Sunday, 21st April 2024

ಕೊಲ್ಲಿಯಲ್ಲೂ ಶಿವದೂತ ಗುಳಿಗನ ಅಬ್ಬರ !

ವಿದೇಶವಾಸಿ

dhyapaa@gmail.com

‘ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು, ನಾಟಕ ಆಡಿ ನೋಡು’ ಒಂದು ಹಳೆಯ ಗಾದೆಮಾತು. ಇತ್ತೀಚಿನ ದಿನಗಳಲ್ಲಿ, ಮೂರನೆ ಯದಕ್ಕೆ ಹೋಲಿಸಿದರೆ, ಮೊದಲಿನ ಎರಡು ಸುಲಭ. ನಾಟಕ ಆಡುವುದು ಮಾತ್ರ ಇಂದಿಗೂ ಕಷ್ಟ, ಮೊದಲಿಗಿಂತಲೂ ಕಷ್ಟ. ಕಲಾವಿದರು ಸಿಕ್ಕರೂ ರಂಗಭೂಮಿಯೆಡೆಗಿನ ಅವರ ಬದ್ಧತೆಯಲ್ಲಿ ಕೊರತೆಯಿದೆ.

ಸುಮಾರು ಎರಡು ತಿಂಗಳ ಹಿಂದಿನ ಮಾತು. ಗುರುಸೇವಾ ಸಮಿತಿ- ಬಹ್ರೈನ್ ಬಿಲ್ಲವಾಸ್‌ನ ಅಧ್ಯಕ್ಷರಾದ ಹರೀಶ್ ಪಾಲನ್ ಕರೆ ಮಾಡಿ, ‘ನಾಳೆ ಸಾಯಂಕಾಲ ಒಂದು ಗಳಿಗೆ ಬಂದು ಹೋಗಿ’ ಎಂದಿದ್ದರು. ‘ಏನು ವಿಶೇಷ?’ ಎಂದು ಕೇಳಿದ್ದೆ. ‘ಸಮಿತಿಯ ವತಿಯಿಂದ ಒಂದು ನಾಟಕ ಆಡಿಸುತ್ತಿದ್ದೇವೆ, ಅದರ ಪೋಸ್ಟರ್ ಮತ್ತು ಟಿಕೆಟ್ ಬಿಡುಗಡೆ ಮಾಡುತ್ತಿದ್ದೇವೆ’ ಎಂದಿದ್ದರು.

‘ಆಯಿತು’ ಎಂದು ಸುಮ್ಮನಾದೆ. ಬಹ್ರೈನ್‌ನಲ್ಲಿ ನಾಟಕ ಹೊಸದೇನೂ ಅಲ್ಲ. ನಿಜ ಹೇಳಬೇಕೆಂದರೆ, ಬಹ್ರೈನ್ ಭೂಮಿಯೇ ಒಂದು ವಿಶೇಷ. ಇಲ್ಲಿ ನಾಟಕವಾಗಲಿ, ಯಕ್ಷಗಾನವಾಗಲಿ, ಭಜನೆಯಾಗಲಿ, ಅಥವಾ ಇನ್ಯಾವುದೇ ಕಲೆಯಾಗಲಿ, ಹೊಸತೂ ಅಲ್ಲ, ಅಪರೂಪವೂ ಅಲ್ಲ. ಕಳೆದ ಕೆಲವು ದಶಕಗಳ ಹಿಂದೆ ಬಿತ್ತಿದ ಕನ್ನಡದ ಕಾಳು ಮೊಳಕೆಯೊಡೆದು, ಚಿಗುರಿ, ಮರವಾಗಿ ಬಲಿತು, ನಮ್ಮ ನೆಲದ ಸಂಸ್ಕೃತಿಯ ಸೊಬಗನ್ನು, ಭಾಷೆಯ
ಘಮಲನ್ನು ನಿರಂತರವಾಗಿ ಬೀರುತ್ತಿದೆ. ಈ ಪುಟ್ಟ ದೇಶದಲ್ಲಿ, ಹಿಮ್ಮೇಳ-ಮುಮ್ಮೇಳಗಳನ್ನು ಒಳಗೊಂಡ, ಪೂರ್ಣ ಪ್ರಮಾಣದ ಯಕ್ಷಗಾನ ತಂಡ
ವಿದೆ, ತರಬೇತಿ ಕೇಂದ್ರವಿದೆ.

ನಾಟಕ-ನೃತ್ಯ ಮಾಡುವ ಅಸಂಖ್ಯಾತ ಕಲಾವಿದರಿದ್ದಾರೆ. ವರ್ಷಕ್ಕೆ ನಾಲ್ಕು-ಐದು ಯಕ್ಷಗಾನ, ಒಂದೆರಡು ತುಳು ನಾಟಕ ಇಲ್ಲಿ ಮಾಮೂಲು. ಇಲ್ಲಿಯ ಕೇರಳ ಸಮಾಜಂನಲ್ಲಿ ಕೆಲವೊಮ್ಮೆ ನಾಟಕದ ಸಪ್ತಾಹ ವಾಗುತ್ತದೆ. ನಾಟಕದ ಸ್ಪರ್ಧೆಯೂ ಆಗುತ್ತದೆ. ಇತ್ತೀಚೆಗೆ ನಡೆದ ಒಂದು ನಾಟಕ ಸ್ಪರ್ಧೆಯಲ್ಲಿ
ಸುಮಾರು ಮೂವತ್ತು ತಂಡಗಳು ಭಾಗವಹಿಸಿದ್ದವು. ಮತ್ತೊಮ್ಮೆ ಹೇಳುತ್ತೇನೆ, ಐದುನೂರು ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ, ಸುಮಾರು ಮೂರು ಲಕ್ಷ ಭಾರತೀಯರು, ಒಂದು ಲಕ್ಷ ಕೇರಳz ವರು ಇರುವ ದೇಶದಲ್ಲಿ ಮೂವತ್ತು ನಾಟಕ ತಂಡ ಗಳು ಸ್ಪರ್ಧಿಸುತ್ತವೆ ಎಂದರೆ ಅದು ಸಾಮಾನ್ಯದ
ಸಂಗತಿಯಲ್ಲ. ಅಷ್ಟರಮಟ್ಟಿಗೆ ಈ ನೆಲ ಭಾರತೀಯವಾಗಿ ಬಿಟ್ಟಿದೆ.

ಈ ವಿಷಯದಲ್ಲಿ ಖಂಡಿತವಾಗಿಯೂ ಇಲ್ಲಿಯ ರಾಜ ಮನೆತನ ಮತ್ತು ಆಡಳಿತ ವರ್ಗದ ಜನ ಅಭಿನಂದನೆಗೆ ಅರ್ಹರು. ಇರಲಿ, ಹರೀಶ್ ಕರೆ ಮಾಡಿ ಹೇಳಿದಾಗ, ಅದರಲ್ಲಿ ವಿಶೇಷ ಎಂದು ಅನಿಸಿರಲಿಲ್ಲ. ಅವರು ಮುಂದುವರಿದು, ‘ಊರಿನಿಂದ ಒಂದು ನಾಟಕ ತಂಡವನ್ನೇ ಕರೆಸಿ ಪ್ರದರ್ಶನ ಮಾಡಿಸುತ್ತಿ ದ್ದೇವೆ, ಸುಮಾರು ಇಪ್ಪತ್ತೈದು ಜನ ಬರುತ್ತಿದ್ದಾರೆ’ ಎಂದರು. ‘ಯಾವ ನಾಟಕ?’ ಎಂದು ಕೇಳಿದೆ.

‘ಶಿವದೂತ ಗುಳಿಗ’ ಎಂದರು. ಆ ಕ್ಷಣದಲ್ಲಿಯೇ ‘ಹೋಗಲೇ ಬೇಕು’ ಎಂದು ನಿರ್ಧರಿಸಿ ಆಗಿತ್ತು. ಜತೆಗೆ, ಸಮಿತಿಯವರು ದೊಡ್ಡ ಸಾಹಸಕ್ಕೆ ಕೈಹಾಕು ತ್ತಿದ್ದಾರೆ, ತುಂಬಾ ‘ರಿಸ್ಕ್’ ತೆಗೆದುಕೊಳ್ಳುತ್ತಿದ್ದಾರೆ ಎಂದೂ ಅನಿಸಿತ್ತು. ಅದಕ್ಕೆ ಕಾರಣ ಇತ್ತೀಚೆಗೆ ಬಹ್ರೈನ್‌ನಲ್ಲಿ ಕಲಾಪ್ರದರ್ಶನಕ್ಕೆ ಇರುವ ನಿಯಮಗಳು.
ಒಂದು ವಿಷಯ ಹೇಳಿ ಮುಂದುವರಿಯುತ್ತೇನೆ. ಬಹ್ರೈನ್‌ಗೆ ಭಾರತದಿಂದ ಕಲಾವಿದರು ಬರುತ್ತಿರುವುದು ಹೊಸತೇನೂ ಅಲ್ಲ. ನಾಟಕ, ಯಕ್ಷಗಾನ
ದಂಥ ಕಾರ್ಯಕ್ರಮಗಳಿಗೆ ಅತಿಥಿ ಕಲಾವಿದರಾಗಿ ಸಾಕಷ್ಟು ಜನ ಬಂದು ಹೋಗಿದ್ದಾರೆ. ಆದರೆ ಪೂರ್ಣ ಪ್ರಮಾಣದ ಒಂದು ತಂಡ ಬಂದದ್ದು ಕಡಿಮೆಯೇ.

ಬಹ್ರೈನ್‌ಗೆ ಬಹಳ ಹಿಂದೆ ಕೆರೆಮನೆ, ಸಾಲಿಗ್ರಾಮ ಮಕ್ಕಳ ಮೇಳ, ಬಂಗಾರುಮಕ್ಕಿ ಯಕ್ಷಗಾನ ತಂಡಗಳು ಬಂದು ಹೋಗಿವೆ. ಇನ್ನು ನಾಟಕದಲ್ಲಿ,
ಮಾಸ್ಟರ್ ಹಿಣ್ಣಯ್ಯನವರ ಕೆ. ಹಿರಣ್ಣಯ್ಯ ಮಿತ್ರ ಮಂಡಳಿ, ತೋನ್ಸೆ ವಿಜಯಕುಮಾರ್ ನೇತೃತ್ವದ ಮುಂಬೈನ ಕಲಾಜಗತ್ತು, ಯಶವಂತ ಸರದೇಶ
ಪಾಂಡೆಯವರ ಗುರು ಸಂಸ್ಥೆ ಹುಬ್ಬಳ್ಳಿ, ಹೀಗೆ ಬೆರಳೆಣಿಕೆಯ ತಂಡಗಳು ಮಾತ್ರ ಬಹ್ರೈನ್‌ನಲ್ಲಿ ಕನ್ನಡ ನಾಟಕ ಪ್ರದರ್ಶನ ಮಾಡಿವೆ. ಆ ತಂಡಗಳನ್ನು
ಬಹ್ರೈನ್‌ಗೆ ಕರೆತರುವಲ್ಲಿಯೂ ಸಾಕಷ್ಟು ಶ್ರಮವಿತ್ತು. ಆದರೆ ಕಲಾಸಂಗಮ ತಂಡದವರು ಪ್ರದರ್ಶಿಸುವ ‘ಶಿವದೂತ ಗುಳಿಗ’ ಎರಡು ಕಾರಣಗಳಿಂದ ಉಳಿದ ನಾಟಕಗಳಿಗಿಂತ ಭಿನ್ನವಾಗಿತ್ತು.

ಮೊದಲನೆಯದಾಗಿ, ಬಹ್ರೈನ್‌ನ ಪ್ರವಾಸೋದ್ಯಮ ಮಂತ್ರಾಲಯದ ನಿಯಮಗಳು. ಯಾವುದೇ ಕಲಾಪ್ರಕಾರವಾದರೂ, ಇಲ್ಲಿಯ ಪ್ರವಾಸೋದ್ಯಮ ವಿಭಾಗದ ಪರವಾನಗಿ ಪಡೆಯಬೇಕು. ಇಂಥ ಕಾರ್ಯಕ್ರಮಗಳು ಆಯೋಜಕರ ಮುಖಾಂತರವೇ ಆಗಬೇಕು. ಆಯೋಜಕರು ಪ್ರವಾಸೋದ್ಯಮ ಮಂತ್ರಾಲಯದಿಂದ ಪರವಾನಗಿ ಪಡೆದವರಾಗಿರಬೇಕು. ಅವರು ಕಾರ್ಯಕ್ರಮದ ಮಾಹಿತಿ, ಕಲಾವಿದರ ವಿವರ ಎಲ್ಲವನ್ನೂ ಮೊದಲೇ ಸಲ್ಲಿಸಿ ಪರವಾನಗಿ ಪಡೆಯಬೇಕು. ಪ್ರದರ್ಶನಕ್ಕೆ ಬರುವ ಕಲಾವಿದರು ಕಲಾವಿದರ ವಿಸಾದಲ್ಲಿಯೇ ಬರಬೇಕು. ಸುಮ್ಮನೇ ಪ್ರವಾಸಿಗರೆಂದೋ, ಯಾರದ್ದೋ ಭೇಟಿಗೆಂದೋ ವಿಸಾ ಪಡೆದು ಬರುವಂತಿಲ್ಲ.

ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ, ಸಾಮಾನ್ಯ ವಿಸಾ ವೆಚ್ಚ ಎರಡು ಸಾವಿರ ರುಪಾಯಿಯಾದರೆ, ಒಬ್ಬ ಕಲಾವಿದನ ವಿಸಾ ವೆಚ್ಚ ಹೆಚ್ಚು- ಕಮ್ಮಿ ಹದಿನೈದು ಸಾವಿರ ರೂಪಾಯಿ. ಮಧ್ಯವರ್ತಿಗಳ ಶುಲ್ಕ ಬೇರೆ. ಇಷ್ಟೆಲ್ಲ ಆದ ಮೇಲೂ ಪ್ರವಾಸೋದ್ಯಮ ಸಚಿವಾಲಯದಿಂದ ಕಾರ್ಯಕ್ರಮದ ವೇಳೆ
ಹಠಾತ್ ತಪಾಸಣೆಗೆ ಬರುತ್ತಾರೆ. ನಿಯಮ ಉಲ್ಲಂಘಿಸಿದರೆ ಮೂವತ್ತರಿಂದ ಅರವತ್ತು ಲಕ್ಷ ರುಪಾಯಿಗಳವರೆಗೆ ದಂಡ ತೆರಬೇಕಾಗುತ್ತದೆ.

ಎರಡನೆಯದಾಗಿ, ಈ ನಾಟಕ ಪ್ರದರ್ಶನಕ್ಕೆ ತಗುಲುವ ವೆಚ್ಚ. ೨೫ ಜನರ ವಿಸಾ (ಕಲಾವಿದರ ವಿಸಾ), ಟಿಕೆಟ್, ಊಟ-ವಸತಿ, ಅವರಿಗೆ ನೀಡಬೇಕಾದ ಗೌರವಧನ, ಸ್ಮರಣಿಕೆ, ಸ್ಥಳದ ಬಾಡಿಗೆ, ಎಲ್ಲವೂ ದೊಡ್ಡ ಖರ್ಚು. ಅದರೊಂದಿಗೆ ಈ ನಾಟಕಕ್ಕೆ ಬೇಕಾದ ಧ್ವನಿ ಮತ್ತು ಬೆಳಕು. ಈ ನಾಟಕದಲ್ಲಿ ಗುಳಿಗ ನದ್ದು ಎಷ್ಟು ಪ್ರಮುಖ ಪಾತ್ರವೋ, ಧ್ವನಿ ಮತ್ತು ಬೆಳಕಿನದ್ದೂ ಅಷ್ಟೇ ಪ್ರಮುಖ ಪಾತ್ರ. ಸುಮಾರು ನೂರು ನಿಮಿಷದ ನಾಟಕದಲ್ಲಿ ಒಂದು
ನಿಮಿಷವೂ ಧ್ವನಿ ಮತ್ತು ಬೆಳಕಿಗೆ ಬಿಡುವಿಲ್ಲ.

ಅದರೊಂದಿಗೆ ಪ್ರತಿಯೊಂದು ಪಾತ್ರಕ್ಕೆ ಬೇಕಾದ ಉಡುಪು ಮತ್ತು ರಂಗಸ್ಥಳದ ಸೆಟ್ಟಿಂಗ್. ಸಣ್ಣ ಪ್ರಮಾಣದ ಒಪ್ಪಂದ ಮಾಡಿಕೊಂಡರೂ ನಾಟಕ
ರಯಿಸುವುದಿಲ್ಲ. ಒಂದು ಪ್ರದರ್ಶನಕ್ಕೆ ತಗುಲುವ ವೆಚ್ಚದ ಲೆಕ್ಕ ಹೇಳುವುದಾದರೆ ಸುಮಾರು ೩೦ ಲಕ್ಷ ರುಪಾಯಿ! ಸಾಮಾನ್ಯವಾಗಿ ಎಲ್ಲ ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳಲ್ಲೂ ರಂಗವಿನ್ಯಾಸ ಮತ್ತು ಉಡುಪಿಗೆ ಹೆಚ್ಚಿನ ಮಹತ್ವವಿರುತ್ತದೆ. ಈ ನಾಟಕವೂ ಅದಕ್ಕೆ ಹೊರತಲ್ಲ. ಅದರಲ್ಲೂ ದೇವರು, ಭೂತ, ದೈವದ ಕುರಿತಾದ ವಿಷಯವಾದರೆ ಅಲ್ಲಿ ಒಂದು ಹಂತದ ಪವಾಡಗಳನ್ನೂ ಸೇರಿಸಬೇಕಾಗುತ್ತದೆ. ಅವು ಅನಿವಾರ್ಯವಲ್ಲವಾದರೂ ಪ್ರೇಕ್ಷಕರನ್ನು ರಂಜಿಸುವುದಕ್ಕೆ, ಆಸನದಲ್ಲಿ ಹಿಡಿಟ್ಟುಕೊಳ್ಳುವುದಕ್ಕೆ ಅವಶ್ಯಕ. ಇಂಥ ನಾಟಕಕ್ಕೆ ಸೆಟ್ ನಿರ್ಮಿಸುವುದು ಎಂದರೆ ಹುಡುಗಾಟಿಕೆಯಲ್ಲ, ತಿಂಗಳುಗಳೇ ಬೇಕು.

ವಿದೇಶದಲ್ಲಿ ಇದಕ್ಕೆ ತಗುಲುವ ವೆಚ್ಚ ಇನ್ನೂ ಹೆಚ್ಚು. ನನಗೆ ಅದರ ಕುರಿತಾಗಿಯೂ ಕುತೂಹಲವಿತ್ತು. ಅದನ್ನು ಹರೀಶ್ ಅವರಲ್ಲಿ ಕೇಳಿದಾಗ, ಈ ನಾಟಕದ ಸೆಟ್ ದುಬೈನಿಂದ ಮಸ್ಕತ್‌ಗೆ ಹೋಗಿತ್ತು, ಅಲ್ಲಿಂದ ಬಹ್ರೈನ್‌ಗೆ ತಂದಿದ್ದಾಗಿ ಹೇಳಿದರು. ಕೊಲ್ಲಿ ರಾಷ್ಟ್ರಗಳ ಒಕ್ಕೂಟದಲ್ಲಿ ದಕ್ಷಿಣಕ್ಕಿರುವ ಒಮಾನ್ ನಿಂದ ಉತ್ತರ ಕ್ಕಿರುವ ಬಹ್ರೈನ್‌ಗೆ ತರಲು ವಾಹನದ ಬಾಡಿಗೆಯೇ ಒಂದು ಲಕ್ಷ ರೂಪಾಯಿ ಆಯಿತು ಎಂದರು. ಆದರೂ ಸೋವಿಯೇ ಆಯಿತು
ಅಂದುಕೊಂಡೆ. ಇನ್ನು ನಾಟಕದ ಕುರಿತಂತೆ ನಾನು ಹೇಳಿ ಕುತೂಹಲ ಕೆಡಿಸುವುದಕ್ಕಿಂತ ನೋಡಿದರೇ ಒಳ್ಳೆಯದು.

‘ಕಾಂತಾರ’ ಚಿತ್ರದಲ್ಲಿ ಗುರುವನ ಪಾತ್ರ ಮಾಡಿದ ಸ್ವರಾಜ್ ಶೆಟ್ಟಿಯ ಗುಳಿಗನ ಪಾತ್ರದಿಂದ ಹಿಡಿದು ಪ್ರತಿಯೊಬ್ಬರೂ ತಮ್ಮ ಪಾತ್ರಕ್ಕೆ ಜೀವ ತುಂಬುತ್ತಾರೆ.
ರಂಗ ಸಜ್ಜಿಕೆಯ ಕುರಿತು ಮತ್ತೆ ಮತ್ತೆ ಹೇಳುವುದು ಬೇಡ. ಕಥೆಯೂ ಎಲ್ಲಿಯೂ ಜಾಳು ಜಾಳಾಗದೇ, ಚುರುಕಾಗಿ ನಡೆದುಹೋಗುತ್ತದೆ. ಸಂಭಾಷಣೆ,
ಸಂಗೀತ ಎಲ್ಲವೂ ಅಚ್ಚುಕಟ್ಟು. ಒಂದಂತೂ ಹೇಳಬಲ್ಲೆ, ‘ಶಿವದೂತ ಗುಳಿಗ’ ಇತರೆ ನಾಟಕಗಳಂತಲ್ಲ. ಕಾಮಿಡಿ ಅಥವಾ ಡಾನ್ಸ್ ಇಲ್ಲದಿದ್ದರೆ ನಾಟಕಕ್ಕೆ ಜನ ಬರುವುದಿಲ್ಲ ಎಂದು ವಾದ ಮಾಡುವವರು ಈ ನಾಟಕ ನೋಡಬೇಕು. ವೈಯಕ್ತಿಕವಾಗಿ ನನಗೆ ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರ
ಪರಿಚಯವಿಲ್ಲ. ಅವರು ತುಳು ನಾಟಕ, ಚಲನಚಿತ್ರ ಗಳನ್ನು ನಿರ್ದೇಶಿಸಿದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿರಪರಿಚಿತರು ಎನ್ನುವುದು ನನ್ನ ಅರಿವಿಗೆ ಬಂದದ್ದೂ ಶಿವದೂತ ಗುಳಿಗ (ತುಳು) ನಾಟಕ ಜನಪ್ರಿಯವಾದ ನಂತರವೇ.

ಇಂಥ ಒಂದು ನಾಟಕವನ್ನು ಬಹ್ರೈನ್‌ನಂಥ ದೇಶದಲ್ಲಿ, ಸಾವಿರಕ್ಕೂ ಹೆಚ್ಚು ಜನರ ಮುಂದೆ ಯಶಸ್ವಿಯಾಗಿ ಪ್ರದರ್ಶಿಸಿದ್ದಕ್ಕೆ ಕಲಾಸಂಗಮ ತಂಡ, ವಿಜಯಕುಮಾರ್ ಮತ್ತು ಹರೀಶ್ ಪಾಲನ್ ನೇತೃತ್ವದ ಬಹ್ರೈನ್ ಬಿಲ್ಲವಾಸ್ ಆಡಳಿತ ಮಂಡಳಿ ಅಭಿನಂದನಾರ್ಹರು. ಶಿವದೂತ ಗುಳಿಗ ನಾಟಕ ಈ ಮೊದಲು ಯುಎಇ, ಒಮಾನ್ ದೇಶಗಳಲ್ಲಿ ಪ್ರದರ್ಶನಗೊಂಡಿದೆ. ಬಹ್ರೈನ್‌ನಲ್ಲಿ ಆದದ್ದು ೫೭೩ನೆಯ ಪ್ರಯೋಗ. ಇದು ಖಂಡಿತವಾಗಿಯೂ ಕೊನೆಯಂತೂ ಅಲ್ಲ. ‘ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು, ನಾಟಕ ಆಡಿ ನೋಡು’ ಒಂದು ಹಳೆಯ ಗಾದೆ ಮಾತು. ಇತ್ತೀಚಿನ ದಿನಗಳಲ್ಲಿ, ಮೂರನೆಯದಕ್ಕೆ ಹೋಲಿಸಿದರೆ, ಮೊದಲಿನ ಎರಡು ಸುಲಭ.

ಮನೆಯವರು ಒಪ್ಪಬೇಕೆಂದೇನೂ ಇಲ್ಲ, ಹುಡುಗ- ಹುಡುಗಿ ಒಪ್ಪಿದರೂ ಸಾಕು, ರಿಜಿಸ್ಟರ್ ಮದುವೆಯಾಗಬಹುದು. ಏನೂ ಇಲ್ಲವಾದರೂ, ಲಿವ್
-ಇನ್ ಅಂತೂ ಇದ್ದೇ ಇದೆ. ಇನ್ನು ಕ್ರಮಬದ್ಧವಾಗಿ ಮದುವೆಯೇ ಆಗಬೇಕೆಂದರೂ, ಮನೆಯ ಮುಂದೆ ಚಪ್ಪರ ಹಾಕಬೇಕೆಂದಿಲ್ಲ, ಅಡುಗೆಯ
ವರನ್ನು ಹುಡುಕಬೇಕೆಂದಿಲ್ಲ, ದೂರದಿಂದ ನೀರು ಹೊರಬೇಕು ಎಂದಿಲ್ಲ, ಎಲ್ಲದಕ್ಕೂ ದಿವ್ಯಮಂತ್ರ ಎಂಬಂತೆ ಕಲ್ಯಾಣಮಂಟಪ ಇದೆ. ಅವರವರ
ಶಕ್ತ್ಯಾನುಸಾರ ಮದುವೆ ನಡೆಯುತ್ತದೆ. ಇನ್ನು ಮನೆ ಕಟ್ಟುವುದೂ ಅಷ್ಟೇ, ಸ್ವತಃ ನಾವೇ ನಿಂತು ಮನೆ ಕಟ್ಟಬೇಕು ಎನ್ನುವುದಾದರೆ ಸ್ವಲ್ಪ ಕಷ್ಟ ಇದೆಯೇ ಶಿವಾಯ್ ದುಡ್ಡು ಖರ್ಚು ಮಾಡುವ ಸಾಮರ್ಥ್ಯವಿದ್ದರೆ ಕಟ್ಟಿಕೊಡುವ ಕಂಪನಿಗಳು ಯಥೇಚ್ಛವಾಗಿವೆ.

ರೆಡಿಮೇಡ್ ವಿಲ್ಲಾಗಳು, ಅಪಾರ್ಟ್‌ಮೆಂಟ್‌ಗಳು ಸಾಕೆನ್ನುವಷ್ಟಿವೆ. ಇತ್ತೀಚೆಗಂತೂ, ಮನೆ ಬೇಕು ಎಂದು ನಾವು ಕರೆಮಾಡುವುದಕ್ಕಿಂತಲೂ ಹೆಚ್ಚಾಗಿ ‘ಮನೆ ಬೇಕೆ?’ ಎಂದು ನಮಗೆ ಬರುವ ಕರೆಗಳನ್ನು ಸಹಿಸಿಕೊಳ್ಳುವುದೇ ದೊಡ್ದ ಸವಾಲಾಗಿದೆ!

ಆದರೆ ನಾಟಕ ಆಡುವುದು ಮಾತ್ರ ಇಂದಿಗೂ ಕಷ್ಟ, ಮೊದಲಿಗಿಂತಲೂ ಕಷ್ಟ. ಮೊದಲಿಗಿಂತ ಈಗ ತಂತ್ರಜ್ಞಾನ, ಧ್ವನಿ-ಬೆಳಕು, ಎಲ್ಲದರಲ್ಲಿಯೂ
ಪ್ರಗತಿಯಾಗಿದೆ. ಒಂದು ಹಂತದವರೆಗೆ ಕಲಾವಿದರೂ ಸಿಗಬಹುದು. ಆದರೆ ರಂಗಭೂಮಿಗೆ ಇವರ ಬದ್ಧತೆಯಲ್ಲಿ ಕೊರತೆಯಿದೆ. ಇಂದು ರಂಗ
ಭೂಮಿಯನ್ನೇ ವೃತ್ತಿಯನ್ನಾಗಿ ಆಯ್ದುಕೊಂಡು ಅಲ್ಲಿಯೇ ನಿವೃತ್ತಿಯಾಗುವವರು ಎಷ್ಟು ಜನರಿದ್ದಾರೆ? ಬಹುತೇಕ ಜನರಿಗೆ ಇಂದು ರಂಗಭೂಮಿ
ಎಂದರೆ ಕಿರುತೆರೆ ಅಥವಾ ಚಿತ್ರರಂಗಕ್ಕೆ ಹೋಗಲು ಇರುವ ಮೊದಲ ಮೆಟ್ಟಿಲು. ಇದು ತಪ್ಪು ಎಂದು ಹೇಳುತ್ತಿಲ್ಲ, ಹೆಚ್ಚು ಜನರನ್ನು ಆಕರ್ಷಿಸು ತ್ತಿರುವುದು ಅವುಗಳೇ. ಹಳ್ಳದ ಕಡೆಗೇ ನೀರು ಹರಿಯುತ್ತದೆ ತಾನೆ? ಆದರೆ ಕಲಾವಿದರು, ತಂತ್ರಜ್ಞರು ರಂಗಭೂಮಿಯ ಪರಿಧಿಯಿಂದ ಪರದೆಯ ಕಡೆಗೆ
ನಡೆದರೆ ರಂಗಭೂಮಿ ಬರಡಾಗುತ್ತದೆ.

ಇಂಥ ಪರಿಸ್ಥಿತಿಯನ್ನು ಇಟ್ಟುಕೊಂಡು ಒಂದು ನಾಟಕವನ್ನು ಯಶಸ್ವಿಯಾಗಿ ಆಡಿ ತೋರಿಸಲು ಧೈರ್ಯ ಬೇಕು. ಅದರಲ್ಲೂ ‘ಶಿವದೂತ ಗುಳಿಗ’
ದಂಥ ನಾಟಕಕ್ಕೆ ಕೈ ಹಾಕಲು ಗುಂಡಿಗೆ ಬೇಕು. ವಿದೇಶದಲ್ಲೂ ಇಂಥ ಪ್ರಯೋಗ ಏರ್ಪಡಿಸುವುದಕ್ಕೆ ಗುಂಡಿಗೆ ಗಟ್ಟಿ ಇರಬೇಕು.

Leave a Reply

Your email address will not be published. Required fields are marked *

error: Content is protected !!