Saturday, 27th July 2024

ಕಾಶ್ಮೀರದ ‘ಗುಪ್ಕಾರ್’ ನಾಯಕರು ಸಾಧಿಸಲು ಹೊರಟಿದ್ದಾದರೂ ಏನು?

ಅಭಿವ್ಯಕ್ತಿ

ಡಾ.ಆರ್‌.ಜಿ.ಹೆಗಡೆ

ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಮುಖ್ಯವಾದ ವೈಫಲ್ಯ ಅಲ್ಲಿನ ನಾಯಕರದು. ಭಾರತ ಸರಕಾರದ ಉದಾರ ನೀತಿಗಳನ್ನು ಮತ್ತು ಪಾಕಿಸ್ತಾನದಂತಹ ದೇಶದೊಂದಿಗೆ ಹೋಗುವ ಅಪಾಯಗಳನ್ನು ಮುಗ್ಧ ಮನಸ್ಸಿನ ಕಾಶ್ಮೀರಿ ಗಳಿಗೆ ಅವರು ವಿವರಿಸಿ ಹೇಳಬೇಕಿತ್ತು. ಆದರೆ ಆ ಕೆಲಸವನ್ನು ಅಲ್ಲಿನ ನಾಯಕರು ಮಾಡಲಿಲ್ಲ.

ಕಾಶ್ಮೀರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಸೇರಿ ’ಗುಪ್ಕಾರ್ ಒಕ್ಕೂಟ’ ಎನ್ನುವ ಹೆಸರಿನ ವೇದಿಕೆಯೊಂದನ್ನು ಈಗ ರಚಿಸಿ ಕೊಂಡಿರುವುದು ನಮಗೆ ಗೊತ್ತು. ಇದು ಸಂತೋಷದ ವಿಷಯವಾಗಿತ್ತು. ಏಕೆಂದರೆ ಅವು ಒಂದಾಗಿ ಕಾಶ್ಮೀರಿ ಜನಾಭಿಪ್ರಾಯ ವನ್ನು ಸಂವಿಧಾನದ ಆವರಣದಲ್ಲಿ ನಿರೂಪಿಸಿ ಕೇಂದ್ರದೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದರೆ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ದಕ್ಕಿಹೋಗುತ್ತಿತ್ತೇನೋ?

ಆದರೆ ಈಗ ಆಗಿರುವ ವಿಷಯವೇ ಬೇರೆ. ಅದರ ನಾಯಕತ್ವದಿಂದ ಆತಂಕಕಾರಿ ಮಾತುಗಳು ಹೊರಬರುತ್ತಿವೆ. ಅದರ ನಾಯಕ ರೊಬ್ಬರು ಆರ್ಟಿಕಲ್ 370ನ್ನು ಕೇಂದ್ರ ಸರಕಾರ ವಾಪಸು ಪಡೆದಿರುವ ನಂತರದ ಅಂದರೆ ಇಂದಿನ ಕಾಶ್ಮೀರದ ಸ್ಥಿತಿಗತಿಯ ಕುರಿತು ಮಾತನಾಡುತ್ತ ಏನು ಹೇಳಿದ್ದಾರೆ ನೋಡಿ! ‘ಕಾಶ್ಮೀರಿಗಳು ಇಂದು ತಮ್ಮನ್ನು ತಾವು ಭಾರತೀಯರು ಎಂದು ಭಾವಿಸಿ ಕೊಳ್ಳುತ್ತಿಲ್ಲ’ ಎಂದಿದ್ದಾರೆ. ಇಲ್ಲಿಗೆ ನಿಲ್ಲಿಸದೇ, ’ಕಾಶ್ಮೀರದ ಜನ ಬಹುಶಃ ಇಂದು ಭಾರತದ ಆಡಳಿತದ ಕೆಳಗೆ ಇರುವುದಕ್ಕಿಂತಲೂ ಚೀನಾ ಮುಂದೊತ್ತಿ ಬರುವುದನ್ನು ಬಯಸುತ್ತಾರೆ’ ಎಂದೂ ಹೇಳಿಬಿಟ್ಟಿದ್ದಾರೆ.

ಇನ್ನೊಬ್ಬ ನಾಯಕರು ಭಾರತದ ಧ್ವಜಕ್ಕಿಂತಲೂ ಕಾಶ್ಮೀರದ ಧ್ವಜವೇ ಹೆಚ್ಚು ಮಹತ್ವದ್ದು ಎನ್ನುವ ಅರ್ಥ ಬರುವ ರೀತಿಯಲ್ಲಿ ಮಾತನಾಡಿದ್ದಾರೆ. ಇಂತಹ ಮಾತುಗಳನ್ನಾಡಿದವರು ಹಿರಿಯ ನಾಯಕರು. ಕಾಶ್ಮೀರದ ಮುಖ್ಯಮಂತ್ರಿಗಳಾಗಿದ್ದವರು. ಕೆಲವರು ಕೇಂದ್ರ ಸರಕಾರದಲ್ಲಿಯೂ ಮಹತ್ವದ ಹುದ್ದೆಗಳನ್ನು ಹೊಂದಿದ್ದವರು. ಅವರ ಇಂತಹ ಮಾತುಗಳು ದೇಶದ ಜನತೆಗೆ ಆ-ತ
ತಂದಿವೆ. ಈ ಮಾತುಗಳನ್ನು ಅವರು ಆಡಬಾರದಿತ್ತು.

ಅದೂ ಈಗ, ಅಂದರೆ ಕಾಶ್ಮೀರದ ಸ್ಥಿತಿ ಹತೋಟಿಗೆ ಬರುತ್ತಿರುವಂತೆ ತೋರುತ್ತಿರುವಾಗ. ಕಾಶ್ಮೀರದ ಇತಿಹಾಸವನ್ನು ನೋಡಿ ಕೊಳ್ಳಬೇಕು. ಹೇಗೆ ಭಾರತ ಅಲ್ಲಿಯ ಜನತೆಗೆ ಸ್ವಾತಂತ್ರ್ಯೋತ್ತರವಾಗಿ ದೇಶದ ಬೇರಾವ ಪ್ರದೇಶಕ್ಕೂ ನೀಡದ ಗೌರವ, ಸೌಲಭ್ಯ ನೀಡುತ್ತಲೇ ಬಂದಿದೆ ಎನ್ನುವುದನ್ನು.

ಇಂತಹ ವಿಶೇಷಾಧಿಕಾರಗಳನ್ನು ದೇಶ ನೀಡಿದ್ದು ಅಲ್ಲಿನ ರಾಜಕೀಯ, ಭೌಗೋಳಿಕ, ಸಾಂಸ್ಕೃತಿಕ ಅನನ್ಯತೆಯನ್ನು, ಸೂಕ್ಷ್ಮತೆ ಯನ್ನು ಗೌರವಿಸಿ. ಒಂದು ನಿರ್ದಿಷ್ಟ ರಾಜಕೀಯ ಸಂದರ್ಭದಲ್ಲಿ. ಬಹುಶಃ ಕಾಶ್ಮೀರಿಗಳಿಗೆ ಭಾರತದೊಂದಿಗೆ ಸಂಪೂರ್ಣವಾಗಿ ಮಾನಸಿಕವಾಗಿ ಬೆರೆತುಕೊಳ್ಳಲು ಹೆಚ್ಚಿನ ಸಮಯಾವಕಾಶ ನೀಡುವ ಉದ್ದೇಶದಿಂದ. ಭಾರತ ಸರಕಾರ ಬಹುಶಃ ಇಡೀ ಜಗತ್ತಿ ನಲ್ಲಿಯೇ ಯಾವ ದೇಶವೂ ತನ್ನ ಪ್ರಾಂತವೊಂದಕ್ಕೆ omಛ್ಚಿಜ್ಛಿಜ್ಚಿ ಆಗಿ ನೀಡದ ರೀತಿಯ ವಿಶೇಷಾಧಿಕಾರ ವನ್ನು ಕಾಶ್ಮೀರಕ್ಕೆ ನೀಡಿತ್ತು. ಎಂತಹ ವಿಶೇಷಧಿಕಾರ ಎಂದರೆ, ಅಲ್ಲಿಗೆ ಹೆಚ್ಚೂ ಕಡಿಮೆ ಸ್ವಯಂ ಆಡಳಿತದ ಅಧಿಕಾರ ನೀಡಿತ್ತು. ಪ್ರತ್ಯೇಕ ಸಂವಿಧಾನ ಹೊಂದಲು ಅವಕಾಶ ನೀಡಿತ್ತು. ಅಲ್ಲಿನ ಸಂಸ್ಕೃತಿ, ಡೆಮಾಗ್ರಫಿ ಅಸ್ತವ್ಯಸ್ತವಾಗಬಾರದು ಎಂಬ ಕಾರಣಕ್ಕೆ ಅಲ್ಲಿನ ಭೂಮಿಯನ್ನು ಬೇರೆಡೆಯ ಭಾರತೀಯರು ಖರೀದಿ ಮಾಡುವಂತಿಲ್ಲ ಎನ್ನುವ ಕಾನೂನಾತ್ಮಕ ರಕ್ಷಣೆ ನೀಡಿತ್ತು. ಎಷ್ಟರ ಮಟ್ಟಿಗೆ ಎಂದರೆ ಕಾಶ್ಮೀರಿ ಹುಡುಗಿಯೊಬ್ಬಳು ಬೇರೆ ಭಾರತೀಯರನ್ನು ಮದುವೆಯಾದರೆ ಅವಳು ಪಿತ್ರಾರ್ಜಿತ ಭೂಮಿಯ ಹಕ್ಕನ್ನು ಕಳೆದುಕೊಳ್ಳಬೇಕಾಗಿತ್ತು. ಭೂಮಿ ಪರಭಾರೆ ಯಾಗಬಾರದು ಎನ್ನುವ ಕಾರಣಕ್ಕೆ. ಕಾಶ್ಮೀರದಲ್ಲಿ ಕೆಲವೊಮ್ಮೆ ಅತ್ಯಂತ ಸಂಕಟ ಮಯ ಪರಿಸ್ಥಿತಿಗಳಲ್ಲಿಯೂ ಚುನಾವಣೆಗಳನ್ನು ನಡೆಸಿ ಜನಪ್ರತಿನಿಧಿಗಳಿಗೆ ಸರಕಾರಗಳನ್ನು ನಿರ್ವಹಿಸಲು ಅನುವು ಮಾಡಿ ಕೊಟ್ಟಿತ್ತು.

ಹೆಚ್ಚೂ ಕಡಿಮೆ ಆಡಳಿತ ಕಾಶ್ಮೀರಿ ರಾಜಕೀಯ ಪ್ರತಿನಿಧಿಗಳ ಕೈಯಲ್ಲೇ ಇತ್ತು. ಕನಿಷ್ಠ ಐವತ್ತು ವರ್ಷಗಳಷ್ಟು ದೀರ್ಘಕಾಲ. ಹಾಗಾಗಿ ಸಮಸ್ಯೆಗೆ ಕೇವಲ ಭಾರತ ಸರಕಾರವನ್ನು ಹೊಣೆ ಮಾಡಿ ಅಲ್ಲಿನ ನಾಯಕತ್ವ ಪಾರಾಗುವಂತಿಲ್ಲ. ಅಷ್ಟೇ ಅಲ್ಲ. ಭಾರತ ಸರಕಾರ ತನ್ನ ಕೈಯಲ್ಲಿ ಏನು ಸಾಧ್ಯವಿದೆಯೋ ಅದೆಲ್ಲವನ್ನೂ ಕಾಶ್ಮೀರದ ಅಭಿವೃದ್ಧಿಗೆ ಮಾಡುತ್ತಲೇ ಬಂತು.ಧನ ಸಹಾಯ
ನೀಡುತ್ತ ಬಂತು. ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿತು. ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಸಹಾಯ ನೀಡಿತು.

ರಸ್ತೆಗಳನ್ನು, ರೈಲ್ವೇ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತಲೇ ಬಂತು. ಎಲ್ಲ ರಾಜ್ಯಗಳಿಗೂ ನೀಡುವುದಕ್ಕಿಂತಲೂ ಕಡಿಮೆ ಯಿಲ್ಲದ ಬಜೆಟ್ ಅನ್ನು ನೀಡುತ್ತಲೇ ಬಂದಿದೆ. ಅಲ್ಲಿನ ಜನತೆಯ ಒಂದು ಭಾಗಕ್ಕೆ ‘ಮಾನಸಿಕ ಸಮಸ್ಯೆಗಳ (ಹೀಲಿಂಗ್ ಟಚ್) ಪರಿಹಾರಕ್ಕೂ ದೇಶ ಅವಕಾಶ ಒದಗಿಸಿತ್ತು. ವಿಶೇಷವಾಗಿ, ವಾಜಪೇಯಿ ಅವರು, ಸಮಸ್ಯೆಗಳೇನಾದರೂ ಇದ್ದರೆ ‘ಕಾಶ್ಮೀರಿಯತ್, ಇನ್ಸಾನಿಯತ್, ಜಮೂರಿಯತ್, ಆಧಾರದ ಮೇಲೆ ಬಗೆಹರಿಸಿಕೊಳ್ಳಲು ಕಾಶ್ಮೀರಿ ಹೋರಾಟಗಾರರಿಗೆ, ಜನತೆಗೆ ವಿನಂತಿ ಮಾಡಿ ದ್ದರು. ಆದರೆ ಉಗ್ರಗಾಮಿಗಳು ಪ್ರಯತ್ನ ಯಶಸ್ವಿಯಾಗಲು ಬಿಡಲೇ ಇಲ್ಲ. ಕೇಂದ್ರ ಹಲವು ಬಾರಿ ತಟಸ್ಥ ಮಧ್ಯವರ್ತಿಗಳನ್ನು ಕೂಡ ಮಾತುಕತೆಗೆ ನಿಯೋಜಿಸಿತು.

ಅಂತಹ ಪ್ರಯತ್ನಗಳೂ ಸಫಲವಾಗಲಿಲ್ಲ. ಭಾರತದ ಈಶಾನ್ಯ ರಾಜ್ಯಗಳ ಕೆಲವು ಸಂಘಟನೆಗಳು ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಂಡಿವೆ. ಬೋಡೊಗಳು, ಗೂರ್ಖಾಗಳು, ನಾಗಾಗಳು ಭಾರತದೊಂದಿಗೆ ಮಾನಸಿಕವಾಗಿ ಸೇರಿಹೋಗಿದ್ದಾರೆ. ಆದರೆ ಕಾಶ್ಮೀರದ ಹೋರಾಟಗಾರರಾಗಲಿ ಅಥವಾ ಅಲ್ಲಿನ ನಾಯಕರಾಗಲಿ ತಮ್ಮ ಜನರ ಬೇಡಿಕೆಗಳನ್ನು ಸ್ಪಷ್ಟವಾಗಿ ಮುಂದಿಟ್ಟುಕೊಂಡು ಮಾತುಕತೆ ನಡೆಸಲು ಮುಂದಾಗಲೇ ಇಲ್ಲ. ಭಾರತದ ಔದಾರ್ಯಕ್ಕೆ ಪ್ರತಿಯಾಗಿ ಕಾಶ್ಮೀರದಲ್ಲಿ ಏನು ನಡೆಯುತ್ತ ಬಂತು ಎನ್ನುವುದು ಗುಪ್ಕಾರ್ ನಾಯಕರಿಗೆ ಸೇರಿ ದೇಶಕ್ಕೆ ಗೊತ್ತಿದೆ. ಮೂಲ ನಿವಾಸಿಗಳಾಗಿದ್ದ ಕಾಶ್ಮೀರಿ ಪಂಡಿತರು ನೆಲೆ ಕಳೆದುಕೊಂಡು ಬೀದಿಪಾಲಾದರು.

ಅಲ್ಲಿನ ಉಗ್ರಗಾಮಿಗಳು ಭಾರತದ ವಿರುದ್ಧ, ಮುಗ್ಧ ಕಾಶ್ಮೀರಿಗಳ ವಿರುದ್ದ ಗೆರಿಲ್ಲಾ ಯುದ್ದ ನಡೆಸುತ್ತಲೇ ಬಂದ. ‘ಆಜಾದ್ ಕಾಶ್ಮೀರ್’ ಹೆಸರಿನಲ್ಲಿ ಅಥವಾ ‘ರೈಟ್ ಟು ಸೆಲ್ ಡಿಟರ್ಮಿ ನೇಶನ್’ ಹೆಸರಿನಲ್ಲಿ. ಕುತೂಹಲವೆಂದರೆ ’ಆಝಾದ್ ಕಾಶ್ಮೀರ’ ಅಥವಾ ‘ರೈಟ್ ಟು ಸೆಲ್ಫ್ ಡಿಟರ್ಮಿನೇಶನ್’ ಎಂದರೇನು ಎನ್ನುವುದರ ಅರ್ಥವ್ಯಾಖ್ಯಾನ ಅಥವಾ ಅದರ ಪರಿಣಾಮಗಳ ವಿವರಗಳನ್ನು ಅವರು ಯೋಚಿಸಿದ ಕುರುಹುಗಳೇ ಇಲ್ಲ. ಆ ಕುರಿತಾದ ಒಂದು ಸಮಗ್ರವಾದ ತತ್ತ್ವಜ್ಞಾನ ಅವರಿಗೆ ಇಲ್ಲ ಎಂದೇ ಹೇಳಬೇಕು. ಪ್ರಶ್ನೆಗಳಿಗೆ ಉತ್ತರ ನೀಡಲು ಅವರು ವಿಫಲರಾಗುತ್ತಲೇ ಬಂದಿದ್ದಾರೆ.

ಸೆಲ್ಫ್ ಡಿಟರ್ಮಿನೇಶನ್ ಎಂದರೇನು ಅಥವಾ ಆಜಾದ್ ಕಾಶ್ಮೀರ್ ಎಂದರೇನು? ಆಜಾದ್ ಕಾಶ್ಮೀರ್ ದ ಭೌಗೋಳಿಕ ವ್ಯಾಪ್ತಿ ಏನು? ಆ ಪರಿಕಲ್ಪನೆಯಿಂದ ಅವರು ಸಾಧಿಸುವುದಾದರೂ ಏನು? ಅದು ಪ್ರತ್ಯೇಕ ರಾಷ್ಟ್ರವಾಗಿ ಉಳಿಯುತ್ತದೆಯೇ ಅಥವಾ ಪಾಕಿಸ್ತಾನದ ಜತೆ ವಿಲೀನ ಬಯಸುತ್ತದೆಯೇ? ಪಾಕಿಸ್ತಾನವನ್ನು ಸೇರಲು ಬಯಸುವುದಾದರೆ ಭಾರತದಂತಹ ದೇಶವನ್ನು ಬಿಟ್ಟು ಪಾಕಿಸ್ತಾನದಂತಹ ವಿಶೇಷ ಅಧಿಕಾರ ಹೋಗಲಿ, ಪ್ರಜಾಪ್ರಭು ತ್ವವೇ ಇಲ್ಲದ ದೇಶವನ್ನು ಸೇರುವುದರಿಂದ ಕಾಶ್ಮೀರಿಗಳಿಗೇನು ಲಾಭ? ಹಾಗೆಯೇ, ಒಮ್ಮೆ ಆಝಾದ್ ಕಾಶ್ಮೀರ ಸ್ವಾತಂತ್ರ್ಯ ದೇಶವಾಗಲು ಬಯಸಿದರೆ ಸುತ್ತಲೂ ಭಾರತ, ಪಾಕಿಸ್ತಾನ, ಚೀನಾದಂಥ ದೇಶಗಳನ್ನಿಟ್ಟುಕೊಂಡು ಒಂದು ಚಿಕ್ಕ ಭೂಭಾಗ ದೇಶವಾಗಿ ಉಳಿಯಲು ಸಾಧ್ಯವೇ? ಅಷ್ಟೇ ಅಲ್ಲ. ಒಂದು ದೇಶಕ್ಕೆ ಬೇಕಾಗುವ
ಆರ್ಥಿಕತೆ ಕಾಶ್ಮೀರದಲ್ಲಿದೆಯೇ? ಇವುಗಳಲ್ಲಿ ಯಾವ ಪ್ರಶ್ನೆಗೂ ಅವರಿಂದ ಉತ್ತರ ಬಂದೇ ಇಲ್ಲ.

ಕಾಶ್ಮೀರಿ ನಾಯಕತ್ವ ಮೊದಲಿನಿಂದಲೂ ಹೇಳಿಕೊಂಡು ಬರುತ್ತಿರುವ ಮತ್ತು ಈಗಲೂ ಹೇಳುತ್ತಿರುವ ವಿಷಯವೆಂದರೆ ಕಾಶ್ಮೀರ ಸಮಸ್ಯೆಗೆ ಒಂದು ’ರಾಜಕೀಯ ಪರಿಹಾರ’ ದ ಅಗತ್ಯವಿದೆ ಎನ್ನುವುದು. ಹಾಗೆಂದು ಆ ರಾಜಕೀಯ ಪರಿಹಾರವೆಂದರೇನು
ಎಂಬುದರ ಕುರಿತು ಅವರಿಗೇ ಸ್ಪಷ್ಟತೆ ಇದ್ದಂತಿಲ್ಲ. ಏಕೆಂದರೆ ಅದರ ವಿವರಗಳು ಎಲ್ಲಿಯೂ ಲಭ್ಯವಿಲ್ಲ. ಅದನ್ನು ಮುಂದಿಟ್ಟು ಕೊಂಡು ಕಾಶ್ಮೀರಿ ನಾಯಕತ್ವ ಕೇಂದ್ರ ಸರಕಾರದೊಂದಿಗೆ ಚರ್ಚಿಸಿದಂತೆ ಇಲ್ಲ. ತಟಸ್ಥ ಮಧ್ಯವರ್ತಿಗಳ ಬಳಿ ಹೇಳಿಕೊಂಡಂತೆ ಕೂಡ ಇಲ್ಲ. ಸಾಮಾನ್ಯ ಜನತೆಗೆ ಒಂದು ಬಲವಾದ ದೇಶದ ವಿರುದ್ದ ಶಸಸಜ್ಜಿತ ಹೋರಾಟ ನಡೆಸಲು ಸಾಧ್ಯವಾಗುತ್ತದೆಯೇ?
ಗುಪ್ಕಾರ್ ನಾಯಕರು ಗಮನಿಸಬೇಕಿತ್ತು. ದೇಶ ಕಾಶ್ಮೀರಿ ಉಗ್ರಗಾಮಿಗಳಿಗೆ, ನಾಯಕರಿಗೆ ಸುದೀರ್ಘ ಸಮಯ ನೀಡಿದೆ. ತನ್ನೆಲ್ಲ ಸಹನೆಯನ್ನು ಬಳಸಿ ಭಾರತ ಸರಕಾರ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಸುದೀರ್ಘ ಕಾಲ ಇಟ್ಟುಕೊಂಡೇ ಬಂದಿತ್ತು.

ಆಯ್ಕೆಗಳು ಮುಗಿಯುತ್ತ ಬಂದಾಗ 370ನೇ ವಿಧಿಯನ್ನು ಹಿಂಪಡೆದುಕೊಂಡಿದೆ. ಅದರಲ್ಲಿ ತಪ್ಪೇನಿದೆ? ಯಾರೋ ಹೆದರಿಸು ತ್ತಾರೆ ಎನ್ನುವ ಕಾರಣಕ್ಕೆ ತಾತ್ಪೂರ್ತಿಕ ಆರ್ಟಿಕಲ್ 370ನ್ನು ಭಾರತದಂತಹ ಶಕ್ತಿಯುತ ದೇಶ ಶಾಶ್ವತವಾಗಿ ಮುಂದುವರಿಸಿ ಕೊಂಡು ಹೋಗಲಾಗುತ್ತದೆಯೇ? ತನ್ನ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಶಕ್ತಿಗಳು ನಿರಂತರ ರಕ್ತ ಹರಿಸುತ್ತ ಆಟವಾಡು ತ್ತಿರುವುದನ್ನು ನೋಡುತ್ತ ಕುಳಿತುಕೊಳ್ಳಲಾಗುತ್ತದೆಯೇ? ಭಾರತ ಸರಕಾರ ಇಂತಹ ಕ್ರಮವೊಂದನ್ನು ತೆಗೆದುಕೊಂಡಿದ್ದು
ಅನಿವಾರ್ಯವಾಗಿ. ತನ್ನ ಆತ್ಮಾಭಿಮಾನವನ್ನು, ಗೌರವವನ್ನು ಜಾಗತಿಕವಾಗಿ ಎತ್ತಿ ಹಿಡಿದುಕೊಳ್ಳಲು.

ಕಾಶ್ಮೀರಿ ನಾಯಕರ ಸತತ ಅಸಹಕಾರದ ಹಿನ್ನೆಲೆಯಲ್ಲಿ. ಹಾಗಾಗಿ ಸರಕಾರ ತೆಗೆದುಕೊಂಡ ಕ್ರಮ ಒಂದು ತಾರ್ಕಿಕತೆಯ ತುರೀಯ ವಾಗಿ ಬಂದಿದ್ದು. ಎಪ್ಪತ್ತು ವರ್ಷಗಳ ಅನುಭವದ ಹಿನ್ನೆಲೆಯಲ್ಲಿ. ಅಂತಿಮವಾಗಿ ತೆಗೆದುಕೊಂಡಿದ್ದು.ಮತ್ತೆ ಬದಲಿಸಲಾಗದ್ದು.
ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಮುಖ್ಯವಾದ ವೈಫಲ್ಯ ಅಲ್ಲಿನ ನಾಯಕರದು. ಭಾರತ ಸರಕಾರದ ಉದಾರ ನೀತಿಗಳನ್ನು ಮತ್ತು ಪಾಕಿಸ್ತಾನದಂತಹ ದೇಶದೊಂದಿಗೆ ಹೋಗುವ ಅಪಾಯಗಳನ್ನು ಮುಗ್ದ ಮನಸ್ಸಿನ ಕಾಶ್ಮೀರಿಗಳಿಗೆ ಅವರು ವಿವರಿಸಿ ಹೇಳಬೇಕಿತ್ತು. ಜನಾಭಿಪ್ರಾಯವನ್ನು ನಿರೂಪಿಸಬೇಕಿತ್ತು.

ಭಾರತದೊಂದಿಗೆ ಸುಖಮಯ ಬದುಕಿನ ಅವಶ್ಯಕತೆಯನ್ನು, ಶಾಂತಿ ತರುವ ಆರ್ಥಿಕ ಪ್ರಗತಿ ದಟ್ಟಬಡತನದಲ್ಲಿರುವ ಅಲ್ಲಿನ ಜನತೆಗೆ ಹೇಗೆ ಹೊಸಬಾಳು ನೀಡಬಹುದೆಂಬುದನ್ನು ತಿಳಿಸಿ ಹೇಳಬೇಕಿತ್ತು. ಶಕ್ತಿ ಯುತ ಸರಕಾರವೊಂದರ ವಿರುದ್ಧ ಹೋರಾಟ ನಡೆಸುವ ಅರ್ಥಹೀನತೆಯನ್ನು ತಿಳಿಸಿ ಹೇಳಬೇಕಿತ್ತು. ಯಾರದೋ ಬಂದೂಕಿಗೆ ಹೆಗಲು ನೀಡಿ ಜೀವನ ಕಳೆಯುವುದು ವ್ಯರ್ಥ ಎನ್ನುವುದನ್ನು ಹೇಳಬೇಕಿತ್ತು. ಅಂದು ಹೇಳಲಾಗದಿದ್ದರೆ ಇಂದಾದರೂ ಹೇಳಬೇಕಿತ್ತು.

ವಿಷಾದವೆಂದರೆ ಇವೆಲ್ಲವನ್ನು ಬಿಟ್ಟು ಗುಪ್ಕಾರ್ ಕೂಟ ಮತ್ತೆ ರಾಜ್ಯಕ್ಕೆ ಹಳೆಯ ಸ್ಥಾನಮಾನ ಬೇಡುತ್ತಿರುವುದು ಮತ್ತು ಅತಂಕ ಕಾರಿ ಮಾತುಗಳನ್ನು ಆಡುತ್ತಲೇ ಇರುವುದು. ಇಲ್ಲಿ ಮತ್ತೆ ಪ್ರಶ್ನೆಗಳಿವೆ. ಅವರಿಗೆ ಇತಿಹಾಸ ಗೊತ್ತಿಲ್ಲವೇ? ಹಳೆಯ ಸ್ಥಾನಮಾನ
ಕಾಶ್ಮೀರಿಗಳ ಬದುಕಿಗೆ ತಂದಿದ್ದು ಕೇವಲ ದುಃಖವನ್ನು ಮತ್ತು ದುರಂತವನ್ನು ಎನ್ನುವುದು ಗೊತ್ತಿಲ್ಲವೇ? ಆರ್ಟಿಕಲ್  370 ಜಾರಿ ಯಲ್ಲಿದ್ದಾಗ ಅಲ್ಲಿ ಸಮಸ್ಯೆ ಬಗೆಹರಿದಿದ್ದರೆ ಈಗಿನ ಕ್ರಮ ತೆಗೆದುಕೊಳ್ಳುವ ಅಗತ್ಯ ಬರುತ್ತಿತ್ತೇ? ಇದೇ ನಾಯಕರು ಅಧಿಕಾರ ದಲ್ಲಿದ್ದಾಗ ಸಮಸ್ಯೆ ಏಕೆ ಬಗೆಹರಿಯಲಿಲ್ಲ? ಈಗ ಮತ್ತೆ ಕಾಶ್ಮೀರಕ್ಕೆ ಅಂತಹ ಸ್ಥಾನಮಾನ ನೀಡಿಬಿಟ್ಟರೆ ಅಲ್ಲಿ ಎಲ್ಲವೂ ಸರಿಯಾಗಿ ಹೋಗುತ್ತದೆಯೇ? ಮೇಲ್ನೋಟಕ್ಕೇ ತೀರ ಅಸಡ್ಡಾಳವಾಗಿರುವ ತಮ್ಮ ಮಾತುಗಳಿಂದ ಗುಪ್ಕಾರ್ ನಾಯಕರು ಸಾಧಿಸಲು ಹೊರಟಿರುವುದಾದರೂ ಏನನ್ನು? ಗೌರವಾನ್ವಿತ ಗುಪ್ಕಾರ್ ನಾಯಕರು ಈಗಲಾದರೂ ತಮ್ಮ ಹಳೆಯ ಮನೋಭಾವ ತ್ಯಜಿಸಿ ಶಾಂತಿಯುತ ಸಹಬಾಳ್ವೆಗೆ ಕೇಂದ್ರ ಸರಕಾರದೊಂದಿಗೆ ಸಹಕರಿಸಿದರೆ ದೇಶ ಮತ್ತು ಮಾನವೀಯತೆ ಅವರಿಗೆ ಕೃತಜ್ಞ ವಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!