Saturday, 27th July 2024

ಜೀವ ಕೈಯಲ್ಲಿ ಹಿಡಿದಿರುವ ವೈದ್ಯರು

ವೈದ್ಯಲೋಕ

ಡಾ.ಕರವೀರಪ್ರಭು ಕ್ಯಾಲಕೊಂಡ

ವೈದ್ಯವೃತ್ತಿ ಈಗ ಕವಲುದಾರಿಯಲ್ಲಿ ನಿಂತಿದೆ. ವೈದ್ಯ-ರೋಗಿಗಳ ಸಂಬಂಧ ಹಳಸಿದೆ. ವಿಶ್ವಾಸ-ನಂಬಿಕೆ ನೆಲೆಕಚ್ಚಿವೆ. ಜನರ ನಿರೀಕ್ಷೆಗಳು ಗಗನಕ್ಕೇ
ರಿವೆ. ಸಹನೆ, ಸಂಯಮ ಜನಮಾನಸದಿಂದ ಮಾಯವಾಗಿವೆ. ಸರಕಾರಿ ಆಸ್ಪತ್ರೆಗಳಲ್ಲಿನ ವೈದ್ಯರ ಅಲಭ್ಯತೆ, ಔಷಧಿ, ಸಲಕರಣೆ, ಪರಿಕರಗಳ ಕೊರತೆ, ಖಾಸಗಿ ಆಸ್ಪತ್ರೆಗಳ ಮೇಲಿನ ಒತ್ತಡ ಹೆಚ್ಚಾಗಿವೆ. ಇವೆಲ್ಲ ಗೊಂದಲ-ಗೌಜುಗಳು ವೈದ್ಯರ ಮೇಲಿನ ಹಲ್ಲೆಗೆ ನಾಂದಿಹಾಡಿವೆ.

ತಮ್ಮವರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗಲಿಲ್ಲ ಎನಿಸಿದಾಗಲೋ, ತಮ್ಮವರು ಆಸ್ಪತ್ರೆಯಲ್ಲಿ ಅಸುನೀಗಿದಾಗಲೋ ಸಹನೆ ಕಳೆದುಕೊಳ್ಳುವ ಕೆಲ ಜನರು ವೈದ್ಯರೊಂದಿಗೆ ವಾಗ್ಯುದ್ಧಕ್ಕೆ ಇಳಿಯುವುದಿದೆ, ಆಕ್ರಮಣ ಮಾಡುವುದಿದೆ. ಕೋವಿಡ್ ಮಹಾಮಾರಿ ಅಪ್ಪಳಿಸಿದಾಗ ವೈದ್ಯರು ತಮ್ಮ ಪ್ರಾಣ ವನ್ನು ಪಣಕ್ಕಿಟ್ಟು ರೋಗಿಗಳಿಗೆ ಸೇವೆ ಸಲ್ಲಿಸಿದ್ದರೂ, ಚಿಕಿತ್ಸೆ ಫಲಿಸದೆ ರೋಗಿ ಸತ್ತಾಗ ಅವರ ಸಂಬಂಧಿಕರು ಇಲ್ಲಸಲ್ಲದ ಆರೋಪ ಮಾಡುತ್ತ ವೈದ್ಯರ, ಸಹಾಯಕ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಿದೆ.

ಕೆಟ್ಟ ರಸ್ತೆ ನಿರ್ಮಿಸಿದವರನ್ನು, ಭ್ರಷ್ಟ ಅಧಿಕಾರಿಗಳನ್ನು, ಕುಡುಕ ಚಾಲಕನನ್ನು, ಕಳಪೆ ತಿನಿಸು ನೀಡಿದ ಹೋಟೆಲ್ ಮಾಲೀಕರನ್ನು ಎಂದಿಗೂ ಬೈಯದ- ಬಡಿಯದ ಕೆಲ ಜನರು, ತಮ್ಮ ನಿರೀಕ್ಷೆ ನೆರವೇರಲಿಲ್ಲ ಎಂಬ ಕಾರಣಕ್ಕೆ ವೈದ್ಯರ ಮೇಲೆ ಹಲ್ಲೆ ಮಾಡಲು ಮರೆಯುವುದಿಲ್ಲ. ವೈದ್ಯವೃತ್ತಿಯು ಪ್ರಸಕ್ತ ಕಾಲಘಟ್ಟದಲ್ಲಿ ಗೊಂದಲ ಮತ್ತು ದ್ವಂದ್ವದ ಬಲೆಯಲ್ಲಿ ಸಿಲುಕಿದೆ. ತಮ್ಮ ಮೇಲೆ ಹೀಗೆ ಆಗುವ ದಾಳಿಯನ್ನು ಕಂಡಾಗ, ಆಸ್ಪತ್ರೆಯಲ್ಲಿ ರುವುದಕ್ಕಿಂತ ಮನೆಯಲ್ಲೇ ಇದ್ದು ನೆಮ್ಮದಿಯಿಂದ ಉಸಿರು ಬಿಡುವುದು ಲೇಸು ಎಂಬ ನಕಾರಾತ್ಮಕ ಚಿಂತನೆಗಳು ವೈದ್ಯರಲ್ಲಿ ಹರಳುಗಟ್ಟುತ್ತಿವೆ.

ವೈದ್ಯರನ್ನು ದೇವರಾಗಿ ಕಾಣುವುದು ಬಿಡಿ, ಒಬ್ಬ ಮನುಷ್ಯನಾಗಿ ನೋಡಿದರೆ ಸಾಕಾಗಿದೆ. ವೈದ್ಯರು ತಮ್ಮ ಇತಿಮಿತಿಯೊಳಗೆ ಬಹಳ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಕಠಿಣ ಪರಿಸ್ಥಿತಿಯಿದೆ. ಹೀಗಿರುವಾಗ ವೈದ್ಯರು ಮತ್ತು ಆಸ್ಪತ್ರೆಗಳ ಮೇಲೆ ದಾಳಿ ನಡೆಸುವುದು ಎಷ್ಟು ಸರಿ? ಬದಲಿಗೆ, ರೋಗಿಯ ಸಂಬಂಧಿಕರು ವಾಸ್ತವವನ್ನು ಅರಿತು ವೈದ್ಯ ರೊಂದಿಗೆ ತಾಳ್ಮೆಯಿಂದ ವರ್ತಿಸಿದಲ್ಲಿ, ಅವರು ತಮ್ಮ ವೃತ್ತಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ.

ಗ್ರಾಹಕರ ರಕ್ಷಣಾ ಕಾನೂನನ್ನು ಸರಕಾರ ಜಾರಿಗೆ ತಂದಾಗಲೇ ವೈದ್ಯ ವೃತ್ತಿಯಲ್ಲಿಯ ಸೇವಾ ಮನೋಭಾವ ನೇಪಥ್ಯಕ್ಕೆ ಸರಿಯಿತು, ಉದ್ದಿಮೆಯಾಗಿ ಬೆಳೆಯಿತು. ವೈದ್ಯನು ತನ್ನ ಹಾಗೂ ತನ್ನ ವೃತ್ತಿಯ ರಕ್ಷಣೆಗಾಗಿ ‘ಎವಿಡೆನ್ಸ್ ಬೇಸ್ಡ್ ಪ್ರಾಕ್ಟೀಸ್’ ಆರಂಭಿಸಿದ. ಅದು ಜನರಿಗೆ ವಿಚಿತ್ರವಾಗಿ ಕಾಣಿಸಿತು. ಅವರು ಶಿಫಾರಸು ಮಾಡುವ ಪರೀಕ್ಷೆಗಳಿಗೆ ‘ಹಣ ಸುಲಿಗೆಯ ಹೊಸರೂಪ’ ಎಂಬ ಆರೋಪ ಬಂತು. ಹೀಗಾಗಿ, ವೈದ್ಯ ಮತ್ತು ರೋಗಿಯ ನಡುವಿನ ಬಿರುಕು ದೊಡ್ಡದಾಯಿತು, ಕಾದಾಟಕ್ಕೆ ಕಾರಣವಾಯಿತು. ಈ ವೇಳೆ ಹೊತ್ತಿದ ಬೆಂಕಿಗೆ ಕೆಲ ಮಾಧ್ಯಮಗಳು ತುಪ್ಪ ಸುರಿದವು. ನಮ್ಮನ್ನಾಳುವ ಪ್ರತಿನಿಧಿ ಗಳಲ್ಲಿ ಕೆಲವರು ತಮ್ಮ ಬೇಳೆ ಬೇಯಿಸಿ ಕೊಳ್ಳಲು ವೈದ್ಯರ ಮೇಲಿನ ಹಲ್ಲೆಗೆ ಕುಮ್ಮಕ್ಕು ನೀಡಿದರು.

ಒಟ್ಟಾರೆಯಾಗಿ, ಇಂಥ ದ್ವಂದ್ವ, ಗೊಂದಲಗಳ ಚಕ್ರವ್ಯೂಹದಲ್ಲಿ ವೈದ್ಯರು ಬಲಿಪಶು ಆಗುತ್ತಿರುವುದು ದೊಡ್ಡ ದುರಂತ. ವೈದ್ಯ ಮತ್ತು ರೋಗಿಯ ನಡುವಿನ ಬಾಂಧವ್ಯ ಹದಗೆಟ್ಟಿರುವುದೇ ವೈದ್ಯರ ಮೇಲಿನ ಹಲ್ಲೆಗಳಿಗೆ ಕಾರಣ ಎನ್ನುವುದಾದರೆ, ಆ ಬಾಂಧವ್ಯವನ್ನು ಪುನಃ ಗಟ್ಟಿಗೊಳಿಸುವುದು
ಹೇಗೆ? ಹಲ್ಲೆಗಳಿಂದಲೇ ಈ ಸಮಸ್ಯೆಯನ್ನು ಬಗೆಹರಿಸಬಹುದೆಂಬ ಜನರ ತಪ್ಪು ತಿಳಿವಳಿಕೆಯೇ ಇಂಥ ಘಟನೆಗಳಿಗೆ ಕಾರಣ ಎಂದಾದಲ್ಲಿ ಅದನ್ನು ಕಿತ್ತುಹಾಕುವುದು ಹೇಗೆ? ದುಬಾರಿ ಯಾಗಿರುವ ವೈದ್ಯಕೀಯ ಸೇವೆಗಳೇ ದಾಳಿಗೆ ಮೂಲಕಾರಣ ಎನ್ನುವುದಾದರೆ, ಅದನ್ನು ಕಡಿಮೆ ಮಾಡಲು ಸಾಧ್ಯವೇ?
ಉತ್ಪಾದನೆಗೆ ತಗಲುವ ವೆಚ್ಚದ ಮೇಲೆ ಯಾವುದೇ ಸೇವೆಯ ಬೆಲೆ ನಿಗದಿಯಾಗುತ್ತದೆ/ಅವಲಂಬಿತವಾಗಿರುತ್ತದೆ.

ವೈದ್ಯಕೀಯವೂ ಇದಕ್ಕೆ ಹೊರತಲ್ಲ. ವೈದ್ಯಕೀಯ ಶಿಕ್ಷಣ ಅತ್ಯಂತ ದುಬಾರಿಯಾಗಿದೆ. ಅದು ದೀರ್ಘಕಾಲಿಕವೂ ಹೌದು. ವಿದ್ಯಾರ್ಥಿಗಳು ೬ ವರ್ಷದ ವೈದ್ಯಪದವಿ ಮುಗಿಸುವುದರೊಳಗೆ ಅವರ ಪೋಷಕರು ಹೈರಾಣಾಗಿರುತ್ತಾರೆ. ಸರಕಾರಿ ಸೀಟು ಪಡೆದು ಪಾಸಾಗಬೇಕಾದರೆ ಈಗ ತಗಲುವ ವೆಚ್ಚ ಸುಮಾರು ಅರ್ಧ ಕೋಟಿ; ಖಾಸಗಿ ಕಾಲೇಜಾದರೆ ಅದು ಒಂದು ಕೋಟಿಯಾಗಬಹುದು. ಬ್ಯಾಂಕ್ ಸಾಲ ಮಾಡದೇ ವೈದ್ಯಕೀಯ ಕಲಿಯುವುದು ಕಷ್ಟ. ವೈದ್ಯ ವಿದ್ಯಾರ್ಥಿಗಳು ಪದವಿ ಮುಗಿಸುವ ಹೊತ್ತಿಗೆ, ಅವರ ಶಾಲಾ ಸಹಪಾಠಿಗಳು ಗಳಿಕೆಯಲ್ಲಿ ವ್ಯಸ್ತರಾಗಿರುತ್ತಾರೆ.

ಈಗ ಬರೀ ವೈದ್ಯಕೀಯ ಪದವಿ ಪಡೆದರೆ ಪ್ರಯೋಜನವಿಲ್ಲ; ಸ್ನಾತಕೋತ್ತರ ಪದವಿ ಬೇಕು. ಸೂಪರ್ ಸ್ಪೆಷಾಲಿಟಿ ಕಾಲವಿದು, ಅದಕ್ಕೂ ಸಜ್ಜಾಗಬೇಕು. ಒಟ್ಟಿನಲ್ಲಿ ವೈದ್ಯನಾಗಿ ಬದುಕು ಪ್ರಾರಂಭಿಸುವ ಹೊತ್ತಿಗೆ ಗಣನೀಯ ವರ್ಷಗಳು ಮುಗಿದಿರುತ್ತವೆ. ನಂತರ ಕ್ಲಿನಿಕ್/ಆಸ್ಪತ್ರೆ ಪ್ರಾರಂಭಿಸಲು ಕಟ್ಟಡ, ಯಂತ್ರೋಪಕರಣ, ಅರೆವೈದ್ಯಕೀಯ ಸಿಬ್ಬಂದಿ ಬೇಕು. ಇವು ಕೈಗೂಡುವ ಹೊತ್ತಿಗೆ ತಲೆಯ ಮೇಲೆ ಕೈ ಹೊತ್ತು ಕೂರುವುದೊಂದು ಬಾಕಿ. ಮತ್ತೆ ಬ್ಯಾಂಕಿನ ಸಾಲಕ್ಕೆ ಮೊರೆ ಹೋಗಬೇಕು. ಕಲಿಯುವಾಗಿನ ಸಾಲ, ಕಟ್ಟಡ- ಯಂತ್ರೋ ಪಕರಣಗಳ ಸಾಲ, ಒಟ್ಟಿನಲ್ಲಿ ವೈದ್ಯ ಎನಿಸಿ ಕೊಂಡವನು
ಸಾಲದ ಸುಳಿಯಲ್ಲಿ ಸಿಕ್ಕು ತಿರುಗುತ್ತಿರುತ್ತಾನೆ. ಸಣ್ಣ ಉದ್ದಿಮೆ ಪ್ರಾರಂಭಿಸುವವರಿಗೆ ಸರಕಾರದ ಸಬ್ಸಿಡಿ ಸಿಗುತ್ತದೆ.

ಆದರೆ, ವೈದ್ಯಕೀಯ ಕ್ಷೇತ್ರದಲ್ಲಿ ಅದಕ್ಕೆ ಅವಕಾಶವೇ ಇಲ್ಲ. ವಾಣಿಜ್ಯ ಮಯವಾಗಿರುವ ವೈದ್ಯ ವೃತ್ತಿ, ವೈದ್ಯಕೀಯ ಸೇವೆಯನ್ನು ಕಾನೂನಿನಡಿ ನಿಯಂತ್ರಿ ಸಲು ಅನುಸರಿಸಲಾಗುತ್ತಿರುವ ಪದ್ಧತಿಗಳು, ತಮ್ಮ ಭದ್ರತೆ ಗಾಗಿ ವೈದ್ಯರು ಅನುಸರಿಸುತ್ತಿರುವ ದುಬಾರಿ ಬೆಲೆಯ ರೋಗಪತ್ತೆ ವಿಧಾನಗಳ ನ್ನೊಳಗೊಂಡ ರಕ್ಷಣಾತ್ಮಕ ವೈದ್ಯಕೀಯ ಸೇವೆ, ಹದಗೆಟ್ಟ ಆಡಳಿತಾತ್ಮಕ- ಸಾಮಾಜಿಕ- ರಾಜಕೀಯ ವ್ಯವಸ್ಥೆಗಳು ಇತ್ಯಾದಿ ಕಾರಣಗಳಿಂದಾಗಿ ವೈದ್ಯ -ರೋಗಿಯ ನಡುವಿನ ವಿಶ್ವಾಸದ ಕೊಂಡಿ ಕಳಚಿ ಬೀಳುತ್ತಿದೆ.

ಒಬ್ಬರನ್ನೊಬ್ಬರು ಸಂಶಯದಿಂದ ನೋಡುವಂತಾಗಿ ಪವಿತ್ರ ವಾದ ವೈದ್ಯಕೀಯ ಸೇವೆ ಇಂದು ಅಡ್ಡದಾರಿ ಹಿಡಿಯುತ್ತಿದೆ. ವೈದ್ಯರನ್ನು ನೋಡುವ ಮುನ್ನ ‘ಇವರು ಎಲ್ಲಿ ನನ್ನನ್ನು ಸುಲಿದು ಬಿಡುತ್ತಾರೋ?’ ಎಂಬ ಅನುಮಾನ ರೋಗಿಗೆ, ‘ರೋಗಿಯು ನನ್ನನ್ನು ಯಾವ ಕಾನೂನು ಕಟ್ಟಳೆಗೆ ಎಳೆದು ಬಿಡುತ್ತಾರೋ?’ ಎಂಬ ಆತಂಕ ವೈದ್ಯರಿಗೆ ಉಂಟಾಗುವ ಸಂದಿಗ್ಧ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ.

ಇಂಥ ಅನು ಮಾನದ ವಾತಾವರಣದಲ್ಲಿ ಪರಸ್ಪರರ ನಡುವೆ ನಂಬಿಕೆ- ವಿಶ್ವಾಸ ಬೆಳೆಯಲು ಸಾಧ್ಯವೇ? ಖಂಡಿತಾ ಇಲ್ಲ. ವೈದ್ಯ ಎಲ್ಲ ರೋಗಗಳನ್ನೂ ವಾಸಿಮಾಡುವ ಜೈವಿಕ ಯಂತ್ರವಲ್ಲ. ಪ್ರತಿಯೊಂದು ಕಾಯಿಲೆಗೂ ಅದರದ್ದೇ ಆದ ಭವಿಷ್ಯಗತಿ ಇದ್ದು, ಸಮರ್ಥವಾಗಿ ಚಿಕಿತ್ಸೆ ನೀಡಿದರೂ ವಾಸಿ
ಯಾಗದೆ ರೋಗಿ ಸಾವನ್ನಪ್ಪುವ ಸಾಧ್ಯತೆಗಳೂ ಇರುತ್ತವೆ. ತೀವ್ರ ನಿಗಾ ಘಟಕದ ರೋಗಿಗಂತೂ ಅಲ್ಲಿಂದ ಹೊರಬರುವ ವರೆಗೆ ಜೀವಭಯ ಇದ್ದೇ ಇರುತ್ತದೆ. ಯಾವ ವೈದ್ಯನೂ ತನ್ನ ರೋಗಿ ಸಾಯಬೇಕೆಂದು ಕನಸಿನಲ್ಲೂ ಬಯಸುವುದಿಲ್ಲ.

ರೋಗಿಯನ್ನು ಪರಿಣಾಮಕಾರಿಯಾಗಿ ಗುಣಪಡಿಸಲು ವೈದ್ಯರು ನೀಡುವ ಔಷಧಗಳು ಎಷ್ಟು ಮುಖ್ಯವೋ, ವೈದ್ಯರ ಮೇಲಿನ ನಂಬಿಕೆ-ವಿಶ್ವಾಸಗಳೂ ಅಷ್ಟೇ ಮುಖ್ಯ. ‘ವೈದ್ಯರು ದೇವಮಾನವರಲ್ಲ, ಅವರೂ ನಮ್ಮಂತೆ ಮನುಷ್ಯರು. ಅವರಿಗೂ ಅವರದ್ದೇ ಆದ ಇತಿಮಿತಿಗಳಿವೆ’ ಎಂಬುದನ್ನು ಸಮಾಜ ಅರಿಯಬೇಕು. ವೈದ್ಯರು ಮತ್ತು ರೋಗಿಗಳು ತಂತಮ್ಮ ಹೊಣೆಗಾರಿಕೆ, ಕರ್ತವ್ಯಗಳನ್ನು ಅರಿತು ಆಚರಿಸಿದಲ್ಲಿ, ವೈದ್ಯ-ರೋಗಿ ನಡುವಿನ ಅನವಶ್ಯಕ ಸಂಘರ್ಷ ಕೊನೆ ಗೊಳ್ಳಬಹುದು. ನಮ್ಮೆಲ್ಲರ ಒಳಿತು ಅದರಲ್ಲಿಯೇ ಅಡಗಿದೆ ಎಂಬುದನ್ನು ಮರೆಯಬಾರದು.

(ಲೇಖಕರು ವಿಶ್ರಾಂತ ಜಿಲ್ಲಾ ಶಸ್ತ್ರಚಿಕಿತ್ಸಕರು)

Leave a Reply

Your email address will not be published. Required fields are marked *

error: Content is protected !!