Friday, 21st June 2024

ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು…

ತಿಳಿರು ತೋರಣ

srivathsajoshi@yahoo.com

ಅಮೆರಿಕ ದೇಶಕ್ಕೆ ಬಂದಮೇಲೆ ಇಲ್ಲಿ ಚಳಿಗಾಲದಲ್ಲಿ ಗಿಡಮರಗಳೆಲ್ಲ ಬೋಳಾಗಿ ಸತ್ತೇಹೋದವೋ ಎಂಬಂತಾಗುವುದನ್ನು, ವಸಂತ ಋತುವಿನಲ್ಲಿ ಚಿಗುರಿ ನಳನಳಿಸುವುದನ್ನು ಗಮನಿಸಿದೆ. ಅಳಿಲು, ಜಿಂಕೆ, ಬಾತುಕೋಳಿ ಮುಂತಾದುವೆಲ್ಲ ಚಳಿಗಾಲದಲ್ಲಿ ಎಲ್ಲೋ ನಾಪತ್ತೆಯಾಗಿ ಸ್ಪ್ರಿಂಗ್ ಸೀಸನ್ ಬಂತೆಂದರೆ ಮತ್ತೆ ಪ್ರತ್ಯಕ್ಷವಾಗುವುದನ್ನು ಕಂಡೆ. ಬೇಂದ್ರೆ ಬರೆದದ್ದು ಎಷ್ಟು ಅರ್ಥಪೂರ್ಣ, ಎಂಥ ಸೋಜಿಗವಿದೆ ಈ ಸೃಷ್ಟಿಯಲ್ಲಿ ಅಂತನಿಸಿತು.

ಅಖಿಲ ಜೀವಜಾಲಕ್ಕೆ ‘ವರ್ಷಕ್ಕೊಂದು ಹೊಸತು ಜನ್ಮ’ ಎಂದ ಬೆನ್ನಲ್ಲೇ ಅದೇ ಚರಣದಲ್ಲಿ ಮುಂದೆ ‘ನಮಗೆ ಮಾತ್ರ ಒಂದೇ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಒಂದೇ ಹರೆಯ, ಹೀಗೇಕೆ?’ ಎಂದು ಪ್ರಶ್ನಿಸಿದ್ದಾರೆ ವರಕವಿ ದ.ರಾ. ಬೇಂದ್ರೆ. ಹಾಗಾದರೆ ನಾವು ಮನುಷ್ಯರು ಅಖಿಲ ಜೀವಜಾತಗಳ ಪೈಕಿಯವರಲ್ಲವೇ? ಬೇಂದ್ರೆಯವರ ಈ ಜನಪ್ರಿಯ ಕವಿತೆ ಯಲ್ಲಿ, ಮುಖ್ಯವಾಗಿ ಈ ಒಂದು ಚರಣದಲ್ಲಿ ವಿಶೇಷ ಚಿಂತನೆಗೆ ಗ್ರಾಸವಿದೆ; ಮಿದುಳಿಗೆ ಮೇವು ಇದೆ; ವಿಜ್ಞಾನದ ಒರೆಗಲ್ಲಿಗೆ ತಿಕ್ಕಿದರೆ ಇಲ್ಲೊಂದು ಫಳಫಳ ಹೊಳೆಯುವ ವಿಚಾರವಿದೆ ಎಂದು ನನ್ನ ಅಂಬೋಣ. ಏನದು ಎಂದು ಆಮೇಲೆ ವಿವರಿಸುತ್ತೇನೆ.

ಅದಕ್ಕೆ ಮುಂಚೆ ಯುಗಾದಿಗೆ ಸಂಬಂಧಿಸಿದಂತೆಯೇ ಇನ್ನೂ ಒಂದೆರಡು ಉಪಯುಕ್ತ ‘ತಿಳಿ’ಗಾಳು ಗಳನ್ನು ಸವಿಯೋಣ. ಈ ಸಂವತ್ಸರದ ಹೆಸರು ‘ಶೋಭಕೃತ್’ ಸರಿಯೇ ಅಥವಾ ‘ಶೋಭನ’ ಎಂದಿರಬೇಕೇ ಅಂತೊಂದು ಜಿಜ್ಞಾಸೆ. ಕೆಲವೆಡೆ ‘ಶೋಭನಕೃತ್’ ಅಂತ ಸಹ ಇದೆಯೆಂದು ಉಲ್ಲೇಖ ಗಳಿವೆ. ಒಟ್ಟಾರೆಯಾಗಿ ಈ ಸಂವತ್ಸರ ಅಂತಲ್ಲ ಬೇರೆ ಕೆಲವದರ ಹೆಸರಿನ ಬಗ್ಗೆಯೂ ಜಿಜ್ಞಾಸೆಗಳು ಬಂದಿವೆ, ಚರ್ಚೆಗಳಾಗಿವೆ, ಮುಂದೆಯೂ ಆಗುತ್ತವೆ. ಅದಕ್ಕೆ ಮುಖ್ಯ ಕಾರಣವೆಂದರೆ ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ಅಥವಾ ತಾಳೆಗರಿಗಳ ಮೇಲಿನ ಬರವಣಿಗೆಯ ಮೂಲಕ ಹರಿದುಬಂದ ಇಂಥ ವಿಚಾರಗಳಲ್ಲಿ ಪಾಠಾಂತರಗಳಿರುವುದು ಸಾಮಾನ್ಯ. ಅಂದರೆ ಒಂದು ಗ್ರಂಥದಲ್ಲಿರುವ ಆವೃತ್ತಿಯಿಂದ ಇನ್ನೊಂದು ಗ್ರಂಥದಲ್ಲಿರುವ ಆವೃತ್ತಿಗೆ ಚಿಕ್ಕಪುಟ್ಟ ವ್ಯತ್ಯಾಸಗಳು.

ಅದರಲ್ಲೂ ಹೆಸರುಗಳ ಉದ್ದ ಪಟ್ಟಿಯನ್ನು ಶ್ಲೋಕ ರೂಪದಲ್ಲಿ ಹೇಳಿದಾಗ ಸಂಧಿಗಳಿಂದಾಗಿ ಹೆಸರುಗಳು ಬದಲಾದಂತೆ ಕಾಣುವುದು. ಸಂವತ್ಸರಗಳ ಹೆಸರನ್ನು ಆರು ಶ್ಲೋಕಗಳಲ್ಲಿ ತಿಳಿಸುವ ಈ ವಿಧಾನವನ್ನು ಗಮನಿಸಿ: ಪ್ರಭವೋ ವಿಭವಃ ಶುಕ್ಲಃ ಪ್ರಮೋದೋಧಿಥ ಪ್ರಜಾಪತಿಃ ಅಙ್ಗಿರಾ ಶ್ರೀಮುಖೋ ಭಾವೋ ಯುವಾ ಧಾತಾ ತಥೈವ ಚ| ಈಶ್ವರೋ ಬಹುಧಾನ್ಯಶ್ಚ ಪ್ರಮಾಥೀ ವಿಕ್ರಮೋ ವೃಷಃ ಚಿತ್ರಭಾನುಃ ಸುಭಾನುಶ್ಚ ತಾರಣಃ ಪಾರ್ಥಿವೋ ಧಿವ್ಯಯಃ| ಸರ್ವಜಿತ್ಸರ್ವಧಾರೀ ಚ ವಿರೋಽ ವಿಕೃತಿಃ ಖರಃ ನನ್ದನೋ ವಿಜಯಶ್ಚೈವ ಜಯೋ ಮನ್ಮಥದುರ್ಮುಖೌ| ಹೇಮಲಮ್ಬೀ ವಿಲಮ್ಬೀ ಚ ವಿಕಾರೀ ಶಾರ್ವರೀ ಪ್ಲವಃ ಶುಭಕೃಚ್ಛೋಭನಃ ಕ್ರೋಽ ವಿಶ್ವಾವಸುಪರಾಭವೌ| ಪ್ಲವಙ್ಗಃ ಕೀಲಕಃ ಸೌಮ್ಯಃ ಸಾಧಾರಣೋ ವಿರೋಧಕೃತ್
ಪರಿಧಾವೀ ಪ್ರಮಾದೀ ಚ ಆನನ್ದೋ ರಾಕ್ಷಸೋ ನಲಃ| ಪಿಙ್ಗಲಃ ಕಾಲಯುಕ್ತಶ್ಚ ಸಿದ್ಧಾರ್ಥೀ ರೌದ್ರ ದುರ್ಮತಿಃ ದುನ್ದುಭೀ ರುಽರೋದ್ಗಾರೀ ರಕ್ತಾಕ್ಷಃ ಕ್ರೋಧನಃ ಕ್ಷಯಃ| ಯಾವುದೋ ಒಂದು ಗ್ರಂಥದಲ್ಲಿ ಹೀಗೆ ಇದೆ ಅಂದುಕೊಳ್ಳೋಣ.

ಇದರಲ್ಲಿ ಆರಂಭದ ಪದ ‘ಪ್ರಭವೋ’ ಅಂತಿದೆಯಲ್ಲ? ಅದು, ಪ್ರಭವಃ + ವಿಭವಃ ಎರಡು ಪದಗಳು ವಿಸರ್ಗಸಂಧಿಯಲ್ಲಿ ಸೇರಿದಾಗ ಸಂಧಿ ನಿಯಮ ದಂತೆ ‘ಪ್ರಭವೋ ವಿಭವಃ’ ಆಗಿರುವುದು. ವಿಭವಃ + ಶುಕ್ಲಃ ಸಹ ವಿಸರ್ಗ ಸಂಧಿಯೇ; ಶುಕ್ಲಃ + ಪ್ರಮೋದಃ ಸಹ ವಿಸರ್ಗ ಸಂಧಿಯೇ. ಆದರೆ ಅಲ್ಲಿ ಬೇರೊಂದು ನಿಯಮದಿಂದಾಗಿ ವಿಸರ್ಗ ಹಾಗೆಯೇ ಉಳಿದುಕೊಳ್ಳುತ್ತದೆ. ಪ್ರಮೋದಃ + ಅಥ ಅಂತಿದ್ದದ್ದು ವಿಸರ್ಗ ಸಂಧಿ ನಿಯಮ ದಿಂದಾಗಿ ‘ಪ್ರಮೋದೋಧಿಥ’ ಎಂದಾಗುತ್ತದೆ. ಆದರೆ ಈ ಪ್ರಮೋದೋಧಿಥ ಏನಿರಬಹುದೆಂದು ಗೊತ್ತಾಗದೆ  ಕೆಲವು ಗ್ರಂಥಕಾರರು ‘ಪ್ರಮೋದೂತ’ ಎಂದು ಬರೆದರು. ಅಲ್ಲಿಗೆ ಆ ಸಂವತ್ಸರದ ಹೆಸರು ಪ್ರಮೋದ ಅಂತಿದ್ದದ್ದು ಪ್ರಮೋದೂತ ಎಂದು ಬದಲಾವಣೆ ಆಯ್ತು! ‘ಪಾರ್ಥಿವೋಧಿವ್ಯಯಃ’ ವನ್ನು
ಗಮನಿಸಿದಾಗ ಇನ್ನೊಂದು ಆಭಾಸ ಸ್ಪಷ್ಟವಾಗುತ್ತದೆ.

ಪಾರ್ಥಿವಃ + ಅವ್ಯಯಃ ಅಂತಿದ್ದರೆ ವಿಸರ್ಗ ಸಂಽಯಿಂದ ಪಾರ್ಥಿವೋಧಿ ವ್ಯಯಃ ಆಗುವುದು. ಆದರೆ ಅವಗ್ರಹ ಚಿಹ್ನೆಯ ಪರಿಚಯವಿಲ್ಲದವರು ಅಥವಾ ಬಳಕೆ ಗೊತ್ತಿಲ್ಲದವರು ಅದನ್ನು ‘ಪಾರ್ಥಿವೋ ವ್ಯಯಃ’ ಎಂದು ಬರೆದರು. ಅಲ್ಲಿಗೆ ‘ಅವ್ಯಯ’ ಅಂತಿದ್ದ ಹೆಸರು ಸಂಪೂರ್ಣ ವಿರುದ್ಧಾರ್ಥದ ‘ವ್ಯಯ’ ಆಗಿ ಬದಲಾವಣೆ ಯಾಯ್ತು! ಸುಭಾನು ಇದ್ದದ್ದು ಸ್ವಭಾನು ಆಗುವುದು, ಹೇಮಲಂಬೀ ಇದ್ದದ್ದು ಹೇವಿಳಂಬಿ ಆಗುವುದು, ರೌದ್ರ-ರಕ್ತಾಕ್ಷಗಳು
ಲಿಂಗ ಬದಲಾವಣೆಗೊಂಡು ರೌದ್ರೀ, ರಕ್ತಾಕ್ಷಿ ಆಗುವುದು… ಎಲ್ಲವೂ ಪಾಠಾಂತರ ಪರಿಣಾಮಗಳೇ. ಪ್ರಸ್ತುತ ಶೋಭನ/ ಶೋಭಕೃತ್ ವಿಚಾರವೂ ಹಾಗೆಯೇ. ನೀವೇ ಗಮನಿಸಬಹುದಾದಂತೆ ಮೇಲೆ ತಿಳಿಸಿರುವ ಶ್ಲೋಕದಲ್ಲಿ ಶುಭಕೃತ್ + ಶೋಭನಃ = ಶುಭಕೃಚ್ಛೋಭನಃ (ಶ್ಚುತ್ವಸಂಧಿ) ಆಗಿರುವುದು.

ಆದರೆ ‘ಶೋಭನ’ದ ಬದಲಿಗೆ ‘ಶೋಭಕೃತ್’ ಎಂದು ಬರೆದರೂ ತ್ ಎನ್ನುವ ಅರ್ಧಾಕ್ಷರ ಲೆಕ್ಕಕ್ಕಿಲ್ಲವಾದ್ದರಿಂದ, ಶುಭಕೃಚ್ಛೋಭಕೃತ್ಕ್ರೋಧಿ ಎಂದು ಬರೆದರೆ ಅನುಷ್ಟುಪ್ ಛಂದಸ್ಸಿಗೆ ತೊಂದರೆಯಾಗುವುದಿಲ್ಲವಾದ್ದರಿಂದ, ಯಾರೋ ಶಾಸ್ತ್ರಜ್ಞರು ಆ ಹೆಸರನ್ನು ಶೋಭಕೃತ್ ಎಂದೇ ಮಾಡಿಬಿಟ್ಟರು.
ಅನಂತರದವರು ಅದನ್ನೇ ಅನುಸರಿಸಿದರು. ಇನ್ನೊಬ್ಬರಾರೋ ಬೇರೆಯೇ ಒಂದು ಶ್ಲೋಕದಲ್ಲಿ ಛಂದಸ್ಸಿಗೋಸ್ಕರ ಇನ್ನೊಂದಕ್ಷರ ಸೇರಿಸಿ ‘ಶೋಭನಕೃತ್’ ಮಾಡಿರಬಹುದು. ಇವೆಲ್ಲ ಒಳ್ಳೆಯ ಅರ್ಥದ ಹೆಸರುಗಳೇ ಆದರೂ ಒಟ್ಟಿನಲ್ಲಿ ಈ ಸಂವತ್ಸರಕ್ಕೆ ಮೂರು ನಾಮ ಹಾಕಿ ದಂತಾಯ್ತೆಂದು ತಮಾಷೆ ಮಾಡಲಿಕ್ಕಡ್ಡಿಯಿಲ್ಲ.

ಇನ್ನೊಂದು ಜಿಜ್ಞಾಸೆ ‘ಯುಗಾದಿ’ ಸರಿಯೇ ಅಥವಾ ‘ಉಗಾದಿ’ ಸರಿಯೇ ಎಂಬುದು. ಇದಕ್ಕೆ ನನ್ನ ಅಭಿಪ್ರಾಯ ಹೀಗಿದೆ: ಯುಗಾದಿ ಸರಿಯಾದ ರೂಪ. ಯುಗ + ಆದಿ = ಯುಗಾದಿ. ಇಲ್ಲಿ ಯುಗ ಅಂದರೆ ಕೃತ-ತ್ರೇತಾ-ದ್ವಾಪರ-ಕಲಿ ರೀತಿಯ ಯುಗ ಅಂತಲ್ಲ, ಒಂದು ನಿರ್ದಿಷ್ಟ ಕಾಲಾವಾಽ
ಎಂಬರ್ಥದ ಯುಗ. ಅದರ ಆದಿಯೇ ಯುಗಾದಿ. ಕೆಲವರು ಆಡುಮಾತಿನಲ್ಲಿ ಉಗಾದಿ ಎನ್ನುತ್ತಾರೆ. ಅಪಭ್ರಂಶ ಎಂದುಕೊಂಡರೆ ಅದೂ ಸರಿಯೇ. ದೂರದ ಬೆಟ್ಟ ಚಿತ್ರದಲ್ಲಿ ‘ಪ್ರೀತಿನೇ ಆ ದ್ಯಾವ್ರು ತಂದ…’ ಹಾಡಿನಲ್ಲೂ ‘ದಿನವು ನಿತ್ಯ ಉಗಾದಿನೇ…’ ಎಂದೇ ಇದೆ. ತೆಲುಗಿನವರಂತೂ ಉಗಾದಿ ಎಂದೇ ಹೇಳುತ್ತಾರೆ. ಆದರೆ ಯುಗಾದಿಯೇ ಚಂದ. ಹೇಗೆ ನಾವು ಯುಽಷ್ಠಿರನನ್ನು ಉಧಿಷ್ಠಿರ ಎನ್ನುವುದಿಲ್ಲವೋ, ಯುವರಾಜ್ ಸಿಂಗ್‌ನನ್ನು ಉವರಾಜ್ ಸಿಂಗ್ ಎನ್ನುವುದಿಲ್ಲವೋ, ಯುವಕರನ್ನು ಉವಕರು ಎನ್ನುವುದಿಲ್ಲವೋ, ಯುದ್ಧವನ್ನು ಉದ್ಧ ಎನ್ನುವುದಿಲ್ಲವೋ, ಯುರೇನಸ್ ಗ್ರಹ ವನ್ನು ಉರೇನಸ್ ಎನ್ನುವುದಿಲ್ಲವೋ, ಯುರೋಪ್ ಖಂಡವನ್ನು ಉರೋಪ್ ಖಂಡ ಎನ್ನುವುದಿಲ್ಲವೋ, ಯುಟ್ಯೂಬ್‌ಅನ್ನು ಉಟ್ಯೂಬ್ ಎನ್ನುವುದಿಲ್ಲವೋ, ಅಂದಮೇಲೆ ಯು ಎಂದು ಉಚ್ಚರಿಸಲು ನಮ್ಮ ನಾಲಿಗೆ ಖಂಡಿತ ಹೊರಳುತ್ತದೆ ಎಂದು ಗೊತ್ತಿರುವುದರಿಂದ ‘ಯುಗಾದಿ’ ಎಂದು ಹೇಳಿದರೆ/ಬರೆದರೆ ಒಳ್ಳೆಯದು.

ಇಂಗ್ಲಿಷ್‌ನಲ್ಲಿ Yugaadi ಎಂದು ಬರೆದರೆ ಮತ್ತೂ ಒಳ್ಳೆಯದು! ಈಗಿನ್ನು ಬೇಂದ್ರೆಯವರ ಕವಿತೆಯತ್ತ ಬರೋಣ. ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಎಂದು ಅದರ ಆರಂಭ. ಬೇಂದ್ರೆಯವರೂ ನೀಟಾಗಿ ‘ಯುಗಾದಿ’ ಎಂದೇ ಹೇಳಿದ್ದಾರೆ, ಉಗಾದಿ ಎಂದಿಲ್ಲ! ಯುಗಯುಗಾದಿ ಕಳೆದರೂ (ಕೂಡಿಸಿದರೂ ಗುಣಿಸಿದರೂ ಭಾಗಿಸಿದರೂ) ಯುಗಾದಿ ಮರಳಿ ಬಂದೇ ಬರುತ್ತದೆಂಬ ಡುಂಡಿರಾಜರ ಪದವಿನೋದವನ್ನೂ ನಾವಿಲ್ಲಿ ಸಂದರ್ಭೋಚಿತ ನೆನಪಿಸಿಕೊಳ್ಳಬಹುದು.

ಯುಗಾದಿ ಕವಿತೆ ನಮಗೆ ಆರನೆಯ ತರಗತಿಯ ಕನ್ನಡಭಾರತಿ ಪಠ್ಯಪುಸ್ತಕದಲ್ಲಿತ್ತು. ಅಲ್ಲದೇ ‘ಕುಲವಧು’ ಚಿತ್ರದ ಗೀತೆಯಾಗಿ ಅಳವಡಿಸಿಕೊಂಡಿ ರುವುದರಿಂದ ಪ್ರತಿವರ್ಷ ಯುಗಾದಿ ಹಬ್ಬದಂದು ಆಕಾಶವಾಣಿಯಿಂದಲೂ ಇದು ಕೇಳಿಬಂದರೇನೇ ಹಬ್ಬ ಸಂಪೂರ್ಣವಾಗುವುದು. ಈಗ ಕೆಲವರ ವಾಟ್ಸ್ಯಾಪ್ ಶುಭಾಶಯಗಳಲ್ಲಿ ಈ ಹಾಡಿನ ಆಡಿಯೊ ಸೇರಿಕೊಂಡು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ. ಇರಲಿ, ನನಗೆ ಈ ಕವಿತೆಯಲ್ಲಿ ಬರುವ ‘ವರುಷಕೊಂದು ಹೊಸತು ಜನ್ಮಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ…’ ಸಾಲು ಆಕರ್ಷಕ, ಆದರೆ ಸರಿಯಾಗಿ ಅರ್ಥ ಆಗುತ್ತಿರಲಿಲ್ಲ.

ಅಖಿಲ ಜೀವಜಾತ ಎಂದರೆ ನಾನಾಗ ಸಮೀಕರಿಸಿದ್ದು ನಮ್ಮನೆಯ ನಾಯಿ, ಬೆಕ್ಕು, ದನ-ಕರು, ನಮ್ಮ ತೋಟದಲ್ಲಿನ ತೆಂಗು ಕಂಗು ಬಾಳೆ ತಾಳೆ ಮಾವು ಬೇವು ಮರಗಳನ್ನು. ಅವು ನಮ್ಮಂತೆಯೇ ಇವೆಯಲ್ಲ, ಅವೆಲ್ಲಿ ಪ್ರತಿವರ್ಷ ಸತ್ತು ಹುಟ್ಟುತ್ತವೆ? ಬೇಂದ್ರೆಯಜ್ಜ ಏನಂತಿದ್ದಾರೆ ಅರ್ಥವಾಗುವಲ್ದು ಅಂದ್ಕೊಳ್ತಿದ್ದೆ. ಆದರೆ, ಅಮೆರಿಕ ದೇಶಕ್ಕೆ ಬಂದಮೇಲೆ ಇಲ್ಲಿ ಚಳಿಗಾಲದಲ್ಲಿ ಗಿಡಮರಗಳೆಲ್ಲ ಬೋಳಾಗಿ ಸತ್ತೇಹೋದವೋ ಎಂಬಂತಾಗುವುದನ್ನು ನೋಡಿದೆ.

ವಸಂತ ಋತುವಿನಲ್ಲಿ ಅವು ಮತ್ತೆ ಚಿಗುರಿ ನಳನಳಿಸುವುದನ್ನು ಗಮನಿಸಿದೆ. ಇಲ್ಲಿ ಕಾಣಸಿಗುವ ಕೆಲವೇ ಪ್ರಾಣಿಗಳಾದ ಅಳಿಲು, ಜಿಂಕೆ, ಬಾತುಕೋಳಿ ಮುಂತಾದುವೆಲ್ಲ ಚಳಿಗಾಲದಲ್ಲಿ ಎಲ್ಲೋ ನಾಪತ್ತೆಯಾಗಿ ಸ್ಪ್ರಿಂಗ್ ಸೀಸನ್ ಬಂತೆಂದರೆ ಮತ್ತೆ ಪ್ರತ್ಯಕ್ಷವಾಗುವುದನ್ನು ಕಂಡೆ. ಹೌದಲ್ಲ! ಬೇಂದ್ರೆ ಬರೆದದ್ದು ಎಷ್ಟು ಅರ್ಥ ಪೂರ್ಣ, ಎಂಥ ಸೋಜಿಗವಿದೆ ಈ ಸೃಷ್ಟಿಯಲ್ಲಿ ಅಂತನಿಸಿತು. ಕವಿತೆಯ ಅದೇ ಚರಣದಲ್ಲಿ ಆಮೇಲೆ ಬರುವ ‘ಒಂದೇ ಒಂದು ಜನ್ಮದಲಿ ಒಂದೇ ಬಾಲ್ಯ ಒಂದೇ ಹರೆಯ ನಮಗದಷ್ಟೇ ಏತಕೆ?’ ಸಾಲಿನ ಸಂಗತಿ ತದ್ವಿರುದ್ಧ. ಆ ಸಾಲು ಆಗ ಸುಲಭದಲ್ಲೇ ಅರ್ಥ ಆಗುತ್ತಿತ್ತು, ತುಂಬ ಸರಳವಿದೆ ಎನಿಸುತ್ತಿತ್ತು. ನಾವೇ ಸ್ವಂತ ಅನುಭವಿಸುತ್ತೇವಲ್ಲ ನಮಗೆಲ್ಲರಿಗೂ ಒಂದೇ ಬಾಲ್ಯ, ಒಂದೇ ಹರೆಯ, ಮುಪ್ಪು, ಸಾವು. ಜೀವನದಾಟದಲ್ಲಿ ಪ್ರತಿಯೊಬ್ಬರಿಗೂ ಒಂದೇ ಇನ್ನಿಂಗ್ಸ್. ನಡುವೆ ರನ್‌ಔಟ್ ಆದರೆ ಪರಮಾತ್ಮನಿರುವ ಪೆವಿಲಿಯನ್‌ಗೆ. ಅಷ್ಟು ಸರಳ ಅರ್ಥ. ಆದರೆ ಈಗ ವಿeನವನ್ನು ಬಗೆದಂತೆಲ್ಲ ಇದು ನಾವು ಅಂದುಕೊಂಡಷ್ಟು ಸುಲಭವಾಗಿಲ್ಲ, ಸರಳವಾದ ಒಂದೇ ಅರ್ಥವನ್ನು ಹೊಂದಿಲ್ಲ ಅಂತನಿಸುತ್ತಿದೆ.
ಏಕೆಂದರೆ…

ಪಾಶ್ಚಾತ್ಯರಲ್ಲಿ ಒಂದು ನಂಬಿಕೆಯಿದೆ, ಮನುಷ್ಯದೇಹವು ಪ್ರತಿ ಏಳು ವರ್ಷಗಳಿಗೊಮ್ಮೆ ನವೀಕರಣಗೊಳ್ಳುತ್ತದೆ ಎಂದು. ಏಳೇ ವರ್ಷ ಏಕೆ, ಆರು ಅಥವಾ ಎಂಟು ಏಕಲ್ಲ ಎಂಬುದಕ್ಕೆ ಬಹುಶಃ ಧಾರ್ಮಿಕ ಕಾರಣಗಳಿಬಹುದು. ಏಳು ಮಹಾಪಾಪಗಳು, ಏಳು ಮಹಾಸಾಗರಗಳು, ಏಳು ಸ್ವರಗಳು, ಏಳು ಬಣ್ಣಗಳು, ವಾರದ ಏಳು ದಿನಗಳು… ಒಟ್ಟಿನಲ್ಲಿ ಎಲ್ಲ ಧರ್ಮಗಳಲ್ಲೂ ಏಳು ಮಹತ್ತ್ವದ ಸಂಖ್ಯೆ. ಹಾಗಾಗಿಯೇ ಏಳು ವರ್ಷಗಳಿಗೆ ಮನುಷ್ಯ ದೇಹದ ಒಂದು ಜನ್ಮದ ಕೊನೆ ಎಂಬ ನಂಬಿಕೆ. ಆ ಲೆಕ್ಕದಲ್ಲಿ ಏಳು ಜನ್ಮ ಎನ್ನುವ ಕಾನ್ಸೆಪ್ಟ್ ಸಹ ಸರಿಯಾಗುತ್ತದೆ. ಪ್ರಾಚೀನ ಕಾಲದಲ್ಲಿ ಮನುಷ್ಯನ ಸರಾಸರಿ ಆಯುಷ್ಯ ಐವತ್ತಕ್ಕಿಂತ ಕಡಿಮೆ ಸುಮಾರು ೪೯ ವರ್ಷ ಅಂತಂದುಕೊಂಡರೆ ಆಯ್ತಲ್ಲ ಅವೇ ಏಳು ಜನ್ಮಗಳು! ಈ ನಂಬಿಕೆ ಪಾಶ್ಚಾತ್ಯ ಜಗತ್ತಿನಲ್ಲಿ ಇಂದಿಗೂ ಎಷ್ಟು ಬಲವಾಗಿದೆಯೆಂದರೆ ಸೌಂದರ್ಯವರ್ಧಕಗಳು, ಆರೋಗ್ಯಪೇಯಗಳು ಇತ್ಯಾದಿಯ ಜಾಹಿರಾತುಗಳಲ್ಲೂ ಏಳು ವರ್ಷಕ್ಕೊಮ್ಮೆ ಮನುಷ್ಯದೇಹದ ಜೀರ್ಣೋದ್ಧಾರ ಆಗಬೇಕು ಎಂಬ ಅಂಶವನ್ನು ಪ್ರತಿಪಾದಿಸುತ್ತಾರೆ.

ಹಾಗೆಯೇ ಮೋಟಿವೆಷನಲ್ ಪುಸ್ತಕಗಳನ್ನು ಬರೆಯುವ ಲೇಖಕರೂ ಟೈಟಲ್‌ನಲ್ಲೇ ಏಳು ಸಂಖ್ಯೆಯನ್ನು ತೂರಿಸುತ್ತಾರೆ (The 7 habits of
highly effective people ನೆನಪಿಸಿಕೊಳ್ಳಿ). ಸಂಶೋಧನೆಗಳಿಂದ ತಿಳಿದಿರುವುದೇನೆಂದರೆ, ದೇಹದ ಅಂಗಾಂಶಗಳು ನವೀಕರಣ ಗೊಳ್ಳುತ್ತಿರುತ್ತವೆ, ಆದರೆ ಸರಿಯಾಗಿ ಏಳು ವರ್ಷಕ್ಕೊಮ್ಮೆ ಎಂದು ನಿಖರವಾಗಿ ಹೇಳಲಿಕ್ಕಾಗದು. ಮಾತ್ರವಲ್ಲ, ಎಲ್ಲ ಅಂಗಾಂಶಗಳ ನವೀಕರಣ ಆವರ್ತನ ಒಂದೇ ಪ್ರಕಾರವಿರುವುದಿಲ್ಲ. ಥೀಸಿಯಸ್ಸನ ಹಡಗಿನ ಕಥೆಯಲ್ಲಿ ಹಡಗಿನ ಒಂದೊಂದೇ ಬಿಡಿಭಾಗ ನವೀಕರಣವಾಗುತ್ತ ಹೋಗಿ ಕೊನೆಗೆ ಇಡೀ ಹಡಗೇ ಹಳೆಯದರ ಪ್ರತಿರೂಪ ಎಂಬಂತೆ ಭಾಸವಾಗುತ್ತದಲ್ವಾ, ಹಾಗೆಯೇ ಇದು ಕೂಡ.

ದೇಹದ ಭಾಗಗಳ ನವೀಕರಣ ಆಗುತ್ತಲೇ ಇರುತ್ತದೆ ಮತ್ತು ಇಂಥಿಂಥ ಭಾಗಗಳ ಸರಾಸರಿ ಆಯುಷ್ಯ ಇಷ್ಟಿರುತ್ತದೆ ಎಂದು ವಿಜ್ಞಾನಿಗಳು ಕಂಡು ಕೊಳ್ಳುವುದಕ್ಕೆ ಸಾಧ್ಯವಾದದ್ದು ವಾತಾವರಣದಲ್ಲಿರುವ ಇಂಗಾಲದಿಂದ. ಅಂದರೆ, ವಾತಾವರಣದಿಂದ ನಮ್ಮ ದೇಹದೊಳಕ್ಕೆ ಇಂಗಾಲವು
ಸೇರಿಕೊಳ್ಳುವುದರಿಂದ. ಸಾಮಾನ್ಯವಾಗಿ ವಾತಾವರಣದಲ್ಲಿರುವುದು ಕಾರ್ಬನ್೧೨ ಅಥವಾ ಸಿ೧೨ ಎಂಬ ಇಂಗಾಲದ ಸಮರೂಪ (ಐಸೊ ಟೋಪ್). ಅದಕ್ಕೆ ವಿಕಿರಣ ಅಥವಾ ರೇಡಿಯೊಆಕ್ಟಿವ್ ಗುಣವಿಲ್ಲ. ಆದರೆ ಮಿಲಿಯಗಟ್ಟಲೆ ಸಿ೧೨ ಅಣುಗಳ ಪೈಕಿ ಅಪರೂಪಕ್ಕೊಂದು ಸಿ೧೪ ಅಣು ಇರುತ್ತದೆ. ಅದೂ ಇಂಗಾಲದ ಸಮರೂಪವೇ, ವಿಕಿರಣ ಸಾಮರ್ಥ್ಯವುಳ್ಳದ್ದು. ನೈಸರ್ಗಿಕವಾಗಿ ಸಿ೧೪ ಅಣು ಹುಟ್ಟಿಕೊಳ್ಳುವುದು ಬಾಹ್ಯಾಕಾಶದಿಂದ ಕಾಸ್ಮಿಕ್ ಕಿರಣಗಳು ನಮ್ಮ ಪರಿಸರಕ್ಕೆ ತೂರಿಬಂದು ಇಲ್ಲಿರುವ ಸಾರಜನಕ ಅಣುವಿಗೆ ಅಪ್ಪಳಿಸಿದಾಗ. ವಿಕಿರಣಪಟುತ್ವವಿರುವ ಸಿ೧೪ ಅಣುಗಳು ನಿರ್ದಿಷ್ಟ ಗತಿಯಲ್ಲಿ ಅವನತಿ ಹೊಂದುತ್ತವೆ, ಇದನ್ನು decaying process ಎನ್ನುತ್ತಾರೆ.

ವಿಕಿರಣಕಾರಕ ಅಣುಗಳ ಅರ್ಧಾಯುಷ್ಯ (half-life) ಎಷ್ಟು ವರ್ಷಗಳಷ್ಟಿರುತ್ತದೆ ಎಂಬುದು ಮುಖ್ಯವಾಗುತ್ತದೆ. ಸಿ೧೪ ಅಣುವಿನ ಅರ್ಧಾಯುಷ್ಯ ಸುಮಾರು ೫೭೩೦ ವರ್ಷಗಳು ಎಂದು ಲೆಕ್ಕ ಹಾಕಲಾಗಿದೆ. ಸೃಷ್ಟಿಯ ಆದಿಯಿಂದ ಮಿಲಿಯಗಟ್ಟಲೆ ವರ್ಷಗಳವರೆಗೆ ಸಿ೧೪ ಅಣುಗಳ ಉತ್ಪಾದನೆ ಮತ್ತು ಅವನತಿ ಒಂದು ಸಂತುಲಿತ ಮಟ್ಟದಲ್ಲೇ ಇತ್ತು. ಆದರೆ ಯಾವಾಗ ಮನುಷ್ಯನೆಂಬ ಮೇಧಾವಿ ಪ್ರಾಣಿಯು ಅಣ್ವಸ್ತ್ರಗಳನ್ನು ಹುಟ್ಟುಹಾಕಿದನೋ, ಅವುಗಳ ಪರೀಕ್ಷೆಗಳನ್ನು (ಭಾರತದ ಹೆಮ್ಮೆಯ ಪೋಖ್ರಾಣ್ ಪರೀಕ್ಷೆಯಂಥದು) ನಡೆಸತೊಡಗಿದನೋ, ವಿಕಿರಣಕಾರಕ ಸಿ೧೪ ಅಣುಗಳ ಸಾಂದ್ರತೆ
ಭೂಮಂಡಲದ ವಾತಾವರಣದಲ್ಲಿ ಹೆಚ್ಚಿತು. ಸಹಜವಾಗಿಯೇ ಸಿ೧೪ ಅಣುಗಳು ಮನುಷ್ಯನೂ ಸೇರಿದಂತೆ ಅಖಿಲ ಜೀವಜಾತಗಳ ದೇಹಗಳೊಳಕ್ಕೆ ನುಸುಳಿದವು. ಅದುವರೆಗೂ ದೇಹದಲ್ಲಿರುತ್ತಿದ್ದ ಪ್ರಮಾಣದ ದುಪ್ಪಟ್ಟಾಗುವಷ್ಟು. ಇಂಗಾಲವೇ ಆದ್ದರಿಂದ ಅವೇನೂ ಅಪಾಯಕಾರಿಯಲ್ಲ.

ಬದಲಿಗೆ ಅವುಗಳ ಕ್ಷೀಣಿಸುವಿಕೆ ಮತ್ತು ಅರ್ಧಾಯುಷ್ಯ ಸ್ಥಿರಾಂಕಗಳು ಗೊತ್ತೇ ಇರುವ ಸಂಗತಿಗಳಾದ್ದರಿಂದ ವಿಜ್ಞಾನಿಗಳು ಅವುಗಳನ್ನು ಮನುಷ್ಯ ದೇಹದ ವಿವಿಧ ಅಂಗಾಂಶಗಳ ಆಯುಷ್ಯವನ್ನು ಅಳೆಯುವ ಗಡಿಯಾರವಾಗಿ ಬಳಸಿಕೊಂಡರು! ಸ್ವೀಡನ್‌ನ ಡಾ. ಜೊನಾಸ್ ಫ್ರಿಸೆನ್ ಮತ್ತು
ಆಸ್ಟ್ರೇಲಿಯಾದ ಡಾ. ಡೇವಿಡ್ ಫಿಂಕ್ ಇಬ್ಬರೂ ಸೇರಿ ಇದರ ಬಗ್ಗೆ ಪ್ರೌಢಪ್ರಬಂಧ ಮಂಡಿಸಿದರು. ‘ಎಕ್ಸೆಲೆರೆಟರ್ ಮಾಸ್ ಸ್ಪೆಕ್ಟ್ರೊಮೆಟ್ರಿ’ ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಒಂದು ಗ್ರಾಮ್‌ನ ಮಿಲಿಯನ್ ಭಾಗಗಳಲ್ಲಿ ಹತ್ತರಷ್ಟು ಪ್ರಮಾಣದ ಸ್ಯಾಂಪಲ್ (ಇದು ಸುಮಾರು ಐದು ಮಿಲಿಯನ್ ಜೀವಕೋಶಗಳಲ್ಲಿನ ಡಿಎನ್‌ಎ ಪ್ರಮಾಣ) ಬಳಸಿ ಮನುಷ್ಯದೇಹದ ವಿವಿಧ ಅಂಗಾಂಶಗಳ ಅಧ್ಯಯನ ಮಾಡಿದರು.

ಅವರು ಕಂಡುಕೊಂಡಿದ್ದೇನೆಂದರೆ, ಮೆದುಳಿನ ನರಗಳಲ್ಲಿ ಸ್ಮೃತಿ ಮತ್ತು ದೃಷ್ಟಿಗೆ ಸಂಬಂಽಸಿದ ಅಂಗಾಂಶಗಳು, ಹುಟ್ಟಿದಾಗಿನಿಂದ ಇದ್ದವು ಅವೇ ಇರುತ್ತವೆ. ಚಿಕ್ಕ ಮಗುವಾಗಿದ್ದಾಗಿನಿಂದ ನಾವು ನೋಡಿದ್ದು, ಗಮನಿಸಿದ್ದು ಕೊನೆವರೆಗೂ ಮೆದುಳಿನಲ್ಲಿ ಉಳಿಯುತ್ತದಲ್ಲ ಅದೇ ಕಾರಣಕ್ಕೆ! ಆದರೆ ಮೆದುಳಿನಲ್ಲೇ ನಮ್ಮ ಶರೀರದ ಚಲನೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ ನರಗಳ ಅಂಗಾಂಶಗಳು ನಮ್ಮ ಪ್ರಾಯಕ್ಕಿಂತ ಸುಮಾರು ಮೂರು ವರ್ಷ ಕಿರಿಯವು. ಅದೂ ಅರ್ಥಮಾಡಿಕೊಳ್ಳಬಲ್ಲ ವಿಚಾರವೇ. ಎದ್ದು ನಿಂತು ನಡೆಯುವ ಕೌಶಲ, ಬ್ಯಾಲೆನ್ಸಿಂಗ್ ಆಕ್ಟ್ ಎಲ್ಲ ನಮಗೆ ಬಂದದ್ದು ಎರಡು-ಮೂರು ವರ್ಷಗಳಾಗುವಾಗಲೇ ತಾನೆ? ಹೀಗೆ ಬೇರೆಬೇರೆ ಭಾಗಗಳ ಜೀವಕೋಶಗಳ ಆಯುಷ್ಯ ಗಣನೆಯನ್ನು ಆ ವಿಜ್ಞಾನಿಗಳು ಮಾಡಿದರು. ನಮ್ಮ ದೇಹದಲ್ಲಿ ಗಂಟಲಿನಿಂದ ಗುದದ್ವಾರದವರೆಗಿನ ಜೀರ್ಣಾಂಗವ್ಯೂಹ-ಬಿಡಿಸಿಟ್ಟರೆ ಸುಮಾರು ಹತ್ತು ಮೀಟರ್ ಉದ್ದದ ಕೊಳವೆ- ಅದರ
ಒಳಭಾಗದ ಅಂಗಾಂಶಗಳ ಸರಾಸರಿ ಆಯುಷ್ಯ ಎಷ್ಟು ಗೊತ್ತೇ? ಕೇವಲ ಐದು ದಿನ!

ಅದೇ ಕೊಳವೆಯ ಹೊರಭಾಗದ ಅಂಗಾಂಶಗಳದು ಸುಮಾರು ೧೬ ವರ್ಷಗಳಿಗೊಮ್ಮೆ ನವೀಕರಣ. ಹಾಗೆಯೇ ಚರ್ಮದ ಜೀವಕೋಶಗಳು ಎರಡು ವಾರಗಳಿಗೊಮ್ಮೆ, ಕೆಂಪು ರಕ್ತಕಣಗಳು ನಾಲ್ಕು ತಿಂಗಳಿಗೊಮ್ಮೆ, ಎಲುಬುಗಳಲ್ಲಿರುವ ಅಂಗಾಂಶಗಳು ಹತ್ತು ವರ್ಷಗಳಿಗೊಮ್ಮೆ ಮತ್ತು ಸ್ನಾಯು ಗಳಲ್ಲಿರುವವು ಹದಿನೈದು ವರ್ಷಗಳಿಗೊಮ್ಮೆ ನವೀಕರಣಗೊಳ್ಳುತ್ತವೆ. ಹಾಲುಹಲ್ಲುಗಳು ಬಿದ್ದಮೇಲೆ ಬಂದ ಹಲ್ಲುಗಳಲ್ಲಿನ ಅಂಗಾಂಶಗಳು ಬದಲಾವಣೆಗೊಳ್ಳುವುದೇ ಇಲ್ಲ!

ಅಂತೂ ನಮ್ಮ ದೇಹದ ಒಂದೊಂದು ಭಾಗವೂ ಒಂದೊಂದು ವಯಸ್ಸಿನದಾಗಿರುವಾಗ ನಮ್ಮ ಅಸಲಿ ವಯಸ್ಸು ಮತ್ತು ದೇಹದ ವಯಸ್ಸು ತಾಳೆ ಯಾಗುವುದುಂಟೇ? ಹೋಗಲಿಬಿಡಿ, ವಯಸ್ಸಿನ ಲೆಕ್ಕ ಯಾರಿಗೆ ಬೇಕು? ಬೇಂದ್ರೆಯವರು ಬಯಸಿದಂತೆಯೇ ‘ನಿದ್ದೆಗೊಮ್ಮೆ ನಿತ್ಯಮರಣ ಎದ್ದ ಸಲ ನವೀನ ಜನನ’ ನಮಗೂ ಬರಲಿ. ಅನುದಿನವೂ ಆಯುಷ್ಯದ ಒಂದನೇ ದಿನವೆನ್ನುವಂತೆ ಆನಂದದಿಂದಿರುವುದು ಯಾವತ್ತಿಗೂ ಒಳ್ಳೆಯದೇ. ಅದರಲ್ಲೂ ಹೊಸ ಸಂವತ್ಸರವು ನಮ್ಮ ಬದುಕಿಗೆ ಶೋಭೆ ತರುವಂಥದ್ದೆಂಬ ಅರ್ಥದ ಹೆಸರನ್ನು ಹೊತ್ತಿದೆಯಾದರೆ ಇನ್ನೇನು ಬೇಕು!

error: Content is protected !!