Friday, 12th April 2024

ಈ ಮಂದಿರಕ್ಕೆ ಸತ್ಯವೇ ಅಡಿಪಾಯ

ವಿದೇಶವಾಸಿ

dhyapaa@gmail.com

ಇಂದು ಅಬುಧಾಬಿಯಲ್ಲಿ ೧೦೮ ಅಡಿ ಎತ್ತರದ ಹಿಂದೂ ಮಂದಿರವೊಂದು ಎದ್ದು ನಿಂತಿದೆ. ಅದಕ್ಕೆ ತಗುಲಿದ ವೆಚ್ಚ ೭೦೦ ಕೋಟಿ ರುಪಾಯಿ. ದೇಗುಲದ ಒಳಗಿನ ಮಂಟಪದಲ್ಲಿರುವ ಬಂಗಾರ, ಮೂರ್ತಿಗಳಿಗೆ ತೊಡಿಸಿದ ಶಿರೋಧಾರ, ಚಿನ್ನ, ವಜ್ರ, ಮುತ್ತು, ಹವಳಗಳ ಬೆಲೆ ಇದರಲ್ಲಿ ಸೇರಿಲ್ಲ.

ಸುಮಾರು ೩೦ ವರ್ಷಗಳ ಹಿಂದೆ ಮೊದಲ ಬಾರಿ ಕೊಲ್ಲಿ ರಾಷ್ಟ್ರಗಳ ಒಕ್ಕೂಟದಲ್ಲಿ ಒಂದಾದ ಸೌದಿ ಅರೇಬಿಯಾಕ್ಕೆ ಉದ್ಯೋಗಕ್ಕಾಗಿ ಬಂದಾಗ, ನನ್ನ
ಜೀವಿತಾವಧಿಯಲ್ಲಿ ಇಂಥ ದಿನವನ್ನೂ ನೋಡುತ್ತೇನೆ ಎಂದು ಖಂಡಿತ ಎಣಿಸಿರಲಿಲ್ಲ. ಬದಲಾವಣೆ ಜಗದ ನಿಯಮ ಹೌದು, ಆದರೆ ಇಷ್ಟು ತ್ವರಿತ ಗತಿಯಲ್ಲಿ ಬದಲಾಗುತ್ತದೆ ಅಂದುಕೊಂಡಿರಲಿಲ್ಲ. ಸೌದಿ ಅರೇಬಿಯಾದಲ್ಲಾಗಲಿ ಅಥವಾ ಉಳಿದ ೫ ಕೊಲ್ಲಿ ರಾಷ್ಟ್ರಗಳಲ್ಲಾಗಲಿ, ಇಂದಿಗೂ ಶೆರಿಯಾ
ಕಾನೂನು ಜಾರಿಯಲ್ಲಿದೆ. ಆಯಾ ನೆಲಕ್ಕೆ ಸಂಬಂಧಿಸಿದಂತೆ ತೀವ್ರತೆಯಲ್ಲಿ ಸ್ವಲ್ಪ ಹೆಚ್ಚು-ಕಮ್ಮಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ದೇಶಗಳಲ್ಲಿ
ಸಾಕಷ್ಟು ಬದಲಾವಣೆಯಾಗುತ್ತಿದೆ.

ಸೌದಿ ಅರೇಬಿಯಾದಲ್ಲಿ ಕಳೆದ ಕೆಲವು ವರ್ಷ ಗಳಲ್ಲಿ ಆದ ಬದಲಾವಣೆಯನ್ನೇ ನೋಡಿ. ಮಹಿಳೆಯರಿಗೆ ಬುರ್ಖಾ ಕಡ್ಡಾಯವಲ್ಲ ಎಂಬುದಾಗಲಿ,
ಮಹಿಳೆಯರೂ ಡ್ರೈವಿಂಗ್ ಮಾಡಬಹುದು ಎನ್ನುವುದಾಗಲಿ, ಯೋಗವನ್ನು ಕ್ರೀಡೆ ಎಂದು ಪರಿಗಣಿಸಿ ಬೋಧಿಸುವುದಾಗಲಿ, ಮಹಿಳೆಯರು ಎಲ್ಲ
ಪ್ರಮುಖ ಹುದ್ದೆಯಲ್ಲೂ ಕೆಲಸ ಮಾಡಬಹುದುಎಂದಾಗಲಿ, ನಿಯಮಗಳ ಬದಲಾವಣೆಯಿಂದ ಸೌದಿ ಅರೇಬಿಯಾ ವಿಶ್ವದ ಗಮನ ಸೆಳೆಯಿತು.
ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಏರ್ಪಡಿಸಿ ಕತಾರ್ ಗಮನ ಸೆಳೆಯಿತು.

ಕೆಲವು ವರ್ಷಗಳ ಹಿಂದೆಯೇ ಫಾರ್ಮುಲಾ ಒನ್ ಕಾರ್ ರೇಸ್ ಆಯೋಜಿಸಿ ಬಹ್ರೈನ್ ಹೆಸರು ಮಾಡಿತ್ತು. ಇನ್ನು ಯುಎಇ, ಅದರಲ್ಲೂ ದುಬೈ ಅಂತೂ ಕೇಳುವುದೇ ಬೇಡ. ಪ್ರತಿ ವರ್ಷವೂ ಒಂದಲ್ಲ ಒಂದು ಹೊಸತನ್ನು ನೀಡುವ ಯಾವುದಾದರೂ ಒಂದು ಪ್ರದೇಶವಿದ್ದರೆ ಅದು ದುಬೈ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಆಗುವ ಬದಲಾವಣೆಗಳೆಲ್ಲ ಸರಿ, ಇಂದಲ್ಲ ನಾಳೆ ಆಗಲೇ ಬೇಕಾದದ್ದು ಅಂದುಕೊಳ್ಳೋಣ. ಆದರೆ ಧಾರ್ಮಿಕ ಬದಲಾವಣೆಗಳು ನಿಧಾನವಷ್ಟೇ ಅಲ್ಲ, ಕೆಲವು ದೇಶಗಳಲ್ಲಿ ಕಷ್ಟ ಕೂಡ.

ಕೋವಿಡ್ ಆರಂಭವಾಗುವುದಕ್ಕೂ ಕೆಲವು ತಿಂಗಳು ಮೊದಲು ಕುವೈತ್‌ನಲ್ಲಾದ ಘಟನೆ ಎಲ್ಲರಿಗೂ ನೆನಪಿರಬಹುದು. ಒಂದು ಮನೆಯಲ್ಲಿ ಕೆಲವರು ಸತ್ಯನಾರಾಯಣ ಪೂಜೆ ಮಾಡಿದ್ದರಿಂದ ದೇಶ ಬಿಟ್ಟು ಹೋಗಬೇಕಾಯಿತು. ಕೆಲವು ವರ್ಷಗಳ ಹಿಂದಿನವರೆಗೂ ಕೊರಳಿನಲ್ಲಿ ದೇವರ ಚಿತ್ರವಿರುವ
ಬಿಲ್ಲೆ, ರುದ್ರಾಕ್ಷಿ ಅಥವಾ ಕ್ರಾಸ್ ಯಾವುದೇ ಇದ್ದರೂ, ಅದನ್ನು ತೆಗೆಸದೆ ಸೌದಿ ಅರೇಬಿಯಾದ ಒಳಕ್ಕೆ ಬಿಟ್ಟುಕೊಳ್ಳುತ್ತಿರಲ್ಲಿಲ್ಲ. ಇನ್ನು ಪೂಜೆ- ಪುನಸ್ಕಾರಗಳೆಲ್ಲ ದೂರದ ಮಾತಾಗಿತ್ತು. ಸೌದಿಯಲ್ಲಿ ಇಂದಿಗೂ ಚರ್ಚ್ ಆಗಲಿ, ದೇವಸ್ಥಾನವಾಗಲಿ ಇಲ್ಲ.

ಕುವೈತ್‌ನಲ್ಲಿ ಚರ್ಚ್ ಇದೆ, ದೇವಸ್ಥಾನವಿಲ್ಲ. ಕತಾರ್, ಬಹ್ರೈನ್, ಯುಎಇ ಮತ್ತು ಒಮಾನ್‌ನಲ್ಲಿ ಚರ್ಚ್‌ಗಳಿವೆ, ಸಣ್ಣ ಪ್ರಮಾಣದ ಪೂಜಾಸ್ಥಳವೂ
ಇದೆ. ಇಲ್ಲಿ ಸಣ್ಣ ಪ್ರಮಾಣದ ಎಂದು ಹೇಳಲು ಕಾರಣವಿದೆ. ಇಲ್ಲಿರುವ ದೇವಾಲಯಗಳು ಒಂದು ಸಾಮಾನ್ಯ ಕಟ್ಟಡದ ಒಳಗೆ ಮೂರ್ತಿಯನ್ನು ಇಟ್ಟು
ಪೂಜೆ-ಪುನಸ್ಕಾರದ ರೀತಿ ರಿವಾಜು ನಡೆಸಿಕೊಂಡು ಬರುತ್ತಿರುವವು. ಅದಕ್ಕೆ ಅನುಮತಿಯೂ ಇದೆ. ಉದಾಹರಣೆಗೆ, ಬಹ್ರೈನ್‌ನಲ್ಲಿರುವ ಶ್ರೀಕೃಷ್ಣ
ಮಂದಿರಕ್ಕೆ ಸುಮಾರು ೨೦೦ ವರ್ಷಗಳ ಇತಿಹಾಸ ವಿದೆ. ೧,೦೦೦ ಜನ ಸೇರುವಷ್ಟು ದೊಡ್ಡ ಆವರಣವೇ ಇದೆ.

೩೫೦-೪೦೦ ಜನರಿಗಾಗುವಷ್ಟು ದೊಡ್ಡ ಸಭಾಂಗಣವೂ ಇದೆ. ಪ್ರತಿನಿತ್ಯ ಪೂಜೆ, ಪುನಸ್ಕಾರ ಗಳು ನಡೆಯುತ್ತವೆ. ಅದರ ಹೊರತಾಗಿ ಗುರು ವಾಯೂರಪ್ಪನ್, ಅಯ್ಯಪ್ಪ ಸ್ವಾಮಿ, ಇಸ್ಕಾನ್, ಮಾತಾಜಿ ದೇವಸ್ಥಾನಗಳೂ ಇವೆ. ಹಾಗೆಯೇ ಒಮಾನ್‌ನಲ್ಲಿರುವ ಶಿವನ ದೇವಾಲಯವಾಗಲಿ,
ಕತಾರ್‌ನಲ್ಲಿರುವ ದುರ್ಗಾದೇವಿ ಮಂದಿರ, ಮೋಕ್ಷ ಧಾಮವಾಗಲಿ, ಎಲ್ಲವೂ ಒಂದು ಹಂತದ ಧಾರ್ಮಿಕ ಚಟುವಟಿಕೆಗಳನ್ನು ನಡೆಸಿಕೊಂಡು
ಬಂದಿವೆ. ಯುಎಇಯ ದುಬೈನಲ್ಲೂ ೨ ಮಂದಿರ ಗಳಿವೆ. ಆದರೂ ಅಬುಧಾಬಿಯ ಹಿಂದೂ ದೇವಾಲಯ ಇಷ್ಟೇಕೆ ಸುದ್ದಿ ಮಾಡುತ್ತಿದೆ? ಬಹಳಷ್ಟು
ಜನರು ಇದಕ್ಕೆ ಮೋದಿಯವರು ಶಿಲಾನ್ಯಾಸ ಮಾಡಿದ್ದರು, ಮೋದಿಯವರು ಉದ್ಘಾಟಿಸಿದರು ಎಂಬ ಉತ್ತರ ಹೇಳಬಹುದು.

ಈ ಮಂದಿರಕ್ಕೆ ಹೆಚ್ಚಿನ ಪ್ರಚಾರ ದೊರಕಲು ಇದು ಕಾರಣವಾಯಿತು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಈಗಿರುವ ಸರಕಾರ ಅಥವಾ ಮೋದಿ ಈ ವಿಷಯಕ್ಕೆ ಸಂಬಂಧಿಸಿ ಹೆಚ್ಚಿನ ಮುತುವರ್ಜಿ ವಹಿಸಿದ್ದರು ಎನ್ನುವುದನ್ನೂ ನಂಬೋಣ. ಆದರೆ, ಅಬುಧಾಬಿಯಲ್ಲಿ ಇಂದು ಮಂದಿರ ನಿರ್ಮಾಣಗೊಂಡಿರುವುದಕ್ಕೆ ಒಂದು ಸಣ್ಣ ಕತೆಯಿದೆ, ಘಟನೆಯಿದೆ, ಕಾರಣವಿದೆ. ಅದನ್ನು ಹೇಳುವುದಕ್ಕೂ ಮೊದಲು, ಎರಡು ವಿಷಯವನ್ನು
ತಿಳಿದುಕೊಳ್ಳಬೇಕು.

ಮೊದಲನೆಯ ವಿಷಯ, ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ, ಇದನ್ನು ಚಿಕ್ಕದಾಗಿ ಬಿಎಪಿಎಸ್ ಎಂದೂ, ಬಾಪ್ಸ್
ಎಂದೂ ಹೇಳುವುದಿದೆ. ೧೮ನೇ ಶತಮಾನದ ಕೊನೆ ಯಲ್ಲಿ ಹಿಂದೂ ಧರ್ಮ ಮತ್ತು ವೇದಗಳನ್ನು ಆಧಾರವಾಗಿಟ್ಟುಕೊಂಡು, ಆಧ್ಯಾತ್ಮಿಕ, ನೈತಿಕ ಮತ್ತು
ಸಾಮಾಜಿಕ ಸಮಸ್ಯೆಗಳನ್ನು ಎದುರಿಸುವ ನಿಟ್ಟಿನಲ್ಲಿ ಭಗವಾನ್ ಸ್ವಾಮಿನಾರಾಯಣ ಕನಸು ಕಂಡಿದ್ದರು.

ನಂತರದ ದಿನಗಳಲ್ಲಿ ಶಾಸ್ತ್ರೀಜಿ ಮಹಾರಾಜ್ ಇದನ್ನು ಸಂಘಟಿಸಿದರು. ಈ ಸಂಸ್ಥೆಯ ಪ್ರಧಾನ ಕಚೇರಿ ಇರುವುದು ಗುಜರಾತ್‌ನ ಅಹಮದಾಬಾದ್
ನಲ್ಲಿ. ಇಂದು ವಿಶ್ವದಾದ್ಯಂತ ಒಟ್ಟೂ ೩,೮೫೦ ಬಾಪ್ಸ್ ಕೇಂದ್ರಗಳಿವೆ. ಅಹಮದಾಬಾದ್, ದೆಹಲಿಯ ಅಕ್ಷರಧಾಮ, ಮುಂಬೈ, ಗಾಂಧಿನಗರ ಸೇರಿದಂತೆ
ಅಮೆರಿಕ, ಆಸ್ಟ್ರೇಲಿಯಾ, ಕೆನಕ, ಕೆನ್ಯಾ ಒಳಗೊಂಡು ಪ್ರಪಂಚದಾದ್ಯಂತ ೧,೧೫೦ ಮಂದಿರಗಳೂ ಇವೆ. ಎರಡನೆಯ ವಿಷಯ, ಈ ನೆಲದ ಕಾನೂನು.
ಕೊಲ್ಲಿಯ ಬಹುತೇಕ ರಾಷ್ಟ್ರಗಳಲ್ಲಿ ಒಂದು ಕಟ್ಟಡ ನಿರ್ಮಾಣಗೊಳ್ಳಬೇಕಾದರೆ ಎಲ್ಲ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯಬೇಕು.

ಕಟ್ಟದಲ್ಲಿ ವಾಸಿಸಲು ಅನುಮತಿ ನೀಡಿದ ನಂತರವೇ ಅಲ್ಲಿ ವಾಸಿಸಬೇಕು. ನಂತರವೂ ಆ ಕಟ್ಟಡದ ಒಳಗೆ- ಹೊರಗೆ ಬದಲಾವಣೆ ಬೇಕಾದರೆ ಅದಕ್ಕೂ ಪುರಸಭೆ ಮತ್ತು ಅಗ್ನಿಶಾಮಕ ವಿಭಾಗದವರ ಅನುಮತಿ ಬೇಕು. ಬದಲಾವಣೆಯ ನಂತರವೂ ಇಲಾಖೆಯ ಅಧಿಕಾರಿಗಳು ವೀಕ್ಷಿಸಿ, ಪರವಾನಗಿ ನೀಡುತ್ತಾರೆ. ಅಬುಧಾಬಿಯೂ ಇದಕ್ಕೆ ಹೊರತಾಗಿಲ್ಲ. ಅಂಥ ಅಬುಧಾಬಿಯಲ್ಲಿ ಒಂದು ದಶಕದ ಹಿಂದೆ ಒಂದು ಘಟನೆ ನಡೆಯಿತು. ನಮಗೆ ಇದನ್ನು ಹೇಳಿದವರು ಶ್ರೀ ಸರಳ ಹೃದಯ ಸ್ವಾಮಿಜಿ. ಮುಂಬೈನ ದಾದರ್ ನಲ್ಲಿರುವ ಸ್ವಾಮಿನಾರಾಯಣ ಕೇಂದ್ರದ ಮೇಲ್ವಿಚಾರಕರಾಗಿರುವ ಅವರು ಅಬುಧಾಬಿ ಮಂದಿರದ ಉದ್ಘಾಟನೆಗೆ ಬಂದ ೧,೨೦೦ ಸ್ವಯಂಸೇವಕರಲ್ಲಿ ಒಬ್ಬರಾಗಿದ್ದರು. ಮಂದಿರದ ಆವರಣದಲ್ಲಿಯೇ ಅವರ ಪರಿಚಯ ವಾಯಿತು.

ಮಂದಿರದ ಕುರಿತು ಹಲವಾರು ವಿಷಯ ತಿಳಿಸಿಕೊಟ್ಟರು. ಅದರಲ್ಲಿ ಬಹುತೇಕ ವಿಷಯ ಎಲ್ಲರಿಗೂ ತಿಳಿದದ್ದೇ. ಆ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿಯೂ ಲಭ್ಯ ವಿದೆ. ಅವರು ಹೇಳಿದ ಒಂದು ಘಟನೆ ಕುತೂಹಲಕಾರಿಯಾದದ್ದು. “ಆಗ ಅಬುಧಾಬಿಯಲ್ಲಿ ಬಿಎಪಿಎಸ್ ಕೇಂದ್ರ
ವಿರಲಿಲ್ಲ. ಅದಕ್ಕೆ ಕೆಲವರು ಒಂದು ಕಡೆ ಸತ್ಸಂಗ ಕ್ಕೆಂದು ಸೇರುತ್ತಿದ್ದರು. ದಿನದಿಂದ ದಿನಕ್ಕೆ ಅವರ ಸಂಖ್ಯೆ ವೃದ್ಧಿಸತೊಡಗಿತು. ಆಗ ಬಾಡಿಗೆಯ ಮನೆ
ಯೊಂದರಲ್ಲಿ ಸತ್ಸಂಗ ನಡೆಸುತ್ತಿದ್ದರು. ಸ್ಥಳದ ಅಭಾವ ಆರಂಭವಾದದ್ದರಿಂದ ಮನೆಯ ಒಳಗಿನ ಒಂದು ಗೋಡೆಯನ್ನು ಒಡೆದರೆ ಸ್ವಲ್ಪ ಹೆಚ್ಚಿನ
ಸ್ಥಳಾವಕಾಶವಾಗುತ್ತದೆ ಎಂದು ಎಣಿಸಿ ಗೋಡೆ ಒಡೆದೇಬಿಟ್ಟರು. ಯಾರು ಹೇಳಿಯೋ, ಹೇಳದೆಯೋ ಗೊತ್ತಿಲ್ಲ, ಪುರಸಭೆಯ ಅಧಿಕಾರಿಗಳು
ತಪಾಸಣೆಗೆ ಬಂದರು.

ಅನುಮತಿ ಇಲ್ಲದೆ ಗೋಡೆ ಒಡೆದದ್ದು ಅಪರಾಧ ಎಂದು ಕೇಸು ದಾಖಲಾಯಿತು. ಕೋರ್ಟ್ ಮೆಟ್ಟಿಲು ಹತ್ತುವುದು ಅನಿವಾರ್ಯವಾಯಿತು. ಈ ವಿಷಯ ಆಗ ದೆಹಲಿಯಲ್ಲಿದ್ದ ಪ್ರಮುಖ ಸ್ವಾಮಿ ಮಹಾ ರಾಜರನ್ನೂ ತಲುಪಿತು. ಅವರು ಅಬುಧಾಬಿಯ ಸತ್ಸಂಗಿಗಳನ್ನು ಕರೆಸಿ ವಿಚಾರಿಸಿದರು. ಅಬು
ಧಾಬಿಯ ಜನರಲ್ಲಿ ಕೋರ್ಟ್‌ನಲ್ಲಿ ಈ ವಿಷಯ ವನ್ನು ಎದುರಿಸುವುದು ಹೇಗೆ ಎಂಬ ಆತಂಕವಿತ್ತು. ದೆಹಲಿಯ ಸ್ವಾಮಿಯವರು, ಯಾವ ಕಾರಣಕ್ಕೂ
ಸುಳ್ಳು ಹೇಳಬೇಡಿ, ಸತ್ಯವನ್ನು ನುಡಿಯಿರಿ ಎಂದು ಆದೇಶಿಸಿದರು. ಸತ್ಯ ಹೇಳಿದ್ದರಿಂದ ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಅವರನ್ನು
ಖುಲಾಸೆಗೊಳಿಸಲಾಯಿತು.

ಈ ನಡುವೆ ಬಾಪ್ಸ್ ಸಂಸ್ಥೆಯವರು ತಮಗೆ ಪ್ರಾರ್ಥನೆಗೆ ಸ್ಥಳ ಒದಗಿಸಿಕೊಡುವಂತೆ ಅಬುಧಾಬಿ ಸರಕಾರ ಮತ್ತು ರಾಜನ ಮುಂದೆ ಬೇಡಿಕೆ ಇಟ್ಟರು.
ಸರಕಾರ ಅದನ್ನು ಒಪ್ಪಿತ್ತು! ಇದು ನಿಜಕ್ಕೂ ನಂಬಲು ಅಸಾಧ್ಯವಾಗಿತ್ತು. ಏಕೆಂದರೆ ಇದಕ್ಕೂ ಮೊದಲು ಅಲ್ಲಿ ಯಾವ ಹಿಂದೂ ದೇವಾಲಯವಾಗಲಿ,
ಪ್ರಾರ್ಥನೆಯ ಸ್ಥಳವಾಗಲಿ ಇರಲಿಲ್ಲ. ಒಮ್ಮೆ ಪ್ರಮುಖ ಸ್ವಾಮೀಜಿಯವರು ಅಬುಧಾಬಿಯ ರಾಜನನ್ನು ಭೇಟಿಯಾಗಿ ‘ಈ ಮೊದಲು ಯಾಕೆ
ಮಂದಿರ ನಿರ್ಮಾಣಕ್ಕೆ ಅವಕಾಶ ಕೊಟ್ಟಿರಲಿಲ್ಲ?’ ಎಂದು ಕೇಳಿದಾಗ ಅವರು ಉತ್ತರಿಸಿದ್ದರಂತೆ, ‘ಈ ಮೊದಲು ಯಾರೂ ಬಂದು ಕೇಳಿರಲಿಲ್ಲ!’
ಎಂದು”.

ಈ ಹಂತದಲ್ಲಿ ಬಹುಶಃ ಭಾರತ ಸರಕಾರದ ಅಥವಾ ಮೋದಿಯವರ ಪ್ರಭಾವ ಕೆಲಸ ಮಾಡಿರ ಬಹುದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.
“ಈ ದೇವಾಲಯ ನಿಂತಿದ್ದು ಸತ್ಯ ಮತ್ತು ಸೌಹಾರ್ದದ ಅಡಿಪಾಯದ ಮೇಲೆ. ನಾವು ಅಬು ಧಾಬಿಯ ರಾಜ ಮತ್ತು ಇಲ್ಲಿಯ ಸರಕಾರಕ್ಕೆ ಋಣಿ
ಗಳು”. ಇಷ್ಟು ಸರಳ ಹೃದಯ ಸ್ವಾಮಿಜಿ ಹೇಳಿದ್ದು. ಅದರ -ಲಶ್ರುತಿಯಾಗಿ ಇಂದು ಅಬುಧಾಬಿಯಲ್ಲಿ ೧೦೮ ಅಡಿ ಎತ್ತರದ ಸಾಂಪ್ರದಾಯಕ
ಹಿಂದೂ ಮಂದಿರವೊಂದು ಎದ್ದು ನಿಂತಿದೆ. ಅದಕ್ಕೆ ತಗುಲಿದ ವೆಚ್ಚ ೭೦೦ ಕೋಟಿ ರುಪಾಯಿಗಳು. ಇನ್ನು ದೇವಸ್ಥಾನದ ಒಳಗಿನ ಮಂಟಪದಲ್ಲಿರುವ
ಬಂಗಾರ, ಮೂರ್ತಿಗಳಿಗೆ ತೊಡಿಸಿದ ಶಿರೋಧಾರ, ಕೊರಳ ಹಾರ, ಇತರ ಆಭರಣಗಳು ಬೇರೆ.

ಅದರಲ್ಲಿರುವ ಚಿನ್ನ, ವಜ್ರ ಮತ್ತು ಹರಳುಗಳು, ಮುತ್ತು, ಹವಳಗಳ ಬೆಲೆ ಇದರಲ್ಲಿ ಸೇರಿಲ್ಲ. ಒಂದಂತೂ ಸತ್ಯ, ದೇವಾಲಯದ ಒಳಗೆ ಬಳಸಿದ ಯಾವ ಆಭರಣವೂ ನಕಲಿಯಲ್ಲ. ಎಲ್ಲವೂ ಅಪ್ಪಟ, ಅಸಲಿ ವಸ್ತುಗಳು. ಇದರಲ್ಲಿ ಭಾರತ ಸರಕಾರದ ದುಡ್ಡಿಲ್ಲ. ಯುಎಇ ಸರಕಾರದ ದೇಣಿಗೆಯೂ ಇಲ್ಲ. ಇದೆಲ್ಲ ದೈವಭಕ್ತರ, ಅದರಲ್ಲೂ ವಿಶೇಷವಾಗಿ ಸ್ವಾಮಿನಾರಾಯಣ ಅನುಯಾಯಿಗಳು ನೀಡಿದ ದಾನ. ಸ್ವಾಮಿ ನಾರಾಯಣ ಭಕ್ತರಲ್ಲಿ ಬಹುತೇಕ ಜನ ಗುಜರಾತ್ ಮತ್ತು ರಾಜಸ್ಥಾನದ ವ್ಯಾಪಾರಸ್ಥರು, ಮಾರವಾಡಿಗಳು.

ಲೋಕಾರೂಢಿಯಲ್ಲಿ ಕಾಸು ಬಿಚ್ಚದವರನ್ನು ‘ಕಂಜೂಸಿ ಮಾರವಾಡಿ’ ಎಂದು ಹೇಳುವುದಿದೆ. ಆ ಪದ ಹೇಗೆ ಬಳಕೆಗೆ ಬಂತೋ ಗೊತ್ತಿಲ್ಲ. ನಾನು
ನೋಡಿದಂತೆ ಅವರು ದೈವಭಕ್ತರು. ಒಂದು ವೇಳೆ ತಮ್ಮ ಊಟದಲ್ಲಿ ಕಮ್ಮಿ ಮಾಡಿಕೊಂಡಾರು ವಿನಾ, ದೇವರ ವಿಷಯದಲ್ಲಿ ಅವರು ಉದಾರ ಹೃದಯಿ
ಗಳು. ವ್ಯಾಪಾರ-ವ್ಯವಹಾರದಲ್ಲೂ ಅವರು ಲೆಕ್ಕಾಚಾರಸ್ಥರೇ ವಿನಾ ಕಂಜೂಸಿಗಳಲ್ಲ. ಲೆಕ್ಕಾಚಾರ ಮಾಡುವುದು ತಪ್ಪಲ್ಲ. ಅವರೆಲ್ಲ ಕಂಜೂಸಿಗಳೇ ಆಗಿದ್ದರೆ ಇಂದು ವಿಶ್ವದಾದ್ಯಂತ ಇಷ್ಟೊಂದು ದೇವಾಲಯಗಳು ಎದ್ದು ನಿಲ್ಲುತ್ತಿರಲಿಲ್ಲ. ಬಾಪ್ಸ್ ದೇವಾಲಯದ ಇನ್ನೊಂದು ವಿಶೇಷತೆ ಏನು
ಗೊತ್ತೇ? ಇದು ಹಿಂದೂ ಮಂದಿರ. ಇದಕ್ಕೆ ಭೂಮಿ ದಾನ ಮಾಡಿದವರು ಮುಸ್ಲಿಂ ರಾಜ. ಈ ಮಂದಿರದ ಪ್ರಮುಖ ವಾಸ್ತುಶಿಲ್ಪಿ ಕ್ಯಾಥೋಲಿಕ್ ಕ್ರಿಶ್ಚಿಯನ್.

ಪ್ರಾಜೆಕ್ಟ್ ಮ್ಯಾನೇಜರ್ ಸಿಖ್. ಅಡಿಪಾಯ ವಿನ್ಯಾಸಕ ಬೌದ್ಧ ಧರ್ಮದವರು. ನಿರ್ಮಾಣದ ಹೊಣೆ ಹೊತ್ತ ಕಂಪನಿ ಪಾರ್ಸಿಗಳ ಒಡೆತನದ್ದು.
ಅದರ ನಿರ್ದೇಶಕರು ಜೈನ ಸಮುದಾಯದವರು. ೯ ವರ್ಷದ ಮೊದಲು, ಕೊಲ್ಲಿ ರಾಷ್ಟ್ರದಲ್ಲಿ ಒಂದು ಭವ್ಯಮಂದಿರ ನಿರ್ಮಾಣವಾಗುತ್ತದೆ, ಮೂರ್ತಿ
ಪ್ರತಿಷ್ಠಾಪನೆಯಾಗುತ್ತದೆ, ದೇವರ ಹುಂಡಿಗೆ ದಿನಾರನ್ನೋ, ದಿಹ್ರಾಮನ್ನೋ ಕಾಣಿಕೆಯಾಗಿ ಹಾಕುತ್ತೇವೆ ಎಂದು ಯಾವ ಹಿಂದೂ ಕೂಡ ಎಣಿಸಿ
ರಲಿಲ್ಲ. ಅಂದಹಾಗೆ, ದೇವರ ಕಾಣಿಕೆ ಡಬ್ಬಿಗೆ ದಿನಾರ್ ಹಾಕುವುದು ಒಂಥರಾ ಈಜ್ಛ್ಛಿಛ್ಟಿಛ್ಞಿಠಿ ಊಛಿಛ್ಝಿಜ್ಞಿಜ!

Leave a Reply

Your email address will not be published. Required fields are marked *

error: Content is protected !!