Tuesday, 20th February 2024

ತೀನಂಶ್ರೀ ಅಂದರೆ ತೀರ್ಥಪುರದ ನಂಜುಂಡಯ್ಯ ಶ್ರೀಕಂಠಯ್ಯ

ತಿಳಿರುತೋರಣ

srivathsajoshi@yahoo.com

ಅ ಮಲ್ದಾರನಾಗಿ- ಅಂದರೆ ಭೂ ಕಂದಾಯವೇ ಮುಂತಾದ ತೆರಿಗೆ ವಸೂಲಿ ಅಧಿಕಾರಿಯಾಗಿ, ಅದೂ ಬ್ರಿಟಿಷ್ ಆಡಳಿತದಲ್ಲಿ, ಶ್ರೀರಂಗಪಟ್ಟಣದಲ್ಲಿ
ಉದ್ಯೋಗ ಆರಂಭಿಸಿದವರು ತೀನಂಶ್ರೀ. ಒಂದುವೇಳೆ ಅದೇ ವೃತ್ತಿಯಲ್ಲಿ ಮುಂದುವರಿದಿದ್ದರೆ ಸಂಬಳ ಮೇಲೊಂದಿಷ್ಟು ಗಿಂಬಳ ಗಳಿಸಿಕೊಳ್ಳುತ್ತ ತಾವು ಮಾತ್ರ ಶ್ರೀಮಂತರಾಗುತ್ತಿದ್ದರೋ ಏನೋ. ಆದರೆ ಕನ್ನಡ ಸಾರಸ್ವತ ಲೋಕದ ಪುಣ್ಯ. ಹಾಗೆ ಆಗಲಿಲ್ಲ.

ಅವರ ಪಾಂಡಿತ್ಯ ಪ್ರತಿಭೆ ಕಂದಾಯ ಇಲಾಖೆಯಲ್ಲಿ ಇಂಗಿ ಹೋಗಬಾರದೆಂದು ಅವರನ್ನು ಅಧ್ಯಾಪನ ಕ್ಷೇತ್ರಕ್ಕೆ ಸೆಳೆದು ತಂದರು ತಳುಕಿನ  ವೆಂಕಣ್ಣಯ್ಯ. ಕುಟುಂಬಸ್ಥರದು ವಿರೋಧವಿತ್ತಾದರೂ ತನಗೆ ಬೋಧನಾವೃತ್ತಿಯೇ ಇಷ್ಟವೆಂದು ತೀನಂಶ್ರೀ ಅವರನ್ನೆಲ್ಲ ಸಮಾಧಾನಿಸಿದರಂತೆ. ಹಾಗೆ ಅಧ್ಯಾಪನ ವೃತ್ತಿಗೆ ಸೇರಿಕೊಂಡು ಪ್ರವೃತ್ತಿಯಲ್ಲಿ ಸಾಹಿತ್ಯ ವಿಮರ್ಶಕ, ಕವಿ, ಭಾಷಾಶಾಸ್ತ್ರಜ್ಞ, ಸಂಶೋಧಕ, ಅನುವಾದಕ, ಗ್ರಂಥ ಸಂಪಾದಕ, ನಿಘಂಟು ತಜ್ಞ, ಮಾರ್ಗದರ್ಶಕ- ಇವೆಲ್ಲವೂ ಆಗಿ ತನ್ನ ಸತ್ತ್ವ- ಸಾಮರ್ಥ್ಯ-ಪ್ರತಿಭೆ-ವಿದ್ವತ್ತಿನಿಂದ ಕನ್ನಡ ಸಾಹಿತ್ಯ ಲೋಕವನ್ನೇ ಶ್ರೀಮಂತಗೊಳಿಸಿದರು ತೀನಂಶ್ರೀ.

ಇಂದು(ನವೆಂಬರ್ ೨೬) ಅವರ ಜನ್ಮದಿನ. ತನ್ನಿಮಿತ್ತ ಇದೊಂದು ಸ್ಮರಣತೋರಣ. ೧೯೦೬ರಲ್ಲಿ, ನಮ್ಮ ರಾಜ್ಯೋದಯಕ್ಕಿಂತ ಐವತ್ತು ವರ್ಷಗಳ
ಹಿಂದೆ, ಈಗಿನ ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲೂಕಿನ ಹಾಗಲವಾಡಿ ಗ್ರಾಮದಲ್ಲಿ ತೀನಂಶ್ರೀ ಜನನ. ವಿಜಯನಗರ ಸಾಮ್ರಾಜ್ಯ ಪತನದ ಬಳಿಕ ತಲೆಯೆತ್ತಿಕೊಂಡ ಹಲವಾರು ಪಳೆಯಪಟ್ಟುಗಳಲ್ಲಿ ಒಂದಾದ ಹಾಗಲವಾಡಿಯೂ ನೆಲಕಚ್ಚಿದಾಗ ಆಸ್ಥಾನದ ಮಂತ್ರಿಗಳು ಬ್ರಾಹ್ಮಣರು ಬಡವರು
ತೀರ್ಥಪುರಕ್ಕೆ ವಲಸೆಬಂದು ನೆಲೆಸಿದ್ದರು. ಅವರ ಪೈಕಿ ತೀನಂಶ್ರೀಯವರ ಪೂರ್ವಜರೂ ಇದ್ದರಂತೆ. ತಂದೆ ನಂಜುಂಡಯ್ಯ ತೀರ್ಥಪುರದ ಶಾನುಭೋಗರಾಗಿದ್ದರು.

ತಾಯಿಯ ಹೆಸರು ಭಾಗೀರಥಮ್ಮ. ಶ್ರೀಕಂಠಯ್ಯ ಒಂಬತ್ತನೆಯ ವಯಸ್ಸಿನಲ್ಲಿದ್ದಾಗಲೇ ತಾಯಿ ತೀರಿಕೊಂಡರು. ಕವಿ-ಸಾಹಿತಿಗಳ ಜೀವನಚರಿತ್ರೆ ಗಳಲ್ಲೆಲ್ಲ ಬಹುತೇಕ ಇದೇ ಗೋಳು. ಬಾಲ್ಯ ದಿಂದಲೇ ನೋವಿನ ಪೆಟ್ಟುಗಳು. ಆದರೆ ಅವುಗಳೇ ಉಳಿಯಪೆಟ್ಟುಗಳಂತೆ- ಶಿಲೆಯನ್ನು ಮೂರ್ತಿ ಯಾಗಿಸುವಂತೆ- ಸಾಹಿತ್ಯಮೂರ್ತಿಗಳನ್ನು ಸೃಷ್ಟಿಸುವುವು ಎನ್ನುವುದೂ ಸತ್ಯವೇ. ಮಾತೃವಾತ್ಸಲ್ಯವಂಚಿತ ಬಾಲಕ ಶ್ರೀಕಂಠಯ್ಯನ ಲಾಲನೆಪಾಲನೆ ಯನ್ನು ಸೋದರತ್ತೆ ಮಾಡಿದರು. ಆಕೆಯೂ ಒಬ್ಬ ವಿಧವೆಯಾಗಿದ್ದವರು.

ತೀರ್ಥಪುರದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಶ್ರೀಕಂಠಯ್ಯಗೆ ತುಮಕೂರಿನಲ್ಲಿ ಹೈಸ್ಕೂಲ್ ಶಿಕ್ಷಣ. ೧೯೨೬ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನಿಂದ ರಾಜ್ಯಶಾಸ್ತ್ರ ಅರ್ಥಶಾಸ್ತ್ರ ಮತ್ತು ಸಂಸ್ಕೃತ ಐಚ್ಛಿಕ ವಿಷಯಗಳಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ ಪದವಿ. ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ರ ಅಮೃತಹಸ್ತದಿಂದ ಆರು ಚಿನ್ನದ ಪದಕಗಳನ್ನು ಪಡೆದ ಕೀರ್ತಿ. ಪರೀಕ್ಷೆಗೆ ಒಂದು ತಿಂಗಳಿರುವಾಗಲೇ ಜಯಲಕ್ಷ್ಮಿ ಎಂಬ
ಹುಡುಗಿಯೊಂದಿಗೆ ವಿವಾಹ. ಆಕೆಗಂತೂ ಅದು ಬಾಲ್ಯ ವಿವಾಹವೇ. ೧೯೨೮ರಲ್ಲಿ ಶ್ರೀಕಂಠಯ್ಯ ಎಂಸಿಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮರುವರ್ಷವೇ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಎಂ.ಎ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಗಳಿಸಿದರು.

ಮಹಾರಾಜಾ ಕಾಲೇಜ್‌ನಲ್ಲಿ ಉಪಪ್ರಾಧ್ಯಾಪಕ ಕೆಲಸ ಸಿಕ್ಕಿತು. ಅದೇ ಸಮಯದಲ್ಲಿ ತಂದೆಯವರು ನಿಧನರಾದರು. ೧೯೩೧ರಲ್ಲಿ ಮಗಳು ವಿಶಾಲಾಕ್ಷಿ, ೧೯೩೬ರಲ್ಲಿ ಎರಡನೆಯ ಮಗಳು ನಾಗರತ್ನ, ೧೯೪೨ರಲ್ಲಿ ಮಗ ನಾಗಭೂಷಣ್ ಜನನ. ನಡುವೆ ಎರಡು ಗಂಡು ಮಕ್ಕಳು ಜನಿಸಿ ಶೈಶವದಲ್ಲೇ ತೀರಿಕೊಂಡಿದ್ದವು. ತೀನಂಶ್ರೀಯವರ ಒಬ್ಬಳೇ ತಂಗಿ ಸಾವಿತ್ರಮ್ಮ ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿದ್ದರು. ೧೯೪೩ರಲ್ಲಿ ತೀನಂಶ್ರೀ ಅವರಿಗೆ ಪ್ರಾಧ್ಯಾಪಕರಾಗಿ ಭಡ್ತಿ ದೊರೆತ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದ ದಿನವೇ, ಬಾಲ್ಯ ದಲ್ಲಿ ಅವರನ್ನು ಸಾಕಿ ಸಲಹಿದ್ದ ಸೋದರತ್ತೆ ಲಕ್ಷೀದೇವಮ್ಮ
ಕೊನೆಯುಸಿರೆಳೆದರು. ಅನಂತರ ನಾಲ್ಕು ತಿಂಗಳಲ್ಲಿ ಹಿರಿಯ ಮಗಳು ವಿಶಾಲಾಕ್ಷಿ ತನ್ನ ೧೨ ವಯಸ್ಸಿನಲ್ಲೇ ತೀರಿಕೊಂಡಳು.

ಹೀಗೆ ವಿಧಿಯೆಂಬ ಉಳಿ ಪೆಟ್ಟುಗಳನ್ನು ಕೊಡುತ್ತಲೇ ಸಾಗಿತ್ತು. ಆದರೆ ವಿಪರ್ಯಾಸ ನೋಡಿ! ಅಷ್ಟೊಂದು ನೋವಿನಲ್ಲಿ ನಲುಗುತ್ತಿದ್ದರೂ ತೀನಂಶ್ರೀ ಬರೆದು ಪ್ರಕಟಿಸಿದ ಮೊದಲ ಕೃತಿ ‘ಒಲುಮೆ’ ಪಕ್ಕಾ ಪ್ರೇಮಗೀತೆಗಳ ಸಂಕಲನ! ಪಾಶ್ಚಾತ್ಯ ರಮ್ಯ ಸಂಪ್ರದಾಯದ ಕಾವ್ಯ, ಸಂಸ್ಕೃತದ ಶೃಂಗಾರ ಮುಕ್ತಕಗಳು, ಬಿಎಂಶ್ರೀಯವರ ಇಂಗ್ಲಿಷ್ ಗೀತೆಗಳು- ಇವೆಲ್ಲದರಿಂದ ಪ್ರಭಾವಿತರಾಗಿ ತಾರುಣ್ಯದಲ್ಲಿ ಬರೆದದ್ದು. ಇದು ತುಂಬ ಸೊಗಸಾದ ಪ್ರೇಮಗೀತೆಗಳನ್ನು ಕನ್ನಡಕ್ಕೆ ಮೊದಲು ಪರಿಚಯ ಮಾಡಿಕೊಟ್ಟಿತು. ಅಷ್ಟೇಅಲ್ಲ, ಮುಂದೆ ಕೆ.ಎಸ್ ನರಸಿಂಹ ಸ್ವಾಮಿಯವರು ಮೈಸೂರು ಮಲ್ಲಿಗೆ ದಾಂಪತ್ಯಗೀತೆಗಳನ್ನು ಬರೆಯಲಿಕ್ಕೆ ಇದೇ ಪ್ರೇರಣೆಯಾಯಿತೆಂದು ವಿದ್ವಾಂಸರ ಅಭಿಪ್ರಾಯ.

ಇದರಲ್ಲಿ ‘ಪಶ್ಚಾತ್ತಾಪ’ ಕವಿತೆಯ ಹಿನ್ನೆಲೆಯಂತೂ ಬಲು ರೋಮಾಂಚಕವಾಗಿ ಇದೆಯೆನ್ನಲಾಗಿದೆ. ತನ್ನ ಪತಿ ಆಗಬೇಕಿದ್ದ ತೀನಂಶ್ರೀಯವರನ್ನು ನೋಡಲು ರಾತ್ರಿ ಹೊತ್ತು ಹಿರಿಯರ ಕಣ್ಣು ತಪ್ಪಿಸಿ ಬಂದಿದ್ದ ಹುಡುಗಿ ಜಯಲಕ್ಷ್ಮಿ, ತೀನಂಶ್ರೀಯವರ ಕಾಲಿಗೆ ಬಿದ್ದು ನಮಸ್ಕರಿಸಿ ಹೋಗಿದ್ದಳು.
ಆಕೆಗೆ ಮುತ್ತು ಕೊಡಲಿಲ್ಲ ಎಂಬ ಪಶ್ಚಾತ್ತಾಪದಲ್ಲಿ ತೀನಂಶ್ರೀ ಕವನ ಬರೆದರು. ಹನ್ನೆರಡು ಸಾಲುಗಳ ಅದರ ಪೂರ್ಣ ಸಾಹಿತ್ಯ ಹೀಗಿದೆ: ‘ಮರುಹಗಲು ತೆರಳುವೆನು ನಾನೆಂದು ತಿಳಿದು| ಹಿರಿಯರೆದುರಿಗೆ ಬೀಳುಕೊಳುವುದಕೆ ನಾಚಿ| ನನ್ನೆಡೆಗೆ ರಾತ್ರಿ ಯಲಿ ಹೆರರರಿಯದಂತೆ| ಚೆನ್ನೆ ನವವಧುವಂದು ಶಂಕಿಸುತ ಬಂದು| ಅಡಿಗೆರಗಿ ಹೋಗುವೆನು ಎಂದು ನಿಟ್ಟುಸಿರು| ಬಿಡಲು ಬೆಪ್ಪಾದಂತೆ ನಾನೇಕೆ ನಿಂತೆ?| ಮಣಿದವಳ ಹಿಡಿದೆತ್ತಿ ಮುಂಗುರುಳ ತಿದ್ದಿ| ಅಣಿಯಾಗಿ ತುಟಿ ಕೆನ್ನೆ ಕಣ್ಣ ಮುತ್ತಿಟ್ಟು| ಸೆಳೆದಪ್ಪಿ ನಲ್ನುಡಿಯನೇಕಾಡಲಿಲ್ಲ?| ಕುಲದ ಕಟ್ಟಳೆಗಂಜಿ ಮೋಸ ವಾಯ್ತಲ್ಲ!| ಆ ರೀತಿ ಮನ್ನಿಸಿದ ಕುಲದ ಕಟ್ಟಳೆಯೆ| ದೂರವಿರಿಸಿ ಹುದೀಗ ನಮ್ಮಿಬ್ಬರನು|’

ತೀನಂಶ್ರೀಯವರು ಸಂಶೋಧನೆ, ವಿಮರ್ಶೆ, ಛಂದಸ್ಸು, ಭಾಷಾಶಾಸ್ತ್ರ ಮೊದಲಾದ ಹಲವು ಕ್ಷೇತ್ರಗಳಲ್ಲಿ ತಮ್ಮ ಕೃಷಿ ಮುಂದುವರಿಸಿ, ಮುಖ್ಯವಾಗಿ ಬಹುದೊಡ್ಡ ವಿದ್ವಾಂಸರೆಂದು ಹೆಸರು ಗಳಿಸಿದರೂ ತಮ್ಮೊಳಗಿನ ಕವಿಯನ್ನು ಕಳೆದುಕೊಳ್ಳಲಿಲ್ಲ. ಸತ್ಕಾವ್ಯದ ಬಗೆಗಿನ ರುಚಿಯನ್ನು ಕಡಿಮೆ ಮಾಡಿಕೊಳ್ಳಲಿಲ್ಲ. ರನ್ನನ ಗದಾಯುದ್ಧ ಸಂಗ್ರಹಕ್ಕೆ ಅವರು ಸಿದ್ಧಪಡಿಸಿದ ಟಿಪ್ಪಣಿಗಳಂತೂ ವಿದ್ವತ್‌ಪೂರ್ಣ ಸಂಶೋಧನಾತ್ಮಕ ವಿಮರ್ಶೆಯ
ಹೆಜ್ಜೆಗಳೆಂಬುದನ್ನು ಯಾರಾದರೂ ಗುರುತಿಸಬಹುದು. ಅವರು ಬರೆದಿರುವ ಭಾರತೀಯ ಕಾವ್ಯ ಮೀಮಾಂಸೆಯನ್ನು ಕವಿ ಕುವೆಂಪು ಅದೊಂದು ಆಚಾರ್ಯ ಕೃತಿಯೆಂದು ಪ್ರಶಂಸಿಸಿದ್ದಾರೆ- ಎನ್ನುತ್ತಾರೆ ಜಿ.ಎಸ್.ಶಿವರುದ್ರಪ್ಪ.

ಭಾರತೀಯ ಕಾವ್ಯ ಮೀಮಾಂಸೆಯನ್ನೇ ಡಿ.ಎಲ್.ನರಸಿಂಹಾಚಾರ್ಯರು ‘ಇದರ ಹತ್ತಿರ ಸುಳಿಯಬಲ್ಲ ಮೌಲ್ಯಯುತ ಕೃತಿ ಬೇರಾವ ಭಾರತೀಯ
ಭಾಷೆಯಲ್ಲೂ ಬಂದಿಲ್ಲ!’ ಎಂದು ಕೊಂಡಾಡಿದ್ದು; ಮತ್ತು ಈ ಕೃತಿಗೇ ತೀನಂಶ್ರೀಯವರಿಗೆ ಮರಣೋತ್ತರ ಪಂಪ ಪ್ರಶಸ್ತಿಯ ಗೌರವ ಸಂದಿರುವುದು. ಇದಲ್ಲದೇ ‘ನಂಟರು’ (ಪ್ರಬಂಧ ಸಂಕಲನ), ‘ಹರಿಹರ ಕವಿಯ ನಂಬಿಯಣ್ಣನ ರಗಳೆ’ (ಸಂಪಾದನೆ), ‘ಬಿಡಿ ಮುತ್ತು’(ಕವನ ಸಂಕಲನ), ‘ರಾಕ್ಷಸನ
ಮುದ್ರಿಕೆ’ (ಸಂಸ್ಕೃತದ ಮುದ್ರಾರಾಕ್ಷಸ ಕೃತಿಯ ಅವತರಣಿಕೆ), ‘ರನ್ನ ಕವಿಯ ಗದಾಯುದ್ಧ ಸಂಗ್ರಹಂ’(ಸಂಪಾದನೆ), ಹೆಣ್ಣು ಮಕ್ಕಳ ಪದಗಳು (ಜನಪದ ಗೀತೆಗಳ ಸಂಗ್ರಹ), ‘ಪಂಪ’, ‘ಕಾವ್ಯ ಸಮೀಕ್ಷೆ’, ‘ಸಮಾಲೋಕನ’ ಮತ್ತು ‘ಕಾವ್ಯಾನುಭವ’ ಮುಂತಾದ ವಿಮರ್ಶಾ ಕೃತಿಗಳು ಕನ್ನಡ ಸಾಹಿತ್ಯಕ್ಕೆ ತೀನಂಶ್ರೀ
ಕೊಡುಗೆ. ಹೊಸಗನ್ನಡ ಭಾಷೆಯ ಅಭ್ಯಾಸ ಮತ್ತು ಬೆಳವಣಿಗೆಗೆ ಪೂರಕವಾಗಿ ರಚಿಸಿದ ‘ಕನ್ನಡ ಮಾಧ್ಯಮ ವ್ಯಾಕರಣ’ವಂತೂ ಅತ್ಯಂತ ಜನಪ್ರಿಯ ಪುಸ್ತಕ.

ತೀನಂಶ್ರೀಯವರು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಷ್ಟೇ ಅಲ್ಲದೇ ಬೆಂಗಳೂರಿನಲ್ಲಿ ಪ್ರಾಧ್ಯಾಪಕರಾಗಿ, ದಾವಣಗೆರೆಯ ಡಿಆರ್‌ಎಂ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ಕೋಲಾರದ ಕಾಲೇಜಿನಲ್ಲಿ ಸುಪರಿಂಟೆಂಡೆಂಟ್ ಆಗಿ, ಮೈಸೂರಿನ ಸಂವಿಧಾನ ಪರಿಷತ್ತಿನಲ್ಲಿ ಪ್ರಧಾನ ಭಾಷಾಂತರಕಾರನಾಗಿ,
ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಥಮ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ರಾಗಿ ೧೯೬೨ರಲ್ಲಿ ನಿವೃತ್ತಿ ಹೊಂದಿದ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಸಂಪಾದಕ ಸಮಿತಿಯ ಕಾರ್ಯದರ್ಶಿಯಾಗಿ, ಪ್ರಧಾನ ಸಂಪಾದಕರಾಗಿಯೂ ದುಡಿದರು. ಅದಕ್ಕೆ ಮೊದಲು ಅಮೆರಿಕಾದ ರಾಕಿಫೆಲ್ಲರ್ ಪ್ರತಿಷ್ಠಾನದ ವೇತನದ ಮೇಲೆ ಅಧ್ಯಯನಕ್ಕಾಗಿ ತೀನಂಶ್ರೀ ಅವರಿಗೆ ವಿದೇಶಕ್ಕೆ ಹೋಗುವ ಅವಕಾಶ ಸಿಕ್ಕಿತು.

೧೯೫೫-೫೬ರಲ್ಲಿ ಎಂಟು ತಿಂಗಳ ಕಾಲ ಅಮೆರಿಕದ ಮಿಷಿಗನ್ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿ ಬಿಡುವಿನ ವೇಳೆಯಲ್ಲಿ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದರು. ಒಂದು ತಿಂಗಳು ಇಂಗ್ಲೆಂಡಿನಲ್ಲಿ ಕಳೆದು, ಫ್ರಾನ್ಸ್, ಇಟಲಿ ಮೊದಲಾದ ಯುರೋಪಿಯನ್ ರಾಷ್ಟ್ರಗಳಲ್ಲೂ ಪ್ರವಾಸ ಮಾಡಿ ಸ್ವದೇಶಕ್ಕೆ ಮರಳಿದರು. ಧಾರವಾಡದಲ್ಲಿ ಸೇವೆಯ ಅವಧಿ ಮುಗಿದು ೧೯೫೭ರ ಜನವರಿಯಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿಗೆ ಕನ್ನಡ ಪ್ರಾಧ್ಯಾಪಕರಾಗಿ ಹಿಂದಿರುಗಿದರು. ಆಗ ತಾನೆ ಕೆ.ವಿ ಪುಟ್ಟಪ್ಪನವರು ಮಹಾರಾಜಾ ಕಾಲೇಜಿನ ಪ್ರಿನ್ಸಿಪಾಲ್
ಹುದ್ದೆಯಿಂದ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿ ಸ್ಥಾನಕ್ಕೇರಿದರು.

ಕನ್ನಡ ವಿಭಾಗದ ಮುಖ್ಯಸ್ಥರ ಸ್ಥಾನ ತೆರವಾಗಿತ್ತು. ತೀನಂಶ್ರೀ ಅವರು ಮೈಸೂರಿಗೆ ಮರಳಿದುದರಿಂದ ಆದ ಸಂತೋಷವನ್ನು ಸ್ನೇಹಿತರು ಮತ್ತು ವಿದ್ಯಾರ್ಥಿಗಳು ಓಲಗದ ಸ್ವಾಗತದಲ್ಲಿ ವ್ಯಕ್ತಪಡಿಸಿದ್ದರಂತೆ! ಹಾಗಿತ್ತು ಅವರ ವರ್ಚಸ್ಸು ಮತ್ತು ಎಲ್ಲರಿಂದಲೂ ಗಳಿಸಿದ್ದ ಪ್ರೀತಿ, ಆತ್ಮೀಯತೆ. ಅಂದ ಹಾಗೆ, ಕೆಲ ವಾರಗಳ ಹಿಂದಿನ ಅಂಕಣದಲ್ಲಿ ಪ್ಯಾರಿಸ್‌ನ ತಿಗಣೆ ಕಾಟದ ಬಗ್ಗೆ ಬರೆದಿದ್ದ ಲಹರಿಯಲ್ಲಿ ‘ತೀ.ನಂ. ಶ್ರೀಕಂಠಯ್ಯನವರು ಒಂದು ಲಲಿತ ಪ್ರಬಂಧದಲ್ಲಿ ಮಾನವನ ಕ್ಷುದ್ರ ಶತ್ರುಗಳ ಶ್ರೇಣಿಯಲ್ಲಿ ತಿಗಣೆಗೇ ಅಗ್ರತಾಂಬೂಲ ಎಂದು ಬರೆದಿದ್ದಾರೆ’ ಅಂತ ಬರೆದಿದ್ದೆ, ನಿಮಗೆ ನೆನಪಿರಲೂಬಹುದು.
ಪ್ರಾಮಾಣಿಕತೆಯಿಂದ ಹೇಳುತ್ತೇನೆ, ಆಗ ನಾನೇನೂ ಆ ಲಲಿತಪ್ರಬಂಧವನ್ನು ಓದಿರಲಿಲ್ಲ. ನನಗದು ಓದಲಿಕ್ಕೆ ಸಿಕ್ಕಿರಲಿಲ್ಲ.

ಕ.ಸಾ.ಪ ನಿಘಂಟುವಿನಲ್ಲಿ ತಿಗಣೆ ಪದದ ಅರ್ಥ/ಸಂದರ್ಭ ವಿವರಣೆಯಲ್ಲಿ ನನಗೆ ಆ ಉಲ್ಲೇಖ ಸಿಕ್ಕಿತ್ತು, ಯಥಾವತ್ತಾಗಿ ಬಳಸಿದ್ದೆ. ಆದರೂ ಆ ಲಲಿತ ಪ್ರಬಂಧವನ್ನು ಹೇಗಾದರೂ ಮಾಡಿ ಸಂಪಾದಿಸಿ ಓದಬೇಕು ಎಂಬ ಆಸೆಯಿತ್ತು. ಒಂದು ಔಷಧಬಳ್ಳಿ ಯನ್ನು ಹುಡುಕಿತರಲು ಹೋಗಿದ್ದ ಆಂಜನೇಯ ಇಡೀ ಸಂಜೀವಿನೀ ಪರ್ವತವನ್ನೇ ಹೊತ್ತುತಂದಂತೆ ಒಂದುದಿನ ಅಂತರಜಾಲ ಮಥನದ ವೇಳೆ ನನಗೆ ‘ತೀನಂಶ್ರೀ ಸಮಗ್ರ ಗದ್ಯ’ ಗ್ರಂಥದ ಪಿಡಿಎಫ್ ಸಿಕ್ಕಿತು ಕೊಪ್ಪರಿಗೆಯಂತೆ! ಅದು ತೀನಂಶ್ರೀ ಜನ್ಮಶತಮಾನೋತ್ಸವ ವರ್ಷದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಹೊರತಂದ ಅಮೂಲ್ಯ ಸಂಪುಟ. ಅದರಲ್ಲಿ ತೀನಂಶ್ರೀಯವರು ಸಂಸ್ಕೃತ ಸಾಹಿತ್ಯ, ಹಳಗನ್ನಡ ಸಾಹಿತ್ಯ, ಹೊಸಗನ್ನಡ ಸಾಹಿತ್ಯ, ಭಾಷೆ ಮತ್ತು ಭಾಷಾವಿಜ್ಞಾನ, ಛಂದಸ್ಸು- ಇವುಗಳ ಬಗೆಗೆ ಬರೆದ ವಿಮರ್ಶಾಲೇಖನಗಳಿವೆ. ಬೇರೆ ಗ್ರಂಥಗಳಿಗೆ ಬರೆದ ಮುನ್ನುಡಿಗಳು ಮತ್ತು ಬಿಡಿಬರಹಗಳೂ ಇವೆ.

ಭಾಗ-೭ರಲ್ಲಿ ಲಲಿತಪ್ರಬಂಧಗಳಿವೆ, ಅದರಲ್ಲಿ ‘ತಗುಣೆ’ಯೂ ಇದೆ! ಪುಟ ೬೪೪ರಿಂದ ೬೫೬ರವರೆಗೆ- ಅಂದರೆ ಡೆಮಿ ೧/೮ ಸೈಜಿನ ೧೩ ಪುಟಗಳಷ್ಟು ವಿಸ್ತಾರವಾಗಿ ಹಬ್ಬಿಕೊಂಡಿರುವ ಬೃಹತ್ ತಿಗಣೆ, ಅಲ್ಲ ಬೃಹತ್ ಲಲಿತಪ್ರಬಂಧ! ಮೊದಲು ಓದಿದ್ದೇ ಅದನ್ನು. ತುಂಬ ಚೆನ್ನಾಗಿ ಬರೆದಿದ್ದಾರೆ. ಪಶ್ಚಿಮ ಕರಾವಳಿಯ ಪಟ್ಟಣ ವೊಂದರಲ್ಲಿ ಉಪನ್ಯಾಸ ಕೊಡಲಿಕ್ಕೆ ಹೋದಾಗ ವ್ಯವಸ್ಥಾಪಕರು ಪ್ರವಾಸಿಮಂದಿರದ ಬದಲಿಗೆ ಹೊಟೇಲ್ ರೂಮ್‌ನಲ್ಲಿ ವಸತಿ
ವ್ಯವಸ್ಥೆ ಏರ್ಪಡಿಸಿದ್ದು, ಅಲ್ಲಿ ತಾನು ತಿಗಣೆಗಳ ಸಾಮೂಹಿಕ ದಾಳಿಗೆ ತುತ್ತಾದದ್ದು, ಮತ್ತೊಂದು ಸಂದರ್ಭದಲ್ಲಿ ವೇದಿಕೆಯ ಮೇಲಿದ್ದ ಕುರ್ಚಿಯಲ್ಲೇ ಸಾಕಷ್ಟು ತಿಗಣೆಗಳು ಓಡಾಡಿದ್ದು, ಅವುಗಳ ಕಚ್ಚುವಿಕೆಯನ್ನು ಸಹಿಸಿಕೊಂಡು ತಾನೊಬ್ಬ ತಪಸ್ವಿಯಂತೆ ಕೂತಿದ್ದು… ತೀನಂಶ್ರೀ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾರೆ.

ತಿಗಣೆಗಳ ಬಗ್ಗೆಯಷ್ಟೇ ಅಲ್ಲದೆ ನೆಗಡಿ, ನಂಟರು, ತಾರೆಗಳು, ಮನೆಗಳು, ಕಾಸಿನ ಸಂಘ, ಮಮತೆ, ವೋಟು, ಗುರುಸ್ಮರಣೆ ಮುಂತಾದ ಶೀರ್ಷಿಕೆಗಳ ಲಲಿತಪ್ರಬಂಧಗಳೂ ಈ ಪುಸ್ತಕದಲ್ಲಿವೆ. ಮೈಸೂರು ರಾಜ್ಯದ ವಿದ್ಯಾಭಿವೃದ್ಧಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಪಾತ್ರ ಎಂಬ ಲೇಖನ, ಗಾಂಧೀಜಿ ಯವರಿಗೆ ಗೌರವ ಸಲ್ಲಿಸುತ್ತ ‘ನಂದಾದೀವಿಗೆ’ ಎಂಬ ಪ್ರಬಂಧ, ವಿಶ್ವೇಶ್ವರಯ್ಯನವರ ದರ್ಶನ ಎಂಬ ಇನ್ನೊಂದು ಗಂಭೀರ ಪ್ರಬಂಧವೂ ಇದೆ. ಅಮೆರಿಕ ಮತ್ತು ಯುರೋಪ್ ಪ್ರವಾಸ- ವಾಸ್ತವ್ಯಗಳ ಫಲಿತವಾಗಿ ಬರೆದ ಪ್ರವಾಸಕಥನಗಳೂ ಇವೆ. ಆಗ ತನ್ನ ಯೋಗಕ್ಷೇಮವನ್ನೂ ಅಲ್ಲಿಯ ಸ್ಥಿತಿಗತಿಗಳನ್ನೂ ಕುರಿತು ಸ್ವದೇಶದಲ್ಲಿದ್ದ ಮನೆಯವರಿಗೆ (ಧಾರವಾಡದಲ್ಲಿದ್ದ ಮಡದಿ- ಮಕ್ಕಳಿಗೆ), ಮತ್ತು ಮಿತ್ರರಿಗೆ ಬರೆದಿದ್ದ ಪತ್ರಗಳಿಂದ ಆಯ್ದ ಕೆಲವು ಭಾಗಗಳೂ ಇವೆ. ಅಮೆರಿಕದಲ್ಲಿದ್ದಾಗ ಗಮನಿಸಿದ ಥ್ಯಾಂಕ್ಸ್‌ಗಿವಿಂಗ್ ಹಬ್ಬದ ಆಚರಣೆ, ಯುನಿವರ್ಸಿಟಿಯಲ್ಲಿ ಭಾರತೀಯ ವಿದ್ಯಾರ್ಥಿ ಸಂಘದವರು ಹಮ್ಮಿ ಕೊಂಡಿದ್ದ ದೀಪಾವಳಿ ಆಚರಣೆ, ಅಮೆರಿಕನ್ ವಿದ್ಯಾರ್ಥಿನಿಯರೂ ಸೀರೆ-ಕುಪ್ಪಸ ಉಟ್ಟುಕೊಂಡು ಓಡಾಡಿದ ಪರಿಯನ್ನೆಲ್ಲ ಸೊಗಸಾಗಿ ವಿಶ್ಲೇಷಿಸಿ ದ್ದಾರೆ. ಇದು ೧೯೫೫ರ ಮಾತು.

ನಾನಾಗ ಅಮೆರಿಕಕ್ಕೆ ಬಂದಿರುವುದು ಬಿಡಿ ಹುಟ್ಟಿಯೂ ಇರಲಿಲ್ಲ! ಅಂತೂ ತಿಗಣೆಯ ನೆಪದಿಂದಾದರೂ ತೀನಂಶ್ರೀ ಯವರ ಅಕ್ಷರಕೃಷಿಯ ಫಸಲಿನಿಂದ
(ತನ್ನ ಲೇಖನ ವ್ಯವಸಾಯ ಅಷ್ಟೇನೂ ಹುಲುಸಲ್ಲ ಎಂದು ಅವರೇ ಹೇಳಿಕೊಂಡಿದ್ದಾರಾದರೂ) ಒಂದಿಷ್ಟು ರುಚಿನೋಡಲಿಕ್ಕೆ ಸಿಕ್ಕಿದ್ದು ನನ್ನ ಭಾಗ್ಯವೇ ಸರಿ. ಲಲಿತಪ್ರಬಂಧಗಳ ಸಂಕಲನಕ್ಕೆಂದು ಬರೆದ ಅರಿಕೆಯಲ್ಲಿ ಈ ಮಾತುಗಳು ನನಗೆ ತುಂಬ ಇಷ್ಟವಾದುವು: ‘ಈ ಪುಸ್ತಕದಲ್ಲಿ ಜೊತೆಗೂಡಿಸಿರುವ ರೀತಿಯ ಲೇಖನಗಳಿಗೆ ಪ್ರಬಂಧ ಎಂಬ ಹೆಸರು ತಕ್ಕಮಟ್ಟಿಗೆ ರೂಢಿಯಾಗಿದೆ. ಅದು ಅಷ್ಟೇನೂ ಉಚಿತ ವಲ್ಲವೆಂಬ ಆಕ್ಷೇಪಣೆಯೂ ಇದೆ. ಇವುಗಳ ವಿನ್ಯಾಸದಲ್ಲಿ ಕಟ್ಟುನಿಟ್ಟಿನ ಬಿಗುಹು ಇರುವುದಿಲ್ಲ. ಆದರೆ ಇವು ಗೊತ್ತುಗುರಿಯಿಲ್ಲದ ಹರಟೆಗಳೂ ಅಲ್ಲ.

ಶಿಥಿಲಬಂಧ ಎಂಬ ಹೆಸರು ಇವಕ್ಕೆ ಒಪ್ಪಬಹುದಾಗಿತ್ತು. ಆದರೆ ಹಾಗೆ ಕರೆಯಲು ಲೇಖಕನ ಮನಸ್ಸು ಒಪ್ಪುವುದಿಲ್ಲ! ಇಲ್ಲಿ ರೂಪಿಸಿರುವ ನೋವು ನಲಿವುಗಳು, ಉಲ್ಲೇಖಿಸಿರುವ ಚಿಂತನೆಗಳು, ವರ್ಣಿಸಿರುವ ಸಂಗತಿಗಳು ಇವೆಲ್ಲ ನನ್ನ ಆಸಕ್ತಿಯನ್ನು ವಿಶೇಷವಾಗಿ ಸೆಳೆದಿವೆ. ಮೇಜಿನ ಮುಂದೆ
ಜಿತವಾಗಿ ಕುಳಿತು ಬರೆಯುವ ವಿಷಯದಲ್ಲಿ ನನಗಿರುವ ಅನುತ್ಸಾಹವನ್ನೂ ಶ್ರಮಭೀತಿಯನ್ನೂ ಹಿಮ್ಮೆಟ್ಟಿಸಿ ಈ ಲಿಖಿತರೂಪವನ್ನು ತಳೆದಿವೆ. ಇವು ನಿಮ್ಮ ಆಸಕ್ತಿಯನ್ನೂ ಕೆಲವು ಮಟ್ಟಿಗೆ ಗಳಿಸಲಿ- ಹೀಗೆಂದು ಮಾತ್ರ ಲೇಖಕನು ವಾಚಕರಿಗೆ ನಿವೇದನ ಮಾಡಬಹುದು. ಪ್ರಬಂಧಕಾರನ ಬರಹದಲ್ಲಿ ನಾನು ಎಂಬ ಮಾತು ಮತ್ತೆಮತ್ತೆ ಬರುತ್ತದೆ. ಅದು ಅಹಂಕಾರದ ಉಕ್ತಿಯೆಂದು ಯಾರೂ ಭಾವಿಸಬಾರದು.

ಅದು ಕೇವಲ ಆತ್ಮೀಯತೆಯನ್ನು ಗಳಿಸುವ ಸಾಧನ. ಅದನ್ನು ಸಂಕೋಚವಿಲ್ಲದೆ ಉಪಯೋಗಿಸಲು ಲೇಖಕನು ಹೆದರಿದರೆ ಕೆಲಸ ಕೆಡುತ್ತದೆ. ಒಂದೊಂದು ಪ್ರಬಂಧವೂ ಲೇಖಕನ ಒಂದೊಂದು ಚಿತ್ತ ಲಹರಿಯ ನಿರೂಪಣೆ. ಅದರಲ್ಲಿ ಹೇಳಿರುವ ವಿಷಯಗಳನ್ನೂ ಬೆಳೆಸಿರುವ ವಿಚಾರಗಳನ್ನೂ ಕೇವಲ ವಸ್ತುನಿಷ್ಠೆಯ ಕನ್ನಡಕದಿಂದ ನೋಡಬಾರದು. ಆ ತಳಹದಿ ಇರಬೇಕು ನಿಜ, ಆದರೆ ಅದೇ ಇದರ ಶಿಖರವಲ್ಲ. ಇಲ್ಲಿ ಬಂದಿರುವ ಕೆಲವು ಸಂಗತಿಗಳು ತಿರುಚಿ ಕೊಂಡಿರಬಹುದು; ಹೋಗುವ ದಾರಿ ವಕ್ರವೆನಿಸ ಬಹುದು; ಆದರೆ ಇದೊಂದೂ ಮುಖ್ಯವಲ್ಲ. ಇಂಥ ಪ್ರಬಂಧ ಗಳನ್ನು ಮೂಡಿಸಿರುವ ಮನೋಧರ್ಮ ವಾಚಕರಿಗೆ ರುಚಿಸಿದರೆ, ಇದರೊಂದಿಗೆ ಅವರ ಹೃದಯ ಕೆಲವು ಕ್ಷಣಗಳಾದರೂ ಸಮತಾನವಾಗಿ ಮಿಡಿದರೆ ಲೇಖಕನು ಕೃತಾರ್ಥನಾಗುತ್ತಾನೆ.

ತೀವ್ರಗತಿಯಲ್ಲೂ ರಸನಿಷ್ಠೆಯಲ್ಲೂ ಲಯಬದ್ಧತೆಯಲ್ಲೂ ಪ್ರಬಂಧವು ಭಾವಗೀತಕ್ಕಿಂತ ಕೆಳಮಟ್ಟದ್ದಾದರೂ ಎರಡಕ್ಕೂ ಬಲುಮಟ್ಟಿನ ಸಾದೃಶ್ಯವಿದೆ. ಪ್ರಬಂಧವೆನ್ನುವುದು ಮಂದ್ರಶ್ರುತಿಯ ಭಾವಗೀತ.’ ೧೯೬೬ರ ಆಗಸ್ಟ್ ತಿಂಗಳಲ್ಲಿ ಶಿಕ್ಷಣ ಸಚಿವಾಲಯದ ವತಿಯಿಂದ ದೆಹಲಿಯಲ್ಲಿ ತಂತ್ರಜ್ಞಾನ ಪರಿಭಾಷೆಯ ತಜ್ಞರುಗಳ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹಲವು ಸ್ಥಳಗಳಿಗೆ ಭೇಟಿಕೊಟ್ಟು ರಾಂಚಿಯಲ್ಲಿರುವ ಮಗಳ ಮನೆ ಮತ್ತು ಕಲ್ಕತ್ತೆಯಲ್ಲಿದ್ದ ಮಗನ ಮನೆಗೆ ತೀನಂಶ್ರೀ ಭೇಟಿಕೊಟ್ಟರು. ಪತ್ನಿಗೆ ದೆಹಲಿ, ಆಗ್ರಾ ತಾಜಮಹಲುಗಳನ್ನು ತೋರಿಸಿಕೊಂಡು ಬಂದ ಬಗ್ಗೆ ಅವರಿಗೆ
ಸಂತೋಷವಾಗಿತ್ತು. ‘ಮಧುಚಂದ್ರವೇನೋ ತುಂಬಾ ಚೆನ್ನಾಗಿ ನಡೆಯಿತು; ಕೇವಲ ನಲವತ್ತು ವರ್ಷ ತಡವಾಯಿತು ಅಷ್ಟೇ!’ ಎಂದು ಅವರು ಕಲ್ಕತ್ತಕ್ಕೆ ಬಂದಾಗ ಮಗನೊಡನೆ ವಿನೋದ ವಾಡಿದ್ದರಂತೆ. ಸೆಪ್ಟೆಂಬರ್ ಏಳನೆಯ ತಾರೀಖು ಬೆಳಗಿನ ಎಂಟು ಗಂಟೆಯ ಸಮಯದಲ್ಲಿ ಅನಿರೀಕ್ಷಿತವಾಗಿ ಬಂದ ಹೃದಯಾಘಾತ ಅವರ ಪ್ರಾಣಪಕ್ಷಿ ಹಾರಿಹೋಗುವಂತೆ ಮಾಡಿತು.

Leave a Reply

Your email address will not be published. Required fields are marked *

error: Content is protected !!