Friday, 26th July 2024

ಐಟಿ ದಾಳಿಯಲ್ಲಿ ತಾನೇ ಮುಗ್ಗರಿಸಿ ಬಿದ್ದ ಕಾಂಗ್ರೆಸ್

ವರ್ತಮಾನ

maapala@gmail.com

ಆದಾಯ ತೆರಿಗೆ, ಜಾರಿ ನಿರ್ದೇಶನಾಲಯಗಳು ರಾಜಕಾರಣಿಗಳು ಅಥವಾ ಅವರ ಆಪ್ತರ ಮೇಲೆ ದಾಳಿ ನಡೆಸಿದಾಗಲೆಲ್ಲಾ ಕೇಳಿಬರುತ್ತಿರುವ ಒಂದೇ ಒಂದು ಮಾತು- ಅವರೆಡೂ ಕೇಂದ ಸರಕಾರದ ಕೈಗೊಂಬೆಗಳು. ಪತಿಪಕ್ಷಗಳನ್ನು ಹಣಿಯಲು ಕೇಂದ್ರ ಸರಕಾರ ಈ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದು, ಆದರೆ.

ಸುಮಾರು ೩ ವಾರಗಳ ಹಿಂದೆ ನಗರದ ಕೆಲವು ಜ್ಯುವೆಲ್ಲರಿ ಮಾಲೀಕರು, ಉದ್ಯಮಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ
ಇದೊಂದು ಸಾಮಾನ್ಯ ದಾಳಿ ಎಂಬಂತೆ ಕಂಡು ಬಂದಿತ್ತು. ಅವರು ಆದಾಯ ತೆರಿಗೆ ವಂಚಿಸಿದ್ದಾರೆ ಎಂಬ ಕಾರಣಕ್ಕೆ ಈ ದಾಳಿ ನಡೆಸಲಾಗಿತ್ತು ಎಂದೇ
ಎಲ್ಲರೂ ಭಾವಿಸಿದ್ದರು. ಕಳೆದ ಗುರುವಾರ ಮತ್ತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಏನೋ ಆಗುತ್ತಿದೆ ಎಂಬ ಅನುಮಾನದ
ಸಣ್ಣ ಸೆಲೆ ಕಾಣಿಸಿಕೊಂಡಿತ್ತು. ಆದರೆ, ಗುರುವಾರ ತಡರಾತ್ರಿ ಬಳಿಕ ಕಾಂಗ್ರೆಸ್‌ನ ಮಾಜಿ ಕಾರ್ಪೊರೇಟರ್ ಅಶ್ವತ್ಥಮ್ಮ ಅವರ ಪತಿ ಮತ್ತು ರಾಜ್ಯ
ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರ ನಿವಾಸದ ಮೇಲೆ ದಾಳಿ ನಡೆಸಿ ೪೨ ಕೋಟಿ ನಗದು ಪತ್ತೆಯಾದಾಗಲೇ ಈ ದಾಳಿಯ ಹಿಂದಿನ
ಹಕೀಕತ್ತು ಅರ್ಥವಾಗಿದ್ದು. ಅದರ ಮಾರನೇ ದಿನ ಅಂದರೆ ಶನಿವಾರ ಮತ್ತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಲ್ಡರ್ ಒಬ್ಬರ ಮನೆ ಮೇಲೆ ದಾಳಿ
ನಡೆಸಿ ೪೦ ಕೋಟಿ ರು. ವಶಪಡಿಸಿಕೊಂಡಿದ್ದರು.

ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ದೆಹಲಿಯಲ್ಲಿ ಏಕಕಾಲದಲ್ಲಿ ನಡೆದ ದಾಳಿಯಲ್ಲಿ ೯೪ ಕೋಟಿ ನಗದು ಸೇರಿದಂತೆ ೧೦೨ ಕೋಟಿ ರು.
ಮೌಲ್ಯದ ನಗದು ಮತ್ತು ಚಿನ್ನಾಭರಣ ಆದಾಯ ತೆರಿಗೆ ಇಲಾಖೆ ಅಽಕಾರಿಗಳ ವಶವಾಗಿತ್ತು. ಈ ಪೈಕಿ ಬಹುಪಾಲು ಕರ್ನಾಟಕದಲ್ಲೇ ಸಿಕ್ಕಿತ್ತು. ಅದರಲ್ಲೂ
ಅಂಬಿಕಾಪತಿ ಈ ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಜತೆ ಸೇರಿ ೪೦ ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು. ಈ ಆರೋಪವನ್ನೇ ಮುಂದಿಟ್ಟು ಕೊಂಡು ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್, ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರ ಆರೋಪದೊಂದಿಗೆ ಸಮರವನ್ನೇ ಸಾರಿತ್ತು. ಸಹಜವಾಗಿಯೇ ಇದು ಬಿಜೆಪಿಗೆ ಭಾರಿ ಹಿನ್ನಡೆ ತಂದುಕೊಟ್ಟಿತ್ತು.

ಅಂಥ ಅಂಬಿಕಾಪತಿ ಮನೆಯಲ್ಲಿ ನಗದು ಸಿಕ್ಕಿದಾಗ ಎಲ್ಲರಿಗೂ ಕಾಂಗ್ರೆಸ್ ವಿರುದ್ಧ ಅನುಮಾನ ಬರುವುದು ಸಹಜ. ಏಕೆಂದರೆ, ಇದೇ ಉಪಾಧ್ಯಕ್ಷರು ಈ
ಹಿಂದೆ ಬಿಜೆಪಿ ಸರಕಾರದ ವಿರುದ್ಧ ಆರೋಪ ಮಾಡಿದ್ದರು. ಅವರ ಪತ್ನಿ ಕಾಂಗ್ರೆಸ್‌ನ ಮಾಜಿ ಕಾರ್ಪೊರೇಟರ್. ಅಷ್ಟೇ ಅಲ್ಲ, ಅಂಬಿಕಾಪತಿ ವೈಯಕ್ತಿಕವಾಗಿಯೂ ಬಿಜೆಪಿಯ ಹಲವು ಪ್ರಬಲ ನಾಯಕರಿಗೆ, ಅದರಲ್ಲೂ ಈಗ ಸರಕಾರದಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವವರಿಗೆ ಅತ್ಯಾಪ್ತ. ಈ ಎಲ್ಲಾ ಕಾರಣಗಳಿಂದ ಅಂಬಿಕಾಪತಿ ಮನೆಯಲ್ಲಿ ಸಿಕ್ಕಿದ ಮೊತ್ತವು ಕಾಂಗ್ರೆಸ್ ಸರಕಾರ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ ಬಾಕಿ ಮೊತ್ತದ ಕಮಿಷನ್.

ಪಂಚರಾಜ್ಯಗಳ ಉಪಚುನಾವಣೆಗೆ ಸಂಗ್ರಹಿಸಿಡಲಾಗಿತ್ತು ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು ಸಹಜವೇ ಆಗಿತ್ತು. ಅದರ ಮಾರನೇ ದಿನವೇ ಬಿಲ್ಡರ್ ಒಬ್ಬರ ಮನೆಯಲ್ಲಿ ಮತ್ತೆ ೪೦ ಕೋಟಿ ನಗದು ಪತ್ತೆಯಾಗಿತ್ತು. ಆತ ಕೂಡ ಕಾಂಗ್ರೆಸ್‌ನ ಪ್ರಮುಖ ನಾಯಕರ ಜತೆ ಆತ್ಮೀಯ ಸಂಬಂಧ ಹೊಂದಿದ್ದ ವ್ಯಕ್ತಿ. ಹೀಗಾಗಿ ಪಂಚರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹಣ ಸಂಗ್ರಹಿಸುತ್ತಿದೆ ಎಂಬ ಆರೋಪ ಇನ್ನಷ್ಟು ಬಲವಾಯಿತು.

ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಈಗಾಗಲೇ ಸುಸ್ತು ಬಿದ್ದಿರುವ ಬಿಜೆಪಿ ಮತ್ತು ಜೆಡಿಎಸ್‌ಗಳಿಗೆ (ಈಗಾಗಲೇ ಮೈತ್ರಿ ಮಾಡಿಕೊಂಡಿರುವು ದರಿಂದ ಇಬ್ಬರೂ ಒಟ್ಟಾಗಿಯೇ ಸರಕಾರದ ವಿರುದ್ಧ ಮುಗಿಬೀಳುತ್ತಿದ್ದಾರೆ) ಇದಕ್ಕಿಂತ ಒಳ್ಳೆಯ ವಿಷಯ ಸಿಗಲು ಸಾಧ್ಯವೇ ಇರಲಿಲ್ಲ. ಅದರಲ್ಲೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಜತೆ ಕೈಜೋಡಿಸಿದ್ದರಿಂದ ಸಹಜವಾಗಿಯೇ ಪ್ರತಿಪಕ್ಷಗಳ ಆರೋಪ, ಹೋರಾಟಗಳಿಗೆ ಸ್ವಲ್ಪ ಶಕ್ತಿ ಬಂದಿತ್ತು. ಈ ಆರೋಪಗಳನ್ನು ಕಾಂಗ್ರೆಸ್ ಸ್ಪಷ್ಟವಾಗಿ ನಿರಾಕರಿಸಿದ್ದರೆ ಪ್ರಕರಣ ಪಕ್ಷಕ್ಕೆ ಇಷ್ಟೊಂದು ಡ್ಯಾಮೇಜ್ ಮಾಡುತ್ತಿರಲಿಲ್ಲವೇನೋ? ಆದರೆ, ತನ್ನನ್ನು ಸಮರ್ಥಿಸಿ ಕೊಳ್ಳುವ ಭರದಲ್ಲಿ ಐಟಿ, ಇಡಿಗಳ ವಿಚಾರದಲ್ಲಿ ಕೇಂದ್ರ ಸರಕಾರದ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿದೆ. ಚುನಾವಣೆ ಬಂದಾಗ ಪ್ರತಿಪಕ್ಷಗಳ ವಿರುದ್ಧ ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ವಿರುದ್ಧ ಈ ಎರಡು ಅಸಗಳನ್ನು ಬಳಸುತ್ತಿದೆ. ಆ ಮೂಲಕ ಪ್ರತಿಪಕ್ಷಗಳನ್ನು ಕಟ್ಟಿ ಹಾಕಲು ಪ್ರಯತ್ನಿಸುತ್ತಿದೆ. ಈ ಸಂಸ್ಥೆಗಳು
ರಾಜಕೀಯ ಒತ್ತಡ ಇಲ್ಲದೆ ದಾಳಿ ನಡೆಸುತ್ತಿಲ್ಲ ಎಂದಾಗಿದ್ದರೆ ಬಿಜೆಪಿ ಸರಕಾರಗಳಿದ್ದ ರಾಜ್ಯಗಳಲ್ಲೂ ದಾಳಿ ನಡೆಸಬೇಕಿತ್ತು.

ಕೇವಲ ಪ್ರತಿಪಕ್ಷಗಳ ವಿರುದ್ಧವಷ್ಟೇ ದಾಳಿ ನಡೆಸುತ್ತಿವೆ. ಹೀಗಾಗಿ ಇದು ಕೇಂದ್ರ ಸರಕಾರಿ ಪ್ರಾಯೋಜಿತ ದಾಳಿ ಎಂದೆಲ್ಲಾ ರಾಜ್ಯ ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಮಾಡುತ್ತಿರುವ ಈ ಆರೋಪ ಸತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂಬಂತೆ ಕೇಂದ್ರದಲ್ಲಿ ಕಾಂಗ್ರೆಸ್ ಅಥವಾ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಇದ್ದಾಗ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಪಕ್ಷಗಳನ್ನು ಅದೆಷ್ಟು ಗೋಳು ಹೊಯ್ದುಕೊಳ್ಳಲಾಗಿತ್ತು ಎಂಬುದು ಅನುಭವಿಸಿದವರಿಗಷ್ಟೇ ಗೊತ್ತು. ಕರ್ನಾಟಕದಲ್ಲಿ ಎಸ್.ಆರ್.ಬೊಮ್ಮಾಯಿ ಸರಕಾರವನ್ನು ವಜಾಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡುವ ಮುನ್ನ ಅದೆಷ್ಟು ಕಾಂಗ್ರೆಸ್ಸೇತರ ಸರಕಾರಗಳನ್ನು ಕೇಂದ್ರ ಸರಕಾರ ಹೊಸಕಿ ಹಾಕಿತ್ತೋ? ಆ ದೇವರಿಗೇ ಗೊತ್ತು.

ಅದು ಒಂದೆಡೆಯಾದರೆ ಮತ್ತೊಂದೆಡೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು, ನ್ಯಾಯಾಂಗ ತನಿಖೆ ಹೆಸರಲ್ಲಿ ಗುಜರಾತ್‌ನಲ್ಲಿ ನರೇಂದ್ರ ಮೋದಿ ಸರಕಾರದ ವಿರುದ್ಧ ಯುಪಿಎ ಸರಕಾರ ನಡೆದುಕೊಂಡ ರೀತಿ ಅದೆಷ್ಟು ಅತಿರೇಕಕ್ಕೆ ಹೋಗಿತ್ತು ಎಂದರೆ ಇಡೀ ದೇಶವೇ ಹಿಂದುತ್ವದ, ಭ್ರಷ್ಟಾಚಾರದ ಹೆಸರಿನಲ್ಲಿ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುವಂತಾಯಿತು. ನರೇಂದ್ರ ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಈ ಹಿಂದೆ ಕಾಂಗ್ರೆಸ್ ಏನೆಲ್ಲಾ ಮಾಡುತ್ತಿತ್ತೋ ಅದೇ ಕೆಲಸವನ್ನು ಬೇರೆ ಬೇರೆ ರೀತಿಯಲ್ಲಿ ಮಾಡುತ್ತಾ ಸೇಡು ತೀರಿಸಿಕೊಳ್ಳುತ್ತಿದೆ. ಈ ಹಿಂದೆ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲ ಯಗಳನ್ನು ಬಿಜೆಪಿ ಸೇರಿದಂತೆ ಪ್ರತಿಪಕ್ಷದವರ ಮೇಲೆ ಪ್ರಯೋಗಿಸಲು ಆಗುತ್ತಿರಲಿಲ್ಲ ಏಕೆಂದರೆ, ಅಂಥ ಅಕ್ರಮ, ಭ್ರಷ್ಟಾಚಾರ ಎಸಗಲು ಅವರಿಗೆ ಅಽಕಾರ
ಮತ್ತು ಅವಕಾಶ ಎರಡೂ ಇರಲಿಲ್ಲ. ಹೀಗಾಗಿ ಆ ಎರಡು ತನಿಖಾ ಸಂಸ್ಥೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಂಸ್ಥೆಗಳನ್ನು ಎಲ್ಲಾ ರೀತಿಯಲ್ಲೂ ಪ್ರತಿ
ಪಕ್ಷಗಳನ್ನು ಮಟ್ಟಹಾಕಲು ಅದು ಬಳಸಿಕೊಂಡಿತ್ತು.

ಆದರೆ, ಹಿಂದೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಯಾವ ಎರಡು ತನಿಖಾ ಸಂಸ್ಥೆಗಳನ್ನು ಪ್ರತಿಪಕ್ಷಗಳ ವಿರುದ್ಧ ಬಳಸಿಕೊಳ್ಳಲು ಸಾಧ್ಯವಿಲ್ಲವಾಗಿತ್ತೋ ಅವೇ ಎರಡು ಸಂಸ್ಥೆಗಳು ಈಗ ಕಾಂಗ್ರೆಸ್ ಪಾಲಿಗೆ ಮಗ್ಗುಲ ಮುಳ್ಳಾಗಿರುವುದು ಕಾಕತಾಳೀಯ ಅಷ್ಟೆ. ಆದರೆ, ಕಾಂಗ್ರೆಸ್ ಕೇಂದ್ರ ಸರಕಾರದ ವಿರುದ್ಧ ಏನೇ ಆರೋಪ ಮಾಡಲಿ, ಅದರಲ್ಲಿ ಪೂರ್ಣ ಸತ್ಯವೇ ಇರಲಿ, ಆದಾಯ ತೆರಿಗೆ ದಾಳಿ ವಿಚಾರದಲ್ಲಿ ಕಾಂಗ್ರೆಸ್ ತನ್ನ ಮೇಲೆ ತಾನೇ ಕಲ್ಲು ಎತ್ತಿಹಾಕಿಕೊಳ್ಳುತ್ತಿದೆ, ಇಲ್ಲಾ ಆ ಪಕ್ಷದ ನಾಯಕರೇ ಕಲ್ಲು ಎತ್ತಿ ಹಾಕುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ ಪತ್ತೆಯಾದ ನಗದಿಗೂ ಕಾಂಗ್ರೆಸ್‌ಗೂ ಸಂಬಂಧ ಇದೆಯೋ, ಇಲ್ಲವೋ? ಆದರೆ, ಇದೆ ಎಂಬುದನ್ನು ಆ ಪಕ್ಷದ ನಾಯಕರೇ ಒಪ್ಪಿಕೊಳ್ಳುವಂತಾಗಿದೆ. ದಾಳಿ ವೇಳೆ ಪತ್ತೆಯಾದ ಹಣಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು ಹೇಳುವುದ ಕ್ಕಿಂತಲೂ ಮುಖ್ಯವಾಗಿ ದಾಳಿ ನಡೆಸಿದ್ದೇ ತಪ್ಪು ಎಂದು ಹೇಳುವ ಮೂಲಕ ಆ ಹಣ ತಮ್ಮದು ಎಂಬುದನ್ನು ಪರೋಕ್ಷವಾಗಿ ಹೇಳುತ್ತಿದ್ದಾರೆ.

ಜನರಿಗೆ ಕಾಂಗ್ರೆಸ್ ಮೇಲೆ ಅನುಮಾನ ಬರಲು ಕಾರಣವಾಗಿರುವುದು ಇದೇ ಅಂಶ. ಏಕೆಂದರೆ, ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ನಗದು ಪತ್ತೆಯಾಗು ವುದು, ಅದನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸರಕಾರದ ವಿರುದ್ಧ ಆರೋಪ ಮಾಡುವುದು ರಾಜಕೀಯದಲ್ಲಿ ಸಹಜ ಪ್ರಕ್ರಿಯೆ. ಅದನ್ನು ಅಧಿಕಾರ ದಲ್ಲಿರುವವರು ತಳ್ಳಿಹಾಕುವುದು ಕೂಡ ಅಷ್ಟೇ ಸಹಜ. ಹೀಗಾಗಿ ಇಂಥ ದಾಳಿ ನಡೆದಾಗ ಜನರು ಒಂದೆರಡು ದಿನ ಮಾತಾಡಿ ಮರೆತು ಬಿಡುತ್ತಾರೆ. ಆದರೆ, ಕರ್ನಾಟಕದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ನಗದು ವಶಪಡಿಸಿಕೊಂಡ ಬಳಿಕ ರಾಜ್ಯ ನಾಯಕರು ಮಾತ್ರವಲ್ಲದೆ, ರಾಷ್ಟ್ರೀಯ ನಾಯಕರೂ ಕೇಂದ್ರ ಸರಕಾರ ಮತ್ತು ಐಟಿ ವಿರುದ್ಧ ಮುಗಿಬಿದ್ದು ದಾಳಿ ನಡೆಸಿದ್ದೇ ತಪ್ಪು ಎಂದು ಹೇಳುತ್ತಿರುವುದನ್ನು ಗಮನಿಸಿದಾಗ ಕಾಂಗ್ರೆಸ್ ಸರಕಾರ ತನ್ನ ಭ್ರಷ್ಟಾಚಾರ
ಮುಚ್ಚಿಕೊಳ್ಳಲು ಈ ರೀತಿಯ ಪ್ರಯತ್ನ ಮಾಡುತ್ತಿದೆ ಎಂಬ ಅನುಮಾನ ಬಲವಾಗುತ್ತಿದೆ.

ಆ ರೀತಿಯ ಚರ್ಚೆಗಳೂ ಬಲವಾಗುತ್ತಿವೆ. ಇದನ್ನೆಲ್ಲಾ ಗಮನಿಸಿದಾಗ ಐಟಿ ದಾಳಿ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನದಿಂದಾಗಿ, ಕಳೆದ ವಿಧಾನಸಭೆ
ಚುನಾವಣೆಯ ಭರ್ಜರಿ ಗೆಲುವಿನಿಂದ ಮತ್ತು ಅಧಿಕಾರಕ್ಕೆ ಬಂದ ಮೇಲೆ ಜಾರಿಗೆ ತಂದ ಗ್ಯಾರಂಟಿಯಿಂದ ತಲೆ ಎತ್ತಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷವು ಸಮಸ್ಯೆಗೆ ಸಿಲುಕಬಹುದು. ಏಕೆಂದರೆ, ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಮಾಡುತ್ತಿದ್ದ ಭ್ರಷ್ಟಾಚಾರದ ಆರೋಪ ಗಳನ್ನು ಆ ಪಕ್ಷದ ನಾಯಕರು ನಿರಾಕರಿಸುತ್ತಿದ್ದುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ನಡೆಯುತ್ತಿರಲಿಲ್ಲವೇ ಎಂದು
ಮರುಪ್ರಶ್ನೆ ಮಾಡುವ ಮೂಲಕ ಆ ವಿಚಾರದಲ್ಲಿ ನಾವೂ ಅದೇ ರೀತಿ ಎಂದು ಹೇಳಿಕೊಳ್ಳುತ್ತಿದ್ದರು.

ಇದರ ಪರಿಣಾಮ ಭ್ರಷ್ಟಾಚಾರದ ವಿಚಾರದಲ್ಲಿ ಎರಡೂ ಪಕ್ಷಗಳು ಒಂದೇ ರೀತಿ. ಕನಿಷ್ಠ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಚಿತ ಗ್ಯಾರಂಟಿಗಳಾದರೂ
ಸಿಗುತ್ತವೆ ಎಂಬ ಕಾರಣಕ್ಕೆ ಜನರು ಕಾಂಗ್ರೆಸ್ಸನ್ನು ಬೆಂಬಲಿಸಿದ್ದರು. ಇದೀಗ ಐಟಿ ದಾಳಿ ವಿಚಾರದಲ್ಲಿ ಹಿಂದೆ ಬಿಜೆಪಿ ಮಾಡಿದ್ದ ತಪ್ಪನ್ನೇ ಈಗ ಕಾಂಗ್ರೆಸ್
ಮಾಡುತ್ತಿದೆ. ಇದರಿಂದಾಗಿ ಈ ವಿಷಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಆದ ಪರಿಸ್ಥಿತಿ ತಂದುಕೊಟ್ಟರೆ ಅಚ್ಚರಿಯಲ್ಲ.

ಲಾಸ್ಟ್ ಸಿಪ್: ಬೇರೆಯವರು ಕಳ್ಳ ಎಂದರೆ ಜನ ನಂಬದಿರಬಹುದು. ಆದರೆ, ಕುಂಬಳಕಾಯಿ ಕಳ್ಳ ಎಂದಾಗ ಹೆಗಲು ಮುಟ್ಟಿ ನೋಡಿಕೊಂಡರೆ ಜನ ನಂಬದಿರುವರೇ?

Leave a Reply

Your email address will not be published. Required fields are marked *

error: Content is protected !!