Friday, 26th July 2024

ಮರೆಯಾಗುತ್ತಿದೆ ಮಿಡಿ ಉಪ್ಪಿನಕಾಯಿ ಸಂಸ್ಕೃತಿ

ಶಶಾಂಕಣ

shashidhara.halady@gmail.com

ಈಚಿನ ದಶಕಗಳಲ್ಲಿ ಕಾಟು ಮಾವಿನ ಮರಗಳ ವೈವಿಧ್ಯತೆ ಕಡಿಮೆಯಾಗಿದೆ; ಕೃಷಿ ಭೂಮಿಯ ವಿಸ್ತರಣೆ, ಕಾಡಿನ ನಾಶ, ಅಕೇಶಿಯಾ ಬೆಳೆ, ರಬ್ಬರ್ ಕೃಷಿ, ಸೈಟ್ ಮಾಡುವುದು, ರಸ್ತೆ ಮಾಡುವುದು, ಮುರಕಲ್ಲು ಕ್ವಾರೆ – ಈ ರೀತಿಯ ನಾನಾ ಕಾರಣಗಳಿಂದಾಗಿ ಕಾಡಿನಲ್ಲಿ ಸಹಜವಾಗಿ ಬೆಳೆಯುವ ಈ ಮಾವಿನ ಮರಗಳು ಬಹುಪಾಲು ಕಣ್ಮರೆಯಾಗಿವೆ.

ಮೇ ತಿಂಗಳ ಮಧ್ಯಭಾಗದಲ್ಲಿ ನಮ್ಮ ಹಳ್ಳಿಯಲ್ಲಿ ರಣ ರಣ ಬಿಸಿಲು ಯಾವಾಗಲೂ ಇದ್ದದ್ದೇ. ಈಚಿನ ವರ್ಷಗಳಲ್ಲಿ ಕಾಡು ಕಡಿಮೆಯಾಗಿದ್ದರಿಂದ, ಬಿಸಿಲಿನ ತಾಪ ಹೆಚ್ಚಳವಾಗಿದೆ; ಹಿಂದೆಯೂ, ಅಂದರೆ, ನಮ್ಮ ಹಳ್ಳಿಮನೆಯ ಸುತ್ತಮುತ್ತ ಸಹಜವಾದ ಕಾಡು, ಹಕ್ಕಲು, ಹಾಡಿ ಇದ್ದ ದಿನಗಳಲ್ಲೂ ಮೇ ತಿಂಗಳು ಎಂದರೆ ಸೆಕೆ, ಬೆವರು, ನೀರನ ಕೊರತೆ ಎಲ್ಲವೂ ಇರುತ್ತಿದ್ದವು.

ಇದೇ ಸಮಯದಲ್ಲಿ, ಮನೆಯ ಸುತ್ತಲೂ ಇದ್ದ ಹಾಡಿ – ಹಕ್ಕಲುಗಳಲ್ಲಿ, ತೋಡುಗಳ ಅಂಚಿನಲ್ಲಿ ಇರುವ ಮಾವಿನ ಮರಗಳಲ್ಲಿ ನಾನಾ ರುಚಿಯ
ಪುಟಾಣಿ ಕಾಟು ಮಾವಿನ ಹಣ್ಣುಗಳು ಜೊಂಪೆ ಜೊಂಪೆಯಾಗಿ ಜೋತಾಡುತ್ತಿದ್ದವು. ಗಾಳಿ ಬಂದ ಕೂಡಲೆ ಒಂದೊಂದಾಗಿ ಬೀಳುತ್ತಿದ್ದವು; ಅವುಗಳನ್ನು
ಹೆಕ್ಕಿ ತಿನ್ನುತ್ತಾ, ಬೇಸಗೆಯ ತಾಪವನ್ನು ಕಡಿಮೆ ಮಾಡಿಕೊಳ್ಳುವುದು ಮಕ್ಕಳಾದ ನಮ್ಮ ಕೆಲಸ! ಒಂದೊಂದು ಮರದ ಹಣ್ಣು ಒಂದೊಂದು ರುಚಿ;
ಕೆಲವು ಸಿಹಿ, ಕೆಲವು ಹುಳಿ, ಕೆಲವು ಕಾಟು ಮಾವಿನ ಹಣ್ಣಿನ ರುಚಿಯಂತೂ ಇಂದಿನ ಮಲ್ಲಿಕಾ, ತೋತಾಪುರಿ, ರಸಪೂರಿ ಹಣ್ಣುಗಳ ರುಚಿ ಇರುತ್ತಿತ್ತು.

ಗಾತ್ರದಲ್ಲಿ ಸಣ್ಣದಾದರೂ, ನಮ್ಮ ಹಳ್ಳಿಯ ಸುತ್ತ ಮುತ್ತ ಸಿಗುತ್ತಿದ್ದ ಕಾಟು ಮಾವಿನ ಹಣ್ಣಿನ ಪರಿಮಳ ಮತ್ತು ರುಚಿವೈವಿಧ್ಯಕ್ಕೆ ಸಾಟಿಯೇ ಇಲ್ಲ! ಇಂದು
ಮಾರುಕಟ್ಟೆಯಲ್ಲಿ ದೊರೆಯುವ ಹೆಸರಾಂತ ತಳಿಗಳಾದ ಬಾದಾಮಿ, ಅಪೂಸ್, ಮಲ್ಲಿಕಾ, ನೀಲಂ ಮೊದಲಾದ ಹಣ್ಣುಗಳ ರುಚಿಯನ್ನು ಹೊಂದಿದ್ದ ಕಾಟು ಮಾವಿನ ಹಣ್ಣುಗಳು ನಮ್ಮ ಮನೆಯ ಸುತ್ತ ದೊರೆಯುತ್ತಿದ್ದವು ಎಂಬುದೇ ವಿಸ್ಮಯ ಹುಟ್ಟಿಸುವ ವಿಚಾರ. ಈ ಮಿಡಿಗಳು ಎಳೆಯದಾಗಿದ್ದಾಗ, ಅವುಗಳನ್ನು ಕೊಯ್ದು ಉಪ್ಪಿನ ಕಾಯಿ ಮಾಡುವ ಪರಿಪಾಠ ಪುರಾತನವಾದುದು.

ಕೆಲವು ಮರಗಳ ಮಿಡಿಯ ಉಪ್ಪಿನಕಾಯಿ ಬಹಳ ರುಚಿ; ಜತೆಗೆ, ವರ್ಷಗಟ್ಟಲೆ ಆ ಮಿಡಿಯ ಉಪ್ಪಿನಕಾಯಿ ಬಾಳಿಕೆ ಬರುತ್ತದೆ ಎಂಬುದು ನಮ್ಮೂರ
ಅಜ್ಜಿಯರ ಅನುಭವ. ಆರು ತಿಂಗಳೋ, ವರ್ಷವೋ ಭದ್ರವಾಗಿದ್ದ ಉಪ್ಪಿನ ಕಾಯಿಯ ಜಾಲಿಯ ಬಾಯಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚಿ, ಒಳಗೆ ನೋಡಿದರೆ, ಸಣ್ಣದಾದ ಒಂದು ಬೂಸ್ಟಿನಂತಹ ಪದರ ಇರುತ್ತದೆ; ಅದನ್ನು ಬದಿಗೆ ಸರಿಸಿ ಉಪ್ಪಿನ ಕಾಯಿಯನ್ನು ಸ್ವಲ್ಪ ತೆಗೆದುಕೊಂಡು, ಪುನಃ ಅದೇ ರೀತಿ ಬಟ್ಟೆ ಕಟ್ಟಿಟ್ಟು, ಜಾಡಿಯನ್ನು ಅಟ್ಟದ ಮೇಲೆ ಇಡುತ್ತಿದ್ದರು. ಆಗ ಕಾಣಿಸುವ ಬೂಸ್ಟ್‌ನಂತಹ ಪದರದಿಂದ ಆರೋಗ್ಯಕ್ಕೆ ಹಾನಿಯಿಲ್ಲ.

ಹಲವು ತಿಂಗಳುಗಳ ಕಾಲ ಹೀಗೆ ಇಟ್ಟ ಉಪ್ಪಿನಕಾಯಿಯ ರಸದಲ್ಲಿ ಪ್ರೊಬಯೊಟಿಕ್ ಅಂಶವಿದೆ ಎಂದು ಈಚಿನ ವಿಜ್ಞಾನ ಕಂಡುಕೊಂಡಿದೆ! ಅದಿರಲಿ. ಒಳ್ಳೆಯ ಮಿಡಿ ಮಾವಿನಕಾಯಿಯನ್ನು ಸರಿಯಾಗಿ ಉಪ್ಪು ಹಾಕಿ ನೆನೆಸಿ, ಚಿರುಟಿಸಿ, ನೀರಿನ ಪಸೆ ತಾಗದಂತೆ ನೋಡಿಕೊಂಡು, ಜಾಗ್ರತೆಯಿಂದ ಉಪ್ಪಿನ ಕಾಯಿ ಮಾಡಿ, ಜಾಲಿಯಲ್ಲಿ ಹಾಕಿಟ್ಟರೆ ಮೂರು ವರ್ಷ ಆರಾಮಾಗಿ ಬಳಸಬಹುದು. ಇನ್ನೂ ಹೆಚ್ಚು ವರ್ಷ ಬಾಳಿಕೆ ಬರುತ್ತದೋ ಎಂಬುದನ್ನು ನಮ್ಮವರು ಯಾರಾದರೂ ಪರೀಕ್ಷಿಸಿ ನೋಡಬೇಕು; ಏಕೆಂದರೆ, ವಿದೇಶಗಳಲ್ಲಿ ವೈನ್ ತಯಾರಿಸಿ, ನೆಲದಾಲದಲ್ಲಿಟ್ಟು ಹಲವು ವರ್ಷಗಳ ನಂತರ ತೆಗೆದು ಉಪಯೋಗಿಸುತ್ತಾರಂತೆ; ವರ್ಷ ಕಳೆದಷ್ಟೂ ಆ ವೈನ್‌ನ ಬೆಲೆ ಜಾಸ್ತಿ.

ಅದೇ ರೀತಿ, ನಮ್ಮ ರಾಜ್ಯದ ಮಿಡಿ ಉಪ್ಪಿನಕಾಯಿಯನ್ನು ಹಲವು ವರ್ಷ ಕಾಪಿಡುವ ಸಾಧ್ಯತೆ ಇರಬಹುದೇ ಎಂದು ನನ್ನ ಕುತೂಹಲ. ಮೂರು ವರ್ಷ ಮಿಡಿಯನ್ನು ಜಾಲಿಯಲ್ಲಿಟ್ಟು, ತೆಗೆದು ಉಪಯೋಗಿಸಿದಾಗ, ಅದರ ರುಚಿ ಮೂಲದಲ್ಲಿದ್ದಂತೆಯೇ ಇರುವುದನ್ನು ನಮ್ಮ ಮನೆಯಲ್ಲೇ ನೋಡಿದ್ದೇನೆ. ಈ ಅನುಭವದ ಮೇಲೆ ಹೇಳುವುದಾದರೆ, ಮಿಡಿ ಉಪ್ಪಿನ ಕಾಯಿ ಯನ್ನು ಇನ್ನೂ ಕೆಲವು ವರ್ಷ ಇಡಬಹುದು ಎಂದು ನನ್ನ ಅನುಮಾನ. (ಈ ರೀತಿ ಯಾರಾದರೂ ಹಲವು ವರ್ಷಗಳ ಕಾಲ ಮಿಡಿ ಉಪ್ಪಿನ ಕಾಯಿಯನ್ನು ಕಾಪಿಟ್ಟು, ಉಪಯೋಗಿಸಿದ್ದರೆ, ಮೇಲ್ ಮೂಲಕ ತಿಳಿಸಿ).

ಒಂದೊಂದು ಮರದ ಮಿಡಿಯೂ ವಿಭಿನ್ನ ರುಚಿಯಾಗಿದ್ದರಿಂದಾಗಿ, ನಮ್ಮ ಊರಿನ ಅಜ್ಜಿಯರಿಗೆ ಪ್ರತಿ ವರ್ಷ ಹಲವು ಬಾರಿ ಉಪ್ಪಿನ ಕಾಯಿ ಮಾಡುವ ಉಮೇದು, ಉತ್ಸಾಹ. ಅಂಗಡಿಯಿಂದ ದುಡ್ಡು ಕೊಟ್ಟು ತರಬೇಕಾದ ಮೆಣಸಿನ ಕಾಯಿಯ ಸೌಕರ್ಯ ಇದ್ದರೆ, ಬೇರೆ ಬೇರೆ ಮರಗಳ ಮಿಡಿಯನ್ನು ತರಿಸಿ, ಉಪ್ಪಿನಲ್ಲಿ ನೆನಸಿ, ಚಿರುಟಿಸಿ ಉಪ್ಪಿನ ಕಾಯಿ ಮಾಡಿಯಾರು ನಮ್ಮ ಹಳ್ಳಿಯ ಅಜ್ಜಿಯಂದಿರು. ನಮ್ಮ ಮನೆಯಲ್ಲಿ ಪಡಸಾಲೆಯ ತುಂಬಾ ಚಿರುಟಿಸಿದ ಮಿಡಿಯನ್ನು ಆರಲು, ಒಣಗಿಸಲು ಹರಡುವ ಪದ್ಧತಿ ಇತ್ತು. ಈಚಿನ ದಿನಗಳಲ್ಲಿ, ಅದರಲ್ಲೂ ಕಾಲೇಜು ಮೆಟ್ಟಿಲು ಹತ್ತಿದವರು ಅಷ್ಟೊಂದು ತಾಳ್ಮೆ ಯಿಂದ ಉಪ್ಪಿನ ಕಾಯಿ ಮಾಡುವುದು ತುಸು ಕಡಿಮೆಯೇ ಎನ್ನಬಹುದಾದರೂ, ಮಲೆನಾಡಿನಲ್ಲಿ ಕೆಲವು ಮನೆಗಳಲ್ಲಿ ಅಷ್ಟೊಂದು ಪರಿಶ್ರಮ ಹಾಕಿ, ಉಪ್ಪಿನ ಕಾಯಿ ಮಾಡುವವರು ಅಲ್ಲಲ್ಲಿ ಇನ್ನೂ ಇದ್ದಾರೆ.

ಆದರೆ, ನಮ್ಮ ಹಳ್ಳಿಯ ಅನುಭವದಲ್ಲೇ ಹೇಳುವುದಾದರೆ, ಒಳ್ಳೆಯ ಮಿಡಿ ನೀಡುವ ಮಾವಿನ ಮರಗಳೇ ಕ್ರಮೇಣ ಕಣ್ಮರೆಯಾಗುತ್ತಿವೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಇಂತಹದೊಂದು ಕಳವಳವು ಮಲೆನಾಡು ಮತ್ತು ಕರಾವಳಿಯ ಜನರಲ್ಲಿ ವ್ಯಕ್ತವಾಗಿತ್ತು – ಹಳೆಯ ಕಾಟು ಮಾವಿನ
ಮರಗಳು ಸಾಯುತ್ತಿವೆ, ಕಡಿದು ಮಾರಲಾಗುತ್ತಿದೆ, ಆ ಜಾಗದಲ್ಲಿ ಹೊಸದಾಗಿ ಕಾಟು ಮಾವಿನ ಮರಗಳು ಬೆಳೆಯಲು ಅವಕಾಶವಾಗುತ್ತಿಲ್ಲ ಎಂದು. ಆ
ಕಳವಳವು ಇಂದು ಪುಟ್ಟದೊಂದು ದುರಂತದ ಸ್ಥಿತಿಯನ್ನು ತಲುಪಿದೆ; ನಮ್ಮ ಸುತ್ತಲಿನ ಎಷ್ಟೋ ಹಾಡಿಗಳಲ್ಲಿ ಇಂದು ಹಳೆಯದಾದ, ಉತ್ತಮ ರುಚಿ
ನೀಡುವ ಕಾಯಿ ಬಿಡುವ ಮಾವಿನ ಮರಗಳೇ ಇಲ್ಲ!

ಹಿಂದೆ ಮಾವಿನಮರಗಳನ್ನೂ ಒಳಗೊಂಡಂತೆ, ನಾನಾ ಜೀವವೈವಿಧ್ಯ ಹೊಂದಿದ್ದ ಕಾಡುಗಳಿದ್ದ ಹಲವು ಪ್ರದೇಶಗಳಲ್ಲಿ ಇಂದು ಅಕೇಶಿಯಾ ಕಾಡು
ಇದೆ ಅಥವಾ ಬೋಳು ಜಾಗವಿದೆ ಅಥವಾ ಸೈಟುಗಳಿವೆ. ಈಚಿನ ಒಂದೆರಡು ದಶಕಗಳಲ್ಲಿ ಕಂಡ ‘ಅಭಿವೃದ್ಧಿ’ಯ ಕಾಮಗಾರಿಗಳಿಂದಾಗಿ, ಕೆಲವು
ಬಾರಿ ಜನರ ಅವeಯಿಂದಾಗಿ, ಹಣದ ಆಸೆಗಾಗಿ ಮಾವಿನ ಮರಗಳನ್ನು ಕಡಿದು ಮಾರುವಂತಹ ಅನಿವಾರ್ಯತೆಗೆ ಸಿಲುಕಿದ್ದರಿಂದಾಗಿ, ಅಪರೂಪದ
ರುಚಿಕರ ಕಾಟು ಮಾವಿನ ಮರಗಳೇ ಬಹುತೇಕ ಕಣ್ಮರೆಯಾಗಿ ಹೋಗಿವೆ. ಆದ್ದರಿಂದ ವೈವಿಧ್ಯಮಯ ರುಚಿಯ ಮಿಡಿ ಉಪ್ಪಿನ ಕಾಯಿಯೂ ಕಡಿಮೆಯಾಗಿದೆ ಎನ್ನಬಹುದು.

ಬೇರೆಲ್ಲಾ ಯಾಕೆ, ನಮ್ಮ ಮನೆಯ ಹತ್ತಿರವೇ ಇದ್ದ ಒಂದು ಅಪರೂಪದ ಮಾವಿನ ಮರವು ಉಪಯೋಗಕ್ಕೆ ಬಾರದೇ ಮೂಲೆಗುಂಪಾದ ಕಥೆಯನ್ನೇ ತೆಗೆದುಕೊಂಡರೆ, ಹೇಗೆ ಹಳ್ಳಿ ಜನರ ಅವಜ್ಞೆಯಿಂದ ಕೆಲವು ತಳಿಗಳು ನೇಪಥ್ಯಕ್ಕೆ ಸರಿಯುತ್ತಿವೆ ಎಂಬುದನ್ನು ಗುರುತಿಸಬಹುದು. ನಮ್ಮ ಮನೆಯ ಅಂಗಳದಲ್ಲಿ ನಿಂತರೆ ಕಾಣುವಂತೆ, ‘ಮುಲ್ಲಿಗದ್ದೆ’ಯ (ಮೂಲೆ ಗದ್ದೆ) ಅಂಚಿನಲ್ಲಿ ಒಂದು ಎತ್ತರವಾದ ಮಾವಿನ ಮರವಿತ್ತು. ಅದರಲ್ಲಿ ಕಾಯಿ ಬಿಡುವುದು ಕಡಿಮೆ ಅಂತೆ; ತೀರಾ ಕಡಿಮೆ ಮಿಡಿಗಳಾಗುತ್ತಿದ್ದವು. ಅದಕ್ಕೊಂದು ಕಾರಣವಿತ್ತು. ಎತ್ತರವಾಗಿ, ದಪ್ಪವಾಗಿ ಬೆಳೆದಿದ್ದ ಆ ಮರದ ಎಲೆಗಳ ಹರಹೂ ವಿಶಾಲ; ಆದ್ದರಿಂದ, ಪ್ರತಿ ವರ್ಷ ತೋಟಕ್ಕೆ ಬುಡ ಮಾಡುವಾಗ, ಅದರ ಸೊಪ್ಪನ್ನು ಕಡಿದು ತಂದು ಅಡಿಕೆ ಮರಗಳ ಬುಡದಲ್ಲಿ ಹರಹು ತ್ತಿದ್ದರು. ಅದಕ್ಕೂ ಕೆಲವು ಕಾರಣಗಳಿದ್ದವು; ಆ ದಪ್ಪನೆಯ ಮರದ ಬುಡ ನಮ್ಮ ಜಾಗದಲ್ಲಿದ್ದರೂ, ಅದರ ಕೊಂಬೆಗಳು ನಮ್ಮ ಪಕ್ಕದವರ ಗದ್ದೆಗೆ
ಚಾಚುವಂತಿದ್ದವು. ಆ ರೀತಿ ಕೊಂಬೆಗಳು ಚಾಚಿಕೊಂಡರೆ, ‘ಮರಗೊಡ್ಲು’ (ನೆರಳು) ಉಂಟಾಗಿ, ಗದ್ದೆಯಲ್ಲಿ ಬತ್ತದ ಬೆಳೆ ಚೆನ್ನಾಗಿ ಬರುವುದಿಲ್ಲ ಎಂಬುದು ಪಕ್ಕದ ಗದ್ದೆಯವರ ದೂರು. ಆ ರೀತಿ ದೂರಿಗೆ ಅವಕಾಶವನ್ನೇ ನೀಡದಂತೆ, ಪ್ರತಿ ವರ್ಷ ಆ ಬೃಹತ್ ಮಾವಿನ ಮರದ ಗೆಲ್ಲುಗಳನ್ನು ಕಡಿಸಿ, ತೋಟಕ್ಕೆ ಹಾಕಿಸುತ್ತಿದ್ದರು.

ಉದ್ದಕ್ಕೆ, ತೆಳ್ಳಗೆ ಇರುವ ಉತ್ತಮ ಗುಣಮಟ್ಟದ ಮಿಡಿಗಳನ್ನು ಆ ಮರ ಕೊಡುತ್ತಿತ್ತು. ಇಳುವರಿ ಕಡಿಮೆ; ಆದರೆ ಅದರ ರುಚಿ ತುಂಬಾ ಚೆನ್ನ ಎಂದು ನಮ್ಮ ಅಮ್ಮಮ್ಮ ಹೇಳುತ್ತಿದ್ದರು. ಆದರೆ, ಪಕ್ಕದ ಜಾಗದವರ ಕಾಟದಿಂದಾಗಿ, ಪ್ರತಿ ವರ್ಷ ಅದರ ಕೊಂಬೆಗಳನ್ನು ಕಡಿದು ಹಾಕಿದ್ದರಿಂದಾಗಿ, ಅದರಲ್ಲಿ ಹೂ ಬಿಡುವ ಕೊಂಬೆಗಳೇ ಇಲ್ಲದಂತಾಗಿತ್ತು. ನಾನು ಕಂಡಾಗ, ಆ ‘ಜೀರಿಗೆ ಮಿಡಿ’ ಮರವು ಎತ್ತರಕ್ಕೆ ಬೆಳೆದುಕೊಂಡಿದ್ದರೂ, ತುದಿಯಲ್ಲಿ ಮಾತ್ರ ನಾಲ್ಕಾರು ರೆಂಬೆಗಳನ್ನು ಉಳಿಸಿಕೊಂಡಿತ್ತು. ವರ್ಷಕ್ಕೆ ನಾಲ್ಕಾರು ಉದ್ದನೆಯ ಮಿಡಿ ಬಿಡುತ್ತಿತ್ತು. ಕೊನೆಗೊಂದು ದಿನ ವಯಸ್ಸಾಗಿ ಧರೆಗೆ ಉರುಳಿತು; ಅದರ ಜಾಗದಲ್ಲಿ ಮತ್ತೊಂದು ಅದೇ ಗಾತ್ರದ ಕಾಟು ಮಾವಿನ ಮರ ಬೆಳೆಯಲಿಲ್ಲ.

ನಮ್ಮ ಮನೆ ಎದುರಿನ ಹಾಳುಮನೆ ಜಡ್ ಎಂಬ ಜಾಗದಲ್ಲಿದ್ದ ಒಂದು ರುಚಿಕರ ಕಾಟುಮಾವಿನ ಮರವು ಇದೇ ರೀತಿಯ ಉದಾಸಿನದಿಂದ, ಅಸ್ತಿತ್ವವನ್ನು ಕಳೆದುಕೊಂಡಿತು. ಈಗ ಆ ಜಾಗದಲ್ಲಿ ಅಕೇಶಿಯಾ ಮರಗಳ ಕಾಡು ಬೆಳೆದಿದೆ! ನಮ್ಮ ಮನೆಯಿಂದ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ಅಬ್ಲಿಕಟ್ಟೆಯ ನಮ್ಮ ಅಜ್ಜಿಯ ಮನೆಯ ಸುತ್ತಲೂ ಏಳೆಂಟು ಕಾಟು ಮಾವಿನ ಮರಗಳಿದ್ದವು. ಅವುಗಳೂ ಪ್ರತಿವರ್ಷ ಬಿಡುವ ಸಾವಿರಾರು ಮಾವಿನ ಮಿಡಿ ಮತ್ತು ಹಣ್ಣುಗಳ ರುಚಿ ಅಪರೂಪ. ಒಂದು ಮರ ಬಿಡುತ್ತಿದ್ದ ಹಣ್ಣುಗಳ ರುಚಿಯು, ರಸಪೂರಿ ಹಣ್ಣಿನ ರುಚಿಯನ್ನೇ ಹೋಲುತ್ತಿತ್ತು. ಗಾತ್ರ ಮಾತ್ರ ಚಿಕ್ಕದು; ಒಂದು ಮುಷ್ಟಿಯಷ್ಟು. ಅದರ ಚೊಟ್ಟನ್ನು ಕತ್ತಿಯಿಂದ ಕತ್ತರಿಸಿ, ಇಡೀ ಹಣ್ಣನ್ನು ಚೀಪಿ ತಿಂದಾಗ, ಉತ್ತಮ ರುಚಿ.

ಪ್ರತಿ ಬೇಸಗೆ ರಜೆಯಲ್ಲಿ ನಾನು ಅಬ್ಲಿಕಟ್ಟೆಯ ಅಜ್ಜಿಯ ಮನೆಗೆ ಹೋಗಿ, ಎರಡು ಮೂರು ವಾರ ಠಿಕಾಣಿ ಹೂಡುತ್ತಿದ್ದೆ. ಆಗೆಲ್ಲಾ, ಈ ರುಚಿಕರ ಕಾಟು
ಮಾವಿನ ಹಣ್ಣನ್ನು ತಿಂದದ್ದೇ ತಿಂದದ್ದು. ಬೇಸಗೆಯಲ್ಲಿ ಗಾಳಿ ಮಳೆ ಬಂದಾಗ, ಒಂದೇ ದಿನ ನೂರಾರು ಹಣ್ಣುಗಳನ್ನು ಮನೆಯ ಎದುರಿನ ಅಂಗಳದ ತುಂಬಾ ಬೀಳಿಸುತ್ತಿತ್ತು ಆ ಮರ! ಅಲ್ಲೇ ಸುತ್ತಮುತ್ತ ಇನ್ನೂ ಹತ್ತಾರು ಕಾಟು ಮಾವಿನ ಮರಗಳಿದ್ದವು. ಕೆಲವು ಕಾಟು ಮಾವಿನ ಮರದಲ್ಲಿ ಪುಟಾಣಿ ಗಾತ್ರದ ಹುಳಿ ರುಚಿಯ ಹಣ್ಣುಗಳು; ಒಮ್ಮೆ ತಿಂದ ನಂತರ ಇನ್ನೊಮ್ಮೆ ತಿನ್ನಬೇಕು ಎನಿಸುತ್ತಿರಲಿಲ್ಲ. ‘ಈ ಮರದ ಮಿಡಿಗಳು ಉಪ್ಪಿನ ಕಾಯಿಗಷ್ಟೇ ಉಪಯೋಗ, ಹಣ್ಣು ತಿನ್ನಲು ಸಾಧ್ಯವಿಲ್ಲ’ ಎಂದು ಹೇಳುತ್ತಿದ್ದರು. ಆದರೆ ಇನ್ನು ಕೆಲವು ಮರಗಳ ಹಣ್ಣು ತಮ್ಮದೇ ರುಚಿ ಹೊಂದಿರುತ್ತಿದ್ದವು. ಆದರೆ ಆ ಎಲ್ಲಾ ಮರಗಳು ಇಂದು ಕಣ್ಮರೆಯಾಗಿವೆ; ಅವುಗಳ ಜಾಗದಲ್ಲಿ ಮತ್ತೊಂದು ಕಾಟುಮಾವಿನ ಮರ ಬೆಳೆಯಲಿಲ್ಲ.

ನಮ್ಮ ಹಳ್ಳಿಯ ಸುತ್ತಲಿನ -ಸಲೆಯಲ್ಲಿ ಅಕ್ಷರಶಃ ಸಾವಿರಾರು ಕಾಟು ಮಾವಿನ ಮರಗಳಿದ್ದವು, ಒಂದೊಂದಕ್ಕೂ ಒಂದೊಂದು ರುಚಿ. ಇವೆಲ್ಲಾ ಮರಗಳ ಮಿಡಿಗಳನ್ನು ಕೊಯ್ದು, ಉಪ್ಪಿನ ಕಾಯಿ ಮಾಡಿ, ಉಳಿದ ಮಿಡಿಗಳು ಬಲಿತು ಹಣ್ಣಾದಾಗ, ಮರದ ಕೆಳಗೆ ಬೀಳುತ್ತವೆ; ನಾವೆಲ್ಲಾ ಮಕ್ಕಳು ಅವುಗಳನ್ನು ಹೆಕ್ಕಿ ತಿನ್ನುವುದು ಪರಿಪಾಠ. ಈಚಿನ ದಶಕಗಳಲ್ಲಿ ಕಾಟು ಮಾವಿನ ಮರಗಳ ವೈವಿಧ್ಯತೆ ಕಡಿಮೆಯಾಗಿದೆ; ಕೃಷಿ ಭೂಮಿಯ ವಿಸ್ತರಣೆ, ಕಾಡಿನ ನಾಶ, ಅಕೇಶಿಯಾ ಬೆಳೆ, ರಬ್ಬರ್ ಕೃಷಿ, ಸೈಟ್ ಮಾಡುವುದು, ರಸ್ತೆ ಮಾಡುವುದು, ಮುರಕಲ್ಲು ಕ್ವಾರೆ – ಈ ರೀತಿಯ ನಾನಾ ಕಾರಣ ಗಳಿಂದಾಗಿ ಕಾಡಿನಲ್ಲಿ ಸಹಜವಾಗಿ ಬೆಳೆಯುವ ಈ ಮಾವಿನ ಮರಗಳು ಬಹುಪಾಲು ಕಣ್ಮರೆಯಾಗಿವೆ.

ಒಂದು ಕಾಟು ಮಾವಿನ ಮರವು ಬೆಳೆದು, ವಿಶಾಲವಾದ ಕ್ಯಾನೊಪಿಯನ್ನು ರೂಪಿಸಿಕೊಂಡು, ಸಾವಿರಾರು ಮಾವಿನ ಮಿಡಿಗಳನ್ನು ಕೊಡಲು
ಹತ್ತಿಪ್ಪತ್ತು ವರ್ಷ ಬೇಕು. ಅಷ್ಟು ಕಾಲ ಕಾಯುವ ತಾಳ್ಮೆ ಈಗಿನವರಿಗೆ ಇಲ್ಲ; ಅದಕ್ಕೆ ಈಗಿನ ‘ಆಧುನಿಕ ಯುಗ’ವೂ ಕಾರಣ ಇರಬಹುದು! ಮಿಡಿ ಉಪ್ಪಿನ
ಕಾಯಿ ಬೇಕೆನಿಸಿದರೆ, ಅಂಗಡಿಯಿಂದಲೋ, ದೂರ ದೂರಿನಿಂದಲೋ ದುಡ್ಡು ಕೊಟ್ಟು ಉಪ್ಪಿನ ಕಾಯಿಯನ್ನೋ, ಮಿಡಿಯನ್ನೋ ಖರೀದಿಸಿದ ರಾಯಿತು ಎಂಬ ಭಾವ. ಇಂತಹ ಅವಜ್ಞೆಯ ಕುರಿತು ಕಳವಳ ವ್ಯಕ್ತ ಪಡಿಸಿದರೆ, ಅಂತಹವರನ್ನು ಕನಿಕರದಿಂದ ನೋಡುವ ತಲೆಮಾರು ಇಂದು ಪ್ರಧಾನವಾಗಿದೆ. ಮನೆ ಹಿಂದಿನ ಕಾಟುಮಾವಿನ ಮರದಿಂದ ಮಿಡಿ ತಂದು, ಮನೆಯಲ್ಲೇ ಉಪ್ಪಿಗೆ ಹಾಕಿ, ಚಿರುಟಿಸಿ, ನೀರು ತಾಗದಂತೆ ಕಾಯ್ದು,
ಉಪ್ಪಿನ ಕಾಯಿ ಮಾಡಿ, ಅದನ್ನು ಎರಡು ವರ್ಷ ಇಟ್ಟುಕೊಂಡು ತಿನ್ನುವ ಒಂದು ‘ಆಹಾರ ಸಂಸ್ಕೃತಿ’ಯು, ತನ್ನ ಕೊನೆಯ ದಿನಗಳನ್ನು ಕಾಣುತ್ತಿದೆ ಎಂದೇ ನನ್ನ ಅನಿಸಿಕೆ.

Leave a Reply

Your email address will not be published. Required fields are marked *

error: Content is protected !!