Friday, 26th July 2024

ಎನ್‌ಆರ್‌ಐ ಎಂದರೆ ಅನ್ಯಗ್ರಹದವರಲ್ಲ

ವಿಧೇಶವಾಸಿ

ವಿಮಾನ ನಿಲ್ದಾಣದ ಏರ್‌ಪೋರ್ಟ್ ಟ್ಯಾಕ್ಸ್ ನಿಂದಲೇ ಆರಂಭಿಸಿ, ಮನೆಯವರಿಗೆ ತರುವ ಚಿನ್ನ, ಚಿಣ್ಣರಿಗೆ ತರುವ ಚಾಕೊಲೇಟ್, ಮನೆಗೆ ತರುವ ಉಪಕರಣ ಗಳು, ಸ್ನೇಹಿತರಿಗೆ ತರುವ ಗುಂಡು, ಯಾವುದೇ ಇರಲಿ, ಅನುಮತಿ ಇರುವುದಕ್ಕಿಂತ ಒಂದು ಗುಲಗುಂಜಿ ಹೆಚ್ಚಾದರೂ ಅದಕ್ಕೆ ಕಸ್ಟಮ್ ಡ್ಯೂಟಿ (ಸುಂಕ) ತುಂಬಬೇಕು.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಇನ್ನೂ ಮುಂದುವರಿದೆ. ಈ ಯುದ್ಧದ ಸಂದರ್ಭದಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡದ್ದು, ಅವರನ್ನು ಭಾರತಕ್ಕೆ ಕರೆತರಲು ಸರಕಾರ ಸಾಹಸ ಮಾಡಿದ್ದು, ಎಲ್ಲವನ್ನೂ ನಾವು ನೋಡಿದ್ದೇವೆ, ಇನ್ನು ಮುಂದೆಯೂ ನೋಡುತ್ತೇವೆ. ಯುದ್ಧ
ಭೂಮಿ ಎಂದರೇನೇ ಹಾಗೆ, ಕೇವಲ ಯುದ್ಧ ಮಾಡುವ ದೇಶಗಳಷ್ಟೇ ಅಲ್ಲ, ಉಳಿದ ದೇಶಗಳೂ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾಗುತ್ತದೆ.

ಹಾಗೆ ಮಾಡಿದರೆ ಮಾತ್ರ ಒಂದು ರಾಷ್ಟ್ರ ತನ್ನ ಪ್ರಜೆಗಳನ್ನು ರಕ್ಷಿಸಲು ಸಾಧ್ಯ. ಭಾರತ ಮಾಡಿದ್ದೂ ಅದನ್ನೇ, ಉಕ್ರೇನ್ ದೇಶಕ್ಕೆ ಓದಲು ಹೋಗಿದ್ದ ವಿದ್ಯಾರ್ಥಿ ಗಳನ್ನು ಕರೆತರುವಲ್ಲಿ ಯಶಸ್ವಿಯಾಗಿದೆ. ಹಿಂತಿರುಗಿ ಬಂದವರಲ್ಲಿ ಕೆಲವರು ಸರಕಾರದ, ದೂತಾವಾಸದ ವಿರುದ್ಧ ಕೆಲವು ಹೇಳಿಕೆ ನೀಡಿದ್ದನ್ನು ನೀವು  ಗಮನಿಸಿರ ಬಹುದು. ಅಂಥ ಅಂಡೆಪಿರ್ಕಿಗಳ ಮಾತಿಗೆ ಹೆಚ್ಚಿನ ಬೆಲೆ ಕೊಡಬೇಕಾಗಿಲ್ಲ ಬಿಡಿ. ಮುಂದುವರಿಯುವುದಕ್ಕೂ ಮೊದಲು ಒಂದು ವಿಷಯ ಸ್ಪಷ್ಟಪಡಿಸುತ್ತೇನೆ.

ಭಾರತ ಸರಕಾರಕ್ಕೆ ಧೈರ್ಯ ಇಲ್ಲ, ದೂತಾವಾಸದಲ್ಲಿ ಯಾರೂ ಕರೆಗಳನ್ನು ಸ್ವೀಕರಿಸಲಿಲ್ಲ ಎಂಬ ಆಪಾದನೆ ಮಾಡಿದ ಬಚ್ಚಾಗಳಿಗೆ ಒಂದು ವಿಷಯ
ತಿಳಿದಿರಬೇಕು. ಅವರು ಇದ್ದದ್ದು ಯುದ್ಧ ನಡೆ ಯುತ್ತಿರುವ ಕ್ಷೇತ್ರದಲ್ಲಿಯೇ ಹೊರತು ಹೂತೋಟ ದಲ್ಲಿ ಅಲ್ಲ. ಹೋಗಲಿ, ಅವರು ಸಿಲುಕಿಕೊಂಡದ್ದು ನೈಸರ್ಗಿಕ ವಿಕೋಪಕ್ಕೂ ಅಲ್ಲ. ಹಾಗೇನಾದರೂ ಆಗಿ ದ್ದರೆ, ಆ ದೇಶದ ಸಹಕಾರವೂ ಇರುತ್ತಿದ್ದು, ಕಾರ್ಯ ಸುಲಭವಾಗುತ್ತಿತ್ತು. ಯುದ್ಧ ನಡೆಯುವ ದೇಶಕ್ಕೆ ಬೇರೆ ಯಾವುದೇ ದೇಶದ ಸೈನಿಕರು ತಮ್ಮ ಪ್ರಜೆಗಳ ರಕ್ಷಣೆಗೇ ಆದರೂ ಹೋಗುವಂತಿಲ್ಲ. ಭಾರತಕ್ಕೆ ಧೈರ್ಯ ಇಲ್ಲ ಎನ್ನುವವರು ಬೇರೆ ಯಾವುದಾದರೂ
ಒಂದು ದೇಶದವರು ಧೈರ್ಯ ಮಾಡಿದ್ದಿದ್ದರೆ ಹೇಳಲಿ.

ಹಾಗೆ ನೋಡಿದರೆ, ಯುದ್ಧ ಆರಂಭವಾಗುವುದಕ್ಕೆ ಮೂಲ ವಿಷಯವಾದ ನ್ಯಾಟೋ ಮತ್ತು ಯುರೋಪಿಯನ್ ಯೂನಿಯನ್ ಎರಡರದ್ದೂ ಟುಸ್ ಪಟಾಕಿಯೇ ಆಗಿತ್ತು. ತನ್ನ ಬುಟ್ಟಿಯಲ್ಲಿದ್ದ ಹಾವನ್ನು ಬಿಡುತ್ತೇನೆ ಎಂದು ಹೆದರಿಸಿದ್ದನ್ನು ಬಿಟ್ಟರೆ, ಒಮ್ಮೆ ಮುಚ್ಚಳ ತೆಗೆದು ಅದನ್ನು ತೋರಿಸಲೂ ಇಲ್ಲ. ಇನ್ನು ದೂತಾವಾಸದ ವಿಷಯ. ಯಾವುದೇ ದೇಶದ ದೂತಾವಾಸವೇ ಆದರೂ ಅದರಲ್ಲಿ ಕೆಲಸ ಮಾಡುವವರ ಸಂಖ್ಯೆ ಅಬ್ಬಬ್ಬಾ ಎಂದರೆ ೪೦-೫೦ ಮಾತ್ರ. ಆ ೫೦ ಜನ ಯುದ್ಧದ ಸಂದರ್ಭದಲ್ಲಿ ಫೀಲ್ಡಿಗೆ ಇಳಿದು, ಸಂಕಷ್ಟದಲ್ಲಿ ಸಿಲುಕಿಕೊಂಡ ಸಾವಿರಾರು ಜನರನ್ನು ಕೈ ಹಿಡಿದು ಕರೆದುಕೊಂಡು ಬರಬೇಕು ಎನ್ನುವುದು ಮೂರ್ಖತನದ
ಪರಮಾವಽಯಾದೀತು.

ಸಂದರ್ಭ ಬಂದಾಗ ಒಬ್ಬಿಬ್ಬರಿಗೆ ಬೇಡ, ನೂರು ಇನ್ನೂರು ಜನರೇ ಆದರೂ ದೂತಾವಾಸ ತನ್ನ ಮಿತಿ ಮೀರಿ ಸಹಕರಿಸಿದ ಸಾಕಷ್ಟು ಉದಾಹರಣೆಗಳು ನಮಗೆ
ಕಾಣುತ್ತವೆ. ಆದರೆ, ೨೦,೦೦೦ಕ್ಕೂ ಹೆಚ್ಚು ಜನರು ದೂತಾವಾಸ ತಮ್ಮ ಬಳಿ ಬಂದು ತಮ್ಮನ್ನು ರಕ್ಷಿಸಬೇಕು ಎಂಬುದಿದೆಯಲ್ಲ, ಅದೂ ಯುದ್ಧದ ಸಂದರ್ಭದಲ್ಲಿ, ಸಾಧ್ಯವೇ ಇಲ್ಲದ ಮಾತು. ನಮಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ, ಸರಿಯಾಗಿ ಊಟ ಸಿಗುತ್ತಿಲ್ಲ ಎನ್ನುವವರು ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ತಾವು ಇದ್ದದ್ದು ಯುದ್ಧದ ಸಂದರ್ಭದಲ್ಲಿ ರಕ್ಷಣೆ ಪಡೆಯಲು ನಿರ್ಮಿಸಿದ ಬಂಕರ್‌ನಲ್ಲೇ ವಿನಾ ಪಿಕ್ನಿಕ್‌ನಲ್ಲಿ ಅಲ್ಲ.

ಅದನ್ನೇ ಯುದ್ಧ ಅನ್ನುವುದು. ಅಷ್ಟಕ್ಕೂ ಇದನ್ನು ಹೇಳಿದ್ದು ಭಾವಿ ವೈದ್ಯರು, ಅಭಿಯಂತರರು ಎನ್ನುವುದು ವಿಪರ್ಯಾಸ. ಒಂದು ವಿಷಯ ಗಮನದಲ್ಲಿರಲಿ, ಅಂಥ ಮಂಡೆಪೆಟ್ಟಿನವರ ಸಂಖ್ಯೆ ತೀರಾ ಕಮ್ಮಿ. ನಮ್ಮ ಮಾಧ್ಯಮದವರಿಗೂ, ಹಿಂತಿರುಗಿ ಬಂದ ೨೦,೦೦೦ ಜನರ ಪೈಕಿ ಇಂಥ ಹತ್ತಾರು ಎಡಬಿಡಂಗಿಗಳೇ ಎದ್ದು ಕಾಣಿಸಿದ್ದು ಇನ್ನೊಂದು ದುರ್ದೈವ. ಅಂಥ ಕೆಲವೇ ಕಾಕುಪೋಕು ಜನರ ಮಾತು ನಿಜಕ್ಕೂ ಖಂಡನೀಯ, ಅವರಿಗೊಂದು ಧಿಕ್ಕಾರ. ಅದರೊಂದಿಗೆ ಇನ್ನೊಂದು
ವಿಪರ್ಯಾಸವೆಂದರೆ, ಕೆಲವು ಬುದ್ಧಿಹೀನರನ್ನು ಹಳಿಯುವ ಭರದಲ್ಲಿ ಕೆಲವರು ಅನಿವಾಸಿ ಭಾರತೀಯರನ್ನು ಸಾಮೂಹಿಕವಾಗಿ ಹಳಿದಿದ್ದು.

ಅವರು ವಿದೇಶಕ್ಕೆ ಹೋದದ್ದು ಅವರ ಒಳಿತಿಗಾಗಿ, ಅವರಿಂದ ದೇಶಕ್ಕೆ ಏನೂ ಪ್ರಯೋಜನವಿಲ್ಲ, ಅವರ ಕಷ್ಟ ಕಾಲದಲ್ಲಿ ಮಾತ್ರ ಅವರಿಗೆ ದೇಶ ನೆನಪಾಗುತ್ತದೆ, ಅಂಥವರನ್ನು ಕರೆತರಲು ‘ನಮ್ಮ ತೆರಿಗೆ ಹಣವನ್ನೇಕೆ ಖರ್ಚು ಮಾಡಬೇಕು?’ ಎಂಬುದು ಇಂಥವರ ಟೀಕೆಯಾಗಿತ್ತು. ಹಾ… ಹಾ… ಸ್ವಲ್ಪ ನಿಲ್ಲಿ. ನಿಜವಾಗಿಯೂ ಈ ಮಾತಿನಲ್ಲಿ ಸತ್ವ ಇದೆಯಾ? ಮೊದಲನೆಯದಾಗಿ, ಅನಿವಾಸಿಯರು ದೇಶ ಬಿಟ್ಟು ಹೋದದ್ದು ತಮ್ಮ ಉನ್ನತಿಗಾಗಿ, ಸುಖ ಸಂತೋಷಕ್ಕಾಗಿ ಎಂಬ ಮಾತಿದೆಯಲ್ಲ, ಅದು ನೂರಕ್ಕೆ ನೂರು ಸತ್ಯ. ತನ್ನ ಉನ್ನತಿ ಬಯಸದ, ತಾನು ಸುಖವಾಗಿರಬೇಕೆಂದು ಆಶಿಸದ ಯಾರಾದರೂ ಇದ್ದರೆ ಹೇಳಿ. ಭಾರತದ ಇದ್ದರೂ, ಹುದ್ದೆಯಲ್ಲಿ ಭಡ್ತಿ ಬಯಸದ, ಹೆಚ್ಚಿನ ಸಂಬಳ ಅಪೇಕ್ಷಿಸದ, ಸ್ವಂತ ಮನೆ, ಕಾರು, ಆಭರಣ ಇತ್ಯಾದಿ ಐಷಾರಾಮಿ ವಸ್ತುಗಳನ್ನು ಬಯಸದವರು ಯಾರಿ
ದ್ದಾರೆ? ಸನ್ಯಾಸಿಯೇ ಆದರೂ ಅಧ್ಯಾತ್ಮದಲ್ಲಿ ತಾನು ಇನ್ನಷ್ಟು ಮೇಲಕ್ಕೇರಬೇಕು ಎಂದು ಬಯಸುತ್ತಾನೆ.

ಅದರಲ್ಲಿ ತಪ್ಪೇನಿದೆ? ಅಪೇಕ್ಷೆ ಆಕಾಂಕ್ಷೆಗಳು ಇರಲೂಬೇಕು. ಅದು ಸ್ವಾಭಾವಿಕ. ಒಬ್ಬ ವಿದೇಶಕ್ಕೆ ಹೋದ ಎಂದರೆ ಅಲ್ಲಿ ಉಂಡಾಡಿ ಗುಂಡನಾಗಿ ಕುಳಿತು ಹಣ ಸಂಪಾದಿಸುವುದಿಲ್ಲ. ಮರ ಅಡಿಸಿ ದುಡ್ಡು ಗೋಚುವ ವ್ಯವಸ್ಥೆ ಯಾವ ದೇಶದಲ್ಲೂ ಇಲ್ಲ. ಅಲ್ಲಿಯೂ ಹೆಣಗಬೇಕು, ಸ್ಥಳೀಯರೊಂದಿಗೆ ಏಗಬೇಕು, ಹತ್ತಾರು ಅನ್ಯ ದೇಶಿಯರೊಂದಿಗೆ ಪೈಪೋಟಿ ನಡೆಸಬೇಕು, ಬೆವರು ಸುರಿಸಬೇಕು, ಬುದ್ಧಿ ಸುರಿಸಬೇಕು. ಆಗ ಮಾತ್ರ ಹಣ ಸಂಪಾದಿಸಲು ಸಾಧ್ಯ, ಸಂಪಾದಿಸಿದ್ದನ್ನು ಉಳಿಸಲೂ ಸಾಧ್ಯ. ಅಂದಹಾಗೆ, ಬಹುತೇಕ ದೇಶಗಳಲ್ಲಿ ತೆರಿಗೆ ವಂಚಿಸುವ ವಿಧಾನಗಳೂ ಭಾರತದಲ್ಲಿ ಇರುವಷ್ಟಿಲ್ಲ.

ಕೊಲ್ಲಿ ರಾಷ್ಟ್ರಗಳಲ್ಲಿ ಆದಾಯ ತೆರಿಗೆ ಇಲ್ಲ, ಅದು ಬೇರೆ ವಿಷಯ. ವಿದೇಶದಲ್ಲಿ ದುಡಿದ ದುಡ್ಡನ್ನೆಲ್ಲ ಅಲ್ಲಿಯೇ ಆಸ್ತಿ ಖರೀದಿಸಿ, ಖರ್ಚುಮಾಡಿಕೊಂಡು ಆರಾಮ ವಾಗಿ ಇರಬಹುದಿತ್ತಲ್ಲ? ತಿಳಿಯದವರ ಗಮನಕ್ಕೆ ತರುತ್ತಿದ್ದೇನೆ, ಅಮೆರಿಕ, ಯೂರೋಪ್ ನ ಕೆಲವು ದೇಶಗಳನ್ನು ಹೊರತುಪಡಿಸಿದರೆ, ಬಹಳಷ್ಟು ದೇಶಗಳಿಗೆ, ಬಹಳಷ್ಟು ಜನ ಹೋಗುವುದು ಕಾರ್ಮಿಕ ಕೆಲಸಕ್ಕೆ. ಅವರೆಲ್ಲ ಒಂದಷ್ಟು ವರ್ಷ ವಿದೇಶಕ್ಕೆ ಹೋಗಿ ದುಡಿದು, ತಿರುಗಿ ಭಾರತಕ್ಕೆ ಬಂದು ನೆಮ್ಮದಿಯಿಂದ ಇರುವ ಇರಾದೆಯಿಂದಲೇ ಹೋಗುತ್ತಾರೆ. ತಮಗೆ ಸಾಕೆನಿಸುವಷ್ಟು ದುಡಿದು ಹಿಂತಿರುಗುತ್ತಾರೆ.

ಅದರಲ್ಲಿ ತಪ್ಪೇನಿದೆ? ಅಷ್ಟರ ಮಟ್ಟಿಗಾದರೂ ಭಾರತದಲ್ಲಿ ನಿರುದ್ಯೋಗದ ಸಮಸ್ಯೆ ಕಡಿಮೆ ಆಯಿತಲ್ಲ! ಅಷ್ಟರ ಮಟ್ಟಿಗಾದರೂ ಭಾರತದಲ್ಲಿ ಉದ್ಯೋಗಕ್ಕಾಗಿ ಪೈಪೋಟಿ ತಪ್ಪಿತಲ್ಲ! ಇಲ್ಲಿಯವರೆಗೆ ಅನಿವಾಸಿಗಳಿಗೆ ಭಾರತದಿಂದ ಸಿಗುತ್ತಿರುವ ಒಂದೇ ಒಂದು ದೊಡ್ಡ ವಿನಾಯತಿ ಎಂದರೆ ಆದಾಯ ತೆರಿಗೆ. ಒಮ್ಮೆ ಭಾರತಕ್ಕೆ ಬಂದು ಬೀಡುಬಿಟ್ಟರೆ ಅದೂ ಇಲ್ಲ. ಹಾಗಂತ ಭಾರತದ ಎನ್‌ಆರ್‌ಐ ಖಾತೆಯಲ್ಲಿರುವ ಹಣಕ್ಕೆ ಬರುವ ಬಡ್ಡಿಗೆ ಶೇ.೩೩ರಷ್ಟು ತೆರಿಗೆ ನೀಡಬೇಕಾ ಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಅನಿವಾಸಿಗಳು ಭಾರತದಲ್ಲಿ ಕೊಳ್ಳುವ ಭೂಮಿ, ನಡೆಸುವ ಉದ್ಯಮ, ಖರೀದಿಸುವ ವಸ್ತು, ಯಾವುದೂ ಪುಕ್ಕಟೆಯಲ್ಲ. ಎಲ್ಲದಕ್ಕೂ ಹಣ ನೀಡುತ್ತಾರೆ, ತೆರಿಗೆ ತುಂಬುತ್ತಾರೆ.

ಬದಲಾಗಿ, ಸ್ವದೇಶಕ್ಕೆ ಬಂದು ಎಂಜಿನಿಯರಿಂಗ್ ಅಥವಾ ಮೆಡಿಕಲ್ ಓದುತ್ತೇನೆಂದರೆ, ಅನಿವಾಸಿಗಳ ಖೋಟಾದ ಹೆಸರಿನಲ್ಲಿ ಒಂದಕ್ಕೆ ೩ ಪಟ್ಟು ಹಣ ನೀಡಬೇಕಾಗುತ್ತದೆ ಎನ್ನುವುದೂ ಸತ್ಯ. ಅನಿವಾಸಿಗಳು ಭಾರತಕ್ಕೆ ಬಂದಾಗ ಖರ್ಚು ಮಾಡುವ ಹಣದ ಕುರಿತು ಯಾರೂ ಮಾತಾಡುವುದಿಲ್ಲ ಏಕೆ? ವಿಮಾನ
ನಿಲ್ದಾಣದ ಏರ್‌ಪೋರ್ಟ್ ಟ್ಯಾಕ್ಸ್ ನಿಂದಲೇ ಆರಂಭಿಸಿ, ಮನೆಯವರಿಗೆ ತರುವ ಚಿನ್ನ, ಚಿಣ್ಣರಿಗೆ ತರುವ ಚಾಕೊಲೇಟ್, ಮನೆಗೆ ತರುವ ಉಪಕರಣ
ಗಳು, ಸ್ನೇಹಿತರಿಗೆ ತರುವ ಗುಂಡು, ಯಾವುದೇ ಇರಲಿ, ಅನುಮತಿ ಇರುವುದಕ್ಕಿಂತ ಒಂದು ಗುಲಗುಂಜಿ ಹೆಚ್ಚಾದರೂ ಅದಕ್ಕೆ ಕಸ್ಟಮ್ ಡ್ಯೂಟಿ (ಸುಂಕ)
ತುಂಬಬೇಕು.

ಅಲ್ಲಿಂದ ಟ್ಯಾಕ್ಸಿ, ಸ್ವಂತ ವಾಹನವಾದರೆ ಅದಕ್ಕೆ ಇಂಧನ, ಬೀದಿ ಬದಿಯಲ್ಲಿ ಖರೀದಿ  ಸುವ ಬಾಳೇಹಣ್ಣಿನಿಂದ ಹಿಡಿದು ಐಷಾರಾಮಿ ಬಾರಿನವರೆಗೆ ಎಲ್ಲಿಯೂ ವಿದೇಶದಿಂದ ಬಂದವರು ಎಂದು ವಿನಾಯತಿ ಇಲ್ಲ. ದೇಶವಾಸಿಗಳು ಕೊಡುವಷ್ಟನ್ನೇ ಅನಿವಾಸಿಗಳೂ ಮರುಮಾತಾಡದೇ ಕೊಟ್ಟು ಬರುತ್ತಾರೆ, ಕೊಡಲೂಬೇಕು.
ವಿದೇಶಾಂಗ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ೧೩೦ ಕೋಟಿ ಭಾರತೀಯರಲ್ಲಿ ಸುಮಾರು ೩ ಕೋಟಿ ಭಾರತೀಯರು ವಿದೇಶದಲ್ಲಿ ನೆಲೆಸಿದ್ದಾರೆ.
ಪ್ರತಿವರ್ಷ ಸುಮಾರು ೨೫ ಲಕ್ಷ ಜನ ಉದ್ಯೋಗಕ್ಕೆ ಅಥವಾ ಓದಲು ವಿದೇಶಕ್ಕೆ ಹೋಗುತ್ತಾರೆ. ಈ ಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ವಿಶ್ವಸಂಸ್ಥೆಯ ಅಂಕಿ-ಅಂಶದ ಪ್ರಕಾರ, ವಿಶ್ವದ ಒಟ್ಟೂ ವಲಸಿಗರ ಸಂಖ್ಯೆಯಲ್ಲಿ ಭಾರತೀಯರ ಪಾಲು ಶೇ.೬.೫ರಷ್ಟಿದೆ.

ಕೇವಲ ಕೊಲ್ಲಿ ರಾಷ್ಟ್ರಗಳ ಒಂದು ಕೋಟಿ ಅನಿವಾಸಿಗಳಿದ್ದಾರೆ. ಏಷ್ಯಾ ಖಂಡದ ಇತರ ದೇಶಗಳಲ್ಲಿ ಸುಮಾರು ೮೦ ಲಕ್ಷ, ಅಮೆರಿಕದಲ್ಲಿ ಸುಮಾರು ೫೦ ಲಕ್ಷ, ಯುರೋಪ್ ದೇಶಗಳಲ್ಲಿ ೧೨ ಲಕ್ಷ, ಆಫ್ರಿಕಾ ಖಂಡದ ದೇಶಗಳಲ್ಲಿ ೩೦ ಲಕ್ಷ ಭಾರತೀಯರು ನೆಲೆಸಿದ್ದಾರೆ. ಇದನ್ನು ಹೇಳಲೇಬೇಕಾದ ಅನಿವಾದ್ದಾರ್ಯತೆ ಇದೆ. ಏಕೆಂದರೆ, ಕೊಲ್ಲಿ ರಾಷ್ಟ್ರಗಳೂ ಸೇರಿದಂತೆ ಕೆಲವು ಏಷ್ಯಾ ಖಂಡದ ರಾಷ್ಟ್ರಗಳು, ಆಫ್ರಿಕಾ ಖಂಡದ ದೇಶಗಳಲ್ಲಿರುವ ಬಹುತೇಕ ಭಾರತೀಯರು ಶ್ರಮಿಕ
ಅಥವಾ ಕಾರ್ಮಿಕ ವರ್ಗಕ್ಕೆ ಸೇರಿದವರು. ಎಷ್ಟೋ ಜನ ಸಂಸ್ಥೆ ಒದಗಿಸಿಕೊಡುವ ವಸತಿ ಸೌಲಭ್ಯದಲ್ಲಿ ವಾಸಿಸುವವರು.

ತಿಂಗಳ ಕೊನೆಯಲ್ಲಿ ತಾವು ಸಂಪಾದಿಸಿದ್ದನ್ನು ತಾಯ್ನಾಡಿನಲ್ಲಿರುವವರ ಪಾಲನೆ, ಪೋಷಣೆಗೆ ಕಳುಹಿಸಿಕೊಡುವವರು. ಅದನ್ನು ಬೇಕಾದರೆ ಹಣದ ಒಳಹರಿವು ಅನ್ನಿ ಅಥವಾ ರವಾನೆ ಅನ್ನಿ. ದೇಶ ಕಟ್ಟುವುದರಲ್ಲಿ, ಆರ್ಥಿಕತೆ ಬಲಪಡಿಸುವುದರಲ್ಲಿ ಈ ಒಳಹರಿವು ಮಹತ್ತರ ಪಾತ್ರವಹಿಸುತ್ತದೆ. ಭಾರತದಲ್ಲಿ ವರ್ಷದಿಂದ
ವರ್ಷಕ್ಕೆ ಇದು ವೃದ್ಧಿಸುತ್ತಿದೆ. ವಿಶ್ವಬ್ಯಾಂಕ್ ಪ್ರಕಾರ ಭಾರತದ ಒಳಹರಿವು ಸುಮಾರು ೮೫ ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿದ್ದು ಮೊದಲ ಸ್ಥಾನದಲ್ಲಿದೆ.
ಚೀನಾ ೨ನೇ ಸ್ಥಾನದಲ್ಲಿದ್ದು, ಈ ವಿಷಯಕ್ಕಾದರೂ ಅನಿವಾಸಿಗಳಿಗೆ ಧನ್ಯವಾದ ಹೇಳಬೇಕು. ಈ ರವಾನೆ ಭಾರತದ ಜಿಡಿಪಿಯ ಶೇ.೩ರಷ್ಟಿದ್ದು, ದೇಶದ ವಿದೇಶಿ
ವಿನಿಮಯದ ಶೇ.೨೦ಕ್ಕೂ ಹೆಚ್ಚಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ಅನಿವಾಸಿಗಳಿಂದ ಭಾರತಕ್ಕೆ ರವಾನೆಯಾದ ಹಣದಲ್ಲಿ ಶೇ.೬೦ ಪರಿವಾರದ ನಿತ್ಯದ ಖರ್ಚಿಗೆ, ಶೇ.೨೦ರಷ್ಟು ಬ್ಯಾಂಕ್‌ಗಳಲ್ಲಿ ಠೇವಣಿಗೆ, ಶೇ.೮ರಷ್ಟು ಭೂಮಿ, ಮನೆ ಇತ್ಯಾದಿ ಆಸ್ತಿ ಖರೀದಿ ಗೆ, ಉಳಿದವು ಇತರೆ ಕಾರ್ಯಕ್ಕೆ ವಿನಿಯೋಗವಾಗುತ್ತದೆ. ಆದಾಗ್ಯೂ ಅನಿವಾಸಿಗಳು ಯಾವುದೇ ಬಿಟ್ಟಿಭಾಗ್ಯದ ಫಲಾನುಭವಿಗಳಲ್ಲ! ವಿದೇಶದಲ್ಲಿ ನೆಲೆಸಿದ ಒಬ್ಬ ಸಾಮಾನ್ಯನನ್ನು ಕೇಳಿನೋಡಿ, ಸಹೋದರಿಯ ಮದುವೆ, ಸಹೋದರನ ವಿದ್ಯಾಭ್ಯಾಸ, ಹೆತ್ತವರ ಆರೋಗ್ಯ, ಉಳಿದರೆ ಕೊನೆಗೊಂದು ಸ್ವಂತ ಮನೆ. ಅದರಲ್ಲಿಯೇ ವಿದೇಶದ ಜೀವನ ಮುಗಿಯುತ್ತದೆ. ಕೊನೆಯಲ್ಲಿ
ಅವನಿಗೆ ಸಿಗುವ ಬಳುವಳಿ ಎಂದರೆ, ಒಂದಷ್ಟು ಕೊಲೆಸ್ಟ್ರಾಲ-ಬಿಪಿ-ಶುಗರ್. ಪರಿವಾರಕ್ಕಾಗಿ ಸರ್ವಸ್ವವನ್ನೂ ತ್ಯಾಗಮಾಡಿ ಶರಶಯ್ಯೆಯಲ್ಲಿ ಮಲಗಿದ ಭೀಷ್ಮನ ಪರಿಸ್ಥಿತಿ!

ಜತೆಗೆ, ಇನ್ನೊಂದು ವಿಷಯ ನೆನಪಿರಲಿ, ದೇಶ ದಲ್ಲಿ ಯಾವುದೇ ನೈಸರ್ಗಿಕ ವಿಕೋಪವಾದಾಗ ಅನಿವಾಸಿಗಳ ಕರುಳು ಚುರುಗುಟ್ಟುತ್ತದೆ. ಅವಘಡಗಳಾದರೆ ವಿದೇಶದಲ್ಲಿ ನೆಲೆಸಿದವರ ಹೃದಯ ಆರ್ದ್ರವಾಗುತ್ತದೆ, ದೇಶ ಸಂಕಷ್ಟದಲ್ಲಿದೆ ಎಂದು ಕೇಳಿದಾಗ ಕಣ್ಣಾಲಿಗಳು ತೇವಗೊಳ್ಳುತ್ತವೆ. ತಮ್ಮ ಊರಿನ ತಿನಿಸು ಕಂಡಾಗ ತವರಿನ ನೆನಪಾಗುತ್ತದೆ, ತಮ್ಮವರು ನೆನಪಾಗುತ್ತಾರೆ ಎಂದರೆ ನೆಲದ ಸಂಬಂಧ ಇನ್ನೂ ಗಟ್ಟಿಯಾಗಿದೆ ಎಂದೇ ಅರ್ಥ. ಆ ಕಾರಣಕ್ಕಾಗಿಯೇ ದೇಶದಲ್ಲಿ ಸಂಕಷ್ಟ ಎದುರಾದರೆ ಅನಿವಾಸಿಗಳೂ ತಮ್ಮ ಸಹಾಯ ನೀಡುವುದು.

ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ ಬಿಡಿ. ಅಂಥ ಸಂದರ್ಭದಲ್ಲಿ ಅನಿವಾಸಿಗಳ ಸಹಾಯ ಬೇಡ ಎಂದವರು ಯಾರೂ ಕಾಣಲಿಲ್ಲ. ಹೋಗಲಿ, ಈಗಲಾದರೂ ಅನಿವಾಸಿಗಳ ಹಣ ಬೇಡ ಎನ್ನುವವರು ಯಾರಾದರೂ ಇದ್ದಾರೆ ಹೇಳಿ. ಒಬ್ಬ ಅನಿವಾಸಿ ಭಾರತಕ್ಕೆ ಬಂದ ಎಂದು ತಿಳಿದರೆ ಅವನ ಹಿಂದೆ ದೇಣಿಗೆಗೆ, ವಿಮೆಗೆ, ಚಿತ್ರನಿರ್ಮಾಣಕ್ಕೆ, ಉದ್ಯಮದಲ್ಲಿ ಹಣ ತೊಡಗಿಸಲು ಕೇಳುವವರ ಸಾಲೇ ಇರುತ್ತದೆ. ಅದನ್ನು ಖಂಡಿತವಾಗಿಯೂ ತಪ್ಪು ಎನ್ನುವುದಿಲ್ಲ. ಆದರೆ, ಎಲ್ಲಾ ಒಮ್ಮೆ
ಅನಿವಾಸಿಗಳು ಕಷ್ಟದಲ್ಲಿzಗ ‘ನಮ್ಮ ತೆರಿಗೆ ಹಣವನ್ನು ಸರಕಾರ ಅನಿವಾಸಿಗಳಿಗೆ ಏಕೆ ಖರ್ಚು ಮಾಡಬೇಕು?’ ಎಂದು ಕೇಳುವುದು ಎಷ್ಟು ಸರಿ?
ಅನಿವಾಸಿಗಳು ತಮ್ಮ ಮತ್ತು ತಮ್ಮವರ ಒಳಿತಿಗಾಗಿ ವಿದೇಶಕ್ಕೆ ಹೋಗುತ್ತಾರೆಯೇ ಹೊರತು ಅವರೇನು ಅನ್ಯಗ್ರಹದವರಲ್ಲ.

ಅಷ್ಟಕ್ಕೂ, ಅನೇಕ ಸಲ ಅವರು ಬಯಸುವುದು ರಾಜತಾಂತ್ರಿಕ ಸಹಕಾರವನ್ನು. ಕೈಲಾಗುವವರು ಹಣ ಹೊಂದಿಸಿಕೊಂಡು ಸ್ವದೇಶಕ್ಕೆ ಮರಳುತ್ತಾರೆ, ಆಗದವರು ಸಹಾಯ ಕೇಳುತ್ತಾರೆ. ದುಡಿದ ಹಣವನ್ನು ಭಾರತಕ್ಕೆ ಕಳಿಸುವಾಗ, ಭಾರತದಲ್ಲಿ ಹೂಡಿಕೆ ಮಾಡುವಾಗ, ಸಂಕಷ್ಟ ಎದುರಾದಾಗ ನಮ್ಮ ದೇಶದವರನ್ನಲ್ಲದೆ ಮಂಗಳ ಗ್ರಹದವರನ್ನು ಕೇಳಲು ಸಾಧ್ಯವೇ? ಯಾರೋ ಒಂದಿಬ್ಬರಿಗೆ ಕೃತಜ್ಞತೆ ಇಲ್ಲವೆಂದರೆ, ಎಲ್ಲರಿಗೂ ಅದೇ ಮಾನದಂಡವಲ್ಲ. ಇಷ್ಟೂ ಅರ್ಥವಾಗದಿ
ದ್ದರೆ, ಛೇ…! ಛೇ…! ಅನ್ನಬೇಕು ಅಷ್ಟೇ!

Leave a Reply

Your email address will not be published. Required fields are marked *

error: Content is protected !!