Tuesday, 27th February 2024

ಈ ಮೈತ್ರಿ ದೀರ್ಘಕಾಲ ಸಾಧ್ಯವೇ ?

ವರ್ತಮಾನ

maapala@gmail.com

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್‌ನ ಆಪರೇಷನ್ ಕಮಲಕ್ಕೆ ಸರಿಯಾದ ಪ್ರತ್ಯುತ್ತರವನ್ನೇ ನೀಡಿದೆ. ಲೋಕಸಭೆ ದೃಷ್ಟಿಯಿಂದ ರಾಜ್ಯದಲ್ಲಿ ಎರಡೂ ಪಕ್ಷಗಳಿಗೆ ಮೈತ್ರಿ ಅನಿವಾರ್ಯವಾಗಿತ್ತಾದರೂ ಎರಡು ಕಾರಣಗಳಿಗಾಗಿ ದೀರ್ಘಾವಧಿಯಲ್ಲಿ ಇದು ಮುಂದುವರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಜನಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಬಳಿಕ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಪ್ರತಿಪಕ್ಷಗಳು ಏನೇ ಮಾಡಿದರೂ ಈ ಸರಕಾರ ಕೆಡವಲು ಸಾಧ್ಯವಿಲ್ಲ ಎಂಬ ವಾತಾವರಣವಿದ್ದರೂ ಸುಮ್ಮನಾಗದ ಕಾಂಗ್ರೆಸ್ ಆಪರೇಷನ್ ಹಸ್ತದ ಮೂಲಕ ಪ್ರತಿಪಕ್ಷಗಳ ಶಾಸಕರು, ಮಾಜಿ ಶಾಸಕರು, ಮುಖಂಡರಿಗೆ ಗಾಳ ಹಾಕಲಾರಂಭಿಸಿತು. ಅದರ ಪರಿಣಾಮ ಹಲವರು ಕೈ ಹಿಡಿಯಲು ಸಜ್ಜಾಗಿದ್ದರು. ಸುಮಾರು ಒಂದು ತಿಂಗಳು ಈ ಪ್ರಕ್ರಿಯೆ ತೀವ್ರಗತಿಯಲ್ಲಿ ನಡೆಯುತ್ತಿದ್ದರೂ ಬಿಜೆಪಿ ವರಿಷ್ಠರು ಮೌನವಾಗಿದ್ದುದು ಹಲವು ವಿಶ್ಲೇಷಣೆಗಳಿಗೆ ಕಾರಣವಾಯಿತು.

ವಿಧಾನಸಭೆ ಚುನಾವಣೆಯಲ್ಲಿ ಹಿನಾಯ ಸೋಲಿನ ಬಳಿಕ ರಾಜ್ಯ ಬಿಜೆಪಿ ನಾಯಕರ ಬಗ್ಗೆ ವರಿಷ್ಠರು ಭ್ರಮ ನಿರಸನಗೊಂಡಿದ್ದಾರೆ. ಹೀಗಾಗಿ ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕರ ನೇಮಕದ ಬಗ್ಗೆ ತಲೆಕೆಡಿಸಿ ಕೊಂಡಿಲ್ಲ. ರಾಜ್ಯ ಬಿಜೆಪಿಯನ್ನು ವರಿಷ್ಠರು ಸಂಪೂರ್ಣ ಕಡೆಗಣಿಸಿದ್ದಾರೆ ಎಂದೆಲ್ಲಾ ಚರ್ಚೆಗಳು ಆರಂಭವಾ ದವು. ಆದರೆ, ಬಿಜೆಪಿಯ ಚುನಾವಣಾ ಚಾಣಕ್ಯ ಎಂದೇ ಹೇಳಲಾಗುತ್ತಿರುವ ಗೃಹ ಸಚಿವ ಅಮಿತ್ ಶಾ ಅವರ ತಲೆಯಲ್ಲಿ ಏನು ಓಡುತ್ತಿದೆ? ಅವರು ನಡೆಸುತ್ತಿರುವ ತಂತ್ರಗಾರಿಕೆಯಾದರೂ ಏನು ಎಂಬುದನ್ನು ತಿಳಿದು ಕೊಳ್ಳಲು ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ತಿಳಿಯಲು ಸಾಕಷ್ಟು ಸಮಯವೇ ಬೇಕಾಯಿತು.

ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಕುರಿತಂತೆ ಅಮಿತ್ ಶಾ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರೊಂದಿಗೆ ಮಾತುಕತೆ ನಡೆಸಿ ಮೈತ್ರಿಗೆ ಅವರನ್ನು ಒಪ್ಪಿಸಿದ್ದು ಬಹಿರಂಗವಾದ ಬಳಿಕವಷ್ಟೇ ಅವರಿಬ್ಬರ ರಾಜಕೀಯ ಚಾಣಾಕ್ಷತನ ಎಲ್ಲರಿಗೂ ಅರಿವಾಗಿದ್ದು. ಇದೀಗ ಲೋಕಸಭೆ ಚುನಾವಣೆ ಮಾತ್ರವಲ್ಲ,
ಅದರಾಚೆಗೂ ಎರಡೂ ಪಕ್ಷಗಳ ಮೈತ್ರಿ ಅಂತಿಮಗೊಂಡಿದೆ. ಮೈತ್ರಿ ವಿಚಾರದಲ್ಲಿ ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮತ್ತಿತರ ಜೆಡಿಎಸ್
ನಾಯಕರು ಕಾಣಿಸಿಕೊಂಡರಾದರೂ ಇದುವರೆಗೂ ಬಿಜೆಪಿಯ ರಾಜ್ಯ ನಾಯಕರಾರೂ ಕಾಣಿಸಿಕೊಂಡಿಲ್ಲ.

ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನೂ ಅಮಿತ್ ಶಾ ಅವರಾಗಲಿ, ಬಿಜೆಪಿಯ ದೆಹಲಿ ನಾಯಕರಾಗಲಿ ಮಾಡಿಲ್ಲ. ಇದರ ಹಿಂದೆಯೂ ಅಮಿತ್ ಶಾ ಅವರ ರಾಜಕೀಯ ತಂತ್ರಗಾರಿಕೆ ಇದ್ದಿರಲೂ ಬಹುದು. ಈ ಮೈತ್ರಿಯನ್ನು ಕಾಂಗ್ರೆಸ್ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆ ವಿಚಾರ ದಲ್ಲಂತೂ ಈ ಮೈತ್ರಿ ಕಾಂಗ್ರೆಸ್‌ಗೆ ಬಹುದೊಡ್ಡ ಪೆಟ್ಟು ನೀಡಿರುವುದರಲ್ಲಿ ಯಾವುದೇ ಸಂಶಯ ಇಲ್ಲ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಬದಿಗಿಟ್ಟಿದ್ದ ತನ್ನ ಆಪರೇಷನ್ ಹಸ್ತವೆಂಬ ಅಸ್ತ್ರವನ್ನು ಸ್ಥಳೀಯ ಮಟ್ಟದಲ್ಲಿ ಹೂಡಲಾರಂಭಿಸಿದೆ. ಸದ್ಯ ಕಾವೇರಿ ವಿವಾದದಿಂದಾಗಿ ಮೈತ್ರಿ ವಿಚಾರ ಸ್ವಲ್ಪ ತಣ್ಣಗಾದಂತೆ ಕಂಡುಬಂದಿ ದ್ದರೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಾಕಷ್ಟು ಪರಿಣಾಮ ಬೀರುವುದು ಖಚಿತ.

ಏಕೆಂದರೆ, ಲೋಕಸಭೆ ರಾಜ್ಯದಲ್ಲಿ ಚುನಾವಣೆ ಬೇರೆಯದ್ದೇ ರೀತಿಯಲ್ಲಿ ನಡೆಯುತ್ತದೆ. ಇಲ್ಲಿ ಅದು ಕಾಂಗ್ರೆಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಚುನಾವಣಾ ಸಮರವಾಗಿದೆ. ಹೀಗಾಗಿ ಬಿಜೆಪಿಯ ಮತಗಳ ಜತೆಗೆ ಮೋದಿ ಅವರ ಬಗ್ಗೆ ಮೃದು ಧೋರಣೆ ಹೊಂದಿರುವ ಮತಗಳ ಜತೆಗೆ ಜೆಡಿಎಸ್ ಮತಗಳೂ
ಒಟ್ಟಾದರೆ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರಲ್ಲಿ ಅನುಮಾನವಿಲ್ಲ. ಈ ಅಂಶವೇ ಈಗ ಕಾಂಗ್ರೆಸ್ಸಿಗೆ ಆತಂಕ ತಂದಿರುವುದು. ವಿಧಾನಸಭೆ ಚುನಾವಣೆ
ಯಲ್ಲಿ ಭಾಗೀ ಗೆಲುವು, ಗ್ಯಾರಂಟಿ ಯೋಜನೆಗಳ ಜಾರಿ, ಆಪರೇಷನ್ ಹಸ್ತದ ಮೂಲಕ ೧೦ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಕಾಂಗ್ರೆಸ್
ಪ್ರಯತ್ನಕ್ಕೆ ಈ ಮೈತ್ರಿ ಬಲವಾದ ಪೆಟ್ಟನ್ನೇ ನೀಡಿದೆ.

ಜೆಡಿಎಸ್ ಜತೆಗಿನ ಸಖ್ಯ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅದೇ ರೀತಿ ಜೆಡಿಎಸ್
ಗೂ ಕೂಡ ಇದರಿಂದ ಲಾಭವಾಗುತ್ತದೆ. ಆದರೆ, ಲೋಕಸಭೆ ಚುನಾವಣೆಯ ಆಚೆಗೂ ಮೈತ್ರಿ ವಿಸ್ತರಿಸುವ ಉಭಯ ಪಕ್ಷಗಳ ಹಿರಿಯ ನಾಯಕರ ತೀರ್ಮಾನ ಎರಡೂ ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ. ಅದರಲ್ಲೂ ಜೆಡಿಎಸ್‌ಗೆ ಅಲ್ಪಸಂಖ್ಯಾತರ ಮತಗಳನ್ನು ಕಳೆದುಕೊಳ್ಳುವ ಆತಂಕ ತಂದೊಡ್ಡಿದೆ. ಇದಕ್ಕೆ ಪೂರಕ ಎಂಬಂತೆ ಅಲ್ಪ ಸಂಖ್ಯಾತ ಸಮುದಾಯದ ಸಾಕಷ್ಟು ಮುಖಂಡರು ಈಗಾಗಲೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದಾರೆ. ಇದು ಜೆಡಿಎಸ್‌ಗೆ ಆತಂಕ ತಂದಿದೆ. ಏಕೆಂದರೆ, ಸದ್ಯ ಜೆಡಿಎಸ್ ಪಾಲಿಗೆ ಇರುವ ಎರಡು ಪ್ರಮುಖ ಮತ ಬ್ಯಾಂಕ್‌ಗಳೆಂದರೆ ಅದು ಒಕ್ಕಲಿಗ ಮತ್ತು ಅಲ್ಪಸಂಖ್ಯಾತರದ್ದು. ಈ ಎರಡು ಸಮುದಾಯಗಳನ್ನು ಅವಲಂಬಿಸಿಯೇ ಜೆಡಿಎಸ್ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿತ್ತು.

ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಕ್ಕಲಿಗರ ಮತಬ್ಯಾಂಕ್ ಒಡೆದು ಸ್ವಲ್ಪ ಮಟ್ಟಿಗೆ ಕಾಂಗ್ರೆಸ್ ಪಾಲಾಗಿದೆ. ಇದೀಗ ಮೈತ್ರಿಯಿಂದ ಅಲ್ಪಸಂಖ್ಯಾತರ
ಮತಗಳೂ ಕೈಬಿಟ್ಟುಹೋದರೆ ಭವಿಷ್ಯದಲ್ಲಿ ಪಕ್ಷಕ್ಕೆ ಸಾಕಷ್ಟು ಹೊಡೆತ ಬೀಳಲಿದ್ದು, ಸಂಘಟನೆ ನೆಲಕಚ್ಚಿ ಇರುವ ಅಸ್ತಿತ್ವವನ್ನೂ ಕಳೆದುಕೊಳ್ಳಬೇಕಾದ ಪರಿಸ್ಥಿತಿ
ಬರಬಹುದು. ಅದಕ್ಕಾಗಿಯೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೂ ಜಾತ್ಯತೀತ ಸಿದ್ಧಾಂತದಲ್ಲಿ ಯಾವುದೇ ರಾಜಿ ಇಲ್ಲ. ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ.

ಅವರ ಹಿತ ಕಾಪಾಡುತ್ತೇವೆ ಎಂದು ಹೇಳಿಕೊಂಡು ಪಕ್ಷ ತೊರೆಯಲು ಮುಂದಾಗಿರುವ ಅಲ್ಪಸಂಖ್ಯಾತ ಸಮುದಾಯದ ಮುಖಂಡರನ್ನು ಒಲಿಸಿಕೊಳ್ಳಲು
ಶತಪ್ರಯತ್ನಕ್ಕಿಳಿದಿದ್ದಾರೆ. ಇನ್ನೊಂದೆಡೆ ಬಿಜೆಪಿ ಜತೆಗಿನ ಜೆಡಿಎಸ್ ಮೈತ್ರಿಯನ್ನೇ ಪ್ರಧಾನವಾಗಿಟ್ಟುಕೊಂಡು ಕೋಮುವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿ ರುವ ಜೆಡಿಎಸ್ ಅಲ್ಪಸಂಖ್ಯಾತರ ಪರ ನಿಲ್ಲಲು ಹೇಗೆ ಸಾಧ್ಯ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್, ಅಲ್ಪಸಂಖ್ಯಾತರ ಮತಗಳನ್ನು ಕ್ರೋಢೀಕರಿಸುವತ್ತ ಗಮನಹರಿಸಿದೆ. ಈ ಕಾರಣವೇ ಮೈತ್ರಿ ಲೋಕಸಭೆ ಚುನಾವಣೆಯ ಆಚೆಗೂ ವಿಸ್ತರಿಸುವ ಜೆಡಿಎಸ್‌ನ ನಿರ್ಧಾರಕ್ಕೆ ಪೆಟ್ಟು ನೀಡಬಹುದು.

ಈಗಾಗಲೇ ಒಕ್ಕಲಿಗರ ಮತಬ್ಯಾಂಕ್ ಕಳೆದುಕೊಳ್ಳುತ್ತಿರುವ ಜೆಡಿಎಸ್‌ಗೆ ಅಲ್ಪಸಂಖ್ಯಾತರ ಮತಗಳೂ ಕೈಕೊಟ್ಟರೆ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ.
ಆದರೆ, ಲೋಕಸಭೆ ಚುನಾವಣೆ ಮಟ್ಟಿಗೆ ಅದಕ್ಕೆ ಬಿಜೆಪಿ ಜತೆ ಮೈತ್ರಿ ಅನಿವಾರ್ಯವಾಗಿದೆ. ಪಕ್ಷದಿಂದ ಸ್ವಲ್ಪ ಮಟ್ಟಿಗೆ ದೂರವಾಗಿರುವ ಒಕ್ಕಲಿಗ ಸಮುದಾ
ಯದ ಮತಗಳು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಮತ್ತೆ ಕೈಹಿಡಿಯಬಹುದು ಎಂಬ ನಿರೀಕ್ಷೆ ಜೆಡಿಎಸ್ ನಾಯಕರದ್ದು. ಏಕೆಂದರೆ, ಒಕ್ಕಲಿಗ ಮತಗಳು ಅತಿ
ಹೆಚ್ಚಾಗಿರುವ ಹಳೇ ಮೈಸೂರು ಭಾಗದಲ್ಲಿ ಲೋಕ ಸಭೆಗೆ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಿದೆ. ಹಾಸನ ಮತ್ತು ಬೆಂಗಳೂರು ಗ್ರಾಮಾಂತರ ಹೊರತು ಪಡಿಸಿ
(ಮಂಡ್ಯದಲ್ಲಿ ಸುಮಲತಾ ಪಕ್ಷೇತರವಾಗಿ ಗೆದ್ದರೂ ಈಗ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ) ಉಳಿದೆಲ್ಲಾ ಕಡೆ ಬಿಜೆಪಿ ಸಂಸದರೇ ಇದ್ದಾರೆ. ಇಲ್ಲಿ ಎರಡು-
ಮೂರು ಸ್ಥಾನಗಳನ್ನು ಗೆಲ್ಲಬೇಕಾದರೆ ಬಿಜೆಪಿ ಜತೆ ಮೈತ್ರಿ ಆಗಲೇಬೇಕು.

ಇಲ್ಲವಾದಲ್ಲಿ ಹಾಸನ ಹೊರತುಪಡಿಸಿ ಉಳಿದ ಕಡೆ ಜೆಡಿಎಸ್ ತನ್ನ ಅಸ್ತಿತ್ವವನ್ನು ಬಹುತೇಕ ಕಳೆದುಕೊಳ್ಳುವ ಆತಂಕವಿದೆ. ಆದ ಕಾರಣ ಮೈತ್ರಿಯನ್ನು ಸಾರ್ವತ್ರಿಕಗೊಳಿಸುವ ಮೂಲಕ ಸ್ಥಾನ ಹೊಂದಾಣಿಕೆ ಸಂದರ್ಭದಲ್ಲಿ ಸಿಗುವ ಕ್ಷೇತ್ರಗಳಲ್ಲಿ ಬಿಜೆಪಿ ಮತಗಳನ್ನು ಸೆಳೆದು ಗೆಲ್ಲುವ ಯೋಚನೆ ಮಾಡಿದೆ.
ಮೈತ್ರಿಯ ಗೊಂದಲ ಜೆಡಿಎಸ್‌ಗೆ ಮಾತ್ರ ಸೀಮಿತವಾಗಿಲ್ಲ. ಬಿಜೆಪಿಗೂ ಸಾಕಷ್ಟು ಸಮಸ್ಯೆಗಳಿವೆ. ಹಳೇ ಮೈಸೂರು ಭಾಗದಲ್ಲಿ ಕಳೆದ ನಾಲ್ಕೈದು
ವರ್ಷದಿಂದ ಸ್ವಲ್ಪ ಮಟ್ಟಿಗೆ ಸಂಘಟನೆ ಬಲ ಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಈ ಮೈತ್ರಿ ಸಂಘಟನಾತ್ಮಕವಾಗಿ ಈ ಭಾಗದಲ್ಲಿ ಹೊಡೆತ
ನೀಡಬಹುದು. ಇಲ್ಲಿ ಸಂಘಟನೆ ಬಲಗೊಳಿಸಲು ಪ್ರಯತ್ನಿಸಿದರೆ ಜೆಡಿಎಸ್ ತಿರುಗಿ ಬೀಳುವ ಸಾಧ್ಯತೆ ಹೆಚ್ಚಾಗಿರುವುದರಿಂದ ವಿಧಾನಸಭೆ ಸೇರಿದಂತೆ
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷ ತನ್ನ ಬಲ ವಿಸ್ತರಿಸಿಕೊಳ್ಳಲು ಕಷ್ಟವಾಗಬಹುದು.

ಇದು ಮತ್ತೆ ೨೦೨೮ರಲ್ಲಿ ರಾಜ್ಯದಲ್ಲಿ ಅಽಕಾರಕ್ಕೆ ಬರುವ ಕನಸಿಗೆ ತಡೆಯೊಡ್ಡಬಹುದು. ಏಕೆಂದರೆ, ೨೦೦೪ರ ಬಳಿಕ (೨೦೧೩ರ ವಿಧಾನಸಭೆ ಚುನಾವಣೆ ಹೊರತುಪಡಿಸಿ) ಬಿಜೆಪಿ ಕಲ್ಯಾಣ ಕರ್ನಟಕ, ಕಿತ್ತೂರು ಕರ್ನಾಟಕ, ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದರೂ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಪ್ರದರ್ಶನ ಪರಿಣಾಮ ಕಾರಿಯಾಗಿಲ್ಲದ ಕಾರಣ ಪೂರ್ಣ ಬಹುಮತ ದೊಂದಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ.
೨೦೨೩ರ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಸಂಘಟನೆ ಬಲಗೊಳಿಸಲು ಪ್ರಯತ್ನಿಸಿದರೂ ಕಾಂಗ್ರೆಸ್‌ನ ಗ್ಯಾರಂಟಿ ಮುಂದೆ ಅದು ಯಶಸ್ಸು ಕಾಣಲಿಲ್ಲ. ಆದರೂ ರಾಜ್ಯದ ಇತರೆ ಭಾಗ ಗಳಿಗೆ ಹೋಲಿಸಿದರೆ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಪ್ರದರ್ಶನ ಹಿಂದೆಂದಿಗಿಂತ ಪ್ರಗತಿ ಕಂಡಿತ್ತು.

ಇದೀಗ ಜೆಡಿಎಸ್ ಜತೆಗಿನ ಮೈತ್ರಿಯಿಂದ ಹಳೇ ಮೈಸೂರು ಭಾಗದಲ್ಲಿ ಸಂಘಟನಾ ಕಾರ್ಯದ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಮತ್ತೆ ಮುಂಬರುವ ವಿಧಾನ ಸಭೆ ಚುನಾವಣೆಗೆ ಸಮಸ್ಯೆ ತಂದೊಡ್ಡಬಹುದು. ಇದೊಂದೇ ಅಲ್ಲ, ಬಿಜೆಪಿಯ ಹಿಂದುತ್ವದ ಪ್ರತಿಪಾದನೆಗೂ ಜೆಡಿಎಸ್ ಜತೆಗಿನ ಮೈತ್ರಿ ತೊಡಕಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬಿಜೆಪಿ ಮತಗಳಿಕೆಗೆ ಹೆಚ್ಚು ಅವಲಂಬಿತ ವಾಗಿರುವುದು ಹಿಂದುತ್ವದ ಮೇಲೆ. ಆದರೆ, ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡರೆ ಈ ರೀತಿಯ ಪ್ರಯತ್ನಗಳಿಗೆ ಅದು ವಿರೋಧ ವ್ಯಕ್ತಪಡಿಸುವುದು ಖಂಡಿತ. ಸದ್ಯ ಲೋಕಸಭೆ ಚುನಾವಣೆಯಲ್ಲಿ ಅಂತಹ ಸಮಸ್ಯೆ ಎದುರಾಗ ದಿದ್ದರೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಅಲ್ಪಸಂಖ್ಯಾತರ ಪರ ವಕಾಲತ್ತು ವಹಿಸುತ್ತದೆ. ಬಿಜೆಪಿಯ ಹಿಂದುತ್ವ ಪ್ರತಿಪಾದನೆಗೂ ಅವಕಾಶ ನೀಡುವುದಿಲ್ಲ. ಇದು ಸಹಜವಾಗಿಯೇ ಬಿಜೆಪಿ ಬಲವಾಗಿರುವ ಕರಾವಳಿ, ಮಲೆನಾಡು ಭಾಗದಲ್ಲಿ ಪಕ್ಷಕ್ಕೆ ಸಮಸ್ಯೆ ತಂದೊಡ್ಡಬಹುದು. ಹಾಗಾದಾಗ ಮುಂಬರುವ ವಿಧಾನಸಭೆ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅಽಕಾರಕ್ಕೆ ಬರುವುದು ಕಷ್ಟವಾಗಬಹುದು.

ಈ ಕಾರಣಕ್ಕಾಗಿಯೇ ಜೆಡಿಎಸ್ ಜತೆಗಿನ ಮೈತ್ರಿ ಕುರಿತಂತೆ ಅಮಿತ್ ಶಾ ಅವರು ರಾಜ್ಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು
ಹೇಳಬೇಕಾಗುತ್ತದೆ. ಅಮಿತ್ ಶಾ ಅವರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಸದ್ಯಕ್ಕಿರುವ ಗುರಿಯಾಗಿದ್ದು, ಅದಕ್ಕೆ ಬೇಕಾದಂತೆ
ಕಾರ್ಯತಂತ್ರಗಳನ್ನು ಹೆಣೆಯುತ್ತಿದ್ದಾರೆ. ಹೀಗಿರುವಾಗ ಜೆಡಿಎಸ್ ಜತೆಗಿನ ಮೈತ್ರಿ ಕುರಿತು ರಾಜ್ಯ ನಾಯಕರೊಂದಿಗೆ ಚರ್ಚಿಸಿದರೆ ಸಹಜವಾಗಿಯೇ
ಹಿಂದುತ್ವ, ಹಳೇ ಮೈಸೂರು ಭಾಗದ ಸಂಘಟನೆಗಳು ಚರ್ಚೆಯಾಗುತ್ತದೆ.

ಮೈತ್ರಿಯಿಂದ ಸ್ಥಳೀಯವಾಗಿ ಬಿಜೆಪಿಗೆ ಹೇಗೆ ತೊಂದರೆಯಾಗಬಹುದು ಎಂಬ ವಿಚಾರ ಪ್ರಸ್ತಾಪವಾಗುತ್ತದೆ. ಮೈತ್ರಿ ಆರಂಭದಲ್ಲೇ ಇಂತಹ ವಿವಾದಾತ್ಮಕ ಸಂಗತಿಗಳು ಮುನ್ನಲೆಗೆ ಬಂದರೆ ಮೈತ್ರಿಗೆ ತೊಡಕು. ಹೀಗಾಗಿ ಲೋಕಸಭೆ ಚುನಾವಣೆ ಮುಗಿಸಿ, ಉಳಿದ ವಿಚಾರಗಳನ್ನು ನಂತರ ಗಮನಿಸೋಣ ಎಂಬ ಉದ್ದೇಶದಿಂದಲೇ ಮೈತ್ರಿ ವಿಚಾರದಲ್ಲಿ ಬಿಜೆಪಿ ವರಿಷ್ಠರು ರಾಜ್ಯ ನಾಯಕರನ್ನು ದೂರವಿಟ್ಟಿದ್ದಾರೆ. ಏಕೆಂದರೆ, ಮೈತ್ರಿ ಬಹುಕಾಲ ಬಾಳಿಕೆ ಬರುವ ಅನುಮಾನ ಅವರಲ್ಲೂ ಇದೆ.

ಲಾಸ್ಟ್ ಸಿಪ್: ಅಧಿಕಾರ ರಾಜಕಾರಣದಲ್ಲಿ ದೊಡ್ಡ ಗುರಿ ಕಣ್ಣ ಮುಂದಿರುವಾಗ ಸಣ್ಣ ಗುರಿಗಳನ್ನು ಬದಿಗೆ ಸರಿಸಿ ಮುಂದುವರಿಯುವುದೇ ರಾಜಕೀಯ
ಚಾಣಾಕ್ಷತನ.

Leave a Reply

Your email address will not be published. Required fields are marked *

error: Content is protected !!