Sunday, 23rd June 2024

ತಿಲಕರ ಮಗ ಆತ್ಮಹತ್ಯೆ ಮಾಡಿಕೊಂಡ ಕ್ಷಣ !

ಬುಲೆಟ್ ಪ್ರೂಫ್

ವಿನಯ್ ಖಾನ್

ಈ ಪತ್ರ ನಿಮ್ಮ ಕೈಸೇರುವ ಮುಂಚೆಯೇ, ನಾನು ಈ ಪ್ರಪಂಚ ಬಿಟ್ಟು ಹೋಗಿರುವ ಸುದ್ದಿ ನಿಮಗೆ ತಿಳಿದಿರುತ್ತೆ. ನಿಮ್ಮ ‘ಸಮಾಜ- ಸಮತ-ಸಂಘ’ದ ಕೆಲಸಗಳು ಮತ್ತಷ್ಟು ಹೆಚ್ಚಾಗಬೇಕಾಗಿದ್ದರೆ, ವಿದ್ಯಾವಂತ ಮತ್ತು ಸಾಮಾಜಿಕ ಕಳಕಳಿಯುಳ್ಳ ಯುವಕರು ಈ ಚಳವಳಿಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ನಿರಂತರ ಪ್ರಯತ್ನ ನೋಡುತ್ತಿದ್ದರೆ, ದೇವರೇ ಯಶಸ್ಸನ್ನು ಆಶೀರ್ವದಿಸುತ್ತಾನೆ ಎಂಬ ಬಲವಾದ ನಂಬಿಕೆ ನನ್ನಲ್ಲಿದೆ.

ಮಹಾರಾಷ್ಟ್ರದ ಯುವಕರೆಲ್ಲರೂ ಈ ಪುಣ್ಯಕೆಲಸದಲ್ಲಿ ಕೈಜೋಡಿಸಿದರೆ, ಮುಂದಿನ ಐದು ವರ್ಷಗಳಲ್ಲಿ ಎಂಥದ್ದೇ
ಅಸ್ಪೃಶ್ಯತೆಯ ಸಮಸ್ಯೆಯೂ ನಿರ್ನಾಮವಾಗಬಹುದು. ಎಲ್ಲ ನನ್ನ ಅಸ್ಪೃಶ್ಯ ಬಂಧುಗಳ ಕುಂದುಕೊರತೆಗಳನ್ನು ಹೇಳಲು ಕೃಷ್ಣನೆಡೆಗೆ ಹೊರಟಿದ್ದೇನೆ. ನನ್ನ ಎಲ್ಲ ಸ್ನೇಹಿತರಿಗೂ ದಯವಿಟ್ಟು ನನ್ನ ವಂದನೆಗಳನ್ನು ತಿಳಿಸಿ.- ವಂದನೆ ಗಳೊಂದಿಗೆ, ನಿಮ್ಮ ಶ್ರೀಧರ್ ಬಲವಂತ್ ಪಂತ್ ತಿಲಕ್.

ಬಾಲಗಂಗಾಧರ ತಿಲಕ್ ಅವರ ಮಗ ಶ್ರೀಧರ್ ಪಂತ್ ಅವರು ಆತ್ಮ ಹತ್ಯೆ ಮಾಡಿಕೊಳ್ಳುವ ಮುನ್ನ ಡಾ. ಬಿ.ಆರ್.
ಅಂಬೇಡ್ಕರ್ ಅವರಿಗೆ ಈ ಪತ್ರ ಬರೆದಿದ್ದರು.
***

ಆಗಿನ್ನೂ ದೇಶಾದ್ಯಂತ ಸ್ವಾತಂತ್ರ್ಯದ ಕಹಳೆ ಮೊಳಗಿತ್ತಷ್ಟೇ. ಎಲ್ಲೆಲ್ಲೂ ದೇಶಭಕ್ತಿಯ ಮಾತುಗಳೇ. ಹಾಗೆಯೇ ಸಾಮಾಜಿಕ
ನ್ಯಾಯದ ಜಾಗೃತಿಯೂ ಹಲವರಲ್ಲಿ ಮೂಡಿತ್ತು. ಹಲವೆಡೆ ಸಾಮಾಜಿಕ ನ್ಯಾಯ, ದಲಿತರ ಏಳ್ಗೆಯ ಪರವಾದ ಮಾತು
ಗಳೂ ಕೇಳಿಬರುತ್ತಿದ್ದವು. ಮಹಾತ್ಮ ಗಾಂಧಿಯವರೂ ‘ಹರಿಜನರ ಸೇವೆ’ ಎಂಬ ಹೊಸ ಕಲ್ಪನೆಯನ್ನು ಹುಟ್ಟುಹಾಕಿದ್ದರು.

ಆಗಿನ್ನೂ ಮುನ್ನೆಲೆಗೆ ಬಂದಿದ್ದ ಅಂಬೇಡ್ಕರ್, ತಮ್ಮ ಸಮುದಾಯದ ಜನರ ಶ್ರೇಯೋಭಿಲಾಷೆಗಳಿಗೆ ಹೋರಾಟ, ಸಂಘಟನೆ ಗಳನ್ನು ಮಾಡುತ್ತಿದ್ದರು. ಅದರ ಭಾಗವಾಗಿಯೇ, ೧೯೨೭ರಲ್ಲಿ ನಡೆಯುತ್ತಿದ್ದ ‘ಮಹಾಡ್ ಸತ್ಯಾಗ್ರಹ’ದ ಸಮಯದಲ್ಲಿ, ದಲಿತ ಚಳವಳಿಗೋಸ್ಕರ ಅದನ್ನು ಬೆಂಬಲಿಸುತ್ತಿದ್ದ ಹಲವಾರು ಮೇಲ್ಜಾತಿ ಜನರ ಮಿತ್ರಕೂಟವನ್ನು ಸ್ಥಾಪಿಸಿ, ಅದಕ್ಕೆ ‘ಸಮಾಜ ಸಮತ ಸಂಘ’ ಅಂತ ಹೆಸರನ್ನೂ ಇಟ್ಟಿದ್ದರು. ಅದರ ಸದಸ್ಯರಾಗಿ ಹುಟ್ಟಾ ಬ್ರಾಹ್ಮಣ ಕುಟುಂಬದ ಶ್ರೀಧರಪಂತ್ ತಿಲಕ್ ಅವರೂ ಇದ್ದರು.

ಅದರ ಒಂದು ಶಾಖೆಯನ್ನೇ ಶ್ರೀಧರ್ ಪಂತ್ ಪುಣೆಯ ಗಾಯಕ್‌ವಾಡಾದಲ್ಲಿ ಸ್ಥಾಪಿಸಿದಾಗ ಸಮಾನ್ಯವಾಗಿಯೇ ಕರ್ಮಠ ವಾದಿಗಳ ವಿರೋಧ ಹುಟ್ಟಿತ್ತು. ಅದಾದ ಮೇಲೆ ತಮ್ಮ ಮನೆಯೊಳಗೆ ದಲಿತರನ್ನೂ ಬಿಟ್ಟುಕೊಳ್ಳುತ್ತಿದ್ದರು. ‘ಲೋಕಮಾನ್ಯ ನಿವಾಸ್’ಆಗಿದ್ದ ಅವರ ಮನೆಗೆ ‘ಚಾತುರ್ವಣ್ಯ ವಿದ್ವಾಂಸಕ್ ಸಮಿತಿ’ ಅಂತ ಬೋರ್ಡ್ ಅನ್ನೂ ಹಾಕಿದ್ದರು. ಈ ವಿಷಯವಂತೂ ಕೇಸರಿ ಟ್ರಸ್ಟ್‌ನ ಟ್ರಸ್ಟಿಗಳಲ್ಲಿ ಅಸಮಾನ್ಯ ವಿರೋಧ ಹುಟ್ಟಿಸಿತ್ತು.

ಅದರ ಟ್ರಸ್ಟಿಗಳಾಗಿದ್ದಂತಹ ಎನ್.ಸಿ.ಕೇಳ್ಕರ್ ಮತ್ತು ಜಿ.ವಿ. ಕೇಟ್ಕರ್ ಅವರ ಪಾಲಿಗಂತೂ ಶ್ರೀಧರ್ ಪಂತರ ಹೊಸ ನಿಲುವುಗಳು ಚೇಳು ಬಿಟ್ಟಂತಾಗಿತ್ತು. ಅಪ್ಪಟ ಕರ್ಮಠರಾಗಿದ್ದಂತಹ ತಿಲಕರ ಮಗನ ಚಿಂತನೆಗಳೆಲ್ಲ ಬೂಟಾಟಿಕೆಯಾಗಿಯೂ ಹಲವರಲ್ಲಿ ಕಾಣಿಸಲು ಶುರುವಾಯಿತು.

ಪರಿಸ್ಥಿತಿ ಇಷ್ಟೊಂದು ಹದೆಗೆಟ್ಟಿದ್ದಾಗಲೇ, ಮೇ೧೦, ೧೯೨೮ರಲ್ಲಿ ಪುಣೆಯ ನಾರಾಯಣ ಪೇಠದ ಗಾಯಕ್‌ವಾಡಾದಲ್ಲಿ ವಾಸವಾಗಿದ್ದ ತಿಲಕ್ ಕುಟುಂಬದವರು ಅಂದು ಸ್ವಲ್ಪ ಬೇಗವೇ ಎದ್ದು ತಮ್ಮ ದಿನಚರಿಯನ್ನು ಪ್ರಾರಂಭಿಸಿದ್ದರು. ಅವರ ಮನೆಯಲ್ಲೆಲ್ಲ ಅಂದು ಹಬ್ಬದ ಸಡಗರ, ಬೆಳಗ್ಗೆಯೇ ಎದ್ದು ಮನೆಯಲ್ಲ ಗುಡಿಸಿ, ರಂಗೋಲಿ ಹಾಕಿ, ಅಡುಗೆಗೆ ಸಿದ್ಧಪಡಿಸಿಕೊಳ್ಳು ತ್ತಿದ್ದುದು, ೨೦೦ಕ್ಕೂ ಅಧಿಕ ಬೇರೆ ಬೇರೆ ಜಾತಿಯ ಮಂದಿಯೆಲ್ಲ ಅವರ ಮನೆಗೆ ‘ಸಹಭೋಜನ’ಕ್ಕೆ ಬರುತ್ತಿದ್ದ ಸಡಗರಕ್ಕೆ. ಆ ಕಾರ್ಯಕ್ರಮದ ಮೇಲುಸ್ತುವಾರಿಯಾಗಿ, ಮುಂದೆ ನಿಂತು ಕೆಲಸ ನೋಡಿಕೊಳ್ಳುತ್ತಿದ್ದುದು, ಶ್ರೀಧರ್ ಪಂತ್ ತಿಲಕ್. ಪಕ್ಕಾ ಸಾಂಪ್ರದಾಯಿಕ ವಾಡೆಯಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕು, ಅದರಿಂದ ದೇಶದೆಲ್ಲೆಡೆ ಸಾಮಾಜಿಕ ನ್ಯಾಯದ ಪರ ವಾದ ಮತ್ತಷ್ಟು ಕೂಗು ಕೇಳಿಬರುತ್ತದೆಂದು ಶ್ರೀಧರ್ ಅವರು ಉತ್ಸುಕರಾಗಿದ್ದರು.

ಆ ಕಾರ್ಯಕ್ರಮದ ಮತ್ತೊಂದು ಕೇಂದ್ರ ಬಿಂದುವಾಗಿದ್ದುದು, ವಿಶ್ವದ ಅತ್ಯಂತ ಯಶಸ್ವಿ, ಜ್ಞಾನಿ ಹಾಗೆಯೇ ಸಾಮಾಜಿಕ ಹೋರಾಟಗಾರ ಹಾಗೂ ಶ್ರೀಧರನ ಅತ್ಯಂತ ಆತ್ಮೀಯ ಸ್ನೇಹಿತರಾಗಿದ್ದ ಡಾ.ಭೀಮರಾವ್ ಅಂಬೇಡ್ಕರ್ ಅವರ ಬರುವಿಕೆಯೂ ಆ ದಿನ ಶ್ರೀಧರಪಂತರಲ್ಲಿ ಹೊಸದೊಂದು ಸಂತೋಷವನ್ನು ತಂದಿತ್ತು. ೧೯೨೫ರಿಂದಲೇ ಡಾ.ಅಂಬೇಡ್ಕರ್ ಅವರ ವಿಚಾರ, ಸಾಮಾಜಿಕ ಹೋರಾಟಗಳಿಂದ ಸೂರ್ತಿ ಹೊಂದಿದ್ದ ಶ್ರೀಧರ್, ಅಂಬೇಡ್ಕರ್‌ರನ್ನು ಆಗಾಗ ಭೇಟಿ ಆಗುತ್ತಿದ್ದರು.

ಅವರಿಗೆ ಬರೀ ಜಾತಿ ನಿರ್ಮೂಲನೆ, ಮೇಲ್ವರ್ಗದವರ ಬೂಟಾಟಿಕೆಗಳ ವಿರುದ್ಧ ಹೋರಾಡುವುದಷ್ಟೇ ಅಲ್ಲದೇ; ಬಾಲ್ಯ ವಿವಾಹ, ವಿಧವೆಯರೆಡೆಗೆ ನಡೆಯುತ್ತಿದ್ದ ಹಲವಾರು ದುಷ್ಕೃತ್ಯಗಳನ್ನು ತಡೆಯುವುದೂ ಅವರ ಉದ್ದೇಶವಾಗಿತ್ತು, ಶ್ರೀಧರ ಪಂತರ ಪ್ರತಿಯೊಂದು ಸಾಮಾಜಿಕ ಕಾರ್ಯಗಳ ಉದ್ದಗಲಕ್ಕೂ ಹಿಂದೆ ದೊಡ್ಡ ಶಕ್ತಿಯಾಗಿ ನಿಂತಿದ್ದ ಸ್ನೇಹಿತರೆಂದರೆ ಪ್ರಬೋಢಂಕರ್ ಕೇಶವ್ ಸೀತಾರಾಂ ಠಾಕ್ರೆ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್.

ಮೊದಲೇ ಕರ್ಮಠವಾದಿಗಳೆಲ್ಲ ತಿಲಕ್‌ರ ವಿರುದ್ಧ ಹಲವಾರು ಕೆಟ್ಟ ವದಂತಿಗಳು ಹೆಚ್ಚಾದವು. ಸಹಭೋಜನದ ವಿಷಯ ಕೇಳುತ್ತಲೇ ಶ್ರೀಧರ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆಯೂ ಎಚ್ಚರಿಸಲಾಯಿತು. ಅದರೆ, ಅದ್ಯಾವುದೂ ತಿಲಕರನ್ನು ಸುಮ್ಮನೇ ಕೂರಿಸಲಿಲ್ಲ. ಬಾಲ್ ಗಂಗಾಧರ ತಿಲಕರು ಸ್ಥಾಪಿಸಿದ್ದ ‘ಕೇಸರಿ’ ಪತ್ರಿಕೆಯ ಮೇಲೂ ಹಠ ಸಾಧಿಸಿದ ಟ್ರಸ್ಟಿಗಳು, ಪತ್ರಿಕೆಯಿಂದ ತಿಲಕರನ್ನು ಓಡಿಸಿದರು. ಆ ಸಮಯದಲ್ಲಿ ಶ್ರೀಧರ್‌ಪಂತರ ಸ್ನೇಹಿತ-ಹಿತೈಷಿಗಳು ಅವರ ತತ್ವ ಸಿದ್ಧಾಂಗಳನ್ನು ಬಿಟ್ಟು ಜೀವನಕ್ಕೆ ಹಾದಿ ಆಗಿದ್ದ ಪತ್ರಿಕೆಯನ್ನು ಉಳಿಕೊಳ್ಳುವ ಸಲಹೆ ನೀಡಿದರು, ಆದರೆ, ತಿಲಕ್‌ರ ಛಲ ಅದ್ಯಾವುದಕ್ಕೂ ಬಗ್ಗಲಿಲ್ಲ.

ದಲಿತರನ್ನ ಅವಹೇಳನ ಮಾಡಲು ಮೇಲ್ಜಾತಿಯವರು ಉಪಯೋಗಿಸುತ್ತಿದ್ದ ಅತಿದೊಡ್ಡ ಅಸವೇ ಊಟ. ಆಗಿನ ಕಾಲದಲ್ಲಿ (ಈಗಲೂ ಕೆಲವು ಕಡೆಗಳಲ್ಲಿ) ಮೇಲ್ಜಾತಿಯವರ ಪಂಕ್ತಿ, ಅಥವಾ ಅವರ ಪಕ್ಕ ಕೂತು ದಲಿತರು ಊಟ ಮಾಡುವುದಂತೂ  ಭಾರೀ ನಿಷೇಧಕ್ಕೆ ಒಳಪಟ್ಟಿತ್ತು. ನಮಗೆಲ್ಲ ಗೊತ್ತಿರುವ ಹಾಗೆ, ದಲಿತರಿಗೆ ಕುಡಿಯುವ ನೀರಿನ ಬಳಕೆಗೂ ಕಟ್ಟಳೆಗಳಿದ್ದವು, ಅದನ್ನು ಅಂಬೇಡ್ಕರ್ ಸಹ ನುಭವಿಸಿದ್ದರು.

ತಮ್ಮ ಶಾಲೆಯಲ್ಲಿ, ಊರಿನಲ್ಲಿ, ಇನ್ನೂ ಮುಂದೆ ಹೋಗಿ ಇಂಗ್ಲೆಂಡ್‌ನಲ್ಲಿ ಪಿ.ಎಚ್‌ಡಿ ಮಾಡುವಾಗ, ಬರೋಡಾ ಪ್ರಾಂತದ ದಿವಾನರಾಗಿದ್ದರೂ ವಡೋದರಾದಲ್ಲಿ ಇರೋಕೆ ಮನೆ ಸಿಗದಿದ್ದಾಗ, ಕಚೇರಿಯಲ್ಲಿ ಕೆಳಸ್ತರದ ಅಽಕಾರಿಗಳಾಗಿದ್ದರೂ, ಜಾತಿಯಲ್ಲಿ ಮೇಲ್ವರ್ಗದವರಾಗಿದ್ದರಿಂದ ಮುಟ್ಟಿಸಿ ಕೊಳ್ಳದಿದ್ದ ಸನ್ನಿವೇಶದಲ್ಲಿ, ಕೊನೆಗೆ ಜವಾನನಿಂದಲೂ ಸರಿಯಾದ ಮರ್ಯಾದೆ ಸಿಗದೆ ಬೇಸತ್ತು ಹೋಗಿದ್ದರು. ಹೀಗೆ ಯಾರಿಂದಲೂ ಮುಟ್ಟಿಸಿಕೊಳ್ಳದ ಸಂದರ್ಭದ ದಿನಗಳಲ್ಲಿ ಅವರ ಜತೆಸೇರಿ, ಶ್ರೀಧರ್‌ಪಂತ್ ಅವರು ತುಳಿದಿದ್ದ ಹಾದಿಯಂತೂ ಸಣ್ಣದ್ದಾಗಿರಲಿಲ್ಲ.

ಮೇ ೧೦, ೧೯೨೮ ರಂದು ಸಹಭೋಜನದ ದಿನ, ಕೇಸರಿ ಟ್ರಸ್ಟ್‌ನ ಟ್ರಸ್ಟಿಗಳು ಅಂಬೇಡ್ಕರ್ ಬರುವ ಸಮಯದಲ್ಲೇ
ಗಾಯಕ್‌ವಾಡಾದ ಕರೆಂಟ್ ತೆಗೆದರು. ಸಣ್ಣ ಗದ್ದಲವನ್ನೂ ಮಾಡಿದರು, ಆಗ ಶ್ರೀಧರ್ ಪಂತರು ತಮ್ಮ ಸ್ನೇಹಿತರ ಸಹಾಯದಿಂದ ಮನೆಯಲ್ಲಿದ್ದ ದೀಪ, ಮೊಂಬತ್ತಿಗಳನ್ನು ತರಿಸುತ್ತಾರೆ. ಕೆಲವೇ ಹೊತ್ತಿಗೆ ಆ ಸ್ಥಳ ನೂರಾರು ಜನ ತಮ್ಮ ಮನೆಗಳಿಂದ ತಂದ ದೀಪಗಳಿಂದ ಕೂಡಿ ದೀಪಾವಳಿಯ ವೈಭವವನ್ನು ತರುತ್ತದೆ. ಸಹ ಭೋಜನ ಕೂಡ ಅಚ್ಚುಕಟ್ಟಾಗಿಯೇ
ಮುಗಿಯುತ್ತದೆ.

ಅದಾದ ಮೇಲೆ, ಶ್ರೀಧರ್ ಪಂತ್ ಅವರ ಮೇಲೆ ಕರ್ಮಠರಿಂದ ಮತ್ತಷ್ಟೂ ವ್ಯಾಪಕವಾಗಿ ವಿರೋಧ. ಇದೇ ಕಾರಣಕ್ಕೆ
ಶತ್ರುಗಳೂ ಹುಟ್ಟುತ್ತಾರೆ. ಅವರ ಮೇಲಿದ್ದ ಕೇಸ್‌ಗಳೂ ಮತ್ತಷ್ಟೂ ಪ್ರಬಲವಾಗುತ್ತವೆ. ಅವರು ಹೋದಲ್ಲಿ, ಬಂದಲೆಲ್ಲ
ಅವರನ್ನು ಅವಮಾನ ಮಾಡಲಾಗುತ್ತದೆ. ಅವರದ್ದೇ ಆದ ‘ಕೇಸರಿ’ ಪತ್ರಿಕೆಯಲ್ಲಿಯೂ ಅವರನ್ನು ಅವಹೇಳನ ಮಾಡಲಾಗುತ್ತೆ. ಪುಣೆಯ ಬ್ರಾಹ್ಮಣರು ಮತ್ತು ಕರ್ಮಠವಾದಿಗಳೆಲ್ಲ ಶ್ರೀಧರ್‌ಪಂತ್ ಮತ್ತವರ ಸ್ನೇಹಿತರನ್ನು ‘ದುಷ್ಟರ ಕೂಟ’ ಎಂದೂ ಕರೆಯುತ್ತಾರೆ. ಪ್ರತಿಯೊಂದೂ ನಡೆಯಲ್ಲೂ ವಿರೋಧ ಕಟ್ಟಿಕೊಂಡು, ಅವಹೇಳನ ಮಾಡಿಸಿಕೊಂಡು ಖಿನ್ನರಾಗಿದ್ದ ಶ್ರೀಧರ್ ಪಂತ್ ತಿಲಕ್, ಮೇ೨೫,೧೯೨೮ ರಂದು ಬಾಂಬೆ-ಪೂನಾ ಎಕ್ಸ್‌ಪ್ರೆಸ್ ಟ್ರೈನ್‌ಗೆ ತಲೆಕೊಟ್ಟು ತಮ್ಮ ಪ್ರಾಣವನ್ನೇ ಬಿಡುತ್ತಾರೆ.
ಎಷ್ಟೋ ಸಲ ಸಾರ್ವಕಾಲಿಕ ದಲಿತ ನಾಯಕರೆಂದಾಗ ಅಂಬೇಡ್ಕರ್ ಅವರು ಹೆಸರು ಬರುವುದು ಸಾಮಾನ್ಯ.

ಇತ್ತೀಚಿನ ದಿನಗಳಲ್ಲಿ ದಲಿತ ನಾಯಕನ ಹೆಸರು ಕೇಳಿದಾಗ ಹಲವು ರಾಜಕೀಯ ನಾಯಕರು (ಹೆಸರಿಂದಷ್ಟೇ ದಲಿತ
ಎನ್ನಿಸಿಕೊಳ್ಳುವ) ಮುಂದೆ ಬರುತ್ತಾರೆ. ಆದರೆ, ಎಲೆಮರಿ ಕಾಯಿಯಾಗಿ ಹಲವಾರು ಚಳವಳಿಯನ್ನು ಸಂಘಟಿಸಿ, ತಮ್ಮ
ಜೀವನವನ್ನೇ ಒತ್ತೆಯಿಟ್ಟು, ಸವೆಸಿಕೊಂಡಂತಹ ಹಲವಾರು ಜನ ಇತಿಹಾಸದಲ್ಲಿ ಇನ್ನೂ ಇದ್ದಾರೆ. ಏನನ್ನೋ ಓದುವಾಗ
ಇವರ ಬಗ್ಗೆ ಗೊತ್ತಾಗಿ, ಬರೆಯಬೇಕಿನಿಸಿತು. ಹಾಂ, ನಿನ್ನೆಗೆ ಅವರು ತೀರಿಕೊಂಡು ೯೫ ವರ್ಷಗಳಾದವು.

error: Content is protected !!