Friday, 26th July 2024

ವೈಯಕ್ತಿಕ ದ್ವೇಷವಾಗುತ್ತಿದೆ ರಾಜಕೀಯ ಅಸ್ತಿತ್ವ

ವರ್ತಮಾನ

ಎಚ್.ಡಿ.ಕುಮಾರಸ್ವಾಮಿ ಮತ್ತು ಆಡಳಿತಾರೂಢ ಕಾಂಗ್ರೆಸ್ ನಾಯಕರ ನಡುವಿನ ಆಣೆ-ಪ್ರಮಾಣಗಳ ರಾಜಕೀಯ ಜಿದ್ದಾಜಿದ್ದಿ ವಿಪರೀತಕ್ಕೆ ಹೋಗಿದೆ. ಕುಮಾರಸ್ವಾಮಿಯವರಿಗೆ ಜೆಡಿಎಸ್ ಅಸ್ತಿತ್ವ ಉಳಿಸಿ ಕೊಳ್ಳುವ ಹೋರಾಟವಾದರೆ, ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣಾಗಿರುವ ಆ ಪಕ್ಷವನ್ನು ಇನ್ನಷ್ಟು ಆಳಕ್ಕೆ ತಳ್ಳುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಐದು ತಿಂಗಳುಗಳಲ್ಲಿ ಗ್ಯಾರಂಟಿ ಯೋಜನೆಗಳಿಗಿಂತ ಹೆಚ್ಚು ಚರ್ಚೆಯಾಗಿದ್ದು ವರ್ಗಾವಣೆ ದಂಧೆ ಮತ್ತು
ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ವಿಚಾರ. ಪ್ರತಿಪಕ್ಷಗಳ ಗಟ್ಟಿ ಧ್ವನಿಯಿಂದ ಈ ವಿಚಾರದಲ್ಲಿ ಸರಕಾರ ಸ್ವಲ್ಪ ಮಟ್ಟಿಗೆ ಮುಜುಗರಕ್ಕೆ ಒಳಗಾಯಿತು. ಅಷ್ಟರಲ್ಲಿ ಲೋಕಸಭೆ ಚುನಾವಣೆಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದಾಗಿ ಈ ವಿಚಾರ ಮುನ್ನಲೆಗೆ ಬಂದು ಆಡಳಿತಾರೂಢ ಕಾಂಗ್ರೆಸ್ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿತು. ಆದರೆ, ಕಳೆದ ಕೆಲ ದಿನಗಳಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಏಕಾಂಗಿಯಾಗಿ ಇಡೀ ಸರಕಾರವನ್ನು ಎದುರು ಹಾಕಿಕೊಂಡು ನಡೆಸುತ್ತಿರುವ

ವಾಗ್ದಾಳಿ ಕಾಂಗ್ರೆಸ್ ನಾಯಕರನ್ನು ಕೆರಳಿಸುತ್ತಿದೆ. ಕುಮಾರಸ್ವಾಮಿ ಅವರ ಪ್ರತಿ ಮಾತಿಗೂ ಪ್ರತಿಕ್ರಿಯ ನೀಡಲೇಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿದ್ದಿಗೆ ಬಿದ್ದವರಂತೆ ಕುಮಾರಸ್ವಾಮಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮೂವರಿಗೂ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಸೋಲಲು ಯಾರೂ ತಯಾರಿಲ್ಲ. ಇದೆಲ್ಲದರ ಪರಿಣಾಮ ಇವರ ವಾಕ್ಸಮರ ಸವಾಲು-ಪ್ರತಿ ಸವಾಲು, ಆಣೆ-ಪ್ರಮಾಣಗಳ ರಾಜಕೀಯ ಜಿದ್ದಾಜಿದ್ದಿ ಹಂತಕ್ಕೆ ತಲುಪಿದೆ. ಇದೆಲ್ಲದರ ನಡುವೆ ಅಧಿಕೃತ ಪ್ರತಿಪಕ್ಷ ಕಳೆದುಹೋಗಿದೆಯೇನೋ ಎಂಬಂತೆ ಭಾಸವಾಗುತ್ತಿದೆ.

ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ರಾಜಕೀಯ ವೈಷಮ್ಯ ಇಂದು, ನೆನ್ನೆಯದ್ದಲ್ಲ. ೨೦೦೪ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ
ಅಽಕಾರಕ್ಕೆ ಬಂದಾಗ ಶುರುವಾದ ಜಗಳ ೨೦೦೬ರಲ್ಲಿ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರಕಾರ ಉರುಳಿಸಿ ಬಿಜೆಪಿ ಜತೆ ಸೇರಿ ಸರಕಾರ ರಚಿಸಿದ ಬಳಿಕ ಜೋರಾಯಿತು. ೨೦೧೮ರಲ್ಲಿ ಮತ್ತೆ ಎರಡೂ ಪಕ್ಷಗಳು ಸೇರಿ ಸರಕಾರ ರಚಿಸಿದವಾದರೂ ಇಬ್ಬರ ನಡುವಿನ ವೈಷಮ್ಯ ಕಮ್ಮಿಯಾಗಿರಲಿಲ್ಲ. ೨೦೧೯ರಲ್ಲಿ ಮೈತ್ರಿ ಸರಕಾರ ಉರುಳಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅದು ಮತ್ತಷ್ಟು ಜೋರಾಯಿತು. ಆದರೆ, ೨೦೧೮ರಲ್ಲಿ
ಮೈತ್ರಿ ಸರಕಾರ ರಚನೆಯಾದ ಬಳಿಕ ಜೋಡೆತ್ತು ಗಳಂತೆ ಇದ್ದ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಈಗ ಎಣ್ಣೆ-ಸೀಗೇಕಾಯಿಗಳಂತಾಗಿ ದ್ದಾರೆ. ಪರಸ್ಪರ ವಾಕ್ಸಮರಕ್ಕಿಳಿದಿದ್ದಾರೆ. ಒಬ್ಬರನ್ನು ಕಂಡರೆ ಇನ್ನೊಬ್ಬರು ಉರಿದುಬೀಳುತ್ತಿದ್ದಾರೆ. ರಾಜಕೀಯ ವೈಷಮ್ಯಕ್ಕಿಂತಲೂ ವೈಯಕ್ತಿಕ ದ್ವೇಷಿಗಳಂತೆ ಕಾಣಿಸಿಕೊಳ್ಳುತ್ತಿದ್ದಾರೆ.

ಇವರಿಬ್ಬರ ಜಗಳದಲ್ಲಿ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್‌ನ ನಾಯಕರೆಲ್ಲರೂ ಸೇರಿಕೊಂಡು ಕುಮಾರಸ್ವಾಮಿ ವಿರುದ್ಧ ತಿರುಗಿ ಬೀಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಎಚ್ .ಡಿ.ಕುಮಾರಸ್ವಾಮಿ ಅವರ ನಡುವಿನ ಜಿದ್ದಾಜಿದ್ದಿ ಎಷ್ಟರ ಮಟ್ಟಿಗೆ ತೀವ್ರಗೊಂಡಿದೆ ಎಂದರೆ ಒಬ್ಬರು ಉಸಿರಾಡಿ ದರೂ ಅದರಲ್ಲಿ ತಪ್ಪು ಹುಡುಕುವ ಕೆಲಸ ವನ್ನು ಇನ್ನೊಬ್ಬರು ಮಾಡುವಷ್ಟರ ಮಟ್ಟಿಗೆ ಬೆಳೆದಿದೆ. ಇಷ್ಟಕ್ಕೆಲ್ಲಾ ಕಾರಣ ರಾಜಕೀಯ ಅಸ್ತಿತ್ವ ಉಳಿಸಿ
ಕೊಳ್ಳುವ ಹಪಹಪಿ. ಎಚ್.ಡಿ.ದೇವೇಗೌಡರು ಜೆಡಿಎಸ್ ಸ್ಥಾಪಿಸಿದ ಬಳಿಕ ಹಳೇ ಮೈಸೂರು ಭಾಗ ಆ ಪಕ್ಷದ ಭದ್ರ ಕೋಟೆಯಾಗಿತ್ತು. ೨೦೧೯ರ
ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸಿ ಸೋತರೂ ಆ ಕೋಟೆ ಅಲುಗಾಡಲಿಲ್ಲ. ಆದರೆ, ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಭದ್ರ ಕೋಟೆ ಒಡೆದು ಹೋಯಿತು. ಇದಕ್ಕೆ ಕಾರಣ ಜೆಡಿಎಸ್ ಅಥವಾ ಅದರ ನಾಯಕರು ಅಲ್ಲ.

ಬದಲಾಗಿ, ಕಾಂಗ್ರೆಸ್ ಘೋಷಿಸಿದ ಪಂಚ ಗ್ಯಾರಂಟಿಗಳು ಮತ್ತು ಹಿಂದಿನ ಬಿಜೆಪಿ ಸರಕಾರದ ವಿರುದ್ಧ ರಾಜ್ಯಾದ್ಯಂತ ಮೂಡಿದ್ದ ಆಡಳಿತ ವಿರೋಧಿ ಅಲೆ. ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ಸನ್ನು ಅಽಕಾರಕ್ಕೆ ತಂದ ಮತದಾರ ಮಧ್ಯೆ ಸಿಕ್ಕಿದ ಜೆಡಿಎಸ್‌ಅನ್ನೂ ಬದಿಗೆ ಸರಿಸಿದ್ದ. ಮತ್ತೆ ಅತಂತ್ರ ಸರಕಾರ ಬರುತ್ತದೆ. ಜೆಡಿಎಸ್ ಗಿಂಗ್ ಮೇಕರ್ ಆಗಲಿದೆ ಎಂಬ ಪಕ್ಷದ ನಾಯಕರ ನಿರೀಕ್ಷೆ ಹುಸಿ ಮಾಡಿ ಕಾಂಗ್ರೆಸ್ ಪರ ಜನ ತಮ್ಮ ತೀರ್ಪು
ನೀಡಿದರು. ಇದೀಗ ಜೆಡಿಎಸ್‌ನ ಒಡೆದ ಕೋಟೆ ಯನ್ನು ಇನ್ನಷ್ಟು ಛಿದ್ರಗೊಳಿಸಿ ಅಲ್ಲಿ ಕಾಂಗ್ರೆಸ್ ಧ್ವಜವನ್ನು ಕಾಯಂ ಆಗಿ ಅರಳಿಸುವುದು ಆ ಪಕ್ಷದ
ನಾಯಕರ ಉದ್ದೇಶವಾಗಿದೆ. ಆದರೆ, ಅದಕ್ಕೆ ಎಚ್ .ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅಡ್ಡಿಯಾಗಿದ್ದಾರೆ.

ಏಕೆಂದರೆ, ಒಕ್ಕಲಿಗ ಮತದಾರರೇ ನಿರ್ಣಾಯಕರಾಗಿರುವ ಈ ಕ್ಷೇತ್ರದಲ್ಲಿ ಜೆಡಿಎಸ್ ಅನ್ನು ಮತ್ತೆ ಕಟ್ಟಿ ಬೆಳೆಸುವುದು ಕುಮಾರಸ್ವಾಮಿಯವರಿಗೆ ಕಷ್ಟವೇನೂ ಅಲ್ಲ. ಒಂದೊಮ್ಮೆ ಕುಮಾರ ಸ್ವಾಮಿ ಆ ಪ್ರಯತ್ನಕ್ಕೆ ಕೈಹಾಕಿ ಯಶಸ್ವಿಯಾದರೆ ಮತ್ತೆ ಕಾಂಗ್ರೆಸ್ ಹಿನ್ನಡೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಹಳೇ ಮೈಸೂರಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಪೈಪೋಟಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಜಿದ್ದಾಜಿದ್ದಿಯಾಗಿ ಮಾರ್ಪಟ್ಟಿದೆ. ಇದರ ಭಾಗವೇ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಚನೆ ಯಾಗಿದ್ದ ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ, ಹಾರೋಹಳ್ಳಿ ತಾಲೂಕುಗಳನ್ನೊಳಗೊಂಡ ರಾಮನಗರ ಜಿಲ್ಲೆ ಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಹೊರಟಿರುವ ಡಿ.ಕೆ.ಶಿವಕುಮಾರ್ ಅವರ ತಂತ್ರಗಾರಿಕೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಹೊರತುಪಡಿಸಿ ಹಳೇ ಮೈಸೂರು ಭಾಗದ ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು.

ಪ್ರಸ್ತುತ ಈ ಭಾಗದಲ್ಲಿ ಜೆಡಿಎಸ್ ಗಟ್ಟಿಯಾಗಿ ನೆಲೆ ಯೂರಲು ಕಾರಣವಾಗಿರುವ ದೇವೇಗೌಡರ ಕುಟುಂಬ ಹಾಸನ ಮತ್ತು ರಾಮನಗರ ಜಿಲ್ಲೆ
ಯಲ್ಲಿದೆ. ದೇವೇಗೌಡರು ಹಾಸನ ಮೂಲದವರಾಗಿರುವುದರಿಂದ ಆ ಜಿಲ್ಲೆಯಲ್ಲಿ ಜೆಡಿಎಸ್‌ಅನ್ನು ಸೋಲಿಸುವುದು ಕಷ್ಟಸಾಧ್ಯ. ಹೀಗಾಗಿ ಅವರ
ಕುಟುಂಬದವರಿರುವ ರಾಮನಗರ ಜಿಲ್ಲೆಯನ್ನು ತನ್ನ ತೆಕ್ಕೆಗೆ ಸಂಪೂರ್ಣವಾಗಿ ಸೆಳೆದುಕೊಂಡರೆ ಹಾಸನ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಜೆಡಿಎಸ್‌ಅನ್ನು ಮಣ್ಣುಮುಕಿಕಿಸಬಹುದು. ಅದರ ನೇತೃತ್ವವನ್ನು ತಾನು ವಹಿಸಿಕೊಂಡರೆ ಪಕ್ಷದಲ್ಲೂ ಪ್ರಾಮುಖ್ಯತೆ ಸಿಗುತ್ತದೆ.

ಮುಖ್ಯಮಂತ್ರಿಯಾಗುವ ಕನಸು ಈಡೇರುತ್ತದೆ ಎಂಬುದು ಡಿ.ಕೆ.ಶಿವಕುಮಾರ್ ಅವರ ಆಲೋಚನೆ. ಅದಕ್ಕಾಗಿಯೇ ರಾಮನಗರ ಜಿಲ್ಲೆಯನ್ನು
ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಅವರು ಮುಂದಾಗಿದ್ದಾರೆ. ಜಿಲ್ಲೆಗೆ ಬೆಂಗಳೂರು ಎಂಬ ಹೆಸರು ಸೇರಿದರೆ ರಿಯಲ್
ಎಸ್ಟೇಟ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಜಿಲ್ಲೆ ಅಭಿವೃದ್ಧಿ ಹೊಂದುತ್ತದೆ. ಇದರಲ್ಲಿ ವೈಯಕ್ತಿಕ ಹಿತಾಸಕ್ತಿ ಇದ್ದರೂ ಜಿಲ್ಲೆಯ ಜನರಿಗೆ ಲಾಭವಾಗು
ತ್ತದೆ. ಒಂದೊಮ್ಮೆ ಜಿಲ್ಲಾ ಕೇಂದ್ರವನ್ನು ಬದಲಿಸಿದರೆ ಅದು ಭಾವನಾತ್ಮಕವಾಗಿ ಪರಿಣಾಮ ಬೀರಿ ಕಾಂಗ್ರೆಸ್‌ಗೆ ತಿರುಗು ಬಾಣವಾಗಬಹುದು ಎಂಬ
ಕಾರಣಕ್ಕೆ ರಾಮನಗರವನ್ನು ಜಿಲ್ಲಾ ಕೇಂದ್ರವಾಗಿ ಉಳಿಸಿಕೊಂಡು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡಿದ್ದೇ ಆದರೆ ಜಿಲ್ಲೆಯ ಜನ
ತಮ್ಮೊಂದಿಗೆ ನಿಲ್ಲಬಹುದು ಎಂಬುದು ಶಿವಕುಮಾರ್ ಲೆಕ್ಕಾಚಾರ.

ಇದಕ್ಕೆ ಉದಾಹರಣೆಯಾಗಿ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳು ಕಣ್ಣ ಮುಂದಿವೆ. ಬೆಂಗಳೂ
ರಿಗೆ ಸಮೀಪದಲ್ಲಿದ್ದರೂ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳು ಹೇಳಿಕೊಳ್ಳುವಂತ ಪ್ರಗತಿ ಕಂಡಿಲ್ಲ. ರಾಮನಗರ ಜಿಲ್ಲೆಯಾದ ಬಳಿಕ ಅದರ ಪರಿಸ್ಥಿತಿಯೂ ಹೀಗೆಯೇ ಇದೆ. ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾತ್ರ ಸಾಕಷ್ಟು ಅಭಿವೃದ್ಧಿ ಕಂಡಿದೆ. ಬೆಂಗಳೂರು ನಗರ ಮತ್ತು
ಗ್ರಾಮಾಂತರ ಜಿಲ್ಲೆಗೆ ಹೊಂದಿಕೊಂಡಿರುವ ಇತರೆ ಜಿಲ್ಲೆಗಳ ಪ್ರದೇಶಗಳೂ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸಿವೆ.

ಹೀಗಿರುವಾಗ ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿ ಅಂತಾರಾಷ್ಟ್ರೀಯ ಖ್ಯಾತಿಯ ಬೆಂಗಳೂರಿನ ಭಾಗ ಎಂದು
ಬಿಂಬಿಸಿದರೆ ಬೆಂಗಳೂರು ಗ್ರಾಮಾಂತರದಂತೆ ರಾಮನಗರ ಜಿಲ್ಲೆಯೂ ಪ್ರಗತಿ ಹೊಂದಬಹುದು. ಬೆಂಗಳೂರಿಗೆ ಸಿಗುವ ಸೌಲಭ್ಯಗಳನ್ನು ರಾಮ
ನಗರಕ್ಕೂ ವಿಸ್ತರಿಸುವುದು ಡಿ.ಕೆ.ಶಿವಕುಮಾರ್ ಉದ್ದೇಶ. ಇದರಿಂದ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳು ರಾಮನಗರಕ್ಕೂ ಬರಬಹುದು.
ಅದರಿಂದ ಭೂಮಿಗೆ ಚಿನ್ನದ ಬೆಲೆ ಸಿಗಬಹುದು. ಇದರಿಂದ ವೈಯಕ್ತಿಕವಾಗಿ ತಮಗೆ ಮಾತ್ರವಲ್ಲ, ಜಿಲ್ಲೆಯ ಇತರರಿಗೂ ಅನುಕೂಲವಾಗುತ್ತದೆ. ಹಾಗೇನಾದರೂ ಆದರೆ ಮತ್ಯಾವತ್ತೂ ಜಿಲ್ಲೆಯ ಜನ ನನ್ನ ಕೈಬಿಡುವುದಿಲ್ಲ. ಕುಮಾರಸ್ವಾಮಿ ಏನೇ ಸಾಹಸ ಮಾಡಿದರೂ ಜಿಲ್ಲೆಯಲ್ಲಿ ಜೆಡಿಎಸ್‌ಅನ್ನು ಮತ್ತೆ ಹಳಿಗೆ ತರುವುದು ಕಷ್ಟಸಾಧ್ಯ.

ಇದರಿಂದ ತಮ್ಮ ಶಕ್ತಿಯನ್ನೂ ಹೆಚ್ಚಿಸಿಕೊಂಡಂತಾಗುತ್ತದೆ, ಕುಮಾರ ಸ್ವಾಮಿ ಅವರ ಅಸ್ತಿತ್ವವನ್ನು ಇನ್ನಷ್ಟು ಸಡಿಲಗೊಳಿಸಬಹುದು ಎಂಬುದು ಡಿ.ಕೆ.ಶಿವಕುಮಾರ್ ಲೆಕ್ಕಾಚಾರ. ಅದಕ್ಕಾಗಿಯೇ ಕನಕಪುರದ ಜನ ಬೆಂಗಳೂರಿಗರಿಗೆ ತಮ್ಮ ಭೂಮಿ ಮಾರಿಕೊಳ್ಳಬೇಡಿ. ಮುಂದೊಂದು ದಿನ ಈ ಭಾಗವೇ ಬೆಂಗಳೂರಿಗೆ ಸೇರುತ್ತದೆ ಎಂದು ಅವರು ಹೇಳುತ್ತಿರುವುದು. ಈ ಅಂಶವೇ ಕುಮಾರಸ್ವಾಮಿ ಅವರನ್ನು ವಿಚಲಿತರನ್ನಾಗಿಸಿರುವುದು. ಸಮ್ಮಿಶ್ರ ಸರಕಾರದಲ್ಲಿ ಜೋಡೆತ್ತಿನಂತೆ ನನ್ನೊಂದಿಗಿದ್ದ ಡಿ.ಕೆ.ಶಿವಕುಮಾರ್ ಅಧಿಕಾರಕ್ಕೆ ಬರುತ್ತಿದ್ದಂತೆ ತಮ್ಮ ಬುಡಕ್ಕೆ ಕೊಡಲಿ ಪೆಟ್ಟು ನೀಡುತ್ತಿರುವುದು ಕುಮಾರಸ್ವಾಮಿ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದರ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಬಿಜೆಪಿ ಜತೆಗಿನ
ಮೈತ್ರಿ ಪ್ರಸ್ತಾಪಿಸಿ ಪದೇ ಪದೆ ಜೆಡಿಎಸ್ ಮತ್ತು ದೇವೇಗೌಡರ ಕಾಲೆಳೆಯುತ್ತಿರುವುದು, ತಮ್ಮನ್ನು ಆಡಿಕೊಳ್ಳುತ್ತಿರುವುದು ಕುಮಾರಸ್ವಾಮಿ ಅವರನ್ನು ಕೆರಳಿಸಿದೆ.

ಅದಕ್ಕಾಗಿಯೇ ಮೈತ್ರಿ ಸರಕಾರ ಉರುಳಿಸಿದ ವಿಷಯ ಪ್ರಸ್ತಾಪಿಸಿ ಸಿದ್ದರಾಮಯ್ಯ ವಿರುದ್ಧವೂ ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನು
ಡಿ.ಕೆ.ಶಿವಕುಮಾರ್ ತಮ್ಮ ಬುಡಕ್ಕೇ ಕೊಡಲಿ ಇಡುತ್ತಿರುವುದರಿಂದ ನೈಸ್ ವಿಚಾರ, ಭೂಮಿ ಖರೀದಿ ಮುಂತಾದ ವಿಚಾರಗಳನ್ನು ಪ್ರಸ್ತಾಪಿಸಿ
ತಿರುಗೇಟು ನೀಡುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ತಾವು ರಾಮನಗರದಲ್ಲಿ ಗಟ್ಟಿಯಾಗಿ ನೆಲೆಯೂರಿಸಿದ್ದ ಜೆಡಿಎಸ್‌ಅನ್ನು ಮುಗಿಸಲು ಡಿ.ಕೆ.ಶಿವಕುಮಾರ್ ಮುಂದಾಗಿರುವುದು ಕುಮಾರಸ್ವಾಮಿ ಅವರಿಗೆ ಬೆಂಕಿ ಹಚ್ಚಿದಂತಾಗಿದೆ.

ಬಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮುಖ್ಯ ಕಾರಣವಾಗಿದ್ದೇ ಹಳೇ ಮೈಸೂರು ಭಾಗ ದಲ್ಲಿ ಜೆಡಿಎಸ್ ಸಂಘಟನೆಯನ್ನು ಮತ್ತೆ ಸಹಜ
ಸ್ಥಿತಿಗೆ ತರುವುದು. ಅದಕ್ಕಾಗಿಯೇ ಲೋಕಸಭೆ ಚುನಾವಣೆ ಆಚೆಗೂ ಮೈತ್ರಿ ವಿಸ್ತರಿಸಿಕೊಳ್ಳಲು ಅವರು ಮುಂದಾಗಿದ್ದಾರೆ. ಲೋಕಸಭೆ ಚುನಾವಣೆ
ಯಲ್ಲಿ ಈ ಭಾಗದಲ್ಲಿ ಹೆಚ್ಚು ಸೀಟುಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟರೂ ಮುಂಬರುವ ನಗರ ಮತ್ತು ಪಂಚಾಯತ್‌ರಾಜ್ ಸ್ಥಳೀಯ ಸಂಸ್ಥೆ ಚುನಾವಣೆ
ಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಹೆಚ್ಚು ಸ್ಥಾನ ಗಳನ್ನು ಗೆದ್ದರೆ ಮುಂಬರುವ ವಿಧಾನಸಭೆ ಚುನಾವಣೆಯೊಳಗೆ ಈ ಭಾಗದಲ್ಲಿ ಮತ್ತೆ ಪಕ್ಷ ಸಂಘಟನೆ ಮಾಡಲು ಅನುಕೂಲವಾಗುತ್ತದೆ. ಅದಕ್ಕಾಗಿ ರಾಮ ನಗರವನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸಿದರೆ ಜಿಲ್ಲೆಯ ಹಿಡಿತವೂ ಬಿಗಿಯಾಗುತ್ತದೆ ಎಂಬುದು ಕುಮಾರಸ್ವಾಮಿ ಅವರ ಆಲೋಚನೆ. ಅಂತಹ ರಾಮನಗರ ಜಿಲ್ಲೆಯನ್ನೇ ಬೆಂಗಳೂರು ಹೆಸರಿನಲ್ಲಿ ತಮ್ಮ ಕೈಯಿಂದ ಕಸಿದು ಕೊಳ್ಳಲು ಡಿ.ಕೆ.ಶಿವಕುಮಾರ್ ಮುಂದಾಗಿರುವುದು ಕುಮಾರಸ್ವಾಮಿ ಇಷ್ಟು ಕೋಪಗೊಳ್ಳಲು ಕಾರಣ.

ಲಾಸ್ಟ್ ಸಿಪ್: ಉದ್ಯಮಿ ಮನಸ್ಥಿತಿ ರಾಜಕಾರಣ ದಲ್ಲೂ ಇದ್ದರೆ ಏನಾಗುತ್ತದೆ ಎಂಬುದಕ್ಕೆ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ತಂತ್ರವೇ
ಉದಾಹರಣೆ.

Leave a Reply

Your email address will not be published. Required fields are marked *

error: Content is protected !!