Sunday, 23rd June 2024

ಕವಿರತ್ನ ಕಾಳಿದಾಸನ ಕೀರ್ತಿಪಾಕ… ಕೋವಿದರು ಕೊಟ್ಟ ಕೈತುತ್ತು

ತಿಳಿರು ತೋರಣ

srivathsajoshi@yahoo.com

ಕಾಳಿದಾಸ ಕಾವ್ಯಸಪ್ತಾಹದಲ್ಲಿ ನಿಜವಾಗಿಯೂ ಆದದ್ದು ಅದೇ. ಅಲ್ಲಿ ವಿದ್ವಾಂಸರು ಬಿಡಿಸಿ ಕೊಟ್ಟದ್ದು ಕಾಳಿದಾಸನ ಸಪ್ತ ಕೃತಿಗಳೆಂಬ ಏಳು ಹಲಸಿನ ಹಣ್ಣುಗಳನ್ನೇ. ನಾವೆಲ್ಲ ಸವಿದದ್ದು ಅಕ್ಷರಶಃ ಅತಿಮಧುರವಾದ ತೊಳೆಗಳನ್ನೇ. ಆದ್ದರಿಂದ ಅಂತಹ ಪನಸ-ಫಲಾಹಾರ ಒದಗಿಸಿದ ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು ಸಲ್ಲಬೇಕಾದ್ದೇ.

ಅಜ್ಜಿಯಿಂದಲೋ ಅಮ್ಮನಿಂದಲೋ ತುತ್ತು ತೆಗೆದುಕೊಳ್ಳುವುದಕ್ಕಾಗಿ ಕೈಚಾಚಿ ಸುತ್ತಲೂ ಕುಳಿತಿರುವ ಮಕ್ಕಳು. ಮಕ್ಕಳೇನು, ವಯಸ್ಸಿನ ಭೇದವಿಲ್ಲದೆ ಹರೆಯದವರು ದೊಡ್ಡವರು ಎಲ್ಲರೂ. ನಡುವೆ ಕಲಸನ್ನ ಹುಳಿಯನ್ನ ಮೊಸರನ್ನಗಳಂಥ- ಸುಲಭ ವಾಗಿ ಕೈತುತ್ತು ಕೊಡಲಿಕ್ಕೆ ಸಾಧ್ಯವಾಗುವ- ಅಡುಗೆಗಳ ದೊಡ್ಡ ತಪ್ಪಲೆ ಇಟ್ಟುಕೊಂಡು ಕುಳಿತ ಅಜ್ಜಿ/ಅಮ್ಮ. ಹಾಯಾಗಿ ಸುಳಿಯುವ ತಂಗಾಳಿ ಮೈಗೆಲ್ಲ ತಾಕಲು ಅನುವಾಗು ವಂತೆ ಮನೆ ಮುಂದಿನ ಅಂಗಳದಲ್ಲೋ ಟೆರೇಸ್‌ನ ಮೇಲೋ ಚಾಪೆ ಹಾಸಿ ಚಕ್ಳಮಕ್ಳ ಹಾಕ್ಕೊಂಡು ಕುಳಿತು ಈ ಸಮಾವೇಶ.

ಮನೆಮಂದಿಯೆಲ್ಲ ಸೇರಿರುವುದರಿಂದ ನಗು ಕೇಕೆ ಅಟ್ಟಹಾಸ ಚಿಲಿಪಿಲಿ ಕಲರವಗಳಿ ಗೇನೂ ಕೊರತೆಯಿಲ್ಲ. ಪ್ರೀತಿಗೆ ಬರವಿಲ್ಲ, ಊಟದ ರುಚಿಗಂತೂ ಎಣೆಯೇ ಇಲ್ಲ. ಈ ದೃಶ್ಯವನ್ನೇ- ಆದರೆ ಯಾವುದೇ ಸದ್ದುಗದ್ದಲವಿಲ್ಲದೆ, ಅಥವಾ ಕನಿಷ್ಠಪಕ್ಷ ಭೂಲೋಕ ದವರಿಗೆ ಕೇಳಿಸದಂತೆ- ಅನುಕರಿಸುತ್ತಿದ್ದಾನೇನೋ ಎಂಬಂತೆ, ಅಂದರೆ ಮೇಲೆ ಆಕಾಶ ದಲ್ಲಿ ತಾರೆಗಳಿಗೆಲ್ಲ ಬೆಳಕಿನ ಕೈತುತ್ತು ಕೊಡುತ್ತಿದ್ದಾನೇನೋ ಎನ್ನುವಂತೆ ಕಾಣುವ ಹುಣ್ಣಿಮೆ ಚಂದಿರ… ವಾಹ್! ‘ಬೆಳದಿಂಗಳೂಟ’ ಎಂದು ಕರೆಯಲ್ಪಡುವ, ಕಾವ್ಯಾತ್ಮಕ ವಾಗಿ ಬಣ್ಣಿಸಿದರೆ ಮಧುರಸ್ಮೃತಿಯ ಪುಳಕ ನೀಡುವ ಇಂಥದೊಂದು ಆಪ್ಯಾಯಮಾನ ಸಂಗತಿಯನ್ನು ನೀವು ಜೀವನದಲ್ಲಿ ಒಮ್ಮೆಯಾದರೂ ಅನುಭವಿಸಿದ್ದೀರಿ, ಅಥವಾ ಓದಿ/ಕೇಳಿಯಾದರೂ ಅರಿತಿದ್ದೀರಿ ಎಂದು ಭಾವಿಸಿದ್ದೇನೆ.

ಥೇಟ್ ಬೆಳದಿಂಗಳೂಟದಂತೆಯೇ ಭಾಸವಾಗುತ್ತಿತ್ತು ಕಳೆದ ವಾರ ಕ್ಲಬ್‌ಹೌಸ್ ಮಾಧ್ಯಮದ ಮೂಲಕ ನಡೆದ ‘ಕಾಳಿದಾಸ
ಕಾವ್ಯಸಪ್ತಾಹ’ ಉಪನ್ಯಾಸ ಮಾಲಿಕೆ. ಕವಿಕುಲಗುರು ಕಾಳಿದಾಸನ ಏಳು ಸುಪ್ರಸಿದ್ಧ ಕೃತಿಗಳನ್ನು ದಿನಕ್ಕೊಂದರಂತೆ ಒಬ್ಬೊಬ್ಬ ವಿದ್ವಾಂಸರು ವಿಶ್ಲೇಷಣೆ ಮಾಡಿ ಶ್ರೋತೃಗಳಿಗೆ ಸರಳಗನ್ನಡದಲ್ಲಿ ಉಣ ಬಡಿಸಿದ ಸಾಹಿತ್ಯ ಸಮಾರಾಧನೆ. ಪೀಠಿಕೆ ಮತ್ತು ಸಮಾರೋಪದ ದಿನಗಳನ್ನೂ ಸೇರಿಸಿದರೆ ಸಪ್ತಾಹವಲ್ಲ ಒಟ್ಟು ಒಂಬತ್ತು ದಿನಗಳ ನವಾಹ ರಸಪ್ರವಾಹ.

ಪ್ರತಿನಿತ್ಯ ಸಂಜೆ ಆರರಿಂದ ಸುಮಾರು ಏಳೂವರೆ ತನಕ ಕಾರ್ಯಕ್ರಮ ಆದ್ದರಿಂದ ಅಕ್ಷರಶಃ ಬೆಳದಿಂಗಳೂಟವೇ. ಸುಮ್ಮನೆ ಹೇಳುತ್ತಿಲ್ಲ, ಉತ್ಪ್ರೇಕ್ಷೆ ಅಲ್ಲ, ಹೋಲಿಕೆ ಎಷ್ಟು ಸಮಂಜಸವಾಗಿದೆ ನೋಡಿ: ಅಂತರಜಾಲವೆಂಬ ವಿಶಾಲವಾದ ಅಂಗಳ (ಟೆರೇಸ್ ಅಂತ ಬೇಕಾದ್ರೂ ಕಲ್ಪಿಸಿಕೊಳ್ಳಿ). ಅದರಲ್ಲಿ ಕ್ಲಬ್ ಹೌಸ್ ಎಂಬ ಚಾಪೆ ಹರಡಿ ಕುಳಿತುಕೊಂಡ ಒಂದಷ್ಟು ಮಂದಿ ಸಹೃದಯಿ ಗಳು (ಸರಾಸರಿ ಸಂಖ್ಯೆ ೫೦೦ ದಾಟಿರುತ್ತಿತ್ತು).

Read E-Paper click here

ಕಾಳಿದಾಸನ ಕಾವ್ಯವೆಂಬ ಪಕ್ವಾನ್ನವನ್ನು ತಮ್ಮ ಜ್ಞಾನಾನುಭವವೆಂಬ ತಪ್ಪಲೆಗಳಿಂದ ಮೊಗೆಮೊಗೆದು ಕೈತುತ್ತು ಕೊಡುತ್ತಿರುವ ವಿದ್ವಾಂಸರು. ಪ್ರೀತಿಯಿಂದ ಉಣಬಡಿಸಿದ ಅಕ್ಷರಮೃಷ್ಟಾನ್ನದ ತುತ್ತನ್ನು ಆಸ್ವಾದಿಸಲು ಕೈ ಚಾಚಿಕೊಂಡು- ಅಲ್ಲ, ಕಿವಿಗಳನ್ನು
ತೆರೆದುಕೊಂಡು- ತದೇಕಚಿತ್ತರಾಗಿ ಕುಳಿತ ಕೇಳುಗರು. ಇವರೆಲ್ಲರನ್ನೂ ಆವರಿಸಿದ್ದ ಸಂಸ್ಕೃತ-ಸಂಸ್ಕೃತಿಯ ಬಗೆಗಿನ ಅಭಿಮಾನ ವೆಂಬ ಹಿತಕರ ಬೆಳದಿಂಗಳು! ಇಷ್ಟು ಸಾಲದೇ? ನಿಜ, ಉಪಮಾ ಕಾಲಿದಾಸಸ್ಯ ಎಂಬ ಪ್ರಸಿದ್ಧಿಯ ಆ ಧೀಮಂತ ಕವಿ ತನ್ನ
ಕಾವ್ಯಗಳಲ್ಲಿ ಮೆರೆಯಿಸಿರುವ ಉಪಮೆಗಳೆಲ್ಲಿ, ಆತನ ಪಾದಧೂಳಿಗೂ ಸಮವಲ್ಲದ ನಾವುಗಳು ಮಾಡುವ ಬಾಲಿಶ ಹೋಲಿಕೆ ಗಳೆಲ್ಲಿ!

ಆದರೂ, ಅನಿಸಿದ್ದನ್ನು ಹೇಳಿಕೊಳ್ಳುವಾಗ, ಹಂಚಿಕೊಳ್ಳುವಾಗ ಆಗುವ ಖುಶಿಯನ್ನೇಕೆ ತಡೆದುಕೊಳ್ಳಬೇಕು? ಇಲ್ಲಿಯೇ ಸಾಂದರ್ಭಿಕವಾಗಿ ಮತ್ತು ಔಚಿತ್ಯಪೂರ್ಣವಾಗಿ ಇನ್ನೊಂದು ಹೋಲಿಕೆಯನ್ನೂ ಕೊಡಬೇಕೆಂದು ನನಗನಿಸುತ್ತಿದೆ. ಊರಲ್ಲಿ ವಿಶೇಷತಃ ಬಾಲ್ಯದ ದಿನಗಳಲ್ಲಿ ಬೇಸಿಗೆ ರಜೆಗೆ ಸರಿಯಾಗಿಯೇ ಒದಗಿಬರುತ್ತಿದ್ದ ಹಲಸಿನ ಹಣ್ಣಿನ ಸೀಸನ್‌ನಲ್ಲಿ ನಾವೆಲ್ಲ ಹಲಸಿನ ತೊಳೆಗಳನ್ನು ಚಪ್ಪರಿಸುತ್ತಿದ್ದ ಪ್ರಕ್ರಿಯೆ. ಮನೆಯಲ್ಲಿ ಯಾರಾದರೂ ಹಿರಿಯರು ಹಲಸಿನ ಹಣ್ಣನ್ನು ಹಿಸಿದು ತುಂಡರಿಸಿ ತೊಳೆಗಳನ್ನು ಒಂದೊಂದಾಗಿ ಬಿಡಿಸಿ ಅಗಲ ಬಾಯಿಯ ಬುಟ್ಟಿಯಲ್ಲೋ ಪಾತ್ರೆಯಲ್ಲೋ ಹಾಕುತ್ತಿದ್ದರು.

ಸುತ್ತಲೂ ಕುಳಿತ ನಾವೆಲ್ಲರೂ ನಾ ಮುಂದು ತಾ ಮುಂದು ಎಂಬಂತೆ ತೊಳೆಗಳ ಮೇಲೆ ಆಕ್ರಮಣ ಮಾಡಿ ಕಬಳಿಸುತ್ತಿದ್ದೆವು. ಸಾಹಿತ್ಯ ರಸಾಸ್ವಾದನೆಯ ಮಟ್ಟಿಗೆ ಇದು ಅಪ್ರಬುದ್ಧ ಅನಾಗರಿಕ ಹೋಲಿಕೆಯಂತೆ ಕಾಣಬಹುದು, ಆದರೆ ಹಲಸಿನ ಹಣ್ಣನ್ನೇ
ನೆನಪಿಸಿಕೊಳ್ಳಲಿಕ್ಕೆ ಕಾರಣವಿದೆ. ಸಂಸ್ಕೃತದ, ಹಳೆಗನ್ನಡದ ಕಾವ್ಯಗಳೆಲ್ಲ ಒಂಥರದಲ್ಲಿ ಹಲಸಿನ ಹಣ್ಣು ಇದ್ದಂತೆ. ಹಿತವಾದ
ಪರಿಮಳವೇನೋ ಮೂಗಿಗೆ ಅಡರುತ್ತದೆ, ತಿನ್ನಬೇಕೆಂಬ ಆಸೆಯೂ ಆಗುತ್ತದೆ. ಆದರೆ ಹಣ್ಣನ್ನು ಬಿಡಿಸಿ, ಮುಳ್ಳು- ಮೇಣವನ್ನೆಲ್ಲ ತೆಗೆದು, ಒಳಗಿನ ಸಿಹಿಸಿಹಿ ತೊಳೆಗಳನ್ನು ತಿನ್ನಬೇಕೆಂದರೆ ಕಷ್ಟವಿದೆ. ಒಂದೋ ನಾವೇ ಶ್ರಮಪಡಬೇಕು, ಇಲ್ಲವೇ ಯಾರಾದರೂ ಅನುಭವಿಗಳು ಆ ಕೆಲಸ ಮಾಡಿಕೊಡಬೇಕು.

ಹಾಗೆ, ನಾವೇ ಓದಿ ಅರ್ಥೈಸಿಕೊಳ್ಳಲು ಕಷ್ಟವಿರುವ ಸಂಸ್ಕೃತ ಕಾವ್ಯಗಳನ್ನು ಬಿಡಿಸಿ ನಮಗರ್ಥವಾಗುವ ಭಾಷೆಯಲ್ಲಿ
ವಿವರಿಸುವವರಿದ್ದರೆ… ಆಹಾ! ಏನು ಸವಿ, ಏನು ಸೊಗಸು! ಮೊನ್ನೆ ಕಾಳಿದಾಸ ಕಾವ್ಯಸಪ್ತಾಹದಲ್ಲಿ ನಿಜವಾಗಿಯೂ ಆದದ್ದು
ಅದೇ. ಅಲ್ಲಿ ವಿದ್ವಾಂಸರು ಬಿಡಿಸಿ ಕೊಟ್ಟದ್ದು ಕಾಳಿದಾಸನ ಸಪ್ತ ಕೃತಿಗಳೆಂಬ ಏಳು ಹಲಸಿನ ಹಣ್ಣುಗಳನ್ನೇ. ನಾವೆಲ್ಲ ಸವಿದದ್ದು
ಅಕ್ಷರಶಃ ಅತಿಮಧುರವಾದ ತೊಳೆಗಳನ್ನೇ. ಆದ್ದರಿಂದ ಅಂತಹ ಪನಸ-ಫಲಾಹಾರ ಒದಗಿಸಿದ ಎಂದರೋ ಮಹಾನುಭಾವುಲು
ಅಂದರಿಕಿ ವಂದನಮುಲು ಸಲ್ಲಬೇಕಾದ್ದೇ.

ಈ ಉಪನ್ಯಾಸ ಮಾಲಿಕೆಯ ಪರಿಕಲ್ಪನೆ ಮತ್ತು ಆಯೋಜನೆ ಬೆಂಗಳೂರಿನ ಮೈತ್ರೀ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನಮ್
ನವರದು. ಮುಖ್ಯವಾಗಿ ಡಾ. ಗಣಪತಿ ಹೆಗಡೆ ಮತ್ತು ವಿದ್ವಾನ್ ಆದಿತ್ಯ ನಾವುಡ ಇದರ ಅಧ್ವರ್ಯುಗಳು. ತಾಂತ್ರಿಕ ಸಂಯೋಜಕಿ ಯಾಗಿ, ಮೂರ್ನಾಲ್ಕು ವಾರಗಳ ಹಿಂದಿನಿಂದಲೇ ವಾಟ್ಸ್ಯಾಪ್‌ನಲ್ಲಿ ಪ್ರಚಾರಗೈದು ಆಸಕ್ತರನ್ನು ಒಟ್ಟುಗೂಡಿಸಿ ಒಂದು ಬಳಗ ರಚಿಸಿ ಅದನ್ನು ನಿರ್ವಹಿಸಿದ ಧನ್ಯಶ್ರೀ ರಾಮಕೃಷ್ಣ. ಜೊತೆಗೆ ತೆರೆಮರೆಯಲ್ಲಿ ಕೆಲಸಮಾಡಿ ಇಂಥದೊಂದು ಉತ್ಕೃಷ್ಟ ಯೋಜನೆ ಸಾಕಾರಗೊಳ್ಳುವುದಕ್ಕೆ ನೆರವಾದ ಇನ್ನೂ ಕೆಲವರು.

ನಿಃಸ್ವಾರ್ಥ ಸಂಸ್ಕೃತಪ್ರೇಮ ಇವರೆಲ್ಲರ ಧಮನಿಧಮನಿಯಲ್ಲೂ. ಸೋಮವಾರ ಜೂನ್ ೧೯ರಂದು ಮೊದಲ ಕಾರ್ಯಕ್ರಮ.
ಆವತ್ತೇ ಏಕೆ ಶುಭಾರಂಭ ಮಾಡಿದ್ದು ಎನ್ನುವುದಕ್ಕೂ ಕಾರಣವಿದೆ. ಅಂದು ಚಾಂದ್ರಮಾನ ಪಂಚಾಂಗದ ರೀತ್ಯಾ ಆಷಾಢ ಮಾಸದ ಶುಕ್ಲ ಪಕ್ಷದ ಪಾಡ್ಯ. ಕಾಳಿದಾಸನ ಪ್ರಖ್ಯಾತ ‘ಮೇಘದೂತಮ್’ ಕಾವ್ಯದಲ್ಲಿ ಬರುವ ‘ಆಷಾಢಸ್ಯ ಪ್ರಥಮ ದಿವಸೇ…’
ಶ್ಲೋಕಭಾಗದಿಂದಾಗಿ ಅದೊಂದು ರೀತಿಯಲ್ಲಿ ಕಾಳಿದಾಸ ದಿನ ಎಂದೇ ಗುರುತಿಸಲ್ಪಡುತ್ತದೆ. ಆದರೆ ಆವತ್ತು ರಸಾಸ್ವಾದನೆಗೆ ಎತ್ತಿಕೊಂಡದ್ದು ಮೇಘದೂತಮ್ ಕಾವ್ಯವನ್ನಲ್ಲ. ಏಳರ ಪೈಕಿ ಬೇರಾವುದನ್ನೂ ಅಲ್ಲ.

ಬದಲಿಗೆ, ಕಾಳಿದಾಸನ ಕಾವ್ಯಗಳ ವೈಶಿಷ್ಟ್ಯಗಳೇನು, ಅದರಲ್ಲಿರುವ ಮಾಧುರ್ಯಭರಿತ ಸಾಂದ್ರತೆ ಎಂತಹದು, ಎಂದು ಸೋದಾಹರಣವಾಗಿ ಪ್ರಾಸ್ತಾವಿಕ ನುಡಿ ರೂಪದಲ್ಲಿ ವಿಶ್ಲೇಷಣೆ. ಉಪನ್ಯಾಸಕಾರರು ಡಾ. ಎಂ. ವಿಶ್ವನಾಥ. ವೃತ್ತಿಯಲ್ಲಿ ಹೈದರಾಬಾದ್ ಐಐಟಿಯಲ್ಲಿ ವಿಜ್ಞಾನ-ತಂತ್ರಜ್ಞಾನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು; ಪ್ರವೃತ್ತಿಯಲ್ಲಿ ಸಂಸ್ಕೃತ ಪಂಡಿತರು. ಭಾರತೀಯ ಪರಂಪರೆಯ ಜ್ಞಾನಶಾಖೆ ಯನ್ನು ವಿಸ್ತರಿಸುವುದಕ್ಕೆ ಜೀವನವನ್ನು ಮುಡಿಪಾಗಿಟ್ಟುಕೊಂಡವರು.

‘ರಾಜಧರ್ಮವನ್ನು ಮತ್ತು ರಾಷ್ಟ್ರದ ಕಲ್ಪನೆಯನ್ನು ಉದಾತ್ತ ದೃಷ್ಟಿಯಿಂದ ನೋಡಿದ್ದ, ಅದನ್ನು ತನ್ನ ಕಾವ್ಯದಲ್ಲಿ ಸಮರ್ಥವಾಗಿ ವ್ಯಕ್ತಪಡಿಸಿದ್ದ ಮೇರುಪ್ರತಿಭೆ ಕಾಳಿದಾಸನೇ ನಿಜವಾಗಿಯೂ ರಾಷ್ಟ್ರಕವಿ ಅಥವಾ ರಾಷ್ಟ್ರೀಯ ಕವಿ ಎಂದು
ಕರೆಸಿಕೊಳ್ಳಬೇಕಾದವನು…’ ಅವರು ಪ್ರತಿಪಾದಿಸಿದ ರೀತಿಯು ಕಾಳಿದಾಸನ ಬಗ್ಗೆ ಯಾರಿಗೇ ಆದರೂ ಪ್ರೀತಿಗೌರವ ಮೂಡಿಸುವಂಥದ್ದು, ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಆಸಕ್ತಿ ಕೆರಳಿಸುವಂಥದ್ದಾಗಿತ್ತು. ಮುಂಬರುವ ಏಳು ದಿನಗಳ
ರಸದೌತಣಕ್ಕೆ ಹೇಳಿಮಾಡಿಸಿದಂಥ ಕರ್ಟೇನ್‌ರೈಸರ್.

ಮಾರನೆ ದಿನ ಅಭಿeನ ಶಾಕುಂತಲಮ್ ಕೃತಿಯೊಂದಿಗೆ ಸಪ್ತಾಹ ನಿಜಾರ್ಥದಲ್ಲಿ ಆರಂಭ. ಮಾತನಾಡಿದವರು ಡಾ. ರಾಮಚಂದ್ರ ಭಟ್ ಕೋಟೆಮನೆ. ಅವರೊಬ್ಬ ಶಾಸ್ತ್ರಕೋವಿದ. ಜ್ಞಾನಾರ್ಜನೆಯಲ್ಲೂ ಜೀವನವಿಧಾನದಲ್ಲೂ ಆಚಾರ್ಯ ಎಂದು ಕರೆಸಿಕೊಳ್ಳುವ ಸಂಪೂರ್ಣ ಅರ್ಹತೆಯುಳ್ಳವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರುಕುಲ ಪ್ರಕಲ್ಪನೆಯಡಿಯಲ್ಲಿ ವೇದ
ವಿeನ ಗುರುಕುಲದ ಸೃಷ್ಟಿಕರ್ತ. ಅಭಿಜ್ಞಾನ ಶಾಕುಂತಲಮ್ ಕೇವಲ ದುಷ್ಯಂತ-ಶಕುಂತಲೆಯರ ಪ್ರೇಮ-ವಿರಹ-ವಿಷಾದ
ಕಥೆಯಷ್ಟೇ ಆಗಿರದೆ ಆ ನಾಟಕದಲ್ಲಿ ಕಾಳಿದಾಸನಿಂದ ಸಮಾಜದ ವಿವಿಧ ಸ್ತರಗಳ ಜನರ, ಜನಜೀವನದ, ಅವರು ಪಾಲಿಸುತ್ತಿದ್ದ
ಮೌಲ್ಯಗಳ ಚಿತ್ರಣ, ಅಲ್ಲಿನ ಸೂಕ್ಷ್ಮ ಒಳನೋಟಗಳನ್ನೆಲ್ಲ ರಾಮಚಂದ್ರ ಭಟ್ಟರು ಪದರಪದರವಾಗಿ ಬಣ್ಣಿಸಿದ ರೀತಿ ವಿದ್ವತ್ಪೂರ್ಣ.

ಸಂಸ್ಕೃತವನ್ನು ಸ್ವಲ್ಪವೂ ಅರಿಯದ ಕೆಲ ಶ್ರೋತೃಗಳಿಗೆ ತುಸು ಭಾರವೆಂದೇ ಅನಿಸಿತೇನೋ, ಆದರೆ ಸೀಮಿತ ಅವಧಿಯಲ್ಲಿ ಅಂತಹ ಶ್ರೇಷ್ಠ ಕೃತಿಯನ್ನು, ಅದರ ಘನತೆಗೆ ಅಪಚಾರವಾಗದಂತೆ ಸರಳವಾಗಿ ಬಣ್ಣಿಸುವುದಾದರೂ ಹೇಗೆ? ಸವಾಲಿನ ಕೆಲಸವೇ. ಒಂದು ಟೀಸರ್ ಅಥವಾ ಪಕ್ಷಿನೋಟದಂತೆ ಪ್ರಸ್ತುತಪಡಿಸಬಹುದು ಅಷ್ಟೇ. ಆಯೋಜಕರ ಉದ್ದೇಶವೂ ಅದೇ: ಜನಸಾಮಾನ್ಯರನ್ನೂ ಕಾಳಿದಾಸನತ್ತ ಸೆಳೆಯುವುದು, ಆತನ ಹಿರಿಮೆಯನ್ನು ಪರಿಚಯಿಸುವುದು. ಆಸಕ್ತಿ ಹುಟ್ಟಿದವರು
ಆಮೇಲೆ ಸ್ವಾಧ್ಯಯನದಿಂದಲೋ, ಬೇರೆ ಸ್ರೋತಗಳಿಂದಲೋ ಇನ್ನಷ್ಟು ತಿಳಿದುಕೊಳ್ಳಲಿಕ್ಕಾಗುತ್ತದೆ.

ಉಪನ್ಯಾಸ ಮಾಲಿಕೆಯಲ್ಲಿ ಆಮೇಲಿನ ಆರು ವಿದ್ವಾಂಸರು- ಡಾ.ಸೂರ್ಯ ಹೆಬ್ಬಾರ್ (ಋತುಸಂಹಾರಃ), ಡಾ.ರಾಮಕೃಷ್ಣ
ಪೆಜತ್ತಾಯ (ರಘುವಂಶಃ), ವಿದ್ವಾನ್ ಉಮಾಕಾಂತ ಭಟ್ ಕೆರೇಕೈ (ಮೇಘದೂತಮ್), ಡಾ.ಗಣಪತಿ ಭಟ್ (ಮಾಲ ವಿಕಾಗ್ನಿಮಿತ್ರಮ್), ವಿದ್ವಾನ್ ಭೋಜರಾಜ ಟಿ. (ವಿಕ್ರಮೋರ್ವಶೀಯಮ್), ಮತ್ತು, ಡಾ.ಮಹೇಶ್ ಕಾಕತ್ಕರ್ (ಕುಮಾರಸಂಭ ವಮ್) – ಎಲ್ಲರೂ ತಮ್ಮತಮ್ಮ ಉಪನ್ಯಾಸಗಳು ತೀರ ನಾರಿಕೇಳಪಾಕ ಇಕ್ಷುಪಾಕಗಳೇ ಆಗಿರದೆ ಅಷ್ಟಿಷ್ಟು ದ್ರಾಕ್ಷಾಪಾಕವನ್ನೂ ಬೆರೆಸಿ ಜನಸಾಮಾನ್ಯರಿಗೆ ಹತ್ತಿರವಾಗುವಂತೆ ನೋಡಿಕೊಂಡಿದ್ದು ಒಳ್ಳೆಯದೇ ಆಯಿತು.

ತಾವೆತ್ತಿಕೊಂಡ ಕೃತಿಯ ಪರಿಚಯ ಸ್ಥೂಲ ಮಟ್ಟದಲ್ಲೇ ಆದರೂ ಕೃತಿಗೆ ಮತ್ತು ಕೃತಿಕಾರನಿಗೆ ಪೂರ್ಣ ನ್ಯಾಯ ಒದಗಿಸುವಂತೆ ಒಂದು ಗಂಟೆಯ ಅವಧಿಯೊಳಗೆ ಪ್ರಸ್ತುತಪಡಿಸಲು ಅವರು ಪಟ್ಟ ಶ್ರಮ, ತೋರಿದ ಮುತುವರ್ಜಿ, ಮತ್ತು ವಹಿಸಿದ ಕಾಳಜಿ ಗಳನ್ನು ನಿಜವಾಗಿಯೂ ಮೆಚ್ಚಬೇಕು. ಏಕೆಂದರೆ ಅದು ಪಾಂಡಿತ್ಯಪ್ರದರ್ಶನ ಅಲ್ಲ. ಜ್ಞಾನ ಪಿಪಾಸುಗಳಿಗೆ ತನ್ನಿಂದಾದಷ್ಟು ಸತ್ತ್ವವನ್ನು ಧಾರೆಯೆರೆಯುತ್ತೇನೆ ಎಂಬ ಪ್ರಾಂಜಲ ಮನಸ್ಸಿನ ಪ್ರಸ್ತುತಿ.

ಇವರೆಲ್ಲ- ಹೆಸರಿನಲ್ಲೇ ಸೂಚಿಸಿರುವಂತೆ ಸಂಸ್ಕೃತ ಭಾಷೆ-ಸಾಹಿತ್ಯದ ವಿವಿಧ ವಿಷಯಗಳಿಗೆ ಸಂಬಂಧಪಟ್ಟಂತೆ ಡಾಕ್ಟರೇಟ್ ಪದವಿ ಗಳಿಸಿದವರು; ಅಥವಾ ಸಂಸ್ಕೃತ ಅಧ್ಯಯನ-ಅಧ್ಯಾಪನಗಳಲ್ಲಿ ತೊಡಗಿ ವಿದ್ವಾನ್ ಎನಿಸಿದವರು. ಸೂರ್ಯ ಹೆಬ್ಬಾರ್ ಮತ್ತು ರಾಮಕೃಷ್ಣ ಪೆಜತ್ತಾಯರು ಶತಾವಧಾನಿ ಆರ್.ಗಣೇಶರ ಗರಡಿಯಲ್ಲಿ ಪಳಗಿ ಅವಧಾನ ಕಲೆಯನ್ನೂ ಕರಗತ ಮಾಡಿಕೊಂಡವರು; ಈಗಾಗಲೇ ಹಲವಾರು ಅಷ್ಟಾವಧಾನಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು.

ಉಮಾಕಾಂತ ಭಟ್ಟರ ಪ್ರಗಲ್ಭ ಪಾಂಡಿತ್ಯವನ್ನು, ಸುಸ್ಪಷ್ಟ ಮಾತುಗಾರಿಕೆಯನ್ನು ನಾನು ಯಕ್ಷಗಾನ ತಾಳಮದ್ದಳೆಗಳ ವಿಡಿಯೊ ಗಳಲ್ಲಿ ನೋಡಿ ಅಷ್ಟಿಷ್ಟು ಅರಿತಿದ್ದೇನೆ. ಗಣಪತಿ ಭಟ್ಟರನ್ನು ವಿಜಯವಾಣಿ ಪತ್ರಿಕೆಯ ಮನೋಲ್ಲಾಸ ಅಂಕಣಕಾರ ನಾಗಿ, ಬೆಂಗಳೂರು ಆಕಾಶವಾಣಿಯ ಅಮೃತವರ್ಷಿಣಿ ವಾಹಿನಿಯಲ್ಲಿ ಉದ್ಘೋಷಕನಾಗಿ, ತಿಳಿದುಕೊಂಡಿದ್ದೇನೆ. ಮಹೇಶ ಕಾಕತ್ಕರ್ ಅಂತೂ ನನಗೆ ಸೋದರಮಾವನ ಮಗನಾದ್ದರಿಂದ ಪ್ರತಿಭೆ, ಪ್ರತ್ಯುತ್ಪನ್ನಮತಿ, ಪ್ರಖರ ಚಿಂತನಾ ಸಾಮರ್ಥ್ಯಗಳನ್ನು ಚಿಕ್ಕಂದಿ ನಿಂದಲೂ ಬಲ್ಲೆ. ಇವರೆಲ್ಲರ ಬಗ್ಗೆ ಇನ್ನೊಂದಿಷ್ಟಾದರೂ ವಿವರಗಳನ್ನು ಇಲ್ಲಿ ಸೇರಿಸಬೇಕು, ಇವರ ಉಪನ್ಯಾಸಗಳಿಂದ
ಆಯ್ದ ಕೆಲ ಭಾಗಗಳನ್ನಾದರೂ- ಗಣಪತಿ ಭಟ್ಟರ ಮಾತುಗಳಲ್ಲಿ ವೃಕ್ಷಗಳ ದೋಹದದ ಬಣ್ಣನೆ, ಉಮಾಕಾಂತ ಭಟ್ಟರ
ವ್ಯಾಖ್ಯಾನದಲ್ಲಿ ರಾಮಗಿರಿಯ ಕೆರೆಸರೋವರಗಳು ಸೀತೆಯ ಋತುಸ್ನಾನದಿಂದಾಗಿ ಪುಣ್ಯಜಲವೆನಿಸಿದರ ಬಣ್ಣನೆ, ಮಹೇಶ
ಕಾಕತ್ಕರ್ ವಿವರಿಸಿದಂತೆ ತಪಸ್ವಿನಿ ಪಾರ್ವತಿಯ ನಿಶ್ಚಲತೆ ಹೇಗಿತ್ತೆಂಬುದನ್ನೆಲ್ಲ- ಇಲ್ಲಿ ಉಲ್ಲೇಖಿಸಬೇಕು ಎಂದು ನನ್ನ ಆಸೆ.

ಆದರೇನು ಮಾಡಲಿ, ಅಂಕಣಬರಹಕ್ಕೆ ಪದಗಳ ಮಿತಿ ಇರುತ್ತದಲ್ಲ? ಬಹುಶಃ ಇದೇ ಸಂದಿಗ್ಧತೆ- ಕಾಳಿದಾಸನ ಕೃತಿಯ ಬಗೆಗೆ ಯಾವ ವಿವರಗಳನ್ನು ಆಯ್ದುಕೊಳ್ಳುವುದು ಯಾವುದನ್ನು ಬಿಟ್ಟುಬಿಡುವುದು ಎಂಬ ಉಭಯಸಂಕಟ- ಈ ಎಲ್ಲ ಉಪನ್ಯಾಸಕ ರನ್ನೂ ಹೇಗೆ ಕಾಡಿರಬಹುದು ಎಂದು ನನಗೆ ಚೆನ್ನಾಗಿ ಅರ್ಥವಾಗುತ್ತದೆ. ಆದ್ದರಿಂದಲೇ ನಾನೂ ‘ಕಾಳಿದಾಸ ಕಾವ್ಯಸಪ್ತಾಹದ ರಸಾಸ್ವಾದನೆಯ ಅನುಭವ- ಒಂದು ಟೀಸರ್ ಅಥವಾ ಝಲಕ್’ ಆಗಿಯಷ್ಟೇ ಇಂದಿನ ಅಂಕಣಬರಹದ ಚೌಕಟ್ಟನ್ನು ಕಲ್ಪಿಸಿಕೊಂಡಿದ್ದೇನೆ.

ಒಂದೆರಡು ಮಾತುಗಳನ್ನು ಕಾಳಿದಾಸ ಕಾವ್ಯಸಪ್ತಾಹದ ಶ್ರೋತೃವರ್ಗದ ಬಗ್ಗೆಯೂ ಬರೆಯಲೇಬೇಕು. ಅಲ್ಲಿ, ಸಂಸ್ಕೃತವನ್ನು ಅರಗಿಸಿಕೊಂಡು ಭಾಷೆ-ಸಾಹಿತ್ಯಗಳ ಮೇಲೆ ಸಾಕಷ್ಟು ಪ್ರಭುತ್ವ ಗಳಿಸಿದವರಿದ್ದರು; ಮನೆಮಾತಾಗಿ ಸಂಸ್ಕೃತವನ್ನು ಬಳಸುವವರೂ ಇದ್ದರು. ಸಂಸ್ಕೃತ ಕಲಿಯುವ ವಿದ್ಯಾರ್ಥಿಗಳಿದ್ದರು; ಸಂಸ್ಕೃತ ಕಲಿಸುವ ಅಧ್ಯಾಪಕರೂ ಇದ್ದರು.
ಶಾಲೆ-ಕಾಲೇಜಿನಲ್ಲಿ ಅಂಕಗಳಿಗಾಗಿ ಸಂಸ್ಕೃತ ಕಲಿತು ಈಗ ಮರೆತುಹೋದವರಿದ್ದರು; ಇದುವರೆಗೂ ಸಂಸ್ಕೃತದ ಗಂಧಗಾಳಿ
ಇಲ್ಲದೆ ಕೇವಲ ಆಸಕ್ತಿಯಿಂದಷ್ಟೇ ಬಂದವರೂ ಇದ್ದರು!

ಲಿಂಗ-ವಯಸ್ಸು-ಸಾಮಾಜಿಕ ಹಿನ್ನೆಲೆಗಳ ಭೇದವಿಲ್ಲದೆ, ಭಾರತೀಯ ಸಂಸ್ಕೃತಿ ಮತ್ತು ಸಂಸ್ಕೃತದ ಬಗೆಗಿನ ಗೌರವವೇ ಅವರನ್ನೆಲ್ಲ ಅಲ್ಲಿಗೆ ಕರೆತಂದಿತ್ತು. ಕ್ಲಬ್‌ಹೌಸ್ ಕಾರ್ಯಕ್ರಮದಲ್ಲಿ ಪ್ರತಿದಿನವೂ ಒಬ್ಬಿಬ್ಬರು ಶ್ರೋತೃಗಳಿಗೆ ಅನಿಸಿಕೆ ವ್ಯಕ್ತಪಡಿ ಸುವ ಅವಕಾಶವಿರುತ್ತಿತ್ತು. ಅವರೆಲ್ಲ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದರು. ಅದಕ್ಕಿಂತಲೂ ಹೆಚ್ಚಾಗಿ, ಉಪನ್ಯಾಸ ಮುಗಿದ ಮೇಲೆ
ವಾಟ್ಸ್ಯಾಪ್ ಗ್ರೂಪ್‌ನಲ್ಲಿ ವ್ಯಕ್ತವಾಗುತ್ತಿದ್ದ ಅನಿಸಿಕೆಗಳು! ಅವು ಗಳನ್ನು ಓದಿದಾಗಂತೂ ಬರೆದವರ ಸದಭಿರುಚಿ, ಸಾಹಿತ್ಯಾಸಕ್ತಿ,
ಅಭಿಪ್ರಾಯ ಮಂಡನೆಯ ವೈಖರಿಗಳು ಅವರ ಬಗೆಗೆ ಅಭಿಮಾನ ಮೂಡಿಸುವಂತೆ ಇರುತ್ತಿದ್ದುವು.

ಕನ್ನಡದ ಪ್ರಸಿದ್ಧ ಹಾಸ್ಯಸಾಹಿತಿ ಎಂ. ಎಸ್. ನರಸಿಂಹ ಮೂರ್ತಿಯವರು ಪ್ರತಿದಿನವೂ ಶ್ರೋತೃವಾಗಿ ಭಾಗವಹಿಸಿ, ಸಮಾರೋಪದ ದಿನ ಸುಂದರ ಶಬ್ದಗಳಲ್ಲಿ ಇಡೀ ಸಪ್ತಾಹದ ಸಿಂಹಾವಲೋಕನವೆಂಬಂತೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಮೈತ್ರೀ ಪ್ರತಿಷ್ಠಾನಮ್‌ನ ಎಲ್ಲ ಕಾರ್ಯಯೋಜನೆಗಳಿಗೂ ನಿರಂತರ ಪ್ರೋತ್ಸಾಹ ನೀಡುತ್ತಿರುವ ಅವರ ಬಗ್ಗೆ ಡಾ. ಗಣಪತಿ ಹೆಗಡೆಯವರಿಗೆ ಬಹಳ ಹೆಮ್ಮೆ, ಗೌರವ. ಹಾಗೆಯೇ ನಿಘಂಟುತಜ್ಞ ಜಿ. ವೆಂಕಟಸುಬ್ಬಯ್ಯನವರ ಪುತ್ರ ಜಿ.ವಿ.ಅರುಣ್ ಅವರೂ ಒಂದು ದಿನ ಉಪನ್ಯಾಸದ ಕೊನೆಯಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದರು.

ಒಟ್ಟಿನಲ್ಲಿ, ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಎಂಬುದರ ಅಕ್ಷರಶಃ ಅನುಭವ ಕಾವ್ಯರಸಧಾರೆಯಲ್ಲಿ ಮಿಂದೆದ್ದ ಎಲ್ಲರಿಗೂ. ಇದಿಷ್ಟನ್ನು ಓದಿದಾಗ ನಿಮ್ಮಲ್ಲಿ ಕೆಲವರಿಗಾದರೂ ‘ಛೇ! ನನಗಿದರ ಬಗ್ಗೆ ಗೊತ್ತೇ ಆಗಲಿಲ್ಲವಲ್ಲ… ಇಂಥದೊಂದು
ಮೌಲ್ಯಯುತ ಸರಣಿಯನ್ನು ಮಿಸ್ ಮಾಡಿಕೊಂಡೆನಲ್ಲ…’ ಎಂದು ಅನಿಸಿರಬಹುದು. ನಿಮ್ಮ ಮೊಬೈಲ್‌ನಲ್ಲಿ ಕ್ಲಬ್ ಹೌಸ್ ಸ್ಥಾಪಿಸಿಕೊಂಡು ‘ಸಂಸ್ಕೃತ ಗುರುಕುಲಮ್ (ಮೈತ್ರೀ ಪ್ರತಿಷ್ಠಾನಮ್)’ ಕ್ಲಬ್ ಹುಡುಕಿ ಅದನ್ನು ಸೇರಿಕೊಂಡರೆ ಸರಣಿಯ ಧ್ವನಿಮುದ್ರಣಗಳು ಸಿಗಬಹುದು. ಅಲ್ಲದೇ ಈ ಎಲ್ಲ ಉಪನ್ಯಾಸಗಳ ಆಡಿಯೊಕ್ಲಿಪ್ಸ್ ಸಂಸ್ಕರಿಸಿ ಸ್ವಚ್ಛಗೊಳಿಸಿ ಯುಟ್ಯೂಬ್‌ನಲ್ಲಿ ಪ್ರಸಾರಿಸುವ ಆಲೋಚನೆ ಇದೆಯಂತೆ.

ಉಪನ್ಯಾಸಕರು ಮಾಡಿಕೊಂಡಿದ್ದ ಟಿಪ್ಪಣಿಗಳನ್ನೇ ಇನ್ನಷ್ಟು ವಿಸ್ತರಿಸಿ ಅವೆಲ್ಲವನ್ನೂ ಕ್ರೋಡೀಕರಿಸಿ ಪುಸ್ತಕರೂಪದಲ್ಲಿ
ಪ್ರಕಟಿಸುವ ಯೋಜನೆಯೂ ಇದೆ. ಕಾವ್ಯಸಪ್ತಾಹದ ಶ್ರೋತೃವರ್ಗವೇ ಇದಕ್ಕೆ ಹಕ್ಕೊತ್ತಾಯ ಮಾಡಿದೆ. ನಾವೇ ದೇಣಿಗೆ ಸಲ್ಲಿಸಿ ಅದು ಕಾರ್ಯಗತವಾಗುವಂತೆ ಮಾಡುತ್ತೇವೆಂದು ಕೆಲವರು ಮುಂದೆ ಬಂದಿದ್ದಾರೆ. ಇವೆಲ್ಲ ಒಳ್ಳೆಯ ಬೆಳವಣಿಗೆಗಳು. ಮುಖ್ಯವಾಗಿ ಈಗಿನ ಸರಕಾರವು ಜಿದ್ದಿನಿಂದ ಸಿದ್ಧಾಂತಗಳ ದ್ವೇಷದಿಂದ ಆ ಪಾಠ ಕಿತ್ತುಹಾಕುತ್ತೇವೆ ಈ ಪಾಠ ಸೇರಿಸುತ್ತೇವೆ ಎಂಬ ಅಸಹ್ಯ ಅಪಸವ್ಯಗಳಲ್ಲಿ ತೊಡಗಿರುವಾಗ, ಭಾರತೀಯ ಸಂಸ್ಕೃತಿ ಸಾಹಿತ್ಯ ಪರಂಪರೆಯ ಉನ್ನತ ಮೌಲ್ಯಗಳನ್ನು ಹೊಸ
ತಲೆಮಾರಿನವರಿಗೆ ಪರಿಚಯಿಸುವ, ಪ್ರೇರಣೆ ನೀಡುವ ಇಂತಹ ರಚನಾತ್ಮಕ ಕೆಲಸಗಳು, ಸ್ವಾರ್ಥರಹಿತ ಸಮಷ್ಟಿಪ್ರಜ್ಞೆಯಿಂದ ನಡೆದರೆ ಇದಕ್ಕಿಂತ ಒಳ್ಳೆಯದು ಇನ್ನೇನಿದೆ! ಹೌದೋ ಅಲ್ಲವೋ ಎಂದು ಪರೀಕ್ಷಿಸಲು ನೀವು ಈ ಒಂದು ಯುಟ್ಯೂಬ್ ವಿಡಿಯೊವನ್ನು ಆಲಿಸಬೇಕು.

ಕಾಳಿದಾಸ ಕಾವ್ಯಸಪ್ತಾಹದ ಉಪನ್ಯಾಸಗಳು ಎಷ್ಟು ಉತ್ಕೃಷ್ಟವಾಗಿದ್ದವೆಂಬುದಕ್ಕೆ ಇದೊಂದು ಸ್ಯಾಂಪಲ್. ವಿದ್ವಾನ್
ಉಮಾಕಾಂತ ಭಟ್ ಅವರಿಂದ ಮೇಘದೂತಮ್ ಕಾವ್ಯದ ಅದ್ಭುತ ವಿಶ್ಲೇಷಣೆ. ಅಸ್ಖಲಿತ ವಾಗ್ಝರಿ. ಈ ಧ್ವನಿಮುದ್ರಣವನ್ನು
ಸಂಸ್ಕರಿಸಿ ಯುಟ್ಯೂಬ್‌ಗೆ ಏರಿಸಿದ್ದು ನಾನೇ. ಸುಮಾರು ಒಂದು ಗಂಟೆ ಅವಧಿಯದಿದೆ. ನೀವು ಇದನ್ನೊಮ್ಮೆ ಅಲಿಸಬೇಕು. ಅಲ್ಲ,
ಅನುಭವಿಸಬೇಕು. ಇದು ಮೈ-ಮನದೊಳಗೆ ಇಳಿಯುವಾಗಿನದೊಂದು ವಿಶೇಷ ಅನುಭೂತಿ ನಿಮ್ಮದಾಗಬೇಕು.

ಲಿಂಕ್ ಇಲ್ಲಿದೆ…bit.ly/meghadutam

Leave a Reply

Your email address will not be published. Required fields are marked *

error: Content is protected !!