Monday, 26th February 2024

ಅಪೂರ್ವ ಚಿತ್ರಶಿಲ್ಪಿ ಪುಟ್ಟಣ್ಣನ ನೆನಪು

ಸ್ಮರಣೆ
ನಂ ಶೀಕಂಠ ಕುಮಾರ್

ಕಣಗಾಲ್, ಮೈಸೂರು ಜಿಲ್ಲೆಯ, ಪಿರಿಯಾಪಟ್ಟಣ ತಾಲ್ಲೂಕಿನ, ಹಾರನಹಳ್ಳಿ ಹೋಬಳಿಯ ಕಾವೇರಿ ತಟದಲ್ಲಿನ ಪುಟ್ಟ ಗ್ರಾಮ. ಗ್ರಾಮದಲ್ಲಿ ಕೃಷಿ, ಪೌರೋಹಿತ್ಯ ಮಾಡಿಕೊಂಡಿದ್ದ ಎಸ್.ಟಿ ರಾಮಸ್ವಾಮಯ್ಯ ಮತ್ತು ಸುಬ್ಬಮ್ಮ ದಂಪತಿಗಳಿಗೆ ಐವರು ಗಂಡು, ಇಬ್ಬರು ಹೆಣ್ಣು ಮಕ್ಕಳು. ಮಕ್ಕಳಲ್ಲಿ ಪ್ರಖ್ಯಾತರಾದವರು ಕಣಗಾಲ್
ಪ್ರಭಾಕರ ಶಾಸ್ತ್ರಿ ಹಾಗೂ ಪುಟ್ಟಣ್ಣ ಕಣಗಾಲ್. ಇಬ್ಬರೂ ಕಣಗಾಲ್ ಗ್ರಾಮಕ್ಕೆ ಕೀರ್ತಿ ತಂದುಕೊಟ್ಟವರು. ಡಿಸೆಂಬರ್ ೧, ೧೯೩೩ರಲ್ಲಿ ಜನಿಸಿದ ಮಗುವಿಗೆ ಶುಭ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮ ಎಂದು ನಾಮಕರಣ ಮಾಡಿದರು. ಆದರೂ ಹಿರಿಯರ ನೆನಪಿಗಾಗಿ ಪ್ರೀತಿಯಿಂದ ಪುಟ್ಟಣ್ಣ ಎಂದು ಕರೆಯ ತೊಡಗಿದರು.

ಬಾಲಕನಿಗೆ ಬಾಲ್ಯದಿಂದಲೇ ಕನ್ನಡ ಭಾಷೆಯ ಮೇಲೆ ಅಪಾರಪ್ರೀತಿ. ಕನ್ನಡ ಭಾಷೆಯಲ್ಲಿಯೇ ಶಿಕ್ಷಣ ನೀಡಲಾಯಿತು. ಪುಟ್ಟಣ್ಣ ಬೆಳೆದಂತೆಲ್ಲ ರಂಗಭೂಮಿಯತ್ತ ಆಸಕ್ತಿ ಉಂಟಾಯಿತು. ಪ್ರಖ್ಯಾತ ನಾಟಕಕಾರ, ನಿರ್ಮಾಕರಾಗಿದ್ದ ಬಿ.ಆರ್.ಪಂತುಲು ಅವರೊಂದಿಗೆ ನಿಕಟ ಸಂಪರ್ಕ ಬೆಳೆಯಿತು. ರಂಗಭೂಮಿ
ಕಲಾವಿದರಾದ ಯೋಗಾನರಸಿಂಹ, ಡಿಕ್ಕಿಮಾದವ ರಾವ್ ಅವರುಗಳ ಒಡನಾಟ ದೊರೆಯಿತು. ಅಂದಿನ ದಿನಗಳಲ್ಲಿ ಮದ್ರಾಸ್ ಪ್ರಾಂತ್ಯವು ಎಲ್ಲ ರಂಗ
ಕಲಾವಿದರಿಗೂ, ಚಲನಚಿತ್ರ ಕಲಾವಿದರಿಗೂ ಕೇಂದ್ರವಾಗಿತ್ತು. ಖ್ಯಾತ ನಿರ್ದೇಶಕರಾದ ಬಿ.ಆರ್ ಪಂತುಲುರವರು ಪುಟ್ಟಣ್ಣ ಅವರ ಪ್ರತಿಭೆಯನ್ನು ಗಮನಿಸಿ ಆಶ್ರಯ ನೀಡಿ ದರು. ೧೯೫೭ರಲ್ಲಿ ಬಿ.ಆರ್ ಪಂತುಲು ನಿರ್ದೇಶನದ, ಪದ್ಮಿನಿ ಪಿಚ್ಚರ‍್ಸ್ ರವರ ‘ರತ್ನಗಿರಿ ರಹಸ್ಯ’ ಚಿತ್ರಕ್ಕೆ ಸಹನಿರ್ದೇಶಕರಾಗಿ ಕೆಲಸ
ಮಾಡಿದರು.

ಅಣ್ಣ ಕಣಗಾಲ್ ಪ್ರಭಾಕಾರ ಶಾಸ್ತ್ರಿರವರದ್ದು ಚಿತ್ರ ಸಾಹಿತ್ಯ. ಚಿತ್ರ ಸಹ ಯಶಸ್ವಿಯಾಯಿತು. ಮದ್ರಾಸಿನಲ್ಲಿ ನೆಲೆಸಿದ ಪುಟ್ಟಣ್ಣ ಅವರಿಗೆ ಚಿತ್ರರಂಗದಲ್ಲಿ
ಅವಕಾಶಗಳು ದೊರೆತು ತಮಿಳು, ಮಲಯಾಳಂ, ತೆಲುಗು ಭಾಷೆಯ ಚಿತ್ರಗಳಲ್ಲೂ ನಿದೇರ್ಶಕರಾಗಿ ಕೆಲಸ ಮಾಡಿದರು. ಕಾದಂಬರಿಗಾರ್ತಿ ತ್ರಿವೇಣಿ ಅವರ ಬೆಕ್ಕಿನ ಕಣ್ಣು ಕಾದಂಬರಿ ಆಧಾರಿತ ‘ಪೋಚಿಕನ್ನಿ’ ಮಾಲಯಾಳಂ ಚಿತ್ರವು ಯಶಸ್ವಿ ಯಾಗಿ ಪ್ರದರ್ಶನಗೊಂಡಿತು. ಭಕ್ತಿ ಪ್ರಧಾನ, ಪೌರಾಣಿಕ ಚಿತ್ರಗಳು ಬಿಡುಗಡೆ ಹೊಂದುತ್ತಿದ್ದ ಕಾಲದಲ್ಲೇ ಸಾಮಾಜಿಕ ಚಿತ್ರಗಳು ತೆರೆಕಾಣಲಾರಂಭಿಸಿತು. ನಂತರ ೧೯೬೬ರಲ್ಲಿ ತ್ರಿವೇಣಿ ಅವರ ‘ಬೆಳ್ಳಿಮೋಡ’ ಕಾದಂಬರಿಯನ್ನು ಸ್ವತಂತ್ರ
ವಾಗಿ ನಿರ್ದೇಶಿಸಿದರು. ವಿಶೇಷವಾಗಿ ಚಿಕ್ಕಮಗಳೂರಿನ ಸುತ್ತಮುತ್ತ, ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಅರುಣೋದಯ ಸಮಯದಲ್ಲಿ ಕವಿ ದ ರಾ ಬೇಂದ್ರೆಯವರು ರಚಿಸಿದ ‘ಮೂಡಲಮನೆಯ ಮುತ್ತಿನ ನೀರಿನ ಎರಕಾವಾಹೊಯ್ದ…’ ಹಾಡನ್ನು ನಟಿ ಕಲ್ಪನಾ ನಟನೆಯಲ್ಲಿ ಚಿತ್ರೀಕರಿಸಿದ ಗೀತೆ, ಚಿತ್ರ ಪ್ರೇಮಿಗಳ ಮನಸೊರೆಗೊಂಡು ಇಂದಿಗೂ ನೆನೆಯು ವಂತಾಗಿರುವುದು ಪುಟ್ಟಣ್ಣ ಕಣಗಾಲ್ ಅವರಲ್ಲಿನ ಮೇರು ನಿರ್ದೇಶಕನನ್ನು ಕಾಣಬಹುದಾಗಿದೆ.

ಈ ಪ್ರಥಮ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಲಭಿಸಿ ಪುಟ್ಟಣ್ಣ ಪ್ರಖ್ಯಾತರಾದರು. ನಂತರ ನಿರ್ದೇಶಿಸಿದ ಕಪ್ಪುಬಿಳುಪು ಚಿತ್ರದಲ್ಲಿ ಕಲ್ಪನಾಗೆ ದ್ವಿಪಾತ್ರದ ಅವಕಾಶ ನೀಡಿದರು. ಆನಂತರ ಎಂ.ಕೆ ಇಂದಿರಾ ಅವರ ಗೆಜ್ಜೆಪೂಜೆ ಕಾದಂಬರಿ ನಿರ್ದೇಶಿಸಿ ಚಿತ್ರ ಯಶಸ್ಸು ಕಂಡಿತು. ರಾಜ್ಯ ಪ್ರಶಸ್ತಿಯೂ ಲಭಿಸಿತು. ಕಲ್ಪನಾರ ಶ್ರೇಷ್ಠ ಅಭಿನಯ ಚಿತ್ರಾಭಿಮಾನಿಗಳಲ್ಲಿ ಚಿರಸ್ಥಾಯಿಯಾಯಿತು.

ನಟ ಗಂಗಾಧರ್, ಲೋಕನಾಥ್ ಅವರನ್ನು ಈ ಚಿತ್ರದಲ್ಲಿ ಪರಿಚಯಿಸಿದರು. ಮೈಸೂರಿನ ಸುತ್ತಮುತ್ತ ಪ್ರದೇಶಗಳು ಪುಟ್ಟಣ್ಣ ಅವರಿಗೆ ಪ್ರೀತಿಯ ತಾಣವಾಗಿತ್ತು. ‘ಗಗನವು ಎಲ್ಲೋ ಭೂಮಿಯು ಎಲ್ಲೋ’ ಗೀತೆಯನ್ನು ಶ್ರೀರಂಗ ಪಟ್ಟಣದ ಬಳಿಯ ಕರಿಘಟ್ಟದಲ್ಲಿ ಚಿತ್ರೀಕರಿಸಿದ್ದು ವಿಶೇಷ. ಪುಟ್ಟಣ್ಣ ಅವರ ಪ್ರತೀ ಚಿತ್ರದಲ್ಲೂ ಏನಾದರೂ ವಿಶೇಷ ಕಾಣಬಹುದಿತ್ತು. ನಿರ್ದೇಶನವಷ್ಟೇ ಅಲ್ಲದೇ, ಚಿತ್ರ ಸಾಹಿತ್ಯ, ಸಂಗೀತ, ಚಿತ್ರಕಥೆ, ಸನ್ನಿವೇಶಕ್ಕೆ ತಕ್ಕ ತಾಣಗಳು, ಪಾತ್ರಕ್ಕೆ ಸೂಕ್ತವಾದ ಕಲಾವಿದರು ಹೀಗೆ ಎಲ್ಲದರ ಸಂಗಮವಾಗಿ ಸದಭಿರುಚಿಯ ಕಾದಂಬರಿ ಆಧಾರಿತ ಮಹಿಳಾ ವಸ್ತು, ಸ್ಥಿತಿಯನ್ನೇ ಪ್ರಧಾನವನ್ನಾಗಿಟ್ಟುಕೊಂಡ ಒಟ್ಟಾರೆ ಕುಟುಂಬ
ಸಮೇತ ನೋಡಬಹುದಾಗಿದ್ದ ಚಿತ್ರಗಳು ಕನ್ನಡಿಗರಿಗೆ ನೀಡಿದ ಹೆಮ್ಮೆಯ ಕೊಡುಗೆ.

ಮುಂದಿನ ‘ಮಲ್ಲಮ್ಮನ ಪವಾಡ’ ಚಿತ್ರದಲ್ಲಿ ನಟ ವಜ್ರಮುನಿ ಅವರ ಪ್ರತಿಭೆಗೆ ಪ್ರಥಮ ಅವಕಾಶ ನೀಡಿದರು. ಪುಟ್ಟಣ್ಣ ಅವರು ಡಾ. ರಾಜ್‌ಕುಮಾರ್ ಅಭಿನಯದ
ಮಲ್ಲಮ್ಮನ ಪವಾಡ, ಕರುಳಿನಕರೆ, ಸಾಕ್ಷಾತ್ಕಾರ ಮೂರು ಚಿತ್ರಗಳನ್ನಷ್ಟೇ ನಿರ್ದೇಶಿಸಿದ್ದು ಇಂದಿಗೂ ಚಿತ್ರ ಪ್ರೇಮಿಗಳಿಗೆ ಆಶ್ಚರ್ಯದ ಸಂಗತಿ. ‘ಸಾಕ್ಷಾತ್ಕಾರ’ ಚಿತ್ರದಲ್ಲಿ ಹಿಂದಿ ಚಿತ್ರರಂಗದ ಅಂದಿನ ಪ್ರಖ್ಯಾತ ನಟ ಪೃಥ್ವಿರಾಜ್ ಕಪೂರ್ ಅವರನ್ನು ಕರೆತಂದು ಅವರೊಡನೆ ಖ್ಯಾತರಾಗಿದ್ದ ಹಿರಿಯ ನಟ ಆರ್ ನಾಗೇಂದ್ರರಾವ್ ಅವರನ್ನೂ ಒಂದು ಹಾಡಿನ ದೃಶ್ಯದಲ್ಲಿ ಅತಿಥಿ ನಟರಾಗಿ ಚಿತ್ರೀಕರಿಸಿದ್ದು ಅಪರೂಪದ ಸನ್ನಿವೇಶ. ಮತ್ತೆ ಕಾದಂಬರಿಗಾರ್ತಿ ತ್ರಿವೇಣಿ ಅವರ ‘ಶರ ಪಂಜರ’ ಕಾದಂಬರಿಯನ್ನು ಬೆಳ್ಳಿಯ ತೆರೆಮೇಲೆ ತಂದರು. ಕಲ್ಪನಾ ಅವರ ಅದ್ಭುತ ಅಭಿನಯದಿಂದಾಗಿ ಆ ಚಿತ್ರ ಕನ್ನಡಿಗರನ್ನು ಆಕರ್ಷಿಸಿ ದಾಖಲೆ ಸ್ಥಾಪಿಸಿತು. ಅಲ್ಲದೇ ಚಿತ್ರವು ಅನ್ಯಭಾಷೆಗಳಲ್ಲಿಯೂ ಮರು ನಿರ್ಮಾಣ ವಾಯಿತು. ಭಾರತೀಸುತ ಅವರ ‘ಎಡಕಲ್ಲುಗುಡ್ಡದ ಮೇಲೆ’, ವಾಣಿಯವರ ‘ಶುಭಮಂಗಳ’ ಚಿತ್ರಗಳು ಯಶಸ್ಸನ್ನು ಕಂಡಿತು. ಶುಭಮಂಗಳ ಚಿತ್ರವು ನಾಯಕ ನಟ ಶ್ರೀನಾಥ್‌ಗೆ ಮೂಡಿ ಬಂದ ಚಿತ್ರ ತ.ರಾ. ಸುಬ್ಬರಾಯರ ಕಾದಂಬರಿ ಆಧರಿತ ‘ನಾಗರಹಾವು’.

ಚಿತ್ರವು ಯಶಸ್ವಿಯಾಗಿ ಮೂರು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಪ್ರದರ್ಶನಗೊಂಡು, ಶತದಿನೋತ್ಸವ ಕಾರ್ಯಕ್ರಮಕ್ಕೆ ತ. ರಾ.ಸು ರವರು ಆಗಮಿಸಿ ಚಿತ್ರವನ್ನು ಪ್ರಶಂಶಿಸಿದರು. ಸ್ವತಃ ರಂಗಭೂಮಿಯಲ್ಲಿನ ಅನುಭವನ್ನು ಹೊಂದಿದ್ದ ಪುಟ್ಟಣ್ಣ, ‘ರಂಗನಾಯಕಿ’ ಚಿತ್ರವನ್ನು ನಿರ್ದೇಶಿಸಿ ರಂಗಕಲಾವಿದರ
ಕಷ್ಟಕಾರ್ಪಣ್ಯಗಳನ್ನು ತೆರೆಯ ಮೇಲೆ ತಂದು ತಿಳಿಸುವ ಪ್ರಯತ್ನವನ್ನು ಮಾಡಿದರು. ಆದರೆ ಚಿತ್ರವು ಆರ್ಥಿಕವಾಗಿ ಅಷ್ಟೇನು ಲಾಭ ತರದ ಕಾರಣ ಪುಟ್ಟಣ್ಣ ಚಿಂತಾಕ್ರಾಂತರಾಗಿದ್ದರು.

ಪುಟ್ಟಣ್ಣನವರ ನೋವನ್ನು ಗಮನಿಸಿದ ಅಂದಿನ ಮುಖ್ಯಮಂತ್ರಿಗಳಾಗಿದ್ದ ಆರ್ ಗುಂಡುರಾವ್ ಅವರು ರಂಗನಾಯಕಿ ಚಿತ್ರಕ್ಕೆ ಶೇಕಡ ೧೦೦ರಷ್ಟು ಮನರಂಜನಾ
ತೆರಿಗೆಯ ವಿನಾಯಿತಿ ನೀಡಿ ಪ್ರೋತ್ಸಾಹಿಸಿದರು ಎಂಬುದು ಗಮನಾರ್ಹ. ಪುಟ್ಟಣ್ಣನವರು ನಾಗಲಕ್ಷ್ಮೀ ಎಂಬುವವರನ್ನು ವಿವಾಹ ವಾಗಿ ಐವರು ಮಕ್ಕಳನ್ನು ಪಡೆದರು. ಆನಂತರ ತಾವೇ ಚಿತ್ರರಂಗದಲ್ಲಿ ಬೆಳೆಸಿದ ನಟಿ ಆರತಿ ಅವರೊಡನೆಯ ಆತ್ಮೀಯ ಒಡನಾಟದಿಂದಾಗಿ ವಿವಾಹ ಬಂಧನಕ್ಕೆ ಸಿಲುಕಿದರು. ಕೆಲವೇ ವರ್ಷಗಳಲ್ಲಿ ವಿಚ್ಛೇದನವನ್ನೂ ಪಡೆದರು. ಈ ಘಟನೆಯು ಅವರ ಅಭಿಮಾನಿಗಳಲ್ಲಿ ನೋವನ್ನುಂಟು ಮಾಡಿತು. ಹಾಗಾಗಿ ಮುಂದಿನ ದಿನಗಳಲ್ಲಿ ಕೌಟುಂಬಿಕ
ಅಘಾತಕ್ಕೆ ಒಳಗಾಗಿದ್ದ ಪುಟ್ಟಣ್ಣರವರಿಗೆ ಹಲವಾರು ವರ್ಷ ಗಳು ಚಿತ್ರರಂಗದಲ್ಲಿ ಅವಕಾಶಗಳು ದೊರೆಯಲಿಲ್ಲ. ತಮ್ಮ ಮನದಾಳದ ನೋವಿನ ಭಾವನೆಗಳನ್ನು ಚಲನಚಿತ್ರವಾಗಿ ರೂಪಿಸಿ ‘ಮಾನಸ ಸರೋವರ’ ಚಿತ್ರ ನಿರ್ದೇಶಿಸಿದರು.

ಚಿತ್ರದಲ್ಲಿ ನಾಯಕ ನಟನ ಮಾನಸಿಕ ತುಮುಲಗಳನ್ನು ಎಳೆ ಎಳೆಯಾಗಿ ಚಿತ್ರಿಸಿ ಒಂದು ಹಾಡಿನಲ್ಲಿ ‘ನೀನೇ ಸಾಕಿದಾ ಗಿಣಿ ನಿನ್ನ ಮುದ್ದಿನಾ ಗಿಣಿ ಹದ್ದಾಗಿ ಕುಕ್ಕಿತಲ್ಲೋ…’ ಎಂದು ಬಿಂಬಿಸಿ ಚಿತ್ರೀಕರಿಸಿದ್ದು ಪ್ರೇಕ್ಷಕರಲ್ಲಿ ಪುಟ್ಟಣ್ಣನವರ ಅಂದಿನ ಮನಸ್ಸಿನ ಬಗ್ಗೆ ಕನ್ನಡಿ ಹಿಡಿದಂತಿತ್ತು. ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಒಂದು ವಿಶ್ವವಿದ್ಯಾಲಯ. ಅವರ ಗರಡಿಯಲ್ಲಿ ತಯಾರಾಗಿ ಪಳಗಿದ ನಟನಟಿಯರು, ಚಿತ್ರ ಸಾಹಿತಿಗಳು, ತಾಂತ್ರಿಕ ತಜ್ಞರು, ಸಂಗೀತಗಾರರು ಇಂದಿಗೂ ಖ್ಯಾತರಾಗಿ ವಿರಾಜಿಸಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ವಿಷ್ಣುವರ್ಧನ್, ಅಂಬರೀಷ್, ಗಂಗಾಧರ್, ಜೈಜಗದೀಶ್, ವಜ್ರಮುನಿ, ಲೋಕನಾಥ್, ಮುಸರೀಕೃಷ್ಣ ಮೂರ್ತಿ, ಆರತಿ, ಪದ್ಮವಾಸಂತಿ, ಹೇಮಾಚೌಧ ರಿ, ಅಪರ್ಣಾ ಮುಂತಾದವರು.

ಪುಟ್ಟಣ್ಣ ಕಣಗಾಲ್ ಅವರನ್ನು ಕನ್ನಡ ಚಲನಚಿತ್ರದ ಚಿತ್ರಶಿಲ್ಪಿ ಎನ್ನಬಹುದು. ಪುಟ್ಟಣ್ಣ ನಿರ್ದೇಶನದ ಕಡೆಯ ಚಿತ್ರ ‘ಮಸಣದ ಹೂವು’. ಅವರ ಅನಾರೋಗ್ಯ
ದಿಂದಾಗಿ ಚಿತ್ರವನ್ನು ಪೂರ್ಣವಾಗಿ ನಿರ್ದೇಶಿಸಲಾಗಲಿಲ್ಲ. ಆನಂತರ ಚಿತ್ರವನ್ನು ನಿರ್ದೇಶಕ ಕೆ.ಎಸ್.ಎಲ್ ಸ್ವಾಮಿ ಪೂರ್ಣಗೊಳಿಸಿ ಬಿಡುಗಡೆಗೊಳಿಸಿದರು.
ಪುಟ್ಟಣ್ಣ ಅನಾರೋಗ್ಯದ ನಿಮಿತ್ತ ಚೆನೈನಲ್ಲಿ ೧೯೮೫ರ ಜೂನ್ ೫ರಂದು ತಮ್ಮ ೫೨ನೇ ವಯಸ್ಸಿನಲ್ಲಿ ನಿಧನರಾದರೆಂಬುದು ಕನ್ನಡಿಗರಿಗೆ ತುಂಬಲಾರದ ನಷ್ಟ. ಸುಮಾರು ೨೪ ಕನ್ನಡ ಚಿತ್ರಗಳನ್ನು ದಿಗ್ಧರ್ಶಿಸಿ ಚಿತ್ರರಂಗದ ಉತ್ತುಂಗವನ್ನು ಏರಿದರು.

ಪುಟ್ಟಣ್ಣ ಅವರ ಹಲವಾರು ಚಿತ್ರಗಳಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಶ್ರೇಷ್ಠ ಚಿತ್ರ, ಶ್ರೇಷ್ಠ ನಿರ್ದೇಶನದ ಪ್ರಶಸ್ತಿಗಳು ಲಭಿಸಿವೆ. ಅವರ ಸ್ಮರಣಾರ್ಥ ಕರ್ನಾಟಕ ಸರಕಾರವು ಪ್ರತೀವರ್ಷ ಚಿತ್ರರಂಗದ ನಿರ್ದೇಶಕರಿಗೆ ಅವರ ಹೆಸರಿನಲ್ಲಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!