Saturday, 27th July 2024

ಬೋಧನೆಯೆಂದರೆ ಉತ್ತಮ ಸಂವಹನವಲ್ಲವೆ ?

ದಾಸ್ ಕ್ಯಾಪಿಟಲ್

dascapital1205@gmail.com

ಸಂವಹನ ಎಂದರೇನು? ಅದರ ವಿಧಗಳು, ಅವುಗಳ ಬಳಕೆ ಇತ್ಯಾದಿ ವಿವರಗಳ ಬಗ್ಗೆ ಸಾಕಷ್ಟು ವಿಚಾರಗಳು ಚರ್ಚೆಯಲ್ಲಿವೆ. ಅವುಗಳ ಭಾಷಾವಿಜ್ಞಾನಿಗಳು, ಶಿಕ್ಷಣತಜ್ಞರು ತಮ್ಮದೇ ಆದ ಬಗೆಯಲ್ಲಿ ವಿವರಿಸಿದ ಕೃತಿಗಳು ಸಾಕಷ್ಟಿವೆ. ಅವುಗಳಲ್ಲಿ ಅನೇಕ ಬಗೆಯಲ್ಲಿ ವ್ಯಾಖ್ಯಾನ, ವಿಶ್ಲೇಷಣೆ, ವಿವರಣೆಯಿದೆ. ಎಲ್ಲವೂ ಪರಾ
ಮರ್ಶನಕ್ಕೆ ಅರ್ಹವಾದವೇ ಆದುದಾಗಿದೆ. ತತ್ಸಂಬಂಧಿತವಾಗಿ ಏನೇನು ಉಲ್ಲೇಖಗಳಿದ್ದರೂ ಶಿಕ್ಷಣಕ್ಕೆ ಸಂಬಂಧಿಸಿ, ಅದರಲ್ಲೂ ಬೋಧನೆಗೆ ಸಂಬಂಽಸಿದಂತೆ ಒಂದು ಅಂಶವನ್ನು ಸ್ಪಷ್ಟವಾಗಿಸಿಕೊಳ್ಳಬೇಕು.

ಅದೆಂದರೆ, ಯಾರಲ್ಲಿ ಉತ್ತಮ ಸಂವಹನ ಕೌಶಲವಿರುತ್ತದೋ ಅವನೇ ಉತ್ತಮ ಮಾರ್ಗದರ್ಶಕನೂ, ಬೋಧಕನೂ, ಸಂವಹನಕಾರನೂ ಆಗುತ್ತಾನೆ. ಅದರಲ್ಲೂ ಬೋಧನೆಯಲ್ಲಿ ಸಂವಹನ ಕೌಶಲವೇ ಪ್ರಧಾನ ವಾಗಿರುತ್ತದೆ ಮತ್ತು ಅದು ಸೃಜನಶೀಲವಾಗಿದ್ದರಂತೂ ಇನ್ನಷ್ಟು ಉತ್ತಮ ಬೋಧನೆಗೆ ಇಂಬು ನೀಡುತ್ತದೆ. ಹೊಸ ದೃಷ್ಟಿಕೋನದಲ್ಲಿ, ಹೊಸ ಅರಿವಿನಲ್ಲಿ ಆಲೋಚಿಸುವ ಬೌದ್ಧಿಕ ಮತ್ತು ವೈಚಾರಿಕ ಮನಸ್ಸುಗಳಿಗೆ ಮಾತ್ರ ಸೃಜನಶೀಲತೆ ಸಾಧ್ಯ. ಎಲ್ಲಿ ಸೃಜನಶೀಲತೆ ಸಾಧ್ಯವೋ ಅಲ್ಲಿ ಉತ್ತಮ ಸಂವಹನವೂ ಸಾಧ್ಯ.

ಯಾಕೆಂದರೆ, ಸಂವಹನ ನಿಂತಿರುವುದೇ ಅರಿವಿನ ಆಲೋಚನೆಯಲ್ಲಿ, ಗ್ರಹಿಕೆಯಲ್ಲಿ. ಈ ಆಲೋಚನೆಗಳು ಮತ್ತು ಗ್ರಹಿಕೆಗಳು ಮಾತು-ಬರಹ, ದೃಶ್ಯ-ಶ್ರವ್ಯ ರೂಪದಲ್ಲಿ ಹೊರಬರುವುದಾದರೂ ಭಾಷೆಯೇ ಬಹುಮುಖ್ಯ ವಾದುದಾಗಿರುತ್ತದೆ. ಭಾಷೆ ಶಿಕ್ಷಣದ ಒಂದು ಪ್ರಧಾನ ಭಾಗ. ಆದ್ದರಿಂದ, ಶಿಕ್ಷಣ ಮತ್ತು ಸಂವಹನ ಒಂದೇ ನಾಣ್ಯದ ಎರಡು ಮುಖಗಳು, ಎರಡು ಆಕೃತಿಗಳು, ಎರಡು ಪರಿಕಲ್ಪನೆಗಳು.

ಪರಸ್ಪರ ಪೂರಕ ಮತ್ತು ಪ್ರೇರಕವಾಗಿರುವ ಈ ಎರಡೂ ಅಂಶಗಳು ಔಪಚಾರಿಕ ಶಿಕ್ಷಣ, ಅನೌಪಚಾರಿಕವಾದ ಶಿಕ್ಷಣ, ದೂರಶಿಕ್ಷಣದ ಸಂದರ್ಭದಲ್ಲೂ ಸಂವಹನದ ಮೂಲಕವೇ ಪ್ರಸಾರವಾಗಬೇಕು. ಸಂವಹನಕ್ಕೆ ಭಾಷೆ ಬೇಕೇ ಬೇಕು. ಶಿಕ್ಷಣ ನೀತಿಯಲ್ಲಿ ಈಗ ತ್ರಿಭಾಷಾ ಸೂತ್ರ ಜಾರಿಯಲ್ಲಿದೆ. ಸರಿ ಹೊತ್ತಿನ ಸಂದರ್ಭದಲ್ಲಿ, ಮಾತೃಭಾಷೆಯಲ್ಲಿಯೇ ನಿರಂತರ ಸಂವಹನದ ಪ್ರಕ್ರಿಯೆ ನಡೆದರೂ ಸಮುದಾಯದೊಂದಿಗೆ ಸಂವಹನ ಸಂಪೂರ್ಣವಾಗಿ ಸಾಧ್ಯವಾಗುವುದಿಲ್ಲ. ಶಾಲೆಗಳಲ್ಲಿ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಹತ್ತೋ ಹದಿನೈದೋ ವರ್ಷ ಕಲಿತರೂ ಪರಿಣಾಮಕಾರಿಯಾದ ಅಭಿವ್ಯಕ್ತಿ ಸಾಧ್ಯವಾಗುತ್ತಿಲ್ಲ.

ದೋಷವಿಲ್ಲದೆ ಬರೆಯುವುದೂ ಕಷ್ಟ, ಓದುವುದೂ ಕಷ್ಟ, ಮಾತನಾಡುವುದೂ ಕಷ್ಟವಾಗುತ್ತಿರು ವುದು ಸಂವಹನದ ಕ್ಷೀಣತೆಯಾಗಿ ಕಾಣುತ್ತಿದೆ. ಈ ಬಗೆಯಲ್ಲಿ ತಲೆದೋರಿದ ಸಂವಹನ ದೌರ್ಬಲ್ಯಕ್ಕೆ ಕಾರಣಗಳಾದರೂ ಏನು? ಇದು ತಪ್ಪು ಶಿಕ್ಷಣ ನೀತಿ, ಪಠ್ಯಪುಸ್ತಕ ರಚನೆ ಮತ್ತದರ ಪರಿಷ್ಕರಣೆ ಮತ್ತು ಭಾಷಾ ತರಗತಿಗಳ ಅಸಮರ್ಪಕ ನಿರ್ವಹಣೆಯಿಂದ ಹುಟ್ಟಿಕೊಂಡದ್ದು. ಇದು ಪ್ರಸ್ತುತ ಸಂದರ್ಭದ ವಿಚಾರಕ್ಕೆ ಬೇರೆಯದೇ ಆದುದಾಗಿದೆ. ಇದನ್ನಿಲ್ಲಿ ಪ್ರಸ್ತಾಪಿಸು
ವುದನ್ನು ಬಿಟ್ಟು ಉತ್ತಮ ಸಂವಹನಶೀಲ ಬೋಧನೆಯ ಬಗ್ಗೆ ಚರ್ಚಿಸೋಣ. ಸಂವಹನಕ್ಕೆ ಭಾಷೆಯೇ ಜೀವಾಳ.

ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಎಲ್ಲರೂ ಇಂಗ್ಲಿಷಿನಲ್ಲೇ ಮಾತನಾಡ ತಕ್ಕದ್ದು. ಓದುವುದು, ಬರೆಯುವುದು, ಮಾತನಾಡುವುದು ಮಾತ್ರ ಇಂಗ್ಲಿಷಿನಲ್ಲಿ ಆಗದೆ, ನಗುವುದೂ ಇಂಗ್ಲಿಷಿನಲ್ಲೇ, ಹರಟೆ, ಹಾಡು, ಕತೆ, ಆಟ, ಊಟ- ಎಲ್ಲವೂ ಇಂಗ್ಲಿಷಿನಲ್ಲೇ ಆಗಬೇಕು ಎಂಬ ಲಿಖಿತ ಮತ್ತು ಅಲಿಖಿತ ಆದೇಶವಿರುತ್ತದೆ. ಕನ್ನಡವೋ ಕೊಂಕಣಿಯೋ ತುಳುವೋ ಇನ್ಯಾವುದೇ ಭಾಷೆ ಯನ್ನು ಬಳಸುವಂತಿಲ್ಲ. ಕಲಿಕಾ ಮಾಧ್ಯಮದ ಭಾಷೆಯಾಗಿ ಇಂಗ್ಲಿಷ್ (ಇಂಗ್ಲಿಷ್ ಮಾಧ್ಯಮ ಆಗಿದ್ದರೆ) ಬಳಕೆ ಯಾಗ ಬೇಕು. ಶಾಲೆಯ ಪರಿಸರದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಕಲಿಕಾ ಮಾಧ್ಯಮದ ಭಾಷೆಯಲ್ಲಿ ವ್ಯವಹಾರ ನಡೆಸಲಿ. ಇದು ಕೂಡ ಅತ್ಯಂತ ಕಠಿಣ ನಿಯಮವಾಗ ಬೇಕೆಂದೇನೂ ಇರಬಾರದು, ಐಚ್ಛಿಕವಾಗಿರಬೇಕು.

ತಮಗನು ಕೂಲಕರವಾದ ಭಾಷೆಯಲ್ಲಿ ವಿದ್ಯಾರ್ಥಿಗಳು ಪರಸ್ಪರ ವ್ಯವಹರಿಸಿಕೊಳ್ಳಲು ಅವಕಾಶವಿರಬೇಕು. ಅವರು ಯಾವುದೇ ಭಾಷೆಯಲ್ಲಿ ತಮ್ಮ ತಮ್ಮೊಳಗೆ ವ್ಯವಹರಿಸಿದರೂ ಅದನ್ನು ತೀರಾ ಎಂಬಷ್ಟು ನಿಯಂತ್ರಿಸಬಾರದು. ಅಷ್ಟಕ್ಕೂ ಸಂವಹನ ಅವರೊಳಗೆ ನಡೆಯಬೇಕಾದುದು ಅವರಿಗೆ ಗೊತ್ತಿರುವ ಭಾಷೆ ಯಲ್ಲಿಯೇ! ಕಲಿಕಾಂಶಗಳನ್ನು, ಜ್ಞಾನಾನುಭವಗಳನ್ನು ಪರಸ್ಪರ ರವಾನಿಸಿಕೊಳ್ಳಬೇಕಾದರೆ ಅಪೇಕ್ಷಿತ ಭಾಷೆಯಲ್ಲಿ ಸಂವಹನ ಆಗುವುದು ಸಹಜವೇ.
ಹೀಗೆ ಅಪೇಕ್ಷಿತವಾದ ಭಾಷೆಯಲ್ಲಾಗಲೀ, ಮಾಧ್ಯಮದ ಭಾಷೆಯಲ್ಲಾಗಲೀ ಸಂವಹನ ನಡೆಯುವಾಗ ಪರಸ್ಪರ ಪ್ರಭಾವಗಳು ಆಗುತ್ತಿರುತ್ತವೆ. ಇದು ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ. ವ್ಯಕ್ತಿತ್ವದ ಮೇಲೂ ಪ್ರಭಾವ ಬೀರುತ್ತದೆ. ಉತ್ತಮ ಸಂವಹನ ಸಾಮರ್ಥ್ಯವುಳ್ಳ ಒಬ್ಬ ಶಿಕ್ಷಕ ತನ್ನ ಔಪಚಾರಿಕವಾದ ಮತ್ತು ಔಪಚಾರಿಕವಲ್ಲದ ಬೋಧನೆ ಯಲ್ಲೂ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಿರುತ್ತಾನೆ.

ಬೋಧನಾ ವಿಧಾನಗಳಲ್ಲಿ ಸೃಜನಶೀಲತೆ ಇದ್ದರೆ ಅದಕ್ಕೆ ಶಿಕ್ಷಕನಲ್ಲಿರುವ ಉತ್ತಮ ಸಂವಹನವೇ ಕಾರಣವಾಗಿರುತ್ತದೆಂಬುದು ಗಮನಾರ್ಹ. ಕಾರಣ, ಅವನು ಸಂವಹನಕ್ಕೆ ಬಳಸುವ ಭಾಷೆಯೇ ಪ್ರಧಾನವಾಗಿರುತ್ತದೆ. ಅದು ಭಾಷೆಯ ಬಳಕೆ ಯಲ್ಲಿನ ಹದ. ಅಷ್ಟಕ್ಕೂ ಬೋಧನೆಯೆಂದರೆ ಉತ್ತಮ ಸಂವಹನವೇ ಅಲ್ಲವೆ? ಯಾರೊಂದಿಗೆ ಸಂವಹನ? ತರಗತಿ ಯಲ್ಲಾದರೆ, ವಿದ್ಯಾರ್ಥಿಗಳೊಂದಿಗೆ ಸಂವಹನ. ಸಮೂಹ ದಲ್ಲಾದರೆ ಸಮುದಾಯದ ಭಾಷೆಯಲ್ಲಿ ಸಂವಹನ. ತರಗತಿ ಬೋಧನೆಯಲ್ಲಿ ಉತ್ತಮ ಸಂವಹನ ಬಹು ಮುಖ್ಯವೆಂಬುದರಲ್ಲಿ ಯಾವುದೇ ಅಸ್ಪಷ್ಟತೆಯಿಲ್ಲ.

ಕಲಿಕಾಂಶ ಗಳನ್ನು ವಿಶ್ಲೇಷಿಸಿ ಅರ್ಥಮಾಡಿಸುವುದು ಪರೀಕ್ಷೆಯ ದೃಷ್ಟಿಯಿಂದ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ಕಲಿಕಾಂಶಗಳನ್ನು ವಿದ್ಯಾರ್ಥಿಗಳಿಗೆ ರಿಯಲೈಜ್ ಮಾಡಿಸುವುದು, ಅಥವಾ ಮಾಡಿಕೊಡುವುದು. ಈ ರಿಯಲೈಜ್ ಎಂಬುದು ತೀರಾ ವೈಯಕ್ತಿಕವಾದ ವಿಚಾರ. ವ್ಯಕ್ತಿಯೋರ್ವ ಸ್ವತಃ ಅರಿವಿನಲ್ಲಿ ಮಾಡಿಕೊಳ್ಳಬೇಕಾದ ಪ್ರಕ್ರಿಯೆ. ಅರಿವು ಮಾಡಿಕೊಡುವುದಲ್ಲ, ಅರಿವು ಮೂಡುವುದು. ಅರಿವೇ ಗುರು ಅಂದರಲ್ಲ ಬಸವಣ್ಣನವರು, ಅಂಥ ಅರಿವನ್ನು ಕಲಿಕಾಂಶಗಳಲ್ಲಿ ಮೂಡಿಸುವುದು ಶಿಕ್ಷಕನ ಕರ್ತವ್ಯ. ಇದಕ್ಕೆ ಬೇಕಾದುದು ಉತ್ತಮ ಸಂವಹನವೇ ಹೊರತು ಬೇರೇನಲ್ಲ.

ಇಂಥ ಅರಿವನ್ನು ವಿದ್ಯಾರ್ಥಿಗಳಲ್ಲಿ ಹುಟ್ಟಿಸಲು ಅಗತ್ಯವಾದ, ಅಂದರೆ ಬೋಧನೆಯಲ್ಲಿ ಉತ್ತಮ ಸಂವಹನಕ್ಕೆ ಬೇಕಾದ ಕೆಲವು ಅಂಶಗಳನ್ನು ಹೀಗೆ  ಪಟ್ಟಿಮಾಡ ಬಹುದು. ಅವೆಂದರೆ, ಆತ್ಮವಿಶ್ವಾಸ, ವಿಷಯಜ್ಞಾನ ಮತ್ತು ವಿಷಯಪೂರಕ ಸಾಕಷ್ಟು ಮಾಹಿತಿಗಳ ಸಂಗ್ರಹ, ಸುಸಂಘಟಿತ ಪೂರ್ವಸಿದ್ಧತೆ, ಭಾಷೆಯ ಮೇಲೆ ಹಿಡಿತ, ನಿರರ್ಗಳತೆ, ಶಬ್ದ ಭಂಡಾರ, ಆಂಗಿಕ ಅಭಿನಯ, ಅಪೂರ್ವಗ್ರಹ, ನಿಷೇಧಾತ್ಮಕ ಭಾವ ಇಲ್ಲದಿರುವುದು, ವಿಷಯದಲ್ಲಿ ತನ್ಮಯತೆ, ಸುಲಭಗ್ರಾಹ್ಯ
ಸಮರ್ಥ ನಿರೂಪಣೆ, ಹಿಮ್ಮಾಹಿತಿ ಬಯಸುವುದು, ಏಕಾತನತೆ ಇಲ್ಲದಿರುವುದು, ದನಿಯ ಏರಿಳಿತ, ಹದತಪ್ಪದ ಮಾತು, ಮಾತಿನ ಧಾಟಿ, ಮಾತಿನ ಔಚಿತ್ಯ. ಇವು ಉತ್ತಮ ಸಂವಹನಕ್ಕೆ ಪೂರಕವಾದ ಅಂಶಗಳು.

ನೆನಪಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ, ತರಗತಿಯಲ್ಲಿ ಶಿಕ್ಷಕನ ಯಾವ ಮಾತೂ ವಿದ್ಯಾರ್ಥಿಗಳಿಗೆ ಅತಿಭಾರ ಎನಿಸಬಾರದು. ಎನಿಸಿಬಿಟ್ಟರೆ, ಕಲಿಕೆ ಅಸಕ್ತಿಯನ್ನು ಕಳೆದುಕೊಂಡುಬಿಡುತ್ತದೆ. ತನಗಾಗಿ ಮಾಡಿಕೊಳ್ಳುವ ಎಲ್ಲ ಸತ್ ಚಿಂತನೆಗಳನ್ನು ತನ್ನ ವಿದ್ಯಾರ್ಥಿಗಳಿಗೂ ಮಾಡಿಕೊಳ್ಳಬಲ್ಲ ಶಿಕ್ಷಕನಿಗೆ ಯಾವ ಶೈಕ್ಷಣಿಕ ತರಬೇತಿಯೂ ಅಷ್ಟಾಗಿ ಅಗತ್ಯವಾಗುವುದಿಲ್ಲ, ಕಲಿಕಾಂಶಗಳ ಕುರಿತಾದ ಹೆಚ್ಚಿನ ತರಬೇತಿಗಳನ್ನು ಹೊರತು ಪಡಿಸಿ! ಎಷ್ಟೋ ಸಂದರ್ಭದಲ್ಲಿ ಶೈಕ್ಷಣಿಕ ತರಬೇತಿಗಳು ನಿಷಲವೆನಿಸುವುದು ಈ ಕಾರಣದಿಂದಾಗಿಯೇ! ತನಗಾಗಿಯೇ ಬೇಕಾಗುವ ತರಬೇತಿಗಳನ್ನು ಶಿಕ್ಷಕ ಬಯಸಿದರೆ ಅಂಥ ತರಬೇತಿಗಳು ತರಗತಿಯನ್ನು ತಲುಪುವುದಕ್ಕೆ ಸಾಧ್ಯವಿದೆ.

ಬೋಧನೆಯಲ್ಲಿ ಉತ್ತಮ ಸಂವಹನವನ್ನು ವಿದ್ಯಾರ್ಥಿಗಳೊಂದಿಗೆ ಸಾಧಿಸಿಕೊಳ್ಳಬೇಕಾದುದು ಶಿಕ್ಷಕನಿಗೆ ತೀರಾ ಅಗತ್ಯವಾಗಿರುತ್ತದೆ. ಆಗ ಅದು ಸಾಧ್ಯ ವಾಗುತ್ತದೆ. ಕಾರಣ, ಬೋಧನೆಯ ಒಟ್ಟೂ ಸಾಫಲ್ಯವಿರುವುದು ಅದರಲ್ಲಿಯೇ! ಸಂವಹನ ಕೌಶಲಗಳು ವೃದ್ಧಿಸುವುದು ಮನಸ್ಸು ಸಂಪೂರ್ಣವಾಗಿ ಬೋಧನೆಯಲ್ಲಿ ತೊಡಗಿಕೊಂಡಾಗ ಮಾತ್ರ! ಬೋಧನೆಯಲ್ಲಿ ಆತ್ಮವಿಶ್ವಾಸವಿದ್ದರೆ ಕಲಿಕೆಯಲ್ಲೂ ಆತ್ಮವಿಶ್ವಾಸ ಹೆಚ್ಚುತ್ತದೆ. ಕಲಿಕೆಯಲ್ಲಿ ವಿದ್ಯಾರ್ಥಿಗಳನ್ನು ಒಳಗೊಳ್ಳುವಂತೆ ಶಿಕ್ಷಕ ತರಗತಿಯಲ್ಲಿ ಸಂವಹನ ನಡೆಸಿದರೆ ಕಲಿಕೆಯೂ ಪರಿಣಾಮಕಾರಿಯಾಗುತ್ತದೆ. ವಿದ್ಯಾರ್ಥಿಗಳೊಂದಿಗಿನ ಸಂವಹನ, ವಿದ್ಯಾರ್ಥಿಗಳಲ್ಲಿನ ಪರಸ್ಪರ ಸಂವಹನಕ್ಕೆ ಎಡೆಯಾಗುವಂತೆ ತರಗತಿಯ ನಿರ್ವಹಣೆ ಯನ್ನು ಶಿಕ್ಷಕ ಕಾಪಾಡಿಕೊಳ್ಳಬೇಕು.

ಕಲಿಕೆಯಲ್ಲಿ ಸಂವಹನವು ಸಾಧ್ಯವಾಗುವಂಥ ಚಟುವಟಿಕೆಗಳನ್ನು ಸಾಧ್ಯವಾದಷ್ಟೂ ಬಳಸಿಕೊಂಡರೆ ಪ್ರತಿ ವಿದ್ಯಾರ್ಥಿಯು ಮಾತನಾಡುವ, ಬರೆಯುವ, ಓದುವ, ಕೇಳುವ ಕೌಶಲವನ್ನು ಕಲಿತುಕೊಳ್ಳಲು ಸಾಧ್ಯವಾಗುತ್ತದೆ. ಇದು ಪ್ರಾಥಮಿಕ ಹಂತಕ್ಕೆ ಮಾತ್ರ ಸೀಮಿತ ವಾದುದಲ್ಲ. ಎಲ್ಲ ಬಗೆಯ ಕಲಿಕೆಯಲ್ಲೂ ಇದು ಮಹತ್ವ
ವಾದುದು. ಉತ್ತಮ ಸಂವಹನದ ಬೋಧನೆಯಲ್ಲಿ ಮಾತ್ರ ಇಂಥ ಕಲಿಕೆ ಸಾಧ್ಯವಿದೆ.

Leave a Reply

Your email address will not be published. Required fields are marked *

error: Content is protected !!