Tuesday, 27th February 2024

ಗಿಡಮರಿಬಳ್ಳಿಗಳೊಡನೆ ಉಭಯಕುಶಲೋಪರಿಯ ಒಳಿತುಗಳು

ತಿಳಿರುತೋರಣ

srivathsajoshi@yahoo.com

‘ಅಭಿಜ್ಞಾನ ಶಾಕುಂತಲಮ್’ ನಾಟಕದಲ್ಲಿ ಶಕುಂತಳೆಯ ಪ್ರಾಣಸಖಿಯರು ಯಾರು? ಅನಸೂಯಾ ಮತ್ತು ಪ್ರಿಯಂವದಾ ಎಂದಷ್ಟೇ ಹೇಳಿದರೆ ಉತ್ತರ
ಅಪೂರ್ಣವಾಗುತ್ತದೆ. ಶಕುಂತಳೆಗೆ ಇನ್ನೊಬ್ಬಾಕೆ ಪ್ರಾಣಸ್ನೇಹಿತೆ ಇದ್ದಳು. ಹೆಸರು ವನಜ್ಯೋತ್ಸ್ನಾ. ಆಕೆ ಕನ್ಯೆ ಯಲ್ಲ, ಮಲ್ಲಿಗೆ ಹೂವಿನ ಬಳ್ಳಿ! ಹೌದು, ಕಣ್ವಮಹರ್ಷಿಯ ಆಶ್ರಮದ ಸುತ್ತಲಿನ ಗಿಡಮರಬಳ್ಳಿಗಳನ್ನೆಲ್ಲ ಶಕುಂತಳೆ ಮಮತೆಯಿಂದ ನೋಡಿಕೊಳ್ಳುತ್ತಿದ್ದಳು.

ಆ ಒಂದು ಮಲ್ಲಿಗೆ ಬಳ್ಳಿಯನ್ನಂತೂ ವಿಶೇಷವಾಗಿ ಪ್ರೀತಿಸಿದ್ದಳು. ‘ಉದ್ಯಾನ ತುಂಬ ಬೆಳದಿಂಗಳು’ ಎಂಬರ್ಥದ ವನಜ್ಯೋತ್ಸ್ನಾ ಎಂಬ ಹೆಸರನ್ನು ಅದಕ್ಕೆ ಇಟ್ಟಿದ್ದಳು. ಅದರೊಂದಿಗೆ ಕ್ಷೇಮಸಮಾಚಾರ ಹರಟುತ್ತಿದ್ದಳು. ಪಕ್ಕದಲ್ಲಿದ್ದ ಕೇಸರೀವೃಕ್ಷ (ಮಾವಿನ ಮರ)ದ ಸ್ವಯಂವರ ವಧುವೇ ಆ ಲತೆ  ಎಂದು ಗುರುತಿಸಿದ್ದಳು. ‘ಅನಸೂಯಾ ನೋಡಿದೆಯಾ, ಕೇಸರೀವೃಕ್ಷಕ್ಕೂ ಈ ನಮ್ಮ ವನಜ್ಯೋತ್ಸ್ನೆಗೂ ಒಳ್ಳೇ ಸಮಯದಲ್ಲಿ ಸಂಯೋಗ ವಾಗಿದೆ. ಇದಕ್ಕೂ ಹೂವಿನ ಭರ ಬಂದಿದೆ, ವೃಕ್ಷಕ್ಕೂ ನವಪಲ್ಲವಗಳು ಸುರಿದಿದ್ದಾವೆ. ಹೀಗೆ ಇವೆರಡೂ ಒಂದಕ್ಕೊಂದು ಉಪಭೋಗಕ್ಕೆ ಯೋಗ್ಯವಾಗಿ ಒತ್ತಟ್ಟಿಗಿ ರುವುದರಿಂದ ಎಷ್ಟು ರಮಣೀಯವಾಗಿ ತೋರುತ್ತವೆ ನೋಡೇ!’ ಎನ್ನುವಾಗ ಶಕುಂತಳೆ ವನಜ್ಯೋತ್ಸ್ನೆಯ ಬಗ್ಗೆ ಹೇಳುತ್ತಿದ್ದದ್ದಾದರೂ ಒಳಗೊಳಗೆ ತನ್ನನ್ನೇ ಅದಕ್ಕೆ ಸಮೀಕರಿಸುತ್ತಿದ್ದಳು.

ಬಳ್ಳಿಗೆ ಹೇಗೆ ಮರದ ಆಸರೆ ಬೇಕೋ ಹಾಗೆ ತನಗೂ ಈಗ ಪುರುಷನನ್ನು ತಬ್ಬಿಕೊಳ್ಳಲು ಸಕಾಲ ಎಂದು ಪುಳಕ ಗೊಳ್ಳುತ್ತಿದ್ದಳು. ಮುಂದೆ ಕಣ್ವರ ಆಶ್ರಮವನ್ನು ತೊರೆದು ದುಷ್ಯಂತನಲ್ಲಿಗೆ ಹೊರಟಾಗಲೂ ಶಕುಂತಳೆ ಆ ತರುಲತೆಗಳಿಗೆ ವಿದಾಯ ಹೇಳುವ ದೃಶ್ಯ ಅತ್ಯಂತ ಹೃದಯಸ್ಪರ್ಶಿ. ನಾಟಕದಲ್ಲಿ ಈ ಸೂಕ್ಷ್ಮಗಳೆಲ್ಲ ಶಕುಂತಳೆ-ಅನಸೂಯೆ-ಪ್ರಿಯಂವದೆಯರ ಸಂಭಾಷಣೆಯಲ್ಲಿ, ದುಷ್ಯಂತನ ಕೆಲವು ಸ್ವಗತದ ಮಾತುಗಳಲ್ಲಿ ರಸಭರಿತವಾಗಿ ಬರುತ್ತವೆ.

ಕಾಳಿದಾಸನೇನೋ ಶಕುಂತಳೆಯನ್ನು ಕೇಂದ್ರೀಕರಿಸಿ ಆ ಕಾವ್ಯ ಬರೆದನಾದ್ದರಿಂದ, ತರುಲತೆಗಳ ಸ್ಪಂದನ ಹೇಗಿತ್ತೆಂದು ಅಷ್ಟೇನೂ ಬಣ್ಣಿಸಿಲ್ಲ. ಹಾಗೆಯೇ, ‘ವೃಕ್ಷವಲ್ಲೀ ಆಮ್ಹಾಂ ಸೋಯರೀಂ ವನಚರೇಂ…’ ಎಂದು ಮರಾಠಿ ಅಭಂಗ ಬರೆದ ಸಂತ ತುಕಾರಾಮರೂ ಅಷ್ಟೇ- ಬೆಟ್ಟಗುಡ್ಡಗಳ ಮೇಲೆ ವೃಕ್ಷವಲ್ಲಿಗಳೊಂದಿಗಿನ ಆತ್ಮೀಯತೆ, ಅವುಗಳ ಸಾನ್ನಿಧ್ಯ ಸಂಭಾಷಣೆಗಳು ತಂದುಕೊಡುವ ಮನಶ್ಶಾಂತಿ, ಪ್ರಕೃತಿಯಲ್ಲಿ ಪರಮಾತ್ಮನಲ್ಲಿ ಲೀನನಾದ ಭಾವನೆಗಳನ್ನು ಬಣ್ಣಿಸಿದರೇ ವಿನಾ ಆ ತರುಲತೆಗಳಿಗೆ ಏನನಿಸಿತು ಅಂತ ಹೇಳಿಲ್ಲ.

ಆದರೆ, ಮನೆಯ ಸುತ್ತಮುತ್ತ ಕೈತೋಟದಲ್ಲಿ ಗಿಡಮರಬಳ್ಳಿಗಳನ್ನು ಬೆಳೆಸಿ ಅವುಗಳ ಜತೆ ಸಂವಾದ ನಡೆಸುವವರ ಒಕ್ಕೊರಲ ಅಭಿಪ್ರಾಯ ಸ್ಪಷ್ಟವಿದೆ: ಹಾಗೆ ಮಾಡುವುದರಿಂದ ನಮ್ಮ ಮನಸ್ಸಿಗೆ ಎಷ್ಟು ಹಿತವೆನಿಸುತ್ತದೆಯೋ ಅದಕ್ಕಿಂತ ಹೆಚ್ಚಿನ ಪ್ರಯೋಜನ ಅವುಗಳಿಗೂ ಸಿಗುತ್ತದೆ. ಅವು ಚೆನ್ನಾಗಿ ಬೆಳೆದು ನಳನಳಿಸುತ್ತವೆ, ಸಕಾಲದಲ್ಲಿ ಹೂವು-ಹಣ್ಣುಗಳನ್ನು ಕೊಡುತ್ತವೆ. ಇದೊಂದು ಡಿಜ್ಞಿಡಿಜ್ಞಿ mಟmಟoಜಿಠಿಜಿಟ್ಞ ಆಗುತ್ತದೆ. ಹೂತೋಟ ಬೆಳೆಸಿ ಗೊತ್ತಿಲ್ಲದವರು ಬಹುಶಃ ಇದನ್ನು ಸುಲಭವಾಗಿ ನಂಬಲಿಕ್ಕಿಲ್ಲ. ಸೋದಾಹರಣವಾಗಿ ವಿವರಿಸಿದರೆ ಅವರಿಗೂ ಮನದಟ್ಟಾಗಬಹುದು.

ಮೊನ್ನೆ ನಮ್ಮ ಕೌಟುಂಬಿಕ ವಾಟ್ಸ್ಯಾಪ್ ಗ್ರೂಪಿನಲ್ಲಿ ನನ್ನ ಅಕ್ಕ ಕೆಲವು ಹೂಗಿಡಗಳ ಫೋಟೊ ಹಾಕಿದ್ದರು. ‘ನವರಾತ್ರಿಗೆ ಸರಿಯಾಗಿ ಅರಳತೊಡಗಿ ರುವ ಹೂವುಗಳು’ ಎಂದು ಕ್ಯಾಪ್ಷನ್ ಸಹ ಕೊಟ್ಟಿದ್ದರು. ಅದು ಅವರ ಮನೆಮುಂದಿನ ಹೂತೋಟವೇ. ನವರಾತ್ರಿಗೆ ಸರಿಯಾಗಿ ಎಂದು ಹೈಲೈಟ್ ಮಾಡುವುದಕ್ಕೂ ಕಾರಣವಿದೆ. ಅಕ್ಕನ ಮನೆಯಲ್ಲಿ ನವರಾತ್ರಿಯನ್ನು ಒಂಬತ್ತೂ ರಾತ್ರಿಗಳಂದು ವಿಶೇಷ ಪೂಜೆಯೊಂದಿಗೆ ವೈಭವಯುತವಾಗಿ ಆಚರಿಸು ತ್ತಾರೆ. ಆಗ ದೇವಿಯ ಅಲಂಕಾರಕ್ಕೆ ಎಷ್ಟು ಹೂವುಗಳಿದ್ದರೂ ಸಾಲದು. ಮಾಮೂಲಿಯಾಗಿ ಯಾವುದೇ ಗಿಡದಲ್ಲಿ ಯಾವಾಗ ಹೂ ಅರಳಿದರೂ ಸಂಭ್ರಮಪಡುವ ‘ಪುಷ್ಪಪ್ರಿಯೆ’ಗೆ (ಹಾಗೆ ನೋಡಿದರೆ ನಮ್ಮ ಬಳಗದಲ್ಲಿ ಎಲ್ಲರೂ ಪುಷ್ಪಪ್ರಿಯರೇ) ಹಬ್ಬದ ವೇಳೆ ಹೂವುಗಳು ಒದಗಿಬಂದರೆ ಹಿಗ್ಗು ಹೇಳತೀರದು. ಸರಿ, ಅವರ ಫ್ಲವರ್ ಪೋಸ್ಟ್‌ಗೆ ನಾನೊಂದು ಮೆಚ್ಚುಗೆ ಮಿಶ್ರಿತ ತರ್ಲೆ ಪ್ರತಿಕ್ರಿಯೆ ಬರೆದೆ: ‘ಈ ಸಲ ಶ್ರಾವಣ ಅಧಿಕಮಾಸ  ಇದ್ದುದರಿಂದ ನವರಾತ್ರಿ ಸ್ವಲ್ಪ ತಡವಾಗಿ ಆರಂಭ. ಆದರೂ ಅದಕ್ಕೆ ಸರಿಯಾಗಿಯೇ ಅರಳಿವೆಯೆಂದರೆ ನಿಮ್ಮಲ್ಲಿನ ಹೂವುಗಳು ಎಕ್‌ಸ್ಟ್ರಾ ಸ್ಮಾರ್ಟ್ ಇವೆ!’ ಎಂದು. ಆಗ ನನ್ನಕ್ಕ ಅತಿಸಹಜವೆಂಬಂತೆ ಕೊಟ್ಟ ಉತ್ತರ ಇದೆಯಲ್ಲ ನಿಜಕ್ಕೂ ಮಾರ್ಮಿಕ.

ಈ ವಾರ ನಾನು ಅಂಕಣಬರಹಕ್ಕೆ ಈ ವಿಷಯವನ್ನು ಎತ್ತಿಕೊಳ್ಳುವುದಕ್ಕೆ ಅದೇ ಪ್ರೇರಕ! ಅಕ್ಕ ಹೇಳಿದ್ದಿಷ್ಟು: ‘ಹೌದು. ನಮ್ಮ ಹೂತೋಟದ ಗಿಡಗಳೊ ಡನೆ ನಾನು ಖುದ್ದಾಗಿ ಮಾತನಾಡಿದ್ದೆ. ಏಕೆಂದರೆ ಈ ವರ್ಷ ಮಳೆಗಾಲದಲ್ಲಿ ಕೆಲವು ದಿನ ಅತಿವೃಷ್ಟಿ ಎಂಬಂತೆ ಮಳೆ ಸುರಿಯಿತು. ಹೂವುಗಳೆಲ್ಲ ಒಮ್ಮೆ ತತ್ತರಿಸಿ ಹೋದುವು. ಆಮೇಲೆ ಒಂದಿಷ್ಟು ದಿನ ಕಡುಬಿಸಿಲು. ಆಗ ಹೂವುಗಳೇನು, ಕೆಲವು ಗಿಡಗಳೇ ಕಮರಿ ಹೋದುವು. ಮತ್ತೆ ಧೋ ಎಂದು ಮಳೆ ಪ್ರತ್ಯಕ್ಷ. ಒಟ್ಟಿನಲ್ಲಿ ಅಯೋಮಯ ವಾತಾವರಣ. ನನಗೋ ನವರಾತ್ರಿಗೆ ಹೂವುಗಳು ಸಿಗುತ್ತವೋ ಇಲ್ಲವೋ ಎಂಬ ಚಿಂತೆ. ಒಂದೆರಡು ವಾರಗಳ ಹಿಂದೆಯಷ್ಟೇ ನಾನು ಗಿಡಗಳಿಗೆ ಹೇಳಿದೆ- ನವರಾತ್ರಿ ಬರುತ್ತಿದೆ; ಪ್ರತಿದಿನ ದೇವರ ಅಲಂಕಾರಕ್ಕೆ, ಮಾಲೆ ಕಟ್ಟಲಿಕ್ಕೆ ನಮಗೆ ಹೂವು ಬೇಕಾಗುತ್ತವೆ; ಆದ್ದರಿಂದ ನೀವುಗಳೆಲ್ಲ ಭರಪೂರವಾಗಿ ಹೂವು ಕೊಡಬೇಕು ಎಂದು.

ನನ್ನ ಪ್ರೀತಿಯ ಕೋರಿಕೆಯನ್ನು ಮನ್ನಿಸಿ ಅವೆಲ್ಲ ಈಗ ಅರಳಿನಿಂತಿವೆ!’- ಇದು ಅಕ್ಕನ ಹೃದಯಾಂತರಾಳದ ಮಾತು. ಉತ್ಪ್ರೇಕ್ಷೆ ಇಲ್ಲ. ಮಾರನೆಯ ದಿನ ಇನ್ನೊಂದು ಫೋಟೊ ಮತ್ತು ವಿಡಿಯೊಕ್ಲಿಪ್ ಹಾಕಿದರು. ಬಳ್ಳಿಯೊಂದು ಮಾವಿನಮರ ವನ್ನೇರಿ ಅಲ್ಲಿ ಕಡುಗುಲಾಬಿ ಹೂವುಗಳು ಅರಳಿರುವ ದೃಶ್ಯ.
‘ಮಾವಿನಮರದ ಮೇಲೆ ಕುಳಿತು ಸ್ವಾಗತ ಕೋರುತ್ತಿವೆ ಈ ಪುಷ್ಪಗಳು. ಇವುಗಳ ಹೆಸರು ನನಗೇ ಗೊತ್ತಿಲ್ಲ. ಮನೆ ಮುಂದೆ ಇದರ ಬಳ್ಳಿ ಇದ್ದು ಹೂ ಬಿಟ್ಟಾಗ ಬಹಳ ಚೆನ್ನಾಗಿ ಕಾಣುತ್ತದೆ. ಆದ್ದರಿಂದ ಇದಕ್ಕೆ ಸ್ವಾಗತಪುಷ್ಪ ಎಂದು ಹೆಸರಿಟ್ಟಿದ್ದೇನೆ. ಯಾವಾಗ ಲಾದರೂ ಗೇಟ್ ಲಿಲ್ಲಿ ಎಂದು ಹೇಳಿದ್ದೂ ಉಂಟು. ಅಕ್ಟೋಬರ್ -ಡಿಸೆಂಬರ್ ಸೀಸನ್‌ನಲ್ಲಿ ತುಂಬ ಆಗುತ್ತವೆ’ ಎಂದು ಸೇರಿಸಿದರು.

ಹೂವುಗಳೊಂದಿಗೆ ನನ್ನಕ್ಕನ ಒಡನಾಟದ ಆಳ-ಅಗಲ ನಿಮಗೀಗ ಅಂದಾಜಾಗಿರಬಹುದು ಎಂದುಕೊಂಡಿದ್ದೇನೆ. ಪುಷ್ಪಪ್ರಿಯೆಯರು, ಮನೆ ಸುತ್ತ ಚಂದದ ಗಾರ್ಡನ್ ಬೆಳೆಸಿರುವವರು ಒಂದಿಷ್ಟು ಮಂದಿ ಇದ್ದಾರೆ ನನ್ನ ಮಿತ್ರವರ್ಗ ದಲ್ಲೂ. ಅವರಲ್ಲೊಂದಿಬ್ಬರನ್ನು ಕೇಳಿದೆ- ಗಿಡಮರಬಳ್ಳಿಗಳೊಡನೆ ನೀವು ಮಾತನಾಡುವುದಿದೆಯೇ? ಅದರ ಪ್ರಯೋಜನಗಳೇನಾದರೂ ನಿಮ್ಮ ಅನುಭವಕ್ಕೆ ಬಂದಿವೆಯೇ? ಎಂದು. ಇಲ್ಲೇ ನಮ್ಮ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿರುವ ಕನ್ನಡತಿ ಸವಿತಾ ರಾವ್ ಥಟ್ಟಂತ ಉತ್ತರಿಸಿದರು. ‘ಖಂಡಿತವಾಗಿ! ಹೂವುಗಳು ಅರಳಿದಾಗ ನಾನು ಅವುಗಳನ್ನು ಮನಸಾರೆ ಕೊಂಡಾಡುತ್ತೇನೆ.

ಎಷ್ಟು ಚಂದ ಇದ್ದೀಯಲ್ಲೇ ಆಹಾ ನಿನ್ನ ಬಣ್ಣ ನೋಡು! ಎಂದು ಮುದ್ದಿಸುತ್ತೇನೆ. ಹುಳಹುಪ್ಪಟೆಗಳ ಬಾಧೆಯಿಂದ ಅವು ನಲುಗಿದಾಗ, ಬಿಸಿಲು ಅತಿಯಾಗಿ ಒಣಗಿಹೋದಾಗ ಸಂಕಟಪಡುತ್ತೇನೆ. ಅಯ್ಯೋ ಪಾಪ ಎಂದು ಹೂವುಗಳ ಮೇಲೆ ಕನಿಕರ ತೋರಿಸುತ್ತೇನೆ. ಗಿಡಗಳ ಪಾತಿಗಳಲ್ಲಿ ಗೊಬ್ಬರ ಮತ್ತು ಹೊಸ ಮಣ್ಣು ತಂದುಹಾಕುವಾಗ, ನೀರು ಣಿಸುವಾಗಲೂ ನಾನು ಅವುಗಳ ಜತೆ ಸಂಭಾಷಿಸುತ್ತೇನೆ. ಇಲ್ಲಿದೆ ನೋಡಿ ನಿಮ್ಮ ಊಟ, ಇದನ್ನು ತಿಂದು ಚೆನ್ನಾಗಿ ಬೆಳೆಯಿರಿ ಎಂದು ಮೈದಡವುತ್ತೇನೆ…’ ಅಂತ ಬರೆದರು.

ಸವಿತಾ ಅವರ ಗಾರ್ಡನ್ ನಾನು ಫೇಸ್‌ಬುಕ್ ಫೋಟೊಗಳಲ್ಲಷ್ಟೇ ಅಲ್ಲ ಕಣ್ಣಾರೆ ನೋಡಿ ದ್ದೇನೆ. ಫ್ರುಟ್ ಆರ್ಚರ್ಡ್‌ಗಳಲ್ಲಿ ಸೀಸನ್‌ನಲ್ಲಿ ಹಣ್ಣು ಕೀಳುವ
ಸ್ವಯಂಸೇವೆಗೂ ಹೋಗಿಬರುವ ಉಮೇದಿನವರು ಸವಿತಾ. ಸಸ್ಯಗಳೊಂದಿಗೆ ಅವರ ಒಡನಾಟದಲ್ಲಿ ಕಿಂಚಿತ್ತೂ ಕೃತ್ರಿಮತೆ ಇಲ್ಲ. ಲಂಡನ್‌ನಲ್ಲಿರುವ ವಂದನಾ ಶಶಿಧರ್ ಮತ್ತಷ್ಟು ಪ್ರಗಾಢವಾಗಿ ಅನುಮೋದಿಸಿದರು. ‘ನನ್ನ ಅನುಭವದ ಪ್ರಕಾರ ಹೆಚ್ಚಿನೆಲ್ಲ ಗಿಡಗಳು ನಮ್ಮ ಪ್ರೀತಿಯನ್ನು ಬಯಸುತ್ತವೆ. ನಾನು ಯಾವಾಗಲೂ ಗಿಡಗಳನ್ನು ನೆಡುವಾಗ ಅಥವಾ ಬೀಜ ಮೊಳಕೆ ಬರಿಸುವಾಗ ‘ನೀವು ಚೆನ್ನಾಗಿ ಬೆಳೆಯಬೇಕು. ನಿಮ್ಮಲ್ಲಾಗುವ ಮೊದಲ
ಹೂವನ್ನು ಗಣೇಶನಿಗೆ ಅರ್ಪಿಸುತ್ತೇನೆ’ ಅಂತ ಗಿಡಗಳಿಗೆ ಹೇಳಿಟ್ಟಿರುತ್ತೇನೆ.

ಮಾತು ತಪ್ಪದೆ ಹಾಗೇ ಮಾಡುತ್ತೇನೆ. ವಿಧೇಯತೆ ಯಿಂದ, ಪ್ರೀತಿವಿಶ್ವಾಸಗಳಿಂದ ಮೃದುವಾಗಿ ಮಾತನಾಡಿದರೆ ಅವುಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಸಮಯಕ್ಕೆ ಸರಿಯಾಗಿ ನೀರುಣಿಸುವುದು, ಕಾಲಕಾಲಕ್ಕೆ ಪಾತಿಯ ಮಣ್ಣು ಬದಲಾಯಿಸುವುದು, ಮನೆಯೊಳಗೆ ಬೆಳೆಸುವ ಗಿಡಗಳಾದರೆ ತುಸು ಬೆಳಕು-
ಬಿಸಿಲು ಸಿಗುವಂತೆ ಪಾಟ್‌ಗಳನ್ನು ಸ್ಥಳಾಂತರಿಸುವುದು- ಇದನ್ನು ಪ್ರೀತಿಯಿಂದ, ಅವುಗಳ ಜತೆ ಸಂಭಾಷಿಸುತ್ತ ಮಾಡಿದರೆ ಪರಿಣಾಮ ತುಂಬ ಚೆನ್ನಾಗಿ ರುತ್ತದೆ. ಅದೇ ಕೆಲಸಗಳನ್ನು ಕೋಪದಿಂದ ಮುಖ ಗಂಟಿಕ್ಕಿಕೊಂಡು ಮಾಡಿದರೆ ಅವುಗಳಿಗೂ ಗೊತ್ತಾಗುತ್ತದೆ.

ಅವೂ ಕಳಾಹೀನವಾಗುತ್ತವೆ. ನಾನು ಗಮನಿಸಿದಂತೆ ಇಲ್ಲಿಯ ಗಾರ್ಡನ್‌ಗಳಲ್ಲಿ, ಹೂಗಿಡ ಮಾರುವ ನರ್ಸರಿಗಳಲ್ಲಿ ಸಾಫ್ಟ್ ಮ್ಯೂಸಿಕ್ ಪ್ಲೇ ಮಾಡುತ್ತಿರು ತ್ತಾರೆ. ಭಾರತೀಯ ಮೂಲದ ಹೂಗಿಡಗಳಿಗಂತೂ ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತವೇ ಹಿತವೆನಿಸುತ್ತದೇನೋ ಎಂದು ನನ್ನ ಗ್ರಹಿಕೆ. ಹಾಗೆಯೇ ಹಣ್ಣು-ತರಕಾರಿಗಳ ಗಿಡಗಳಿಗೆ ಝೇಂಕಾರ ನಾದ ತುಂಬ ಇಷ್ಟ! ಅದರಿಂದ ಅವುಗಳಲ್ಲಿ ಪರಾಗಸ್ಪರ್ಶ ಸಾಮರ್ಥ್ಯ ಹೆಚ್ಚುತ್ತದೆ, ಹೆಚ್ಚು ಫಲವತ್ತಾ ಗುತ್ತವೆ. ಈ ದೇಶದಲ್ಲಿ ಹಣ್ಣು-ತರಕಾರಿಗಳ ಗಾರ್ಡನ್ ಬೆಳೆಸುವವರೂ ಪಕ್ಕದಲ್ಲೇ ಒಂದಿಷ್ಟು ಹೂಗಿಡಗಳನ್ನೂ ಬೆಳೆಸುತ್ತಾರೆ. ಅಲ್ಲಿಗೆ ಬರುವ ಜೇನುನೊಣಗಳ ಝೇಂಕಾರ ಹಣ್ಣು-  ತರಕಾರಿಗಳ ಗಿಡಗಳಿಗೂ ಹಿತವೆನಿಸುತ್ತದೆ. ಇನ್ನೊಂದು ಮಾತು ಹೇಳ್ತೇನೆ, ಜಂಬ ಅಂತಂದ್ಕೊಳ್ಬೇಡಿ. ಇಲ್ಲಿನ ನನ್ನ ಸ್ನೇಹಿತೆಯರು ರಜೆಯಲ್ಲಿ ಅಥವಾ ಪ್ರವಾಸದಲ್ಲಿ ಮನೆಗೆ ಬೀಗ ಹಾಕಿ ಹೋಗ ಬೇಕಾದಾಗ ಅವರ ಹೂಗಿಡಗಳನ್ನು ನನ್ನಲ್ಲಿ ಬಿಟ್ಟುಹೋಗುತ್ತಾರೆ.

ನಾನು ಅವುಗಳ ದೇಖ್‌ಭಾಲ್ ಚೆನ್ನಾಗಿ ಮಾಡುತ್ತೇನೆ, ಮಕ್ಕಳನ್ನು ನೋಡಿಕೊಳ್ಳುವುದಕ್ಕಿಂತಲೂ ಹೆಚ್ಚು ಪ್ರೀತಿಯಿಂದ ಆರೈಕೆ ಮಾಡುತ್ತೇನೆ ಎಂದು ಅವರಿಗೆ ಗೊತ್ತಿದೆ. ಅದು ನಿಜ ಕೂಡ. ಮಕ್ಕಳಾದರೋ ಊಟ-ತಿಂಡಿ ಬೇಕೆಂದು ದಬಾಯಿಸಬಲ್ಲವು. ಸಸ್ಯಗಳ ಭಾವನೆಗಳನ್ನು ನಾವೇ ಅರಿತು ಅವುಗಳ ಅಗತ್ಯಗಳನ್ನು ಪೂರೈಸಬೇಕು. ಇಂಗ್ಲೆಂಡ್‌ನಂಥ ದೇಶದಲ್ಲಿ ಹೂಗಿಡ ಬೆಳೆಸೋದು ಸುಲಭವಿಲ್ಲ. ಆರು ತಿಂಗಳು ಚಳಿಯೋ ಚಳಿ. ಗಿಡಗಳಿಗೆ ಸೂರ್ಯ
ದರ್ಶನ ಆಗುವುದೇ ಇಲ್ಲ. ಅಷ್ಟಾದರೂ ನಾನು ಆರೇಳು ನಮೂನೆ ದಾಸವಾಳ, ಕೊತ್ತಂಬರಿ, ಪುದೀನಾ, ದೊಡ್ಡಪತ್ರೆ, ಕರಿಬೇವು, ಬಾಳೆಗಿಡ, ದುಂಡು ಮಲ್ಲಿಗೆಗಳನ್ನು ಕಳೆದ ನಾಲ್ಕು ವರ್ಷಗಳಿಂದ ನಿರಂತರ ಬೆಳೆಸಿಕೊಂಡು ಬಂದಿದ್ದೇನೆ. ನಾನು ತೋರುವ ಪ್ರೀತಿಗೆ ಅವು ತುಂಬ ಚೆನ್ನಾಗಿ ಸ್ಪಂದಿಸುತ್ತವೆ’.

ಇನ್ನೊಬ್ಬ ಸ್ನೇಹಿತೆ, ಅಮೆರಿಕದ ನಾರ್ತ್ ಕೆರೊಲಿನಾದಲ್ಲಿರುವ ಸವಿತಾ ರವಿಶಂಕರ್ ಕೂಡ ಹೂತೋಟ ಪ್ರಿಯರೇ. ಮಗಳು ಸಿಂಧು ಮನೆಯಲ್ಲಂತೂ ಗಿಡಗಳಿಗೆ ‘ನರ್ತಕಿ’, ‘ಗರಿ’, ‘ಲಕ್ಷ್ಮಿ’ ಅಂತೆಲ್ಲ ಒಂದೊಂದು ಗಿಡಕ್ಕೆ ಒಂದೊಂದು ಹೆಸರನ್ನಿಟ್ಟು (ಅವುಗಳ ಹಿಂದೆ ಸ್ವಾರಸ್ಯಕರ ಕಥೆಗಳಿವೆ) ಪ್ರೀತಿಯಿಂದ ಕರೆಯುತ್ತಾರೆ. ಇರಲಿ, ಸವಿತಾ ಹಂಚಿಕೊಂಡ ಈ ಒಂದು ಅನುಭವ ನಿಜಕ್ಕೂ ಮೈನವಿರೇಳಿಸುವಂಥದ್ದು. ಅದೇನೆಂದರೆ, ನಾರ್ತ್ ಕೆರೊಲಿನಾದಲ್ಲಿ ಅವರ ಮನೆಯ ಹಿತ್ತಿಲಲ್ಲೊಂದು ತುಂಬ ಎತ್ತರಕ್ಕೆ ಬೆಳೆದಿದ್ದ ದೊಡ್ಡ ಮರ. ಅಮೆರಿಕದಲ್ಲಿ ಹೆಚ್ಚಾಗಿ ಬೆಳೆಯುವ ಓಕ್ ಅಥವಾ ಅಂಥದೊಂದು
ಕಾಡುಮರವೇ ಇರಬಹುದೆನ್ನಿ. ಆ ಮರವೆಂದರೆ ಸವಿತಾಗೆ ಪ್ರಕೃತಿ ಮಾತೆಯ ಪ್ರಾತಿನಿಧಿಕ ರೂಪ. ಜೋರು ಗಾಳಿ ಮಳೆ ಹಿಮಪಾತ ಇತ್ಯಾದಿ ಪ್ರಕೃತಿ ವೈಪರೀತ್ಯಗಳ ಸಂದರ್ಭದಲ್ಲೆಲ್ಲ ಹೋಗಿ ಆ ಮರವನ್ನು ಗಟ್ಟಿಯಾಗಿ ತಬ್ಬಿಕೊಳ್ಳುವರು.

ನಮ್ಮೆಲ್ಲರನ್ನೂ ಕಾಪಾಡು ತಾಯೇ ಎಂದು ಪ್ರಾರ್ಥಿಸುವರು. ಬೇರೆ ದಿನಗಳಲ್ಲಾದರೂ ಅಷ್ಟೇ. ಗಂಡ ಆಫೀಸ್‌ಗೆ ಹೋಗಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆ
ಮರದೊಟ್ಟಿಗೇ ಯೋಗಕ್ಷೇಮ ವಾರ್ತಾಲಾಪ. ೨೦೧೯ರ ಜುಲೈ ತಿಂಗಳ ಒಂದು ದಿನ. ಆವತ್ತು ಸಂಜೆ ಭೀಕರ ಗುಡುಗು ಸಿಡಿಲು ಮಳೆ ಬರಲಿದೆ ಎಂದು ಹವಾಮಾನ ಮುನ್ಸೂಚನೆ ಇತ್ತು. ಮುಂದಿನವಾರವೇ ಪತಿ ರವಿಶಂಕರ್‌ರ ಷಷ್ಟ್ಯಬ್ದ ಸಮಾರಂಭ ಇತ್ತಾದ್ದರಿಂದ ಅದರ ತಯಾರಿಗಳಲ್ಲಿ ಅವರಿವರಿಗೆ ಫೋನ್ ಕರೆ ಮಾಡಿ ಸಿದ್ಧತೆಗಳಲ್ಲಿ ಮಗ್ನರಾಗಿದ್ದರು ಸವಿತಾ. ರವಿಶಂಕರ್ ಆಫೀಸ್ ಗೆ ಹೋಗಿದ್ದರು. ಮುನ್ಸೂಚನೆಯಂತೆಯೇ ದೂರದಿಂದ ಗುಡುಗಿನ ಶಬ್ದ ಕೇಳಲಾರಂಭಿಸಿತು. ಹಾಡುಹಗಲಲ್ಲೇ ಕತ್ತಲು ಕವಿಯಿತು.

ಒಂದೈದು ನಿಮಿಷ ಕಳೆದಿರಬಹುದೇನೋ, ನೋಡ ನೋಡುತ್ತಿದ್ದಂತೆ ಹಿತ್ತಿಲಲ್ಲಿ ಮರದ ಬಳಿ ದೊಡ್ಡದೊಂದು ಬೆಂಕಿ ಚೆಂಡು ಕಾಣಿಸಿಕೊಂಡಿತು. ಸಾಕ್ಷಾತ್ ಸೂರ್ಯಭಗವಾನನೇ ಧರೆಗಿಳಿದು ಬಂದನೇನೋ ಎಂದುಕೊಂಡರಂತೆ ಸವಿತಾ. ಹೆದರಿಕೊಂಡು ದೇವರಕೋಣೆಗೆ ಹೋಗಿ ಸ್ತೋತ್ರ ಪಠಿಸಿದರು. ಆಮೇಲೆ ಗುಡುಗಿನ ಪ್ರತಾಪ ಕಡಿಮೆಯಾಯಿತು. ಗಂಡ ಆಫೀಸ್‌ನಿಂದ ಬಂದರು. ಕಿಟಕಿ ತೆರೆದು ಹಿತ್ತಿಲಕಡೆ ನೋಡಿದರೆ ಕಂಡದ್ದೇನು? ಇವರ ಮನೆ ಮೇಲೆ ಬೀಳಲಿದ್ದ ಮಿಂಚಿನ ಉಂಡೆಯನ್ನು ತಾನು ಸೆಳೆದುಕೊಂಡು ಆ ಮರ ಮುರಿದುಬಿದ್ದಿದೆ! ವಿಪತ್ತಿನಿಂದ ಕಾಪಾಡಿದ್ದಕ್ಕೆ ಕೃತಜ್ಞತೆ ಒಂದೆಡೆ; ತನ್ನ ಆಪದ್ಬಾಂಧವ ಮರ ಹೋಗ್ಬಿಡ್ತಲ್ಲ ಎಂಬ ದುಃಖ ಇನ್ನೊಂದೆಡೆ. ಗೊಳೋ ಎಂದು ಕಣ್ಣೀರಿಟ್ಟರು ಸವಿತಾ.

ಮಾರನೆ ದಿನ ಪೌರಾಡಳಿತ ಸಿಬ್ಬಂದಿ ಬಂದು ಮರದ ಗೆಲ್ಲುಗಳನ್ನೆಲ್ಲ ಕತ್ತರಿಸಿ ಆ ಜಾಗವನ್ನು ಸ್ವಚ್ಛಗೊಳಿಸಿ ಹೋದರು. ನೆನಪಿಗೋಸ್ಕರ ಬೇಕು ಅಂತ ಮರದ ಬೊಡ್ಡೆಯನ್ನು, ನೆಲದಿಂದ ನಾಲ್ಕೈದು ಅಡಿ ಎತ್ತರದಷ್ಟನ್ನು, ಸವಿತಾ ಈಗಲೂ ಉಳಿಸಿಕೊಂಡಿದ್ದಾರೆ. ಕೊಂಬೆಯ ಚಿಕ್ಕ ತುಂಡೊಂದನ್ನು- ಗಂಧದ ಕೊರಡಿನಂತೆ- ದೇವರಕೋಣೆಯಲ್ಲಿ ತಂದಿಟ್ಟು ದಿನಾ ಪೂಜೆ ಮಾಡುತ್ತಾರೆ. ಇಬ್ಬರು ಹೆಣ್ಮಕ್ಕಳ ಮನೆಗಳಿಗೆ ಅಂತ ಇನ್ನೆರಡು ತುಂಡುಗಳನ್ನೂ
ಎತ್ತಿಟ್ಟಿದ್ದಾರಂತೆ. ಕೇಳಿದ್ದೀರಾ ಇಂಥದೊಂದು ವೃಕ್ಷಗೌರವ? ಭಾರತದ ಹೆಮ್ಮೆಯ ವಿeನಿ ಜಗದೀಶಚಂದ್ರ ಬೋಸ್ ಅವರು ‘ಸಸ್ಯಗಳಿಗೂ ಜೀವವಿದೆ, ಭಾವನೆಗಳಿವೆ, ಸಸ್ಯಗಳು ಸಂಗೀತಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬಲ್ಲವು’ ಎಂದು ಪ್ರತಿಪಾದಿಸಿದವರು; ನಮ್ಮ ಕರ್ನಾಟಕದ ಹೆಮ್ಮೆಯ ಸಾಲುಮರದ ತಿಮ್ಮಕ್ಕ, ತನಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳೆಂದು ಭಾವಿಸಿ ಬೆಳೆಸಿದವರು;  ಸುಂದರ ಲಾಲ್ ಬಹುಗುಣ ಮತ್ತಿತರ ಹೋರಾಟಗಾರರು ಪರಿಸರ ಸಂರಕ್ಷಣೆಗಾಗಿ ‘ಚಿಪ್ಕೋ’ ಚಳವಳಿಯಲ್ಲಿ ಮರಗಳನ್ನು ಅಕ್ಷರಶಃ ಅಪ್ಪಿಕೊಂಡು
ರಕ್ಷಿಸಿದವರು; ಈ ವಿಚಾರಗಳೆಲ್ಲ ನಮಗೆ ಪಾಠಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ ಓದಲಿಕ್ಕೆ ಸಿಗುತ್ತವೆ. ಗಿಡಮರಬಳ್ಳಿಗಳು ಮತ್ತು ಮನುಷ್ಯರ ನಡುವೆ ದ್ವಿಮುಖ ಸಂವಹನ, ಅದರ ಪ್ರಯೋಜನಗಳ ಬಗ್ಗೆ ಈಗಲೂ ಸಂಶೋಧನೆಗಳು ನಡೆಯುತ್ತಿರುವ ವಿಚಾರ ಅಂತರಜಾಲದಿಂದ ತಿಳಿಯುತ್ತದೆ.

ಒಂದು ಕುತೂಹಲಕರ ಸಂಗತಿ, ನನಗೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಸಿಕ್ಕಿದ್ದು ಹೀಗಿದೆ: ಅಪರಾಧ ತನಿಖೆ ಪ್ರಕ್ರಿಯೆಯಲ್ಲಿ ಅಂತಾರಾಷ್ಟ್ರೀಯ ಮಾನ್ಯತೆ ಗಳಿಸಿರುವ ಲೈ ಡಿಟೆಕ್ಷನ್ ಮತ್ತು ಪಾಲಿಗ್ರಾಫ್‌ಗಳ ಜನಕ ಗ್ರೋವರ್ ಕ್ಲೀವ್‌ಲ್ಯಾಂಡ್ ಬಾಕ್‌ಸ್ಟರ್ ಜ್ಯೂನಿಯರ್ ಬಗೆಗೊಂದು ಪ್ರತೀತಿ ಇದೆ. ಮನುಷ್ಯನ ಭಾವನಾತ್ಮಕ ತುಮುಲಗಳ ಪತ್ತೆಗಾಗಿ ಸಂಶೋಧಿಸಿದ ಪಾಲಿಗ್ರಾಫ್ ಯಂತ್ರವನ್ನು ಸಸ್ಯದ ಮೇಲೆಪ್ರಯೋಗಿಸಿದರೆ ಹೇಗೆಂಬ ಆಲೋಚನೆ ಒಮ್ಮೆ ಬ್ಯಾಕ್‌ಸ್ಟರ್‌ನಿಗೆ ಬಂತು. ಡ್ರೇಸಿಯಾನಾ ಫ್ರಾಗ್ರಾನ್ಸ್ ಎಂಬ ಪ್ರಭೇದದ ಆಲಂಕಾರಿಕ ಸಸ್ಯವೊಂದು, ಆಫೀಸಿನ ಸೆಕ್ರೆಟರಿಯು ತಂದಿಟ್ಟದ್ದು, ಈತನ
ಪ್ರಯೋಗಾಲಯದ ಪಕ್ಕದಲ್ಲೇ ಇದ್ದದ್ದು ಕಾಣಿಸಿತು.

ಸಸ್ಯದ ಮನಸ್ಸಿನಲ್ಲಾಗುವ ಕಳವಳ ಅಥವಾ ನೋವು ಪಾಲಿಗ್ರಾಫ್ ಯಂತ್ರದಲ್ಲಿ ಹೇಗೆ ಕಾಣುತ್ತದೆಂದು ಬ್ಯಾಕ್ಸ್‌ಟರ್ ನೋಡುವವನಿದ್ದ. ಬೆಂಕಿ ಪೊಟ್ಟಣದಿಂದ ಕಡ್ಡಿ ಗೀರಿ ಒಂದು ಎಲೆಯನ್ನು ಸುಟ್ಟರೆ ಆಗ ಸಸ್ಯದ ನೋವಿನ ತೀವ್ರತೆ ಅಳೆಯಬಹುದೆಂದು ಆಲೋಚಿಸಿದ್ದ. ಆತನಿನ್ನೂ ಬೆಂಕಿಕಡ್ಡಿ ಗೀರಿಲ್ಲ, ಆಗಲೇ ಸಸ್ಯ ತೀವ್ರವಾಗಿ ವಿಚಲಿತಗೊಂಡಿದ್ದು ಪಾಲಿಗ್ರಾಫ್‌ನಲ್ಲಿ ದಾಖಲಾಯಿತು! ಅಂದರೆ, ಆ ಸಸ್ಯವು ತನಗೆ ಭೌತಿಕವಾಗಿ ಒದಗಿದ ಆಪತ್ತಿಗೆ (ಬೆಂಕಿ ತಗುಲಿದ್ದಕ್ಕೆ) ಪರಾವರ್ತಿತ ಪ್ರತಿಕ್ರಿಯೆ ಎಂಬಂತೆ ಚೀರಿಕೊಂಡಿದ್ದಲ್ಲ, ವಿeನಿಯ ಮನದಲ್ಲೇನಿದೆ ಎಂದು ಮೈಂಡ್ ರೀಡಿಂಗ್‌ನಿಂದ ಮೊದಲೇ ಗ್ರಹಿಸಿ ಅದಕ್ಕೆ ಸ್ಪಂದಿಸಿತಂತೆ!

ಉಪಸಂಹಾರಕ್ಕೆ ಮತ್ತೊಮ್ಮೆ ಕಾಳಿದಾಸನದೇ ಉಲ್ಲೇಖ. ‘ಕಾಡಾನೆಯೊಂದು ತನ್ನ ಗಂಡಸ್ಥಳವನ್ನು ತುರಿಸಿಕೊಳ್ಳುವುದಕ್ಕಾಗಿ ದೇವದಾರು ವೃಕ್ಷಕ್ಕೆ ರಭಸದಿಂದ ಮೈಯುಜ್ಜಿತು. ಉಜ್ಜುವಿಕೆಯ ತೀವ್ರತೆಗೆ ದೇವದಾರು ವೃಕ್ಷದ ಕಾಂಡ ಮತ್ತು ರೆಂಬೆಕೊಂಬೆಗಳ ಸಿಪ್ಪೆಯೆಲ್ಲ ಸುಲಿದುಹೋಯಿತು. ಇದನ್ನು ನೋಡಿದ ಪಾರ್ವತಿ ನೋವಿನಿಂದ ನಲುಗಿದಳು…’ ಎಂಬ ಬಣ್ಣನೆಯ ಶ್ಲೋಕ. ದೇವದಾರು ವೃಕ್ಷದ ವೇದನೆ, ಪಾರ್ವತಿಯ ಸಂವೇದನೆ. ‘ರಘುವಂಶ’ ಕಾವ್ಯದಿಂದ ಉದ್ಧೃತ. ಇತ್ತೀಚಿನ ಅಂಕಣದಲ್ಲಿ ಬಳಸಿದ್ದೆ, ನೆನಪಿದೆಯೇ? ಸೃಷ್ಟಿಯು ಇನ್ನಷ್ಟು ಸಸ್ಯಶ್ಯಾಮಲೆಯಾಗಿ ಕಂಗೊಳಿಸಲಿ ಎಂಬ ಹಾರೈಕೆಯೊಂದಿಗೆ ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು.

Leave a Reply

Your email address will not be published. Required fields are marked *

error: Content is protected !!