Saturday, 27th July 2024

ಪಠ್ಯ ಯಾವುದಾದರೇನು ಬೋಧನೆಗೆ ?

ದಾಸ್ ಕ್ಯಾಪಿಟಲ್

dascapital1205@gmail.com

ಬೋಧನೆಗೆ ಪಠ್ಯಗಳು ಬೇಕೇ ಬೇಕು ಎಂಬುದು ಸತ್ಯವಾದರೂ, ಪಠ್ಯವೇ ಆತ್ಯಂತಿಕ ಎಂದೇನೂ ಭಾವಿಸಲಾಗದು. ಪಕ್ಷಗಳು ಬದಲಾದಂತೆ ಪಠ್ಯಗಳು ಬದಲಾ ಗುವ ಚಾಳಿ ಬೆಳೆದದ್ದು ತೀರಾ ಇತ್ತೀಚಿಗಿನ ದುರಂತವೇ ಸರಿ!

ಅದನ್ನೇ ದೊಡ್ಡ ಸಾಧನೆಯೆಂದು ಸರಕಾರಗಳು ಭಾವಿಸುವುದು ಮೂರ್ಖತನದ ಪರಮಾವಧಿ. ಹಾಗಂತ, ಪಠ್ಯರಚನೆ, ಪರಿಷ್ಕರಣೆ, ಮರು ಪರಿಷ್ಕರಣೆ ಎಂಬುದೆಲ್ಲ ಕೇವಲ ಸೇಡಿನ ರಾಜಕೀಯ ವಾಗಿ ಬೆಳೆಯುವುದಕ್ಕೂ ಕಾರಣ ಇಲ್ಲದಿಲ್ಲ. ಕಾಂಗ್ರೆಸ್ ಅಽಕಾರಕ್ಕೆ ಬಂದಾಗ ಎಡಪಂಥೀಯ ನಿಲುವಿನ ಪಠ್ಯಗಳು, ಅವುಗಳ ರಚನಕಾರರು ಮುಖ್ಯವಾಹಿನಿಗೆ ಬರುತ್ತಾರೆ. ಪಠ್ಯರಚನಾ ಸಮಿತಿಯಿಂದ ಹಿಡಿದು ಸಾಹಿತ್ಯಕವಾದ ಎಲ್ಲ ಪ್ರಕಾರ ಗಳನ್ನು, ಲೇಖಕರನ್ನು ಆಯ್ದುಕೊಳ್ಳುವಾಗಲೂ ಪಂಥದ ವಾಸನೆಯಿದ್ದೇ ಇರುತ್ತದೆ. ಈ ಮಾತು ಬಿಜೆಪಿಗೂ ಅನ್ವಯ.

ಮಕ್ಕಳಿಗೆ ಏನು ಕೊಡಬೇಕು ಅಥವಾ ಆ ವಯಸ್ಸಿಗೆ ಏನು ಬೇಕು ಎಂಬುದನ್ನು ಪಕ್ಷದ ಸಿದ್ಧಾಂತ ವನ್ನು ಹೊರತು ಪಡಿಸಿ, ಅದರಾಚೆ ನಿಂತು ನೋಡುವ, ಕೇವಲ ಜೀವನ ಮೌಲ್ಯಗಳನ್ನಷ್ಟೇ ಅಳವಡಿಸುವ ಅನಿವಾರ್ಯತೆ ಹಿಂದಿನ ಪಠ್ಯಗಳಲ್ಲಿ ಇರುವಂತೆ ಈಗ ಇಲ್ಲ ಎಂಬ ಚರ್ಚೆ ಶೈಕ್ಷಣಿಕ
ವಲಯದಲ್ಲೂ, ಸಾರ್ವಜನಿಕ ವಲಯದಲ್ಲೂ ಇದೆ. ಹಾಗಂತ ಯಾವುದೇ ಪಠ್ಯವನ್ನು ಅಳವಡಿಸಿ ದರೂ ಅಥವಾ ಪಕ್ಷನಿಷ್ಠೆಯಿಂದ ಕೆಲವನ್ನು ತೆಗೆದುಹಾಕಿದರೂ ಬೋಧಿಸುವಾಗಿನ ಬೋಧಕನ ಬುದ್ಧಿಸಾಮರ್ಥ್ಯ, ಭಾವನಾತ್ಮಕ, ವೈಚಾರಿಕ ಮತ್ತು ಜ್ಞಾನಾತ್ಮಕ ಶಕ್ತಿಯ ಪ್ರಭಾವ ಮಕ್ಕಳ ಮೇಲಾಗುವುದನ್ನು ಯಾರಿಂದಲೂ ತಡೆಯಲಾಗುವುದಿಲ್ಲ.

ಪುರಾಣ, ರಾಮಾಯಣ, ಮಹಾಭಾರತಗಳು ಪಠ್ಯ ಗಳಿಂದ ಹೊರತುಪಡಿಸಿಯೂ ಇಂದಿಗೂ ಜೀವಂತವಾಗಿ ಉಳಿದಿವೆ (ಕೆಲವೊಮ್ಮೆ ಅಳವಡಿಕೆ ಯಾಗಿದ್ದೂ ಇದೆ. ಕನ್ನಡ ಲೇಖಕರ, ಕವಿಗಳ ಬರಹಗಳು ಅಷ್ಟಿಷ್ಟು ಮಾತ್ರಕ್ಕೆ ಅಳವಡಿಕೆ ಆಗುತ್ತಿವೆ. ಹಳಗನ್ನಡದ ಕಾವ್ಯ-ಕವಿಗಳನ್ನು ಪರಿಚಯಿಸುವ ಅಗತ್ಯ, ಪ್ರಾತಿನಿಽಕತೆ, ಮೌಲ್ಯಗಳ ಅಳವಡಿಕೆಯ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಇವುಗಳಿಗೆ ಸಂಬಂಧಿಸಿದ ಪಠ್ಯಗಳನ್ನು ಅಳವಡಿಸಬೇಕಾಗಿದ್ದ ರಿಂದ ಸ್ವಲ್ಪಮಟ್ಟಿಗಾದರೂ ಅವು ಇಂದಿನ ಮಕ್ಕಳಿಗೆ ಗೊತ್ತಿದೆ), ಜನಮಾನ್ಯವೂ ಜಗಮಾನ್ಯವೂ ಆಗಿವೆ. ಇದನ್ನು ತಡೆಯಲು ಸಾಧ್ಯವಾಗಿಲ್ಲ.

ಆಫ್ ಕೋರ್ಸ್, ಆಗುವುದೂ ಇಲ್ಲ. ಹಿಂದಿನ ಕೆಲವು ಸಂದರ್ಭಗಳನ್ನು ನೆನಪಿಸಿಕೊಳ್ಳಿ: ರಾಮಾಯಣ, ಮಹಾಭಾರತ, ಗೀತೆ, ಪುರಾಣಗಳನ್ನೂ ಹೀಗಳೆದವರಿಗೇನೂ ಕಡಿಮೆಯಿಲ್ಲವಲ್ಲ! ಪಠ್ಯಪುಸ್ತಕ ರಚನೆ ಇತ್ತೀಚಿನ ವರ್ಷಗಳವರೆಗೂ ಯಾವ ಗೌಜು ಗೊಂದಲವಿಲ್ಲದೇ ನಡೆದುಹೋಗುತ್ತಿತ್ತು. ಹಾಗಂತ ರಾಜಕೀಯದ ವಾಸನೆ ಇರುತ್ತಿರಲಿಲ್ಲ ಎಂದಲ್ಲ. ಹಾಗೆ ಒಮ್ಮುಖವಾಗಿ ನಿರಾತಂಕವಾಗಿ ಪಠ್ಯರಚನೆ-ಪರಿಷ್ಕರಣೆ ನಡೆಯುವುದರ ಹಿಂದೆ ಬಹುದೊಡ್ಡ ರಾಜಕೀಯ ಇದ್ದೇ ಇತ್ತು.

ಆದರೆ, ಅವುಗಳಿಗೆಲ್ಲ ಪ್ರತಿಸ್ಪರ್ಧೆಯಾಗಿ ನಿಲ್ಲುವ ಧೋರಣೆ ಗಳು ಬಲವಾಗಿ ಇರುತ್ತಿರಲಿಲ್ಲ. ಮುಖ್ಯವಾಗಿ, ಅಂಥ ಧೋರಣೆಗಳಿಗೆ ಬೆಂಬಲವಾಗಿ ಪಕ್ಷ ರಾಜಕೀಯದ ಶಕ್ತಿ ಇರುತ್ತಿರಲಿಲ್ಲ. ಹೀಗಾಗಿ ಪಠ್ಯರಚನೆ, ಪರಿಷ್ಕರಣೆಗಳು ಈಗಿನಷ್ಟು ಗೊಂದಲ ಗೌಜುಗಳಾಗಿ ರಾಜಕೀಯವಾಗಿ ಶಿಕ್ಷಣದ ಮೇಲೆ
ಪರಿಣಾಮ ಬೀರುತ್ತಿರಲಿಲ್ಲ. ಈಗ ಕಾಂಗ್ರೆಸ್‌ನ ಸೈದ್ಧಾಂತಿಕ ಧೋರಣೆಗಳನ್ನು ಪ್ರಶ್ನಿಸುವ ಬಿಜೆಪಿಯ ಸೈದ್ಧಾಂತಿಕ ಧೋರಣೆಗಳು ಮುಖಾಮುಖಿ ಯಾಗಿವೆ, ರಾಜಕೀಯವಾಗಿಯೂ ಪಂಥಗಳು ಬೆಳೆದಿವೆ. ಬರಹಗಾರರಲ್ಲೂ ಈ ಎರಡೂ ಸೈದ್ಧಾಂತಿಕ ಧೋರಣೆಯವರು ಇದ್ದಾರೆ. ಈ ಹಿಂದೆಯೂ
ಇವು ಇದ್ದವು. ಆದರೆ, ಬೆಳಕಿಗೆ ಬಂದದ್ದು ತಡವಾಗಿ!

ಈಗಂತೂ ಇಸಂಗಳು ಹೊಕ್ಕಿ ರಾರಾಜಿಸುತ್ತಿವೆ. ಈ ಹಿಂದೆಯೂ ಇಸಂಗಳು ಖಂಡಿತವಾಗಿಯೂ ಇದ್ದವು. ಯಾವ್ಯಾವ ಇಸಂಗಳು ಇದ್ದವು ಎಂಬುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಹಾಗೆ ಇದ್ದು ರಚಿತವಾದ ಪಠ್ಯಗಳನ್ನೇ ನಾವು ಓದಿರುವುದು. ಆದರೆ, ರಾಜಕೀಯ ಸಂಘರ್ಷ ಗಳು ಇಷ್ಟೊಂದು ಬೆಳೆದಿರಲಿಲ್ಲ. ಈಗ ಸೋಷಿಯಲ್ ಮೀಡಿಯಾ ಬೆಳೆದಿದೆ. ಅಕ್ಷರ ಮತ್ತು ದೃಶ್ಯ ಮಾಧ್ಯಮಗಳು ಇಂಥವುಗಳಿಗೆ ತಕ್ಷಣಕ್ಕೆ ಸ್ಪಂದಿಸುತ್ತವೆ. ಸರಕಾರದ ನಡೆಯನ್ನು ಮಾಧ್ಯಮಗಳು ನೇರ ನಿಷ್ಠುರವಾಗಿ ನಿರಂತರ ಬಿತ್ತರಿಸುತ್ತವೆ. ಯಾವುದೂ ಜನರಿಗೆ ಕ್ಷಣಮಾತ್ರದಲ್ಲಿ
ಗೊತ್ತಾಗುವಂಥ ಕಾಲದಲ್ಲಿ ಯಾರೇನೇ ಮಾಡಿದರೂ ಹಲವು ಆಯಾಮದಲ್ಲಿ ಟೀಕೆ, ವಿಮರ್ಶೆ, ಚರ್ಚೆ, ತರ್ಕ, ವಾದಗಳು ಅರೆಕ್ಷಣದಲ್ಲಿ ಹುಟ್ಟಿಕೊಳ್ಳುತ್ತವೆ. ಒಂದು ರೀತಿಯಲ್ಲಿದು ವೈಚಾರಿಕತೆಯನ್ನು ಬೆಳೆಸುತ್ತದೆ ಎಂಬುದು ಸತ್ಯವಾದರೂ ಸಂಘರ್ಷಗಳಿಗೆ ಕಾರಣವಾಗುತ್ತದೆ.

ಹಿಂದಿನ ಸರಕಾರ ರಚಿಸಿದ ಪಠ್ಯಗಳಲ್ಲಿ ಕೆಲವನ್ನು ಬಿಜೆಪಿ ಅಧಿಕಾರಕ್ಕೆ ಬಂದಾಕ್ಷಣ ಬದಲಾಯಿಸಿತು. ಹಾಗೆ ನೋಡಿದರೆ ಬದಲಾಯಿಸಿ
ಮೌಲ್ಯಯುತವಾದ ಪಠ್ಯಗಳನ್ನು ಅಳವಡಿಸಿತು ಎಂಬುದನ್ನು ಅಲ್ಲಗಳೆಯಲಾಗದು. ಈಗ ಅವುಗಳಲ್ಲಿ ಕೆಲವನ್ನು ಈಗಿನ ಕಾಂಗ್ರೆಸ್ ಸರಕಾರ ಮತ್ತೆ ಬದಲಾಯಿಸಿತು. ಅಂದಮಾತ್ರಕ್ಕೆ, ಮೌಲ್ಯಗಳು ಬದಲಾಗುತ್ತವೆ ಎಂದುಕೊಳ್ಳಲಾಗದು. ಸತ್ಯ ಒಂದೇ, ಹೇಳುವ ರೀತಿ ಬೇರೆಯಿರಬಹುದು. ಆದರೆ,
ಮಕ್ಕಳಿಗೆ ಬೇಕಾದುದನ್ನು ಬೇಕಾದ ರೀತಿಯಲ್ಲಿ ಕೊಡುವಾಗ ಪಠ್ಯಗಳು ನೆಪಮಾತ್ರ ಎಂಬುದನ್ನು ನೆನಪಿಡಬೇಕು. ಬೋಧಕನ ಜ್ಞಾನ ಮತ್ತು ವೈಚಾರಿಕ ಸಾಮರ್ಥ್ಯ ಪ್ರಬುದ್ಧವಾಗಿದ್ದರೆ ಪಠ್ಯದಾಚೆಯ ಹಲವು ವಿಚಾರಗಳು ಮಕ್ಕಳಿಗೆ ಸಿಗುತ್ತವೆ.

ಆಲೋಚಿಸಿ ನೋಡಿ: ತರಗತಿಯಲ್ಲಿ ಪಠ್ಯೇತರ ಬೋಧನೆಯಾಗಿ ಹಲವು ವಿಚಾರಗಳನ್ನು ಕತೆ, ವ್ಯಕ್ತಿಚಿತ್ರಣ, ಘಟನೆ, ಸಂಗತಿಗಳ ಮೂಲಕ, ಏನೂ ಇಲ್ಲದಿದ್ದರೂ ಹಿಂದಿನ ವರ್ಷಗಳ ಸಿಲೆಬಸ್ಸಿನ ಪಠ್ಯಗಳನ್ನು ನೆನಪಿಸುವ ಮೂಲಕ ಬೋಧನೆ ನಡೆದೇ ನಡೆಯುತ್ತವೆ. ಇಂಥ ಬೋಧನೆಗಳು
ಮಕ್ಕಳನ್ನು ಹೊಸ ವಿಚಾರಗಳೆಡೆಗೆ ಒಯ್ಯುತ್ತವೆ. ಬದುಕಿಗೆ ಬೇಕಾದ ಮೌಲ್ಯಗಳನ್ನು ಕಲಿಸುತ್ತವೆ. ಆಲೋಚನಾ ಶಕ್ತಿ, ಕಲ್ಪನಾ ಸಾಮರ್ಥ್ಯ, ಸೌಂದರ್ಯ ಪ್ರಜ್ಞೆ, ಕಲಿಕೆಗೆ ಪೂರಕವಾದ ಕೌಶಲವನ್ನು ಉದ್ದೀಪಿಸುತ್ತದೆ.

ನಿತ್ಯಬದುಕಿನ ವಾಸ್ತವ ಸಂಗತಿಗಳನ್ನು ಹೇಳುವ ಮೂಲಕ ಮಕ್ಕಳಲ್ಲಿ ಯಾವ ಜೀವನ ಮೌಲ್ಯಗಳನ್ನು ಕಲಿಸಬೇಕು ಎಂಬ ಬಗ್ಗೆ ಶಿಕ್ಷಣತಜ್ಞರು, ಮನಶ್ಶಾಸೀಯ ಅಧ್ಯಯನ ಮಾಡಿದವರು ನಿರ್ಧರಿಸಬೇಕು. ಈಗಂತೂ ಬೇಕುಬೇಕಾದ (ಬೇಡವಾದವೂ ಸಿಗುತ್ತವೆ) ಅದೆಷ್ಟೋ ವಿಚಾರಗಳು ಮೊಬೈಲಲ್ಲೇ ಸಿಗುವಂತೆ ತಂತ್ರಜ್ಞಾನ ಬೆಳೆದಿರುವುದರಿಂದ ಕೈಬೆರಳ ತುದಿಯಲ್ಲಿ ಯಾವುದೇ ಮಾಹಿತಿಯನ್ನು ಅರೆಕ್ಷಣದಲ್ಲಿ ತೆಗೆದುಕೊಳ್ಳಬಲ್ಲ
ಷ್ಟರ ಮಟ್ಟಿಗೆ ಆಧುನಿಕ ಪ್ರಪಂಚ ಬೆಳೆದಿದೆ.

ಶಿಕ್ಷಕರೇ ಗೂಗಲ್, ಯುಟ್ಯೂಬ್ ಮೂಲಕ ಮಾಹಿತಿ ಸಂಗ್ರಹಿಸಿ ಕೊಂಡೇ ಪಾಠ ಮಾಡುವಾಗ ಮಕ್ಕಳು ಬಿಡುತ್ತಾರೆಯೇ? ಆದ್ದರಿಂದ ಪಠ್ಯಗಳ ರಚನೆ-ಅಳವಡಿಕೆಯ ಕಾರ್ಯದಲ್ಲಿ ತಲೆಯಿದ್ದವರು ಮಾತ್ರ ಇರಬೇಕು. ತೀರಾ ತಲೆಯಿದ್ದವರು ಇದ್ದರೆ ಮಕ್ಕಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ!
ಕೇವಲ ತರಗತಿಯಲ್ಲಿ ಓದಿದ ಪಠ್ಯವನ್ನೇ ಅಥವಾ ಅದರ ಮೌಲ್ಯಗಳನ್ನೇ ಮಕ್ಕಳು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ ಎಂಬುದು ಸಂಪೂರ್ಣ ಸತ್ಯವಲ್ಲ! ಇಂಥ ಸ್ವಭಾವವೇ ಇಂದಿನ ಅನೇಕ ಮಕ್ಕಳಲ್ಲಿ ಇಲ್ಲವೆಂಬುದು ಸೋಜಿಗವಾದರೂ ಸತ್ಯ!

ಪಾಠಾಂಶಗಳನ್ನು ಪರೀಕ್ಷೆಗಾಗಿ ಮಾತ್ರ ಎಂದೇ ತಿಳಿದುಕೊಂಡಿರುವ ಮಕ್ಕಳಿಗೆ (ಪೋಷಕರೂ ಕೂಡ) ಶಾಲೆ-ಶಿಕ್ಷಕ-ಪಠ್ಯ-ಪರೀಕ್ಷೆ-ಫಲಿತಾಂಶ ಇವುಗಳಿಗಿಂತ ಮೊಬೈಲೇ ಹೆಚ್ಚು ಆಕರ್ಷಣೆಯಾಗಿದೆ. ಯೋಚಿಸಿ ನೋಡಿ: ೮ನೇ ತರಗತಿಯವರೆಗೆ ಫೇಲಾಗುವುದಂತೂ ಸಾಧ್ಯವೇ ಇಲ್ಲ. ಫೇಲಾದರೂ ಮರು ಬೋಧನೆ ಮರುಪರೀಕ್ಷೆ ಮಾಡಿ ಪಾಸು ಮಾಡಲೇಬೇಕು! ನಂತರ ೯ನೇ ತರಗತಿಯಲ್ಲಿ ಪಾಸಾಗುವಷ್ಟು ಅಂಕ ಪಡೆದು
ಪಾಸಾದರೆ ಹತ್ತರಲ್ಲಿ ಪಾಸಾಗುವುದೇನೂ ಮುಖ್ಯವೇ ಅಲ್ಲ! ಈಗ ಅದಷ್ಟು ಗಂಭೀರ ವಿಷಯವೂ ಅಲ್ಲ. ದಡ್ದ ಶಿಖಾಮಣಿ ಮಾತ್ರ ಹಠಯೋಗ ಮಾಡಿ ನಪಾಸಾಗಬೇಕು, ಅಷ್ಟೆ! ಇಂಥ ಪರಿಸ್ಥಿತಿಯಲ್ಲಿ ಪಠ್ಯಕ್ಕೆ ಆದ್ಯತೆ ಎಂಬುದಕ್ಕಿಂತ ಸಿಲಬಸ್ ಪೂರ್ಣಗೊಳಿಸಬೇಕು ಎನ್ನುವ ಅವಸರ ಶಿಕ್ಷಕರಲ್ಲಿ
ಅನಿವಾರ್ಯವಾಗಿರುತ್ತದೆ. ಬೋಧನೆ ಎಷ್ಟು ಮುಖ್ಯ ಎಂಬುದು ಕಲಿಕೆಯ ಮೇಲೆ ಆಧರಿತವಾಗಿರುತ್ತದೆ.

ಕಲಿಕೆಯಲ್ಲಿ ಸೂಕ್ಷ್ಮತೆ ಹೆಚ್ಚಿದಂತೆ ಬೋಧನೆಯೂ, ಪಠ್ಯವೂ ಪ್ರಧಾನವಾಗುತ್ತವೆ. ಪಠ್ಯಕ್ಕೆ ಪೂರಕವಾಗಿ ನಿಲ್ಲುವ ಚಟುವಟಿಕೆಗಳು ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಎಂಥಾ ಒಳ್ಳೆಯ ಪಠ್ಯವಿದ್ದರೂ ಬೋಧನೆ ಮತ್ತು ಕಲಿಕೆಯಲ್ಲಿ ನಿರಾಸಕ್ತಿ, ನಿರ್ಲಕ್ಷ್ಯವಿದ್ದರೆ ಯಾವ ಪಠ್ಯಅಳವಡಿಸಿದರೇನು ಬಿಟ್ಟರೇನು? ‘ಪಂಪ ಭಾರತ’ವನ್ನು ಕಲಿಸುವಾಗ ಬೋಧಕನಿಗೆ ಭಾರತದ ಪ್ರಜ್ಞೆ ಮತ್ತು ಕಲ್ಪನೆ ಚೆನ್ನಾಗಿರಬೇಕು.

‘ಪಂಪ ಏನ್ ಹೇಳ್ತಾನಾ ಅಂದ್ರ, ಪಂಪ ಏನ್ ಹೇಳ್ತಾನಾ ಅಂದ್ರ’ ಅಂತ ಶುರುಮಾಡಿ, ‘ಅಂವ ಏನ್ ಬೇಕಾದ್ರೂ ಹೇಳ್ಕೊಳ್ಳಿ’ ಅಂತ ಪಾಠ ಮುಗಿಸುವ
ಮಹಾಶಯರಿದ್ದರೆ ಪಂಪನ ಕತೆಯೂ, ಪಂಪಭಾರತದ ಕತೆಯೂ ಮುಗಿಯುತ್ತದೆ! ಪಠ್ಯ ಯಾವುದೇ ಇರಲಿ, ಮಕ್ಕಳ ಮಾನಸಿಕ, ಜ್ಞಾನಾತ್ಮಕ,
ಭಾವನಾತ್ಮಕ, ಕಲ್ಪನಾತ್ಮಕ ವಲಯಗಳನ್ನು ಪ್ರಭಾವಿಸುವಂಥ ಬೋಧನೆ ಹಿಂದಿನ ಅಧ್ಯಾಪಕರಲ್ಲಿ ಇರುತ್ತಿತ್ತು. ಶಾಲೆಯೆಂದರೆ ಮತ್ತೊಂದು ಮನೆಯೇ ಆಗಿದ್ದಂಥ ಕಾಲದಲ್ಲಿ ಬೋಧನೆ ಮತ್ತು ಕಲಿಕೆಯಲ್ಲಿ, ಗುರು-ಶಿಷ್ಯರ ಬಾಂಧವ್ಯದಲ್ಲಿ ತಾದಾತ್ಮ್ಯ ಇರುತ್ತಿತ್ತು. ಮುಖ್ಯವಾಗಿ, ಶಿಕ್ಷಕರು ಮಕ್ಕಳ
ವರ್ತನೆಯನ್ನು ಶಾಲೆಯಲ್ಲಿ ಮಾತ್ರವಲ್ಲದೆ ಶಾಲೆಯ ಹೊರಗೂ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದರು. ತಪ್ಪು ಮಾಡಿದರೆ ಏಟು ಕೊಟ್ಟು ತಿದ್ದುತ್ತಿದ್ದರು. ಈಗ ಏಟು ಕೊಡುವ ಪ್ರಶ್ನೆಯೇ ಇಲ್ಲ. ಕೊಟ್ಟರೆ ಶಿಕ್ಷಕರ ಪಾಡು ಹೇಳತೀರದಂತಾಗುತ್ತದೆ.

ಹೀಗಾಗಿ ಅಂಥ ಉಸಾಬರಿಗೆ ಅವರೂ ಕೈಹಾಕುವುದಿಲ್ಲ. ಹಾಗಂತ ಇಂಥ ಪರಿಸ್ಥಿತಿ ಎಲ್ಲ ಶಾಲೆಗಳಲ್ಲೂ ಇಲ್ಲ. ಊರೇ ಶಾಲೆಯಾಗಿದ್ದ ಹಿಂದಿನ
ದಿನಮಾನಗಳಿಗೆ ಮತ್ತು ಈಗಿನ ಶಾಲೆಯ ಅಸ್ತಿತ್ವ ಮತ್ತು ಅಸ್ಮಿತೆಯ ನಡುವೆ ಅಂತರವಿದೆ. ಆದ್ದರಿಂದ ಪಠ್ಯವೇ ಎಲ್ಲವೂ ಅಲ್ಲ, ಎಲ್ಲ ಪಠ್ಯಗಳೂ
ಎಲ್ಲೆಡೆಯೂ ಇಲ್ಲ, ಎಲ್ಲ ಪಠ್ಯಗಳೂ ಎಲ್ಲೆಡೆಯೂ ಇಲ್ಲದಿಲ್ಲ! ಇದರಿಂದ ಮಕ್ಕಳಿಗೆ ಏನೂ ಆಗಬೇಕಿಲ್ಲ! ಎಲ್ಲವೂ ನಿಂತಿರುವುದು ತರಗತಿಯ ಬೋಧನೆ ಮತ್ತು ಕಲಿಕೆಯ ಮೇಲೆ, ಬೋಧಕನ ಜ್ಞಾನ ಸಾಮರ್ಥ್ಯದ ಮೇಲೆಯೇ ಹೊರತು ಪಠ್ಯಗಳ ಮೇಲಲ್ಲ. ಸರಕಾರಗಳು ಇದನ್ನು ಮೊದಲು ಅರ್ಥಮಾಡಿಕೊಳ್ಳಬೇಕಿದೆ!

Leave a Reply

Your email address will not be published. Required fields are marked *

error: Content is protected !!