಕ ಮಾತ್ರವಲ್ಲದೇ, ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗೆ ಸಮಸ್ಯೆಯಾಗಿದೆ. ಪ್ರಮುಖವಾಗಿ ಈ ರೀತಿಯಾಗಲು
ಕಾರಣವೇನೆಂದರೆ, ೧೫ನೇ ಹಣಕಾಸು ಆಯೋಗದ ವರದಿ ಸಿದ್ಧಪಡಿಸಲು ೧೯೭೭ರ ಜನಸಂಖ್ಯೆಯನ್ನು ಗಮನದಲ್ಲಿರಿಸಿಕೊಳ್ಳದೇ, ೨೦೧೧ರ ಜನಸಂಖ್ಯೆ ಯನ್ನು ಆಧಾರವಾಗಿಟ್ಟುಕೊಂಡಿದ್ದುದು.

ಆದರೆ ಗಮನಿಸಬೇಕಾದ ಸಂಗತಿಯೆಂದರೆ, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಜಾರಿಗೊಳಿಸಿದ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮ ಉತ್ತರ ಭಾರತಕ್ಕಿಂತ ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಅತ್ಯುತ್ತಮವಾಗಿ ಜಾರಿಯಾಗಿತ್ತು. ಇದರಿಂದಾಗಿ, ದಕ್ಷಿಣ ಭಾರತದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜನಸಂಖ್ಯೆ ಕ್ಷೀಣಿಸಿದರೆ, ಉತ್ತರ ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಸರಕಾರದ ಜನಸಂಖ್ಯಾ ನಿಯಂತ್ರಣ ಯೋಜನೆಯನ್ನು ಅನುಷ್ಠಾನಗೊಳಿಸಿದ ದಕ್ಷಿಣ
ಭಾರತದ ರಾಜ್ಯಗಳಿಗೆ ಇದೀಗ ಅನ್ಯಾಯವಾಗುತ್ತಿದೆ.

ಇನ್ನು ಕರ್ನಾಟಕದ ಮಟ್ಟಿಗೆ ನೋಡುವುದಾದರೆ ೨೦೧೮ರಲ್ಲಿ ೧೫ನೇ ಹಣಕಾಸು ಆಯೋಗದ ಸಭೆಯಲ್ಲಿ ಹಲವು ವಿಷಯಗಳು ಪ್ರಸ್ತಾಪವಾದವು. ಸಭೆಯಲ್ಲಿದ್ದ ಅಧಿಕಾರಿಯೊಬ್ಬರ ಪ್ರಕಾರ, ಹಣಕಾಸು ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಕರ್ನಾಟಕದ ಆರ್ಥಿಕತೆಯ
ವಿಷಯದಲ್ಲಿ ಎರಡು ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ಮೊದಲನೆಯದ್ದು, ರಾಜ್ಯದಲ್ಲಿ ತಲಾದಾಯದಲ್ಲಿರುವ ಏರುಪೇರಿನ ಬಗ್ಗೆ; ೨೦೧೮ರಲ್ಲಿ ರಾಜಧಾನಿ ಬೆಂಗಳೂರಿನ ತಲಾದಾಯ ಸರಿಸುಮಾರು ಆರು ಲಕ್ಷವಿದ್ದರೆ, ಯಾದಗಿರಿ ಸೇರಿದಂತೆ ಅತಿ ಹಿಂದುಳಿದ ಜಿಲ್ಲೆಗಳ ತಲಾ
ದಾಯ ಒಂದೂವರೆ ಲಕ್ಷ ದಾಟಿರಲಿಲ್ಲ. ಆದರೆ, ರಾಜ್ಯದ ಸರಾಸರಿ ತಲಾದಾಯ ಎರಡುವರೆ ಲಕ್ಷದಷ್ಟಿದೆ. ಈ ರೀತಿ ಏರುಪೇರಾಗಲು ಕಾರಣವೇನು? ಇದನ್ನು ಸರಿಪಡಿಸಲು ಮಾರ್ಗಗಳೇನು ಎನ್ನುವ ಬಗ್ಗೆ ಪ್ರಶ್ನೆಯನ್ನು ಎತ್ತಿದ್ದರು.

ಎರಡನೆಯ ಪ್ರಶ್ನೆಯೆಂದರೆ, ರಾಜ್ಯ ಅಭಿವೃದ್ಧಿಯಲ್ಲಿ ಮುಂದಿದ್ದು, ಪ್ರತಿಕುಟುಂಬದ ತಯಾದಾಯದಲ್ಲಿಯೂ ಕನಿಷ್ಠ ಒಂದೂವರೆ ಲಕ್ಷದಷ್ಟಿದೆ. ಆದರೂ ರಾಜ್ಯದಲ್ಲಿ ಮೂರೂವರೆ ಕೋಟಿಯಷ್ಟು (೨೦೧೮ರ ಅವಧಿಯಲ್ಲಿ) ಬಿಪಿಎಲ್ ಕಾರ್ಡ್‌ದಾರರಿದ್ದಾರೆ. ಅಂದರೆ ರಾಜ್ಯದ ಶೇ.೫೦ಕ್ಕೂ ಹೆಚ್ಚು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ. ಇದನ್ನು ಗಮನಿಸಿದರೆ, ಬಿಪಿಎಲ್ ಕಾರ್ಡ್ ವಿತರಣೆಯಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದಿರಬೇಕು ಎನ್ನುವ ಸ್ಪಷ್ಟ ಮಾತುಗಳನ್ನು ಹೇಳಿದ್ದರು.

ಆದರೆ, ೨೦೨೧-೨೨ನೇ ಸಾಲಿನಲ್ಲಿ ಜಾರಿಗೆ ಬಂದ ೧೫ನೇ ಹಣಕಾಸು ಆಯೋಗದ ಶಿ-ರಸುಗಳು ಈಗ ಬಹುದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಪ್ರಮುಖ ಕಾರಣವೆಂದರೆ, ಈ ಹಿಂದೆ ರಾಜ್ಯದಲ್ಲಿಯೂ ಬಿಜೆಪಿ ಸರಕಾರ ಅಽಕಾರದಲ್ಲಿತ್ತು. ಆದ್ದರಿಂದ ಕೇಂದ್ರದ ವಿರುದ್ಧ ನೇರವಾಗಿ ಆರೋಪಿಸಲು
ಸಾಧ್ಯವಾಗದೇ ನಷ್ಟವಾದರೂ, ಅದನ್ನು ಎದುರಿಸುವ ಮನಸ್ಥಿತಿಯಲ್ಲಿ ಬಿಜೆಪಿ ಸರಕಾರವಿತ್ತು. ಆದರೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುರಿಂದ, ಪ್ರತಿಪಕ್ಷವಾಗಿ ಸಹಜವಾಗಿಯೇ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದೆ. ಇದರೊಂದಿಗೆ ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನೀಡಿದ್ದ
ಪಂಚಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕೆ ೫೨ ಸಾವಿರ ಕೋಟಿಗೂ ಹೆಚ್ಚು ಅನುದಾನ ಎತ್ತಿಟ್ಟಿರುವುದರಿಂದ, ಸಹಜವಾಗಿಯೇ ಅಭಿವೃದ್ಧಿ ಯೋಜನೆಗಳಿಗೆ ಹೊಸ ಆರ್ಥಿಕ ಮೂಲವನ್ನು ಹುಡುಕಬೇಕಿದೆ.

ಹೀಗಾಗಿ ಇದೀಗ, ಕೇಂದ್ರ ದಿಂದ ಬರಬೇಕಿರುವ ಬಾಕಿ ಅನುದಾನದತ್ತ ರಾಜ್ಯ ಸರಕಾರ ದೃಷ್ಟಿ ನೆಟ್ಟಿದೆ. ಕರ್ನಾಟಕಕ್ಕೆ ನ್ಯಾಯಯುತವಾಗಿ ಬರ
ಬೇಕಾದ ಅನುದಾನ ಬರಬೇಕಾಗಿತ್ತು ಎನ್ನುವುದು ಸ್ಪಷ್ಟ. ಈ ವಿಷಯವನ್ನು ರಾಜಕೀಯವಾಗಿ ನೋಡಿದರೆ ಸಹಜವಾಗಿಯೇ ಕೇಂದ್ರದಲ್ಲಿರುವ ಬಿಜೆಪಿ ಸರಕಾರದ ವಿರುದ್ಧ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಹಾಗೂ ಬಿಜೆಪಿಯೇತರ ಸರಕಾರವಿರುವ ದೇಶದ ಬೇರೆಬೇರೆ ರಾಜ್ಯಗಳಿಗೆ ತಾರತಮ್ಯವಾಗಿದೆ ಎನಿಸುತ್ತದೆ. ಆದರೆ ರಾಜಕೀಯ ಮೀರಿ ನೋಡಿದರೆ, ನ್ಯಾಯ ಆಗಿರುವುದು ಆರ್ಥಿಕ ಆಯೋಗದಲ್ಲಿರುವ ಮಾರ್ಗಸೂಚಿ, ನಿಯಮಗಳಿಂದ ಎಂಬುದು ಸ್ಪಷ್ಟ.

ಆದ್ದರಿಂದ ೧೫ ಆಯೋಗದ ಶಿ-ರಸಿನಲ್ಲಾಗಿರುವ ಈ ಅನ್ಯಾಯವನ್ನು ೧೬ನೇ ಆರ್ಥಿಕ ಆಯೋಗದ ಸಮಯದಲ್ಲಾದರೂ ಸರಿಪಡಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡಬೇಕಿದೆ. ರಾಜ್ಯ ಸರಕಾರಗಳು, ಇದಕ್ಕೆ ಪೂರಕ ಮಾಹಿತಿ ಹಾಗೂ ವಾದವನ್ನು ಮಂಡಿಸಿದರೆ ಮಾತ್ರ ಮುಂದಿನ ಆಯೋಗದ ಅವಧಿಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ನ್ಯಾಯ ಸಿಗಲಿದೆ. ಈಗಾಗಲೇ ಕರ್ನಾಟಕ ಸರಕಾರ ೧೬ನೇ ಆರ್ಥಿಕ ಆಯೋಗದ ಮುಂದೆ ಮಂಡಿಸಬೇಕಾದ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿದ್ದು, ಈ ಸಮಿತಿ ಮಂಡಿಸುವ ಆಧಾರದಲ್ಲಿ ೨೦೨೬ರಿಂದ ಮುಂದಿನ ಐದು ವರ್ಷ ಯಾವ ರೀತಿಯಲ್ಲಿ ಕೇಂದ್ರದಿಂದ ಅನುದಾನ ಹಂಚಿಕೆಯಾಗಲಿದೆ ಎನ್ನುವುದು ನಿರ್ಧಾರವಾಗಲಿದೆ.

Leave a Reply

Your email address will not be published. Required fields are marked *

error: Content is protected !!