Friday, 21st June 2024

ಪಕ್ಷಗಳಿಗೆ ಬೂಸ್ಟರ್‌ ನೀಡುವ ಪಾದಯಾತ್ರೆ

ಅಶ್ವತ್ಥಕಟ್ಟೆ

ranjith.hoskere@gmail.com

ಪಾದಯಾತ್ರೆಗೂ ಮೊದಲು ಯೋಚಿಸ ಬೇಕಿರುವುದು ಸುಮಾರು ಆರು ತಿಂಗಳ ಕಾಲ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕುವುದು ಯಾರು? ಹಾಕಿದರೂ, ದಿನಕ್ಕೆ 20 ಕಿಮೀ ಅನ್ನು ನಡೆದು ದೇಹದ ಆರೋಗ್ಯ ಕಾಪಾಡಿಕೊಳ್ಳುವವರು ಯಾರು?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು, ಎಷ್ಟೇ ಜನಪ್ರಿಯ, ಪ್ರಭಾವಿಗಳಾ ಗಿದ್ದರೂ ಚುನಾವಣೆಗಳು ಬಂದಾಗ ‘ಪ್ರಜೆ’ಗಳ ಬಳಿಗೆ ಹೋಗಲೇ ಬೇಕು. ಅದರಲ್ಲಿಯೂ ಭಾರತದಂತ ವ್ಯವಸ್ಥೆಯಲ್ಲಿ ಮತದಾರರನ್ನು ಓಲೈಸಿ ಕೊಳ್ಳುವುದಕ್ಕೆ ಪಕ್ಷಗಳು ಹತ್ತು ಹಲವು ದಾರಿಗಳನ್ನು ಕಂಡುಕೊಂಡಿದ್ದಾರೆ. ಆದರೇನೆ ಆಗಲಿ, ‘ಯಾತ್ರೆ’ಗಳಷ್ಟು ಪ್ರಭಾವ ಮತ್ಯಾವ ದಾರಿಗಳು ಬೀರುವುದಿಲ್ಲ ಎನ್ನುವುದು ಸ್ಪಷ್ಟ.

ಚುನಾವಣಾ ವರ್ಷಗಳಲ್ಲಿ ಪಾದಯಾತ್ರೆ, ರಥಯಾತ್ರೆ, ರ‍್ಯಾಲಿಗಳು ಸರ್ವೇ ಸಾಮಾನ್ಯ. ಆದರೆ ಜನರನ್ನು ತಲುಪುವುದಕ್ಕೆ ಪಾದಯಾತ್ರೆಗಳಷ್ಟು ಪ್ರಭಾವವನ್ನು ಇನ್ಯಾವ ಯಾತ್ರೆಗಳು ಬೀರುವುದಿಲ್ಲ. ಜನರನ್ನು ಒಗ್ಗೂಡಿ ಸಲು, ಜನರ ಮನಸಿಗೆ ನಾಟುವಂತೆ ತಮ್ಮ ವಿಚಾರ ಮಂಡನೆ ಮಾಡುವುದಕ್ಕೆ ಈ ಯಾತ್ರೆಗಳು ಸದಾ ಸಹಕಾರ ಮಾಡುತ್ತವೆ ಎನ್ನುವುದು ಈ ಹಿಂದಿನ ಬಹುತೇಕ ಚುನಾವಣೆಗಳಲ್ಲಿ ಸಾಬೀತುಪಡಿಸಲಾಗಿದೆ.

ಎಲ್ಲ ರಾಜಕೀಯ ಪಕ್ಷಗಳು ಪಾದಯಾತ್ರೆಯನ್ನೇ ಮಾಡಬೇಕು ಎಂದಿಲ್ಲ. ಬಿಜೆಪಿ ಭೀಷ್ಮ ಎನಿಸಿಕೊಂಡ ಲಾಲ್ ಕೃಷ್ಣ ಆಡ್ವಾಣಿ ಅವರು ಇಡೀ ದೇಶಾದ್ಯಂತ ರಾಮರಥ ಯಾತ್ರೆಯನ್ನು ಮಾಡಿದರು. 1990ರಲ್ಲಿ ನಡೆಸಿದ ಈ ರಥಯಾತ್ರೆಯಲ್ಲಿ ದಿನಕ್ಕೆ ೩೦೦ ಕಿಮೀ ದೂರ ಕ್ರಮಿಸಿ, ಸುಮಾರು 10 ಸಾವಿರ ಕಿಮೀ ಯಾತ್ರೆಯನ್ನು ಮಾಡಲಾಯಿತು. ಗುಜರಾತ್‌ನ ಸೋಮನಾಥ ದಿಂದ ಆರಂಭವಾಗಿ ಅಯೋಧ್ಯೆಯಲ್ಲಿ ಈ ರಥಯಾತ್ರೆ ಪೂರ್ಣಗೊಂಡಿತ್ತು.

ಸುಮಾರು 10 ರಾಜ್ಯಗಳಲ್ಲಿ ಸಂಚರಿಸಿದ ಈ ರಥಯಾತ್ರೆ ಉತ್ತರ ಭಾರತದಲ್ಲಿ ಬಿಜೆಪಿಗೆ ಭರ್ಜರಿ ಮೈಲೇಜ್ ಅನ್ನು
ತಂದು ಕೊಂಡಿತ್ತು. ಇದಕ್ಕೂ ಮೊದಲು ತುರ್ತು ಪರಿಸ್ಥಿತಿ ವಿರೋಧಿಸಿ ಜಯಪ್ರಕಾಶ್ ನಾರಾಯಣ ಅವರ ನೇತೃತ್ವದಲ್ಲಿ
ನಡೆದಿದ್ದ ಜೆ.ಪಿ ಚಳವಳಿ ಸೇರಿದಂತೆ ಹಲವು ಯಾತ್ರೆಗಳು ರಾಜಕೀಯವಾಗಿ ಆಯ ಪಕ್ಷಗಳಿಗೆ ಉತ್ತಮ ಮೈಲೇಜ್ ಅನ್ನು ನೀಡಿರುವ ಉದಾಹರಣೆ ದೇಶದಲ್ಲಿದೆ.

ದೇಶದಲ್ಲಿ ಮಾತ್ರವಲ್ಲದೇ ಕರ್ನಾಟಕದಲ್ಲಿಯೂ ಎಲ್ಲ ರಾಜಕೀಯ ಪಕ್ಷಗಳು ಆಯಾ ಕಾಲಕ್ಕೆ ತಕ್ಕಂತೆ ಹಲವು ರ‍್ಯಾಲಿ,
ಯಾತ್ರೆ, ಪಾದಯಾತ್ರೆಗಳನ್ನು ಹಮ್ಮಿಕೊಂಡಿವೆ. ಪ್ರಮುಖವಾಗಿ ಬಿಜೆಪಿಗೆ ಕರ್ನಾಟಕದಲ್ಲಿ ಭದ್ರ ಬುನಾದಿ ದೊರೆಯಲು ಸಹಾಯ ಮಾಡಿದ್ದು, ಯಡಿಯೂರಪ್ಪ ಅವರ ಶಿಕಾರಿಪುರ ಟು ವಿಧಾನಸೌಧ ಪಾದಯಾತ್ರೆ. ರೈತರ ಬೇಡಿಕೆಗೆ ಈಡೇರಿಕೆಗೆ ಆಗ್ರಹಿಸಿದ ನಡೆಸಿದ ಪಾದಯಾತ್ರೆಯ ಬಳಿಕವೇ ಬಿಜೆಪಿಗೆ ಜನ ಬೆಂಬಲ ಸಿಕ್ಕಿದ್ದು. ಇನ್ನು ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ನಡೆದ ಪಾಂಚಜನ್ಯ ಯಾತ್ರೆ ಪಾದಯಾತ್ರೆಯಾಗದಿದ್ದರೂ, ರಾಜ್ಯಾದ್ಯಂತ ಪ್ರವಾಸ ಮಾಡಿ, ಜನರ ಮನಸನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿತ್ತು.

ಅದಾದ ಬಳಿಕ ೨೦೧೩ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರವಹಿಸಿದ್ದು, ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬಳ್ಳಾರಿ ಪಾದಯಾತ್ರೆ. ಗಣಿ ಧಣಿಗಳ ವಿರುದ್ಧ ನಡೆದ ಪಾದಯಾತ್ರೆಯ ಚುನಾವಣೆಗೆ ಭಾರಿ ಸಹಾಯ ಮಾಡಿತ್ತು. ಈ ಪಾದಯಾತ್ರೆಯಿಂದಲೇ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು ಸ್ಪಷ್ಟ. ಇನ್ನು ಇತ್ತೀಚೆಗೆ ಕಾಂಗ್ರೆಸ್ ನಡೆಸಿದ ಮೇಕೆದಾಟು ಪಾದಯಾತ್ರೆ ಇರಬಹುದು, ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ನಡೆಸಿದ ಜಲಧಾರೆ ಯಾತ್ರೆ ಇರಬಹುದು, ಈ ಎರಡೂ
ಯಾತ್ರೆಗಳು ಆಯಾ ಪಕ್ಷಕ್ಕೆ ಪಕ್ಷ ಸಂಘಟಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿವೆ.

ಪಾದಯಾತ್ರೆಗಳು ಸದಾ ಪಕ್ಷಗಳಿಗೆ ಬೂಸ್ಟರ್ ನೀಡುತ್ತವೆ ಎನ್ನಲು ಪ್ರಮುಖ ಕಾರಣವೆಂದರೆ, ಈ ರೀತಿ ವಾರಗಟ್ಟಲೇ
ಪಾದಯಾತ್ರೆ ಮಾಡುವಾಗ ಸಿಗುವ ಹಳ್ಳಿಹಳ್ಳಿಗಳಲ್ಲಿ ನಾಯಕರು ಜನರನ್ನು ಭೇಟಿಯಾಗುತ್ತಾರೆ, ಅವರೊಂದಿಗೆ ಕೆಲ ಸಮಯ ಕಳೆಯುತ್ತಾರೆ. ಈ ವೇಳೆ ಅಲ್ಲಿನ ಜನರು ನಮ್ಮೂರಿಗೆ ಬಂದಿದ್ದರು ಎಂದು ‘ಕನೆಕ್ಟ್’ ಆಗುತ್ತಾರೆ. ಆದ್ದರಿಂದ ಯಾವುದೇ ಪಕ್ಷಗಳಿಗೆ ಪಾದಯಾತ್ರೆಗಳು ಬಹುದೊಡ್ಡ ಯಶಸ್ಸನ್ನು ತಂದುಕೊಡುತ್ತವೆ. ಆದರೆ ಈ ರೀತಿ ಪಾದಯಾತ್ರೆ ಮಾಡುವಾಗ ಎಷ್ಟು ದೂರು, ಎಷ್ಟು ದಿನ? ಯಾರ‍್ಯಾರು ಜತೆಯಲ್ಲಿರುತ್ತಾರೆ ಎನ್ನುವ ಬಗ್ಗೆ ಎಚ್ಚರ ವಹಿಸದಿದ್ದರೆ ಬ್ಯಾಕ್ ಫಾರ್ ಆಗುವ
ಸಾಧ್ಯತೆಯಿರುತ್ತದೆ ಎನ್ನುವುದನ್ನು ಮರೆಯಬಾರದು. ಈ ಎಲ್ಲ ಲೆಕ್ಕಾಚಾರದೊಂದಿಗೆ, ದೇಶಾದ್ಯಂತ ಅಧಿಕಾರ ಕಳೆದುಕೊಂಡು, ಅಸ್ತಿತ್ವದ ಹುಡುಕಾಟದಲ್ಲಿರುವ ಕಾಂಗ್ರೆಸ್ ಸಹ ಈ ರೀತಿಯದ್ದೇಯಾದ ಬೃಹತ್ ಪಾದಯಾತ್ರೆಯನ್ನು
ಹಮ್ಮಿಕೊಳ್ಳಲು ಮುಂದಾಗಿದೆ.

ಇದಕ್ಕಾಗಿ ಅಕ್ಟೋಬರ್ ೨ನ್ನು ನಿಗದಿಪಡಿಸಿದ್ದು, ಸುಮಾರು 3500 ಕಿಮೀ ಬೃಹತ್ ಪಾದಯಾತ್ರೆಗೆ ತೀರ್ಮಾನಿಸಿದೆ. ಸುಮಾರು ಆರು ತಿಂಗಳ ಕಾಲ ನಡೆಸಲಿರುವ ಈ ಪಾದಯಾತ್ರೆಯ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ‘ಲಾಭ’ ಮಾಡಿಕೊಳ್ಳುವ ಲೆಕ್ಕಚಾರದಲ್ಲಿದೆ. ಈ ಹಿಂದಿನ ಪಾದಯಾತ್ರೆ, ರ‍್ಯಾಲಿ, ರಥಯಾತ್ರೆಯ ಯಶಸ್ಸನ್ನು ನೋಡಿ ರಾಹುಲ್ ಗಾಂಽ ಅವರು ‘ಭಾರತ್ ಜೋಡೋ’ ಯಾತ್ರೆಯನ್ನು ಕಾಲ್ನಡಿಯಲ್ಲಿಯೇ ಪೂರ್ಣ ಗೊಳಿಸುವ ಲೆಕ್ಕಾಚಾರವನ್ನು ಹಾಕಿಕೊಂಡಿ ದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ರ‍್ಯಾಲಿ ಮಾಡಬೇಕು ಎನ್ನುವುದು ಎಐಸಿಸಿಯ ತೀರ್ಮಾನವಾದರೂ, ಪಾದ
ಯಾತ್ರೆ ಮಾಡಬೇಕು ಎನ್ನುವುದು ಮಾತ್ರ ರಾಹುಲ್ ಗಾಂಧಿ ಅವರ ಯೋಜನೆಯಾಗಿದೆ. ಈ ರೀತಿಯ ಐತಿಹಾಸಿಕ
ಪಾದಯಾತ್ರೆಯಿಂದ ಪಕ್ಷಕ್ಕೆ ಭಾರಿ ಪ್ರಮಾಣದಲ್ಲಿ ಲಾಭವಾಗುತ್ತದೆ ಎಂದು ಎಲ್ಲರೂ ಒಪ್ಪಿದರೂ, ಸುಮಾರು ಆರು ತಿಂಗಳ ಕಾಲ ನಿರಂತರವಾಗಿ ಪಾದಯಾತ್ರೆ ಮಾಡುವುದಕ್ಕೆ ಸಾಧ್ಯವಿಲ್ಲ. ಅದರಲ್ಲಿಯೂ ಭಾರತ್ ಜೋಡೋ ಯಾತ್ರೆಯಲ್ಲಿರುವ ‘ಸಮನ್ವಯಕಾರರ’ ಪಟ್ಟಿಯಲ್ಲಿರುವವರಿಗೆ, ೩೫೦೦ ಕಿಮೀ ಪಾದಯಾತ್ರೆ ಮಾಡುವುದಕ್ಕೆ ‘ದೇಹ ಸಹಕರಿಸುವುದಿಲ್ಲ’ ಎನ್ನುವ ವಾದವನ್ನು ರಾಹುಲ್ ಮುಂದಿಟ್ಟಿದ್ದಾರೆ.

ಆದರೆ ಏನಕೇನ ಆಗಲಿ, ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ‘ಪಾದಯಾತ್ರೆ’ಯೊಂದೇ ನಮ್ಮ ಮುಂದಿರುವ ಮಾರ್ಗ ಎನ್ನುವ ರಾಗವನ್ನು ರಾಹುಲ್ ಎಳೆದು ಈ ವಿಷಯದಲ್ಲಿ ‘ರಾಜಿ’ಯೇ ಇಲ್ಲ ಎಂದು ಹೇಳಿರುವುದರಿಂದ ಇದೀಗ ಪಾದಯಾತ್ರೆಗೆ ಕಾಂಗ್ರೆಸ್ ಒಪ್ಪಿದ್ದಾರೆ. ಆದರೆ ಈ ಪಾದಯಾತ್ರೆಗೂ ಮೊದಲು ಯೋಚಿಸಬೇಕಿರುವುದು ಸುಮಾರು ಆರು ತಿಂಗಳ ಕಾಲ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕುವುದು ಯಾರು? ಹಾಕಿದರೂ, ದಿನಕ್ಕೆ 20 ಕಿಮೀ ಅನ್ನು ನಡೆದು ದೇಹದ ಆರೋಗ್ಯ ಕಾಪಾಡಿಕೊಳ್ಳುವವರು ಯಾರು? ಮೇಕೆದಾಟಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ‘ಮೇಕೆದಾಟು- ಬೆಂಗಳೂರು’ ಪಾದಯಾತ್ರೆಯನ್ನು ಪೂರ್ಣಗೊಳಿಸುವಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಸುಸ್ತಾದರು.

ಹೀಗಿರುವಾಗ, ಕರ್ನಾಟಕ ಒಂದರಲ್ಲಿಯೇ ಸುಮಾರು ೫೧೨ ಕಿಮೀ ಪಾದಯಾತ್ರೆ ಮಾಡಬೇಕು ಎಂದರೆ ಸಾಧ್ಯವೇ? ಎನ್ನುವ
ಪ್ರಶ್ನೆಗಳು ಎದ್ದಿವೆ. ಬಿಜೆಪಿಯನ್ನು ಕಟ್ಟಿಹಾಕಬೇಕು ಎನ್ನುವ ಕಾರಣಕ್ಕೆ, ಕಾಂಗ್ರೆಸ್‌ನ ಈ ಪಾದಯಾತ್ರೆಗೆ ಪ್ರಾದೇಶಿಕ ಪಕ್ಷಗಳು ಬೆಂಬಲ ಘೋಷಿಸಿ, ತಮ್ಮ ತಮ್ಮ ರಾಜ್ಯಗಳಿಗೆ ಪಾದಯಾತ್ರೆ ಬಂದಾಗ ಊಟ, ವಸತಿ ಸೇರಿದಂತೆ ‘ಅಗತ್ಯ’ ವ್ಯವಸ್ಥೆಗಳಿಗೆ ಬೇಕಾಗುವ ಆರ್ಥಿಕ ಬಲ ಹಾಗೂ ಕಾಲ್ನಡಿಗೆ ವೇಳೆ ಹಿಂಬಾಲಿಸಲು ಬೇಕಾದ ಜನ ಸಂಪನ್ಮೂಲವನ್ನು ನೀಡಬಹುದು. ಆದರೆ
ಇರುವ ಸಮಸ್ಯೆಯೆಂದರೆ, ರಾಹುಲ್ ಗಾಂಧಿ ಅವರೊಂದಿಗೆ ‘ಫ್ರಂಟ್ ಲೈನ್’ನಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸುವವರು ಯಾರು? ಆಯಾ ರಾಜ್ಯಗಳಿಗೆ ಬಂದಾಗ ನಾಯಕರು ಸೇರಿಕೊಳ್ಳಬಹುದು.

ಆದರೆ ಇನ್ನುಳಿದಂತೆ ಇಡೀ ಪಾದಯಾತ್ರೆ ಅಂದರೆ 3500 ಕಿಮೀ ಅನ್ನು ರಾಹುಲ್ ಜತೆ ಇನ್ಯಾರು ಪೂರ್ಣಗೊಳಿಸುತ್ತಾರೆ? ಎನ್ನುವ ಪ್ರಶ್ನೆಗೆ ಬಹುತೇಕರ ಬಳಿ ಉತ್ತರವಿಲ್ಲ ಹಾಗೂ ಸದ್ಯದ ಕಾಂಗ್ರೆಸ್ ಪರಿಸ್ಥಿತಿಯಲ್ಲಿ ‘ಇಷ್ಟು ದೂರ ಹೆಜ್ಜೆ’ ಹಾಕುವ ಮಾನಸಿಕ ಹಾಗೂ ದೈಹಿಕ ಶಕ್ತಿಯೂ ಅನೇಕರಲ್ಲಿಲ್ಲ ಎನ್ನುವ ಮಾತನ್ನು ಕಾಂಗ್ರೆಸ್‌ನವರೇ ಒಪ್ಪಿಕೊಳ್ಳುತ್ತಾರೆ.

ನೆಲಕಚ್ಚಿರುವ ಕಾಂಗ್ರೆಸ್ ಅನ್ನು ಮೇಲೆತ್ತುವುದಕ್ಕೆ ಮೆಟ್ಟಿಲನ್ನಾಗಿ ಈ ಪಾದಯಾತ್ರೆಯನ್ನು ಬಳಸಿಕೊಳ್ಳುವ ರಾಹುಲ್ ಗಾಂಧಿ ಅವರ ಯೋಜನೆ ಒಂದು ನಿಜಕ್ಕೂ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾದರೆ, ಕಾಂಗ್ರೆಸ್ ಉತ್ತಮ ಮೈಲೇಜ್ ಸಿಗುವುದರಲ್ಲಿ ಅನುಮಾನವೇ ಇಲ್ಲ. ಆದರೆ 3500 ಕಿಮೀ ಪೈಕಿ 3400 ಕಿಮೀ ಪೂರ್ಣಗೊಳಿಸಿ, ಬಾಕಿ ನೂರು ಕಿಮೀ ಪೂರ್ಣಗೊಳಿಸ ದಿದ್ದರೂ ಪಕ್ಷಕ್ಕೆ ಅದೊಂದು ದೊಡ್ಡ ಡ್ಯಾಮೇಜ್ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಪ್ರಾಯೋಗಿಕವಾಗಿ ‘ಅಸಾಧ್ಯ’ ಎನ್ನುವ ಬೃಹತ್ ಕೆಲಸಕ್ಕೆ ರಾಹುಲ್ ಕೈ ಹಾಕಿದ್ದಾರೆ. ಇಡೀ ಯಾತ್ರೆಯನ್ನು ಪಾದಯಾತ್ರೆಯಲ್ಲಿಯೇ ಪೂರ್ಣಗೊಳಿಸಿದರೆ ಮುಂದಿನ
ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಾಭವಾಗುವುದರಲ್ಲಿ ಅನುಮಾನವೇ ಇಲ್ಲ.

error: Content is protected !!