Sunday, 23rd June 2024

ಹೆಸರಿನ ಮೂಲ ಹುಡುಕುತ್ತಾ ಸಾಗಿದರೆ…

ಶಶಾಂಕಣ

shashidhara.halady@gmail.com

ನಮ್ಮ ನಾಡಿನ ಪ್ರತಿ ಊರಿಗೂ ಒಂದೊಂದು ಕಥೆ, ಒಂದೊಂದು ಕಥನ, ಜನಪದ ಹಿನ್ನೆಲೆ ಇರುವುದನ್ನು ಗುರುತಿಸಬಹುದು. ಈ ಬರಹ ವನ್ನೋದು ತ್ತಿರುವ ನಿಮ್ಮ ಊರಿನ ಹೆಸರಿನ ಹಿಂದೆಯೂ ಕುತೂಹಲಕಾರಿ ಅರ್ಥ, ಪದನಿಷ್ಪತ್ತಿ, ಜನಪದ ಕಥೆ ಅಥವಾ ಪುರಾತನ ವಿದ್ಯ ಮಾನಗಳ ಹಿನ್ನೆಲೆ ಇರಲೇಬೇಕು.

ನಮ್ಮ ನಾಡಿನ ಹಳ್ಳಿಗಳ ಮತ್ತು ಪಟ್ಟಣಗಳ ಹೆಸರಿನ ಮೂಲವನ್ನು ಹುಡುಕುತ್ತಾ ಹೊರಟರೆ, ಬಹಳ ಕುತೂಹಲಕಾರಿ ಮತ್ತು ಕೆಲವು ಬಾರಿ ತಮಾಷೆ ಎನಿಸುವ ವಿಷಯಗಳನ್ನು ಕಾಣಬಹುದು. ಅಪರೂಪಕ್ಕೆ ಒಮ್ಮೊಮ್ಮೆ ಆಭಾಸ ಎನಿಸುವ ವಿಚಾರವೂ ಎದುರಾಗಬಹುದು- ಹುಸ್ಕೂರು ಎಂಬ ಹೆಸರಿನ ಹಳ್ಳಿಯ ವರು ಅದು ಧ್ವನಿಸುವ ಅರ್ಥದಿಂದ ಬೇಸತ್ತು, ಹೆಸರನ್ನೇ ಬದಲಿಸಿದ್ದುಂಟು!

ಇನ್ನೂ ಕೆಲವು ಬಾರಿ ಈ ಚಟುವಟಿಕೆಯು, ಅನಾದಿ ಕಾಲದಿಂದ ಸ್ಥಳೀಯರಿಗೆ ನೆನಪಿರುವ ಹೆಸರಿನ ನಿಷ್ಪತ್ತಿಯನ್ನು, ಈಚಿನ ತಲೆಮಾರು ಹೊಸದಾಗಿ ತಿಳಿಯುವ ಪ್ರಕ್ರಿಯೆಯೂ ಹೌದು. ಎಷ್ಟೋ ಬಾರಿ ಸರಳ ಎನಿಸುವ ಊರಿನ ಹೆಸರು, ಬೇರೊಂದೇ ಪದನಿಷ್ಪತ್ತಿಯನ್ನು ಹೊಂದಿರಬಹುದು. ಇನ್ನು ಕೆಲವು ಬಾರಿ ತೀರಾ ಸಂಕೀರ್ಣ ಪದನಿಷ್ಪತ್ತಿ ಎಂದು ಮೇಲ್ನೋಟಕ್ಕೆ ತೋರುವ ಹೆಸರುಗಳ ಅರ್ಥ ಹುಡುಕಿದರೆ ಸರಳ ಎನಿಸಬಹುದು. ಕೆ.ಆರ್.ನಗರ, ಕನಕಪುರ, ರಾಮನಗರ ಎಂಬ ಆಧುನಿಕ ಹೆಸರಿನ ಊರುಗಳ ಹಳೆಯ ಹೆಸರನ್ನು ಹುಡುಕಿದರೆ, ಜನಪದ ಅಥವಾ ಐತಿಹಾಸಿಕ ಕಥನವೊಂದು ತೆರೆದು ಕೊಳ್ಳುತ್ತದೆ.

ಸಾಮಾನ್ಯವಾಗಿ ಹಳ್ಳಿಗಳ ಹೆಸರನ್ನು ಹುಡುಕುತ್ತಾ ಹೋದರೆ, ಸ್ಥಳೀಯ ಜನಪದ ಕಥೆಯೊಂದು ನಮ್ಮೆದುರು ತೆರೆದುಕೊಳ್ಳುವ ಸಾಧ್ಯತೆ ಇದೆ. ಆದರೆ, ಕೆಲವು ಊರುಗಳ ಹೆಸರಿನ ಮೂಲ ಅದೆಷ್ಟು ಪುರಾತನ ಅಥವಾ ಅಪಭ್ರಂಶಗೊಂಡಿದೆ ಎಂದರೆ, ಜಪ್ಪಯ್ಯ ಎಂದರೂ ಸ್ಪಷ್ಟ ಅರ್ಥ ಹೊಳೆ ಯದು. ಬೆಂಗಳೂರು-ಬೆಂಗಾಳೂರು- ಬೆಂದಕಾಳೂರು -ಬೆಣಗಲ್‌ಊರು- ಈ ರೀತಿ ನಡೆದ ಚರ್ಚೆ ಬಹು ಪ್ರಸಿದ್ಧ ಮತ್ತು ಜನಪ್ರಿಯವಾಗಿರುವು ದರಿಂದ, ಅಂಥ ದೊಡ್ಡ ಊರುಗಳ ಹೆಸರಿನ ಮೂಲವನ್ನು ಬದಿಗಿರಿಸಿ, ಕೆಲವು ಸಣ್ಣ ಸಣ್ಣ ಊರುಗಳ ಹೆಸರುಗಳ ಮೂಲವನ್ನು ಗಮನಿಸೋಣ.

ನಮ್ಮೂರಿನ ಹತ್ತಿರ ಜನ್ನಾಡಿ ಎಂಬ ಹಳ್ಳಿಯಿದೆ; ಮೇಲ್ನೋಟಕ್ಕೆ ಅದು ‘ಜೈನರು ಇದ್ದ ಜಾಗ’ ಎಂಬ ಅರ್ಥ ಕೊಡುತ್ತದೆ. ಕುಂದಗನ್ನಡದಲ್ಲಿ ‘ಅಡಿ’ ಎಂದರೆ ಒಂದು ಜಾಗ, ತಾಣ ಎಂಬರ್ಥ. ಆದರೆ ಅಲ್ಲಿ ಈಗ ಜೈನರು ಇಲ್ಲ- ಆ ಸುತ್ತಲೆಲ್ಲೂ ಇಂದು ಜೈನರ ವಸತಿ ಇಲ್ಲ. ಬಹು ಹಿಂದೆ ಅಲ್ಲಿ ಜೈನರು ವಾಸವಿದ್ದಿರಬೇಕು; ಅವರು ಆ ಪ್ರದೇಶವನ್ನು ತೊರೆದು ಹೋಗಿರಬಹುದು ಅಥವಾ ಸುತ್ತಲೂ ಇದ್ದ ಪ್ರಭಾವಿ ಧರ್ಮಕ್ಕೆ ಮತಾಂತರ ಹೊಂದಿರ ಬಹುದು- ಹೊಯ್ಸಳ ರಾಜ ಬಿಟ್ಟಿದೇವನು ಜೈನ ಮತ ತೊರೆದು, ರಾಮಾನುಜಾಚಾರ್ಯರ ಪ್ರಭಾವದಿಂದ ವೈಷ್ಣವ ಮತಕ್ಕೆ ಸೇರಿಕೊಂಡ ಪ್ರಖ್ಯಾತ
ಉದಾಹರಣೆಯೇ ಇದೆಯಲ್ಲ- ಆ ಮಹಾರಾಜನ ಜತೆಯಲ್ಲೇ, ಸಾಕಷ್ಟು ಸಂಖ್ಯೆಯ ಅಧಿಕಾರಿಗಳು, ಸೈನಿಕರು, ಜನಸಾಮಾನ್ಯರು ಸಹ ಜೈನ ಮತ
ತೊರೆದಿರಲೇಬೇಕು!

ಯಾರಿಗ್ಗೊತ್ತು, ಆ ಸಮಯದಲ್ಲೇ ಈ ‘ಜೈನಡಿ‘ (ಜನ್ನಾಡಿ) ಯಲ್ಲಿದ್ದ ಜೈನರು ಬದಲಾಗಿರಲೂಬಹುದು; ಹಳ್ಳಿಯ ಹೆಸರು ಮಾತ್ರ ಜನ್ನಾಡಿಯಾಗಿ ಉಳಿದುಕೊಂಡಿದೆ. ಜನ್ನಾಡಿಯ ಈಶಾನ್ಯ ದಿಕ್ಕಿಗೆ ಸಾಗಿದರೆ ‘ಸೌಡ’ ಎಂಬ ಹಳ್ಳಿಯಿದೆ. ಆ ಹೆಸರಿನ ಮೂಲವನ್ನು ತಿಳಿದುಕೊಳ್ಳಲು ನನ್ನಿಂದ ಸಾಧ್ಯವಾಗ ಲಿಲ್ಲ. ಅಲ್ಲೇ ಪಕ್ಕದಲ್ಲಿ ಹರಿಯುವ ವಾರಾಹಿ ನದಿಯನ್ನು ದಾಟಿದರೆ ದೊರೆಯುವ ‘ಶಂಕರನಾರಾಯಣ’ ಎಂಬ ಊರಿನ ಹೆಸರು ಮಾತ್ರ ಬಹಳ ಕುತೂ ಹಲಕಾರಿ. ಎರಡು ಹೆಸರುಗಳನ್ನು ಸಂಯೋಜಿಸಿದಾಗ ಉಂಟಾದ ಶಬ್ದವೇ ಆ ಊರಿನ ಹೆಸರು ಎಂದು ಹೊಸದಾಗಿ ಕೇಳಿದವರಿಗೂ ಅರ್ಥವಾಗುವಷ್ಟು ಸ್ಪಷ್ಟವಾಗಿದೆ ಆ ಹೆಸರು. ಅದೂ ನಿಜವೇ- ಶಂಕರ ಮತ್ತು ನಾರಾಯಣ (ಹರಿಹರ) ದೇವರುಗಳ ದೇಗುಲ ಅಲ್ಲಿರುವುದರಿಂದಾಗಿ ‘ಶಂಕರ ನಾರಾಯಣ’ ಎಂಬ ಹೆಸರು ಅಧಿಕೃತ ದಾಖಲೆಗಳಲ್ಲಿ ನಮೂದಾಗಿ, ಪ್ರಚುರಗೊಂಡಿದೆ.

ಆದರೆ ಅಲ್ಲಿಗೆ ಹಿಂದೆ ಬೇರೊಂದೇ ಹೆಸರಿತ್ತು! ಮೂರು ರಸ್ತೆ ಕೂಡುವ ಆ ಜಾಗಕ್ಕೆ ‘ಗೋಳಿ ಕಟ್ಟೆ’ ಎಂಬ ಧ್ವನಿ ಪೂರ್ಣ ಹೆಸರಿತ್ತು. ಗೋಳಿ ಮರ (ಗೋಣಿ
ಮರ)ವು ಅಲ್ಲಿ ಪ್ರಧಾನವಾಗಿದ್ದು, ಅಲ್ಲಿ ಸಂತೆಯೂ ನಡೆಯುತ್ತಿದ್ದುದರಿಂದ, ಆ ಹೆಸರು ಜನಪದರ ಬಾಯಲ್ಲಿ ರೂಪುಗೊಂಡಿರಬೇಕು. ಆದರೆ, ಹೆಚ್ಚು
ಪ್ರಸಿದ್ಧಿ ಪಡೆದ ಶಂಕರ-ನಾರಾಯಣ ದೇವರುಗಳ ಪ್ರಭಾವದಿಂದಾಗಿ, ಗೋಳಿ ಕಟ್ಟೆ ಎಂಬ ಪುರಾತನ ಹೆಸರು ಕ್ರಮೇಣ ಮರೆಯಾಯಿತು. ಅಲ್ಲಿರುವ
ಶಂಕರನಾರಾಯಣ ದೇಗುಲವೂ ಬಹಳ ಪುರಾತನ ಎಂಬುದರಲ್ಲಿ ಸಂಶಯವಿಲ್ಲ. ಕೆರೆಯ ಮೇಲೆ ದೇವತೆಗಳಿಂದ ನಿರ್ಮಾಣಗೊಂಡ ದೇಗುಲ ಎಂಬ
ವಿಶೇಷಣ ಹೊಂದಿರುವ ಆ ದೇಗುಲ ಪುರಾತನ ಕಾಲದಿಂದಲೂ ಇದೆ. ಪ್ರಾಗೈತಿಹಾಸಿಕ ಕಾಲದ ಕೆಲವು ಕುರುಹುಗಳನ್ನೊಳಗೊಂಡ ಕಥೆಯೊಂದು
ಸಹ ಆ ದೇಗುಲದ ಮೂಲದೊಂದಿಗೆ ಗುರುತಿಸಿಕೊಂಡಿದೆ. ಅಲ್ಲಿಂದ ಹರದಾರಿ ದೂರದ ಸುತ್ತಳತೆಯಲ್ಲಿ, ಒಟ್ಟು ಐದು ಶಂಕರನಾರಾಯಣ (ಹರಿಹರ) ದೇಗುಲಗಳಿದ್ದು, ಬಹು ಹಿಂದೆ ಉದ್ಭವಿಸಿರಬಹುದಾದ ಪಂಥಸಂಘರ್ಷ ಮರೆಸಲು ರೂಪುಗೊಂಡ ಸಮನ್ವಯದ ಪ್ರಯತ್ನವನ್ನು ನೆನಪಿಸುತ್ತದೆ.

ಕರಾವಳಿಯ ಸಪ್ತ ಪುರಾತನ ಕ್ಷೇತ್ರಗಳಲ್ಲಿ, ಗೋಕರ್ಣವನ್ನೂ ಒಳಗೊಂಡು ಈ ಕ್ಷೇತ್ರಕ್ಕೆ ಸ್ಥಾನವಿದೆ ಎಂದ ಮೇಲೆ, ಕನಿಷ್ಠ ೨೦೦೦ ವರ್ಷಗಳಿಗೂ ಹಿಂದಿನ ಇತಿಹಾಸ ಈ ಸ್ಥಳಕ್ಕಿದೆ ಎನ್ನಬಹುದು. ಆದರೆ ಗೋಳಿ ಮರವನ್ನು ನೆನಪಿಸುವ ‘ಗೋಳಿ ಕಟ್ಟೆ’ ಎಂಬ ಸುಂದರ ಹೆಸರು ಮಾತ್ರ ಇಂದೂ ಮುಂದುವರಿಯಬೇಕಿತ್ತು ಎಂಬ ಭಾವ ನನ್ನ ಮನದಾಳದಲ್ಲಿ ಕುಳಿತುಬಿಟ್ಟಿದೆ. ಕೆಲವು ಊರುಗಳ ಹೆಸರನ್ನು ಸ್ಪಷ್ಟವಾಗಿ ವಿವರಿಸಿ ಹೇಳುವುದು ಕಷ್ಟ ಎಂಬುದಕ್ಕೆ ಒಂದು ಉದಾಹರಣೆ ಎಂದರೆ, ನಮ್ಮ ಹಳ್ಳಿಯಾದ ಹಾಲಾಡಿ.

‘ಅಡಿ’ ಎಂದರೆ ಸ್ಥಳ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಹೆಸರಿನ ಮೊದಲ ಭಾಗವನ್ನು ವಿಭಿನ್ನವಾಗಿ ಅರ್ಥೈಸಲಾಗಿದೆ. ‘ಹಾಲು’ ಇರುವ ‘ಅಡಿ’ (ಸ್ಥಳ) ಎಂದು ಅಭಿಮಾನದಿಂದ ಈಚೆಗೆ ಕೆಲವರು ಪದನಿಷ್ಪತ್ತಿಯನ್ನು ಮಾಡಿದ್ದಾರೆ. ಆದರೆ, ಹಿಂದೆ ‘ಹಾಳು’ ‘ಅಡಿ’ ಎಂದು ಕೆಲವರು ಅರ್ಥೈಸಿ ದ್ದುಂಟು- ಅಂದರೆ, ಜನರು ವಾಸವಿಲ್ಲದೇ ಇರುವ, ಹಾಳುಬಿದ್ದ ಜಾಗ ಎಂದು. ಆದರೆ, ಇದನ್ನು ಎಲ್ಲರೂ ಒಪ್ಪುತ್ತಿಲ್ಲ; ಏಕೆಂದರೆ, ಅಲ್ಲಿ ಹಾಳುಬಿದ್ದ ಐತಿಹಾಸಿಕ ಜಾಗಗಳನ್ನು ಗುರುತಿಸಲು ಸಾಧ್ಯವಾಗಿಲ್ಲ, ಬದಲಿಗೆ ಎಲ್ಲಾ ಕಡೆ, ಕಾಡು, ಗುಡ್ಡಗಳೇ ಇವೆ. ‘ಹಲ’ರು ಎಂಬ ಐತಿಹಾಸಿಕ ರಾಜರಿಗೂ, ಈ ಸ್ಥಳಕ್ಕೂ ಸಂಬಂಧ ಕಲ್ಪಿಸಬಹುದಾದ ಯಾವುದೇ ಪುರಾವೆಗಳು ದೊರಕಿಲ್ಲ.

ಕೋಟೆ- ಕೊತ್ತಳಗಳು, ಪುರಾತನ ಮನೆಗಳು ಸಹ ಇಲ್ಲಿಲ್ಲ; ಆದ್ದರಿಂದ ಸರ್ವಸಮ್ಮತ ಎನಿಸುವ ಪದನಿಷ್ಪತ್ತಿ ಇನ್ನೂ ಮೂಡಿಲ್ಲ. ಇಲ್ಲಿಗೆ ಎರಡು ಕಿ.ಮೀ. ದೂರದಲ್ಲಿ, ಅಂದರೆ ನಮ್ಮ ಮನೆಯ ಹತ್ತಿರವೇ ಇರುವ ‘ಕೋಟೆಹಕ್ಲು’ ಎಂಬ ಜಾಗಕ್ಕೆ ಇನ್ನೂ ಪುರಾತನವಾದ ಇತಿಹಾಸ ವಿದೆ. ಬಾರಕೂರು ಅರಸರ ಸಾಮಂತನಾಗಿದ್ದ ಮುದ್ದಳರಾಜ ಎಂಬಾತನು ಇಲ್ಲಿ ಆಳ್ವಿಕೆ ನಡೆಸುತ್ತಿದ್ದನಂತೆ. ಆದ್ದರಿಂದ ಈ ಪ್ರದೇಶಕ್ಕೆ ಮುದುವೇರಿ ಅಥವಾ ಮುದೂರಿ ಎಂಬ ಹೆಸರು ಬಂದಿದೆ.

ಆದರೆ, ಈ ಸುತ್ತಮುತ್ತಲೂ ಇರುವ ಇತರ ಕೆಲವು ಸ್ಥಳಗಳ ಪದನಿಷ್ಪತ್ತಿಯನ್ನು ಹುಡುಕುವುದು ಕಷ್ಟವೇ ಸರಿ- ನೀಕ್ಮಡಿ, ಮುಡಾರಿ, ಚೇರ್ಕಿ, ಗೊರಾಜಿ,
ತಟ್ಟುವಟ್ಟು, ಹಿಲಿಯಾಣ, ಹೀಗೆ. ಈ ಪ್ರದೇಶದ ದಕ್ಷಿಣ ದಿಕ್ಕಿನಲ್ಲಿರುವ ಚೋರಾಡಿ ಎಂಬ ಹಳ್ಳಿಯ ಹೆಸರಿನ ಪದನಿಷ್ಪತ್ತಿಯು ಸ್ಪಷ್ಟವಿದೆ- ಬಹು ಹಿಂದೆ
ಇಲ್ಲಿಗೆ ಬಂದ ಚಾರುರತಿ ಎಂಬ ನಾಗಕನ್ಯೆಯು ನೆಲೆ ನಿಂತ ಜಾಗ (ಅಡಿ) ಇದು ಎಂಬ ನಂಬಿಕೆ. ಇದೇ ರೀತಿ, ಚಾರುರತಿ ಎಂಬಾಕೆಯ ಸಹೋದರಿಯ
ರಾದ ಇನ್ನೂ ನಾಲ್ವರು ನಾಗಕನ್ನಿಕೆಯರು ನೆಲೆ ನಿಂತ ಜಾಗಗಳು ಮಂದರ್ತಿ, ದೇವರತಿ, ನಾಗರತಿ ಮತ್ತು ನೀಲರತಿ; ಅಲ್ಲೆಲ್ಲಾ ಇಂದು ನಾಗದೇವತೆಯ
(ಅಮ್ಮನವರು) ದೇಗುಲಗಳಿರುವುದು ವಿಶೇಷ. ಈ ಐವರು ನಾಗಕನ್ನಿಕೆಯರಿಗೆ ಬಹು ಪುರಾತನ ಕಾಲದಲ್ಲೇ ಕಾಡಿನ ನಡುವೆ ಪೂಜಾಸ್ಥಳಗಳನ್ನು ನಿರ್ಮಿ
ಸಲಾಗಿತ್ತು ಮತ್ತು ಸ್ಥಳೀಯರು ಪೂಜಿಸುತ್ತಿದ್ದರು; ಅವೆಲ್ಲವೂ ಈಚಿನ ದಶಕಗಳಲ್ಲಿ ವೈದಿಕ ಪೂಜಾ ಪದ್ಧತಿಗೆ ಒಳಪಟ್ಟು, ನಾಗಕನ್ನಿಕೆಯರನ್ನು ದುರ್ಗಾ
ಪರಮೇಶ್ವರಿ ಎಂದು ಪೂಜಿಸುವ ಪದ್ಧತಿ ಬೆಳೆದು ಬಂದಿದೆ!

ಈ ಬೆಳವಣಿಗೆಯು ಸಹ, ಆ ಹಳ್ಳಿಗಳ ಹೆಸರಿನಷ್ಟೇ ಕುತೂಹಲಕಾರಿ ಮತ್ತು ಅಧ್ಯಯನ ಯೋಗ್ಯ ವಿದ್ಯಮಾನ ಎನ್ನಬಹುದು. ಚಾರುರತಿ ಮತ್ತು ನಾಗರತಿ ಯರ ದೇಗುಲ ಗಳಿಂದ ಮುಂದೆ ಸಾಗಿ, ನಾಲ್ಕೈದು ಕಿ.ಮೀ. ಕ್ರಮಿಸಿದರೆ, ‘ತಾರಿಕಟ್ಟೆ’ ಎಂಬ ಪುಟ್ಟ ಹಳ್ಳಿಯಿದೆ. ಅಲ್ಲೊಂದು ದೊಡ್ಡ ಗಾತ್ರದ ತಾರಿ ಮರ ಇರುವುದರಿಂದಾಗ, ಆ ಮರದ ಬುಡದಲ್ಲಿ ಕಟ್ಟಿದ ಕಟ್ಟೆಯಿಂದಾಗಿ ಹಳ್ಳಿಗೆ ಹೆಸರು ಬಂದಿರುವುದು ಸ್ಪಷ್ಟ. ವಿಶೇಷವೆಂದರೆ, ಅಲ್ಲಿ ಒಂದು ವಿಶಾಲವಾದ ತಾರಿಮರ ಇಂದಿಗೂ ಇದೆ. ನಾನು ಬಾಲ್ಯದಲ್ಲಿ ಕಂಡಾಗಲೂ ಆ ಮರ ಇಷ್ಟೇ ದೊಡ್ಡದಾಗಿ, ವಿಶಾಲ ವಾಗಿ ಬೆಳೆದುಕೊಂಡಿತ್ತು! ಆ ಮರದ ಪಕ್ಕದಲ್ಲೇ ಒಂದು ಕಚ್ಚಾ ರಸ್ತೆ ಇದೆ; ಕೆಲವು ವರ್ಷಗಳ ಹಿಂದೆ ಆ ರಸ್ತೆಯಲ್ಲಿ ಸಾಗುತ್ತಿದ್ದ, ಶಿಲೆಕಲ್ಲು ತುಂಬಿದ್ದ ಲಾರಿಯೊಂದು ಆ ಮರಕ್ಕೆ ಡಿಕ್ಕಿ ಹೊಡೆದು, ಮರದ ಕಾಲು ಭಾಗ ಕುಸಿದು ಬಿದ್ದರೂ, ಮರ ಪುನಃ ಚಿಗುರಿ ಬೆಳೆದಿದೆ, ಬೆಳೆಯುತ್ತಲೂ ಇದೆ.

ಆ ಅಪಘಾತದಲ್ಲಿ ಲಾರಿ ಮಾತ್ರ ಜಖಂ ಆಯ್ತು. ನಾಗರಿಕ ಮಾನವನು ತೊಂದರೆ ಕೊಡದೇ ಇದ್ದರೆ, ಆ ತಾರಿ ಮರ ಇನ್ನೂ ನೂರು ವರ್ಷ ಅಲ್ಲೇ ಇದ್ದು,
ತಾರಿಕಟ್ಟೆ ಎಂಬ ಊರಿನ ಹೆಸರಿನ ಆಧಾರ ಸ್ತಂಭದಂತೆ ನಿಂತಿರುವುದರಲ್ಲಿ ಅನುಮಾನವಿಲ್ಲ. ಆದರೆ, ಈ ಆಧುನಿಕ ಮಾನವನನ್ನು ನಂಬುವಂತಿಲ್ಲ. ಆ ಸುತ್ತಲಿನ ಬಂಡೆಗಳನ್ನು ಒಡೆದು, ಕಲ್ಲುಗಳನ್ನು ಪೇಟೆಗೆ ಸಾಗಿಸುವ ಲಾರಿಗಳು ಸಲೀಸಾಗಿ ಚಲಿಸುವ ಉದ್ದೇಶಕ್ಕಾಗಿ, ಅಲ್ಲಿನ ರಸ್ತೆಯನ್ನು ಇನ್ನಷ್ಟು ಅಗಲ ಮಾಡುವ ನೆಪದಲ್ಲಿ, ಆ ದೊಡ್ಡ, ವಿಶಾಲ, ಪುರಾತನ, ಸುಂದರ, ಐತಿಹಾಸಿಕ ಮರವನ್ನು ಸದ್ಯದಲ್ಲೇ ಕಡಿದು ಹಾಕಿದರೂ ಹಾಕಿಯಾನು!

ತಾರಿಕಟ್ಟೆಯ ಹತ್ತಿರವೇ, ಅರ್ಧ ಕಿ.ಮೀ. ದೂರದಲ್ಲಿ ಅಬ್ಲಿಕಟ್ಟೆ ಎಂಬ ಹಳ್ಳಿಯುಂಟು. ಹಿಂದೆಂದೋ ‘ಅಬ್ಲಿ ಹೂ’ (ಕನಕಾಂಬರ) ಗಳನ್ನು ಮೊದಲ ಬಾರಿ ಬೆಳೆದ ಜಾಗ ಅದಾಗಿರಬೇಕು. ಅಲ್ಲೇ ಮುಂದೆ ತೆಂಕ ಹೊಲ, ಗುಮ್ಮಹೊಲ ಮೊದಲಾದ ಊರುಗಳ ಹೆಸರುಗಳಲ್ಲಿ ಅಡಕಗೊಂಡಿರುವ ‘ಹೊಲ’ ಎಂದರೆ ಭಾರಿ ದಟ್ಟಣೆಯ ಕಾಡು. ಅಲ್ಲಿನ್ನೂ ಸ್ವಲ್ಪ ಕಾಡು ಉಳಿದುಕೊಂಡಿದ್ದು, ಊರಿನ ಹೆಸರಿನ ಮರ್ಯಾದೆಯನ್ನು ಕಾಪಾಡಿದೆ. ಇದೇ ಸರಹದ್ದಿ ನಲ್ಲಿರುವ ‘ಬೆಳ್ವೆ’ ಎಂಬ ಹಳ್ಳಿಯ ಹೆಸರು, ಸನಿಹದಲ್ಲಿ ಹರಿಯುವ ಸೀತಾನದಿಯ ನೀರಿನಿಂದಾಗಿ ಬಂದಿರಬೇಕು. ಈ ಪ್ರದೇಶದಲ್ಲಿ, ‘ಬೆಳ್’ ಪದವನ್ನು ಹೊತ್ತಿರುವ ಊರಿನ ಹೆಸರುಗಳು ನೀರಿನ ಮೂಲವನ್ನು ಸೂಚಿಸುವುದೆಂದು ವಿದ್ವಾಂಸರು ಗುರುತಿಸಿದ್ದಾರೆ.

ಇದೇ ಸನಿಹದಲ್ಲಿ ‘ಹೊನ್ನಕಲ್ಲು’ ಎಂಬ ಬಹು ಸುಂದರ ಹೆಸರಿನ ಹಳ್ಳಿ ಇದೆ. ಮೇಲ್ನೋಟಕ್ಕೆ ಇದು ಚಿನ್ನದ ಇರವನ್ನು ಸೂಚಿಸುತ್ತದೆ. ಬಹು ಹಿಂದೆ ಇಲ್ಲಿ ಚಿನ್ನದ ಗಣಿಗಾರಿಕೆ ನಡೆದಿರುವ ಸಾಧ್ಯತೆಯುಂಟು. ಹೊನ್ ಪದವನ್ನು ತಮ್ಮ ಊರಿನ ಹೆಸರಿನ ಭಾಗವಾಗಿರಿಸಿಕೊಂಡ ಹಲವು ಊರುಗಳು ನಮ್ಮ
ರಾಜ್ಯದಲ್ಲಿರುವುದು ವಿಶೇಷ; ಅಂಥ ಹೆಚ್ಚಿನ ಊರುಗಳ ಬಳಿ ಬಹು ಹಿಂದೆ ಚಿನ್ನದ ಗಣಿಗಾರಿಕೆ ಸಣ್ಣ ಮಟ್ಟದಲ್ಲಾದರೂ ನಡೆದಿತ್ತು, ನಡೆದಿರಬೇಕು
ಎಂದು ತಜ್ಞರು ಗುರುತಿಸಿದ್ದಾರೆ. ಇನ್ನೂ ವಿಶೇಷ ವೆಂದರೆ, ಇಂಥ ಹಲವು ಜಾಗಗಳಲ್ಲಿ ಬ್ರಿಟಿಷರು, ನೆಲದಾಳದಲ್ಲಿ ಸುರಂಗ ತೋಡಿ, ಅಲ್ಲಿ ಚಿನ್ನದ
ಅದಿರನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಸಿದ್ದರು!

ಭದ್ರಾವತಿ (ಬೆಂಕಿಪುರ, ವಂಕಿಪುರ) ಸನಿಹ ಇರುವ ಹೊನ್ನೇಗುಡ್ಡ ಎಂಬ ಪುಟ್ಟ ಬೆಟ್ಟದಲ್ಲಿ ಚಾರಣ ಮಾಡಿದರೆ, ಆ ಬೆಟ್ಟದ ಗರ್ಭದಲ್ಲಿ ಬ್ರಿಟಿಷರು ತೋಡಿಸಿದ ಸುರಂಗ, ಷಾ-ಗಳನ್ನು ನೋಡಬಹುದು. ಈಚಿನ ವರ್ಷಗಳಲ್ಲಿ ಕುತೂಹಲದಿಂದ ಅಲ್ಲಿಗೆ ಹೋದ ಯುವಜನರು, ಆಕಸ್ಮಿಕವಾಗಿ ಬಿದ್ದು ಮೃತರಾಗಿದ್ದರಿಂದ ಆ ಸುರಂಗಗಳ ಬಾಯನ್ನು ಮುಚ್ಚಿಸಲಾಗಿದೆ. ಹೊನ್ ಎಂಬ ಹೆಸರು ಹೊತ್ತ ಕೆಲವು ಜಾಗಗಳಲ್ಲಿ ಚಿನ್ನದ ಶೋಧ ನಡೆದಿತ್ತು ಎಂಬುದಕ್ಕೆ ಇದು ಒಂದು ನಿದರ್ಶನ.

ನಮ್ಮ ನಾಡಿನ ಪ್ರತಿ ಹಳ್ಳಿಗೂ, ಊರಿಗೂ ಒಂದೊಂದು ಕಥೆ, ಒಂದೊಂದು ಕಥನ, ಜನಪದ ಹಿನ್ನೆಲೆ ಇರುವುದನ್ನು ಗುರುತಿಸಬಹುದು. ಈ ಬರಹ ವನ್ನೋದುತ್ತಿರುವ ನಿಮ್ಮ ಊರಿನ ಹೆಸರಿನ ಹಿಂದೆಯೂ ಕುತೂಹಲಕಾರಿ ಅರ್ಥ, ಪದನಿಷ್ಪತ್ತಿ, ಜನಪದ ಕಥೆ ಅಥವಾ ಪುರಾತನ ವಿದ್ಯಮಾನಗಳ
ಹಿನ್ನೆಲೆ ಇರಲೇಬೇಕು. ಅದನ್ನು ಹುಡುಕುತ್ತಾ ಹೋಗುವುದು ಎಂದರೆ, ಅದೊಂದು ಆರೋಗ್ಯಕಾರಿ ಚಟುವಟಿಕೆ; ಮನಸ್ಸಿಗೆ ಕೆಲಸ ಒದಗಿಸಿ, ತೃಪ್ತಿ
ನೀಡುವ ಚಟುವಟಿಕೆ ಅದು.

Leave a Reply

Your email address will not be published. Required fields are marked *

error: Content is protected !!