Saturday, 27th July 2024

ಹೃದಯಾಘಾತಕ್ಕೆ ಕಾರಣಗಳೇನು ?

ಸ್ವಾಸ್ಥ್ಯ ಸಂಪದ

Yoganna55@gmail.com

ಒಂದಕ್ಕಿಂತ ಹೆಚ್ಚು ಪ್ರಚೋದಕ ಅಂಶಗಳು ಜತೆಗೂಡಿದಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚಾಗುತ್ತದೆ. ಉದಾಹರಣೆಗೆ, ಸ್ಥೂಲಕಾಯ ಒಂದೇ ಇದ್ದಲ್ಲಿ
ಹೃದಯಾಘಾತವಾಗದಿರಬಹುದು. ಇದರೊಡನೆ ಸಕ್ಕರೆಕಾಯಿಲೆ, ಏರು ರಕ್ತ ಒತ್ತಡ ಮತ್ತಿತರ ಅಂಶಗಳು ಜತೆಗೂಡಿದಲ್ಲಿ ಸಾಧ್ಯತೆ ಹೆಚ್ಚಾಗುತ್ತದೆ.

ಹೃದಯದ ಶುದ್ಧರಕ್ತನಾಳಗಳು (ಕರೋನರಿ ಆರ್ಟರೀಸ್): ಹೃದಯಾಘಾತವು ಹೃದಯದ ಶುದ್ಧರಕ್ತ ನಾಳಗಳ ಕಾಯಿಲೆಯಿಂದುಂಟಾಗುವುದರಿಂದ ಈ ಶುದ್ಧರಕ್ತನಾಳಗಳ ಬಗ್ಗೆ ಅರಿವು ಅತ್ಯವಶ್ಯಕ. ಹೃದಯದೊಳಗೇ ರಕ್ತ ತುಂಬಿಕೊಂಡಿದ್ದರೂ ಅದನ್ನು ಹೃದಯ ಹೀರಿಕೊಂಡು ರಕ್ತಪೂರೈಕೆಯನ್ನು ಮಾಡಿ ಕೊಳ್ಳಲಾಗುವುದಿಲ್ಲ. ಹೃದಯದ ವಿವಿಧ ರಚನೆಗಳಿಗೆ ರಕ್ತ ಸರಬರಾಜನ್ನು ಮಾಡಲು ಪ್ರತ್ಯೇಕ ಶುದ್ಧರಕ್ತನಾಳ ವ್ಯವಸ್ಥೆ ಇದ್ದು, ಎಡ ಹೃತ್ ಶುದ್ಧರಕ್ತನಾಳ ಮತ್ತು ಬಲ ಹೃತ್ ಶುದ್ಧ ರಕ್ತನಾಳಗಳು ಈ ವ್ಯವಸ್ಥೆಯ ಪ್ರಮುಖ ಶುದ್ಧ ರಕ್ತನಾಳಗಳಾಗಿವೆ. ಬಲ ಮತ್ತು ಎಡ ಹೃದಯದ ಶುದ್ಧರಕ್ತನಾಳಗಳು ಅಯೋರ್ಟಾ ಶುದ್ಧರಕ್ತನಾಳದ ಬೇರುಭಾಗದಿಂದ ಉದ್ಭವಿಸಿ ವಿವಿಧ ಕವಲುಗಳ ಮೂಲಕ ಹೃದಯದ ಎಲ್ಲ ಭಾಗಗಳಿಗೂ ಶುದ್ಧ ರಕ್ತವನ್ನು ಸರಬರಾಜು ಮಾಡುತ್ತವೆ.

ಹೃತ್ ಶುದ್ಧರಕ್ತನಾಳಗಳ ಹೆಣಿಕೆ (ಕರೋನರಿ ಅನಾಸ್ಟಮೋಸಿಸ್): ಬಲ ಮತ್ತು ಎಡ ಹೃತ್ ಶುದ್ಧರಕ್ತನಾಳಗಳ ಕವಲುಗಳ ನಡುವೆ ವ್ಯಾಪಕವಾದ ಪರಸ್ಪರ ಜೋಡಣೆಯ ಹೆಣಿಕೆ ಹೃದಯಾದ್ಯಂತ ಉಂಟಾಗಿದೆ. ಯಾವು ದಾದರೊಂದು ಶುದ್ಧರಕ್ತನಾಳ ಅಡಚಣೆಗೀಡಾದಲ್ಲಿ, ಸಹಜ ಶುದ್ಧರಕ್ತನಾಳಗಳಿಂದ ಈ ಹೆಣಿಕೆಯ ಮೂಲಕ ಅಡಚಣೆಗೀಡಾಗಿ ರಕ್ತ ಸರಬರಾಜಿನಿಂದ ವಂಚಿತವಾದ ಹೃದಯದ ಭಾಗಕ್ಕೆ ಈ ಹೆಣಿಕೆಯ ಮೂಲಕ ರಕ್ತ ಸರಬರಾಜಾಗುತ್ತದೆ. ಅವಿರತವಾಗಿ ಜೀವನವಿಡೀ ಶ್ರಮಿಸುವ (ಪ್ರತಿನಿತ್ಯ ೧ಲಕ್ಷಕ್ಕೂ ಹೆಚ್ಚು ಬಾರಿ ಮಿಡಿಯುತ್ತದೆ) ಹೃದಯಕ್ಕೆ ನಿರಂತರವಾದ ರಕ್ತ ಸರಬರಾಜು ಅವಶ್ಯಕವಿದ್ದು, ಅದನ್ನು ಸರಿದೂಗಿಸಲು ಸೃಷ್ಟಿಕರ್ತ ಹೃದಯಕ್ಕೆ ಸೃಷ್ಟಿಸಿರುವ ವಿಸ್ಮಯಕಾರಿ ರಚನೆಯಿದು.

ಹೃದಯ ಸ್ನಾಯು ನಿರಂತರವಾಗಿ ೪-೬ ಗಂಟೆಗಳ ಕಾಲ ರಕ್ತಹೀನತೆ ಗೊಳಗಾದಲ್ಲಿ ಆ ಭಾಗ ಶಾಶ್ವತ ಸಾವಿಗೀಡಾಗುತ್ತದೆ. ಈ ವಿಶಿಷ್ಟ ಹೆಣಿಕೆಯಿಂದ ಆ ಸಂಭವ ಕಡಿಮೆಯಾಗುತ್ತದೆ. ಬಹುಪಾಲು ಆರೋಗ್ಯಸ್ಥರಲ್ಲಿ ಈ ಹೆಣಿಕೆ ವ್ಯವಸ್ಥೆ ಮುಚ್ಚಿದ್ದು, ರಕ್ತನಾಳ ಅಡಚಣೆಗೀಡಾದ ಸಂದರ್ಭ ಮತ್ತು ಅತಿಯಾದ ದೈಹಿಕ ಶ್ರಮದವರಲ್ಲಿ ಈ ಹೆಣಿಕೆ ಅವಶ್ಯಕತೆಗನುಗುಣವಾಗಿ ತೆರೆದುಕೊಂಡಿರುತ್ತದೆ. ರಕ್ತನಾಳದ ಅಡಚಣೆಯಿಂದುಂಟಾದ ಹೃದಯಾಘಾತದ ತೀವ್ರತೆ ಈ ಹೆಣಿಕೆ ತೆರೆದುಕೊಂಡಿರುವ ಪ್ರಮಾಣವನ್ನು ಅವಲಂಬಿಸಿರುತ್ತದೆ. ಈ ಹೆಣಿಕೆ ಹೆಚ್ಚಾಗಿ ತೆರೆದಿರುವವರಲ್ಲಿ ಹೃದಯಾಘಾತ ಸಂಭವ ಕಡಿಮೆ. ಕಡಿಮೆ ತೆರೆದಿರುವವರಲ್ಲಿ ಹೃದಯಾಘಾತ ಸಂಭವ ಅಧಿಕ. ದೈನಂದಿನ ವ್ಯಾಯಾಮ ಮತ್ತು ಯೋಗಾಭ್ಯಾಸ ಮಾಡುವ ವರಲ್ಲಿ ಈ ಹೆಣಿಕೆ ಹೆಚ್ಚಾಗಿ ತೆರೆದುಕೊಳ್ಳುತ್ತದೆ.

ಹೃತ್ ಶುದ್ಧರಕ್ತನಾಳದ ಕಾಯಿಲೆಗಳು (ಕರೋನರಿ ಆರ್ಟರಿ ಡಿಸೀಸಸ್): ಹೃದಯದ ಶುದ್ಧರಕ್ತ ನಾಳಗಳ ಕಾಯಿಲೆಗಳಿಂದ ಹೃದಯದ ಸ್ನಾಯುವಿಗೆ ರಕ್ತ ಸ್ಥಗಿತವಾಗಿ ಹೃದಯಾಘಾತ ವುಂಟಾಗು ತ್ತದೆ. ಹೃದಯದ ಶುದ್ಧರಕ್ತ ನಾಳಗಳ ಜನ್ಮದತ್ತ ಅಸಹಜತೆಗಳು, ಹೃದಯದ ಶುದ್ಧರಕ್ತನಾಳಗಳ ಜಿಡ್ಡುಗಡಸುರೋಗ ಮತ್ತು ಹೃದಯದ ಶುದ್ಧರಕ್ತನಾಳಗಳ ಸೆಳೆತ ಈ ರಕ್ತನಾಳ ಗಳಿಗೆ ತಗಲುವ ಪ್ರಮುಖ ರೋಗಗಳು. ಇವುಗಳಲ್ಲಿ ರಕ್ತನಾಳಗಳಲ್ಲಿ ಜಿಡ್ಡುಗಟ್ಟಿ ರಕ್ತನಾಳಗಳನ್ನು ಅಡಚಣೆ ಗೊಳಿಸುವ ರಕ್ತನಾಳಗಳ ಜಿಡ್ಡುಗಡಸುರೋಗ ವ್ಯಾಪಕವಾಗಿ ಕಾಣಿಸಿಕೊಳ್ಳುವ ರೋಗವಾಗಿದ್ದು, ಸಮುದಾಯದಲ್ಲಿ ಇಂದು ಉಂಟಾಗುತ್ತಿರುವ ಶೇ.೯೦ರಷ್ಟು ಹೃದಯಾಘಾತ ಗಳಿಗೆ ಈ ಕಾಯಿಲೆಯೇ ಕಾರಣವಾಗಿದೆ.

ಹೃತ್ ಶುದ್ಧರಕ್ತನಾಳಗಳ ಜಿಡ್ಡುಗಡಸು ರೋಗ (ಕರೋನರಿ ಅತಿರೋ ಸ್ಕ್ಲಿರೊಸಿಸ್): ಹೃದಯದ ಶುದ್ಧರಕ್ತನಾಳಗಳ ಒಳಪದರಗಳಲ್ಲಿ ವಯಸ್ಸಾದಂತೆಲ್ಲಾ ಸಹಜವಾಗಿ ಎಲ್ಲರಲ್ಲೂ ಮಂದ ಗತಿಯಲ್ಲಿ ಜಿಡ್ಡು ಶೇಖರಣೆಯಾಗುತ್ತದೆ. ೪೫ರಿಂದ ೫೦ ವರ್ಷಗಳ ನಂತರ ಈ ಪ್ರಕ್ರಿಯೆಯ ವೇಗ ಅಽಕವಾಗಿ ಶೇಖರಣೆಯಾದ ಜಿಡ್ಡಿನಿಂದ ಗೆಡ್ಡೆ ಯೋಪಾದಿಯ ರಚನೆಯಾದ ಜಿಡ್ಡಿನ ಗೆಡ್ಡೆ (ಅತಿರೋಮ) ಉಂಟಾಗಿ ಹೃತ್ ಶುದ್ಧರಕ್ತನಾಳಗಳ ಒಳವ್ಯಾಸ ಕ್ರಮೇಣ ಕಡಿಮೆಯಾಗಿ ಅಂತಿಮ ವಾಗಿ ಹೃದಯದ ಶುದ್ಧರಕ್ತನಾಳಗಳು ಸಂಪೂರ್ಣ ಅಡಚಣೆಗೀಡಾಗಿ, ರಕ್ತಪೂರೈಕೆ ಸ್ಥಗಿತಗೊಂಡು ಹೃದಯಸ್ನಾಯು ಸಾವಿಗೀಡಾಗಿ ಹೃದಯಾಘಾತ ಉಂಟಾ ಗುತ್ತದೆ. ಶುದ್ಧರಕ್ತನಾಳಗಳ ಒಳವ್ಯಾಸ ಶೇ. ೭೦ಕ್ಕಿಂತಲೂ ಜಾಸ್ತಿ ಅಡಚಣೆಯಾದಲ್ಲಿ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಅದಕ್ಕಿಂತ ಕಡಿಮೆ ಇರುವವರಲ್ಲಿ ಸಾಧ್ಯತೆ ಕಡಿಮೆ. ಆದರೆ ಜಿಡ್ಡಿನ ಗೆಡ್ಡೆ ಸಣ್ಣದಾಗಿದ್ದರೂ ಅದು ಒಡೆದು ಜಿಡ್ಡಿನ ಹುಣ್ಣಾದಲ್ಲಿ (ಅತಿರೋಮೆಟೆಸ್ ಪ್ಲೇಕ್) ರಕ್ತ
ಹೆಪ್ಪುಂಟಾಗಿ ಶುದ್ಧರಕ್ತನಾಳ ರಕ್ತಹೆಪ್ಪಿನಿಂದ ಸಂಪೂರ್ಣ ಅಡಚಣೆಗೀಡಾಗಿ ಹೃದಯಸ್ನಾಯುವಿಗೆ ರಕ್ತ ಪೂರೈಕೆ ಸ್ಥಗಿತವಾಗಿ ಸಂಬಂಧಿಸಿದ ಹೃದಯಸ್ನಾಯು ಸಾವಿಗೀಡಾಗುತ್ತದೆ. ಧೂಮಪಾನಿಗಳು, ಅತಿಯಾದ ಮಾನಸಿಕ ಒತ್ತಡ, ಏರುರಕ್ತ ಒತ್ತಡ ಇರುವವರಲ್ಲಿ ಸಣ್ಣ ಜಿಡ್ಡಿನ ಗೆಡ್ಡೆಯೂ ಒಡೆದು ಹುಣ್ಣಾಗಿ ಹೃದಯದ ಶುದ್ಧರಕ್ತನಾಳದಲ್ಲಿ ರಕ್ತಹೆಪ್ಪುಗಟ್ಟುವ (ಕರೋನರಿ ತ್ರಾಂಬೋಸಿಸ್) ಸಾಧ್ಯತೆ ಹೆಚ್ಚಾಗಿರುತ್ತದೆ.

ಹೃದಯದ ಶುದ್ಧರಕ್ತ ನಾಳಗಳ ಒಳವ್ಯಾಸ ಇನ್ನಿತರ ಶುದ್ಧರಕ್ತನಾಳಗಳಿಗಿಂತ ಅತಿ ಕಡಿಮೆ ಇರುವುದರಿಂದ ಇವುಗಳಲ್ಲಿ ಅಡಚಣೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಕಾರಣಗಳು: ವಂಶವಾಹಿ ನ್ಯೂನತೆ, ಹೃತ್ ರಕ್ತ ನಾಳದ ಜಿಡ್ಡುಗಡಸು, ವಯೋಧರ್ಮದ ಸಹಜ ಬದಲಾವಣೆಯ ಪ್ರಕ್ರಿಯೆಯಾಗಿ ವಯಸ್ಕರಲ್ಲಿ ಈ ಕಾಯಿಲೆ ಸಹಜವಾಗಿ ಕಾಣಿಸಿಕೊಂಡರೂ, ಸ್ಥೂಲ ಕಾಯ, ಸಕ್ಕರೆಕಾಯಿಲೆ, ಧೂಮಪಾನ, ಏರು ರಕ್ತ ಒತ್ತಡ, ಅಧಿಕ ರಕ್ತದ ಜಿಡ್ಡು (ಕೊಲೆಸ್ಟ್ರಾಲ್), ಅತಿಯಾದ ಮಾನಸಿಕ ಒತ್ತಡ, ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವವರು ಇವರುಗಳಲ್ಲಿ ಈ ಅಂಶಗಳು ಪ್ರಚೋದಕ ಅಂಶಗಳಾಗಿ ಪರಿಣಮಿಸಿ, ಈ ಸಹಜಕ್ರಿಯೆಯ ವೇಗ ಅತಿಯಾಗಿ, ಅಡಚಣೆಯ ಸಾಧ್ಯತೆ ಹೆಚ್ಚಾಗಿ ಹೃದಯಾಘಾತದ ಸಂಭವ ಅಧಿಕವಾಗುತ್ತದೆ.

ವಂಶವಾಹಿ ನ್ಯೂನತೆ ಇರುವ ವಂಶಸ್ಥರಲ್ಲಿ ಮೇಲಿನ ಪ್ರಚೋದಕ ಅಂಶಗಳ ಪ್ರಭಾವ ಅತಿಯಾಗಿ ಹೃದಯಾಘಾತದ ಸಂಭವ ಮತ್ತಷ್ಟು ಹೆಚ್ಚಾಗುತ್ತದೆ. ಪ್ರಚೋದಕ ಅಂಶಗಳಿರುವವರಲ್ಲಿ ಹಾರ್ಮೋನುಗಳ ಏರು ಪೇರುಗಳಿಂದಾಗಿ ರಕ್ತದ ಜಿಡ್ಡಿನ ಪ್ರಮಾಣ ಹೆಚ್ಚಾಗಿ ಹೃದಯದ ಶುದ್ಧರಕ್ತನಾಳಗಳಲ್ಲಿ ಜಿಡ್ಡುಗಟ್ಟುವಿಕೆ
ಅತಿಯಾಗುತ್ತದೆ.

ಕೋವಿಡ್ ಸೋಂಕು: ಕೋವಿಡ್ ಸೋಂಕಿನಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚಾಗುವುದರಿಂದ ಹೃದಯಾಘಾತದ ಸಾಧ್ಯತೆಯೂ ಇವರುಗಳಲ್ಲಿ ಹೆಚ್ಚು. ಕೊರೋನಾ ವೈರಸ್ ಸೋಂಕಿನಿಂದ ಹೃದಯದ ಶುದ್ಧರಕ್ತ ನಾಳಗಳು ಕೆಂಪೂತುರಿಗೆ (ಇನ್ ಫ್ಲಮೇಷನ್) ಈಡಾಗಿ ರಕ್ತಹೆಪ್ಪುಗಟ್ಟಿ ಹೃದಯಾಘಾತವಾಗುತ್ತದೆ.
ಕೋವಿಡ್ ಲಸಿಕೆ ತೆಗೆದುಕೊಂಡವರಲ್ಲೂ ಅಲರ್ಜಿ ಪ್ರಕ್ರಿಯೆಯಿಂದಾಗಿ ಹೃದಯದ ಶುದ್ಧರಕ್ತನಾಳಗಳ ಕೆಂಪೂತುರಿಯಾಗಿ ಹೃದಯಾಘಾತದ ಸಂಭವ
ಹೆಚ್ಚಾಗುತ್ತದೆ. ಈ ಕಾರಣಗಳಿಂದಾಗಿ ಕೋವಿಡ್ ಗೀಡಾದವರು ಮತ್ತು ಕೋವಿಡ್ ಲಸಿಕೆ ತೆಗೆದು ಕೊಂಡವರಲ್ಲಿ ಹೃದಯಾಘಾತ ಉಂಟಾಗಿರುವ ನಿದರ್ಶನ ಗಳು ಸಾಕಷ್ಟಿವೆ. ಇವರುಗಳಿಗೆ ರಕ್ತ ಹೆಪ್ಪು ನಿರೋಧಕಗಳು ಮತ್ತು ಸ್ಟಾಟಿನ್ ಔಷಧಗಳನ್ನು ಮುಂಜಾಗ್ರತಾ ಕ್ರಮವಾಗಿ ನೀಡುವುದರಿಂದ ಸಂಭವನೀಯ ಹೃದಯಾ ಘಾತವನ್ನು ತಡೆಗಟ್ಟಬಹುದು.

ಹೃದಯದ ಶುದ್ಧರಕ್ತನಾಳಗಳ ಸೆಳೆತ (ಕರೋನರಿ ಆರ್ಟಿರೀಯಲ್ ಸ್ಪ್ಯಾಸಮ್): ಹೃದಯದ ಶುದ್ಧರಕ್ತನಾಳಗಳು ಕೆಲವರಲ್ಲಿ ಯಾವುದೇ ಕಾಯಿಲೆಯಿಲ್ಲದೆ ಅಥವಾ ಅಲ್ಪ ಪ್ರಮಾಣದ ಜಿಡ್ಡು ಗಡಸು ರೋಗ ಇರುವವರಲ್ಲಿ ದಿಢೀರನೆ ಸೆಳೆತಕ್ಕೀಡಾಗಿ ಸಂಕುಚಿತವಾಗಿ ಹೃದಯ ಸ್ನಾಯುವಿಗೆ ರಕ್ತ ಸರಬರಾಜಿನ ಅವ್ಯವಸ್ಥೆ
ಉಂಟಾಗಬಹುದು. ಧೂಮಪಾನಿಗಳು ಮತ್ತು ಮಾನಸಿಕ ಒತ್ತಡ ಅತಿಯಾಗಿರುವವರಲ್ಲಿ ಇದರ ಸಂಭವ ಹೆಚ್ಚು. ಏನೂ ಕಾರಣಗಳಿಲ್ಲದೆ ಹೃದಯಾಘಾತ ವಾಗುವವರಲ್ಲಿ ಈ ನ್ಯೂನತೆ ಪ್ರಮುಖ ರಣವಾಗಿರುತ್ತದೆ. ಚಳಿಗಾಲದಲ್ಲಿ ಹೃದಯದ ಶುದ್ಧರಕ್ತನಾಳಗಳು ಅತಿಯಾಗಿ ಸಂಕುಚಿತವಾಗುವುದರಿಂದ ಹೃದಯಾ ಘಾತ ಈ ಕಾಲದಲ್ಲಿ ಅಧಿಕ. ಈ ಕಾರಣದಿಂದಾಗಿ ಹೃದ್ರೋಗಿಗಳಿಗೆ ಚಳಿಗಾಲ ಹಿತವಲ್ಲ. ಬೇಸಿಗೆ ಕಾಲ ಹಿತ. ಹೃದಯದ ಶುದ್ಧರಕ್ತ ನಾಳಗಳು ಸೆಳೆತಕ್ಕೀಡಾದಾಗ ಸಣ್ಣ ಜಿಡ್ಡು ಗಡ್ಡೆಯೂ ಒಡೆದು ಹುಣ್ಣಾಗಿ ರಕ್ತ ಹೆಪ್ಪುಗಟ್ಟಿ ರಕ್ತನಾಳ ಅಡಚಣೆಯುಂಟಾಗುವ ಸಂಭವವಿರುತ್ತದೆ.

ಯಾರಿಗೆ ಹೃದಯಾಘಾತ?: ಪ್ರಚೋದಕ ಅಂಶಗಳು ಇದ್ದವರೆಲ್ಲರಲ್ಲೂ ಹೃದಯಾಘಾತವಾಗದಿರಬಹುದು. ಬಹುಪಾಲರಲ್ಲಿ ಒಂದಕ್ಕಿಂತ ಹೆಚ್ಚು ಪ್ರಚೋದಕ ಅಂಶಗಳು ಜತೆಗೂಡಿದಲ್ಲಿ ಈ ಸಾಧ್ಯತೆ ಹೆಚ್ಚಾಗುತ್ತದೆ. ಉದಾಹರಣೆಗೆ, ಸ್ಥೂಲಕಾಯ ಒಂದೇ ಇದ್ದಲ್ಲಿ ಹೃದಯಾಘಾತವಾಗದಿರಬಹುದು. ಇದರೊಡನೆ ಸಕ್ಕರೆ
ಕಾಯಿಲೆ, ಏರು ರಕ್ತ ಒತ್ತಡ ಮತ್ತಿತರ ಅಂಶಗಳು ಜತೆಗೂಡಿದಲ್ಲಿ ಸಾಧ್ಯತೆ ಹೆಚ್ಚಾಗುತ್ತದೆ. ಪ್ರಚೋದಕ ಅಂಶಗಳಿರುವ ಎಲ್ಲರಲ್ಲೂ ಅದರಲ್ಲೂ ವಂಶವಾಹಿ
ನ್ಯೂನತೆ ಇಲ್ಲದವರಲ್ಲಿ ಹೃದಯಾಘಾತವಾಗದಿರಬಹುದು. ವಂಶವಾಹಿ ನ್ಯೂನತೆ ಮಾಹಿತಿ ಇರುವವರಲ್ಲಿ ಅಂದರೆ ವಂಶಸ್ಥರಲ್ಲಿ ಹೃದಯಾಘಾತ ಮಾಹಿತಿ ಇರುವವರಲ್ಲಿ ಪ್ರಚೋದಕ ಅಂಶಗಳ  ಪ್ರಭಾವ ಅತಿಯಾಗಿದ್ದು, ಹೃದಯಾಘಾತದ ಸಂಭವ ಅಧಿಕ ಪ್ರಮಾಣದಲ್ಲಿರುತ್ತದೆ.

ಹೃದಯ ಶುದ್ಧರಕ್ತನಾಳಗಳ ಜನ್ಮದತ್ತ ನ್ಯೂನತೆ: ಹುಟ್ಟುವಾಗಲೆ ಹೃದಯದ ಶುದ್ಧರಕ್ತನಾಳಗಳ ಉದ್ಭವದಲ್ಲಿ ಸಂಖ್ಯೆಯಲ್ಲಿ, ಹೆಣಿಕೆ ಪ್ರಮಾಣಗಳಲ್ಲಿ ಅಸಹಜತೆ ಗಳಿದ್ದರೆ ಶುದ್ಧರಕ್ತ ಸರಬರಾಜು ಕಡಿಮೆಯಾಗಿ ಹೃದಯಾಘಾತ ಉಂಟಾಗುತ್ತದೆ. ಮಕ್ಕಳಲ್ಲಿ ಮತ್ತು ಯುವಕರಲ್ಲಿ ಉಂಟಾಗುವ ಹೃದಯಾಘಾತಕ್ಕೆ ಇದು ಪ್ರಮುಖ ಕಾರಣ.

ಚಿಕ್ಕ ವಯಸ್ಕರ ಹೃದಯಾಘಾತಕ್ಕೆ ಕಾರಣಗಳು: ಚಿಕ್ಕ ವಯಸ್ಕರಲ್ಲಿಯೂ ಇಂದು ಹೆಚ್ಚಾಗುತ್ತಿರುವ ಹೃದಯಾಘಾತಕ್ಕೆ ಅವರುಗಳಲ್ಲಿ ಅತಿಯಾಗುತ್ತಿರುವ ಧೂಮಪಾನ, ಅತಿಯಾದ ಬೇಕರಿ ಆಹಾರ ಪದಾರ್ಥಗಳು ಮತ್ತು ಮಾಂಸಾಹಾರ ಸೇವನೆ ಯಿಂದ ಉಂಟಾಗುತ್ತಿರುವ ಸ್ಥೂಲಕಾಯ ಮತ್ತು ರಕ್ತದ ಕೊಲೆಸ್ಟ್ರಾಲ್ ಏರಿಕೆ, ಜನ್ಮದತ್ತ ನ್ಯೂನತೆಗಳು, ವಂಶವಾಹಿ ನ್ಯೂನತೆಗಳು ಮತ್ತು ಮಕ್ಕಳ ಮೇಲೆ ಬೀಳುತ್ತಿರುವ ಅತಿಯಾದ ಮಾನಸಿಕ ಒತ್ತಡ, ವ್ಯಾಯಾಮರಹಿತ ಬದುಕು ಪ್ರಮುಖ ಕಾರಣ ಗಳು. ಹೃದಯಾಘಾತಕ್ಕೆ ವಂಶವಾಹಿ ನ್ಯೂನತೆಗಳು ಪ್ರಮುಖ ಕಾರಣವಾಗಿದ್ದು, ವಂಶಸ್ಥರಲ್ಲಿ ಹೃದಯಾಘಾತದ ಮಾಹಿತಿ ಇದ್ದಲ್ಲಿ ಚಿಕ್ಕ ವಯಸ್ಸಿ ನಲ್ಲಿಯೇ ಪ್ರಚೋದಕ ಅಂಶಗಳ ಪ್ರಭಾವವಿದ್ದಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚಾಗುತ್ತದೆ.

ಸಮುದಾಯದಲ್ಲಿ ಹೃದಯಾಘಾತ ಹೆಚ್ಚಾಗುತ್ತಿರುವುದಕ್ಕೆ ಕಾರಣಗಳೇನು?: ಅತಿಯಾದ ಮಾಂಸಾಹಾರ, ಮಿತಿಯಾದ ಸಸ್ಯಾಹಾರ, ಅತಿಯಾದ ಜಿಡ್ಡಿನ ಆಹಾರ ಪದಾರ್ಥಗಳ ಸೇವನೆ, ಧೂಮಪಾನ, ಮದ್ಯಪಾನ, ಹೆಚ್ಚಾಗುತ್ತಿರುವ ಸಕ್ಕರೆಕಾಯಿಲೆ, ಅಧಿಕ ದೇಹದ ತೂಕ, ಕುಳಿತು ಕೆಲಸ ಮಾಡುವಿಕೆ, ದೈಹಿಕ ಶ್ರಮ
ಮತ್ತು ವ್ಯಾಯಾಮವಿಲ್ಲದ ಜೀವನಶೈಲಿ, ಸ್ಪರ್ಧಾತ್ಮಕ ಬದುಕಿನಿಂದುಂಟಾಗುತ್ತಿರುವ ಅತಿಯಾದ ಮಾನಸಿಕ ಒತ್ತಡ, ಅವಶ್ಯಕ ನಿದ್ರೆಯಿಲ್ಲದಿರುವಿಕೆ ಇವೆಲ್ಲವೂ ಮನುಷ್ಯನ ಆಧುನಿಕ ಬದುಕಿನ ಜೀವನಶೈಲಿಗಳಾಗಿದ್ದು, ಇವು ರಕ್ತನಾಳಗಳ ಜಿಡ್ಡುಗಡಸು ರೋಗವನ್ನು ಅತಿ ವೇಗದಲ್ಲಿ ಉತ್ತೇಜಿಸುವುದರಿಂದ ಇಂದು ಸಮುದಾಯದಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚಾಗುತ್ತಿದೆ.

(ಮುಂದುವರಿಯುವುದು)

Leave a Reply

Your email address will not be published. Required fields are marked *

error: Content is protected !!