Sunday, 23rd June 2024

ಭೂ ತಗಣಾದಿ ಸೇವಿತ ಅಂದರೆ ಸದ್ಯಕ್ಕೆ ಪ್ಯಾರಿಸ್ ನಾಗರಿಕ

ತಿಳಿರು ತೋರಣ

srivathsajoshi@yahoo.com

‘ಅಣುರೇಣು ತೃಣಕಾಷ್ಠಗಳಲ್ಲೂ ಹರಿ ಇದ್ದಾನೆ ಎಂದ ವನು ಭಕ್ತ ಪ್ರಹ್ಲಾದ. ಕೊನೆಗೆ ‘ಈ ಕಂಬದಲ್ಲೂ ಇದ್ದಾನೆ!’ ಎಂದು ಹಿರಣ್ಯಕಶಿಪುವಿಗೆ ತೋರಿಸಿದಾ
ಗಲೇ ಕಂಬದಿಂದ ಉದ್ಭವಿಸಿದವನು ಅಂಬುಜನಾಭ ಶ್ರೀಹರಿ. ಈಗ ಅಣುರೇಣು ತೃಣಕಾಷ್ಠಗಳಲ್ಲಲ್ಲ- ಮನೆ, ಶಾಲೆ, ಆಸ್ಪತ್ರೆ, ಸಿನೆಮಾ ಥಿಯೇಟರ್, ಅಂಗಡಿ ಮುಂಗಟ್ಟು, ಶಾಪಿಂಗ್ ಮಾಲ್, ಬಸ್ಸು, ರೈಲು ಎಲ್ಲ ಕಡೆಯೂ ಇವೆ ತಗಣೆಗಳು ಎನ್ನುತ್ತಿದ್ದಾರಂತೆ ಪ್ಯಾರಿಸ್‌ನ ನಾಗರಿಕರು. ತಗಣೆಗಳ ಉಪಟಳದಿಂದ ಹೈರಾಣಾಗಿದ್ದಾರೆ ಅಲ್ಲಿಯ ಜನಸಾಮಾನ್ಯರು ಮತ್ತು ಪೌರಾಡಳಿತ ಅಧಿಕಾರಿಗಳು.

ಮೊನ್ನೆ ಸೆಪ್ಟೆಂಬರ್ ೨೫ರಿಂದ ಅಕ್ಟೋಬರ್ ೩ರವರೆಗೆ ನಡೆದ ‘ಪ್ಯಾರಿಸ್ ಫ್ಯಾಷನ್ ವೀಕ್’ ಉತ್ಸವ ಆದ ಮೇಲಂತೂ ಪ್ಯಾರಿಸ್ ನಲ್ಲಿ ತಗಣೆಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚಿದೆಯಂತೆ. ಬಹುಶಃ ಅವು ಕೂಡ ಫ್ಯಾಷನ್ ಪ್ರಿಯ ಜೀವಿಗಳೇ ಇರಬೇಕೇನೋ. ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ಕ್ರೀಡೆಗಳು ನಡೆಯಲಿರುವುದ ರಿಂದ ತಗಣೆ ಕಾಟದ ಈ ವಿದ್ಯಮಾನವು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಪ್ರಮುಖ ಸುದ್ದಿಯಾಗಿದೆ. ನಾನಿಲ್ಲಿ ದಿನಾ ಸಂಜೆ ವೀಕ್ಷಿಸುವ ವಾಂಟೇಜ್ ವಿದ್ ಪಲ್ಕಿ ಶರ್ಮಾ, ಎಬಿಸಿ ವರ್ಲ್ಡ್ ನ್ಯೂಸ್, ಮತ್ತು ಎನ್‌ಬಿಸಿ ನೈಟ್ಲೀ ನ್ಯೂಸ್ ಮೂರರಲ್ಲೂ ಮೊನ್ನೆ ಒಂದುದಿನ ತಗಣೆಗಳದೇ ಹೆಡ್‌ಲೈನ್ ಸ್ಟೋರಿ. ಅದರ ಪ್ರಕಾರ ಪ್ಯಾರಿಸ್‌ನಿಂದ ಮತ್ತು ಪ್ಯಾರಿಸ್‌ಗೆ ಅಂತಾರಾಷ್ಟ್ರೀಯ ಪ್ರಯಾಣ ಕ್ಷೇಮಕರವೇ ಎಂದು ಆತಂಕ ಮೂಡುವಷ್ಟು ಪರಿಸ್ಥಿತಿ ಹದಗೆಟ್ಟಿದೆಯಂತೆ.

ಫ್ರಾನ್ಸ್‌ನ ಸಾರಿಗೆ-ಸಂಪರ್ಕ ಸಚಿವರು ಗಾಬರಿಗೊಂಡು ಅಧಿಕಾರಿಗಳ ವಿಶೇಷ ಸಭೆ ಕರೆದು ತಗಣೆ ನಿರ್ಮೂಲನಾ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದಾರಂತೆ. ಒಟ್ಟಾರೆಯಾಗಿ ಫ್ರಾನ್ಸ್‌ನಲ್ಲಿ ತಗಣೆಗಳ ಉಲ್ಬಣ ಉಂಟಾಗಿರುವುದು ಇದೇ ಮೊದಲೇನಲ್ಲ. ಹಲವು ವರ್ಷಗಳಿಂದ ಅಲ್ಲಿ ಇದೇ ಪರಿಸ್ಥಿತಿ ಇದೆ. ಈಗ ಒಲಿಂಪಿಕ್ಸ್
ಪಂದ್ಯಗಳಿಗೆ ಪ್ಯಾರಿಸ್ ಆತಿಥೇಯ ಆಗಿರುವುದರಿಂದ ತಗಣೆ ಕಾಟ ಹೆಚ್ಚು ಮುನ್ನೆಲೆಗೆ ಬಂದಿದೆ, ಸ್ವಲ್ಪ ರಾಜಕೀಯ ಬಣ್ಣವನ್ನೂ ಪಡೆದಿದೆ ಎಂದು ಕೂಡ ಈ ವರದಿಗಳಲ್ಲಿ ವ್ಯಕ್ತವಾಗಿದೆ.

ಫ್ರೆಂಚರಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ, ನಮ್ಮ ಸಂಸ್ಕೃತದಲ್ಲಿರುವ ಒಂದು ಸುಭಾಷಿತ: ‘ಕಮಲೇ ಕಮಲಾ ಶೇತೇ ಹರಶ್ಶೇತೇ ಹಿಮಾಲಯೇ| ಕ್ಷೀರಾಬ್ಧೌ ಚ ಹರಿಶ್ಶೇತೇ ಮನ್ಯೇ ಮತ್ಕುಣ ಶಂಕಯಾ||’ ಅಂದರೆ- ಕಮಲದಲಿ ಮಲಗುವಳು ಲಕುಮಿ. ಶಿವ ಮಲಗುವನು ಹಿಮಾಲಯದಿ. ಪಾಲ್ಗಡಲಲಿ ಪವಡಿಸುವನು ಹರಿ.
ಇದರ ಗುಟ್ಟೇನು? ಒಬ್ಬ ರಸಿಕನು ತನ್ನ ಅನುಭವಾಮೃತದಿಂದ ‘ತಗಣೆ ಕಾಡಬಹುದೆಂಬ ಶಂಕೆಯೇ ಇದಕ್ಕೆಲ್ಲ ಕಾರಣ’ ಎಂದಿದ್ದಾನೆ. ಥಂಡಿ ಇರುವ ಕಡೆ ತಗಣೆ ಬರಲಿಕ್ಕಿಲ್ಲ ಎಂದುಕೊಂಡು ವಿಷ್ಣುವು ಕ್ಷೀರಸಾಗರದಲ್ಲೂ, ಪರಶಿವನು ಹಿಮಾಲಯದಲ್ಲೂ ಆಶ್ರಯ ಪಡೆದರು. ಲಕ್ಷ್ಮಿ ಮತ್ತೂ ಚಾಲಾಕಿನವಳು. ಕಮಲದ
ಹೂವು ರಾತ್ರಿಹೊತ್ತು ಮುಚ್ಚಿ ಹೋಗುತ್ತದೆಂದು ಗೊತ್ತು.

ಆದ್ದರಿಂದ ಲಕ್ಷ್ಮೀದೇವಿಯು ಆರಾಮಾಗಿ ಅಲ್ಲಿ ತನ್ನ ಹಾಸಿಗೆ ಹಾಸಿ ಪವಡಿಸಿದಳು. ತಗಣೆಗಳಿಗೆ ನೋ ಎಂಟ್ರಿ. ಹೇಗಿದೆ ಉಪಾಯ!? ಎಸ್. ವಿ. ಪರಮೇಶ್ವರ ಭಟ್ಟರು ಈ ಕಲ್ಪನೆಯನ್ನು ಇನ್ನಷ್ಟು ಮುಂದುವರಿಸಿದ್ದಾರೆ. ಅವರ ಇಂದ್ರಚಾಪ ಕೃತಿಯಲ್ಲಿ ಒಂದು ಚೌಪದಿ ಹೀಗೆ ಬರುತ್ತದೆ: ‘ಹರಿ ಹೋಗಿ ಹಾವಿನ ಹಾಸಿಗೆ
ಹಿಡಿದನು| ಶಿವ ಹಿಮಗಿರಿಯ ಹತ್ತಿದನು| ಗಗನಯಾತ್ರಿಗಳಾದರಾ ಸೂರ್ಯಚಂದ್ರರು| ಎಲ್ಲರೂ ತಿಗಣೆಗಂಜಿದರು||’ – ಊಹಿಸಿದರೆ ಇದೂ ಒಂದು ಸೋಜಿಗವೇ. ಚಂದ್ರ ಯಾವಾಗಲೂ ಕೂಲ್ ಕೂಲ್ ತಣ್ಣಗಿನವನು. ತಗಣೆ ಅವನ ಉಸಾಬರಿಗೆ ಹೋಗಲಿಕ್ಕಿಲ್ಲ.

ಧಗಧಗ ಉರಿಯುವ ಸೂರ್ಯನ ಹತ್ತಿರಕ್ಕೂ ಸುಳಿಯಲಿಕ್ಕಿಲ್ಲ. ಅಷ್ಟಾದರೂ ಸೂರ್ಯಚಂದ್ರರಿಗೆ ತಗಣೆಯ ಭಯ. ಅಂದಮೇಲೆ ಪ್ಯಾರಿಸ್ ಪ್ರಜೆಗಳ ಪಾಡೇನು!
ಸಂಸ್ಕೃತದಲ್ಲಿ ಮತ್ಕುಣ ಅಂದರೆ ತಗಣೆ (ತಗಣಿ, ತಗಣೆ, ತಗುಣೆ, ತಿಗಣಿ, ತಿಗಣೆ, ತಿಗುಣಿ ಮುಂತಾಗಿ ಬೇರೆಬೇರೆ ಪ್ರಾದೇಶಿಕ ಪದಬಳಕೆ ಇದೆಯಾದರೂ ಈ ಲೇಖನದುದ್ದಕ್ಕೂ ತಗಣೆ ಎಂಬ ಏಕರೂಪವನ್ನು ಬಳಸಲಿದ್ದೇನೆ. ಗಜಾನನಂ ಭೂ-ತಗಣಾದಿ ಸೇವಿತಂ… ಉಮಾಸುತಂ ಶೋ-ಕವಿನಾಶ ಕಾರಣಂ… ಅಂತ
ಒಂದು ತಮಾಷೆಯ ಪದವಿಭಜನೆ ಇದೆ, ಆ ಶ್ಲೋಕದಿಂದಲೇ ಇಂದಿನ ಅಂಕಣಬರಹದ ಶೀರ್ಷಿಕೆಗೂ ಒಂದಿಷ್ಟು ವಿನೋದವನ್ನು ಎರವಲು ಪಡೆದಿದ್ದೇನೆ). ಮತ್ಕುಣದ ಉಲ್ಲೇಖ ಬರುವ ಇನ್ನೊಂದು ಸುಭಾಷಿತವೆಂದರೆ ‘ಮನೋ ಮಧುಕರೋ ಮೇಘೋ ಮದ್ಯಪೋ ಮತ್ಕುಣೋ ಮರುತ್| ಮಾ ಮದೋ ಮರ್ಕಟೋ
ಮತ್ಸ್ಯೋ ಮಕಾರಾ ದಶ ಚಂಚಲಾಃ||’ ಸಂಸ್ಕೃತದಲ್ಲಿ ಮಕಾರದಿಂದ ಆರಂಭವಾಗುವ ಈ ಹತ್ತು ವಿಷಯಗಳು- ಮನಸ್ಸು, ಜೇನುನೊಣ ಅಥವಾ ದುಂಬಿ, ಮೋಡ, ಕುಡುಕ, ತಗಣೆ, ಗಾಳಿ, ಲಕ್ಷ್ಮಿ, ಅಮಲು, ಕೋತಿ, ಮತ್ತು ಮೀನು- ಎಲ್ಲವೂ ಚಂಚಲತೆಗೆ ಹೆಸರುವಾಸಿ.

ಇದೇ ಮತ್ಕುಣವು ಮಾಘಕವಿಯ ಶಿಶುಪಾಲವಧ ಕಾವ್ಯದಲ್ಲಿ ‘ಮತ್ಕುಣಾವಿವ ಪುರಾ ಪರಿಪ್ಲವೌ ಸಿಂಧುನಾಥಶಯನೇ ನಿಷೇದುಷಃ…’ ಎಂಬಲ್ಲಿ ಬರುತ್ತದೆ, ಸಮುದ್ರಶಾಯಿಯಾದ ವಿಷ್ಣುವಿಗೆ ಮಧುಕೈಟಭರು ತಗಣೆಯಂತೆ ಕಾಟ ಕೊಟ್ಟರು ಎಂಬ ವಿವರಣೆಯಲ್ಲಿ. ಹಾಗೆಯೇ ಅನಾಮಧೇಯ ಕವಿಯೊಬ್ಬ ಬರೆದ
ಚಾಟು ಶ್ಲೋಕ: ಮತ್ಕುಣಾ ಮಶಕಾ ರಾತ್ರೌ ಭಿಕ್ಷುಕಾ ಮಕ್ಷಿಕಾ ದಿವಾ| ಪಿಪೀಲಿಕಾ ಚ ಭಾರ್ಯಾ ಚ ಬಾಧೇತೇ ತು ನಿರಂತರಂ|| –
ತಗಣೆ ಮತ್ತು ಸೊಳ್ಳೆ ರಾತ್ರಿಯಲ್ಲೂ, ಭಿಕ್ಷುಕ ಮತ್ತು ನೊಣ ಹಗಲಿನಲ್ಲೂ ಕಾಟ ಕೊಟ್ಟರೆ, ಇರುವೆ ಮತ್ತು ಹೆಂಡತಿಯ ಕಾಟವಾದರೋ ನಿರಂತರ!

ಪ್ಯಾರಿಸ್‌ನಲ್ಲಿ ಸಿನೆಮಾ ಥಿಯೇಟರ್‌ಗಳಲ್ಲೂ ತಗಣೆ ಕಾಟ ಎಂದು ಕೇಳಿದಾಗ ನನಗೆ ಥಟ್ಟನೆ ನೆನಪಾದದ್ದು ದಾವಣಗೆರೆಯ ಅತಿಪ್ರಾಚೀನ ‘ಮೋತಿ’ ಟಾಕೀಸು. ಅದಂತೂ ತಗಣೆಗಳ ಸಾಮ್ರಾಜ್ಯವೆಂದೇ ಪ್ರಖ್ಯಾತ. ಅಲ್ಲಿ ಪ್ರದರ್ಶಿತವಾಗುತ್ತಿದ್ದ ಹಳೆಯ ಕಪ್ಪು-ಬಿಳುಪು ಚಿತ್ರಗಳೆಂದರೆ ತಗಣೆಗಳಿಗೂ ಭಾರೀ ಪ್ರೀತಿಯೋ
ಏನೋ. ಆಫ್‌ಕೋರ್ಸ್ ಇದು ಮೂರು ದಶಕಗಳ ಹಿಂದಿನ, ನಮ್ಮ ಎಂಜಿನಿಯರಿಂಗ್ ವಿದ್ಯಾಭ್ಯಾಸದ ವೇಳೆಯ ಮಾತು. ಈಗ ಮೋತಿ ಟಾಕೀಸ್ ಇದೆಯೇ ಅಥವಾ ಅದರ ಜಾಗದಲ್ಲಿ ಮಲ್ಟಿಪ್ಲೆಕ್ಸ್ ಎದ್ದಿದೆಯೇ ನನಗೆ ಗೊತ್ತಿಲ್ಲ. ಹಾಗಂತ, ದಾವಣಗೆರೆಯ ಮೋತಿ ಟಾಕೀಸ್‌ನಲ್ಲಿ ಮಾತ್ರ ತಗಣೆಗಳ ದರಬಾರು ಎಂದುಕೊಳ್ಳುವುದೂ ಸರಿಯಲ್ಲ. ಆ ವಿಚಾರದಲ್ಲಿ ಮೋತಿಯನ್ನು ಮೀರಿದ ಅದೆಷ್ಟು ಟಾಕೀಸುಗಳು ಕರ್ನಾಟಕದಲ್ಲಿದ್ದುವೋ ಮತ್ತು ಈಗಲೂ ಮುಂತಾದ ಹೆಸರಿನ ತಗಣೆಗಳು ಬರುತ್ತವೆ.

ಅಂಥ ಪರಾಕ್ರಮಿ ತಗಣೆಗಳು ಇವೆಯೋ! ಕರ್ನಾಟಕದಲ್ಲಿ/ಭಾರತದಲ್ಲಿ ಮಾತ್ರ ಸಿನೆಮಾ ಟಾಕೀಸ್‌ಗಳಲ್ಲಿ ತಗಣೆ ಕಾಟ ಎಂದುಕೊಳ್ಳುವುದೂ ಬೇಡ. ಅಮೆರಿಕ
ದಲ್ಲಿ ನ್ಯೂಯಾರ್ಕ್‌ನ ಜಗದ್ವಿಖ್ಯಾತ ಟೈಮ್ ಸ್ಕ್ವೇರ್ ಬಳಿಯಿರುವ ಎಎಂಸಿ ಥಿಯೇಟರ್‌ನಲ್ಲಿ ತನಗೆ ತಗಣೆಗಳು ಕಚ್ಚಿದುವು ಎಂದು ಇತ್ತೀಚೆಗೆ ಒಬ್ಬಾಕೆ ಟಿಕ್‌ಟಾಕ್ ವಿಡಿಯೊ ಮಾಡಿ ಗುಲ್ಲೆಬ್ಬಿಸಿದ್ದಳು. ಅಂಕಿಅಂಶಗಳ ಪ್ರಕಾರ ಅಮೆರಿಕದಲ್ಲಿ ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾ ರಾಜ್ಯಗಳಲ್ಲಿ ತಗಣೆಗಳು ಹೆಚ್ಚಿರುವುದು ಹೌದು. ಫ್ಲೋರಿಡಾ, ಓಹಯೋ, ನ್ಯೂಜೆರ್ಸಿ, ಮೇರಿಲ್ಯಾಂಡ್ ಮುಂತಾದ ರಾಜ್ಯಗಳು ಪೈಪೋಟಿ ನೀಡುತ್ತಿರುವುದೂ ಹೌದು. ಅಂತೂ ತಗಣೆ ವಿಶ್ವವ್ಯಾಪಿ. ಇಲ್ಲದಿದ್ದರೆ ಹರಿಹರರೇಕೆ ಹಾಲಿನ ಸಮುದ್ರ ಮತ್ತು ಹಿಮಪರ್ವತದ ಮೊರೆ ಹೊಗುತ್ತಿದ್ದರು? ‘ತಗಣೆ ಉಪದ್ರವ ಮಗಳನ್ನೂ ಬಿಡಲಿಲ್ಲ’ ಅಂತೊಂದು ಗಾದೆಯೇ ಹುಟ್ಟಿ ಕೊಂಡಿರುವುದು ಬಹುಶಃ ತಗಣೆಗೆ ಈ ಪರಿಯಲ್ಲಿರುವ ಸಾರ್ವಭೌಮತ್ವದಿಂದಲೇ.

ತಗಣೆ ಸರ್ವವ್ಯಾಪಿ ಆದ್ದರಿಂದ ಅದರ ಮಹಿಮೆ ಸರ್ವಜ್ಞನ ವಚನಗಳಲ್ಲಿಯೂ ಕಾಣಸಿಗುತ್ತದೆ. ‘ಚಿಕ್ಕಾಡಿ ತಗುಣಿಯೂ| ರಕ್ಕಸರು ಜಾರೆಯರು| ಒಕ್ಕಲಿಕ್ಕುವರು ಇರುಳೆಲ್ಲ ಬೆಳಗಾಗಿ| ಸುಕ್ಕಿದಂತಿಹರು ಸರ್ವಜ್ಞ|’ ಅಂತ ಒಂದು ವಚನ. ಚಿಕ್ಕಾಡಿ ಅಂದರೆ ತಗಣೆಯಂಥದೇ ಒಂದು ಕ್ರಿಮಿ. ರಾತ್ರಿ ಹೊತ್ತು ಉಪದ್ರವ ಕೊಡುವಂಥದು. ರಕ್ಕಸರಂತೂ ನಿಶಾಚರರೆಂದೇ ಗುರುತಿಸಿಕೊಳ್ಳುವ ವರು. ಜಾರೆಯರು ಅಂದರೆ ವೇಶ್ಯೆಯರು. ಇವರೆಲ್ಲರದೂ ರಾತ್ರಿಯಿಡೀ ಚಟುವಟಿಕೆ. ಇರುಳೆಲ್ಲ ಒಕ್ಕಲು ಹೂಡುವರು.

ಬೆಳಗಾಗುತ್ತಿದ್ದಂತೆಯೇ ಎಲ್ಲೋ ಮರೆಯಾಗುವರು ಎನ್ನುತ್ತಾನೆ ಸರ್ವಜ್ಞ. ಇನ್ನೊಂದು ವಚನ ಹೀಗಿದೆ: ‘ಮೊಗೆಯ ನೀರೊಳಗೊಂದು| ನೆಗಳು ಆಡಿದರಂದು| ತಗುಣಿ ಹೆಬ್ಬುಲಿಯ ಹಿಡಿದಂದು, ಹೆಣ್ಣಿನ| ಬಗೆಯ ನಂಬುವದು ಸರ್ವಜ್ಞ|’ ನನಗಿದರ ಸರಿಯಾದ ಅರ್ಥ ಗೊತ್ತಾಗಲಿಲ್ಲ. ಲೋಕದಲ್ಲಿ ಅಸಾಧ್ಯವಾದುದೆಲ್ಲವನ್ನೂ ಪಟ್ಟಿ ಮಾಡಿ, ಒಂದುವೇಳೆ ಅದು ಸಾಧ್ಯವಾದರೆ ಮಾತ್ರ ಹೆಣ್ಣಿನ ಮನಸ್ಸನ್ನು ನಂಬಬಹುದು ಎಂದು ಸರ್ವಜ್ಞನ ಅಂಬೋಣ ಇರಬಹುದು. ಆದರೆ… ಹೋದರೆ… ಅಜ್ಜಿಗೆ ಮೀಸೆ ಬಂದರೆ… ಎತ್ತು ಕರು ಹಾಕಿದರೆ… ಕೋಣ ಹಾಲು ಕೊಟ್ಟರೆ… ಮೊಲಕ್ಕೆ ಕೋಡು ಕಾಣಿಸಿಕೊಂಡರೆ… ಅಂತೆಲ್ಲ ರೆ ಇಮ್ಯಾಜಿನೇಷನ್ಸ್
ಮಾಡ್ತೇವೆ ನೋಡಿ ಹಾಗೆಯೇ ಇರಬೇಕು ಇದು ಎಂದುಕೊಂಡಿದ್ದೇನೆ. ಇದರಲ್ಲಿನ ‘ತಗಣೆಯು ಹೆಬ್ಬುಲಿಯನ್ನು ಹಿಡಿದಂದು’ ಸಾಲು ಗಮನಾರ್ಹವಾದುದು.

ಆದರೆ ಒಂದು ದೃಷ್ಟಿಯಿಂದ ಯಾಕಾಗಬಾರದು? ಸಿಂಹವನ್ನು ಸೋಲಿಸಿದ ನೊಣ, ಆನೆಯನ್ನು ಸೋಲಿಸಿದ ಇರುವೆ ಮುಂತಾಗಿ ಪಂಚತಂತ್ರ ಪ್ರಸಂಗಗಳು ಇವೆ.
ಪಂಚತಂತ್ರದ ಇನ್ನೊಂದಿಷ್ಟು ಕಥೆಗಳಲ್ಲಿ ಡುಂಡುಕ, ಅಗ್ನಿಮುಖ ‘ಪ್ಯಾರಿಸ್‌ನಂಥ ಪ್ಯಾರಿಸ್ ನಗರವನ್ನೇ ಥರಥರ ನಡುಗಿಸಿದ್ದೇವೆ ಅಂದಮೇಲೆ ಹೆಬ್ಬುಲಿಯನ್ನು ಹಿಡಿಯುವುದೇನು ಮಹಾ!?’ ಎಂದು ಮೀಸೆ ತಿರುವಬಹುದು. ಸರ್ವಜ್ಞನ ವಚನವನ್ನು ಅಷ್ಟಾದರೂ ಅರ್ಥ ಮಾಡಿಕೊಂಡೆನು. ಆದರೆ ಪುರಂದರ ದಾಸರದೊಂದು ಮುಂಡಿಗೆ ಇದೆ, ಅದರ ದಂತೂ ತಲೆಬುಡ ಗೊತ್ತಾಗಿಲ್ಲ ನನಗೆ. ‘ನೋಡಿರಯ್ಯ ನೀವು ನೋಡಿರಯ್ಯ… ನೋಡಿರಯ್ಯ ಹರಿದಾಸರ ಮಾಯವ… ಜೋಡಾಗಿಪ್ಪ ಎರಡು ಪಕ್ಷಿ ಗೂಡನಗಲಿ ಗೂಡ ತೊರೆದು ಆಡುತ ಬಂದು ನುಂಗಿ ನೋಡುವ ಸೊಗಸು…’ ಎಂಬ ಪಲ್ಲವಿಯಿಂದ ಆರಂಭವಾಗುವ ಇದರ ಮೊದಲ ಚರಣದಲ್ಲಿ ತಗಣೆ ಬರುತ್ತದೆ.

‘ಮನೆಯ ಒಳಗೆ ಒಂದು ತಗಣೆ ಮಾಳಿಗೆ ನುಂಗಿತು… ಮಂಚವ ನುಂಗಿತು… ಮಲಗಿದ್ದ ಸತಿಪತಿಯ ನುಂಗಿತು… ಮನೆಗೆ ಬಂದ ಬಳಗವ ನುಂಗಿತು… ಬಿಡದೆ ನುಂಗಿತು ಮನೆಮಕ್ಕಳನು… ಅದು ಸಾಲದೆಂದು ತಗಣೆಯ ಮರಿಯು ಆಡುತ ಬಂದು ನುಂಗಿ ನೋಡುವ ಸೊಗಸ…’ ಎಂದು ಇದೆ. ಇದರಲ್ಲಿ ಮೇಲ್ನೋಟಕ್ಕೆ
ಮಲಗುವ ಮಂಚದಲ್ಲಿ ತಗಣೆಗಳ ಕಾಟದ ಚಿತ್ರಣವನ್ನೇ ಕೊಟ್ಟಿದ್ದಾರಾದರೂ ಗೂಢಾರ್ಥ ಬೇರೆಯೇ ಏನೋ ಇದೆ. ಶಿಶುನಾಳ ಷರೀಫರು ‘ಕೋಡಗನ ಕೋಳಿ ನುಂಗಿತ್ತಾ…’ ಎಂದಂತೆ ಇಲ್ಲಿ ತಗಣೆಯು ಮಾಳಿಗೆಯನ್ನು ನುಂಗಿತು, ಮಂಚವನ್ನು ನುಂಗಿತು, ಸತಿಪತಿಯರನ್ನು ನುಂಗಿತು, ಮನೆಮಕ್ಕಳನ್ನು ನುಂಗಿತು, ಮನೆಗೆ
ಬಂದ ಬಳಗವನ್ನೂ ನುಂಗಿತು ಅಂತೆಲ್ಲ ಬರುತ್ತದೆ! ಯಾವುದಿರಬಹುದು ಅಷ್ಟು ಬಲಶಾಲಿ ತಗಣೆ? ಪುರಂದರ ದಾಸರ ಈ ಮುಂಡಿಗೆಯನ್ನು ಯಾರಾದರೂ ಡಿಕೋಡ್ ಮಾಡಬಲ್ಲವರಿದ್ದರೆ- ‘ಹುತ್ತದೊಳಗೆ ಒಂದು ಸರ್ಪ, ಎಂಟು ಗಜಗಳ ಬಿಡದೆ ನುಂಗಿತು, ಎಂಟು ನೆಂಟರ ನುಂಗಿತು, ಮತ್ತೆ ರವಿಚಂದ್ರರ ನುಂಗಿತು, ಅಂಥ ಸರ್ಪನ ಕಪ್ಪೆಯು ನುಂಗಿತು ಅಂಥದೊಂದು ಕಪ್ಪೆಯ ಮರಿಯಾಡುತ ಬಂದು ನುಂಗಿ ನೋಡುವ ಸೊಗಸ…’ ಎಂದು ಇದರ ಇನ್ನೊಂದು ಚರಣ; ‘ಮೂರು ನುಂಗಿತು, ಮೂರಾರನೆ ನುಂಗಿತು ಮೂರು ಮೂರ್ತಿಗಳ ಬಿಡದೆ ನುಂಗಿತು, ಸಾಗರ ಸಪ್ತದ್ವೀಪವ ನುಂಗಿತು ವರ ಗುರು ಪಂಚಾಕ್ಷರಗಳ ನುಂಗಿತು ಶರಣಾಗತ ಶ್ರೀ ಪುರಂದರ ವಿಠಲ ತಾನೆ ಒಬ್ಬನೆ ಬಲ್ಲ’ ಎಂದು ಕೊನೆಯ ಚರಣ. ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ… ಇದ್ದಂತೆ ಏನೋ ಪಾರಮಾರ್ಥಿಕ ತತ್ತ್ವವನ್ನೇ ಅಡಗಿಸಿಟ್ಟಿದ್ದಾರೆ ಇದರಲ್ಲಿ. ಅಂದಹಾಗೆ ಪುರಂದರ ದಾಸರೇನಾದರೂ ಪ್ಯಾರಿಸ್ ನಗರದ ಈಗಿನ ಪರಿಸ್ಥಿತಿಯನ್ನು ನೋಡಿ ಇಂತಹ ಮುಂಡಿಗೆ ಹೆಣೆದಿದ್ದರೆ ‘ತಗಣೆ ಐಫೆಲ್ ಟವರನ್ನೇ ನುಂಗಿತು’ ಎನ್ನುತ್ತಿದ್ದರೇನೋ.

ನಮ್ಮ ವರಕವಿ ಬೇಂದ್ರೆ ಮಾಸ್ತರರೂ ತಗಣೀ ಮ್ಯಾಲ ಒಂದು ಛಲೋ ಕವಿತಾ ಬರದಾರ. ಅದು, ‘ವರದಾ ಕಂಚೀ ವರದಾ…’ ಎಂದು ಗೋಪಾಲ ದಾಸರು ರಚಿಸಿದ ಕೀರ್ತನೆಯ ಅಣಕವಾಡು. ಬೇಂದ್ರೆಯವರ ನಿರಾಭರಣ ಸುಂದರಿ ಸಂಕಲನದಲ್ಲಿ ಬರುತ್ತದೆ. ‘ಒರದಾ ತಗಣಿ ಒರದಾ…’ ಎಂದು ಆರಂಭವಾಗುತ್ತದೆ. ಇಡೀ ದಿನ ಮೈಮುರಿದು ದುಡಿದು ದಣಿದು ಶ್ರೀಹರಿ… ಎಂದು ಉದ್ಗರಿಸುತ್ತ ಒರಗಿದ್ದ ಬಡ ಅಡಿಗೆಯವನು, ತಗಣೆಯ ಉಪಟಳವನ್ನು ತಾಳಲಾರದೆ ಮತ್ಕುಣ ಕುಲವನ್ನೆಲ್ಲ ಶಾಪದಿಂದ ಸಂಹಾರ ಮಾಡೆಂದು ದೇವರಿಗೆ ಒರೆದುಕೊಳ್ಳುವ ಸನ್ನಿವೇಶ.

‘ಮಡಲಿನೊಳ್ ತಗಣಿ ಕಾಲ್ ಪಿಡಿದು ಕಡಿಯಲು ಜೀವ| ಸರಿಯೇ ಜೀವ| ಸರಿಯೇ ಉಗುರಿಲಿ ಕಾಲ ಕೆರಿಯೆ| ಮಡದಿಯೊಡ ನುಡಿಯದಲೆ ಮಲಗಿದ| ಎಡಬಲದವರ ಕಡೆಗೆ ನೋಡದೆ| ತಡೆಯದಲೆ ತಾ ಬಾಗಿ ಕರಿಯ| ತೊಡೆಯ ಸಂದಿಯೆ ತಗಣಿ ತೆಗೆದು| ಒರದಾ ಒಂದು ಒರದಾ…’ ಅಂತೆಲ್ಲ ಚಿತ್ರಣ. ‘ತೊಡೆ
ಗೊಂದು ಅಡಿಗೊಂದು ಕಡಿಯೆ ಕಾಟಕೆ ಬಡವ| ಮಿಡುಕಿ ಬಡವ| ಮಿಡುಕಿ ದಣಿದನು ಅವನು ಹುಡುಕಿ| ಪೊಡವಿಯಲಿ ಬೆಂಬದಿಯ ಲೊತ್ತುತ| ದೃಢದಿ ತಗಣಿಯ ಜಪವ ಮಾಡಲು| ತಡೆಯದೆಲೆ ತಾನೊಲಿದೊ ಶೀಘ್ರದಿ| ಕೊಡದೆ ಬಿಡದೇ ಕೈಗೆ ಸಿಕ್ಕಲು ಒರದಾ ಅದನೂ ಒರದಾ…’ ಎಂದು ಮತ್ತಷ್ಟು ವಿವರಣೆ.

‘ಬಡತನದಲಿ ಬನ್ನ ಬಡುತಲಿರಲು ನನಗೆ| ಕಡಿದಿ ನನಗ| ಕಡಿದಿ ಇರುವ ನೆತ್ತರ ಕುಡಿದ| ಮಡದಿ ಮಕ್ಕಳಿಗಾಗಿ ಪಾರ್ವನು| ಅಡಿಗಡಿಗೆ ಮಾಡುತ್ತ ಸೊರಗಿ| ಕಡೆಗೆ ಸಾವಿನ ಕಡೆಗೆ ಹೊರಟರೆ| ಕಡಿನ ಕಾಳ್ ರಕ್ಕಸರೆ ಎಂದು… ಒರದಾ ತಿರುಗಿ ಒರದಾ!’ ಅಂತ ಮುಕ್ತಾಯವಾಗುತ್ತದೆ. ಬೇಂದ್ರೆಯವರು ತಗಣೆಯನ್ನು ಕಾಳರಾಕ್ಷಸ ಎಂದು ಕರೆದರೆ ತೀ. ನಂ. ಶ್ರೀಕಂಠಯ್ಯನವರು ಒಂದು ಲಲಿತಪ್ರಬಂಧದಲ್ಲಿ ‘ಮಾನವನ ಕ್ಷುದ್ರ ಶತ್ರುಗಳ ಶ್ರೇಣಿಯಲ್ಲಿ ತಗಣೆಗೇ ಅಗ್ರ ತಾಂಬೂಲ’ ಎಂದು ಬರೆದಿದ್ದಾರೆ. ನಾ.ಕಸ್ತೂರಿ ಅವರು ಅನರ್ಥ ಕೋಶದಲ್ಲಿ ‘ತಿಗಣೆ = ಮನುಷ್ಯನೊಂದಿಗೆ ತನ್ನ ರಕ್ತ ಸಂಬಂಧವನ್ನು ಉಳಿಸಿಕೊಂಡಿರುವ ಪ್ರಾಣಿ. ಹಾಸಿಗೆ ಇದ್ದಷ್ಟು ತಿಗಣೆ ಕಾಟ (ಗಾದೆ)’ ಎಂದು ದಾಖಲಿಸಿದ್ದಾರೆ. ಚಂದ್ರಶೇಖರ ಕಂಬಾರರ ‘ಚಾಳೇಶ’ ನಾಟಕದಲ್ಲಿ ಗಂಡ-ಹೆಂಡತಿ ಗೋವಿಂದ ಮತ್ತು ಕಾಶಿ,
ಸಾಲ ಮಾಡಿ ತೀರಿಸಲಿಕ್ಕಾಗದೇ ಸಾಲಗಾರರಿಂದ ತಪ್ಪಿಸಿಕೊಳ್ಳಲು ಕಪ್ಪು ಚಾಳೀಸು ಧರಿಸಿ ಕನಸಿನ ಲೋಕದಲ್ಲಿ ವಿಹರಿಸುತ್ತಿರುತ್ತಾರೆ.

‘ದೇವಿ, ನಾನೀಗ ಏನು ಮಾಡಿದೆ ಗೊತ್ತಾ? ನರಕೋಟಿಯ ನೆತ್ತರು ಹೀರುವ ತಗಣೆ ಎಂಬ ಭಯಂಕರ ಪ್ರಾಣಿಯನ್ನು ಬೇಟೆಯನ್ನಾಡಿದೆ’ ಎಂದು ಗೋವಿಂದ ಅಂದರೆ ‘ಆಹಾ, ಲೋಕಕಲ್ಯಾಣಕ್ಕಾಗಿ ತಗಣೆಯನ್ನು ಬೇಟೆಯಾಡಿದ ಕಲಿಯುಗವಿಪರೀತನೂ, ಧೀರನೂ ಆದ ತಮ್ಮ ಕೈ ಹಿಡಿದ ನಾನೇ ಧನ್ಯಳು!’ ಎಂಬ ನಾಟಕೀಯ ಡೈಲಾಗ್‌ನೊಂದಿಗೆ ಕಾಶಿ ಉತ್ತರ ಕೊಡುತ್ತಾಳೆ. ಜಯಂತ ಕಾಯ್ಕಿಣಿಯವರು ‘ಆರೋಪ ಅಲ್ಲ ಅಹವಾಲು’ ಕವಿತೆಯಲ್ಲಿ ‘ದೇವಸ್ಥಾನದ ಪೌಳಿಯಲ್ಲಿ ಸೋರಿಬಿದ್ದ ಪುಣ್ಯ| ಸಿಕ್ಕಾಪಟ್ಟೆ ಹರಿದು ಕೊಚ್ಚಿ ಗಟಾರ ಗಟ್ಟಲೆ ತುಂಬಿ| ನಾರುತ್ತಿದೆ- ಖುರ್ಚಿಗಳ ತುಂಬೆಲ್ಲ ಫೈಲುಗಳ ತುಂಬೆಲ್ಲ ಜಿಗಿ ಜಿಗಿದು| ರಕ್ತಹೀರುವ ತಗಣೆ
ಸಂತರ್ಪಣೆ ರಾಡಿಯಲ್ಲಿ| ವಾಚ್ಯ-ತತ್ತ್ವದ ಅಗುಳು ಬಿದ್ದು ಕೊಳೆ ಯುತ್ತಿದೆ…’ ಎಂದು ಒಂದು ಘೋರ ಚಿತ್ರಣವನ್ನು ಕೊಡುತ್ತಾರೆ.

ನನಗೆ ತಿಳಿದಿರುವಂತೆ ವಸುಧೇಂದ್ರ ಸಹ ‘ತಗಣಿ’ ಶೀರ್ಷಿಕೆಯ ಒಂದು ಕಥೆ ಬರೆದಿದ್ದಾರೆ. ಸಾಹಿತ್ಯಲೋಕದಲ್ಲೂ ತಗಣೆ ಎಷ್ಟು ಹಾಸುಹೊಕ್ಕಾಗಿದೆ ಎಂದು ತಿಳಿಸುವುದಕ್ಕೆ ಇವೆಲ್ಲ ಉದಾಹರಣೆಗಳು. ಕೊನೆಯಲ್ಲೊಂದು ಚಿತ್ರಗೀತೆಯ ಉಲ್ಲೇಖವನ್ನೂ ಸೇರಿಸೋಣ. ಇದು ಪ್ಯಾರಿಸ್ ಪ್ರಣಯ ಕನ್ನಡ ಚಿತ್ರದ್ದಲ್ಲ. ೧೯೭೩ರಲ್ಲಿ ಬಿಡುಗಡೆಯಾದ, ದೇವಾನಂದ್ ಮತ್ತು ಹೇಮಾಮಾಲಿನಿ ಅಭಿನಯದ ‘ಛುಪಾ ರುಸ್ತುಂ’ ಹಿಂದೀ ಚಿತ್ರದ ಗೀತೆ.

ಹಾಸಿಗೆಯ ಮೇಲೆ ರಾಜಾರೋಷವಾಗಿ ಓಡಾಡುತ್ತಿರುವ ತಗಣೆಗಳನ್ನು ಓಡಿಸುತ್ತ ನಾಯಕ ದೇವಾನಂದ್ (ಹಿನ್ನೆಲೆಗಾಯಕ ಕಿಶೋರ್ ಕುಮಾರ್) ಹಾಡುವ ಹಾಡು: ‘ಽರೆ ಸೇ ಜಾನಾ ಖಟಿಯನ್ ಮೇಂ ಓ ಖಟಮಲ್…’ ಬಂಗಾಲಿ ಜನಪದ ಹಾಡೊಂದರ ಪ್ರಭಾವವಿರುವ ರಚನೆ ಇದಂತೆ. ಹಿಂದೀ ಭಾಷೆಯಲ್ಲಿ ಖಟಮಲ್
ಎಂದರೆ ತಗಣೆ. ‘ರಾಜಕುಮಾರಿ ಮಲಗಿದ್ದಾಳೆ. ಸಿಹಿಯಾದ ಕನಸುಗಳನ್ನು ಕಾಣುತ್ತಿದ್ದಾಳೆ. ಆದ್ದರಿಂದ ನೀನು ಸದ್ದಿಲ್ಲದೆ ಮೆತ್ತಗೆ ಇಲ್ಲಿಂದ ದೂರ ನಡೆ. ರಾಜಕುಮಾರಿಯ ಸುಖನಿದ್ರೆಗೆ, ಸಿಹಿ ಕನಸುಗಳಿಗೆ ಭಂಗ ತರಬೇಡ. ಅವಳ ಸುಕೋಮಲ ಶರೀರಕ್ಕೆ ನಿನ್ನ ಮುಳ್ಳಿನಂಥ ಒರಟು ಬಾಯಿಯಿಂದ ಕಚ್ಚಿ ಬಾಧೆ ತಗುಲಿಸಬೇಡ. ರಾಜಕುಮಾರಿ ಹಾಯಾಗಿ ಮಲಗಿರಲಿ…’ ಎಂದು ನಾಯಕನು ತಗಣೆಗೆ ಆದೇಶ ಕೊಡುತ್ತಾನೆ. ಎಂಥ ಮುದ್ದಾದ ಕಲ್ಪನೆ! ಈಗ ಪ್ರಪಂಚದ ಪ್ರಣಯರಾಜಧಾನಿ ಪ್ಯಾರಿಸ್‌ನಲ್ಲಿ ನಲ್ಲ-ನಲ್ಲೆಯರು ತಗಣೆಗಳಿಗೆ ಇಂಥದೇ ಪ್ರೇಮಭರಿತ ಕೋರಿಕೆಗಳನ್ನು ಸಲ್ಲಿಸುತ್ತಿದ್ದಾರೋ ಏನೋ

Leave a Reply

Your email address will not be published. Required fields are marked *

error: Content is protected !!