Saturday, 27th July 2024

ವಿಜಯೇಂದ್ರ ಆಯ್ಕೆ ಅನಿವಾರ್ಯ ಆಗಿದ್ದೇಕೆ ?

ವರ್ತಮಾನ

maapala@gmail.com

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರನ್ನು ನೇಮಿಸಿದ ವರಿಷ್ಠರ ನಿರ್ಧಾರಕ್ಕೆ ಪಕ್ಷದಲ್ಲಿ ಅಸಮಾಧಾನ ಇರಬಹುದು. ಆದರೆ, ಅಂಥ ಅನಿವಾರ್ಯತೆ ಸೃಷ್ಟಿಯಾಗಲು ಪ್ರಮುಖ ಕಾರಣ ಬಿಜೆಪಿ ರಾಜ್ಯ ನಾಯಕರೇ ಹೊರತು ವರಿಷ್ಠರು ಅಲ್ಲ. ಅದನ್ನು ಪದೇಪದೆ ಸಾಬೀತುಪಡಿಸಿಯೂ ಆಗಿದೆ.

ವಿಧಾನಸಭೆ ಚುನಾವಣೆ ಮುಗಿದು ಆರು ತಿಂಗಳ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಬದಲಾಯಿಸುವ ಮೂಲಕ ವರಿಷ್ಠರು ಹೊಸ ನಾಯಕತ್ವವನ್ನು ಪಕ್ಷಕ್ಕೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಿಸಿ ಅವರು ಪದಗ್ರಹಣ ಮಾಡಿದ್ದೂ ಆಗಿದೆ.

ಪಕ್ಷದಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದರೂ, ಹಿರಿಯರು, ಅನುಭವಿಗಳಿದ್ದರೂ ಯುವನಾಯಕ ಎನಿಸಿಕೊಂಡಿರುವ ವಿಜಯೇಂದ್ರ ಅವರಿಗೆ ಪಟ್ಟ ಕಟ್ಟುವ ಮೂಲಕ ರಾಜ್ಯದಲ್ಲಿ ಬಿಜೆಪಿ ಗಟ್ಟಿಯಾಗಿ ನಿಲ್ಲಬೇಕಾದರೆ ಯಡಿಯೂರಪ್ಪ ಅವರ ಅನಿವಾರ್ಯತೆ ಇದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಸಹಜವಾಗಿಯೇ ಇದು ಕೆಲವು ಹಿರಿಯರು, ಆಕಾಂಕ್ಷಿಗಳಿಗೆ ಅಸಮಾಧಾನ ತಂದಿದೆ. ಅದು ತಪ್ಪು ಎಂದು ಹೇಳಲೂ ಸಾಧ್ಯವಿಲ್ಲ. ಏಕೆಂದರೆ, ಹಲವು ವರ್ಷಗಳಿಂದ ಪಕ್ಷಕ್ಕಾಗಿಯೇ ಅವರು ಕೆಲಸ ಮಾಡಿದ್ದಾರೆ. ಪಕ್ಷದಲ್ಲಿ ವಿಜಯೇಂದ್ರ ಅವರಿಗಿಂತ ಹೆಚ್ಚಿನ ಸ್ಥಾನಮಾನಗಳನ್ನು ಅಲಂಕರಿಸಿ ದುಡಿದಿದ್ದಾರೆ.

ಹೀಗಿರುವಾಗ ಯುವಕನೊಬ್ಬನ ಕೈ ಕೆಳಗೆ ಕೆಲಸ ಮಾಡುವುದು ಹೇಗೆ ಎಂಬ ಯೋಚನೆ ಅವರಲ್ಲಿ ಬರುವುದು ಸಹಜ. ಆದರೆ, ಅದನ್ನು ಗಟ್ಟಿಯಾಗಿ ಹೇಳಲೂ ಆಗದೆ, ಇತ್ತ ಅರಗಿಸಿಕೊಳ್ಳಲೂ ಆಗದೆ ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಹಾಗೆಂದು ವರಿಷ್ಠರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಹೆಸರನ್ನು ಏಕಾಏಕಿ ಘೋಷಿಸಿಲ್ಲ. ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ೬ ತಿಂಗಳು ಕಾದು ನೋಡಿ ನಿರ್ಧಾರ ಕೈಗೊಂಡಿದ್ದಾರೆ. ಈ ೬ ತಿಂಗಳ ಅವಧಿಯಲ್ಲಿ ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿದ ಬಳಿಕವೇ ತೀರ್ಮಾನಕ್ಕೆ ಬಂದಿದ್ದಾರೆ.

ಇಲ್ಲದೇ ಇದ್ದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಸಿ.ಟಿ.ರವಿ ಅವರನ್ನು ಆ ಹುದ್ದೆಯಿಂದ ಬಿಡುಗಡೆ ಮಾಡುತ್ತಿರಲಿಲ್ಲ. ಸಿ.ಟಿ.ರವಿ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಉದ್ದೇಶ ಇರದಿದ್ದರೆ ಅಂಥ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ. ಏಕೆಂದರೆ, ಪಕ್ಷದಲ್ಲಿ ಹಲವು ವರ್ಷಗಳ ಕಾಲ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಅವರು ಹೇಳಿಕೊಳ್ಳುವಂಥ ತಪ್ಪು ಮಾಡಲಿಲ್ಲ. ಪಕ್ಷದ ಸಿದ್ಧಾಂತ, ಶಿಸ್ತು ಮೀರಿಲ್ಲ. ನೀಡಿದ ಜವಾಬ್ದಾರಿಯನ್ನು ವಿವಾದವಿಲ್ಲದೆ, ಸಮರ್ಥವಾಗಿ ನಿಭಾಯಿಸಿದ್ದರು. ಆದರೆ, ಈಗಾಗಲೇ ಅಧಿಕಾರ ರಾಜಕಾರಣದ ಬೆನ್ನು ಬಿದ್ದಿರುವ ಪಕ್ಷಕ್ಕೆ ಕೇವಲ ಶಿಸ್ತು, ಸಿದ್ಧಾಂತ ಸಾಕಾಗುವುದಿಲ್ಲ.

ಜವಾಬ್ದಾರಿ ವಹಿಸಿಕೊಂಡ ಮೇಲೆ ರಾಜ್ಯಾದ್ಯಂತ ಓಡಾಡಿ ಸಂಘಟನೆ ಮಾಡಬೇಕು. ಮತ್ತೆ ಅಧಿಕಾರಕ್ಕೆ ತರಲು ‘ಮಾಸ್ ಲೀಡರ್ ಶಿಪ್’ ಬೇಕು. ಜತೆಗೆ ಹಣ ಖರ್ಚು ಮಾಡುವ ಸಾಮರ್ಥ್ಯವೂ ಬೇಕು. ಸಿ.ಟಿ.ರವಿ ಅವರಿಗೆ ಎಲ್ಲವೂ ಇದ್ದರೂ ಈ ಎರಡು ಅಂಶಗಳಲ್ಲಿ ಕೊರತೆ ಇದೆ. ಈ ಕಾರಣಕ್ಕಾಗಿಯೇ ಅವರ ಹೆಸರನ್ನು
ಕೈಬಿಡಲಾಯಿತು. ಸುಮಾರು ೪ ತಿಂಗಳು ಈ ಎಲ್ಲಾ ವಿಚಾರಗಳನ್ನು ಗಮನಿಸಿದ ಬಳಿಕವೇ ನಿರ್ಧಾರ ಕೈಗೊಳ್ಳಲಾಯಿತು ಎಂಬುದು ಸ್ಪಷ್ಟವಾಗುತ್ತದೆ.
ರಾಜ್ಯಾಧ್ಯಕ್ಷ ಹುದ್ದೆಗೆ ವಿಜಯೇಂದ್ರರ ಹೆಸರು ಅಂತಿಮಗೊಳಿಸುವ ಮುನ್ನ ವರಿಷ್ಠರು ಹಲವು ಹೆಸರುಗಳ ಬಗ್ಗೆ ಪರಿಶೀಲಿಸದೇ ಇರಲು ಸಾಧ್ಯವೇ ಇಲ್ಲ.

ಏಕೆಂದರೆ, ೨೦೧೯ರಲ್ಲಿ ಮೈತ್ರಿ ಸರಕಾರ ಉರುಳಿಸಿ ಆಪರೇಷನ್ ಕಮಲದ ಮೂಲಕ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಬಿ.ಎಸ್.ಯಡಿಯೂರಪ್ಪ
ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ದಾಗಲೇ ವರಿಷ್ಠರು ಪರ್ಯಾಯ ನಾಯಕತ್ವದ ಬಗ್ಗೆ ಯೋಚಿಸಿದ್ದರು. ಅದಕ್ಕಾಗಿ ಪ್ರಬಲ ಲಿಂಗಾಯತ
ಸಮುದಾಯದವರನ್ನೇ ಮತ್ತೆ ಮುಖ್ಯಮಂತ್ರಿ ಮಾಡಿದರು. ಅವರ ಸಂಪುಟದಲ್ಲಿ ವಿವಿಧ ಸಮುದಾಯಗಳ ಹಿರಿಯ, ಕಿರಿಯ ನಾಯಕರಿಗೆ ಅವಕಾಶ ಮಾಡಿಕೊಟ್ಟರು. ಆದರೆ, ಪಕ್ಷ ಮೇಲೇಳುವ ಸೂಚನೆ ಇಲ್ಲದ ಕಾರಣ ಇನ್ನೇನು ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರುತ್ತಿದೆ ಎಂಬ ಕಾರಣಕ್ಕೆ ಮತ್ತೆ ಯಡಿಯೂರಪ್ಪ ಅವರಿಗೆ ಮಣೆ ಹಾಕಿದರು. ಆದರೂ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಿಲ್ಲ.

ಟಿಕೆಟ್ ಹಂಚಿಕೆ ವೇಳೆ ಅವರ ಮಾತಿಗೆ ಪೂರ್ಣ ಮನ್ನಣೆ ನೀಡಲಿಲ್ಲ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ಕೈತಪ್ಪಿ ಅವರು ಕಾಂಗ್ರೆಸ್‌ಗೆ ಹೋಗಿದ್ದೇ ಇದಕ್ಕೆ ಉದಾಹರಣೆ. ಇದೆಲ್ಲದರ ಪರಿಣಾಮವನ್ನು ಚುನಾವಣೆ ಯಲ್ಲಿ ಎದುರಿಸಬೇಕಾಯಿತು. ಪಕ್ಷ ಅಧಿಕಾರ ಕಳೆದುಕೊಂಡಿತು ಎಂಬುದಕ್ಕಿಂತ ಹೀನಾಯವಾಗಿ
ಸೋಲುವಂತಾಯಿತು. ಚುನಾವಣೆ ಬಳಿಕವೂ ಪರಿಸ್ಥಿತಿ ಸುಧಾರಣೆಯಾಗಲಿಲ್ಲ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ವರಿಷ್ಠರಿಗೆ ಇದು ನುಂಗಲಾರದ ತುತ್ತಾಯಿತು. ಸೋಲಿನ ಬಳಿಕ ನೈತಿಕ ಹೊಣೆ ಹೊತ್ತು ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾದಾಗ ಮುಂದಿನ ಅಧ್ಯಕ್ಷರ ಆಯ್ಕೆವರೆಗೆ ಮುಂದುವರಿಯುವಂತೆ ಸೂಚನೆ ನೀಡಿದರು.

ಆರು ತಿಂಗಳು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನೂ ಆಯ್ಕೆ ಮಾಡಲಿಲ್ಲ. ಅಧ್ಯಕ್ಷರ ಬದಲಾವಣೆಗೂ ಗಮನಹರಿಸಲಿಲ್ಲ. ಈ ಅವಽಯಲ್ಲೇ ಬೇರೆ
ಯಾರಾದರೂ ನಾಯಕತ್ವದ ಲಕ್ಷಣ ತೋರುವರೇ ಎಂದು ಕಾದು ನೋಡಿದರು. ಆದರೆ, ಪರಿಸ್ಥಿತಿ ಸುಧಾರಿಸುವ ಬದಲು ಇನ್ನಷ್ಟು ಹದಗೆಡಲಾರಂಭಿಸಿತು. ಒಬ್ಬೊಬ್ಬರೇ ಪಕ್ಷ ತ್ಯಜಿಸುವ ಮುನ್ಸೂಚನೆ ನೀಡಿದರು. ಕೆಲವರು ಪಕ್ಷ ತೊರೆದುಹೋದರು. ಇದಕ್ಕೆ ಪೂರಕವಾಗಿ ಆಡಳಿತಾರೂಢ ಕಾಂಗ್ರೆಸ್ ‘ಆಪರೇಷನ್ ಹಸ್ತ’ದ ಮೂಲಕ ಬಿಜೆಪಿಯ ಮುಖಂಡರಿಗೆ ಬಲೆ ಬೀಸತೊಡಗಿತು. ಇದಕ್ಕೆ ಕಡಿವಾಣ ಹಾಕುವ ಕೆಲಸಕ್ಕೆ ಯಾರೂ ಕೈ ಹಾಕಲಿಲ್ಲ.

ನಮಗೇಕೆ ಎಂಬಂತೆ ಸುಮ್ಮನೆ ಉಳಿದುಬಿಟ್ಟರು. ಆ ಸಂದರ್ಭದಲ್ಲಿ ಮತ್ತೆ ಆಪರೇಷನ್ ಹಸ್ತಕ್ಕೆ ಅಡ್ಡಿಯಾಗಿದ್ದು ಯಡಿಯೂರಪ್ಪ. ಏಕೆಂದರೆ, ಕಾಂಗ್ರೆಸ್‌ನ ಈ
ತಂತ್ರಕ್ಕೆ ಮರುಳಾಗುತ್ತಿರುವವರನ್ನು ಈ ಹಿಂದೆ ಪಕ್ಷಕ್ಕೆ ಕರೆತಂದಿದ್ದು ಅವರೇ. ಜತೆಗೆ ಪಕ್ಷ ತೊರೆಯಲು ಮುಂದಾಗಿದ್ದುದು ಕೂಡ ಅವರ ಬೆಂಬಲಿಗರೇ ಆಗಿದ್ದರು.
ಇದೆಲ್ಲದರ ಪರಿಣಾಮ ಯಡಿಯೂರಪ್ಪ ಅವರನ್ನು ದೂರವಿಟ್ಟರೆ ಪಕ್ಷಕ್ಕೆ ನಷ್ಟವೇ ಹೆಚ್ಚು, ಬೇರೆ ನಾಯಕರನ್ನು ನೆಚ್ಚಿಕೊಂಡರೆ ಲಾಭವಿಲ್ಲ ಎಂಬುದು ಮನವರಿಕೆ ಯಾಗಿತ್ತು. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮೊದಲು ಶೋಭಾ ಕರಂದ್ಲಾಜೆ ಹೆಸರನ್ನು ಮುಂದಿಡಲಾಯಿತು. ಆದರೆ, ಶೋಭಾ ಕರಂದ್ಲಾಜೆ ಆಸಕ್ತಿ ತೋರಿಸಲಿಲ್ಲ. ಮೇಲಾಗಿ ಶೋಭಾ ಅವರನ್ನು ಆಯ್ಕೆ ಮಾಡಿದರೆ ಒಕ್ಕಲಿಗ ಸಮುದಾಯದವರು ಅದರಲ್ಲೂ ಮುಖ್ಯವಾಗಿ ಹಳೇ ಮೈಸೂರು ಭಾಗದ ಮುಖಂಡರು ಅಸಮಾಧಾನಗೊಳ್ಳಬಹುದು ಎಂಬ ಆತಂಕವೂ ಇತ್ತು.

ಆ ಪರಿಸ್ಥಿತಿ ಬಂದರೆ ಯಡಿಯೂರಪ್ಪ ಅವರು ಗಟ್ಟಿಯಾಗಿ ಶೋಭಾ ಕರಂದ್ಲಾಜೆ ಪರ ನಿಲ್ಲುತ್ತಾರೆ ಎಂಬ ಖಾತರಿಯೂ ಇರಲಿಲ್ಲ. ಇನ್ನು ಬೇರೆ ಯಾರನ್ನೇ ಆಯ್ಕೆ ಮಾಡಿದರೂ ಲಾಭಕ್ಕಿಂತ ಸಮಸ್ಯೆಯೇ ಹೆಚ್ಚು ಎಂಬುದನ್ನು ಅರಿತ ವರಿಷ್ಠರು ಕೊನೆಗೆ ವಿಜಯೇಂದ್ರರಿಗೆ ಪಟ್ಟ ಕಟ್ಟುವ ನಿರ್ಧಾರಕ್ಕೆ ಬಂದಿರಬಹುದು. ಯಡಿಯೂರಪ್ಪ ಅವರ ಪುತ್ರ ಎಂಬ ಕಾರಣಕ್ಕೆ ವಿಜಯೇಂದ್ರ ಅವರಿಗೆ ಈ ಹುದ್ದೆ ಒಲಿದಿರಬಹುದಾದರೂ ಅದೊಂದೇ ಕಾರಣವೂ ಅಲ್ಲ. ಹಾಗೇನಾದರೂ ಒಂದೇ ಕಾರಣ ಇದ್ದಿದ್ದರೆ ಹಿರಿಯ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುತ್ತಿದ್ದರು. ಪಕ್ಷದಲ್ಲಿ ವಿಜಯೇಂದ್ರ ಬಗ್ಗೆ ಕೆಲವರಿಗೆ ಅಸಮಾಧಾನ
ಇದ್ದರೂ ರಾಘವೇಂದ್ರರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಆದರೆ, ವಿಜಯೇಂದ್ರ ಅವರಷ್ಟು ಸಂಘಟನಾ ಸಾಮರ್ಥ್ಯ ರಾಘವೇಂದ್ರ ಅವರಲ್ಲಿ ಇಲ್ಲ. ವಿಜಯೇಂದ್ರ ಅವರ ಸಂಘಟನಾ ಸಾಮರ್ಥ್ಯ ವನ್ನು ೨೦೨೦ರ ವಿಧಾನಸಭೆ ಉಪ ಚುನಾವಣೆಯಲ್ಲಿ ವರಿಷ್ಠರು ಗಮನಿಸಿದ್ದಾರೆ. ಕೆ.ಆರ್.ಪೇಟೆ ಮತ್ತು ಶಿರಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದರು. ಈ ಕ್ಷೇತ್ರಗಳಲ್ಲಿ ಬಿಜೆಪಿ ಯಾವತ್ತೂ ಗೆದ್ದಿರಲಿಲ್ಲ.

ಅಷ್ಟೇ ಅಲ್ಲ, ಬಿಜೆಪಿ ಗೆಲ್ಲುತ್ತದೆ ಎಂಬ ನಿರೀಕೆಯೂ ಇರಲಿಲ್ಲ. ಆದರೆ, ಫಲಿತಾಂಶ ಬರುವ ವೇಳೆಗೆ ಎರಡೂ ಕ್ಷೇತ್ರದಲ್ಲಿ ಆದ ಸಂಘಟನೆಯ ಕೆಲಸಗಳು ಬಿಜೆಪಿ ಯನ್ನು ಗೆಲ್ಲುವಂತೆ ಮಾಡಿದ್ದವು. ಅಷ್ಟೇ ಅಲ್ಲ, ಬಿಜೆಪಿ ಉಪಾಧ್ಯಕ್ಷರಾಗಿ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿದ್ದರು. ಹೀಗಾಗಿ ಸಂಘಟನೆ ದೃಷ್ಟಿಯಿಂದ ವಿಜಯೇಂದ್ರ ಸೂಕ್ತ ವ್ಯಕ್ತಿ ಎಂಬುದು ವರಿಷ್ಠರಿಗೆ ಮನವರಿಕೆ ಆಗಿತ್ತು. ಇದಕ್ಕೆ ಯಡಿಯೂರಪ್ಪ ಅವರ ಶಕ್ತಿಯೂ ಸೇರಿದರೆ ಪಕ್ಷ ಮತ್ತೆ ಮೆಲೆದ್ದು ಬರಬಹುದು ಎಂಬುದು ಅವರ ನಿರೀಕ್ಷೆ. ಇನ್ನೊಂದೆಡೆ ಬಿಜೆಪಿಯಲ್ಲಿ ವಿಜಯೇಂದ್ರ ಅವರಿಗಿಂತ ಹಿರಿಯ ಹಲವು ನಾಯಕರಿದ್ದರೂ ರಾಜ್ಯಾದ್ಯಂತ ಅದನ್ನು ಸಾಬೀತುಪಡಿಸುವ ಶಕ್ತಿಯನ್ನು ಯಾರೂ ಬೆಳೆಸಿಕೊಂಡಿಲ್ಲ.

ತಮ್ಮ ಕ್ಷೇತ್ರ ಹೊರತುಪಡಿಸಿ ಬೇರೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯವೂ ಅವರಲ್ಲಿ ಅಷ್ಟಕ್ಕಷ್ಟೆ. ರಾಜ್ಯಾಧ್ಯಕ್ಷರಾಗಿದ್ದ ನಳಿನ್
ಕುಮಾರ್ ಕಟೀಲ್ ತಮ್ಮ ಅಧಿಕಾರಾವಧಿಯಲ್ಲಿ ೧೮ ಬಾರಿ ರಾಜ್ಯ ಪ್ರವಾಸ ಮಾಡಿದ್ದರು. ಬೂತ್ ಮಟ್ಟದಿಂದ ಸಂಘಟನೆಗೆ ಶಕ್ತಿ ನೀಡುವ ಪ್ರಯತ್ನ ಮಾಡಿ
ದ್ದರು. ಆದರೆ, ಚುನಾವಣೆಯಲ್ಲಿ ಅದು ಮತಗಳಾಗಿ ಪರಿವರ್ತನೆಯಾಗಲೇ ಇಲ್ಲ. ಮತ್ತೊಂದೆಡೆ ಪಕ್ಷದಲ್ಲಿದ್ದ ಗುಂಪುಗಾರಿಕೆಯನ್ನು ನಿಯಂತ್ರಿಸುವ ಕೆಲಸ ಮಾಡಲೂ ಸಾಧ್ಯವಾಗಲಿಲ್ಲ. ಇದೆಲ್ಲದರ ಪರಿಣಾಮ ಪಕ್ಷದ ಕೆಲವು ಮುಖಂಡರು ಬಹಿರಂಗವಾಗಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾ ರಂಭಿಸಿದರು. ಒಂದೆಡೆ ಪ್ರತಿಪಕ್ಷ ನಾಯಕ ನಿಲ್ಲದೆ, ಇನ್ನೊಂದೆಡೆ ನಾಯಕರ ವಿರುದ್ಧ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲೂ ಸಾಧ್ಯವಾಗದೆ ಪಕ್ಷ ತೀವ್ರ ಮುಜುಗರ ಎದುರಿಸುವಂತಾಯಿತು.

ಸದನ ದೊಳಗೆ ಶಾಸಕರು ಒಟ್ಟಾಗಿ ಕೆಲಸ ಮಾಡಿದರೂ ಸದನದ ಹೊರಗೆ ಒಟ್ಟಾಗಿ ಹೋರಾಟ ಮಾಡಲು ಸಾಧ್ಯವಾಗಲಿಲ್ಲ. ನಾಯಕತ್ವ ಸಿಗುತ್ತದೋ, ಇಲ್ಲವೋ ಎಂಬ ಅನುಮಾನದಿಂದ ಎಲ್ಲರನ್ನೂ ಒಟ್ಟಾಗಿ ಸೇರಿಸುವ ಪ್ರಯತ್ನಕ್ಕೆ ಮುಖಂಡರೂ ಮನಸ್ಸು ಮಾಡಲಿಲ್ಲ. ಹೀಗಾಗಿ ಪಕ್ಷದ ವರಿಷ್ಠರಿಗೆ ಮತ್ತೆ ಯಡಿ
ಯೂರಪ್ಪ ಅವರನ್ನು ನೆಚ್ಚಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಎದುರಾಯಿತು. ಯಡಿಯೂರಪ್ಪ ಅವರು ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡು
ಪಕ್ಷ ಸಂಘಟನೆ ಮಾಡದೇ ಇದ್ದಲ್ಲಿ ಮತ್ತೆ ಬಿಜೆಪಿ ಯನ್ನು ಮೇಲಕ್ಕೆತ್ತಲು ಸಾಧ್ಯವಿಲ್ಲ ಎಂಬ ಭಾವನೆ ಯನ್ನು ರಾಜ್ಯ ನಾಯಕರೇ ಸೃಷ್ಟಿಸಿದರು.

ಆದರೆ, ತಮ್ಮ ಕುಟುಂಬದವರನ್ನು ಹೊರತುಪಡಿಸಿ ಇನ್ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಯಡಿಯೂರಪ್ಪ ಅವರು ಸಕ್ರಿಯವಾಗಿ ಪಾಲ್ಗೊಳ್ಳುವುದು
ಅನುಮಾನ. ಹೀಗಾಗಿ ವಿಜಯೇಂದ್ರ ಅವರ ಆಯ್ಕೆ ವರಿಷ್ಠರಿಗೆ ಮತ್ತು ರಾಜ್ಯ ಬಿಜೆಪಿಗೆ ಅನಿವಾರ್ಯವಾಗಿತ್ತು. ಅಂತೆಯೇ, ಅಸಮಾಧಾನ ಸೃಷ್ಟಿಯಾದರೂ ಪರವಾಗಿಲ್ಲ, ಮೊದಲು ಪಕ್ಷಕ್ಕೊಂದು ಗಟ್ಟಿ ನೆಲೆ ಒದಗಲಿ ಎಂಬ ಉದ್ದೇಶದಿಂದ ರಾಜ್ಯಾಧ್ಯಕ್ಷರ ಹೆಸರು ಘೋಷಿಸಿದರು.

ಲಾಸ್ಟ್ ಸಿಪ್: ಅವಕಾಶ ಸಿಕ್ಕಿದಾಗ ಬಳಸಿಕೊಂಡು ಯಶಸ್ಸು ಸಾಽಸದೆ ಕೈತಪ್ಪಿದ ಮೇಲೆ ಬಡಬಡಿಸಿ ಪ್ರಯೋಜನವಿಲ್ಲ.

Leave a Reply

Your email address will not be published. Required fields are marked *

error: Content is protected !!